Yakshagana; ಕೆಟ್ಟದ್ದನ್ನು ಖಂಡಿಸುವ ಜತೆ ಒಳ್ಳೆಯದರ ಶ್ಲಾಘನೆಯೂ ಇರಲಿ
Team Udayavani, Nov 12, 2023, 5:40 AM IST
ಯಕ್ಷಗಾನ ಆಟ ಮತ್ತು ತಾಳಮದ್ದಲೆಗಳ ಕುರಿತು ಈಗಿನ ದಿನಗಳಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಪ್ರದರ್ಶನಗಳ ಮತ್ತು ಕಲಾವಿದರ ನಿರ್ವಹಣೆಯ ಕುರಿತು ಆಕ್ಷೇಪಗಳು ವ್ಯಕ್ತವಾಗುತ್ತವೆ. (ವಿಪರೀತಕ್ಕೆ ಹೋದಾಗ ಪ್ರತಿಭಟನೆ, ಬಹಿಷ್ಕಾರ, ಧಿಕ್ಕಾರಗಳೂ ನಡೆಯುತ್ತವೆ.) ರಂಗಭೂಮಿಯೊಂದು ಆರೋಗ್ಯಪೂರ್ಣ ಚರ್ಚೆಗೆ ತನ್ನನ್ನು ತೆರೆದುಕೊಳ್ಳುವುದು ಮತ್ತು ವಿಮರ್ಶೆಗೆ ಪಕ್ಕಾಗುವುದು ಬೆಳವಣಿಗೆಯ ದೃಷ್ಟಿಯಿಂದ ಆವಶ್ಯಕವೂ ಹೌದು. ಅಂತಹ ಒಂದು ಅವಕಾಶ ಇಲ್ಲವಾದರೆ ಅದು ಮೃತಪ್ರಾಯವಾಗುತ್ತದೆ. ಅಷ್ಟಕ್ಕೆ ಇದು ಸ್ವಾಗತಾರ್ಹವೇ.
ಅಷ್ಟೇ ಅಲ್ಲ. ಅಭಿಪ್ರಾಯಗಳು, ವಿಮರ್ಶೆಗಳು, ಪ್ರತಿಕ್ರಿಯೆಗಳು ಹೀಗೆ ವಿಪುಲವಾದ ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ. ಇದಕ್ಕೆ ಕಾರಣವೇನು? ಪ್ರಧಾನತಃ ಸಾಮಾಜಿಕ ಮಾಧ್ಯಮಗಳ ಮುಕ್ತತೆ. ಎಲ್ಲರಿಗೂ ಅವರವರ ಅಭಿಪ್ರಾಯಗಳನ್ನು ಪ್ರಕಟಿಸುವುದಕ್ಕೆ ಅನುಕೂಲವಿದೆ. ಸ್ವಾತಂತ್ರÂವೂ ಇದೆ. ಅದರಿಂದಾಗಿ, “ನಾನು ನನಗೆ ತೋರಿದ್ದನ್ನು ಹೇಳುವುದಕ್ಕೆ ಯಾವ ಅಭ್ಯಂತರವೂ ಇಲ್ಲ’ ಎಂಬ ಭಾವನೆಯಿಂದಾಗಿ ಪ್ರತಿಯೊಬ್ಬನೂ ವಿಮರ್ಶಕನಾಗುತ್ತಾನೆ. ಇದು ಅಪಾಯದ ಸೂಚನೆಯೂ ಹೌದು. ಯಾಕೆಂದರೆ ವೇದಿಕೆಯ ಮುಕ್ತತೆಯಿಂದಾಗಿ ಕಲೆಯೊಂದರ ಒಳಹೊರಗುಗಳ ಅರಿವಿಲ್ಲದ ಜನರೂ ಪ್ರದರ್ಶನಗಳ ವೀಡಿಯೋ ತುಣುಕುಗಳನ್ನಷ್ಟೇ ನೋಡಿ ವಿಮರ್ಶಿಸುತ್ತಾರೆ. ಇದು ಪೂರ್ಣ ಪ್ರದರ್ಶನದ ವಿಮರ್ಶೆಯಾಗುವುದಿಲ್ಲ. ಮಾತ್ರವಲ್ಲ, ಇಂತಹ ವಿಮರ್ಶೆಗಳಿಗೆ ಕಲಾತ್ಮಕ ಉದ್ದೇಶಗಳಿಗಿಂತ ಹೆಚ್ಚು ಅನ್ಯೋದ್ದೇಶಗಳೂ ಇರುವುದು ಶಕ್ಯ. ಸಾರ್ವಜನಿಕರಿಗೆ ಇದೇ ಸತ್ಯ ಎಂಬ ಭಾವನೆ ಉಂಟಾಗುತ್ತದೆ. ಆಗ ರಂಗಭೂಮಿಯ ಒಳಗಿದ್ದವರಲ್ಲಿ ಅನೇಕರಿಗೆ ಅಸಹಾಯಕತೆಯ ಅನುಭವವಾಗುತ್ತದೆ.
ಏನು ಅಸಹಾಯಕತೆ?
ಯಕ್ಷಗಾನ ಅಥವಾ ತಾಳಮದ್ದಲೆ ರಂಗಭೂಮಿಯ ಪ್ರದರ್ಶನಗಳಿಗೆ ಆ ಕ್ಷಣದಲ್ಲಿ ಪ್ರೇಕ್ಷಕರು ಪ್ರತಿಕ್ರಿಯಿಸುತ್ತಾರೆ. ಅದಕ್ಕೆ ಕಲಾವಿದನ ಸ್ಪಂದನವೂ ಆ ಕ್ಷಣದ್ದೇ ಆಗಿರುತ್ತದೆ. ಚಿಂತಿಸಿ, ಪರಿಣಾಮಗಳನ್ನು ತರ್ಕಿಸಿ, ನಿರ್ವಹಿಸುವ ವ್ಯವಧಾನ ಅವನಿಗಿರುವುದಿಲ್ಲ. ಅದೆಲ್ಲ ಆ ಕ್ಷಣದಲ್ಲಿ ಹುಟ್ಟಿದ ಭಾವನೆಯ ಪರಿಣಾಮವಾಗಿ ಸಂಭವಿಸುವುದು. ಕಲೆಯ ಸೂಕ್ಷ¾ವನ್ನು ತಿಳಿಯದ ಜನ ಇದನ್ನು ಆಕ್ಷೇಪಿಸುವಾಗ ನಿರ್ದಿಷ್ಟ ಸಂದರ್ಭವನ್ನಷ್ಟೇ ಅವರ ಗಮನದಲ್ಲಿರುತ್ತದೆ. ಅದರ ಹಿಂದೆ ಮುಂದೆ ಗೊತ್ತಿರುವುದಿಲ್ಲ. ಒಂದು ನಿರ್ದಿಷ್ಟ ಪ್ರದರ್ಶನದ ಒಂದು ತುಣುಕು ಇಡಿಯ ಪ್ರದರ್ಶನದ ಯೋಗ್ಯತೆಗೆ ಮಾನದಂಡವಾಗಲಾರದು. ಆ ತುಣುಕಿನ ವಿಕಾರಕ್ಕೆ ಪ್ರಚೋದನೆ ನೀಡಿದವರ ಕುರಿತು ಆಕ್ಷೇಪಣಕಾರರು ಮೌನವಾಗುತ್ತಾರೆ. ಅಲ್ಲದೆ ಪರಿಣಾಮದಲ್ಲಿ ಇಂತಹ ಅಭಿಪ್ರಾಯಗಳು ಒಟ್ಟು ರಂಗಭೂಮಿಯ ಎಲ್ಲರಿಗೂ ಅನ್ವಯವಾಗುತ್ತದೆ. ಈ ಸಾಮೂಹಿಕ ಆಕ್ಷೇಪಗಳಿಗೆ ಉತ್ತಮ ನಿರ್ವಹಣೆ ಮಾಡಿದ ಕಲಾವಿದನೂ ಗುರಿಯಾಗುತ್ತಾನೆ. ಅವನೇನು ಮಾಡಬೇಕು?
ಬೇಜವಾಬ್ದಾರಿಯಿಂದ ಟೀಕಿಸುವವರನ್ನು ಬಿಡೋಣ. ಬಹು ಮುಖ್ಯವಾಗಿ ಇಂದು ಯಕ್ಷಗಾನ ಅಥವಾ ತಾಳಮದ್ದಲೆ ಹಾಳಾಗಿದೆ ಎಂಬ ಅಭಿಪ್ರಾಯವನ್ನು ಅನೇಕ ಮಂದಿ ಹಿರಿಯರು, ಈ ಕ್ಷೇತ್ರಗಳನ್ನು ಬಲ್ಲವರು ಭಾಷಣಗಳಲ್ಲಿ, ಮಾಧ್ಯಮಗಳಲ್ಲಿ ಪ್ರಕಟಿಸುತ್ತ ಇರುತ್ತಾರೆ. ಅವರು ಅದರ ಸೂಕ್ಷ್ಮಗಳನ್ನು ಅರಿತವರಾದುದರಿಂದ ಎಲ್ಲವೂ ತೀರಾ ಹಾಳಾಗಿ ಈಗಿನ ಪ್ರದರ್ಶನಗಳು ನೋಡುವ ಹಾಗಿಲ್ಲ ಎನ್ನುವ ಭಾವನೆ ಸಾರ್ವಜನಿಕವಾಗಿ ಉಂಟಾಗುತ್ತದೆ. ಇದರಲ್ಲಿ ಬಹುಮಟ್ಟಿಗೆ ನಿಜ ಇದ್ದೀತು. ಆದರೆ ಎಲ್ಲವೂ ನೂರಕ್ಕೆ ನೂರು ಹಾಳಾಗಿದೆಯೆ? ಹೌದಾದರೆ ಇಂತಹ ಕಲಾ ವಿಭಾಗವೊಂದು ಇರಬೇಕಾದರೂ ಯಾಕೆ? ಅಥವಾ ಇನ್ನೂ ಉಳಿದಿದೆ ಹೇಗೆ? ಇನ್ನು ಸರಿಪಡಿಸಲಾರದಷ್ಟು ಹಾನಿಯಾಗಿದೆಯೆ? ಹಾಗೇನಿಲ್ಲ. ಕಾಲಾಂತರದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸಂಭವಿಸುವುದೇ ಇಲ್ಲಿಯೂ ಸಂಭವಿಸುತ್ತಿದೆ. ಸಿನೆಮಾ, ಸಾಹಿತ್ಯ, ನಾಟಕ ಇತ್ಯಾದಿ ಇತರ ಅಭಿವ್ಯಕ್ತಿಯ ಮಾಧ್ಯಮಗಳಲ್ಲೂ ಈ ಬಗೆಯ ಏರಿಳಿತಗಳನ್ನು ಗುರುತಿಸಬಹುದು. ಇಲ್ಲಿಯೂ ಅಷ್ಟೇ. ಚಕ್ರಗತಿಯಲ್ಲಿ ಕೆಳಗಿರುವುದು ಮೇಲಕ್ಕೂ, ಮೇಲಿರುವುದು ಕೆಳಗೂ ಸರಿಯುವುದು ಸ್ವಾಭಾವಿಕ. ಉತ್ಸರ್ಪಿಣೀ ಮತ್ತು ಅವಸರ್ಪಿಣೀ ಎರಡೂ ಉಂಟು. ಆದುದರಿಂದ ಕೆಟ್ಟಿದೆ ಎಂದು ಹೇಳುವಾಗ ಗಮನಿಸಬೇಕಾದ ಸಂಗತಿಗಳು ಬೇರೆಯೂ ಇರುತ್ತವೆ. ಒಂದಿಷ್ಟು ಉತ್ತಮ ಬೆಳವಣಿಗೆಗಳೂ ಆಗುತ್ತಿವೆ; ಕೆಲವು ಕಲಾವಿದರಾದರೂ ಶ್ರದ್ಧೆಯಿಂದ ತಮ್ಮ ಮಿತಿಯೊಳಗೆ ಉತ್ತಮ ರೀತಿಯ ಪ್ರದರ್ಶನಕ್ಕೆ ಪರಿಶ್ರಮಿಸುತ್ತಿದ್ದಾರೆ ಎನ್ನುವುದನ್ನೂ ಗಮನಿಸಬೇಡವೆ? ಹಾಗೆ ಶ್ರಮಿಸುವ ಕಲಾವಿದರನ್ನು ಗುರುತಿಸಿ ಉಲ್ಲೇಖಿಸುವ ಹೊಣೆಯು “ಕೆಟ್ಟಿದೆ’ ಎಂದು ಆರೋಪಿಸುವವರಿಗೂ ಇಲ್ಲವೆ? ಹೀಗೊಂದು ಮನೋಧರ್ಮದಿಂದ ಒಳ್ಳೆಯ ಕಲಾವಿದನನ್ನೋ, ಅರ್ಥಧಾರಿಯನ್ನೋ ಸಾರ್ವಜನಿಕವಾಗಿ ಮೆಚ್ಚಿ ಉಲ್ಲೇಖಿಸುವವರ ಸಂಖ್ಯೆ ತುಂಬ ವಿರಳ.
ಬರೇ ಹಾಳಾಗಿದೆ ಎಂದು ಸಾರಾಸಗಟಾಗಿ ತೀರ್ಮಾನ ಘೋಷಿಸುವುದರಿಂದ, ನಾನು ಈಗಿನ ತಾಳಮದ್ದಲೆ ಅಥವಾ ಆಟಗಳನ್ನು ನೋಡುವುದೇ ಇಲ್ಲ ಎಂದು ಗಟ್ಟಿಯಾಗಿ ಸಾರುವುದರಿಂದ ತಾವು ಇಷ್ಟು ಕಾಲ ಸಂತೋಷ ಪಡೆದ ರಂಗಭೂಮಿಗೆ ನ್ಯಾಯ ಸಲ್ಲಿಸಿದ ಹಾಗೆ ಆದೀತೆ? ಒಂದು ಮಗು ಕೆಟ್ಟ ವರ್ತನೆಯನ್ನು ತೋರಿದಾಗ ಅದನ್ನು ತಪ್ಪು ಎನ್ನುವುದರ ಜತೆಗೆ ಅದರ ಒಳ್ಳೆಯ ವರ್ತನೆಯನ್ನೂ ಮೆಚ್ಚಬೇಕು. ಆಗ ತಪ್ಪು-ಸರಿಗಳ ಅರಿವು ಉಂಟಾಗಿ ಅದು ಉತ್ತಮ ನಾಗರಿಕನಾಗಿ ಬೆಳೆಯುತ್ತದೆ ಎನ್ನುತ್ತದೆ ಮನಃಶಾಸ್ತ್ರ. ಕಲಾವಿದರಿಗೂ ಇದನ್ನು ಅನ್ವಯಿಸುವುದು ಸರಿಯಷ್ಟೆ? ಇಲ್ಲವಾದರೆ “ಎಷ್ಟು ಮಾಡಿದರೂ ಅಷ್ಟೇ’ ಎಂಬ ಹತಾಶೆಯ ಮನೋಭಾವ ಉತ್ತಮ ಕಲಾವಿದನಲ್ಲೂ ಮೂಡುವ ಅಪಾಯ ಉಂಟು. ಇದರಿಂದ ಏನಾಗುತ್ತದೆ? ಒಂದೋ ಅವನು ಉಳಿದವರಂತೆ ಜನಪ್ರಿಯತೆಯ ಸುಲಭ ಮಾರ್ಗವನ್ನು ಅನುಸರಿಸುತ್ತಾನೆ ಅಥವಾ ಇದರ ಗೋಜೇ ಬೇಡವೆಂದು ರಂಗಭೂಮಿಯಿಂದಲೇ ದೂರ ಸರಿಯುತ್ತಾನೆ. ಇದರಿಂದ ಕಲೆಗೆ ಲಾಭವಾದೀತೇ? ಬಲ್ಲವರು ಇದನ್ನು ಚಿಂತಿಸಬೇಕು. ಕೆಟ್ಟದ್ದನ್ನು ಖಂಡಿಸುವುದರ ಜತೆಗೆ ಒಳ್ಳೆಯದನ್ನು ಗುರುತಿಸಿ, ಗೌರವಿಸುವ ಜವಾಬ್ದಾರಿ ವಿಮರ್ಶಕರಿಗೂ, ಕಲಾ ಪ್ರೇಮಿಗಳಿಗೂ ಇದೆ ಎಂದು ನಾನು ತಿಳಿಯುತ್ತೇನೆ.
ರಾಧಾಕೃಷ್ಣ ಕಲ್ಚಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.