Yakshagana; ಹಾಸ್ಯಗಾರನಿಗೂ ಬೇಕು ಒಂದು ಚೌಕಟ್ಟು
ಹಾಸ್ಯವೂ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ....
Team Udayavani, Nov 26, 2023, 6:16 AM IST
ಹಾಸ್ಯಗಾರ(ವಿದೂಷಕ)ನಿಲ್ಲದ ಯಕ್ಷಗಾನ ಪ್ರಸಂಗ ಎಂದರೆ ಉಪ್ಪು ಇಲ್ಲದೆ ಮಾಡಿದ ಅಡುಗೆಯಂತೆ ಎಂದರೆ ತಪ್ಪಾಗದು. ಹಾಸ್ಯಗಾರನಿಲ್ಲದ ಯಕ್ಷಗಾನ ಪ್ರದರ್ಶನ ಯಾವತ್ತೂ ಅಪೂರ್ಣವೇ.ಹಾಸ್ಯಗಾರರು ತಮ್ಮಲ್ಲಿರುವ ಸ್ಥಿತಪ್ರಜ್ಞೆ, ವಿಶೇಷ ಅಭಿವ್ಯಕ್ತಿ, ಅಭಿನಯದಿಂದ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ದೊರೆಗಳು. ಕಥೆಗೆ ಲೋಪವಾಗದಂತೆ ಪ್ರೇಕ್ಷಕರಿಗೆ ಹಾಸ್ಯ ರಸಧಾರೆಯನ್ನು ಉಣಬಡಿಸುವುದು ಅವರ ಚಾಣಾಕ್ಷತನ.
ಹಾಸ್ಯಗಾರನಾದವರಿಗೆ ತಮ್ಮ ಸುತ್ತಲಿನ ಘಟನಾವಳಿ ಗಳ ಪರಿಜ್ಞಾನ ಇದ್ದು, ಸಂದರ್ಭಾನುಸಾರ ಬಳಕೆ ಮಾಡುತ್ತಾರೆ. ಪ್ರೇಕ್ಷಕರನ್ನು ರಂಜಿಸಲು ಹೆಚ್ಚು ಜನಪ್ರಿಯ ವಾಗಿರುವ ವಿಚಾರವನ್ನು ಬಳಸಿಕೊಳ್ಳುವುದೂ ಇದೆ.
ದೇಹಾಕೃತಿ, ವಾಕ್ಚಾತುರ್ಯ, ಭಾವಾಭಿವ್ಯಕ್ತಿ, ಸ್ವರ ಸಂಯೋಜನೆ ಇವನ್ನೆಲ್ಲ ಪರಿಗಣಿಸಿ ಒಂದು ಪ್ರಸಂಗಕ್ಕೆ ಹಾಸ್ಯಗಾರರನ್ನು ಆಯ್ಕೆ ಮಾಡುತ್ತಾರೆ. ಕುಣಿತ, ಅಭಿನಯ ಮಾತುಗಾರಿಕೆಯಲ್ಲಿ ಮುಕ್ತ ಅವಕಾಶ ಇದ್ದು, ಸಂದರ್ಭಕ್ಕೆ ಅನುಗುಣವಾಗಿ ಹಾಸ್ಯ ಇದ್ದರೆ ಹೆಚ್ಚು ಔಚಿತ್ಯಪೂರ್ಣ. ಹಾಗೆಂದು ಮಾಡುವ ಪಾತ್ರದಿಂದಷ್ಟೇ ಹಾಸ್ಯಗಾರನೆಂದು ಗುರುತಿಸಲು ಸಾಧ್ಯವಿಲ್ಲ. ಎಂತಹ ಪಾತ್ರದಲ್ಲೂ ಹಾಸ್ಯದ ಹೊನಲನ್ನು ಪಸರುವ ವಿಶೇಷ ಗುಣ ಆತನಲ್ಲಿ ಇರಬೇಕು. ಪೌರಾಣಿಕ ಪ್ರಸಂಗಗಳಲ್ಲಿ ಬರುವ ಅಕ್ರೂರ, ಬಾಹುಕ ಮುಂತಾದ ಪಾತ್ರಗಳನ್ನು ಹಾಸ್ಯಗಾರರು ಅದ್ಭುತವಾಗಿ ನಿರ್ವಹಿಸುತ್ತಿದ್ದು, ಪ್ರಬುದ್ಧತೆ ನೆಲೆಯಲ್ಲಿ ಹಾಸ್ಯ ಕಲಾವಿದನ ಚಾಕಚಕ್ಯತೆ ಪ್ರದರ್ಶನಗೊಳ್ಳುತ್ತಲಿದೆ.
ಬದಲಾಗುತ್ತಿದೆ ಈ ಕಾಲಘಟ್ಟ
ಹಿಂದಿನ ಹಾಸ್ಯಗಾರರು ತಮ್ಮ ಪಾತ್ರದ ಒಳಗಿದ್ದು ಕಲಾವಂತಿಕೆಯನ್ನು ಪ್ರದರ್ಶಿಸುತ್ತಿದ್ದರು. ಯಾವ ತೆರನಾದ ಹಾಸ್ಯ ಪ್ರೇಕ್ಷಕರ ಮನಸ್ಸನ್ನು ಗೆಲ್ಲಬಹುದು ಎಂಬುದನ್ನು ಊಹಿಸುತ್ತಿದ್ದರು. ತಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನೆಲ್ಲ ತಿಳಿದುಕೊಂಡು ಗಂಭೀರ ಚಿಂತನೆಗಳನ್ನು ಹಾಸ್ಯದ ಮೂಲಕ ಸಾಮಾಜಿಕ ಸಂದೇಶವನ್ನಾಗಿ ನೀಡುತ್ತಿದ್ದರು. ಕಥೆಯ ಒಳಹೊಕ್ಕು ಪ್ರೇಕ್ಷಕರಿಗೆ ಎಷ್ಟರಮಟ್ಟಿಗೆ ಹಾಸ್ಯದ ರಸದೌತಣ ಉಣಬಡಿಸಬಹುದು ಎಂಬ ಬಗೆಗೆ ಹಾಸ್ಯಗಾರರು ಪೂರ್ವತಯಾರಿ ನಡೆಸಿ ಹಾಸ್ಯದ ಹೊನಲನ್ನೇ ಹರಿಸುತ್ತಿದ್ದರು.
ಈಗಿನ ಹಾಸ್ಯಗಾರರಲ್ಲಿ ದ್ವಂದ್ವಾರ್ಥ ಹೆಚ್ಚುತ್ತಿರುವುದು ಖೇದಕರ. ಇದು ಕಲೆಯ ಶ್ರೇಷ್ಠತೆ, ಘನತೆಗೆ ಕುಂದುಂಟು ಮಾಡುತ್ತಿದೆ. ಇತ್ತೀಚೆಗೆ ಬರುತ್ತಿರುವ ಹೊಸ ಪ್ರಸಂಗಗಳು ಸಿನೆಮಾದಿಂದ ಪ್ರೇರೇಪಿತವಾಗಿದ್ದು, ಅಲ್ಲಿ ಹಾಸ್ಯವೂ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ.
ದ್ವಂದ್ವಾರ್ಥ ಕೊಡುವ ಹಾಸ್ಯಗಳು ಕೇವಲ ಒಂದು ವರ್ಗದ ಪ್ರೇಕ್ಷಕರನ್ನು ಮಾತ್ರ ರಂಜಿಸುತ್ತದೆಯೇ ಹೊರತು ಸದಭಿರುಚಿಯ, ಪರಿಪಕ್ವ ಯಕ್ಷಗಾನ ಪ್ರಸಂಗವನ್ನು ಆಸ್ವಾದಿಸ ಬಯಸುವ ಪ್ರಜ್ಞಾವಂತ ಪ್ರೇಕ್ಷಕರಿಗೆ ಸಹ್ಯವಾಗುವುದಿಲ್ಲ.
ಪ್ರಸಂಗದ ಕಥೆ ಸರಾಗವಾಗಿ ಸಾಗುತ್ತಿರುವಾಗ ಅಶ್ಲೀಲವೆನಿಸುವಂಥ ಹಾಸ್ಯಗಳು ಕಥೆಯ ಓಘ, ಗಾಂಭೀರ್ಯಕ್ಕೆ ತೊಡರುಗಾಲಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಹಾಸ್ಯಮಾಡಲು ಹೋದವರೇ ಅಪಹಾಸ್ಯಕ್ಕೆ ಗುರಿಯಾಗುವುದೂ ಇದೆ. ಒಂದು ಪೌರಾಣಿಕ ಪ್ರಸಂಗದಲ್ಲಿ ವಟವೃಕ್ಷ ಎನ್ನುವ ಬದಲು ಆಟೋರಿಕ್ಷಾ ಎಂದೂ, ದೇವಲೋಕದ ಅಪ್ಸರೆ ಅಂಬುಲಾಶೆಯ ಹೆಸರನ್ನು ಆ್ಯಂಬುಲೆನ್ಸ್ ಎಂದದ್ದೂ ಇದೆ. ಇಂತಹ ಹಾಸ್ಯಗಳನ್ನು ನಿರೂಪಿಸುವುದು ಸುಲಭದ ಮಾತಲ್ಲ. ಆದರೆ ಪ್ರೇಕ್ಷಕರೂ ಅಷ್ಟೇ ತೀಕ್ಷ್ಣಮತಿಯವ ರಾದರೆ ಬಹುಬೇಗ ಅರ್ಥವಾಗುತ್ತದೆ. ಕೆಲವೊಮ್ಮೆ ಸಹ ಪಾತ್ರಧಾರಿಗಳು ಸರಿಯಾದ ಪದವನ್ನು ಹೇಳಿ ಪ್ರೇಕ್ಷಕರಿಗೆ ತಿಳಿಸುವುದೂ ಇದೆ. ಇಲ್ಲದಿದ್ದರೆ ಹಾಸ್ಯಗಾರ ಹೇಳಿದದ್ದೇನು ಎಂದು ತಿಳಿಯುವುದೇ ಇಲ್ಲ. ಪೌರಾಣಿಕ ಪ್ರಸಂಗದಲ್ಲಿ ವರ್ತಮಾನದ ಪದ ಬಳಕೆ ಸಮಂಜಸವಲ್ಲ. ಪ್ರಸ್ತುತ ಸಾಮಾಜಿಕ ಮಾಧ್ಯಮಗಳು ಬಲಿಷ್ಠ ವಾಗಿರುವ ಈಗಿನ ಕಾಲದಲ್ಲಿ ಎಲ್ಲವೂ ಬಹುಬೇಗ ಟ್ರೋಲ್ ಆಗುತ್ತವೆ.
ಹಾಸ್ಯಗಾರರ ಮನೋಧರ್ಮ ಬದಲಾಗ ಬೇಕಾದದ್ದು ಈ ಕಾಲದ ಅಗತ್ಯವಾಗಿದೆ. ಹಾಸ್ಯ ವೆಂದರೆ ಕೇವಲ ಆ ಕ್ಷಣದ ನಗುವಿಗೆ ಸೀಮಿತವಾಗದೆ ಅದು ರಂಜಿಸುವಂತಿರಬೇಕು. ಒಂದು ಪ್ರಸಂಗದಿಂದ ಪ್ರೇಕ್ಷಕರು ಬಯಸಿದ್ದನ್ನು ಕಥೆಯ ವ್ಯಾಪ್ತಿಯಲ್ಲೇ ನೀಡುವಂತಿರಬೇಕು. ಹಾಸ್ಯಗಾರರು ವೈಯಕ್ತಿಕ ನಿಂದನೆ, ಇತರರಿಗೆ ಅವಮಾನ ಆಗುವಂಥ ಹಾಸ್ಯವನ್ನು ಮಾಡುವುದು ಸರಿಯಲ್ಲ. ಯಾವ ಪಾತ್ರಕ್ಕೆ ಎಷ್ಟು ಅಭಿನಯ ಬೇಕು ಎಂಬ ಅರಿವು ಹಾಸ್ಯಗಾರನಲ್ಲಿ ಇರಬೇಕು. ಈ ಬಗ್ಗೆ ಹಾಸ್ಯಗಾರನಿಗೂ ಒಂದಿಷ್ಟು ತರಬೇತಿ ಅವಶ್ಯವಾಗಿದೆ.
ಹಾಸ್ಯಕಷ್ಟೇ ಸೀಮಿತನಾಗಬೇಕೇ?
ಕೆಲವು ಹಾಸ್ಯಗಾರರು ಬೇರೆ ಬೇರೆ ರೀತಿಯ ಪ್ರತಿಭೆಯನ್ನು ಹೊಂದಿರುತ್ತಾರೆ. ಆದರೆ ಅದಕ್ಕೆಲ್ಲ ಅವಕಾಶ ಸಿಗುವುದಿಲ್ಲ. ಯಾವುದೇ ಕಲಾವಿದ ಕೇವಲ ಒಂದೇ ವಿಧದ ಪಾತ್ರಕ್ಕೆ ಸೀಮಿತವಾಗದೆ ತನಗೆ ಸಾಮರ್ಥ್ಯವಿರುವ ಇತರ ಪಾತ್ರಗಳಲ್ಲೂ ಅಭಿನಯಿಸಿದರೆ ಆಗ ತಮ್ಮ ಪರಿಮಿತಿಯನ್ನು ಅವರು ಅರಿಯಲು ಸಾಧ್ಯ. ಹಾಸ್ಯ ಕಲಾವಿದರು ಒಟ್ಟು ಯಕ್ಷಗಾನ ರಂಗಕ್ಕೆ ಎಷ್ಟು ಬೇಕು ಅಷ್ಟನ್ನು ಕೊಟ್ಟು ಇನ್ನಷ್ಟು ಪ್ರೌಢಿಮೆ ಯಿಂದ ತಮ್ಮ ಪಾತ್ರವನ್ನು ನಿರ್ವಹಿಸಿದ್ದೇ ಆದಲ್ಲಿ ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರರಾಗುವುದು ಖಚಿತ.
ರಾಧಿಕಾ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.