Yakshagana ಕಾಲಮಿತಿ ಪ್ರದರ್ಶನ: ಪರಂಪರೆಗೆ ಧಕ್ಕೆಯಾಗದಿರಲಿ
ರಷ್ಯಾ ಪ್ರಧಾನಿಯ ಮುಂದೆ ಯಕ್ಷಗಾನ ಪ್ರದರ್ಶನ ನೀಡಿದ್ದನ್ನು...
Team Udayavani, Oct 29, 2023, 6:25 AM IST
ಯಕ್ಷಗಾನದಲ್ಲಿ ಕಾಲಮಿತಿಗೆ ಸಂಬಂಧಿಸಿದ ಚರ್ಚೆ ಒಳಗೂ, ಹೊರಗೂ ಕಾಲದಿಂದ ಕಾಲಕ್ಕೆ ನಡೆಯುತ್ತಲೇ ಬಂದಿದೆ. ಕೊರೊನಾದಂತಹ ಆರೋಗ್ಯದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇದೊಂದು ಅನಿವಾರ್ಯವೆಂಬಂತೆ ಆಚರಣೆಗೆ ಬಂತು ಮತ್ತು ಚರ್ಚೆ ಇನ್ನೂ ಹೆಚ್ಚು ತೀವ್ರವಾಗಿ ಮುನ್ನೆಲೆಗೆ ಬಂತು.
ಕಾಲಮಿತಿಯೆಂಬುದು ವಾಸ್ತವವಾಗಿ ಕಲೆ, ಸಾಹಿತ್ಯ, ಸಂಘಟನೆ ಇತ್ಯಾದಿಗಳಿಗೆ ಸಂಬಂಧಿಸಿ ಆಯಾ ವಿಷಯಗಳಲ್ಲಿ ಅನೇಕ ಬಾರಿ ಅವ್ಯಕ್ತವಾಗಿಯೇ ಅಂತರ್ಗತವಾಗಿಕೊಂಡಿದೆ. ಕಾಲಮಿತಿ ಎನ್ನುವುದರಲ್ಲಿ ಕೇವಲ ಸಮಯದ ಮಿತಿ ಎನ್ನುವುದು ವಾಚ್ಯಾರ್ಥವಾದರೂ ಇದರ ಹಿಂದೆ ಬೇರೆಯೂ ಕೆಲವು ಮಿತಿಗಳು ನಿಕ್ಷೇಪಿಸಲ್ಪಟ್ಟಿವೆ. ಸಮಯದ ಮಿತಿ ಎನ್ನುವುದು ಕಾಲಬಾಧಿತವಾದ ಒಂದು ಅಗತ್ಯವೆಂದು ಭಾವಿಸಿದರೆ ತಪ್ಪಾಗಲಾರದು. ಎಂದರೆ ಇಲ್ಲಿ ಕಾಲ ಎಂದಾಗ ಸಮಯ ಮಾತ್ರವಲ್ಲ, ಪ್ರದೇಶ, ಸನ್ನಿವೇಶ, ಸಂದರ್ಭ ಇತ್ಯಾದಿಗಳನ್ನು ಪರಿಗಣಿಸಬೇಕಾಗುತ್ತದೆ. ಒಂದು ದೃಷ್ಟಾಂತವಾಗಿ ರಷ್ಯಾ ಪ್ರಧಾನಿಯ ಮುಂದೆ ಯಕ್ಷಗಾನ ಪ್ರದರ್ಶನ ನೀಡಿದ್ದನ್ನು ನಾವು ನೆನಪಿಸಿಕೊಳ್ಳಬಹುದು, ಅದು ಆ ಒಂದು ವಿಶಿಷ್ಟ ಸಂದರ್ಭಕ್ಕೆ ಅನುಕೂಲವಾಗಿ ಅನ್ವಯಿಸಲ್ಪಟ್ಟ ಕಾಲಮಿತಿಯೆಂದಷ್ಟೆ ನಾವು ಗುರುತಿಸಬೇಕಾಗುತ್ತದೆ. ಆದರೆ ಅದುವೆ ಎಲ್ಲ ಕಾಲಕ್ಕೂ ಸಲ್ಲುವ ಸತ್ಯವಲ್ಲ.
ಸದ್ಯದ ಸಂದರ್ಭದಲ್ಲಿ ಯಕ್ಷಗಾನದಲ್ಲಿ ಕಾಲಮಿತಿ ಎನ್ನುವುದು ಪ್ರದರ್ಶನದ ಕಾಲಾವಧಿಯ ಮಿತಿ ಎನ್ನುವ ಅರ್ಥದಲ್ಲಿಯೇ ಪ್ರಯೋಗಿಸಲ್ಪಡುತ್ತದೆ. ಈ ರೀತಿಯ ಬೆಳವಣಿಗೆಗಳು ಹಲವು ವರ್ಷಗಳಿಂದ ಬೇರೆ ಬೇರೆ ಆಯಾಮಗಳಲ್ಲಿ ಗುರುತಿಸಿಕೊಂಡಿವೆ. ಉದಾಹರಣೆಗೆ ಹೇಳುವುದಾದರೆ ಆಕಾಶವಾಣಿ ತಾಳಮದ್ದಳೆಗಳು, ದೂರದರ್ಶನ ತಾಳಮದ್ದಳೆಗಳು ಒಂದು ತಾಸಿಗೆ ಮಾತ್ರ ಸೀಮಿತವಾಗಿರುತ್ತವೆ. ಇದೀಗ ತೆರೆಮರೆಗೆ ಸರಿಯುತ್ತಿರುವ ಕ್ಯಾಸೆಟ್ ಯುಗದಲ್ಲಿ ಎಷ್ಟೋ ತಾಳಮದ್ದಳೆಗಳು ಧ್ವನಿ ಮುದ್ರಣಗೊಂಡು ಮಾರುಕಟ್ಟೆಗೆ ಬಂದಿದ್ದವು. ಅವುಗಳೆಲ್ಲ ಒಂದು ಅಥವಾ ಎರಡು ತಾಸುಗಳಿಗೆ ಸೀಮಿತವಾಗಿದ್ದವು.
ಸಾರ್ವಜನಿಕ ಪ್ರದರ್ಶನಗಳನ್ನು ಕೊಡುವಾಗ ಈ ಉದ್ದೇಶವನ್ನು ಹೇಗೆ ಅನ್ವಯಿಸಬೇಕು ಎನ್ನುವುದು ಮುಖ್ಯವಾದ ಪ್ರಶ್ನೆ. ಇದು ಉತ್ತರಿಸುವುದಕ್ಕೆ ಗಹನವಾದ ಪ್ರಶ್ನೆಯೇನೂ ಅಲ್ಲ. ತಾಳಮದ್ದಳೆಯ ಮೂಲ ಸ್ವರೂಪಕ್ಕೆ ಕೆಡುಕಾಗದಂತೆ ಕಾಲಾವಧಿಯ ಮಿತಿಯನ್ನು ಮೀಸಲಿರಿಸಬೇಕು.
ಕಲೆಯಲ್ಲಿ ಇರಬೇಕಾದ ಅಂಗಾಂಗಳ ನಡುವಿನ ಪ್ರಮಾಣಬದ್ಧತೆಯನ್ನು, ಸೌಷ್ಠವವನ್ನು, ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಆಂಗಿಕ, ವಾಚಿಕ, ಸಾತ್ವಿಕ ಇವುಗಳೆಲ್ಲ ಈ ನಿಯಮಕ್ಕೆ ಹೊಂದಿಕೊಳ್ಳಬೇಕು. ಆಹಾರ್ಯಕ್ಕೆ ತಾಳಮದ್ದಳೆಯಲ್ಲಿ ವಿಶೇಷ ಪ್ರಾಶಸ್ತ್ಯವಿಲ್ಲ, ಇದ್ದರೂ ಅದನ್ನು ಉಳಿಸಿಕೊಳ್ಳಲು ಕಷ್ಟವೇನೂ ಇಲ್ಲ. ಹಿಮ್ಮೇಳ ಮತ್ತು ಮುಮ್ಮೇಳಗಳ ನಡುವಣ ಸಮ್ಮಿಲನ ಅಥವಾ ಸಾಂಗತ್ಯ ಅತ್ಯಂತ ಮುಖ್ಯವಾದ ಅಂಶ.
ಎರಡೂ ಅಳತೆ ಮೀರಿ ಬೆಳೆಯಕೂಡದು. ಹಾಡು ಮತ್ತು ಅರ್ಥಗಳ ನಡುವೆ ಅರ್ಥವತ್ತಾದ ಒಂದು ನಿಷ್ಪತ್ತಿ ಇರಬೇಕು.
ಭೀಷ್ಮಾರ್ಜುನದಲ್ಲಿ ಕೃಷ್ಣ ಚಕ್ರಧಾರಿಯಾಗಿ ಭೀಷ್ಮನನ್ನು ಕೊಲ್ಲುವುದಕ್ಕೆ ಮುಂದೆ ಬರುವ ಕಾಲದಲ್ಲಿ ಭೀಷ್ಮನ ಪದ್ಯಗಳನ್ನು ದೀರ್ಘ ಆಲಾಪನೆಯಲ್ಲಿ ತೊಡಗಿಸಿಕೊಂಡರೆ ಸನ್ನಿವೇಶ ಹಾಳಾದಿತು. ಕಾಲಮಿತಿ ಕನಸಾಗಿಯೇ ಉಳಿದೀತು.ಅದೇ ರೀತಿ ಸ್ವಗತ ಸಂವಾದಗಳಲ್ಲಿ ವಾಚಿಕ ಲಂಬಿಸುತ್ತ ಹೋದರೆ ಹಿಮ್ಮೇಳದ ಅಥವಾ ಭಾಗವತರ ಭಾಗವತಿಕೆಗೆ ತೊಡಕಾದೀತು.
ಕಾಲಮಿತಿಯೆಂಬುದು ಕಾಲಕ್ಕೆ ಅನುಗುಣವಾಗಿ ತುರ್ತು ಪರಿಸ್ಥಿತಿಯಲ್ಲಾಗಲಿ, ಸಾಮಾನ್ಯ ಸಂದರ್ಭಗಳಲ್ಲಾಗಲಿ ಗೌರವಿಸಲ್ಪಟ್ಟರೆ ತಪ್ಪೇನಿಲ್ಲ. ಆದರೆ ಪ್ರಸಂಗವನ್ನು ಕಾಲಮಿತಿಗೆ ಅನುಗುಣವಾಗಿ ಸಂಯೋಜನೆಗೊಳಗಾಗಿಸಬೇಕು. ನಡೆಸಿಕೊಡುವ ಕಲಾವಿದರು ಮತ್ತು ವ್ಯವಸ್ಥಾಪಕರು ಸಾಕಷ್ಟು “ಹೋಮ್ ವರ್ಕ್’ ಮಾಡಿಕೊಂಡಾಗ ಕಲಾ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಾದೀತು.
ಕೃಷ್ಣ ಸಂಧಾನ ಪ್ರಸಂಗದ ಪ್ರದರ್ಶನ ಕಾಲದಲ್ಲಿ ವಿವಿಧ ಪ್ರಕರಣಗಳನ್ನು ಅನುಕೂಲಕ್ಕೆ ಅನುಸಾರವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದು ಕಲಾರಸಿಕರಿಗೆಲ್ಲ ಗೊತ್ತಿರುವ ವಿಷಯವೇ. ಆದ್ದರಿಂದ ಹೆಚ್ಚಿನ ವಿವರ ಬೇಕಾಗುವುದಿಲ್ಲ.
ಕಲೆಯೊಂದನ್ನು ಪ್ರಸ್ತುತ ಪಡಿಸುವಾಗ ಆ ಕಲೆಯ ಮೂಲ ರೂಪಕ್ಕೆ ಅರ್ಥಾತ್ ನಾವು ಗೌರವಿಸುತ್ತ ಬಂದಿರುವ ಪರಂಪರೆಗೆ ತೊಡಕಾಗಬಾರದು ಎನ್ನುವುದು ಕಲೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಮಾತಾಗುತ್ತದೆ. ಹಾಗಾಗಿ ಕಾಲಮಿತಿಯನ್ನು ಅಳವಡಿಸುವವರು ಈ ವಿಚಾರಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗುತ್ತದೆ. ಬೇಕಾಬಿಟ್ಟಿ ಪ್ರದರ್ಶನಗಳನ್ನು ನೀಡಲು ಪ್ರಾರಂಭಿಸಿದರೆ ಕಲೆಯ ಸ್ವತ್ವವೂ, ಸತ್ವವೂ ಅಳಿದು ಹೋಗುವ ಅಪಾಯ ಇದ್ದೇ ಇದೆ.
ಕಾಲಮಿತಿ ಏಕೆ?, ಹೇಗೆ?, ಎಷ್ಟು? ಎನ್ನುವ ನಿರ್ಣಯವನ್ನು ಕೈಗೊಳ್ಳಬೇಕಾದವರು ಪ್ರದರ್ಶನ ನೀಡುವ ತಂಡದವರು ಅಥವಾ ಮೇಳದವರು ಮತ್ತು ಪ್ರದರ್ಶನಕ್ಕೆ ವೇದಿಕೆ ಒದಗಿಸುವ ಸಂಘಟಕರು. ಆಯಾ ಕಾಲಮಿತಿಯಿಂದ ಕಲೆಗೆ ಅಪಚಾರವಾಗಿದೆಯೇ? ಎನ್ನುವುದನ್ನು ಗ್ರಹಿಸಬೇಕಾದವರು ಅಸ್ವಾದಕರು, ವಿಮರ್ಶಕರು ಮತ್ತು ಕಲಾ ಪೋಷಕರು. ಕಾಲದ ತುರ್ತು ಎಂಬಂತೆ ಕಾಲಮಿತಿಯನ್ನು ಪರಂಪರೆಗೆ ಧಕ್ಕೆಯಾಗದಂತೆ ಅಳವಡಿಸುವುದು ಅಪೇಕ್ಷಣೀಯ.
ಡಾ| ಕೆ.ರಮಾನಂದ ಬನಾರಿ, ಮಂಜೇಶ್ವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.