Yakshagana ಸಾಗಿ ಬಂದ ದಾರಿ ವಿಶೇಷ; ಮುಂದಿನದರ ಬಗ್ಗೆ ಕೌತುಕ


Team Udayavani, Dec 24, 2023, 5:11 AM IST

Yakshagana Tenku

ಸಾಂದರ್ಭಿಕ ಚಿತ್ರ

ಯಕ್ಷಗಾನವು ಸಾಗಿ ಬಂದ ದಾರಿಯನ್ನೊಮ್ಮೆ ನೋಡಿದರೆ ನಾವು ಈಗ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಸುವುದರಲ್ಲಿ ಹುರುಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಯಕ್ಷಗಾನದಲ್ಲಿ ಕಾಲಮಿತಿ ಎಂಬ ಹೊಸ ಹಾಗೂ ವಿಶೇಷ ಬದಲಾವಣೆ ಆದಾಗ ಸ್ವಾಗತಕ್ಕೆ ಹೆಚ್ಚು ಟೀಕೆಯೇ ಕಂಡುಬಂದದ್ದು. ನಿಧಾನವಾಗಿ ಅದಕ್ಕೆ ಒಗ್ಗಿಕೊಳ್ಳುತ್ತಿರುವ ಈ ಶ್ರೀಮಂತ ಕಲೆಯ ಪ್ರೇಕ್ಷಕರು ಹಾಗೂ ಕಲಾವಿದರು, ಆದದ್ದೆಲ್ಲ ಒಳಿತೇ ಎನ್ನುತ್ತಿದ್ದಾರೆ.
ಹಾಗೆ ನೋಡಿದರೆ ಹಿಂದಿನ ಯಕ್ಷಗಾನದಿಂದ ಈಗಿನದರಲ್ಲಿ ತುಂಬಾ ಬದಲಾವಣೆ ಕಾಣುತ್ತಿ ದ್ದೇವೆ. ಹಿಂದೆಲ್ಲ ದೊಂದಿ ಬೆಳಕಿನಲ್ಲಿ, ಧ್ವನಿವರ್ಧಕಗಳಿಲ್ಲದೆ ನಡೆಯುತ್ತಿದ್ದ ಯಕ್ಷಗಾ ನವು ಈಗ ಆಕರ್ಷಕ ವಿದ್ಯುತ್‌ ದೀಪಗಳಲ್ಲಿ ಧ್ವನಿವರ್ಧಕ ಬಳಸಿಯೇ ನಡೆಯುತ್ತಿದೆ. ಇವೆ ರಡು ಇಲ್ಲದೆ ಈಗ ಯಕ್ಷಗಾನ ಪ್ರದರ್ಶನ ಸಾಧ್ಯವೇ ಇಲ್ಲ ಎಂಬಂತಾಗಿದೆ ಪರಿಸ್ಥಿತಿ. ಇದು ಅಭಿವೃದ್ಧಿಯ ಬದಲಾವಣೆ ಎಂದು ಸುಮ್ಮನಿ ದ್ದರೂ, ಬೇರೆಯೂ ಕೆಲವು ಮಹತ್ತರ ಬದಲಾವಣೆಗಳು ಈ ಕಲೆಯಲ್ಲಿ ಆಗಿರುವುದನ್ನು ನಾವು ಕಾಣಬಹುದು.

ಹಿಂದೆಲ್ಲ ಯಕ್ಷಗಾನದಿಂದ ಮಹಿಳೆಯರು ತುಂಬಾ ದೂರವಿದ್ದರು. ಪ್ರೇಕ್ಷಕರ ಸಾಲಿನಲ್ಲೂ ಮಹಿಳೆಯರ ಸಂಖ್ಯೆ ಕಡಿಮೆಯಿತ್ತು. ಕಲಾವಿದರ ವಿಷಯದಲ್ಲಿ ಶೂನ್ಯ ಎಂಬಂತಿತ್ತು. ಲೀಲಾವತಿ ಬೈಪಾಡಿತ್ತಾಯರು ಭಾಗವತರಾಗಿ ಮಹಿಳೆ ಯರೂ ಯಕ್ಷಗಾನದಲ್ಲಿ ತಿರುಗಾಟ ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟರು. ಆಗ ಅದೊಂದು ದೊಡ್ಡ ಸಂಗತಿಯಾಗಿತ್ತು. ಮಹಿಳಾ ಭಾಗವತರಂತೆ ಎಂಬ ಕುತೂಹಲದ ಮಾತು ಎಲ್ಲರಿಂದಲೂ ಕೇಳಿ ಬರುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಹಿಳೆಯರು ಯಕ್ಷಗಾನದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಹಿಮ್ಮೇಳ, ಮುಮ್ಮೇಳದಲ್ಲೂ ಮಹಿಳೆಯರು ತಮ್ಮದೇ ಆದಂ ಥ ಛಾಪು ಮೂಡಿಸುತ್ತಿದ್ದಾರೆ. ಮಹಿಳಾ ಯಕ್ಷಗಾನ ತಂಡಗಳ ಸಂಖ್ಯೆ ಯೂ ಅಪಾರವಿದೆ. ತಾಳಮದ್ದಳೆ ಕೂಟದಲ್ಲೂ ಮಹಿಳೆಯರು ಹಿಂದೆ ಬಿದ್ದಿಲ್ಲ.

ಯಕ್ಷಗಾನದ ಕಲಾವಿದರಿಗೆ ಹಿಂದೆ ಸಮಾಜದಲ್ಲಿ ಉತ್ತಮ ಗೌರವ ಇರಲಿಲ್ಲ ಎಂಬುದು ಕಹಿಸತ್ಯ. ಯಕ್ಷಗಾನದ ಕಲಾವಿದ ಎಂದರೆ ಮದುವೆಯಾಗಲು ಹೆಣ್ಣು ಕೊಡಲೂ ಹಿಂದುಮುಂದು ನೋಡುತ್ತಿದ್ದರು ಎಂಬುದನ್ನು ಹಿರಿಯರು ಹೇಳುತ್ತಿದ್ದಾರೆ. ಆಟಕ್ಕಾಗಿ ಒಮ್ಮೆ ಮನೆ ಬಿಟ್ಟರೆ ಮತ್ತೆ ಬರುವುದು ಯಾವಾಗ ಎಂಬುದು ಖಾತ್ರಿಯೇನೂ ಇರಲಿಲ್ಲ. ಊರಿಂದೂರಿಗೆ ಅಲೆದಾ ಡುತ್ತಾ ಕಲಾವಿದರು ಬದುಕು ಕಟ್ಟಿಕೊಳ್ಳಬೇಕಿತ್ತು. ಆಗ ಈಗಿನಂತೆ ಸಂಪರ್ಕ ವ್ಯವಸ್ಥೆಯೂ ಉತ್ತಮವಾಗಿರಲಿಲ್ಲ. ಮನೆಯ ಮಾಹಿತಿಯೂ ಕಲಾವಿದರಿಗೆ ಕಾಲಕಾಲಕ್ಕೆ ತಿಳಿಯುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ತುಂಬಾ ಭಿನ್ನವಾಗಿದೆ. ಕಲಾವಿದರೂ ಪ್ರತಿದಿನ ಮನೆಗೆ ಬರುತ್ತಾರೆ. ಅವರ ಆದಾಯ ಹೆಚ್ಚಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಸ್ವಂತ ವಾಹನದಲ್ಲಿ ಆಟಕ್ಕೆ ಹೋಗುವವರೂ ಸಾಕಷ್ಟು ಮಂದಿ ಇದ್ದಾರೆ. ಕಲಾವಿದರಿಗೆ ಸಮಾಜದಲ್ಲಿ ಉತ್ತಮ ಗೌರವ, ಪ್ರತಿಷ್ಠೆ ಇದೆ. ಸಮಾಜ ಯಕ್ಷಗಾನ ಕಲಾವಿದರನ್ನು ಪ್ರೀತಿ, ಅಭಿಮಾನದಿಂದ ಸ್ವಾಗತಿಸುತ್ತದೆ.

ಹಿಂದೆಲ್ಲ ಆಟಕ್ಕೆ ಸೇರುವವರಿಗೆ ತುಂಬಾ ಕಡಿಮೆ ಶಿಕ್ಷಣ ಇರುತ್ತಿತ್ತು. ಆದರೂ ಅವರು ಪುರಾಣದ ಪಾತ್ರಗಳಿಗೆ ಅತ್ಯುತ್ತಮವಾಗಿ ಜೀವ ತುಂಬು ತ್ತಿದ್ದರು. ಸುಶಿಕ್ಷಿತರು ಯಕ್ಷಗಾನದಲ್ಲಿ ಇರುತ್ತಿರಲಿಲ್ಲ. ಅವರು ಯಕ್ಷಗಾನದತ್ತ ತಿರುಗಿಯೂ ನೋಡುತ್ತಿರಲಿಲ್ಲ. ಯಕ್ಷಗಾನದ ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಪ್ರದರ್ಶನ ಕಾಣುತ್ತಿತ್ತು. ನಗರದಲ್ಲಿ ಅದಕ್ಕೆ ಪ್ರೇಕ್ಷಕರ ಕೊರತೆ ಕಾಡುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಭಿನ್ನ ವಾಗಿದೆ. ಯಕ್ಷಗಾನವು ಗ್ರಾಮೀಣ ಭಾಗ ಕ್ಕಿಂತ ಹೆಚ್ಚಾಗಿ ನಗರ ಪ್ರದೇಶದಲ್ಲೇ ಯಶಸ್ಸು ಕಾಣುತ್ತಿದೆ. ಸುಶಿಕ್ಷಿತರೂ ಯಕ್ಷಗಾನದಲ್ಲಿ ಪೂರ್ಣ ಪ್ರಮಾಣದ ಕಲಾವಿದರಾಗಿ ದುಡಿ ಯುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಪ್ರೊಫೆಸರ್‌ಗಳು, ವೈದ್ಯರು ಮುಂತಾದ ಉನ್ನತ ಹುದ್ದೆಯಲ್ಲಿರುವವರು ಕೂಡ ಯಕ್ಷಗಾನದಲ್ಲಿ ಬಣ್ಣ ಹಾಕಿ ಪ್ರದರ್ಶನ ನೀಡುತ್ತಿದ್ದಾರೆ. ಇದೆಲ್ಲವೂ ಯಕ್ಷಗಾನದ ಮೇಲಿನ ಗೌರವವನ್ನು ಮತ್ತಷ್ಟು ಹೆಚ್ಚಿಸಲು ಪೂರಕವಾದಂಥ ಅಂಶಗಳೇ.

ಹಿಂದೆಲ್ಲ ಹಗಲು ಹೊತ್ತಿನಲ್ಲಿ ಆಟದ ಮಾತೇ ಇರಲಿಲ್ಲ. ಒಂದೆರಡು ದಶಕಗಳ ಹಿಂದೆ ಮಳೆಗಾಲದ ಪ್ರದರ್ಶನ ಎಂದು ಸಭಾಂಗಣಗಳಲ್ಲಿ ಯಕ್ಷಗಾನ ನಡೆಯುತ್ತಿದ್ದವು. ಬಳಿಕ ಎಲ್ಲೆಡೆಯೂ ಹಗಲು ಹೊತ್ತಿನಲ್ಲಿ ಯಕ್ಷಗಾನ ಪ್ರದರ್ಶನ ಸಾಮಾನ್ಯ ಎಂಬಂತಾಯಿತು. ದೊಡ್ಡ ದೊಡ್ಡ ಉತ್ಸವಗಳ ಮನೋರಂಜನ ಕಾರ್ಯಕ್ರಮಗಳಲ್ಲಿ ಯಕ್ಷಗಾನ ಪ್ರದರ್ಶನ ಇದ್ದರೆ ಅದರ ಘನತೆಯೇ ಹೆಚ್ಚಾಗುತ್ತದೆ. ರಾತ್ರಿ ಆಟಕ್ಕಿಂತ ಹಗಲಿನ ಆಟಕ್ಕೆ ಸೇರುವ ಜನರೇ ಹೆಚ್ಚು.

ಕಾಲಮಿತಿಯ ವಿಷಯಕ್ಕೆ ಬಂದಾಗ ನಾವು ಸಾಕಷ್ಟು ಟೀಕೆಗಳನ್ನು ಕೇಳಿದ್ದೇವೆ. ಕಾಲಮಿತಿಯು ಯಕ್ಷಗಾನಕ್ಕೆ ಮಾರಕ ಎಂದು ಹೇಳಿದವರೇ ಹೆಚ್ಚು. ಆದರೆ ಹಿಂದೆಲ್ಲ ದೇವಿ ಮಹಾತೆ¾ಯಂಥ ಕೆಲವು ಪ್ರಸಂಗಗಳು 2-3 ದಿನಗಳ ಕಾಲ ನಡೆಯುತ್ತಿತ್ತು ಎಂದು ಹಿರಿಯರು ಹೇಳುತ್ತಿದ್ದಾರೆ. ಅದು ಬದ ಲಾಗಿ, ಕಿರಿದಾಗಿ ಒಂದು ರಾತ್ರಿಗೆ ಸೀಮಿತವಾಯಿತು. ಈಗ ಅದನ್ನೇ 5-6 ತಾಸುಗಳಿಗೆ ಇಳಿಸಲಾಗಿದೆ. ಇದರಿಂದ ಯಕ್ಷಗಾನಕ್ಕೆ ಏನೂ ಚ್ಯುತಿ ಆಗುವುದಿಲ್ಲ ಎಂಬ ವಾದ ಈಗ ಹೆಚ್ಚು ಪ್ರಬಲವಾಗಿದೆ. ಕಾಲಮಿತಿಯನ್ನು ಪ್ರೇಕ್ಷಕರು ಹಾಗೂ ಕಲಾವಿದರು ಸ್ವೀಕರಿಸಿ, ಒಪ್ಪಿಕೊಂಡಾಗಿದೆ. ರಾತ್ರಿ ಪೂರ್ತಿ ಆಟ ಎನ್ನು ವುದು ಯಾವಾಗ ಇತಿಹಾಸದ ಪುಟಕ್ಕೆ ಸೇರಲಿದೆಯೇ ಹೇಳಲಾಗದು. ಕಾಲ ಮಿತಿಯ ಪ್ರದರ್ಶನ ಕಲಾವಿದರ ಆರೋಗ್ಯದ ವಿಷಯದಲ್ಲೂ ಉತ್ತಮ ನಿರ್ಧಾರ ಎನ್ನಲಾಗುತ್ತಿದೆ. ಸರಕಾರದ ಧ್ವನಿವರ್ಧಕ ನಿಯಮವನ್ನು ಪಾಲಿಸಿ ರಾತ್ರಿಯಿಡೀ ಯಕ್ಷಗಾನ ನಡೆಸುವುದು ಕಷ್ಟಸಾಧ್ಯವೇ ಎನ್ನುವಂಥ ಪರಿಸ್ಥಿತಿ ಈಗಿದೆ.

ಯಕ್ಷಗಾನವು ಪ್ರತಿಯೊಂದು ಬದಲಾವಣೆಯನ್ನು ಕಂಡಾಗಲೂ ಸಾಕಷ್ಟು ಟೀಕೆಯನ್ನು ಎದುರಿಸಿತ್ತು. ಆದರೆ ದಿನದಿಂದ ದಿನಕ್ಕೆ ಯಕ್ಷಗಾನವು ತನ್ನ ಪ್ರಗತಿ ಹಾಗೂ ಪ್ರಸಿದ್ಧಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಇದನ್ನು ಗಮನಿಸುವಾಗ ಇದುವರೆಗೆ ಆಗಿರುವ ಎಲ್ಲ ಬದಲಾವಣೆಗಳೂ ಯಕ್ಷಗಾನಕ್ಕೆ ಒಳಿತನ್ನೇ ಮಾಡಿದೆ ಎಂದು ಹೇಳಬಹುದು. ಯುವಜನಾಂಗವನ್ನೂ ಈಗ ಯಕ್ಷಗಾನ ಸೆಳೆಯುತ್ತಿರುವುದು ಒಂದು ಅತೀ ದೊಡ್ಡ ಪೂರಕ ಬದಲಾವಣೆ.

ಇದನ್ನೆಲ್ಲ ಗಮನಿಸುವಾಗ ಯಕ್ಷಗಾನದ ಬದಲಾವಣೆ, ಅದರಲ್ಲಿ ಆಗುತ್ತಿರುವ ಸುಧಾರಣ ಕ್ರಮಗಳನ್ನು ಟೀಕಿಸುವ ಮೊದಲು ನಾವು ಸಾಕಷ್ಟು ಚಿಂತಿಸುವುದು ಅಗತ್ಯ. ಯಕ್ಷಗಾನ ಎಂಬುದು ಸಮುದ್ರವಿದ್ದಂತೆ. ಬದಲಾ ವಣೆಯಾಗದ ಯಾವ ಕ್ಷೇತ್ರವೂ ಈ ಸಮಾಜದಲ್ಲಿಲ್ಲ. ಅದನ್ನು ನಾವು ಹೇಗೆ ಸ್ವೀಕರಿಸಿಕೊಳ್ಳುತ್ತೇವೆ ಎಂಬುದರಲ್ಲಿ ಅದರ ಯಶಸ್ಸು ಅಡಗಿದೆ. ಪರಂಪರೆ ಹೆಸರಲ್ಲಿ ಬದಲಾವಣೆಯನ್ನು ನಿರ್ಬಂಧಿಸಲು ಸಾಧ್ಯವೂ ಇಲ್ಲ, ಅಂಥ ಕ್ರಮ ಸೂಕ್ತವೂ ಅಲ್ಲ. ಹಾಗೆಂದು ಮೂಲಕ್ಕೆ ಧಕ್ಕೆ ಬರದಂತೆ ಎಚ್ಚರದಿಂದಿರುವುದು ಕೂಡ ಅಷ್ಟೇ ಅಗತ್ಯ.

ಪುತ್ತಿಗೆ ಪದ್ಮನಾಭ ರೈ

ಟಾಪ್ ನ್ಯೂಸ್

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.