ಯಕ್ಷಪರಿವ್ರಾಜಕ ಹೊಸ್ತೋಟ ಮಂಜುನಾಥ ಭಾಗವತ
Team Udayavani, Jan 19, 2020, 7:15 AM IST
ನಮ್ಮ ನಡುವೆ ಇದ್ದ, ಈಗಲೂ ಇಲ್ಲವೆಂದು ಹೇಳಲಾಗದ ಖ್ಯಾತ ಯಕ್ಷಗಾನ ವಿದ್ವಾಂಸ ಮತ್ತು ದಾರ್ಶನಿಕ ಹೊಸ್ತೋಟ ಮಂಜುನಾಥ ಭಾಗವತರ ಜೀವನದ ಅನನ್ಯತೆ ಮತ್ತು ಶ್ರೇಷ್ಟತೆಯನ್ನು ಅರಿಯುವ ಹಂಬಲ ನಮ್ಮನ್ನು ತಾತ್ವಿಕತೆ, ಕಲೆ, ಎರಡರ ನಡುವಿನ ಸಂಬಂಧ, ಆತ್ಮೋನ್ನತಿ ಇತ್ಯಾದಿ ಸಂಕೀರ್ಣ ವಿಷಯಗಳತ್ತ ಕೊಂಡೊಯ್ಯುತ್ತದೆ. ತಿಳಿದ ವಿಷಯ. ಹೊಸ್ತೋಟ ಓರ್ವ ಪರಿವ್ರಾಜಕರಾಗಿದ್ದರು. ವಿರಕ್ತರಾಗಿದ್ದರು. ಅವರ ವಿರಕ್ತಿಯ ದರ್ಶನ ಭಾಗ್ಯ ಮೂರೂರಿನಲ್ಲಿ ಪ್ರಸಿದ್ಧ ಕಲಾವಿದ ದೇವರು ಹೆಗಡೆ ಯಕ್ಷಗಾನ ಶಾಲೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಶಿಷ್ಯನಾಗಿದ್ದ ನನಗೆ ಲಭಿಸಿದೆ.
ಅವರ ಜೀವನ ವಿಧಾನ ನಮಗೆ ತಂದಿತ್ತ ಬೆರಗನ್ನು ಕುರಿತು ಮೊದಲು ಹೇಳಿಕೊಳ್ಳಬೇಕು. ಅವರು ಚಪ್ಪಲಿ ಹಾಕುತ್ತಿರಲಿಲ್ಲ. ಕೊನೆಗೆ ಕಾಲಿಗೆ ಮೀನುಕಣ್ಣು ಆಗಿ ಹೋಗಿ ನಂತರ ಅನಿವಾರ್ಯವಾಗಿ ಚಪ್ಪಲಿ ಬಳಸಿದರು ಎಂದು ಕೇಳಿದ್ದೇನೆ. ಕೂದಲು ಬಾಚುತ್ತಿರಲಿಲ್ಲ. ದಾಡಿ ಮಾಡಿಕೊಳ್ಳುವುದು ಮಹತ್ವವಲ್ಲ. ಸ್ನಾನಕ್ಕೆ ಸೋಪು ಬಳಸುತ್ತಿರಲಿಲ್ಲ. ಬಟ್ಟೆ ಎರಡೇ ಜತೆ. ಒಂದು ಮೈ ಮೇಲೆ. ಇನ್ನೊಂದು ಒಣಗಲು ಹಾಕಿದ್ದು. ಒಂದೆರಡು ಟವೆಲು, ಹೆಗಲಿನ ಬಗಲು ಚೀಲ, ಒಂದು ಪುಟ್ಟ ಕವಳದ ಸಂಚಿ, ಒಂದು ನೋಟ್ ಪುಸ್ತಕ, ಒಂದೆರಡು ಪೆನ್ನು ಅವರ ಆಸ್ತಿ. ಕಿಸೆಯಲ್ಲಿ ದುಡ್ಡು ಇಲ್ಲ. ಏಕೆಂದರೆ ಅಂತಹ ದೊಡ್ಡ ವಿದ್ವಾಂಸ ರಾಗಿದ್ದರೂ, ಕಲಾವಿದ ರಾಗಿದ್ದರೂ ಬಸ್ ಖರ್ಚು ಬಿಟ್ಟು ಅವರು ಹಣ ತೆಗೆದುಕೊಳ್ಳುತ್ತಿರಲಿಲ್ಲ. ಸಾಯಂಕಾಲ ಉಪವಾಸ ವಿರುತ್ತಿದ್ದರು. ಹಗಲಿನ ಊಟ ತಿಂಡಿ ಕೂಡ ಅಷ್ಟಕಷ್ಟೆ. ಮುಂಜಿ, ಮದುವೆ ಸಮಾ ರಂಭಗಳಿಗೆ ಹೋಗುತ್ತಿರಲಿಲ್ಲ. ಶ್ರಾವಣದಲ್ಲಿ ಮೌನ. ಉಳಿದ ದಿನಗಳ ಲ್ಲಿಯೂ ಕೂಡ ಹೆಚ್ಚು ಮಾತನಾಡುತ್ತಿರಲಿಲ್ಲ. ಲೋಭ, ಮೋಹ, ಮದ, ಮತ್ಸರ ಇತ್ಯಾದಿ ಎಲ್ಲವನ್ನು ಮೀರಿ ಬದುಕಿದವರು ಅವರು. ಮತ್ತು ಹಾಗೆ ಬದುಕುತ್ತಿದ್ದೇನೆ ಎನ್ನುವ ಅಹಂ ಕೂಡ ಇಲ್ಲದವರು.
ಹಣ್ಣು ಬಿಡುವ ಮಾವಿನ ಮರದಂತೆ, ಪಾರಿಜಾತ ವೃಕ್ಷದಂತೆ ಕಲ್ಪವೃಕ್ಷದಂತೆ ಬದುಕಿ ಹಾಗೆಯೇ ತಿರುಗಿ ಹೋದವರು ಅವರು. ಹಗುರವಾಗಿ ಬದುಕಿದವರು. ಜಗತ್ತಿನ ವ್ಯಾಪಾರಗಳಲ್ಲಿ ಸಿಲುಕಿಕೊಳ್ಳದೆ ಸುಧನ್ವಾರ್ಜುನ ಯಕ್ಷಗಾನ ಪ್ರಸಂಗದಲ್ಲಿ ಬರುವ ಹಂಸಧ್ವಜನ ಪಾತ್ರ ದಂತೆ ಬಹುಶಃ ಕೇವಲ ಮೋಕ್ಷಾಕಾಂಕ್ಷಿಯಾಗಿ, ಕೈವಲ್ಯಕ್ಕಾಗಿ ಕಾದು ಇಲ್ಲಿ ಉಳಿದವರು ಅವರು. ಇಲ್ಲಿ ಇದ್ದೇ ಅಲ್ಲಿ ಮನೆ ಕಟ್ಟಿದವರು.
ಹೀಗೆ ಎಲ್ಲವನ್ನೂ ತ್ಯಜಿಸಿದವರು. ಯಕ್ಷಗಾನ ಕಲೆಯನ್ನು ಏಕೆ ಅಷ್ಟೊಂದು ಪ್ರೀತಿಸಿದರು, ಹಚ್ಚಿಕೊಂಡರು, ಅದಕ್ಕಾಗಿ ಜೀವನ ಮುಡಿಪಾಗಿಟ್ಟರು? ಎನ್ನುವುದೇ ಇಲ್ಲಿಯ ಮುಖ್ಯ ಪ್ರಶ್ನೆ. ಬಹುಶಃ ಈ ಪ್ರಶ್ನೆಗೆ ಉತ್ತರ ಇರುವುದು ತುಂಬ ಆಳದಲ್ಲಿ. ಹೊಸ್ತೋಟರಿಗೆ ತಿಳಿದಿತ್ತು. ಏನೆಂದರೆ ವಿರಕ್ತತತೆ ನಿಷ್ಕ್ರಿಯತೆಯಲ್ಲ. ಕ್ರಿಯಾಹೀನತೆ ಜೀವನವನ್ನು ಅಸಂಗತಗೊಳಿಸುತ್ತದೆ. ಭಗವದ್ಗೀತೆ ಹೇಳುವಂತೆ ಕ್ರಿಯಾಶೀಲತೆ ಮನುಷ್ಯನ ಧರ್ಮ. ಹಾಗೆ ಕ್ರಿಯಾಶೀಲವಾಗಿರಲು ಸ್ವರ್ಗಕ್ಕೆ ಸೋಪಾನ ವಾಗಿರುವ ದಾರಿಯೊಂದು ಬೇಕೇ ಬೇಕು ಎನ್ನುವುದರ ಅರಿವು ಅವರಿಗಿತ್ತು. ಬಹುಶಃ ಹೊಸ್ತೋಟ ಅವರು ಅನುರಕ್ತತೆಯ ಹೊರಗು ಳಿದೂ ಕ್ರಿಯಾಶೀಲತೆಯನ್ನು ಆಯ್ದುಕೊಂಡ ಕಾರಣ ಇದು. ಎರಡನೆಯ ವಿಷಯ ಅವರು ಯಕ್ಷಗಾನವನ್ನು ಆಯ್ದುಕೊಂಡಿದ್ದು. ಬಹುಶಃ ಇನ್ನೂ ಅವರಿಗೆ ತಿಳಿದಿತ್ತು. ಏನೆಂದರೆ ಎಲ್ಲ ದಿವ್ಯ ಕಲೆಗಳಿಗೆ ಕೈವಲ್ಯದ ಮಾರ್ಗತೋರುವ ಸಾಧ್ಯತೆ ಇದೆ. ಇರುತ್ತದೆ. ಅಲ್ಲಿ ಧಾರ್ಮಿಕತೆ ಇರುತ್ತದೆ. ಆತೊ¾àನ್ನತಿಯ ದಾರಿ ತೆರೆದಿರುತ್ತದೆ. ಬಹುಶಃ ಅವರಿಗೆ ಆಂತರಂಗಿಕವಾಗಿ (ಗ್ರೀಕ್ ವಿಮರ್ಶಕ ಅರಿಸ್ಟಾಟಲ್ ಹೇಳುವ ರೀತಿಯ) ಮನುಷ್ಯನ ಮನಸ್ಸನ್ನು ಪ್ರಭಾವಿಸಿ ಅದನ್ನು ಮಹೋನ್ನತಿ ಯತ್ತ ಕೊಂಡೊಯ್ಯಬಲ್ಲ ಕಲೆಯ ಸಾಮರ್ಥ್ಯದ ಅರಿವಿತ್ತು. (ಅರಿ ಸ್ಟಾಟಲ್ ಹೇಳುವಂತೆ) ಕಲೆ, ಶ್ರೇಷ್ಟ ಕಲೆ ಮನಸ್ಸಿ ನೊಳಗಿನ ಕಲ್ಮಶಗಳನ್ನು ತೊಳೆದು ದೂರಮಾಡಿ ಆತನನ್ನು ನಿರಂತರ ಪರಿಶುದ್ಧನನ್ನಾಗಿಸುತ್ತ ಹೋಗುತ್ತದೆ. ಮಹೋನ್ನತಿಯ ದಾರಿಯಲ್ಲಿ ಕರೆದುಕೊಂಡು ಹೋಗು ತ್ತದೆ. ಮೋಕ್ಷದತ್ತ ಮುಖ ಮಾಡಿಸುತ್ತದೆ. ಇದು ಬಹುಶಃ ಮಂಜುನಾಥ ಭಾಗವತರಿಗೆ ತಿಳಿದಿತ್ತು.
ಬಹುಶಃ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನವನ್ನು ಆಯ್ದುಕೊಂಡ ಕಾರಣ ಇದು. ಕೈವಲ್ಯಾಕಾಂಕ್ಷಿಯಾಗಿ. ಬಹುಶಃ ತನ್ಮೂಲಕ ಯಕ್ಷಗಾನ ಕಲೆಯ ಶ್ರೇಷ್ಟತೆಯನ್ನೂ ಹೇಳಿ ಹೋದವರು ಅವರು. ನೋಡಿಕೊಳ್ಳಬೇಕು. ಏನೆಂದರೆ. ಸ್ಥೂಲವಾಗಿ, ರಂಜನೆ ನೀಡಿದರೂ ಕೂಡ ಯಕ್ಷಗಾನದ ಲೀಟ್ ಮೋಟಿಫ್ ಅಂದರೆ ಪ್ರಧಾನಾಕಾಂಕ್ಷೆ ನೋಡುಗನಿಗೆ ವಿರಕ್ತಿಯ ಮಾರ್ಗವನ್ನು ತೋರುವುದೇ ಆಗಿ ದೆ. ಹೊಸ ಪ್ರಸಂಗಗಳನ್ನು ಬಿಡಿ! ಪರಂಪರಾಗ ತವಾಗಿ ಯಕ್ಷಗಾನ ಪ್ರಸಂಗಗಳ ಮೂಲವಸ್ತು ವಿರಕ್ತಿ ಹಾಗೂ ಮೋûಾಕಾಂಕ್ಷೆಯೇ! ಕೃಷ್ಣ ಸಂಧಾನ, ವಾಲಿ ಮೋಕ್ಷ, ಸುಧನ್ವಾರ್ಜುನ, ಗದಾಯುದ್ಧ, ಭೀಷ್ಮಪರ್ವ, ಕರ್ಣಾವಸಾನ, ರಾಮನಿರ್ಯಾಣ ಇತ್ಯಾದಿ ಪ್ರಸಂಗಗಳ ದಾರಿ ನಡೆಯುವುದು ಪರಲೋಕದತ್ತಲೇ. ಇಲ್ಲಿ ಬರುವ ಎಲ್ಲ ಪ್ರಮುಖ ಪಾತ್ರಗಳ ಉದಾಹರಣೆಗೆ ಪರ್ವದ ಭೀಷ್ಮ, ನಿರ್ಯಾಣದ ರಾಮ, ಸುಧನ್ವ ಇಂತಹ ಪಾತ್ರಗಳು ಎಲ್ಲವೂ ಪರಂಧಾಮವನ್ನು ಹುಡುಕುವ ಬಯಕೆಯಲ್ಲಿರುವವುಗಳು. ಜೀವನದ ಅಸ್ಥಿರತೆಯನ್ನು, ಕ್ಷಣಿಕತೆಯನ್ನು, ಸುಖಭೋಗಗಳ ಅರ್ಥ ಹೀನತೆಯನ್ನು ತಿಳಿದುಕೊಂಡವುಗಳು. ಜೀವನದ ನಶ್ವರತೆಯನ್ನು ತಿಳಿದು, ಆದರೆ ಕ್ರಿಯಾಶೀಲವಾಗಿ ಲವಲವಿಕೆಯಿಂದ ಅಷ್ಟಾಂಗ ಮಾರ್ಗದ ದಾರಿ ಹುಡುಕಿ ಶಾಶ್ವತನಾದ ಈಶ್ವರನನ್ನು ಸೇರಿ ಅನಂತವಾಗುವ ಆಸೆಯನ್ನು ನಿರ್ಮಮತೆಯಿಂದ ಹೊಂದಿದವುಗಳು. ಇಂತಹ ಇಹವನ್ನು ತ್ಯಜಿಸಿ ಪರವನ್ನು ಸೇರುವ ಕಥೆಗಳನ್ನು ಹೇಳುವುದೇ ಬಹುಶಃ ಯಕ್ಷಗಾನದ ಗರಿಮೆ.
ಹಾಗಾಗಿಯೇ ಬಹುಶಃ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನವನ್ನುಅ ತಮ್ಮ ವಿರಕ್ತಿಯ ಕೇಂದ್ರ ಬಿಂದುವನ್ನಾಗಿ ಆಯ್ದುಕೊಂಡಿದ್ದು. ಇಂತಹ ಯಕ್ಷಗಾನದ ವಿವಿಧ ಆಯಾಮಗಳನ್ನು ಹೆಚ್ಚು ಸ್ಥಿರವಾಗಿಸಲು, ಸುಂದರವಾಗಿಸಲು ಅವರು ಜೀವನದುದ್ದಕ್ಕೂ ಪ್ರಯತ್ನಿಸಿದ ಕಾರಣವೂ ಇದೇ. ಏನೆಂದರೆ ಕಲೆಯೊಂದು ಸುಂದರವಾಗಿರಬೇಕು ಕೂಡ. ಏಕೆಂದರೆ ಕಲೆ ಸೌಂದರ್ಯದ ಮೂಲಕ ಸತ್ಯ ಹೇಳುತ್ತದೆ. ಸೌಂದರ್ಯವೂ ಪ್ರಧಾನವೇ. ಸೌಂದರ್ಯವೇ ಸತ್ಯವಾಗಿ ಶಿವನಾಗುತ್ತದೆ.
ಹೊಸ್ತೋಟ ಮಂಜುನಾಥ ಭಾಗವತರು ಬಹುಶಃ ಯಕ್ಷಗಾನವನ್ನು ಆಯ್ದುಕೊಂಡ ಕಾರಣ ಇದು. ಒಂದು ಅರ್ಥದಲ್ಲಿ ಯಕ್ಷಗಾನದ ಶ್ರೇಷ್ಟ ಪಾತ್ರಗಳ ಹಾಗೆಯೇ ಆಗಿ ಹೋದವರು ಅವರು.
ಡಾ. ಆರ್.ಜಿ. ಹೆಗಡೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.