ಯಕ್ಷ ಕ್ಷೇತ್ರ ಕಳಕೊಂಡಿತು “ಚಿಟ್ಟಾಣಿ’
Team Udayavani, Oct 5, 2017, 4:57 AM IST
ಅತೀ ಸರಳತನ, ಮುಗ್ಧತೆ ಅಳವಡಿಸಿಕೊಂಡ ಚಿಟ್ಟಾಣಿಯವರಿಗೆ ನಟನೆಂಬ ಅಹಂಕಾರ, ಸೊಕ್ಕುಗಳಿರಲಿಲ್ಲ. ಎಲ್ಲರೊಂದಿಗೂ ಬೆರೆಯುವ, ಲಭ್ಯವಿರುವ ಮೇರು ಕಲಾವಿದರಾಗಿ ಯಕ್ಷಗಾನವನ್ನು ಶ್ರೀಮಂತಗೊಳಿಸಿದ ಅವರು ಈ ಕ್ಷೇತ್ರದ ನಂದಾದೀಪ. ರಂಗತಂತ್ರಗಳಲ್ಲ ಬದಲು ಮಾಡಿ, ಅವಕ್ಕೆ ಹೊಸ ಛಾಪು ಮೆರುಗು ನೀಡಿ ತನಗೇ ಒಗ್ಗುವಂತೆ ಮಾಡಿ ಹೊಸ ದಾರಿಯನ್ನು ಅನ್ವೇಷಿಸಲು ಪ್ರಯತ್ನಿಸಿದರು. ಖಳ ಪಾತ್ರಗಳಲ್ಲಿ ಮಿಂಚಿದರೂ, ಉಳಿದ ರಸಗಳನ್ನು ಹೊಂದಿದ ಪಾತ್ರಗಳಲ್ಲಿಯೂ ಮಿಂಚಿದ್ದಾರೆ.
ಚಿಟ್ಟಾಣಿ ರಾಮಚಂದ್ರ ಹೆಗಡೆ ಯಕ್ಷಗಾನದ ಮಹಾನಟನಾಗಿ ಆರೇಳು ದಶಕಗಳ ಕಾಲ ಮೆರೆದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಸರಿಯಾಗಿ ಶಿಕ್ಷಣ ಪಡೆಯದೆ, ಸೆಳೆದ ಯಕ್ಷಗಾನ ಎಂಬ ಮಹಾ ರಂಗಸಂಪ್ರದಾಯದಲ್ಲಿ ದುಡಿಸಿಕೊಳ್ಳಲು ಅರ್ಪಿಸಿ ಕೊಂಡರು. ಬಾಲ್ಯದಲ್ಲೇ ಅದರತ್ತ ಆಸಕ್ತಿ ಹೊಂದಿದ ಅವರಿಗೆ ಯಕ್ಷದೇವತೆಯ ಮಡಿಲು ಶಾಶ್ವತ ಕೀರ್ತಿ, ಮಾನ ಮರ್ಯಾದೆ ಕೊಟ್ಟು ಕೊಟ್ಟು ಕೈ ಸೋತಿತು. ಚಿಕ್ಕ ಪ್ರಾಯದ ಚಿಟ್ಟಾಣಿ ಪಕ್ಕಾ ಹಳ್ಳಿಯ ಹುಡುಗ. ಯಕ್ಷಗಾನದ ಕುರಿತು ಅಧ್ಯಯನ, ತಿಳಿವಳಿಕೆಯನ್ನು ಆ ರಂಗಭೂಮಿಯ ಪಾಠಶಾಲೆಯಲ್ಲಿ ಕಲಿತುಬಿಟ್ಟರು ಅಥವಾ ಆ ರಂಗಪಾಠಶಾಲೆಯಲ್ಲಿ ಅತ್ಯುತ್ತಮ ವೇಷಧಾರಿಯಾಗಿ ರೂಪಗೊಂಡಿದ್ದು ಈಗ ಇತಿಹಾಸ.
ಚಿಟ್ಟಾಣಿಯವರ ಬಾಲ್ಯದ ದಿನಗಳಲ್ಲಿ ಯಕ್ಷಗಾನದ ಬಯ ಲಾಟದ ನಡುಹಗಲ ಮಾರ್ತಾಂಡನಂತೆ ಮೆರೆಯುತ್ತಿದ್ದ,
ಕೆರೆಮನೆ ಶಿವರಾಮ ಹೆಗಡೆಯವರ ಮೆಚ್ಚಿನ ನಿರೀಕ್ಷೆಯ ಕಲಾವಿದರಾಗಿ ವಿಜೃಂಭಿಸಲು ಆರಂಭಿಸಿದರು. ಅಂದಿನ ದಿನ ಗಳಲ್ಲಿ ಬೆಳೆಯುತ್ತಿದ್ದ ಯಕ್ಷಗಾನದ ಬಾನಂಗಳದ ಬೆಳಕಾದ ಮೂಡ್ಕಣಿ ನಾರಾಯಣ ಹೆಗಡೆ, ಕರ್ಕಿ ಪರಮಯ್ಯ ಹಾಸ್ಯಗಾರ ಮುಂತಾದ ದಿಗ್ಗಜರನ್ನು ಕಾಣುವ ಮಹದವಕಾಶವನ್ನು ಚಿಟ್ಟಾಣಿ ಯವರು ಸದುಪಯೋಗ ಮಾಡಿಕೊಂಡರು. ಶಿವರಾಮ ಹೆಗಡೆ ಯವರೇ ನನ್ನ ಗುರು ಎಂದು ಘಂಟಾಘೋಷವಾಗಿ ಸಾರಿದ ಚಿಟ್ಟಾಣಿಯವರು ಏಕಲವ್ಯನಂತೆ ಛಲದಿಂದ ಒಂದೊಂದೇ ಮೆಟ್ಟಿಲನ್ನು ಏರಿ ಸವ್ಯಸಾಚಿಯಾಗಿ ಬೆಳೆದದ್ದು ಒಂದು ರೋಮಾಂಚನಕಾರಿ ಮಜಲು. ತನ್ನ ಅಂತಃಶಕ್ತಿಯ ಸಾರವನ್ನು ಬತ್ತಗೊಡದೆ, ಎತ್ತರದ ಕಲಾವಿದರ ನೆರಳಲ್ಲಿ ಬೆಳೆದು, ಅದನ್ನು ಗೌರವಿಸಿ, ಮನ್ನಿಸಿ ನಮಿಸುವ ಉನ್ನತಗುಣವನ್ನು ತನ್ನೊಂದಿಗೆ ಬೆಳೆಸಿಕೊಂಡು ಹೆಮ್ಮರವಾಯಿತು.
“ಚಿಟ್ಟಾಣಿ’ ಮೂರಕ್ಷರದ ಈ ಶಬ್ದ ಯಕ್ಷಲೋಕದ ನಿಘಂಟಿ
ನಲ್ಲಿ ನಾನಾ ಅರ್ಥ ಹುಟ್ಟಿಸುವ ರಸಿಕರಿಗೆ ಕಚಕುಳಿ ಇಡುವ ವ್ಯಕ್ತಿತ್ವವಾಗಿ ಅಚ್ಚಾಯಿತು. ಅಭಿನಯ ಸಾಮರ್ಥಯದಲ್ಲಿ ಉತ್ತುಂಗ ಏರಿ ರಸರಾಜ ಎಂಬ ಪಟ್ಟವನ್ನೇರಿ ಕುಳಿತರು. ಜೀವದಲ್ಲೂ ಗಟ್ಟಿ ಯಾದ ಚಿಟ್ಟಾಣಿ ಯಕ್ಷಗಾನದಂಥ ಬಹು ಪರಿಶ್ರಮದ ಬೇಡುವ ಕಲೆಯಲ್ಲಿ ಲೀಲಾಜಾಲವಾಗಿ ವಿಹರಿಸಿದರು. ತನ್ನದೇ ಪ್ರತ್ಯೇಕ ಅಭಿಮಾನಿಗಳನ್ನು ಸೃಷ್ಟಿಸಿಕೊಂಡರು. ತನ್ನದು ಮಾತ್ರ ಆಗಬಲ್ಲ ಪಾತ್ರ, ಶೈಲಿ ಬೆಳೆಸಿ, ರೂಪಿಸಿದರು. ಚಿಟ್ಟಾಣಿತನ ಯಕ್ಷಗಾನದ ಮುಖ್ಯ ವಾಹಿನಿಯ ಪ್ರವಾಹವಾಗಿ ಕಾಣಿಸಿ ಯಕ್ಷ ಸಮುದ್ರದ ಘನತೆಯನ್ನು ತುಂಬಿತು. ತಾನು ಮಾಡಿದ ಪಾತ್ರಕ್ಕೆ ತನ್ನದೇ ಛಾಪು, ಝಾಪು ಸೃಷ್ಟಿಸಿಕೊಂಡರು. ಅವರೇ ಒಂದು ಪ್ರತ್ಯೇಕ ತಿಟ್ಟಿನಂತೆ ಗೋಚರವಾಗತೊಡಗಿದರು. ಅವರು ರಂಗಕ್ಕೆ ಬಂದರೆ ಸಾಕು ಎಂಬಲ್ಲಿಗೆ ಅಭಿಮಾನ ಬೆಳೆದುನಿಂತಿತು! ತನ್ನದೇ ಪಂಥದಲ್ಲಿ ಹಲವರನ್ನು ನಡೆಯುವಂತೆ ಮಾಡುತ್ತಾ, ಯಕ್ಷಪಯಣದ ಕಡಿದಾದ ಕಠಿಣ ಪರಿಶ್ರಮದ ಸಾಧನೆಯ ಹಾದಿಯಲ್ಲಿ ಹೊಸ ಭಾಷ್ಯವನ್ನೇ ಬರೆದರು. ನೀರವತೆ ತುಂಬಿದ್ದ ಆ ರಾತ್ರಿಗಳಿಗೆ ಭರವಸೆ, ರಂಗುರಂಗಿನ ಬೆಳಕನ್ನು ಮೊಗೆದು ಪ್ರೇಕ್ಷರತ್ತ ಚೆಲ್ಲಿ ಅವರ ಮನದಲ್ಲಿ ಭಾವ ತುಂಬಿದ ಯಕ್ಷರಂಗೋಲಿ ಬಿಡಿಸಿದರು.
ಚಿಟ್ಟಾಣಿಯವರು ನಿರ್ವಹಿಸಿದ ಕೀಚಕ, ಭಸ್ಮಾಸುರ, ಕಲಾಧರ, ಮಾಗಧ, ಪರಶುರಾಮ, ದುಷ್ಟಬುದ್ಧಿ ಹೀಗೆ ಅನೇಕ ಪಾತ್ರಗಳಿಗೆ ತನ್ನ ಪ್ರತ್ಯುತ್ಪನ್ನ ಮತಿತ್ವದ ಲೇಪದಿಂದ ವಿಶಿಷ್ಟ ಆಕಾರವನ್ನೇ ಕೊಟ್ಟರು. ಅವರ ನೃತ್ಯ, ನಡೆ, ಯಕ್ಷಗಾನದ ಅಪ್ಪಟ ಸಂಪ್ರದಾಯದ್ದು ಎನ್ನುವುದಕ್ಕಿಂತ ಸಂಪ್ರದಾಯದಿಂದ ಸ್ವಲ್ಪ ಹೊರಗೆ ನಿಂತ ಪ್ರಯೋಗ ಎನ್ನಬಹುದಾಗಿದೆ. ಈ ರಂಗ ಸಂಪ್ರದಾಯದ ಚೌಕಟ್ಟಿನಲ್ಲಿ ತನ್ನ ಪ್ರತಿಭೆಯ ಮುಖಾಂತರ ಒಂಚೂರು ಹೊರಗೆ ಕಾಲಿಟ್ಟವರು. ಅಂದಿನ ಕಾಲದಲ್ಲಿದ್ದ ರಂಗಾಭಿನಯ ನೃತ್ಯಗಳಲ್ಲಿ ತಾನು ಪ್ರವೇಶಿಸುವುದರ ಬದಲು, ಅವುಗಳನ್ನು ತನ್ನಲ್ಲೇ ಲೀನಗೊಳಿಸುತ್ತ, ನೃತ್ಯ ರಂಗತಂತ್ರಗಳನ್ನು ತನಗೇ ಒಗ್ಗುವಂತೆ ಬಗ್ಗಿಸಿ ತನ್ಮೂಲಕ ಹೊಸ ದಾರಿಯನ್ನು ಅನ್ವೇಷಿಸಲು ಪ್ರಯತ್ನಿಸಿದರು. ಅವರ ಪಾತ್ರಗಳು ಭಿನ್ನವಾಗಿ, ಆಳವಾಗಿ ಪರಿಣಾಮ ಬೀರಲು ಅವರ ಈ ಮುರಿದು ಕಟ್ಟುವ ಬಂಡಾಯವೂ ಕಾರಣವಾಗಿರಬಹುದು!
ರಂಗಕ್ಕೆ ಬಂದಾಗ ಒಂದು ಸೆಳೆಮಿಂಚಿನ ಸಂಚಲನ ಸೃಷ್ಟಿಸಲು ಸಾಧ್ಯವಾಗಬಲ್ಲ ಕೆಲವೇ ಕೆಲವು ಕಲಾವಿದರಲ್ಲಿ ಚಿಟ್ಟಾಣಿಯವರೂ ಒಬ್ಬರು. ಅವರ ಪ್ರವೇಶದ ಕ್ರಮದಲ್ಲಿಯೇ ಅವರಿಗಿರುವ ರಂಗಾನುಭವ, ರಂಗಶಕ್ತಿಯ ಉಜ್ವಲತೆಯ ದರ್ಶನವಾಗುತ್ತಿತ್ತು. ಮುಖ್ಯ ಖಳಪಾತ್ರದಲ್ಲಿ ಹೆಚ್ಚಾಗಿ ವಿಜೃಂಭಿಸುತ್ತಿದ್ದ ಚಿಟ್ಟಾಣಿ ಯವರು ಶೃಂಗಾರ, ರೌದ್ರ, ಬೀಭತ್ಸ, ವೀರ ರಸಗಳ ಅಪಾರ ಹಿಡಿತ ಹೊಂದಿದವರು. ಅವರ ಕೀಚಕ, ಭಸ್ಮಾಸುರಾದಿ ಪಾತ್ರಗಳು ಜನಪ್ರಿಯತೆಯ ಉತ್ತುಂಗ ಕಂಡಿದ್ದು ಅವರ ಈ ವಿಶಿಷ್ಟ ಶಕ್ತಿಯಿಂದಾಗಿಯೇ ಎನ್ನುವುದು ನನ್ನ ಮತ.
ಯಕ್ಷಗಾನ ಚಿಟ್ಟಾಣಿಯವರ ಉಸಿರು, ನರನಾಡಿಗಳಲ್ಲಿ ಹರಿ ಯುವುದೆಲ್ಲ ಯಕ್ಷಗಾನ ಎಂಬುದು ಎಲ್ಲ ಯಕ್ಷಗಾನ ರಸಿಕರಿಗೆ ವೇದ್ಯವಾದ ಸಂಗತಿಯಾಗಿತ್ತು. ಈ ಕಲೆಯನ್ನು ಅತ್ಯಂತ ಉತ್ಕಟ ವಾಗಿ ಪ್ರೀತಿಸಿದ ಅತಿವಿರಳ ಕಲಾವಿದರಲ್ಲಿ ಚಿಟ್ಟಾಣಿ ಅಗ್ರಗಣ್ಯರು. ಬಹುಷ ಕೊನೆಕೊನೆಗೆ ಅವರಿಗೆ ಯಕ್ಷಗಾನ ಇಲ್ಲದೇ ದಿನವೇ ಸಾಗದಂತಾಗಿತ್ತು. ಇದು ಕಲಾವಿದನೊಬ್ಬನ ಶ್ರೇಷ್ಠತೆಯ ದ್ಯೋತ ಕವೂ ಹೌದು. ಚಿಟ್ಟಾಣಿಯವರ ದಣಿವರಿಯದ ರಂಗಕ್ರಿಯೆ
ಗಳು ಒಂದು ವಿಸ್ಮಯವೇ ಆಗಿತ್ತು. ಒಂದೇ ರಾತ್ರಿ ಎರಡೆರಡು ಪಾತ್ರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದುದ್ದು ಅಪಾರ ದೈಹಿಕ ಸಾಮರ್ಥಯದ ಕುರುಹೇ ಆಗಿದೆ.
ಒಂದು ಹಂತದಲ್ಲಿ ಅತೀ ಸರಳತನ, ಮುಗ್ಧತೆಯನ್ನು ಅಳವಡಿಸಿ ಕೊಂಡ ಚಿಟ್ಟಾಣಿಯವರಿಗೆ ಬಹುದೊಡ್ಡ ನಟನೆಂಬ ಅಹಂಕಾರ, ಸೊಕ್ಕುಗಳು ಇರಲಿಲ್ಲ. ಎಲ್ಲರೊಂದಿಗೆ ಬೆರೆಯುವ, ಎಲ್ಲರಿಗೂ ಲಭ್ಯವಿರುವ ಒಬ್ಬ ಮೇರು ಕಲಾವಿದರಾಗಿ ನಮ್ಮ ಕಲೆಯನ್ನು ಶ್ರೀಮಂತಗೊಳಿಸಿದ ಚಿಟ್ಟಾಣಿ ಯಕ್ಷಗಾನದ ನಂದಾದೀಪ. ಅಭಿಮಾನಿಗಳ ಪಾಲಿಗೆ ಚಿರನಕ್ಷತ್ರ, ಹುಣ್ಣಿಮೆಯ ಚಂದ್ರ. ಅವರ ಕಾಲಾವಧಿ ಯಕ್ಷಗಾನ ರಂಗಭೂಮಿಯ ಮಹತ್ವದ ಘಟ್ಟ. ಐತಿಹಾಸಿಕ ಕಾಲಖಂಡ. ಮರೆಯದ, ಮರೆಯಬಾರದ ರಸದಿನಗಳು. ಚಿಟ್ಟಾಣಿ ಸೃಷ್ಟಿಸಿದ ಚಿರಯೌವನದ ದಿನಗಳು.
ಅವರ ಅತೀ ಪ್ರಸಿದ್ಧ ಪಾತ್ರವಾದ ಕೀಚಕ, ಕಾರ್ತವೀರ್ಯ, ಭಸ್ಮಾಸುರ ಮುಂತಾದ ಪಾತ್ರಗಳನ್ನು ನೊಡುವ ಭಾಗ್ಯ ನನಗೆ ಸಿಕ್ಕಿದೆ.ಅವರ ಅಭಿನಯ ಪ್ರಾತ್ಯಕ್ಷಿಕೆ ಕಾಣುವ ಅವಕಾಶ ದೊರಕಿದೆ. ಈಗ ಸುಮಾರು 10-12 ವರ್ಷಗಳ ಹಿಂದೆ ಕಾರವಾರದಲ್ಲಿ “ಸುಭದ್ರಾ ಕಲ್ಯಾಣ’ದ ಕೃಷ್ಣನನ್ನು ನೋಡಿ ಮರುದಿನ ನನಗೆ ಫೋನ್ ಮಾಡಿ “ಶಿವಾನಂದ, ಕೃಷ್ಣ ಚಲೋ ಮಾಡಿದ್ದೆ’ ಎಂದು ಬೆನ್ನು ತಟ್ಟಿ ನುಡಿದ ಕೆಲ ಮಾತುಗಳು ಸಾದಾ ಮಾತಾಗದೇ, ಸದಾ ಪ್ರೇರೇಪಿಸುವ ಮಾತಾಗಿದೆ. ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ ನನಗೆ ಇದುವರೆಗೆ ದೊರಕಿದ ಎಲ್ಲ ಪ್ರಶಸ್ತಿಗಿಂತ ದೊಡ್ಡದು ಎಂಬ ಮಾತಾಗಲೀ, ಕೆರೆಮನೆಯ ಎಲ್ಲಾ ಕಲಾವಿದರ ಕುರಿತು ಹೇಳಿದ ಪ್ರಶಂಸೆಯ ಮಾತಾಗಲಿ ಅವರ ಅಂತರಾಳದ ಮಾತುಗಳು ಅವರ ಸೌಜನ್ಯದ ಉನ್ನತ ಕುರುಹು ಎಂದು ಭಾವಿಸಿದ್ದೇನೆ.
ಚಿಟ್ಟಾಣಿಯಂತಹ ಮೇರು ನಟರೊಬ್ಬರ ಬಗ್ಗೆ ಬರೆಯುವ ಅರ್ಹತೆ ಖಂಡಿತ ನನಗಿಲ್ಲ. ಆದರೂ ವೃತ್ತಿ ಬಾಂಧವ್ಯದ ನೆಲೆ
ಯಲ್ಲಿ, ಕೆರೆಮನೆ ಹಾಗೂ ಅವರ ಮಧ್ಯೆ ಇರುವ ನಂಟಿನಿಂದಾಗಿ ನನಗೆ ಬರೆಯುವ ಚಿಕ್ಕ ಅವಕಾಶ ದೊರೆಯಿತು ಎಂದು ಭಾವಿಸುವೆ. ಅವರು ನನ್ನ ಅಜ್ಜ ಕೆರೆಮನೆ ಶಿವರಾಮ ಹೆಗಡೆಯವರ ಪ್ರಭಾವಕ್ಕೆ ಒಳಗಾಗಿ ತನ್ನದೇ ಹೊಸ ಅಭಿವ್ಯಕ್ತಿಯನ್ನು ತನ್ನ ಸ್ವತಂತ್ರ ಶೈಲಿಯಾಗಿ ಉಜ್ವಲಗೊಳಿಸಿದ್ದು ಯಕ್ಷಗಾನ ಚರಿತ್ರೆಯ ರೋಮಾಂಚಕಾರಿ ಸ್ವರ್ಣಪುಟ ಎಂಬುದು ಎಂಬುದು ನಿರ್ವಿ ವಾದ. ಅವರಿಗೆ ನನ್ನ ಭಾಷ್ಪಾಂಜಲಿ. ಶ್ರದ್ಧೆಯ ನಮಸ್ಕಾರಗಳು
ಕೆರೆಮನೆ ಶಿವಾನಂದ ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
MUST WATCH
ಹೊಸ ಸೇರ್ಪಡೆ
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.