ಶೂನ್ಯ ಇಂಗಾಲದ ಗುರಿ: ಜಾಗತಿಕ ಸಹಭಾಗಿತ್ವ ಅಗತ್ಯ
2070ರ ವೇಳೆಗೆ ಭಾರತವು ಶೂನ್ಯ ಇಂಗಾಲ ಗುರಿ ತಲುಪುವ ಆಶಯ ಹೊಂದಿದೆ
Team Udayavani, Jan 16, 2025, 5:40 PM IST
ಹದಿನೆಂಟನೇ ಶತಮಾನದಲ್ಲಿ ಬ್ರಿಟನ್‌ನಲ್ಲಿ ಕೈಗಾರಿಕ ಕ್ರಾಂತಿ ಪ್ರಾರಂಭವಾಗಿ ಅದು ಪ್ರಪಂಚದಾದ್ಯಂತ ಹರಡಿದ ಬಳಿಕ ಜಗತ್ತು ಸಾಕಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ. ಅದರಲ್ಲೂ ಕಳೆದ ಕೆಲವು ದಶಕಗಳಲ್ಲಿ ದೇಶಗಳು ಅತೀ ವೇಗದ ಅಭಿವೃದ್ದಿ ಸಾಧಿಸಿವೆ. ಈ ಎಲ್ಲ ಕೈಗಾರಿಕೆಗಳು ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಅತಿಯಾಗಿ ಅವಲಂಬಿಸಿವೆ.
ಈ ಪಳೆಯುಳಿಕೆ ಇಂಧನವನ್ನು ಬಳಸಿದಾಗ ಕಾರ್ಬನ್ ಡೈ ಆಕ್ಸೈಡ್ (ಇಂಗಾಲ) ಹಾಗೂ ಇತರ ಹಸುರು ಮನೆ ಅನಿಲಗಳು (Green House Gases) ಉತ್ಪಾದನೆಗೊಳ್ಳುತ್ತದೆ. ವಾತಾವರಣದಲ್ಲಿ ಇವುಗಳ ಸಾಂದ್ರತೆ ಹೆಚ್ಚಾದಾಗ ಸೂರ್ಯನ ಕಿರಣದ ತಾಪವನ್ನು ಅಧಿಕವಾಗಿ ಹೀರಿಕೊಂಡು ಭೂಮಿಯ ಸರಾಸರಿ ತಾಪ ವನ್ನು ಹೆಚ್ಚಿಸುತ್ತದೆ. ಹೀಗಾಗಿ ವರ್ಷಗಳುರುಳಿದಂತೆಯೇ ತಾಪಮಾನ ಹೆಚ್ಚುತ್ತಲೇ ಸಾಗಿದ್ದು ಹವಾಮಾನ ಬದ ಲಾವಣೆ ಜಾಗತಿಕ ಸಮುದಾಯದ ಪಾಲಿಗೆ ಅತೀ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೈಗಾರಿಕ ಕ್ರಾಂತಿಯ ಮೊದಲು ವಾತಾವರಣದಲ್ಲಿದ್ದ ಇಂಗಾಲಾಮ್ಲ ಪ್ರಮಾಣ 280 ಪಿಪಿಎಂ ಆಗಿದ್ದರೆ ಪ್ರಸ್ತುತ ಇಂಗಾಲಾಮ್ಲದ ಪ್ರಮಾಣ 422 ಪಿಪಿಎಂನಲ್ಲಿದೆ. ತಜ್ಞರ ಪ್ರಕಾರ 350 ಪಿಪಿಎಂ ಸುರಕ್ಷಿತ ಮಟ್ಟವಾಗಿರುತ್ತದೆ. ಪ್ರಪಂಚದಾದ್ಯಂತ 1940 ರಲ್ಲಿ ಕಾರ್ಬನ್ ಡೈ ಆಕ್ಸೆ„ಡ್ ಹೊರಸೂಸುವಿಕೆಯು ಸುಮಾರು ಐದು ಬಿಲಿಯನ್ ಮೆಟ್ರಿಕ್ ಟನ್‌ಗಳಾಗಿದ್ದರೆ 2022ರಲ್ಲಿ 37 ಬಿಲಿಯನ್ ಮೆಟ್ರಿಕ್ ಟನ್‌ಗಳಾಗಿದೆ. ಕೈಗಾರಿಕ ಕ್ರಾಂತಿಯ ಮೊದಲು ಭೂಮಿಯ ಸರಾಸರಿ ತಾಪಮಾನ ಎಷ್ಟಿತ್ತೂ ಅದಕ್ಕಿಂತ 2 ಡಿಗ್ರಿ ಸೆ. ಏರಿದರೆ ಮನುಷ್ಯರ ಸಹಿತ ಬಹುತೇಕ ಜೀವ ಸಂಕುಲಗಳು ಸಂಕಷ್ಟಕ್ಕೀಡಾಗಲಿವೆ, ನಾಶವಾಗಲಿವೆ.
ಭೂಮಿಯ ಸರಾಸರಿ ತಾಪಮಾನ 2030ರ ವೇಳೆಗೆ 1.5 ಡಿ. ಸೆ.ಗಿಂತ ಹೆಚ್ಚಾಗಲಿದೆಯೆಂದು ಅಂದಾಜಿ ಸಲಾ ಗಿದೆ. ಈ ಸಲುವಾಗಿ ಹವಾಮಾನ ವೈಪರಿತ್ಯ ತಡೆಗೆ ಹಾಗೂ ಹಲವಾರು ರಾಷ್ಟ್ರಗಳಲ್ಲಿ ಈಗಾಗಲೇ ಸಂಭವಿಸುತ್ತಿರುವ ನೈಸರ್ಗಿಕ ವಿಕೋಪಗಳನ್ನು ತಡೆಯಲು ದೇಶಗಳು ಕೈಗಾರೀಕರಣಕ್ಕಿಂತ ಮೊದಲು ಯಾವ ಪ್ರಮಾಣದಲ್ಲಿ ವಾತಾವರಣಕ್ಕೆ ಹಸುರು ಮನೆ ಅನಿಲ (ಕಾರ್ಬನ್ ಡೈ ಆಕ್ಸೆ„ಡ್, ಮಿಥೇನ್, ನೈಟ್ರಸ್ ಆಕ್ಸೆ„ಡ್ ಇತ್ಯಾದಿ)ವನ್ನು ಹೊರ ಸೂಸಲಾಗುತ್ತಿತ್ತೋ ಮತ್ತದೇ ಪ್ರಮಾಣಕ್ಕೆ ಆ ಅನಿಲಗಳ ಹೊರಸೂಸುವಿಕೆಯನ್ನು ತರಲು ಶೂನ್ಯ ಇಂಗಾಲ ಗುರಿಯೆಡೆ ಕಾರ್ಯೋನ್ಮುಖವಾಗಿವೆ.
ವಿಶ್ವದ ಶ್ರೀಮಂತ ದೇಶಗಳು 2050 ರೊಳಗೆ ಇಂಗಾಲ ಶೂನ್ಯವೆಂದು ಘೋಷಿಸಿಕೊಳ್ಳಬೇಕಿದೆ. ದೇಶಗಳು ಹೊರ ಸೂಸುತ್ತಿರುವ ಕಾರ್ಬನ್ ಕಣಗಳ ಪ್ರಮಾಣವನ್ನು 2050 ರೊಳಗೆ ಶೂನ್ಯವಾಗಿಸುವ ಮಹತ್ತರ ನಿರ್ಣಯವನ್ನು ಜಿ-20 ಶೃಂಗ ಸಭೆಗಳಲ್ಲಿ ಜಾಗತಿಕ ನಾಯಕರು ತೆಗೆದು ಕೊಂಡಿದ್ದಾರೆ. ಆದರೆ ಪಳೆಯುಳಿಕೆ ಇಂಧನಗಳ ಬಳಕೆಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಇನ್ನಷ್ಟು ಕಾಲಾವಕಾಶ ನೀಡಬೇಕೆಂಬ ಅಭಿಪ್ರಾಯವಿದೆ. ಭಾರತವು 2070ರ ವೇಳೆಗೆ ಶೂನ್ಯ ಇಂಗಾಲ ಗುರಿಯನ್ನು ತಲುಪುವ ಆಶಯವನ್ನು ವ್ಯಕ್ತಪಡಿಸಿದೆ.
2015ರಲ್ಲಿ ಬರಾಕ್ ಒಬಾಮಾ ನೇತೃತ್ವದಲ್ಲಿ ಅಮೆರಿಕ ಸೇರಿದಂತೆ 195 ರಾಷ್ಟ್ರಗಳು ಪ್ಯಾರಿಸ್ ಸಮ್ಮೇಳನದಲ್ಲಿ ಭೂಮಿಯ ಸರಾಸರಿ ತಾಪಮಾನವನ್ನು 1.5 ಡಿಗ್ರಿ ಸೆ. ಗೆ ಮಿತಿಗೊಳಿಸಲು ಒಪ್ಪಂದ ರೂಪಿಸಿದವು. ಪ್ರತೀ ದೇಶಗಳು ತಮ್ಮ ಕಾರ್ಬನ್ ಹೊರಸೂಸುವಿಕೆಯ ಕಡಿತ ಮಾಡಲು ಒಪ್ಪಿವೆ ಹಾಗೂ ಪ್ರತೀ ಐದು ವರ್ಷಗಳಿಗೊಮ್ಮೆ ತನ್ನ ರಾಷ್ಟ್ರೀಯ ನಿರ್ಧಾರಿತ ದೇಣಿಗೆ (ಎನ್.ಡಿ.ಸಿ.)ಯನ್ನು ನೀಡುತ್ತಿದೆ. ಆದರೆ ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆ. ಗೆ ಸೀಮಿತಗೊಳಿಸಬೇಕೆಂಬ ಒಪ್ಪಂದ ಕಾರ್ಯರೂಪಕ್ಕೆ ಬರುವ ಮುನ್ನವೇ ಈಗಾಗಲೇ ತಾಪಮಾನ 1.45 ಡಿ.ಸೆ. ತಲುಪಿರುವುದು ಜಾಗತಿಕ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ.
ಕಳೆದ ವರ್ಷ ದೇಶದಲ್ಲಿ ಬೀಸಿದ ಭಯಂಕರ ಬಿಸಿ ಗಾಳಿ, ಬ್ರೆಜಿಲ್ ಮತ್ತು ಸ್ಪೇನ್ ದೇಶಗಳಲ್ಲಿ ಕಂಡ ಭೀಕರ ನೆರೆಗಳು ಹವಾಮಾನ ವೈಪರೀತ್ಯದ ಬಿಕ್ಕಟ್ಟಿನ ತುರ್ತು ಪರಿಸ್ಥಿತಿಯಂತೆ ಕಾಣಿಸುತ್ತಿದೆ. ಸಮ್ಮೇಳನದಲ್ಲಿ ತಾಪಮಾನ ಮಿತಿಗೊಳಿಸಲು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾ ದನೆಗೆ ಹಣಕಾಸು ನೆರವು ನೀಡುವುದನ್ನು ಸ್ಥಗಿತಗೊಳಿಸಲು ಅಮೆರಿಕ, ಚೀನ, ಜಪಾನ್, ದಕ್ಷಿಣ ಕೊರಿಯಾಗಳು ನಿರ್ಧರಿಸಿವೆ. ಆದರೆ ವಿದ್ಯುತ್ ಉತ್ಪಾದನೆಗೆ ಈ ದೇಶಗಳಲ್ಲಿ ಇನ್ನೂ ಸಹ ಕಲ್ಲಿದ್ದಲು ಘಟಕಗಳನ್ನು ನೆಚ್ಚಿಕೊಂಡಿವೆ. ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಿತಿ ಐಪಿಸಿಸಿ ಮುಂದಿನ 5-10 ವರ್ಷಗಳಲ್ಲಿ ತಾಪ ಮಾನ ಏರಿಕೆಯ ಗಂಭೀರ ಅಗತ್ಯತೆಯ ಬಗ್ಗೆ ತನ್ನ ಆರನೇ ಮೌಲ್ಯಮಾಪನ ವರದಿಯಲ್ಲಿ ತಿಳಿಸಿದೆ.
ವಿಶ್ವ ಆರ್ಥಿಕತೆಯ ಮುಂಚೂಣಿಯಲ್ಲಿರುವ 20 ರಾಷ್ಟ್ರಗಳಿಂದ ಜಗತ್ತಿನಲ್ಲಿ ಶೇ. 80ರಷ್ಟು ಪ್ರಮಾಣದ ಕಾರ್ಬನ್ ಹೊರಸೂಸುವಿಕೆಗೆ ಕಾರಣವಾಗುತ್ತಿದೆ. ಈ ದೇಶಗಳು ಕೈಗಾರಿಕ ಕ್ರಾಂತಿಯ ಅತೀ ಹೆಚ್ಚು ಫಲಾನು ಭವಿಗಳಾಗಿದ್ದು ಹೆಚ್ಚು ಹಸುರು ಮನೆ ಅನಿಲಗಳ ಹೊರಸೂಸುವಿಕೆಗೆ ಕಾರಣೀಭೂತವಾಗಿದೆ. ಆದ್ದರಿಂದ ಹವಾಮಾನ ವೈಪರೀತ್ಯ ತಡೆಗೆ ಈ ದೇಶಗಳು ಹೆಚ್ಚಿನ ಹಣಕಾಸು, ತಂತ್ರಜ್ಞಾನಗಳ ನೆರವು ನೀಡಬೇಕಿದೆ.
ಭಾರತ ಕಾರ್ಬನ್ ಹೊರಸೂಸುವಿಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ದೇಶದ ಭೌಗೋಳಿಕ ಸ್ವರೂಪ- ಮೂರು ಕಡೆ ಸಮುದ್ರ, ಉತ್ತರದಲ್ಲಿ ಹಿಮ ಪರ್ವತಗಳು ಇರುವು ದರಿಂದ ತಾಪಮಾನ ಏರಿಕೆಯ ಪರಿಣಾಮಗಳಾದ ಹಿಮಾಲಯದ ಗ್ಲೇಸಿಯರ್‌ಗಳು ಕರಗುವುದು, ಹಿಮ ಕುಂಡಗಳ ಸ್ಫೋಟ, ನದಿಗಳಲ್ಲಿ ಪ್ರವಾಹ ಉಂಟಾಗುವುದು, ಸಮುದ್ರ ಮಟ್ಟ ಏರುವುದು, ಕರಾವಳಿ ಭಾಗದಲ್ಲಿ ತಗ್ಗಿರುವ ಪ್ರದೇಶಗಳ ಮುಳುಗಡೆ ಹಾಗೂ ಮಳೆ ಮತ್ತು ಬಿಸಿಲಿನ ಚಕ್ರ ಏರುಪೇರಾಗುವ ಸಾಧ್ಯತೆಗಳು ಅಧಿಕ. ಇದರಿಂದ ಕೃಷಿಗೆ ಹಾನಿಯಾಗಿ ಆಹಾರ ಉತ್ಪಾದನೆ ಕುಂಟಿತವಾಗಿ ಜನರಲ್ಲಿ ಅಪೌಷ್ಟಿಕತೆ ಹೆಚ್ಚಾಗಬಹುದು ಹಾಗೂ ಜನರ ಗುಂಪು ವಲಸೆಗೆ ಕಾರಣವಾಗಬಹುದು.
ಕಳೆದ 50 ವರ್ಷಗಳಲ್ಲಿ ದೇಶವನ್ನು ಸುತ್ತುವರಿದ ಸಾಗರಗಳ ಮಟ್ಟದಲ್ಲಿ 8.5 ಸೆಂ.ಮೀ. ಏರಿಕೆಯಾಗಿದೆ. ಕರ್ನಾಟಕದ ಐದು ಜಿಲ್ಲೆಗಳಲ್ಲಿ ಕಳೆದ ವರ್ಷ 40 ಡಿ. ಸೆ.ಗಿಂತ ಹೆಚ್ಚು ಉಷ್ಣಾಂಶ ಹಾಗೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 2 ರಿಂದ 3 ಡಿ.ಸೆ. ಹೆಚ್ಚಳವಾಗಿದೆ. ದೇಶದಲ್ಲಿ ಹವಾಮಾನ ವೈಪರೀತ್ಯಗಳ ದೀರ್ಘಕಾಲೀನ ಪರಿಣಾಮಗಳ ಸಾಧ್ಯತೆಗಳನ್ನು ಅಧ್ಯಯನ ಮಾಡಿ ಅದನ್ನು ತಡೆಯಲು (ಅಮೆರಿಕದಲ್ಲಿರುವ Environmental Protection Agencyಯಂತೆ) ಸಂಬಂಧಪಟ್ಟ ಇಲಾಖೆಗಳ ತಜ್ಞರ ಹವಾಮಾನ ಆರೋಗ್ಯ ನಿಯಂತ್ರಕ ಸಂಸ್ಥೆ ಸ್ಥಾಪಿಸಬೇಕಿದೆ.
ತಂತ್ರಜ್ಞಾನವನ್ನು ಬಳಸಿಕೊಂಡು 2030ರೊಳಗೆ ಈಗಿರುವ ಜಾಗತಿಕ ಹಸುರುಮನೆ ಅನಿಲ ಹೊರ ಸೂಸು ವಿಕೆಯನ್ನು ಕಡಿಮೆ ಮಾಡಲು ಸಾಧ್ಯವಿದೆ. ಸೌರ ಅಥವಾ ಗಾಳಿ ಶಕ್ತಿಯಿಂದ ನವೀಕರಿಸಬಹುದಾದ ದೊಡ್ಡ ಪ್ರಮಾ ಣದ ಯೋಜನೆಗಳು, ಸುವ್ಯವಸ್ಥಿತ ನಗರೀಕರಣ ಯೋಜ ನೆಗಳು, ಕಟ್ಟಡಗಳಲ್ಲಿ ಇಂಧನ ಪರಿಕರಗಳ ದಕ್ಷತೆ ನಿರ್ವ ಹಣೆಯಿಂದ ಹಾಗೂ ತಂತ್ರಜ್ಞಾನಗಳ ಬಳಕೆಯಿಂದ ಹಸುರು ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದಾಗಿದೆ.
ಇತ್ತೀಚೆಗೆ ವಾತಾವರಣದಿಂದ ಇಂಗಾಲ ಡೈ ಆಕ್ಸೆ„ಡ್‌ನ್ನು ಮಾತ್ರ ಸೋಸಬಲ್ಲ ಸಾಮಗ್ರಿಗಳನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಈ Metal Organic Frame work ಸ್ಪಂಜಿನಂತೆ ತಮ್ಮೊಳಗಿನ ರಂಧ್ರಗಳಲ್ಲಿ ಅನಿಲಗಳನ್ನು ಹೀರಿಕೊಳ್ಳಬಲ್ಲವು. ಹೀಗೆ ಬಂಧಿಯಾದ ಕಾರ್ಬನ್ ಡೈ ಆಕ್ಸೆ„ಡ್‌ನ್ನು ಹೀರಿ ಹೊರತೆಗೆದು ಸುರಕ್ಷಿತವಾಗಿ ಆಳದ ನೆಲ ಮಾಳಿಗೆಯಲ್ಲಿ ಶೇಖರಿಸಿಡಬಹುದಾಗಿದೆ. ಹವಾಮಾನ ವೈಪರೀತ್ಯವನ್ನು ತಡೆಯುವ ನಿಟ್ಟಿನಲ್ಲಿ ಪ್ಯಾರಿಸ್ ಸಮ್ಮೇಳನದ ನಿರ್ಣಯದ ಪರಿಣಾಮಕಾರಿ ಅನುಷ್ಠಾನ ಮತ್ತು ಉದ್ದೇಶಿತ ಗುರಿ ಸಾಧಿಸಲು ಜಗತ್ತಿನ ಎಲ್ಲ ರಾಷ್ಟ್ರಗಳು ಹೆಚ್ಚಿನ ಸ್ಫೂರ್ತಿಯೊಂದಿಗೆ ಮುನ್ನಡೆಯಲು ಗಂಭೀರ ಪ್ರಯತ್ನ ಮಾಡಬೇಕಿದೆ.
ಡಾ| ಅಶ್ವಿನಿ ಕುಮಾರ್ ಗೋಪಾಡಿ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!
ISRO ಡಾಕಿಂಗ್ ಪ್ರಯೋಗ ಯಶಸ್ವಿ: ಭಾರತೀಯ ಬಾಹ್ಯಾಕಾಶ ಅನ್ವೇಷಣೆಯಲ್ಲೊಂದು ಬೃಹತ್ ಹೆಜ್ಜೆ
Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ
Maha Kumbh Mela 2025: ಬಾಬಾ ವೇಷ
Army Day 2025: ಜನವರಿ 15ರಂದು ಯಾಕೆ ಸೇನಾ ದಿನ?: ಭಾರತೀಯ ಸೇನೆಯ 77 ವರ್ಷಗಳ ಹಾದಿ
MUST WATCH
ಹೊಸ ಸೇರ್ಪಡೆ
Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!
Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ
BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್
Central government ನೌಕರರಿಗೆ ಗಿಫ್ಟ್; 8ನೇ ವೇತನ ಆಯೋಗ ರಚನೆಗೆ ಅನುಮೋದನೆ
ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅವಕಾಶ: ಸಿಎಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.