ಮೆಸೇಜ್ ಮಹಾಪೂರದ ಐವತ್ತು ವರ್ಷ!
Team Udayavani, Oct 29, 2019, 4:54 AM IST
ನಾವು ಕಳಿಸುವ ತನಕ ಬೇರೆ ಯಾರೂ ಅಂತರಜಾಲದಲ್ಲಿ ಸಂದೇಶಗಳನ್ನೇ ಕಳಿಸುತ್ತಿರಲಿಲ್ಲವೇ?ಖಂಡಿತಾ ಕಳಿಸುತ್ತಿದ್ದರು. ನಿನ್ನೆ ಮೊನ್ನೆಯ ಮಾತೆಲ್ಲ ಏಕೆ, ಇವತ್ತಿಗೆ ಐವತ್ತು ವರ್ಷಗಳ ಹಿಂದೆಯೇ ಅಂತರಜಾಲದ ಮೂಲಕ ಸಂದೇಶವೊಂದನ್ನು ಕಳಿಸಲಾಗಿತ್ತು!
ಒಂದು ಕಾಲವಿತ್ತು, ಆಗ ಮೆಸೇಜ್ ಅಂದರೆ ನಮಗೆ ಗೊತ್ತಿದ್ದದ್ದು ಮೊಬೈಲಿನ ಎಸ್ಸೆಮ್ಮೆಸ್ ಮಾತ್ರ. ಮೊಬೈಲ್ ಜಾಲದ ಮೂಲಕ ನಮ್ಮ ಸಂದೇಶಗಳನ್ನು ರವಾನಿಸುತ್ತಿದ್ದ ಈ ವ್ಯವಸ್ಥೆ ಬಳಸಿ ಪಠ್ಯರೂಪದ ಸಂದೇಶಗಳನ್ನು ಮಾತ್ರ ಕಳುಹಿಸಬಹುದಿತ್ತು. ನಿರ್ದಿಷ್ಟ ಎಸ್ಸೆಮ್ಮೆಸ್ ಪ್ಯಾಕ್‌ಗಳನ್ನು ಹಾಕಿಕೊಳ್ಳದಿದ್ದರೆ ಪ್ರತಿ ಸಂದೇಶಕ್ಕೆ ಇಂತಿಷ್ಟು ಪೈಸೆಯಂತೆ ಸಾಕಷ್ಟು ಹಣವನ್ನೂ ಖರ್ಚು ಮಾಡಬೇಕಿತ್ತು.
ಈ ಪರಿಸ್ಥಿತಿ ಬದಲಾದದ್ದು ನಾವೆಲ್ಲ ಅಂತರಜಾಲ ಸಂಪರ್ಕವನ್ನು ಹೆಚ್ಚುಹೆಚ್ಚಾಗಿ ಬಳಸಲು ಶುರುಮಾಡಿದಾಗ. ಆ ಸಂದರ್ಭದಲ್ಲಿ ಮುನ್ನೆಲೆಗೆ ಬಂದ ಓವರ್-ದ-ಟಾಪ್ (ಓಟಿಟಿ) ಅಪ್ಲಿಕೇಶನ್‌ಗಳು ಸಾಂಪ್ರದಾಯಿಕ ವಿಧಾನಗಳನ್ನೆಲ್ಲ ಬದಿಗೊತ್ತಿ ಕರೆ, ಸಂದೇಶ ಮುಂತಾದ ಎಲ್ಲವನ್ನೂ ಅಂತರಜಾಲದ ಮೂಲಕವೇ ಒದಗಿಸಲು ಪ್ರಾರಂಭಿಸಿದವು.
ಒಂದು ಸಂದೇಶಕ್ಕೆ ಇಷ್ಟು ಪೈಸೆ ಎನ್ನುವ ಲೆಕ್ಕ ಹೋಗಿದ್ದೇ ತಡ, ನಾವು ಕಳಿಸುವ ಮೆಸೇಜುಗಳಿಗೆ ಲೆಕ್ಕವೇ ಇಲ್ಲದಂತಾಯಿತು. ಅತ್ತಲಿನವರು ಬೇರೆ ಊರಿನಲ್ಲಿರಲಿ, ಬೇರೆ ದೇಶದಲ್ಲೇ ಇರಲಿ, ಬಳಸಿದ ಡೇಟಾಗೆ ದುಡ್ಡು ಕೊಟ್ಟರೆ ಆಯಿತು ಎಂಬ ಸನ್ನಿವೇಶ ಸೃಷ್ಟಿಯಾದಂತೆ ಮೆಸೇಜುಗಳ ಮಹಾಪೂರವೇ ಸೃಷ್ಟಿಯಾಯಿತು. ಅಂತರಜಾಲದಲ್ಲಿ ಹುಡುಕಾಡುವುದಕ್ಕೆ “ಗೂಗಲ್ ಮಾಡು’ ಎಂಬ ಹೆಸರು ಬಂದಂತೆ ಸಂದೇಶ ಕಳುಹಿಸುವುದಕ್ಕೆ “ವಾಟ್ಸ್‌ಆ್ಯಪ್ ಮಾಡುವುದು’ ಎಂಬ ನಾಮಕರಣವೂ ಅಯಿತು.
ವಾಟ್ಸ್‌ಆ್ಯಪ್, ಟೆಲಿಗ್ರಾಂ ಮತ್ತಿತರ ಆ್ಯಪ್‌ಗ್ಳ ಸಹಾಯದಿಂದ, ಅಂತರಜಾಲ ಸಂಪರ್ಕ ಬಳಸಿಕೊಂಡು ಬೇಕಾದಷ್ಟು ಮೆಸೇಜು ಕಳಿಸುವುದನ್ನು ಕಲಿತ ಮೊದಲ ತಲೆಮಾರು ನಮ್ಮದು, ಸರಿ. ಆದರೆ ನಾವು ಕಳಿಸುವ ತನಕ ಬೇರೆ ಯಾರೂ ಅಂತರಜಾಲದಲ್ಲಿ ಸಂದೇಶಗಳನ್ನೇ ಕಳಿಸುತ್ತಿರಲಿಲ್ಲವೇ?
ಖಂಡಿತಾ ಕಳಿಸುತ್ತಿದ್ದರು. ನಿನ್ನೆ ಮೊನ್ನೆಯ ಮಾತೆಲ್ಲ ಏಕೆ, ಇವತ್ತಿಗೆ ಐವತ್ತು ವರ್ಷಗಳ ಹಿಂದೆಯೇ ಅಂತರಜಾಲದ ಮೂಲಕ ಸಂದೇಶವೊಂದನ್ನು ಕಳಿಸಲಾಗಿತ್ತು!
ತಮಾಷೆಯ ವಿಷಯವೆಂದರೆ ಆಗಿನ್ನೂ ಅಂತರಜಾಲಕ್ಕೆ ಆ ಹೆಸರನ್ನೇ ಇಟ್ಟಿರಲಿಲ್ಲ. “ಅಡ್ವಾನ್ಸ್‌ಡ್ ರೀಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ ನೆಟ್ವರ್ಕ್’ (ಅರ್ಪಾನೆಟ್) ಎಂಬ ಹೆಸರಿನಲ್ಲಿ ಅಂತರಜಾಲದ ಪರಿಕಲ್ಪನೆ ಆಗಿನ್ನೂ ರೂಪುಗೊಳ್ಳುತ್ತಿತ್ತು. ಅಮೆರಿಕದ ರಕ್ಷಣಾ ಇಲಾಖೆಯ ನೇತೃತ್ವದಲ್ಲಿ ಹಲವು ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳು ಈ ಪರಿಕಲ್ಪನೆಯನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸಮಾಡುತ್ತಿದ್ದವು.
ಇಂತಹ ಸಂಸ್ಥೆಗಳ ಪೈಕಿ ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯವೂ (ಯುಸಿಎಲ…ಎ) ಒಂದು. ಆ ಸಂಸ್ಥೆಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಅರ್ಪಾನೆಟ್ ಬಳಸಿ ಹಲವು ಚಟುವಟಿಕೆಗಳನ್ನು ನಡೆಸಿದ್ದರು. 1969ರ ಅಕ್ಟೋಬರ್ 29ರಂದು ಅಲ್ಲಿನ ವಿದ್ಯಾರ್ಥಿ ಚಾರ್ಲಿ ಕ್ಲೆನ್ ಎಂಬಾತ, ಪ್ರಾಧ್ಯಾಪಕ ಲಿಯೊನಾರ್ಡ್ ಕ್ಲೆನ್ರಾಕ್ ಮಾರ್ಗದರ್ಶನದಲ್ಲಿ, ತನ್ನ ಕಂಪ್ಯೂಟರಿನಿಂದ ಒಂದು ಸಂದೇಶ ಕಳಿಸಲು ಪ್ರಯತ್ನಿಸಿದ. 350 ಮೈಲಿ ದೂರದ ಸ್ಟಾನ್ಫರ್ಡ್ ರೀಸರ್ಚ್ ಇನ್ಸ್‌ಟಿಟ್ಯೂಟ್‌ನಲ್ಲಿದ್ದ ಇನ್ನೊಂದು ಕಂಪ್ಯೂಟರಿಗೆ ಆ ಸಂದೇಶ ತಲುಪಬೇಕು ಎನ್ನುವುದು ಅವನ ಗುರಿಯಾಗಿತ್ತು. ಬಿಲ್ ಡುವಲ್ ಎಂಬ ತಂತ್ರಜ್ಞ ಅಲ್ಲಿ ಈತನ ಸಂದೇಶವನ್ನು ನಿರೀಕ್ಷಿಸುತ್ತಿದ್ದ.
ಕ್ಯಾಲಿಫೋರ್ನಿಯಾ ವಿವಿಯಲ್ಲಿ ಈ ಪ್ರಯೋಗಕ್ಕೆ ಬಳಕೆಯಾಗಿದ್ದು ಸಿಗ್ಮಾ 7 ಎಂಬ ಮೈನ್‌ಫ್ರೆಮ್ ಕಂಪ್ಯೂಟರ್. 128 ಕೆಬಿ ಮೆಮೊರಿ ಹಾಗೂ 24 ಎಂಬಿ ಶೇಖರಣಾ ಸಾಮರ್ಥ್ಯ ಇದ್ದ ಈ ಕೋಣೆಗಾತ್ರದ ಕಂಪ್ಯೂಟರಿನಿಂದ ಚಾರ್ಲಿ ಕಳಿಸಲು ಬಯಸಿದ್ದ ಸಂದೇಶದಲ್ಲಿ ಇದ್ದದ್ದು ಐದೇ ಅಕ್ಷರ -‘login’
ಆದರೆ ಮೊದಲೆರಡು ಅಕ್ಷರ ಕಳುಹಿಸುವಷ್ಟರಲ್ಲೇ ಆ ಬದಿಯ ಕಂಪ್ಯೂಟರು ಕ್ರಾಶ್ ಆಯಿತು. ಹೀಗಾಗಿ ಚಾರ್ಲಿಯ ಸಂದೇಶದಲ್ಲಿ ಸ್ಟಾನ್ಫರ್ಡ್ ರೀಸರ್ಚ್ ಇನ್ಸ್‌ಟಿಟ್ಯೂಟ್‌ನ ಕಂಪ್ಯೂಟರಿಗೆ ತಲುಪಿದ್ದು “lo” ಎಂಬ ಅಕ್ಷರಗಳು ಮಾತ್ರ.
ನೀವು ಅದನ್ನು ಕನ್ನಡದ “ಲೋ’ ಎಂದಾದರೂ ಓದಿಕೊಳ್ಳಿ, ಇಂಗ್ಲಿಷಿನ ‘lo and behold’ನ ಪೂರ್ವಾರ್ಧವೆಂದಾದರೂ ಅಂದುಕೊಳ್ಳಿ, ಮೆಸೇಜ್ ಭಾಷೆಯಲ್ಲಿ ‘lol’ನ ಒಂದು ಭಾಗ ಎಂದಾದರೂ ಕೀಟಲೆ ಮಾಡಿ, ಅಂತರಜಾಲದ ಮೂಲಕ ಕಳಿಸಲಾದ ಮೊತ್ತಮೊದಲ ಸಂದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಎರಡೇ ಅಕ್ಷರಗಳ ಈ ಅಪೂರ್ಣ ಪದ!
ಇದಾದ ಸುಮಾರು ಒಂದು ಗಂಟೆಯ ನಂತರ ಚಾರ್ಲಿಗೆ ತನ್ನ ಸಂದೇಶವನ್ನು ಪೂರ್ಣವಾಗಿ ಸ್ಟಾನ್ಫರ್ಡ್‌ತನಕ ತಲುಪಿಸುವುದು ಸಾಧ್ಯವಾಯಿತು. ಇದಾದ ಎರಡು ವರ್ಷಗಳ ನಂತರ, 1971ರಲ್ಲಿ, ಆಧುನಿಕ ಇಮೇಲ್ ತಂತ್ರಜ್ಞಾನ ರೂಪುಗೊಂಡಿತು. ನಂತರದ ಮೂರು ವರ್ಷಗಳಲ್ಲಿ “ಇಂಟರ್ನೆಟ್’ ಎಂಬ ಹೆಸರೂ ಮೊದಲ ಬಾರಿಗೆ ಕೇಳಿಬಂತು.
ಅಲ್ಲಿಂದೀಚೆಗೆ ನಡೆದದ್ದು, ಮಾಹಿತಿ ತಂತ್ರಜ್ಞಾನದ ಮಹಾಕ್ರಾಂತಿ. ಎರಡು ಅಕ್ಷರಗಳನ್ನು ಕಳಿಸಲೇ ಕಷ್ಟಪಡಬೇಕಿದ್ದ ಅಂದಿನ ಕಾಲಕ್ಕೆ ಹೋಲಿಸಿದರೆ, ಇದೀಗ ನಾವು ವಾಟ್ಸ್‌ಆ್ಯಪ್ ಒಂದರಲ್ಲೇ ದಿನಕ್ಕೆ 65 ಶತ ಕೋ ಟಿ ಸಂದೇಶಗಳನ್ನು ಕಳಿಸುತ್ತಿದ್ದೇವೆ. ಟ್ವಿಟರ್‌ನಲ್ಲಿ ಪ್ರತಿದಿನ 500 ದಶ ಲ ಕ್ಷ ಟ್ವೀಟ್‌ಗಳನ್ನು ಮಾಡುತ್ತಿದ್ದೇವೆ. ತಜ್ಞರ ಅಂದಾಜಿನಂತೆ, ನಾವು ದಿನವೂ ಕಳಿಸುವ ಇಮೇಲ್‌ಗಳ ಸಂಖ್ಯೆ 2021ರ ವೇಳೆಗೆ 320 ಶತ ಕೋ ಟಿ ತಲುಪಲಿದೆ!
ಮಾಹಿತಿ ತಂತ್ರಜ್ಞಾನದ ನೆರವಿನಿಂದ ಸಂವಹನ ಇಷ್ಟು ಸುಲಭವಾಗಿರುವುದು ಎಷ್ಟು ಸತ್ಯವೋ, ಸಂವಹನದ ಸರಳತೆಯಿಂದ ಸಾಕಷ್ಟು ತೊಂದರೆಗಳಾಗಿರುವುದೂ ನಿಜವೇ. ಬೇಕಾದ ವಿಷಯವನ್ನು ಬೇಕಾದವರಿಗೆ ಬೇಕೆಂದ ಕ್ಷಣದಲ್ಲಿ ಮುಟ್ಟಿಸು ವುದು ವಾಟ್ಸ್‌ಆಪ್ ನಂತಹ ವ್ಯವಸ್ಥೆಗಳಿಂದ ಸಾಧ್ಯ ವಾಗಿ ರುವಂತೆಯೇ ಬೇಡದ ವಿಷಯಗಳ ಪ್ರಸಾರವೂ ಅವುಗಳಿಂದಾಗಿ ಹೆಚ್ಚಿದೆ. ಸುಮ್ಮನೆ ಕಿರಿಕಿರಿ ಮಾಡುವುದಷ್ಟೇ ಅಲ್ಲ, ವಾಟ್ಸ್‌ಆಪ್ ಫಾರ್ವರ್ಡುಗಳು ಇದೀಗ ಜೀವತೆಗೆಯುವ ಮಟ್ಟಕ್ಕೂ ತಲುಪಿಬಿಟ್ಟಿವೆ (ಮಕ್ಕಳ ಕಳ್ಳರ ವದಂತಿಗಳನ್ನು ನೆನಪಿಸಿಕೊಳ್ಳಿ!).
ತಂತ್ರಜ್ಞಾನ ತನ್ನಷ್ಟಕ್ಕೆ ತಾನೇ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಬಳಕೆದಾರರಾದ ನಾವು ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಅದು ಒಳ್ಳೆಯದೋ ಕೆಟ್ಟದೋ ಎನ್ನುವುದು ನಿರ್ಧಾರವಾಗುತ್ತದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಅತ್ಯಂತ ಪರಿಣಾಮಕಾರಿ ಸಂವಹನ ಸಾಧ್ಯವಾಗಿಸಿರುವ ಮೆಸೇಜಿಂಗ್ ವ್ಯವಸ್ಥೆಗಳ ಕತೆಯೂ ಇಷ್ಟೇ. ಅದನ್ನು ಉಪಯುಕ್ತ ಕೆಲಸಕ್ಕೆ ಬಳಸಿಕೊಳ್ಳುತ್ತೇವೋ ವದಂತಿಗಳನ್ನು – ಸುಳ್ಳುಸುದ್ದಿಗಳನ್ನು ಹರಡಲು ಬಳಸುತ್ತೇವೋ ಎನ್ನುವುದನ್ನು ನಾವೇ ತೀರ್ಮಾನಿ ಸಬೇಕು. ಅಂತರಜಾಲದ ಮೂಲಕ ಮೊದಲ ಸಂದೇಶ ಕಳಿಸಿ ಐವತ್ತು ವರ್ಷಗಳಾಗುತ್ತಿರುವ ಈ ದಿನ, ಅಂಥದ್ದೊಂದು ತೀರ್ಮಾನ ತೆಗೆದುಕೊಳ್ಳಲು ನಿಜಕ್ಕೂ ಒಳ್ಳೆಯ ಅವಕಾಶ!
– ಟಿ. ಜಿ. ಶ್ರೀನಿಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.