ಕೆ.ಕೆ.ಪೈಯವರ ಫ‌ಲಪ್ರದ ಬ್ಯಾಂಕ್‌ ಅಭಿವೃದ್ಧಿ ತಂತ್ರ


Team Udayavani, Jun 26, 2019, 5:00 AM IST

28

ನೌಕರರನ್ನು ಅವರ ಪ್ರತಿಭೆ ಮತ್ತು ಬಲಗಳನ್ನು ಬಳಸಲು ಸಾಧ್ಯವಾಗುವ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ನೀತಿಗೆ ಕೆ.ಕೆ. ಪೈ ಬಲವಾಗಿ ಅಂಟಿಕೊಂಡಿದ್ದರು. ವರ್ಗಾವಣೆಯಲ್ಲಿಯೂ ಅಷ್ಟೆ, ಮೂರು ವರ್ಷದ ಅವಧಿ ಮುಗಿಯಿತೆಂಬ ಕಾರಣಕ್ಕೆ ವರ್ಗಾವಣೆಯಿರಲಿಲ್ಲ. ಅಲ್ಲಿಯೂ ಸಾಧನೆ, ಪ್ರತಿಭೆಗಳನ್ನು ಗುರುತಿಸಲಾಗುತ್ತಿತ್ತು.

ಕೆ.ಕೆ. ಪೈಯವರು ಈಗ ಬದುಕಿರುತ್ತಿದ್ದರೆ ಅವರಿಗೆ ಇಂದಿಗೆ 98 ವರ್ಷ ತುಂಬುತ್ತಿತ್ತು. ಕೆ.ಕೆ. ಪೈಯವರು ಹುಟ್ಟಿದ್ದು 1921ರ ಜೂನ್‌ 26ರಂದು. 2020ರ ಜೂನ್‌ 26ರಿಂದ ಕೆ.ಕೆ. ಪೈಯವರ ಜನ್ಮ ಶತಮಾನ ವರ್ಷ ಪ್ರಾರಂಭವಾಗಲಿದೆ.

ಕೆ.ಕೆ. ಪೈಯವರ ಜನ್ಮ ದಿನವಾದ ಇಂದು ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ 1970ರ ದಶಕದಲ್ಲಿ ಫ‌ಲಪ್ರದವಾಗಿ ಬಳಸಿಕೊಂಡಿದ್ದ ಅಭಿವೃದ್ಧಿ ತಂತ್ರದ ಕುರಿತಾಗಿ ಅಲ್ಪಸ್ವಲ್ಪ ಬೆಳಕು ಚೆಲ್ಲುವುದು ಸೂಕ್ತವೆನಿಸುತ್ತದೆ.

ಪತ್ರ ವ್ಯವಹಾರದ ಬಳಕೆ

ಕೆ.ಕೆ. ಪೈಯವರು ಸಿಂಡಿಕೇಟ್ ಬ್ಯಾಂಕಿನಲ್ಲಿ ತಮ್ಮದೇ ಆದ ಅಭಿವೃದ್ಧಿ ತಂತ್ರವನ್ನು ಅಳವಡಿಸಿಕೊಂಡಿದ್ದರು. ಪತ್ರ ವ್ಯವಹಾರವನ್ನು ಅಭಿವೃದ್ಧಿಗಾಗಿ ಬಳಸಿದ ಬ್ಯಾಂಕರುಗಳು ಇಲ್ಲವೆನ್ನಬಹುದು. ಇದ್ದರೂ ಕೇವಲ ಕೆಲವೇ ಮಂದಿ. ಕೆ.ಕೆ. ಪೈಯವರು ಪತ್ರ ವ್ಯವಹಾರವನ್ನು ಸಮರ್ಪಕವಾಗಿ ಪರಿಣಾಮಕಾರಿಯಾಗಿ ಮತ್ತು ಫ‌ಲಪ್ರದವಾಗಿ ಬಳಸಿಕೊಂಡ ಬ್ಯಾಂಕರ್‌ ಎನ್ನಬಹುದು.

ಬ್ಯಾಂಕಿನ ಶಾಖಾ ಪ್ರಬಂಧಕರು ಪ್ರತಿ ತಿಂಗಳು ಅಧ್ಯಕ್ಷರಿಗೆ ಒಂದು ಪತ್ರ ಬರೆದು ಅದರಲ್ಲಿ ಠೇವಣಿ ಶೇಖರಣೆ, ಸಾಲ ನೀಡಿಕೆ, ಗ್ರಾಹಕರ ಸೇವೆ, ಗ್ರಾಹಕ ಸಂಬಂಧ, ಗ್ರಾಹಕರ ದೂರುಗಳು ಮತ್ತು ಅವುಗಳ ನಿವಾರಣೆ, ಇತ್ಯಾದಿ ವಿಷಯಗಳ ಕುರಿತು ತಿಳಿಸಬೇಕಾಗಿತ್ತು ಕೆ.ಕೆ. ಪೈ ಆ ಪತ್ರಗಳನ್ನು ಒಂದೊಂದಾಗಿ ತೆಗೆದುಕೊಂಡು ಓದಿ ಪ್ರತಿ ಪತ್ರದಲ್ಲಿರುವ ಪ್ರತಿ ವಿಷಯದ ಕುರಿತು ಷರಾ (remarks) ಬರೆದು ಸಂಬಂಧಪಟ್ಟ ವಿಭಾಗಗಳಿಗೆ ತ್ವರಿತ ಕಾರ್ಯಾಚರಣೆಗಾಗಿ ಕಳುಹಿಸುತ್ತಿದ್ದರು. ಆ ಪತ್ರಗಳಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಕೆ.ಕೆ. ಪೈಯವರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಮಾತ್ರವಲ್ಲದೆ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಗಳಲ್ಲಿ ಬಾಕಿಯಿದ್ದ ಕಡತಗಳನ್ನು ಶಾಖಾ ನಿರ್ವಾಹಕರ ಪತ್ರಗಳಿಂದ ದೊರೆತ ಮಾಹಿತಿಯ ಆಧಾರದಲ್ಲಿ ತಮ್ಮ ಬಳಿ ತರಿಸಿಕೊಂಡು ತ್ವರಿತ ನಿರ್ಧಾರ ಕೈಗೊಳ್ಳುತ್ತಿದ್ದರು. ಗ್ರಾಹಕರಿಗೆ ಮತ್ತು ಪ್ರಮುಖ ವ್ಯಕ್ತಿಗಳಿಗೆ ಅಧ್ಯಕ್ಷರು ಪತ್ರ ಬರೆಯುವ ಅವಶ್ಯಕತೆಯಿದ್ದರೆ ಶಾಖಾ ನಿರ್ವಾಹಕರು ಅಂತಹ ವ್ಯಕ್ತಿಗಳ ಹೆಸರು, ವಿಳಾಸ ಪತ್ರದಲ್ಲಿ ನಮೂದಿಸಬೇಕಾದ ವಿಷಯ ಇತ್ಯಾದಿ ವಿವರಗಳನ್ನು ನೀಡಬೇಕಿತ್ತು. ಶಾಖಾ ನಿರ್ವಾಹಕರುಗಳು ನೀಡಿದ ವಿವರಗಳನ್ನು ಬಳಸಿ ಕೆ.ಕೆ. ಪೈ ಗ್ರಾಹಕರಿಗೆ ಮತ್ತು ಪ್ರಮುಖ ವ್ಯಕ್ತಿಗಳಿಗೆ ಶಾಖೆಗೆ ವ್ಯವಹಾರ, ಬೆಂಬಲ ನೀಡಬೇಕೆಂದು ವಿನಂತಿಸಿ ಪತ್ರ ಬರೆಯುತ್ತಿದ್ದರು. ಇಂತಹ ಪತ್ರಗಳನ್ನು ಕಳುಹಿಸಿದ ಸಲುವಾಗಿ ಹೊಸ ವ್ಯವಹಾರ, ಹೊಸ ಗ್ರಾಹಕರ ಬೆಂಬಲ ದೊರೆಯುತ್ತಿತ್ತು. ಇತರ ಬ್ಯಾಂಕುಗಳಿಗೆ ವರ್ಗಾವಣೆ ಆಗುವ ಸಾಧ್ಯತೆಯಿದ್ದ ಖಾತೆಗಳನ್ನು ಉಳಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿತ್ತು.

ಯೋಜನೆ ಮತ್ತು ಅಭಿವೃದ್ಧಿ ವಿಭಾಗ

ಅಭಿವೃದ್ಧಿ ತಂತ್ರಗಳ ಮತ್ತು ಅಭಿವೃದ್ಧಿ ಯೋಜನೆಗಳ ವ್ಯವಸ್ಥಿತ ಅನುಷ್ಠಾನಕ್ಕಾಗಿ 1971ರಲ್ಲಿ ಕೆ.ಕೆ. ಪೈ, ಕೆ.ಆರ್‌. ಪ್ರಸಾದ್‌ ಅವರ ನೇತೃತ್ವದಲ್ಲಿ ಯೋಜನೆ ಮತ್ತು ಅಭಿವೃದ್ಧಿ ವಿಭಾಗವನ್ನು ಆರಂಭಿಸಿದರು. ಮೇಧಾವಿಯಾಗಿದ್ದ ಕೆ.ಆರ್‌. ಪ್ರಸಾದ್‌ ಬ್ಯಾಂಕಿನ ಚೀಫ್ ಡೆವಲಪ್‌ಮೆಂಟ್ ಮೆನೇಜರ್‌ ಆಗಿದ್ದರು. 1973ರಲ್ಲಿ ಬ್ಯಾಂಕಿನಲ್ಲಿ ಪ್ರಜಾಸತ್ತಾತ್ಮಕ ಗುಣವಿರುವ ಕಾರ್ಯಾಚರಣಾ ಯೋಜನೆ (Performance Budgeting System) ಆರಂಭಿಸಲಾಯಿತು.ಗ್ರಾಹಕರ ಭೇಟಿ ಮತ್ತು ಗ್ರಾಹಕರೊಂದಿಗೆ ಮಾತುಕತೆಗೆ ಕೆ.ಕೆ.ಪೈ ಬಹಳಷ್ಟು ಸಮಯವನ್ನು ವಿನಿಯೋಗಿಸುತ್ತಿದ್ದರು. ಗ್ರಾಹಕರ ಮನೆಗಳಲ್ಲಿ ನಡೆಯುತ್ತಿದ್ದ ಮದುವೆ, ಉಪನಯನ ಗೃಹ ಪ್ರವೇಶ ಇತ್ಯಾದಿ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು ಮತ್ತು ಆ ಮೂಲಕ ಆಭಿವೃದ್ಧಿಗಾಗಿ ಗ್ರಾಹಕ ಸಂಬಂಧ ಮತ್ತು ಸಾರ್ವಜನಿಕ ಸಂಬಂಧ ಬೆಳೆಸುತ್ತಿದ್ದರು. ನೂತನ ಯೋಜನೆ ಮತ್ತು ಅಭಿವೃದ್ಧಿ ವಿಭಾಗ ಕಾರ್ಪೋರೇಟ್ ಗುರಿ ಮತ್ತು ಧ್ಯೇಯೋದ್ದೇಶಗಳ ರೂಪಣೆ (formulation of corporate goals and objectives)ಯೋಜನೆಗಳ ತಯಾರಿ, ಪ್ರಾದೇಶಿಕ ಅಭಿವೃದ್ಧಿ ಪ್ರಬಂಧಕರ ಸಮ್ಮೇಳನ ಮತ್ತು ಶಾಖಾ ಪ್ರಬಂಧಕರ ಸಮ್ಮೇಳನ ನಡೆಸುವುದು, ಯೋಜನೆಗಳ ಅನುಷ್ಠಾನದ ಪರಾಮರ್ಶೆ ಇತ್ಯಾದಿ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿತ್ತು.

ಸಹಭಾಗಿತ್ವಕ್ಕೆ ಒತ್ತು

ಬ್ಯಾಂಕಿನ ಪ್ರಗತಿ ಯತ್ನಗಳಲ್ಲಿ ನೌಕರ ಸಹ ಭಾಗಿತ್ವಕ್ಕೆ ಕೆ.ಕೆ. ಪೈ ಬಹಳಷ್ಟು ಒತ್ತು ನೀಡಿದರು. ಬ್ಯಾಂಕಿನ ಪ್ರಗತಿಗೆ ಉತ್ತಮ ಕಾಣಿಕೆ ನೀಡಿದ ನೌಕರರನ್ನು ಮತ್ತು ಉನ್ನತ ಸಾಧನೆ ತೋರಿಸಿದ ನೌಕರರನ್ನು ಗುರುತಿಸಿ ಪುರಸ್ಕರಿಸುವ ಕ್ರಮವನ್ನು ಕೆ.ಕೆ. ಪೈ ಅಳವಡಿಸಿಕೊಂಡಿದ್ದರು. ಠೇವಣಿ ಗುರಿಗಳನ್ನು ಸಾಧಿಸಿದವರಿಗೆ ತಾವು ಸ್ವತಃ ಅಭಿನಂದನಾಪತ್ರಗಳನ್ನು ಕಳುಹಿಸುತ್ತಿದ್ದರು. ಅತ್ಯುತ್ತಮ ಫ‌ಲಿತಾಂಶ ಸಾಧಿಸಿದ ಶಾಖಾ ನಿರ್ವಾಹಕರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ (Man of the year)ನೀಡಿ ಪುರಸ್ಕರಿಸಲಾಗುತ್ತಿತ್ತು. ಅರ್ಹರಿಗೆ ಭಡ್ತಿ ನೀಡಲಾಗುತ್ತಿತ್ತು.

ನೌಕರರನ್ನು ಅವರ ಪ್ರತಿಭೆ ಮತ್ತು ಬಲಗಳನ್ನು ಬಳಸಲು ಸಾಧ್ಯವಾಗುವ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ನೀತಿಗೆ ಕೆ.ಕೆ. ಪೈ ಬಲವಾಗಿ ಅಂಟಿಕೊಂಡಿದ್ದರು. ವರ್ಗಾವಣೆಯಲ್ಲಿಯೂ ಅಷ್ಟೆ, ಮೂರು ವರ್ಷದ ಅವಧಿ ಮುಗಿಯಿತೆಂಬ ಕಾರಣಕ್ಕೆ ವರ್ಗಾವಣೆಯಿರಲಿಲ್ಲ. ಅಲ್ಲಿಯೂ ಸಾಧನೆ, ಪ್ರತಿಭೆಗಳನ್ನು ಗುರುತಿಸಲಾಗುತ್ತಿತ್ತು. ಉತ್ತಮ ಸಾಧಕರನ್ನು ಇದ್ದಲ್ಲೇ ಇಡುತ್ತಿದ್ದರು.

ಉತ್ತೇಜಕ ಯೋಜನೆ

ನೌಕರರ ಸಹಭಾಗಿತ್ವ ಹೆಚ್ಚಿಸಲು ಕೆ. ಕೆ. ಪೈಯವರು ಉತ್ತೇಜಕ ಯೋಜನೆಗಳನ್ನು (Incentive Scheme)ಅಳವಡಿಸಿಕೊಂಡರು. ಈ ಯೋಜನೆಯನ್ವಯ ಯೂನಿಟ್‌ಗಳ ಲೆಕ್ಕಾಚಾರದ ಮೇಲೆ ವಿವಿಧ ಶಾಖೆಗಳ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಅವರ ಅಭಿವೃದ್ಧಿ ಕೊಡುಗೆಗೆ ಸಿಗುವ ನಗದು ಹಣ ಉತ್ತೇಜಕ ರೂಪದಲ್ಲಿ ದೊರೆಯುತ್ತಿತ್ತು. ಉತ್ತೇಜನ ನೀಡಲು ಕೆ.ಕೆ. ಪೈ ಉತ್ತಮ ಸಾಧನೆ ತೋರಿಸಿದ ಮೆನೇಜರುಗಳಿಗೆ ಪ್ರಶಂಸೆ ಮತ್ತು ಅಭಿನಂದನಾ ಪತ್ರ ಕಳುಹಿಸುತ್ತಿದ್ದರು. ಗುರಿಗಳನ್ನು ಸಾಧಿಸಿದವರಿಗೆ ಪತ್ರದ ಮೂಲಕ ಪ್ರೋತ್ಸಾಹ ನೀಡಲಾಗುತ್ತಿತ್ತು, ಪ್ರೇರಣೆ ಒದಗಿಸಲಾಗುತ್ತಿತ್ತು. ವರ್ಗಾವಣೆ, ಭಡ್ತಿ, ಉತ್ತೇಜಕ ಯೋಜನೆ ಇವೆಲ್ಲವುಗಳನ್ನು ಕೆ.ಕೆ. ಪೈ ಸಹಭಾಗಿತ್ವ ಗಳಿಕೆಗಾಗಿ ಯಥೇಚ್ಛವಾಗಿ ಬಳಸಿಕೊಂಡಿದ್ದರು.

ಮಾರುಕಟ್ಟೆ ತಂತ್ರ ಬಳಕೆ

ಮಾರುಕಟ್ಟೆ ತಂತ್ರಗಳನ್ನು ಅಭಿವೃದ್ಧಿ ತಂತ್ರದ ಅಂಗವಾಗಿ ಕೆ.ಕೆ. ಪೈ ಬಳಸಿಕೊಳ್ಳುತ್ತಿದ್ದರು. ಮಾರುಕಟ್ಟೆ ವಿಂಗಡಣೆಯ ಮೂಲಕ ವಿವಿಧ ವರ್ಗಗಳ ಹೊಸ ಗ್ರಾಹಕರನ್ನು ತರುವಲ್ಲಿ ನೆರವಾಗಲು ಸಪ್ತಾಹಗಳನ್ನು ಆಚರಿಸಲಾಗುತ್ತಿತ್ತು. ಅಂದಿನ ಪ್ರಧಾನ ಅಭಿವೃದ್ಧಿ ಮ್ಯಾನೇಜರ್‌ (Chief Development Manager) ಕೆ.ಆರ್‌. ಪ್ರಸಾದ್‌ ಅವರ ಸಲಹೆಯಂತೆ ಡಾ| ಬಿ.ಸಿ. ರಾೖ ಜನ್ಮದಿನದಂದು ವೈದ್ಯರ ಸಪ್ತಾಹ, ಡಾ| ರಾಧಾಕೃಷ್ಣನ್‌ ಜನ್ಮದಿನದಂದು ಶಿಕ್ಷಕರ ಸಪ್ತಾಹ, ಡಾ| ವಿಶ್ವೇಶ್ವರಯ್ಯ ಜನ್ಮದಿನದಂದು ಎಂಜಿನಿಯರ್‌ಗಳ ಸಪ್ತಾಹ – ಹೀಗೆ ಬೇರೆ ಬೇರೆ ಸಪ್ತಾಹಗಳನ್ನು ನಡೆಸಿ ಹೊಸ ಗ್ರಾಹಕರನ್ನು ತರಲು ಯತ್ನಿಸಲಾಗುತ್ತಿತ್ತು. ಮಹಿಳಾ ಸಪ್ತಾಹ, ರೈತರ ಸಪ್ತಾಹ, ಇತ್ಯಾದಿಗಳನ್ನು ಪ್ರತಿವರ್ಷ ನಡೆಸಲಾಗುತ್ತಿತ್ತು.

ಅಭಿವೃದ್ಧಿ ಉಸ್ತುವಾರಿ

ಅಭಿವೃದ್ಧಿ ಚಟುವಟಿಕೆಗಳ ಮತ್ತು ಅಭಿವೃದ್ಧಿ ತಂತ್ರದ ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳಲು ಕೆ. ಕೆ. ಪೈ ದೇಶದ 8-9 ಕೇಂದ್ರಗಳಲ್ಲಿ ಪ್ರಾದೇಶಿಕ ಅಭಿವೃದ್ಧಿ ಕಚೇರಿಗಳನ್ನು ತೆರೆದರು. ಪ್ರಾದೇಶಿಕ ಅಭಿವೃದ್ಧಿ ನಿರ್ವಾಹಕರುಗಳನ್ನು ಈ ಕಚೇರಿಗಳ ಮುಖ್ಯಸ್ಥರುಗಳನ್ನಾಗಿ ಮಾಡಲಾಯಿತು. ಪ್ರಧಾನ ಕಚೇರಿಯ ಯೋಜನಾ ಮತ್ತು ಅಭಿವೃದ್ಧಿ ವಿಭಾಗ ಸಮನ್ವಯ ಕಾರ್ಯದೊಂದಿಗೆ ಮೇಲುಸ್ತುವಾರಿ ನೋಡಿಕೊಳ್ಳುತ್ತಿತ್ತು.

ಪ್ರಗತಿಯಲ್ಲಿ ವೇಗೋತ್ಕರ್ಷ

ಕೆ.ಕೆ. ಪೈ 1970ರ ದಶಕದಲ್ಲಿ ಬಳಸಿಕೊಳ್ಳುತ್ತಿದ್ದ ಅಭಿವೃದ್ಧಿ ತಂತ್ರದ ಪರಿಣಾಮಕಾರಿ ಅನುಷ್ಠಾನದಿಂದಾಗಿ ಆ ದಶಕದಲ್ಲಿ ಬ್ಯಾಂಕು ತನ್ನ ಪ್ರಗತಿಯಲ್ಲಿ ವೇಗೋತ್ಕರ್ಷ ಕಂಡಿತು. ಕೆ.ಕೆ. ಪೈಯವರ ಅಧಿಕಾರಾವಧಿಯಲ್ಲಿ ಬ್ಯಾಂಕಿನ ಠೇವಣಿ ಮೊತ್ತ ರೂ.145 ಕೋಟಿಯಿಂದ ರೂ. 965 ಕೋಟಿಗೂ, ಸಾಲದ ಮೊತ್ತ ರೂ. 123 ಕೋಟಿಯಿಂದ ರೂ. 812 ಕೋಟಿಗೂ ಏರಿತು. ಠೇವಣಿಗಳ ರಾಷ್ಟ್ರೀಯ ಸರಾಸರಿ ಏರಿಕೆಯ ದರ ಶೇ. 15 ಆಗಿದ್ದರೆ ಸಿಂಡಿಕೇಟ್ ಬ್ಯಾಂಕಿನ ಠೇವಣಿಗಳ ಹೆಚ್ಚಳದ ದರ ಶೇ. 22 ಆಗಿತ್ತು.

ನಿವ್ವಳ ಲಾಭ ಕೂಡ ಕೆ.ಕೆ. ಪೈಗಳ ಅಧಿಕಾರಾವಧಿಯಲ್ಲಿ ಗಮನಾರ್ಹವಾಗಿ ಹೆಚ್ಚಿತ್ತು. ಗಮನಾರ್ಹ ಮೊತ್ತದ ಲಾಭವನ್ನು ಸರಕಾರಕ್ಕೆ ಹಸ್ತಾಂತರಿಸಲಾಗುತ್ತಿತ್ತು. ನೌಕರರ ತಲಾ ಉತ್ಪಾದಕತೆ ಕೂಡ ಕೆ.ಕೆ. ಪೈಗಳ ಕಾಲದಲ್ಲಿ ತ್ವರಿತವಾಗಿ ಹೆಚ್ಚಿತ್ತು.

1977ರಲ್ಲಿ ನಾನು ಕೆ.ಕೆ. ಪೈಯವರ ಅಭಿವೃದ್ಧಿ ತಂತ್ರದ ಕುರಿತಾಗಿ “Development – What is it all about ‘ ಎಂಬ ಲೇಖನವೊಂದನ್ನು ಬರೆದು ಕೆ.ಕೆ. ಪೈಯವರಿಗೆ ನೇರವಾಗಿ ಕಳುಹಿಸಿದೆ.

ಅದನ್ನು ಪೂರ್ತಿಯಾಗಿ ಓದಿದ ಕೆ.ಕೆ. ಪೈ ಹೀಗೆ ಬರೆದರು. ‘This is a very good article . The philosophy of development has been brought out very well Editor, Giant, Publish it.’ ಕೆ.ಕೆ. ಪೈಯವರು ಹೀಗೆ ಬರೆದುದರಿಂದಾಗಿ ನನ್ನ ಈ ಲೇಖನ “Giant” ಪತ್ರಿಕೆಯಲ್ಲಿ ಪ್ರಕಟಗೊಂಡಿತು.

ಬ್ಯಾಂಕಿನ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಅದರಲ್ಲೂ ಮುಖ್ಯ ಅಭಿವೃದ್ಧಿ ನಿರತ ನೌಕರರಿಗೆ ಆ ಲೇಖನ ತುಂಬಾ ಉಪಯುಕ್ತವಾಗಿತ್ತು. ಲೇಖನದ ಉಪಯುಕ್ತತೆಯ ಕುರಿತು ನನಗೆ ನೂರಾರು ಪತ್ರಗಳು ಸಹೋದ್ಯೋಗಿಗಳಿಂದ ಬಂದಿದ್ದವು.

• ಡಾ| ಕೆ.ಕೆ. ಅಮ್ಮಣ್ಣಾಯ

ಟಾಪ್ ನ್ಯೂಸ್

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Jammu-Srinagar highway closed due to heavy snowfall; Vehicles stranded

Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ullala; Heap of waste in Nema’s field; Daiva got angry

Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Jammu-Srinagar highway closed due to heavy snowfall; Vehicles stranded

Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

6-national-emblem

National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ

Ullala; Heap of waste in Nema’s field; Daiva got angry

Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.