ನೆಹರೂ: ಮಹಾನ್ ಮಾನವತಾವಾದಿಯ ನೆನಪು
Team Udayavani, Nov 14, 2020, 6:18 AM IST
“ಒಂದು ಸುಂದರ ಕನಸು ನುಚ್ಚುನೂರಾಗಿದೆ. ಒಂದು ಸಂಗೀತ ಮೌನವಾಗಿದೆ. ಜ್ಯೋತಿಯೊಂದು ಅನಂತದಲ್ಲಿ ಲೀನವಾಗಿದೆ. ಅದೊಂದು ಭೀತಿ ರಹಿತ, ಉಪವಾಸರಹಿತ ಜಗತ್ತಿನ ಕನಸಾಗಿತ್ತು. ಅದೊಂದು ಮಹಾಕಾವ್ಯದಲ್ಲಿನ, ಗೀತೆಯ ಪ್ರತಿಧ್ವನಿಯಾಗಿತ್ತು ಮತ್ತು ಅದು ಗುಲಾಬಿ ಹೂವಿನ ಸುವಾಸನೆಯಾಗಿತ್ತು. ಅದು ರಾತ್ರಿಯೆಲ್ಲ ಬೆಳಗಿದ, ಎಲ್ಲ ತರಹದ ಕಗ್ಗತ್ತಲನ್ನು ಓಡಿಸುವ ದೀಪದ ಜ್ವಾಲೆಯಾಗಿತ್ತು. ನಮಗೆ ದಾರಿದೀಪವಾಗಿತ್ತು.
ಅವರು ವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದರು. ಆರ್ಥಿಕ ಸಮಾನತೆಯ ನಿಷ್ಠುರ ವಚನ ಬದ್ಧರಾಗಿದ್ದರು. ಅವರು ಯಾರೊಂದಿಗೂ ಸಂಧಾನಗೈಯುವುದರಲ್ಲಿ ಹಿಂಜರಿಯುತ್ತಿ ರಲಿಲ್ಲ. ಆದರೆ ಯಾರೊಂದಿಗೂ ಭಯ, ಹೆದರಿಕೆಗಳಿಂದ ಸಂಧಾನಗೈಯುತ್ತಿರಲೂ ಇರಲಿಲ್ಲ. ನೆಹರೂ ನಿಧನ ಪ್ರಜಾಸತ್ತೆಗೆ ಇನ್ನಿಲ್ಲದಂತಹ ನಷ್ಟ. ಮುಂದೆ ಇಂತಹ ವ್ಯಕ್ತಿತ್ವವನ್ನು ಕಾಣಲಾರೆವು. ನಮ್ಮೊಳಗೆ ಇರುವ ವೈರುಧ್ಯ ಧೋರಣೆಗಳ ನಡು ವೆಯೂ ಅವರ ಆದರ್ಶಗಳು, ದೇಶಪ್ರೇಮ, ಧೈರ್ಯ, ಸ್ಥೈರ್ಯಗಳ ಬಗ್ಗೆ ಗೌರವಾದರಗಳಿವೆ ಎಂಬುದಾಗಿ ತಿಳಿಸುತ್ತ ವಿನಮ್ರನಾಗಿ ಅವರ ಆತ್ಮಕ್ಕೆ ಗೌರವವನ್ನು ಅರ್ಪಿಸುತ್ತೇನೆ’
-ಅಟಲ್ ಬಿಹಾರಿ ವಾಜಪೇಯಿ
ಜವಾಹರಲಾಲ್ ನೆಹರೂ ನಿಧನ ಹೊಂದಿದ ಬಳಿಕ ರಾಜ್ಯ ಸಭೆಯಲ್ಲಿ ಶೋಕಸಭೆ ಜರಗಿದಾಗ, ಸದಸ್ಯರಾಗಿದ್ದ ವಾಜಪೇಯಿ ಆಡಿದ ಮಾತುಗಳು ಅಂದಿನ ಮತ್ತು ಇಂದಿನ ಪೀಳಿಗೆಯ ಭಾರತೀಯರ ಮನಸ್ಸುಗಳಲ್ಲಿ ಸದಾ ಪ್ರತಿಧ್ವನಿ ಸುತ್ತಲಿರುತ್ತವೆ.
ಹೌದು. ಭಾರತದ ಪ್ರಥಮ ಪ್ರಧಾನಿ ಪಂ| ನೆಹರೂ ನಡೆದು ಬಂದ ಹಾದಿ ಹಾಗೆಯೇ ಇತ್ತು. ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದ ವ್ಯಕ್ತಿ ಮುಂದೆ ಮಹಾತ್ಮಾ ಗಾಂಧೀಜಿಯವರ ಸಂಪರ್ಕಗಳಿಂದ ಜನ ಸಾಮಾನ್ಯರಾಗಿ ವ್ಯವಹರಿಸುತ್ತ ಅವರ ದುಃಖ ದುಮ್ಮಾನಗಳನ್ನು ಬಗೆಹರಿಸುವಲ್ಲಿ ತೊಡಗಿಸಿಕೊಂಡರು. ಗಾಂಧೀಜಿಯವರನ್ನು ಅನುಸರಿಸಿ ಪಂ| ನೆಹರೂ, ಅಂದು ವಿದೇಶಗಳಲ್ಲಿ ತನಗಾಗಿ ಹೊಲಿಸಿಕೊಂಡು ಬರುತ್ತಲಿದ್ದ ಆಗಿನ ಕಾಲದಲ್ಲಿ ಲಕ್ಷ ಲಕ್ಷ ರೂ. ಬೆಲೆಬಾಳುವ ಬಟ್ಟೆಗಳನ್ನು ತೊರೆದು, ದೊರಗು ಖಾದಿ ಬಟ್ಟೆ ತೊಡಲಾರಂಭಿಸಿದರು. ಮುಂದೆ ಪಂಥ ಪ್ರಧಾನರಾಗಿ ದೇಶ, ವಿದೇಶಗಳನ್ನು ಸಂದರ್ಶಿಸುವಾಗಲೂ ಖಾದಿ ಬಟ್ಟೆಗಳನ್ನೇ ತೊಡುತ್ತಿದ್ದರು.
ದೇಶದ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಮಹಾತ್ಮಾ ಗಾಂಧೀಜಿ ಮಾರ್ಗದರ್ಶನದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಹಲವಾರು ಬಾರಿ ಭೇಟಿ ನೀಡಿದ ಸಂದರ್ಭಗಳಲ್ಲಿ ಪಂ| ನೆಹರೂ ಹಳ್ಳಿಗರೊಂದಿಗೆ, ನಿರಕ್ಷರಕುಕ್ಷಿಗಳೊಡನೆ ಮಾತನಾಡು ವಾಗ ಅವರ ಜನಜೀವನ, ವಿವಿಧ ಸಂಸ್ಕೃತಿಗಳ, ನಡೆ ನುಡಿಗಳ, ಬಡತನದ ಬೇಗೆಯನ್ನು ಹತ್ತಿರದಿಂದ ಕಂಡು ಅನುಭವ ಪಡೆದಿದ್ದರು. ಇವೆಲ್ಲವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಜರಗಿದ ವಿವಿಧ ಚಳವಳಿಗಳ ಕಾಲಮಧ್ಯದಲ್ಲಿ ಸುಮಾರು 10 ವರ್ಷಗಳ ಕಾಲದ ಜೈಲುವಾಸದ ದಿನಗಳಲ್ಲಿ ತಾವು ಬರೆದ The Discovery of India, Glimpses of world History, An Autobiography, Letter to a Daughter ಮೊದಲಾದ ಕೃತಿಗಳಲ್ಲಿ ಉಲ್ಲೇಖೀಸಿದ್ದಾರೆ. ಪವಿತ್ರ ಗಂಗಾ ನದಿಯನ್ನು ಗಂಗಾಮಾತೆಯೆಂದು ಕರೆದ ನೆಹರೂ, ಭಾರತೀಯ ದರ್ಶನಗಳ ಕುರಿತಾಗಿ ವಿವಿಧ ಜನಾಂಗಗಳ ಸಾಂಸ್ಕೃತಿಕ, ಗ್ರಂಥಗಳು, ಚಾರಿತ್ರಿಕ, ಜಾನಪದ ವಿಷಯಗಳ ಅನುಭವವನ್ನು ವಿವರಿಸಿದ್ದರು. ಈ ಉತ್ಕೃಷ್ಟ ಕೃತಿಗಳು ಜಗತ್ತಿನ ಸಾಹಿತ್ಯ ಕ್ಷೇತ್ರದಲ್ಲಿ ಇಂದಿಗೂ ಉಚ್ಚ ಸ್ಥಾನವನ್ನು ಪಡೆದಿವೆ (ಅವರು ಕಾಪಿಟ್ಟ ತನ್ನ ಪತ್ನಿ ಕಮಲಾ ಚಿತಾ ಭಸ್ಮವನ್ನು ತನ್ನ ಚಿತಾಭಸ್ಮದೊಂದಿಗೆ ಗಂಗಾನದಿಯಲ್ಲಿ ಬಿಡಬೇಕೆಂದು ನೆಹರೂ ಅಪೇಕ್ಷಿಸಿದ್ದರು).
ಮಹಾತ್ಮಾ ಗಾಂಧೀಜಿ ಮಾರ್ಗದರ್ಶನದಲ್ಲಿ, ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ನಾಯಕರಲ್ಲಿ ಪಂ| ನೆಹರೂ, ಸುಭಾಸ್‌ಚಂದ್ರ ಭೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ರಾಜೇಂದ್ರ ಪ್ರಸಾದ್, ಮೌಲಾನಾ ಅಬ್ದುಲ್ ಕಲಾಂ ಆಜಾದ್ ಮುಂತಾದ ಹಲವಾರು ಶ್ರೇಷ್ಠ ನಾಯಕರು ವಿವಿಧ ಮನೋಭಾವದವರಾಗಿದ್ದರು. ಆದರೆ ಅವರೆಲ್ಲರನ್ನು ವೈಯಕ್ತಿಕವಾಗಿ ಹತ್ತಿರದಿಂದ ಬಲ್ಲ ಗಾಂಧೀಜಿ ಅವರು ಪಂ. ನೆಹರೂ ಅವರನ್ನು ತನ್ನ ಉತ್ತರಾಧಿಕಾರಿಯೆಂದು ಜಗತ್ತಿಗೇ ಸಾರಿ, “ನಾನು ಜಗತ್ತಿನಿಂದ ತೆರಳಿದ ಬಳಿಕ ಜವಾಹರ ಲಾಲ್ ನನ್ನ ಭಾಷೆಯನ್ನು ಮಾತನಾಡುತ್ತಾನೆ’ ಎಂದು ಘೋಷಿಸಿದ್ದರು ಮತ್ತು ಅದನ್ನು ಆ ನಾಯಕರೆಲ್ಲರೂ ಪ್ರಾಂಜಲವಾಗಿ ಒಪ್ಪಿ ಕೊಂಡಿದ್ದರು. ಅಂತೆಯೇ ಸುಭಾಸ್‌ಚಂದ್ರ ಭೋಸ್ ಅವರು, ಭಾರತವನ್ನು ಬಿಟ್ಟು ವಿದೇಶಗಳಿಗೆ ಹೋಗಿ ಜರ್ಮನಿ ಮತ್ತು ಜಪಾನಿಯರ ಬೆಂಬಲದಿಂದ ಇಂಡಿಯನ್ ನ್ಯಾಷನಲ್ ಆರ್ಮಿ (INA)ಯನ್ನು ಕಟ್ಟಿದಾಗ, ಒಂದು ತುಕಡಿಗೆ ನೆಹರೂ ಬೆಟಾಲಿಯನ್ ಎಂದು ಹೆಸರನ್ನಿಟ್ಟಿದ್ದರು.
ಭಾರತ ದೇಶ ವಿಭಜನೆಗೊಂಡು ಸ್ವತಂತ್ರವಾದಾಗ, ಪಂಜಾಬ್, ಸಿಂಧ್ ಪ್ರಾಂತ್ಯಗಳಿಂದ ಬಂದ ಲಕ್ಷಾಂತರ ಜನರಿಗೆ ವಸತಿ, ಆಹಾರ, ನೀರು, ಬಟ್ಟೆ ಬರೆಗಳನ್ನು ನೀಡುವಲ್ಲಿ ಪಂ| ನೆಹರೂ ರಾತ್ರಿ ಹಗಲೆನ್ನದೇ ದುಡಿದರು. ತಾನಿರುವ ಪ್ರಧಾನಮಂತ್ರಿಗಳ ಮನೆಯ ಅಂಗಳದಲ್ಲಿ ಮತ್ತು ದಿಲ್ಲಿಯ ನೆರೆಕರೆಗಳಲ್ಲಿ ಬೀಡುಬಿಟ್ಟ ನಿರಾಶ್ರಿತರ ದುಃಖ-ದುಮ್ಮಾನಗಳನ್ನು ಪರಿಹರಿಸುವಲ್ಲಿ ತಾನೇ ಸ್ವತಃ ಓಡಾಡಿ ಅವರಲ್ಲಿ ಧೈರ್ಯ, ಸ್ಥೈರ್ಯಗಳನ್ನು ತುಂಬಿಸಲು ಹೆಣಗಾಡಿದ್ದರು.
ಸ್ವಾತಂತ್ರ್ಯ ಸಿಕ್ಕಿದ ಬಳಿಕ ನಡುಗಾಲ ಸರಕಾರ ನೇಮಕವಾದಾಗ ನೆಹರೂ ಅಪೇಕ್ಷೆಯಂತೆ ಸರ್ದಾರ್ ಪಟೇಲರು ಉಪ ಪ್ರಧಾನಮಂತ್ರಿಗಳಾಗಿ ಸೇರಿಕೊಂಡಿದ್ದರು. ರಾಜೇಂದ್ರ ಪ್ರಸಾದ್ ಪ್ರಥಮ ಲೋಕಸಭೆಯ ಅಧ್ಯಕ್ಷರಾಗಲು ಒಪ್ಪಿದ್ದರು. ಮತ್ತೆ ಮುಂದೆ ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರೂ ಆದರು. ಸ್ವತಂತ್ರ ಭಾರತದ ಈ ನಡುಗಾಲ ಸರಕಾರದಲ್ಲಿ ಪಂ| ನೆಹರೂ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಮಾತ್ರವಲ್ಲದೇ ತನ್ನ ಬಹಳಷ್ಟು ಧೋರಣೆ ಗಳನ್ನು ಒಪ್ಪದ ಡಾ| ಭೀಮರಾವ್ ಅಂಬೇಡ್ಕರ್, ಡಾ| ಶ್ಯಾಮಪ್ರಸಾದ್ ಮುಖರ್ಜಿ ಒಳಗೊಂಡ ಸರಕಾರವನ್ನು ರಚಿಸಿ ದ್ದರು. ಅದು ಅವರ ವಿಶಾಲ ಮನೋಭೂಮಿಕೆಯನ್ನು ಸಾರಿತು.
ಸ್ವತಂತ್ರ ಭಾರತದ ಸರ್ವಾಂಗೀಣ ಬೆಳವಣಿಗೆಗೆ ಪಂಚವಾರ್ಷಿಕ ಯೋಜನೆಗಳಿಗೆ ಅಡಿಪಾಯ ಹಾಕಿದರು. ಅಮೆರಿಕದಲ್ಲಿ ಉದ್ಯೋಗದಲ್ಲಿದ್ದ ವಿಜ್ಞಾನಿ ಸಿ.ಎಚ್.ಬಾಬಾರನ್ನು ಆಮಂತ್ರಿಸಿ ಅಣು ವಿಜ್ಞಾನ ಸಂಸ್ಥೆಯನ್ನು ಹುಟ್ಟು ಹಾಕಿದರು. ಅದಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಒಂದೊಂದಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅಂತೆಯೇ ವಿಶಾಖಪಟ್ಟಣದಲ್ಲಿ ಮೊದಲ ಹಡಗು ನಿರ್ಮಾಣ ಕೇಂದ್ರವನ್ನು ಹುಟ್ಟುಹಾಕಿ ಬೆಳೆಸಿದರು. ದೇಶದಲ್ಲಿ ಮಾದರಿಯಾಗಿ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಭಾರತೀಯ ವಿಜ್ಞಾನ ಸಂಸ್ಥೆ, ಪ್ರಾದೇಶಿಕ ತಾಂತ್ರಿಕ ಕಾಲೇಜುಗಳನ್ನು ಸ್ಥಾಪಿಸಲಾಯಿತು. ಅಲ್ಲದೇ ಕೇಂದ್ರ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್‌ಗಳನ್ನು ಸ್ಥಾಪಿಸಲಾಯಿತು. ಅಲ್ಲದೇ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (NSD), ಫಿಲಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಗಳಲ್ಲಿ ಯುವ ಕಲಾಗಾರರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಲಾಯಿತು.
ದೇಶ ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತದ ವಿಜ್ಞಾನಿಗಳು, ಸಾಹಿತ್ಯ, ಸಂಗೀತ ಇತರ ಕಲಾ ಕ್ಷೇತ್ರಗಳ ಕಲಾವಿದರು ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ದುಡಿದು ಹೆಸರು ಗಳಿಸಿದ ಮತ್ತು ತೆರೆಯ ಮರೆಯಲ್ಲಿರುವವರನ್ನೂ ಗುರುತಿಸಿ ಸಮ್ಮಾನಿಸುವ ಭಾರತ ರತ್ನ ಮತ್ತು ಪದ್ಮ ಪ್ರಶಸ್ತಿಗಳನ್ನು ನೀಡಿ ಸತ್ಕರಿಸುವ ಪರಿಪಾಠವನ್ನು ನೆಹರೂ ಹುಟ್ಟು ಹಾಕಿದರು. ಅಂದು ಪಂ| ನೆಹರೂ ಹಾಕಿದ ಭದ್ರ ಅಡಿಪಾಯದಿಂದಾಗಿ ಪ್ರಜಾಪ್ರಭುತ್ವ ಮುಂದೆಯೂ ಹೀಗೆಯೇ ಮುನ್ನಡೆಯಲಿದೆ ಎಂಬ ವಿಶ್ವಾಸ ನಮ್ಮೆಲ್ಲರದಾಗಿದೆ.
ಬಸ್ತಿ ವಾಮನ ಶೆಣೈ, ಬಂಟವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.