ದಾಸರೆಂದರೆ ಪುರಂದರ ದಾಸರಯ್ಯ
Team Udayavani, Feb 4, 2019, 12:30 AM IST
ಇಂದು ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಆರಾಧನೆ. ದೇವರಿಗೆ ಗುಡಿಗೋಪುರಗಳು ಬೇಕಿಲ್ಲ, ಮಡಿ- ಮಂತ್ರ, ಶಂಖ- ಜಾಗಟೆಯ ಅಬ್ಬರದ ಪೂಜೆ ಬೇಕಿಲ್ಲ. ಶುದ್ಧ ಅಂತಃಕರಣದ ಹರಿಸ್ಮರಣೆಯೇ ಸಾಕು ಎಂದು ಹೇಳುವ ಮೂಲಕ ಆತೊ¾àದ್ಧಾರದ ದಾರಿ ತೋರಿದ ಆ ಮಹಾನುಭಾವರನ್ನು ನುಡಿನಮನದ ಮೂಲಕ ನೆನೆಯುವ ಪ್ರಯತ್ನ ಇದು.
ಕರ್ನಾಟಕ ಸಂಗೀತ ಪಿತಾಮಹ, ದಾಸ ಪರಂಪರೆಯ ಪ್ರಮುಖರಾದ ಪುರಂದರದಾಸರು ಭಾರತದ ಭಕ್ತಿಪಂಥದಲ್ಲಿ ಒಂದು ಇತಿಹಾಸವನ್ನು ನಿರ್ಮಾಣ ಮಾಡಿದವರು. ಕೊಪ್ಪರಿಗೆ ಹಣ, ಉಪ್ಪರಿಗೆ ಮನೆಯ ನವಕೋಟಿ ನಾರಾಯಣರಾಗಿದ್ದ ಶ್ರೀನಿವಾಸ ನಾಯಕರು ಪುರಂದರದಾಸರಾದದ್ದು ಒಂದು ಆಕಸ್ಮಿಕ ತಿರುವು. ಅದು ಭಗವಂತನಿಂದ ಭಕ್ತನ ಪರೀಕ್ಷೆ, ಮುಕ್ತಿ ಇಲ್ಲಿ ನೆಪ ಮಾತ್ರ. ಶ್ರೀನಿವಾಸ ನಾಯಕರು ತಮ್ಮ ಎಲ್ಲ ಆಸ್ತಿ ಪಾಸ್ತಿ, ಆಸೆ, ಆಕಾಂಕ್ಷೆಗಳ ಮೇಲೆ ತುಳಸೀದಳವಿಟ್ಟು ಕೃಷ್ಣಾರ್ಪಣ ಎಂದರು. ದಾಸದೀಕ್ಷೆ ಹಿಡಿದರು. ಕೊರಳಲ್ಲಿ ತುಳಸಿಮಾಲೆ, ಹಣೆಗೆ ಗೋಪಿಚಂದನದ ನಾಮ ಇಟ್ಟರು. ತಾಳ ತಂಬೂರಿ ಹಿಡಿದರು. ಲಜ್ಜೆ ಬಿಟ್ಟು ಗೆಜ್ಜೆ ಕಟ್ಟಿದರು. ಧಿಂಧಿಮಿ ಧಿಮಿಕೆಂದು ಕುಣಿಯುತ್ತ ಊರಾಡಿದರು. ಹಾಡುತ್ತ ಸತ್ಯವನ್ನು ಹೇಳಿದರು. ಜೋಳಿಗೆ ಹಿಡಿದು ಭಾಗ್ಯ ಪಡೆದರು. ಮಧುಕರ ವೃತ್ತಿಯ ಕೈಂಕರ್ಯದಲ್ಲಿ ದಾಸರು ದೇಶವನ್ನು ಸುತ್ತಿದರು. ಈಶನನ್ನು ಕೊಂಡಾಡಿದರು. ಕೆಡುಕನ್ನು ಕಂಡಾಗ ಖಂಡಿಸಿದರು, ಒಳಿತನ್ನು ಕಂಡು ಹೊಗಳಿದರು. ಮನದ ಕಿಲುಬು ತೊಳೆದರು, ಜೀವನ ಎåೌಲ್ಯವನ್ನು ಕಟ್ಟಿಕೊಟ್ಟರು.
ದಾಸರು ಭಕ್ತಿಯನ್ನು ಬಿತ್ತಿ ಬೆಳೆದರು. ಭಕ್ತಿಯ ಬೀಜ ಮೊಳಕೆಯೊಡೆದು ಗಿಡವಾಗಿ ಬೆಳೆಯುವುದು ದಿನಮಾತ್ರದಲ್ಲಿ ಆಗುವಂತಹದಲ್ಲ. ಅದಕ್ಕೆ ಸಾಕಷ್ಟು ಶ್ರದ್ಧೆ, ಸಾಧನೆ ಬೇಕು. ಸಾಧಕನೊಬ್ಬನ ಮೊದಲ ಹಂತದ ತಲ್ಲಣ ತಳಮಳಗಳು ಪುರಂದರದಾಸರನ್ನು ಕಾಡಿವೆ. ಬಹಳ ವರ್ಷಗಳ ಲೌಕಿಕ ಬದುಕಿನ ಮೋಹದಿಂದ ಬಿಡಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಈ ಹಂತವನ್ನು ದಾಟುವಲ್ಲಿ ಪುರಂದರದಾಸರು ದೇವ-ಭಕ್ತ ಎನ್ನುವ ನಿಲುವಿನಲ್ಲಿ ತನ್ನ ಅಹಂನ್ನು ಕರಗಿಸಿಕೊಂಡು “ದಾಸನ ಮಾಡಿಕೊ ಎನ್ನ’ ಎಂದು ಆರಾಧ್ಯದೈವದಲ್ಲಿ ಪರಿಪರಿಯಾಗಿ ಬೇಡಿಕೊಂಡಿದ್ದಾರೆ.
ಹರಿದಾಸ ಸಾಹಿತ್ಯದ ಮುಖ್ಯ ತಣ್ತೀ ಭಕ್ತಿ. ಮೂಲಸತ್ಯ ಭಗವಂತ. ಈ ಸತ್ಯದ ಹುಡುಕಾಟ ಭಕ್ತಿಯ ಹಾದಿಯಲ್ಲಿ ಸಾಗಿದೆ. ಭಕ್ತಿಯ ವಿವಿಧಾನುಭವದ ಆಲಿಂಗನದಲ್ಲಿ ಭಕ್ತ-ಭಗವಂತನ ಸೂಕ್ಷ್ಮ ಸಂಬಂಧ ಹತ್ತೆಂಟು ಭಾವಭಂಗಿಗಳಲ್ಲಿ ಪ್ರಕಟವಾಗಿದೆ. ಕೃಷ್ಣ ದಾಸರಿಗೆ ಒಡೆಯನಾಗಿ, ಒಡನಾಡಿಯಾಗಿ, ಇನಿಯನಾಗಿ, ತನಯನಾಗಿ ಕಂಡಿದ್ದಾನೆ, ಕಾಡಿದ್ದಾನೆ. ಭಕ್ತಿಯ ಪಂಚವಿಧ ಭಾವಗಳಲ್ಲಿ ಹರಿಯನ್ನು ಕಾಡುವ, ಬೇಡುವ, ಛೇಡಿಸುವ, ಸವಾಲು ಎಸೆಯುವ ಅಭಿವ್ಯಕ್ತಿಯ ಪರಿ ಅನನ್ಯ, ಅಸಾಧಾರಣ.
ತಾಯಿ-ಮಗುವಿನ ನಿರ್ಮಲ ಪ್ರೀತಿಯ ಪ್ರತೀಕ ವಾತ್ಸಲ್ಯ ಭಾವ. ದಾಸರು ತಾವು ತಾಯಿಯಾಗಿ, ದೇವರನ್ನು ಮಗುವಾಗಿ ಭಾವಿಸಿ ವಾತ್ಸಲ್ಯ ಭಾವದಲ್ಲಿ ಎದೆತುಂಬಿ ಹಾಡಿದ್ದಾರೆ. ಒಂದು ಮಗುವಿನ ಎಲ್ಲ ತುಂಟಾಟ, ತುಡುಗಾಟವನ್ನು ಬಾಲಕೃಷ್ಣನಿಗೆ ಆರೋಪಿಸಿ ತಾಯಿ-ಮಗುವಿನ ವಾತ್ಸಲ್ಯ ಪ್ರಪಂಚವನ್ನು ಕಟ್ಟಿದ್ದಾರೆ. ಬಾಲಕೃಷ್ಣನ ಆಟಪಾಟ ಕಂಡು ಆನಂದಗೊಂಡಿದ್ದಾರೆ. ವಿವಿಧ ಆಭರಣಗಳನ್ನು ತೊಡಿಸಿ ಅಂದ ಚೆಂದವ ಕಣ್ತುಂಬಿಕೊಂಡಿದ್ದಾರೆ. ಮಗು ಕಣ್ಣಮುಂದೆ ಕಾಣದಿದ್ದಾಗ ಆತಂಕಗೊಂಡಿದ್ದಾರೆ. ಹಸಿದಾಗ ಕೈತುತ್ತು ಇಕ್ಕಿದ್ದಾರೆ. ಉಣ್ಣದಾಗ ಗೋಪಿಯರ ಕಣ್ಣದೃಷ್ಟಿ ತಾಗಿತೆಂದು ಕಳವಳಗೊಂಡಿದ್ದಾರೆ. ಹಟಮಾಡಿದಾಗ ಗುಮ್ಮನನ್ನು ಕರೆದು ಬೆದರಿಸಿದ್ದಾರೆ. ನಕ್ಕಾಗ, ಅತ್ತಾಗ ಬಿಗಿದಪ್ಪಿ ಮುದ್ದು ಮಾಡಿದ್ದಾರೆ. ನಿದ್ದೆ ಬಂದಾಗ ತೊಟ್ಟಿಲೊಳಗಿಟ್ಟು ಲಾಲಿ ಹಾಡಿದ್ದಾರೆ. ಎದ್ದಾಗ ತುಂಟ ಕೃಷ್ಣನೊಂದಿಗೆ ಆಟ ಆಡಿದ್ದಾರೆ.
ಬಾಲಕೃಷ್ಣನನ್ನು ಆಡಿಸುತ್ತ, ಸಂಭ್ರಮಿಸುವ ಯಶೋಧೆ ತನ್ನ ಕೃಷ್ಣ ಕ್ಷಣಕಾಲ ಕಣ್ಣು ತಪ್ಪಿದರೂ ಗಾಬರಿಗೊಂಡಿದ್ದಾಳೆ. ಕಾತರ ಕಳವಳದಿಂದ ಕೇರಿಯ ಮನೆ ಮನೆಗಳಲ್ಲಿ ಕೃಷ್ಣನನ್ನು ಹುಡುಕಾಡುತ್ತಾಳೆ. ಕೇರಿಯಲ್ಲಿ ಹುಡುಕಿ ಹುಡುಕಿ ಸುಸ್ತಾದಾಗ ಮನೆಗೆ ಬಂದ ಮಗುವನ್ನು ಸಂತೋಷದಿಂದ “ಬಂದೆಯಾ, ಬಾರೊ’ ಎಂದಪ್ಪಿಕೊಂಡು ಮುದ್ದಿನ ಮಳೆಗರೆಯುತ್ತಾಳೆ. “ಪೋಗದಿರೆಲೊ ರಂಗ, ಬಾಗಿಲಿಂದಾಚೆಗೆ, ಕಣ್ಣ ಮುಂದಿರೋ ಕೃಷ್ಣಾ’ ಎಂದು ತಾಯ್ತನದ ಪ್ರೀತಿಯಿಂದ ಒತ್ತಾಯಿಸುತ್ತಾಳೆ.
ಭಗವಂತನನ್ನು ಇನಿಯನೆಂದು ಭಾವಿಸಿದ ದಾಸರು ಗೋಪಿಯಾಗಿ ಅವನ ಬರುವಿಕೆಗಾಗಿ ಕಾದಿದ್ದಾರೆ. ಹಾಡಿ ಹಂಬಲಿಸಿದ್ದಾರೆ. ಸರ್ವಸಮರ್ಪಣ ಭಾವದಿಂದ ಅವನನ್ನು “ಪತಿ’ಯೆಂದು ಆರಾಧಿಸಿದ್ದಾರೆ.
ಭಕ್ತಿಯ ಭಾವಾಂತರಂಗದಲ್ಲಿ ಮುಳುಗಿದ ಪುರಂದರ ದಾಸರ ಕನಸು ಮನಸಿನ ತುಂಬೆಲ್ಲ ತುಂಬಿರುವ ಚೆಲುವ ಚೆನ್ನಿಗ ಶ್ರೀಕೃಷ್ಣ. ಪುರಂದರದಾಸರು ಕನಸಿನಲ್ಲಿ ಕಂಡ ಆ ಸಾಕಾರಮೂರ್ತಿಯ ಚೆಲುವಾದರೂ ಎಂತಹದು! ಅಂದುಗೆ ಕಿರುಗೆಜ್ಜೆ ಕೈಯಲ್ಲಿ ಕೊಳಲು, ಕೊರಳಲಿ ತೊಟ್ಟ ತುಳಸೀಮಾಲೆ, ಹಣೆಯಲಿ ಇಟ್ಟ ದ್ವಾದಶನಾಮ, ಉಟ್ಟ ಪೀತಾಂಬರ, ಉಡಿಯ ಕಾಂಚನದಾಮ, ಕಿರುಬೆರಳಿನ ಮುದ್ರೆಯುಂಗುರ, ಹೇಮಕಂಕಣದ ಶೃಂಗಾರಮೂರುತಿಯ ದರ್ಶನ ದಾಸರ ಅಂತರಂಗದ ಕಣ್ಣಿಗೆ ಕಟ್ಟಿದೆ. ಕೃಷ್ಣ ಈ ಬಿಂಕ ಬಿನ್ನಾಣ, ಸೊಬಗು ಸೆಳವುಗಳಲ್ಲಿ ಸಾಲಂಕೃತಗೊಂಡಿದ್ದಾನೆ ದಾಸರ ಹೃದಯಮಂದಿರದಲ್ಲಿ.ಹೀಗೆ ಕಣ್ಣು ಮುಚ್ಚಿದರೆ ಕೃಷ್ಣನ ದಿವ್ಯ ರೂಪ, ಕಣ್ಣು ಬಿಟ್ಟರೆ ಕೃಷ್ಣನ ಭವ್ಯರೂಪ, ಕನಸು ಮನಸಿನ ತುಂಬೆಲ್ಲ ತುಂಬಿದ ಕೃಷ್ಣ ಪುರಂದರರಾಸರಿಗೆ ಜಗದಗಲ, ಎಲ್ಲೆಲ್ಲೂ ಅವನದೇ ಬಿಂಬರೂಪ. ಎಲ್ಲೆಲ್ಲೊ ತುಂಬಿ ನಿಂತ ಹರಿಯನ್ನು ಕಂಡು ದಾಸರು ಹಿರಿಹಿರಿ ಹಿಗ್ಗಿದ್ದಾರೆ. ಸಾûಾತ್ಕಾರಗೊಂಡ ಕೃಷ್ಣನನ್ನು ಕಂಡಾಗ ಒಂದು ದೊಡ್ಡ ಸತ್ಯದ ಬೆಳಕಿನ ಅನುಭವವಾಗುತ್ತದೆ, ಪುರಂದರದಾಸರಿಗೆ.
ಹೀಗೆ ದೊರಕಿದ ಸತ್ಯದಲ್ಲಿ ಸಖ್ಯ ಪರಸ್ಪರ ಅಗಲದಂತೆ “ನನಗೂ ಆಣೆ ರಂಗ ನಿನಗೂ ಆಣೆ’ ಎಂದು ತಮ್ಮಿಬ್ಬರಿಗೂ ಆಣೆಯಿಟ್ಟು ಕಟ್ಟಿ ಹಾಕುತ್ತಾರೆ ದಾಸರು. ತಮ್ಮ ಭಾಗ್ಯವಿಶೇಷದ ಆತ್ಮವಿಶ್ವಾಸದಲ್ಲಿ ಭಕ್ತನ ಇಂತಹ ಭಾಗ್ಯ ನಿನಗೆಲ್ಲಿಯದು ಎಂದು ಭಗವಂತನಿಗೆ ಸವಾಲು ಹಾಕುತ್ತಾರೆ.
ಪುರಂದರದಾಸರು ಈ ಬಗೆಯ ಆತೊ¾àದ್ಧಾರವನ್ನಷ್ಟೇ ಅಪೇಕ್ಷಿಸಲಿಲ್ಲ. ಜಗದುದ್ಧಾರವನ್ನು ಬಯಸಿದರು. ಅಂತರಂಗದ ಅನ್ವೇಷಣೆಯ ಜತೆಗೆ ಬಹಿರಂಗದ ಪರಿವೀಕ್ಷಣೆಯನ್ನೂ ನಡೆಸಿದರು. ಪುರಂದರದಾಸರ ಬಹುದೊಡ್ಡ ಸಾಧನೆ ಸಂಗೀತ ಮಾಧ್ಯಮದಲ್ಲಿ ಸರಳ ಭಾಷೆಯಲ್ಲಿ, ಸುಲಭ ಭಕ್ತಿಯಲ್ಲಿ ದೇವರನ್ನು ಜನರಲ್ಲಿಗೆ ತಂದುದು. ದಾಸರದು ಸಾಕಾರ ಭಕ್ತಿಯಾದರೂ ಸ್ಥಾವರ ಭಕ್ತಿಯಲ್ಲ. ಅವರ ಬಿಂಬೋಪಾಸನೆಯ ನೆಲೆ ಜಂಗಮಭಕ್ತಿ ಸ್ವರೂಪದ್ದು. ಹಾಗಾಗಿಯೇ ದಾಸರು ದೇವರಿಗೆ ಭವ್ಯ ಗುಡಿಗೋಪುರಗಳು ಬೇಕಿಲ್ಲ, ಒದ್ದೆ ಬಟ್ಟೆ ಉಟ್ಟು ತಾಸುಗಟ್ಟಲೆ ಮಂತ್ರಘೋಷ ಮಾಡಬೇಕಾಗಿಲ್ಲ. ಶಂಖ ಜಾಗಟೆಯ ಅಬ್ಬರದ ಪೂಜೆ ಬೇಕಾಗಿಲ್ಲ. ದೇವರನ್ನು ಅರಸಿ ದೇವಾಲಯಕ್ಕೆ ಹೋಗಬೇಕಾಗಿಲ್ಲ. “ಗಾತ್ರವೇ ಮಂದಿರ, ಹೃದಯವೇ ಮಂಟಪ, ನೇತ್ರವೇ ಮಹಾದೀಪ. ಹಸ್ತ ಚಾಮರವು’ ಎಂಬಲ್ಲಿ ಈ ದೇಹವನ್ನೇ ದೇವಾಲಯವಾಗಿಸಿದರು. ನಿರ್ಮಲ ಅಂತಃಕರಣದಿಂದ ಹರಿಸ್ಮರಣೆ ಮಾಡಿದರೆ ಸಾಕು ದೈವಸಾûಾತ್ಕಾರಕ್ಕೆ ಎಂಬ ಸುಲಭ ಪೂಜೆಯ ದಾರಿ ತೋರಿದರು.
ಮಾನವ ಬದುಕಿನ ಒಳಿತಿನ ತುಡಿತದಲ್ಲಿ ಹರಿದಾಸರು ಹೊಸ ಸಮಾಜವನ್ನು ಕಟ್ಟಬಯಸಿದರು. ಹಾಗೆಂದೇ ಆಧ್ಯಾತ್ಮದ ಸ್ವೀಕರಣದಲ್ಲಿ ಲೌಕಿಕದ ನಿರಾಕರಣ ಮಾಡಿಲ್ಲ ದಾಸರು. ಪುರಂದರದಾಸರು ಈ ಶರೀರ “ಸಾಧನ ಶರೀರ. ಮಾನವಜನ್ಮ ದೊಡ್ಡದು ಇದ ಹಾನಿಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದರು. ಆದರೆ ಈ ಭವಶರೀರವೇ ಶಾಶ್ವತವೆಂದು ಲೌಕಿಕ ಭೋಗಭಾಗ್ಯ. ಅಧಿಕಾರ ಅಂತಸ್ತುಗಳೇ ಪರಮಸುಖವೆಂದೂ ನಿತ್ಯ ಸತ್ಯವೆಂದೂ ಬಗೆದು ಹಿರಿಹಿರಿ ಹಿಗ್ಗುತ್ತಾ ಸೊಕ್ಕುವ ಮನುಜರನ್ನು ದಾಸರು ಕರೆದು ಇದರ ನಶ್ವರತೆಯನ್ನು ತಿಳಿ ಹೇಳಿ ಎಚ್ಚರಿಸಿದರು. ಈ ಭವಲೋಕದಲ್ಲಿ ಈಸಬೇಕು, ಇದ್ದು ಜೈಸಬೇಕು ಎಂದು ಸಾರಿದರು ಪುರಂದರದಾಸರು.
ಕುಲದ ಪಾವಿತ್ರ್ಯವನ್ನು ದಾಸರು ಪ್ರಶ್ನಿಸಿದರು. ಹೊಲೆಯನನ್ನು ಪುರಂದರದಾಸರು ಹೊಸದಾಗಿ ನಿರ್ವಚಿಸಿದರು. ಹೊಲೆಯ ಹೊರಗಿಹನೇ, ಊರೊಳಗಿಲ್ಲವೇ ಎಂಬ ಪ್ರಶ್ನೆಯಿಂದ ಹೊರಡುವ ಪುರಂದರದಾಸರು. ಹೊಲೆಯ ನಮ್ಮೊಳಗೇ ಇದ್ದಾನೆ ಎಂದು ಸ್ಪಷ್ಟಪಡಿಸಿದರು. ಶೀಲವನು ಕೈಗೊಂಡು ನಡೆಸದಾತನು ಹೊಲೆಯ, ಕೊಂಡ ಸಾಲವನು ತಿದ್ದದಾತನೇ ಹೊಲೆಯ, ಉಂಡ ಮನೆಗೆರಡು ಬಗೆವಾತ ಹೊಲೆಯ… ಎಂದರು.
ದೇವರು ಎಲ್ಲರೊಳಗೂ ಇದ್ದಾನೆ. ನಮ್ಮೊಳಗಿನ ದೇವರನ್ನು ಕಾಣಲು ಕಾಯೇನ ವಾಚಾ ಮನಸಾ ತ್ರಿಕರಣಶುದ್ಧಿ ಬೇಕು. ಕಾಯಶುದ್ಧಿಯೆಂದರೆ ಮೂರು ಹೊತ್ತು ನೀರಲ್ಲಿ ಮುಳುಗುವುದಲ್ಲ. ಹಾಗೆ ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ, ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ ಎಂದು ದಾಸರು ವ್ಯಂಗ್ಯವಾಡಿದ್ದಾರೆ. ಬಟ್ಟೆಯ ನೀರೊಳಗದ್ದಿ ಒಣಗಿಸಿ ಉಟ್ಟರೆ ಅದು ಮಡಿಯಲ್ಲ ಒಳಗಿನ ಕಾಮಕ್ರೋಧಗಳನ್ನು ಬಿಡುವುದು ಮಡಿಯು, ಅಹಂಕಾರ, ಮದಗಳನ್ನು ಮೀರುವುದು ಮಡಿಯು ಎಂದು ಮಡಿಯ ಮರುವ್ಯಾಖ್ಯಾನ ಮಾಡಿದ್ದಾರೆ.
ಕಪಟಿಗಳದು ಉದರ ವೈರಾಗ್ಯವೆಂದು ದಾಸರು ಟೀಕಿಸಿದ್ದಾರೆ. “ಜಗದೊಳಿರುವ ಮನುಜರೆಲ್ಲ ಹಗರಣವ ಮಾಡುವುದ ಕಂಡು, ಕಾಮ ಕ್ರೋಧ ಮನದೊಳಿಟ್ಟು ಕಂಡು’ ದಾಸರಿಗೆ ನಗೆಯು ಬರುತಿದೆ. ಮಾನವ ಮಾನವನಾಗಿ ಬದುಕಬೇಕಾದ ಬರೆಯನ್ನು ದಾಸರು ತೆರೆದಿಟ್ಟರು. ಇವತ್ತು ನಾವು ಬಂಗಲೆ ಇದ್ದರೆ ಭಾಗ್ಯ, ಕಾರು ಇದ್ದರೆ ಭಾಗ್ಯ, ಅಧಿಕಾರದ ಪೀಠ ಇದ್ದರೆ ಭಾಗ್ಯ ಎನ್ನುತ್ತೇವೆ. ದಾಸರು ಹೇಳುತ್ತಾರೆ ಇದಲ್ಲ ಭಾಗ್ಯ. ಹಾಗಾದರೆ ಯಾವುದು ಭಾಗ್ಯ? “ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಲ್ಲ ಪದುಮನಾಭನ ಪಾದ ಭಜನೆ ಸುಖವಲ್ಲ’ ಎನ್ನುತ್ತಾರೆ. ಲೌಕಿಕ ಭೋಗಭಾಗ್ಯಗಳೆಲ್ಲ ಲೊಳಲೊಟ್ಟೆಯೆಂದು ಸಾರಿದರು.
“ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’, “ಬಲ್ಲಿದ ನೀನೆಂದು ಬಡವರ ಬಡಿಯದಿರೆಚ್ಚರಿಗೆ’, “ರೊಕ್ಕ ಎರಡಕ್ಕೂ ದುಃಖ, “ದುಗ್ಗಾಣಿಯೆಂಬುದು ದುರ್ಜನ ಸಂಗ’, “ಮನು ಶೋಧಿಸಬೇಕು ನಿಚ್ಚ’, “ಬುದ್ಧಿಯಲಿ ತನುಮನವ ತಿದ್ದಿಕೊಳುತಿರಬೇಕು’, “ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ’, “ನಿಂದಕರಿರಬೇಕು ಹಂದಿ ಇದ್ದಾಂಗ’ ಎನ್ನುವಲ್ಲಿ ದಾಸರು ನೀಡುವ ತಿಳಿವಳಿಕೆ ನಮ್ಮ ಬದುಕಿನ “ಧರ್ಮ’ವಾಗಬೇಕು. ನಮ್ಮ ಭಾರತೀಯ ಸಾಂಸ್ಕೃತಿಕ ಬಹುದೊಡ್ಡ ದರ್ಶನವೇ ಅಸತ್ಯಕ್ಕೆ ಸತ್ಯದ, ಅಧರ್ಮಕ್ಕೆ ಧರ್ಮದ, ಅನ್ಯಾಯಕ್ಕೆ ನ್ಯಾಯದ, ಹಿಂಸೆಗೆ ಅಹಿಂಸೆಯ ಮುಖಾಮುಖೀಯಲ್ಲಿ. ನಾವಿಂದು ಯಾಂತ್ರಿಕತೆಯ ಅಂಗಳದಲ್ಲಿ ನಿಂತು ಅಂಗೈಯಲ್ಲಿ ಜಗತ್ತಿನ ಅರಮನೆ ಕಟ್ಟಿದ್ದೇವೆ. ಅದೇ ಹೊತ್ತಿಗೆ ಮಾನವಧರ್ಮ, ಮೌಲ್ಯವನ್ನು ಕಳೆದುಕೊಂಡಿದ್ದೇವೆ. ಜಾಗತೀಕರಣ ತಂದೊಡ್ಡುವ ಈ ಬಗೆಯ ಆತಂಕ, ತಲ್ಲಣ ಹಾಗೂ ಮನುಷ್ಯತ್ವದ ನಾಶಕ್ಕೆ ಮುಖಾಮುಖೀಯಾಗುವಲ್ಲಿ ದಾಸದರ್ಶನ ಸೂಕ್ತ ಮಾಧ್ಯಮವಾಗಬಲ್ಲದು. ಇದು ಇಂದಿಗೂ ಎಂದೆಂದಿಗೂ ಪ್ರಸ್ತುತವಾದುದು.
– ಡಾ| ಗಾಯತ್ರೀ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.