ತನ್ನಿಮಿತ್ತ : ಶಾಸ್ತ್ರ, ಆರೋಗ್ಯ ಕಾಳಜಿಯ ದೀಪಾವಳಿ
Team Udayavani, Nov 14, 2020, 6:25 AM IST
ನ. 13ರಿಂದ ಮೊದಲ್ಗೊಂಡು 16ರ ತನಕ ನೀರು ತುಂಬುವ, ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವ, ಭೂತಾಯಿ ಉತ್ಪಾದಿಸಿದ ಧಾನ್ಯಗಳಿಗೆ ಮತ್ತು ಧಾನ್ಯಗಳನ್ನು ನೀಡಿದ ಭೂತಾಯಿಗೆ ಪೂಜಿಸುವ, ಮನೆ ತುಂಬೆಲ್ಲ (ಒಂದರ್ಥದಲ್ಲಿ ವಿಶ್ವ/ಆಕಾಶಕ್ಕೆ) ದೀಪ ಬೆಳಗಿಸಿ ಕೃತಜ್ಞತೆ ಸಲ್ಲಿಸುವ, ಗೋವುಗಳಿಗೆ ಪೂಜೆ ಸಲ್ಲಿಸುವ ಹೀಗೆ ಹಬ್ಬಗಳ ಸರಮಾಲೆಯೇ ದೀಪಾವಳಿ ಸುಸಂದರ್ಭದಲ್ಲಿ ಘಟಿಸುತ್ತಿದೆ. ಇತರೆಲ್ಲ ವರ್ಷಗಳ ದೀಪಾವಳಿಗಿಂತ ಈ ವರ್ಷದ್ದು ಭಿನ್ನವಾಗಿದೆ. ಕೊರೊನಾ ಮಹಾಮಾರಿಯ ಬಳಿಕ ಮತ್ತೆ ಬದುಕು ಚೇತರಿಸಿಕೊಳ್ಳುವುದಕ್ಕೆ ಈ ದೀಪಾವಳಿ ಮುನ್ನುಡಿಯಾಗುತ್ತಿದೆ.
ದೀಪಾವಳಿ ಹಬ್ಬದಲ್ಲಿ ಮುಖ್ಯವಾಗಿ ಕೃಷಿಕರ ಸಂಭ್ರಮ ಕಂಡುಬರುತ್ತದೆ. ಕೃಷಿಕರೆಂದರೆ ಶ್ರಮಿಕರೂ ಆಗಿರುವುದರಿಂದ ಇದು ಶ್ರಮಿಕರ ಸಂಭ್ರಮವಾಗಿದೆ. ಹೀಗಾಗಿ ಇಲ್ಲಿ ಮಂತ್ರ- ತಂತ್ರಕ್ಕಿಂತ ಭಾವನೆಗಳೇ ಮುಖ್ಯವಾಗಿವೆ. ಇಷ್ಟೇ ಅಲ್ಲದೆ ಜೀವನವನ್ನೇ ಪೂಜೆಯಾಗಿ ಮಾಡುವ, ಧರ್ಮದ ಮೂಲಕ ಆರೋಗ್ಯ ಕಾಳಜಿಯನ್ನೂ ತೋರಿಸುವ ಹಬ್ಬವಾಗಿದೆ.
ಪೂಜೆ ಅಂದರೆ ಏನು ಎಂಬ ಚಿಂತನೆ ನಡೆಸಿದರೆ ನಮ್ಮ ಬದುಕಿಗೆ ಎಲ್ಲವನ್ನೂ ಕೊಟ್ಟ ಶಕ್ತಿಗೆ ಕೃತಜ್ಞತೆ ಸಲ್ಲಿಸುವುದು ಎಂಬರ್ಥವನ್ನು ಜ್ಞಾನಿಗಳು ನೀಡಿದ್ದಾರೆ. ನಾವು ಯಾವುದನ್ನು ಯಾರಿಂದ ಪಡೆದುಕೊಂಡಿದ್ದೇವೋ ಅವುಗಳಿಗೆ / ಅವರಿಗೆ ಪೂಜೆ ಸಲ್ಲಿಸುವುದೆಂದರೆ ಆಭಾರ ಮನ್ನಿಸುವಿಕೆ ಎಂದೂ ಹೇಳಬಹುದು. ಇಲ್ಲಿ ದೇವರೆಂದರೆ ದೇವರು/ ಪ್ರಕೃತಿ ಎಂದರೆ ಪ್ರಕೃತಿ. ನಾವು ವ್ಯಾವಹಾರಿಕ ಬದುಕಿನಲ್ಲಿಯೂ ಇದನ್ನೇ ಮಾಡುವುದಲ್ಲವೆ?
ಧನ-ಧಾನ್ಯ ಪೂಜೆ
ಕೆಲವು ಕಡೆ ನರಕ ಚತುರ್ದಶಿ ದಿನ ಇನ್ನು ಕೆಲವು ಕಡೆ ಮರುದಿನ ದೀಪಾರಾಧನೆ ನಡೆಯು ತ್ತದೆ. ಮೊದಲ ಬೆಳೆಯಾದ ಭತ್ತದ ಪೈರನ್ನು ಈಗಾಗಲೇ ಕೊಯ್ದು ಮನೆಯೊಳಗೆ ತಂದಿರಿಸ ಲಾಗಿರುತ್ತದೆ. ಹಿಂದಿನ ಕಾಲದಲ್ಲಿ ಒಪ್ಪ ಓರಣದಿಂದ ಕೂಡಿದ “ತಿರಿ’ಯನ್ನು (ಭತ್ತ ಸಂಗ್ರಹದ ಒಂದು ಕಲೆ) ಕಟ್ಟುತ್ತಿದ್ದರು. ಈಗ “ತಿರಿ’ಯನ್ನು ಕಟ್ಟಲು ಬೇಕಾದಷ್ಟು ಭತ್ತದ ಸಂಗ್ರಹವಿದ್ದಿರುವುದಿಲ್ಲ. ಇದಕ್ಕೆ ಕಡಿಮೆ ಹಿಡುವಳಿ ಕಾರಣ. ಆದರೂ ಸಾಂಕೇತಿಕವಾಗಿ ಇರಿಸಿದ ಭತ್ತದ ರಾಶಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ವಾಡಿಕೆಯಲ್ಲಿ ಧನ-ಧಾನ್ಯ ಪೂಜೆ ಎಂದು ಕರೆಯುತ್ತಾರೆ. ಧಾನ್ಯವೂ ಸಂಪತ್ತು ಎಂದು ಪರಿಗಣಿಸಿದ್ದರಿಂದ ಇಂತಹ ಆರಾಧನಕ್ರಮ ಚಾಲ್ತಿಗೆ ಬಂದಿದೆ. ಇದರ ಇನ್ನೊಂದು ರೂಪವಾದ ಧನಲಕ್ಷ್ಮೀ ಪೂಜೆ ವಿವಿಧ ವರ್ಗಗಳಲ್ಲಿ ಇದೆ. ಮುಖ್ಯವಾಗಿ ವ್ಯಾಪಾರಿ ಸಂಸ್ಥಾಪನೆಗಳಲ್ಲಿ “ಅಂಗಡಿ ಪೂಜೆ’ ಹೆಸರಿನಲ್ಲಿ ಲಕ್ಷ್ಮೀ ಪೂಜೆ ಸಂಪನ್ನಗೊಳ್ಳುತ್ತದೆ.
ಗದ್ದೆಗೆ ದೀಪ, ಬಲೀಂದ್ರನಿಗೆ ಕರೆ
ಮುಸ್ಸಂಜೆ ವೇಳೆ ಮನೆಯ ಎಲ್ಲ ಕಡೆ ಹಣತೆಯ ದೀಪವನ್ನು ಬೆಳಗಿಸುತ್ತಾರೆ. ಗದ್ದೆಗಳಿಗೆ ದೀಪವಿಟ್ಟು ಪೂಜಿಸುವ ಕ್ರಮ ನಡೆಯುತ್ತದೆ. ಅವಲಕ್ಕಿ, ವೀಳ್ಯದ ಎಲೆ, ಅಡಿಕೆಯನ್ನು ನಮಗೆ ಆಹಾರಧಾನ್ಯ ಮತ್ತು ವಸತಿ ಅವಕಾಶ ನೀಡಿದ ಭೂತಾಯಿಗೆ ನಿವೇದಿಸಿ ಬಲೀಂದ್ರನನ್ನು ಕರೆಯು ತ್ತಾರೆ. ಬಲೀಂದ್ರನನ್ನು ಕನ್ನಡದ ಪ್ರದೇಶದಲ್ಲಿ ಕನ್ನಡದಲ್ಲಿಯೂ, ತುಳು ಪ್ರದೇಶದಲ್ಲಿ ತುಳುವಿನಲ್ಲಿಯೂ ಕರೆಯುತ್ತಾರೆ. ಈ ಸಂದರ್ಭ ಗದ್ದೆಯಲ್ಲಿ ದೊಂದಿಯನ್ನು ಬೆಳಗಿಸುತ್ತಾರೆ. ಈ ದೊಂದಿಗೆ ಹಿಂದಿನ ಕಾಲದಲ್ಲಿ ಹೊನ್ನೆಣ್ಣೆಯನ್ನು ಬಳಸುತ್ತಿದ್ದರು. ವಿದ್ಯುತ್ ಬರುವ ಮುನ್ನ ಮನೆಗಳಲ್ಲಿ ರಾತ್ರಿಯ ದೀಪಕ್ಕೂ ಇದೇ ಎಣ್ಣೆಯನ್ನು ಬಳಸುತ್ತಿದ್ದರು. ಸೀಮೆ ಎಣ್ಣೆ ದೀಪವಿದ್ದರೂ ಹೊನ್ನೆಣ್ಣೆ ದೀಪ ಕಣ್ಣಿಗೂ (ದೃಷ್ಟಿಗೆ) ಉತ್ತಮ ಎಂದು ಹಿರಿಯರು ಹೇಳುತ್ತಿದ್ದರು. ಹೊನ್ನೆಣ್ಣೆ ತಂಪಾದ ಕಾರಣ ಈ ಎಣ್ಣೆಯ ದೀಪ ಪರಿಸರದ ಮೇಲೆ ಮತ್ತು ಭೂಮಿಯ ಮೇಲೂ ಉತ್ತಮ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಈಗ ಹೊನ್ನೆ ಕಾಯಿಗಳು ಅಪರೂಪವಾಗಿವೆ. ಕೆ.ಜಿ.ಯೊಂದಕ್ಕೆ ದರ 65-70 ರೂ., ಹೊನ್ನೆಣ್ಣೆ ದರ ಕೆ.ಜಿ.ಯೊಂದಕ್ಕೆ 155 ರೂ. ಇದೆ. ಒಂದಾನೊಂದು ಕಾಲದಲ್ಲಿ ಬಹಳ ಆಗ್ಗವಾಗಿದ್ದ ಹೊನ್ನೆಣ್ಣೆ ಈಗ ಹಣ ಕೊಟ್ಟರೂ ಸಿಗದ ಸ್ಥಿತಿ ಇದೆ. “ಅಭಿವೃದ್ಧಿ ನಾಗಾಲೋಟ’ದ ದುಷ್ಪರಿಣಾಮಗಳಲ್ಲಿ ಇದೂ ಒಂದು.
ಆರೋಗ್ಯಾಧಿಪತಿ ಧನ್ವಂತರಿ ಜಯಂತಿ
ಆಯುರ್ವೇದದ ಮೂಲಪ್ರವರ್ತಕ ಧನ್ವಂತರಿ. ಧನ್ವಂತರಿ ಜಯಂತಿಯನ್ನು ಕಾರ್ತಿಕ ಮಾಸದ ಕೃಷ್ಣಪಕ್ಷದ ತ್ರಯೋದಶಿಯಂದು ಆಚರಿಸಲಾಗುತ್ತದೆ. ಇದೇ ದಿನವನ್ನು ರಾಷ್ಟ್ರೀಯ ಆಯುರ್ವೇದ ದಿನವೆಂದು ಕೇಂದ್ರ ಸರಕಾರದ ಆಯುಷ್ ಇಲಾಖೆ 2016ರಿಂದ ಆಚರಿಸಿಕೊಂಡು ಬರುತ್ತಿದೆ. ಧನ್ವಂತರಿ ಜಯಂತಿಯನ್ನು ಉತ್ತರ ಭಾರತದಲ್ಲಿ ನ. 13ರಂದು ಮತ್ತು ದಕ್ಷಿಣ ಭಾರತದಲ್ಲಿ ಡಿ. 12ರಂದು ಆಚರಿಸಲಾಗುತ್ತದೆ. ಸಮುದ್ರಮಥನ ನಡೆಯುವಾಗ ಬರುವ ಧನ್ವಂತರಿ ಪೌರಾಣಿಕ ಉಲ್ಲೇಖವಾದರೆ, ಕಾಶೀರಾಜ ದಿವೋದಾಸನ ವಂಶದಲ್ಲಿ ಬರುವ ಧನ್ವಂತರಿಯನ್ನು ಸುಶ್ರುತ ಮೊದಲಾದ ಆಯುರ್ವೇದ ಆಚಾರ್ಯರು ಗುರುವಾಗಿ ಪರಿಗಣಿಸಿ ಗುರುವಿನ ಅಮೃತವಾಣಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಿದ್ದಾರೆ. ದಿವೋದಾಸನ ವಂಶಸ್ಥ ಧನ್ವಂತರಿಯೂ ಹಿಂದೆ ಸಮುದ್ರಮಥನ ಕಾಲದಲ್ಲಿ ಬಂದಿರುವುದನ್ನು ಉಲ್ಲೇಖೀಸುವ ಮೂಲಕ ಪುರಾಣದ ಕೊಂಡಿಯನ್ನು ಪುಷ್ಟೀಕರಿ ಸುತ್ತಾನೆ. ಈಗಲೂ ಆರೋಗ್ಯಾಧಿಪತಿ ಧನ್ವಂತರಿ ಯನ್ನು ಆರಾಧಿಸುವ ಕ್ರಮ ಚಾಲ್ತಿಯಲ್ಲಿದೆ.
ಗೋಮಯ-ಮಣ್ಣಿನ ಹಣತೆ
ನಾಗಾಲೋಟದ ಅಭಿವೃದ್ಧಿಯಿಂದ ಪರಿಸರ ಮಾಲಿನ್ಯ ವಿಪರೀತವಾಗಿದ್ದರೂ ಈಗ ಒಂದಿಷ್ಟು ಪರಿಸರ ಜಾಗೃತಿ ಉಂಟಾಗುತ್ತಿದೆ. ಇದರ ಪರಿಣಾಮ ಗೋಮಯ ಮತ್ತು ಮಣ್ಣಿನ ಹಣತೆಗಳು ಜನಪ್ರಿಯತೆಯನ್ನು ಗಳಿಸುತ್ತಿದೆ. ಸಾವಿರಾರು ಗೋಮಯ ಹಣತೆಗಳನ್ನು ಯಾವುದೇ ಲಾಭವಿಲ್ಲದೆ ಜನರಿಗೆ ತಲುಪಿಸುವ ಕೆಲಸವನ್ನು ರಾಜ್ಯಾದ್ಯಂತ ವಿವಿಧ ಭಾಗ ಗ ಳಲ್ಲಿ ವಿವಿಧ ಸಂಘಟನೆಗಳು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿವೆ.
ಆತ್ಮನಿರ್ಭರ ಭಾರತ ಕಲ್ಪನೆಯಂತೆ ಇಂದು ಹಳ್ಳಿಗಳಿಂದ ನಗರಗಳವರೆಗೂ ಜನರು ದೇಶೀಯ ಉತ್ಪನ್ನಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ. ಪ್ಲಾಸ್ಟಿಕ್ ಮೂಲದ ಮತ್ತು ಚೀನ ದೇಶದ ಉತ್ಪನ್ನಗಳಿಗೆ ದೇಶದಲ್ಲಿ ಇದೇ ಮೊದಲ ಬಾರಿಗೆ ಬೇಡಿಕೆ ತೀರಾ ಇಳಿಕೆಯಾಗಿದೆ. ಇದು ದೇಶದ ಆರ್ಥಿಕತೆಗೂ ಪೂರಕವಾಗಿದೆ.
ಗೋಪೂಜೆ, ತುಳಸೀ ಪೂಜೆ
ದೀಪಾರಾಧನೆ ಮರುದಿನ ಗೋಪೂಜೆ ನಡೆಯುತ್ತದೆ. ಇತ್ತೀಚಿಗೆ ಗೋವುಗಳ ಸಂಖ್ಯೆ ಇಳಿಮುಖವಾದರೂ ಹಿಂದೆಂದಿಗಿಂತ ಹೆಚ್ಚು ಗೋ ಸಂಬಂಧಿತ ಪ್ರಯೋಜನ ಕುರಿತು ವಿಶೇಷ ವೈಜ್ಞಾನಿಕ ಸಂಶೋಧನೆ, ಪ್ರಕಟನೆ ನಡೆಯುತ್ತಿದೆ. ಇದೇ ದಿನ ತುಳಸೀ ಸನ್ನಿಧಿಯಲ್ಲಿ
ಶ್ರೀಮನ್ನಾರಾಯಣನನ್ನು ಪೂಜಿಸುವ ತುಳಸೀ ಪೂಜೆಯೂ ಆರಂಭಗೊಂಡು ಉತ್ಥಾನದ್ವಾದಶಿ ಯವರೆಗೆ ನಡೆಯುತ್ತದೆ.
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.