ಸೂಪರ್‌ಸ್ಟಾರ್ ಸಿಂಗರ್ ಆದ ಭಿಕ್ಷುಕಿ!
ಬದುಕಿನ ಹಳಿ ಬದಲಾಯಿಸಿದ ಹಾಡು
Team Udayavani, Aug 30, 2019, 5:22 AM IST
ಪಶ್ಚಿಮ ಬಂಗಾಳದ ರಾನಾಘಾಟ್ ರೈಲ್ವೇ ಸ್ಟೇಶನ್‌ನ ಪ್ಲಾಟ್‌ಫಾರಂಗಳಲ್ಲಿ ಹಾಡುತ್ತಿದ್ದ ಈಕೆ ಇಂದು ಕೋಟ್ಯಂತರ ಮಂದಿಯ ಮೊಬೈಲುಗಳಲ್ಲಿ ಗುನುಗುತ್ತಿದ್ದಾರೆ. ಅಷ್ಟೇ ಅಲ್ಲ ಈಕೆಯಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿದ ಸಂಗೀತ ನಿರ್ದೇಶಕ ಹಿಮೇಶ್ ರೇಷಮಿಯಾ ಕರೆದೊಯ್ದು ತಮ್ಮ ಸ್ಟುಡಿಯೋದಲ್ಲಿ ಹಾಡಿಸಿ ತಮ್ಮ ಮುಂಬರುವ ಹ್ಯಾಪಿ ಹಾರ್ಡಿ ಆ್ಯಂಡ್ ಹೀರ್ ಎಂಬ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ. ಐದೋ ಹತ್ತೋ ರೂಪಾಯಿಗಳನ್ನು ರೈಲ್ವೇ ಪ್ರಯಾಣಿಕರಿಂದ ಕೈಯೊಡ್ಡಿ ಬೇಡಿ ಪಡೆಯುತ್ತಿದ್ದ ಈಕೆಗೆ ಆ ಒಂದು ಹಾಡಿಗೆ ದೊರೆತ ಸಂಭಾವನೆ 7 ಲಕ್ಷ ರೂ.! ಅಷ್ಟೇ ಅಲ್ಲ ಧ್ವನಿಮುದ್ರಿತ ಆ ಹಾಡನ್ನು, ಈಕೆಯ ಕರುಣಾಜನಕ ಕಥೆಯನ್ನು ಕೇಳಿ ನಟ ಸಲ್ಮಾನ್ ಖಾನ್ ಬರೋಬ್ಬರಿ 55 ಲಕ್ಷ ರೂ.ಗಳ ಮನೆಯನ್ನು ಕೊಡುವುದಾಗಿ ಘೋಷಿಸಿದ್ದಾರೆ ಎಂಬ ಸುದ್ದಿ ಸಾಮಾ ಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಹೀಗೆ ಜನ ಮೊಬೈಲ್‌ನಲ್ಲಿ ನೋಡನೋಡುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ರಾತೋರಾತ್ರಿ ಧಿಗ್ಗನೆ ಫೇಮಸ್ ಆದವರು ರಾನು ಮೊಂಡಲ್. ಈಕೆ ಹಾಡಿದ ಲತಾ ಮಂಗೇಶ್ಕರ್ ಕಂಠದ ಲಕ್ಷ್ಮೀಕಾಂತ್ ಪ್ಯಾರೇಲಾಲ್ ಸಂಗೀತ ನಿರ್ದೇಶನದ ಏಕ್ ಪ್ಯಾರ್ ಕಾ ನಗ್ಮಾ ಹೈ… ಹಾಡು ಈಗಲೂ ಕೋಟ್ಯಂತರ ಜನರ ಕಿವಿಗಳಲ್ಲಿ ಅನುರಣಿಸುತ್ತಿದೆ. ಇಷ್ಟಕ್ಕೂ ಈಕೆ ಸ್ಟುಡಿಯೋದಲ್ಲಿ ಹಾಡಿದ ಹಾಡು ಹೇಗಾಗಿದೆ ಎಂದು ಯೂಟ್ಯೂಬಿನಲ್ಲಿ ನೋಡಲು ಈಕೆಯ ಬಳಿ ಸ್ಮಾರ್ಟ್‌ಫೋನ್ ಕೂಡಾ ಇರಲಿಲ್ಲ. ರಿಯಾಲಿಟಿ ಶೋದಲ್ಲಿ ಕೂಡಾ ಈಕೆ ಹಾಡಿದ್ದು, ಪ್ರಸಾರವನ್ನು ನೋಡೋಣ ಎಂದರೆ ಈಕೆಯ ಮನೆಯಲ್ಲಿ ಟಿವಿಯೇ ಇಲ್ಲ. ಅಸಲಿಗೆ ಈಕೆಗೆ ಸ್ಥಿರವಾದ ಒಂದು ಮನೆಯೇ ಇಲ್ಲ. ಹಾಗಾದರೆ ಈಕೆ ಯಾರು, ಈಕೆಗೆ ದಿಢೀರ್ ಪ್ರಸಿದ್ಧಿ ಹೇಗೆ ಬಂತು ಅಂತ ನೋಡಬೇಕಾದರೆ ನಾವು ಈಕೆಯ ಕಥೆಯನ್ನು ಕೇಳಬೇಕು.
ಅನಾಮಿಕಳಾಗಿದ್ದು ತಿರುಪೆ ಎತ್ತುತ್ತಾ ಹಾಡು ಹಾಡುತ್ತಾ ಹಣ ಸಂಗ್ರಹಿಸಿ ಬದುಕಿನ ಬಂಡಿ ಸಾಗಿಸುತ್ತಾ ಒಂದೇ ಒಂದು ಹಾಡಿನ ಮೂಲಕ ಬದುಕಿನ ಹಳಿಯನ್ನೇ ಬದಲಾಯಿಸಿ, ಈಗ ಖ್ಯಾತಿ ಗಳಿಸಿದ ಈಕೆಯ ಬಾಯಿಯಲ್ಲೇ ಕೇಳ್ಳೋದಾದರೆ; ರಾನಾಘಾಟ್‌ನ ಲತಾ ಎಂದೇ ಕರೆಯಲ್ಪಡುವ ಈಕೆ ಪಶ್ಚಿಮ ಬಂಗಾಳದ ಕೃಷ್ಣನಗರದಲ್ಲಿ ಜನಿಸಿದರು. ಬಾಲ್ಯವನ್ನು ತನ್ನ ಅತ್ತೆಯ ಜತೆ ಕಳೆದ ಈಕೆ ಯೌವನಕ್ಕೆ ತಲುಪುವ ವೇಳೆಗೆ ತಾಯಿಯನ್ನು ಕಳೆದುಕೊಳ್ಳಬೇಕಾಗಿ ಬಂತು. 19ನೆಯ ವಯಸ್ಸಿಗೆ ವಿವಾಹವಾಯಿತು. ಮದುವೆಯ ತರುವಾಯ ದಂಪತಿ ಮುಂಬಯಿಗೆ ತೆರಳಿದರು. ಒಂದು ದುರ್ದಿನದಲ್ಲಿ ಪತಿಯನ್ನು ಕಳೆದುಕೊಂಡು ರಾನಾಘಾಟ್‌ಗೆ ಬರಬೇಕಾಗಿ ಬಂತು. ಈಗ 50ರ ಹರೆಯದ ರಾನು ಮೊಂಡಲ್ ರಾನಾಘಾಟ್ ರೈಲು ನಿಲ್ದಾಣದಲ್ಲಿ ಹಾಡು ಹಾಡಿ ಭಿಕ್ಷೆ ಬೇಡಿ ಪ್ರಯಾಣಿಕರು ನೀಡಿದ ಹಣದಲ್ಲಿ ದಿನಕಳೆಯುತ್ತಿದ್ದರು. ತಲೆ ಮೇಲೊಂದು ಸೂರು ಕೂಡಾ ಇರಲಿಲ್ಲ.
ಸೋಷಿಯಲ್ ಮೀಡಿಯಾ
ಆ ದಿನ ಜು.23ನೆಯ ತಾರೀಕು. ರಾನಾಘಾಟ್ ರೈಲು ನಿಲ್ದಾಣದಲ್ಲಿ ಅತೀಂದ್ರ ಚಕ್ರವರ್ತಿ ಎಂಬ 26 ವಯಸ್ಸಿನ ತರುಣ ಎಂಜಿನಿಯರ್ ಈಕೆಯನ್ನು ನೋಡಿ ಹಾಡುವುದನ್ನು ಕೇಳಿ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಕೆಲವೇ ದಿನಗಳಲ್ಲಿ ಈ ವಿಡಿಯೋ 25 ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿತು. 50 ಸಾವಿರ ಲೈಕ್‌ಗಳು ದೊರೆತವು. ಈಕೆಯ ಕೋಮಲ ಧ್ವನಿಯನ್ನು ಜನ ಲತಾ ಮಂಗೇಶ್ಕರ್ ಅವರ ಧ್ವನಿಗೆ ಹೋಲಿಸಿ ಪ್ರಶಂಸಿಸತೊಡಗಿದರು. ಅಲ್ಲಿಂದ ಈಕೆಯ ಬದುಕಿನ ದಿಕ್ಕೇ ಬದಲಾಯಿತು.
ಅತೀಂದ್ರ ಹೇಳುವ ಪ್ರಕಾರ;ಪ್ಲಾಟ್‌ಫಾರಂ ನಂ.6ರಲ್ಲಿ ನಾನು ಗೆಳೆಯರ ಜತೆ ಚಹಾ ಸೇವಿಸುತ್ತಿದ್ದೆ. ದೂರದಲ್ಲಿ ಮೊಹಮ್ಮದ್ ರಫಿಯ ಹಾಡನ್ನು ರೇಡಿಯೋದಲ್ಲಿ ಪ್ರಸಾರ ಮಾಡುತ್ತಿದ್ದರು. ಹಾಡು ಸಣ್ಣದಾಗುತ್ತಿದ್ದಂತೆಯೇ ಪ್ಲಾಟ್‌ಫಾರಂನಲ್ಲಿ ನೆಲದಲ್ಲಿ ಕುಳಿತ ಮಹಿಳೆಯೊಬ್ಬರು ಅದೇ ಹಾಡನ್ನು ಧ್ವನಿಸುತ್ತಿದ್ದುದು ಕೇಳಿತು. ನಾನು ಆಕೆಯ ಬಳಿ ನಮಗಾಗಿ ಒಂದು ಹಾಡು ಹಾಡಬಹುದೇ ಎಂದು ಕೇಳಿದೆ. ಆಕೆ ಅತ್ಯಂತ ಮಾಧುರ್ಯದಿಂದ ಹಾಡಿದ ಹಾಡನ್ನೇ ನಾನು ಮೊಬೈಲ್‌ನಲ್ಲಿ ಚಿತ್ರಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟೆ.
ಹಿಮೇಶ್ ಹೇಗೆ ಗುರುತಿಸಿದರು?
ಜಾಲತಾಣದಲ್ಲಿ ಜನಪ್ರಿಯರಾಗುತ್ತಿದ್ದ ರಾನು ಅವರನ್ನು ಗುರುತಿಸಿದ ಸೋನಿ ಟಿವಿ ತನ್ನ ಸುಪರ್‌ಸ್ಟಾರ್ ಸಿಂಗರ್ ರಿಯಾಲಿಟಿ ಶೋಗೆ ಕರೆಸಿ ಹಾಡಿಸಿತು. ಕಾರ್ಯಕ್ರಮ ಪ್ರಸಾರವಾಗುವ ಟೀಸರ್‌ನ್ನು ಪ್ರಸಾರ ಮಾಡತೊಡಗಿತು. ಅದೇ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ಹಿಮೇಶ್ ರೇಷಮಿಯಾ ಅವರು ಈಕೆಗೆ ಸಿನಿಮಾದಲ್ಲಿ ಹಾಡಲು ಅವಕಾಶ ಕೊಟ್ಟರು. ಸಲ್ಮಾನ್ ಖಾನ್ ಅವರ ತಂದೆ ಸಲೀಮ್ ಅವರು ಹೇಳಿದ ಮಾತನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾರೆ. ನಾವು ಒಂದು ಪ್ರಭಾವರ್ತುಲದಲ್ಲಿ ಮುನ್ನ°ಲೆಗೆ ಬಂದ ಬಳಿಕ ಪ್ರತಿಭೆಯುಳ್ಳ ಇನ್ನೊಂದು ವ್ಯಕ್ತಿಗೆ ಅವಕಾಶ ನೀಡಲು ಮರೆಯಬಾರದು ಎಂದು. ಈಕೆಗೆ ದೇವರು ನೀಡಿದ ಅದ್ಭುತ ಸ್ವರ ಇದೆ. ಅವಕಾಶ ಮಾತ್ರ ದೊರೆತಿರಲಿಲ್ಲ. ಈಗ ನನ್ನ ಸಿನಿಮಾದಲ್ಲಿ ಹಾಡುವ ಮೂಲಕ ಈಕೆಯ ಧ್ವನಿ ಸೌಂದರ್ಯ ಎಲ್ಲರಿಗೂ ತಲುಪಲಿದೆ. ಈಕೆಗೆ ಒಳ್ಳೆಯದು ಮಾಡು ಎಂದು ದೇವರಲ್ಲಿ ಪ್ರಾರ್ಥಿಸುವುದರ ಹೊರತಾಗಿ ಬೇರೇನೂ ನನಗೆ ತೋಚಲಿಲ್ಲ . ಬಾಲಿವುಡ್‌ನಲ್ಲಿ ಈಕೆಯ ಬೆಳವಣಿಗೆಯನ್ನು ಇನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎನ್ನುತ್ತಾರೆ ರೇಷಮಿಯಾ.
ಈಗ…
ಸೋಷಿಯಲ್ ಮೀಡಿಯಾದಲ್ಲಿ ಈಕೆ ಪ್ರಸಿದ್ಧಿ ಪಡೆದ ಬಳಿಕ ಒಂದು ಸ್ವಯಂ ಸೇವಾ ಸಂಸ್ಥೆ ಈಕೆಯ ಬಾಳಿಗೆ ನೆರವಾಗಲು ಮುಂದೆ ಬಂದಿದೆ. ಹಿಮೇಶ್ ಅವರು 7 ಲಕ್ಷ ರೂ. ಸಂಭಾವನೆ ನೀಡಿದ್ದಾರೆ. ಈ ಮೊತ್ತವನ್ನು ರಾನು ವಿನಯದಿಂದ ನಿರಾಕರಿಸಿದ್ದರು. ಆದರೆ ಹಿಮೇಶ್ ಅವರು ಒತ್ತಾಯಪೂರ್ವಕವಾಗಿ ನೀಡಿದ್ದಾರೆ. ಸಲ್ಮಾನ್ ಖಾನ್ 55 ಲಕ್ಷ ರೂ.ಗಳ ಮನೆ ನೀಡುತ್ತಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಅಷ್ಟೇ ಅಲ್ಲ 10 ವರ್ಷಗಳಿಂದ ಈಕೆಯಿಂದ ದೂರವಾಗಿದ್ದ ಈಕೆಯ ಪುತ್ರಿ ಸೋಷಿಯಲ್ ಮೀಡಿಯಾದಲ್ಲಿ ಈಕೆಯನ್ನು ಗುರುತಿಸಿ ಜತೆಯಾಗಿದ್ದಾರೆ.
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Odisha: 18ನೇ ಪ್ರವಾಸಿ ಭಾರತೀಯ ದಿವಸ್ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೆ ಚಾಲನೆ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.