ಒಂದು ಅಮರಾವತಿಯೆಂಬ ಕನಸಿನಲ್ಲಿ ಎಷ್ಟು ನಗರಗಳಿವೆ ಗೊತ್ತೇ?
Team Udayavani, Feb 24, 2018, 1:14 PM IST
ನಗರ ಪರಂಪರೆ ನಮಗೆ ಹೊಸದಲ್ಲ. ಗ್ರಾಮೀಣ ಪ್ರದೇಶ, ಕೃಷಿ ಪ್ರದೇಶವೆಂದು ನಮ್ಮ ದೇಶ ಎಲ್ಲೆಡೆ ಜನಪ್ರಿಯವಾಗಿದ್ದರೂ ಅದರೊಟ್ಟಿಗೇ ಹತ್ತಾರು ನಗರಗಳು ಬೆಳೆದಿವೆ, ಬಾಳಿವೆ ಹಾಗೂ ಬಾಳುತ್ತಿವೆ. ಹರಪ್ಪ ಸಂಸ್ಕೃತಿಯ ನಗರವೂ ದೇಶದ ಸಿಂಧೂ ನದಿಯ ಪ್ರದೇಶದಲ್ಲಿದ್ದದ್ದು. ಮುಂಬಯಿ, ಕೋಲ್ಕತ್ತಾ, ಚೆನ್ನೈ, ಬೆಂಗಳೂರಿನಿಂದ ಹಿಡಿದು ಹತ್ತಾರು ನಗರಗಳು ಅವತರಿಸಿರುವುದು ಇಂಥ ಕೃಷಿ ನೆಲದ ಭಾರತದಲ್ಲೇ ಎಂಬುದು ನಿರ್ವಿವಾದ ಸಂಗತಿ. ಆದರೆ ಒಂದು ನಗರ ಸೃಷ್ಟಿಯಾಗುವುದು ಕುತೂಹಲದ ಸಂಗತಿಯೋ ಅಥವಾ ಒಂದು ನಗರವನ್ನು ಸೃಷ್ಟಿಸುವುದು (ರೂಪಿಸುವುದು) ಕೌತುಕವೋ ಎಂಬ ಪ್ರಶ್ನೆ ಉದ್ಭವಿಸಿದರೆ, ಒಂದು ನಗರವನ್ನು ಸೃಷ್ಟಿಸುವುದೇ ದೊಡ್ಡ ಕೌತುಕ ಎಂದೇ ಅನಿಸುತ್ತದೆ. ನೂರಾರು ವರ್ಷಗಳ ಭವಿಷ್ಯದ ನೆಲೆಯಲ್ಲಿ ಮೂಡುವ ಕನಸು ಹಾಗೂ ಅದನ್ನು ಯಥಾವತ್ತಾಗಿ (ಕೊನೇ ಪಕ್ಷ ಶೇ. 90 ರಷ್ಟಾದರೂ) ವಾಸ್ತವಕ್ಕೆ ಇಳಿಸುವುದಕ್ಕೆ ಹಾಕಬೇಕಾದ ಪರಿಶ್ರಮ ಎರಡೂ ಅನನ್ಯವೇ. ಹಾಗೆ ಹೇಳುವುದಾದರೆ ಕನಸು ಕಾಣುವುದಕ್ಕಿಂತ ಅದನ್ನು ನನಸು ಮಾಡುವುದೇ ಹೆಚ್ಚುಗಾರಿಕೆ ಎಂಬುದು ನನ್ನ ಅಭಿಪ್ರಾಯ.
ಐವತ್ತು ವರ್ಷಗಳ ಹಿಂದೆ ಕೇವಲ ಉದ್ಯಮ ಹಾಗೂ ಕೈಗಾರಿಕೆ ಗಳನ್ನೇ ಆಧರಿಸಿ ಬೆಳೆದಿದ್ದ ನಗರಗಳ ಕಲ್ಪನೆಯೇ ಬೇರೆ. ಈ ಹೊತ್ತಿನ ತಂತ್ರಜ್ಞಾನ ಯುಗದಲ್ಲಿನ ನಗರಗಳ ಕಲ್ಪನೆಯೇ ಬೇರೆ. ಎಷ್ಟು ವಿಚಿತ್ರವೆಂದರೆ, ಕೈಗಾರಿಕೆಗಳಿಲ್ಲದೇ ನಗರವೊಂದು ಸೃಷ್ಟಿಯಾಗುವ ಸಾಧ್ಯತೆಯೇ ಇಲ್ಲ ಎಂಬ ಅಚಲವಾದ ನಂಬಿಕೆ ಇದೇ ಐವತ್ತು ವರ್ಷಗಳ ಹಿಂದಿತ್ತು. ನಮ್ಮ ಎಲ್ಲ ನಗರಗಳಲ್ಲೂ ಇದರ ಛಾಯೆಯೇ
ಬಲವಾಗಿ ಕಾಣುತ್ತದೆ. ಕೈಗಾರಿಕೆಗಳಿಲ್ಲದೇ ಇರುವ ನಗರಗಳಿಲ್ಲ. 21ನೇ ಶತಮಾನದಲ್ಲಿ ನಗರದ ಪರಿಕಲ್ಪನೆಯನ್ನು ಮಾಹಿತಿ ತಂತ್ರ ಜ್ಞಾನ ಕ್ಷೇತ್ರ ಸಂಪೂರ್ಣ ಬದಲಾಯಿಸಿದೆ. ಈ ಬದಲಾವಣೆ ಬರೀ ನಗರದ ಕಲ್ಪನೆಗಷ್ಟೇ ಉಳಿದಿಲ್ಲ. ಅದರಿಂದಾಚೆಗೂ ದಾಟಿ, ನಗರಗಳಲ್ಲಿ
ಮಾತ್ರ ಉದ್ಯೋಗ ಎನ್ನುವ ಪರಿಕಲ್ಪನೆಗೂ ಪರ್ಯಾಯವನ್ನು ಹುಡುಕುತ್ತಿದೆ. ಉದ್ಯೋಗ ಮಾಡುವುದಕ್ಕೂ ಮತ್ತು ನಗರಕ್ಕೂ ಸಂಬಂಧವಿಲ್ಲ ಎಂಬ ಭಾಷ್ಯವನ್ನು ಬರೆಯತೊಡಗಿದೆ. ಇವೆಲ್ಲವೂ ಸದ್ಯದಲ್ಲಿ ಆಗುತ್ತಿರುವ ವಿದ್ಯಮಾನಗಳು.
ಅಮರಾವತಿಗೆ ಹೋಗೋಣ
ಮಾಹಿತಿ ತಂತ್ರಜ್ಞಾನ ಕ್ಷೇತ್ರವೂ ಇಂದು ನಗರದ ಬೆಳವಣಿಗೆಗೆ ಬಹಳ ಪ್ರಮುಖ ಇಂಧನವಾಗಿರುವುದು ಸ್ಪಷ್ಟ. ಉದಾಹರಣೆಗೆ ಬೆಂಗಳೂರು ಹಾಗೂ ಹೈದರಾಬಾದ್‌ನ ಪ್ರಗತಿಯಲ್ಲಿ ಇದರ ಪಾಲು ಬಹಳಷ್ಟಿದೆ ಹಾಗೂ ಪ್ರಮುಖವಾಗಿ ಕಾಣುತ್ತಿದೆ. 16ನೇ ಶತಮಾನದಲ್ಲಿ
ಕೆಂಪೇಗೌಡರ ಬೆಂದಕಾಳೂರಾಗಿತ್ತು ಈಗಿನ ಬೆಂಗಳೂರು. 21ನೇ ಶತಮಾನದಲ್ಲಿ ಅದೀಗ ಸಿಲಿಕಾನ್ ವ್ಯಾಲಿಯಾಗಿ ಪರಿಣಮಿಸಿದೆ. ಇಂಥದ್ದೇ ಪ್ರಗತಿ ಹೈದರಾಬಾದ್‌ನಲ್ಲೂ ಸಾಧ್ಯವಾಗಿತ್ತು. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾದ ಬಳಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಅವಕಾಶಗಳನ್ನು ಬಳಸಿಕೊಳ್ಳುವತ್ತ ಹೆಚ್ಚು ಮನಸ್ಸು ಮಾಡಿದರು.
ಹಾಗಾಗಿ ದೇಶಕ್ಕೆ ಬಂದ ಯಾವುದೇ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳನ್ನು ತಮ್ಮತ್ತ ಸೆಳೆದುಕೊಳ್ಳಲು ಎರಡೂ ರಾಜ್ಯಗಳು ಸತತವಾಗಿ ಪೈಪೋಟಿ ನಡೆಸುತ್ತಿದ್ದವು. ಕೆಲವು ಬಾರಿ ಇಬ್ಬರದ್ದೂ ಅನಗತ್ಯ ಅತ್ಯುತ್ಸಾಹ ಎನ್ನಿಸಿದ್ದು ಇಜ. ಈಗ ಅದೇ ಚಂದ್ರಬಾಬು ನಾಯ್ಡು ಅವರಿಗೆ ಒದಗಿಸುವ ಅವಕಾಶವೆಂದರೆ ನಗರವನ್ನು ಸೃಷ್ಟಿಸುವುದು. ಇಂಥ ಅವಕಾಶಗಳು ಸಿಗುವುದೇ ತೀರಾ ಅಪರೂಪ. ಬಹುತೇಕ ನಗರಗಳು ತನ್ನಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಾ, ಉದ್ಯಮ ಚಟುವಟಿಕೆಯನ್ನು ವಿಸ್ತರಿಸುತ್ತಾ, ಸುತ್ತಲಿನ ಭೌಗೋಳಿಕ ಪ್ರದೇಶಗಳನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಾ ಹೊಸ ರೂಪ ಪಡೆದಿರುವಂಥವು. ಇದೊಂದು ಸ್ವಾಭಾವಿಕ ಬೆಳವಣಿಗೆಯ ಮಾದರಿಯಲ್ಲೇ ತೋರುತ್ತದೆಯೇ ಹೊರತು ವಿಶೇಷವೆನಿಸುವುದಿಲ್ಲ. ಒಂದು ಅಚ್ಚರಿಕರ ಬೆಳವಣಿಗೆ ಎನಿಸುವುದು ಕಡಿಮೆ. ನಗರ ಸೃಷ್ಟಿ ಹಾಗಲ್ಲ. ಆಂಧ್ರ ಪ್ರದೇಶವನ್ನು ತಂತ್ರಜ್ಞಾನ ನೆಲೆಯಲ್ಲಿ ನಿರ್ಮಿಸಬೇಕೆಂಬ ಮಹದಾಸೆ ಹಿಂದೆಯೂ ಚಂದ್ರಬಾಬು ನಾಯ್ಡು ಅವರಿಗಿತ್ತು.
ಆದರೂ ಅದು ಒಂದಕ್ಕೊಂದು ಜೋಡಿಸುವ ಕೆಲಸವೇ ಹೊರತು ಸೃಷ್ಟಿಸುವಂಥದ್ದಲ್ಲ. ತೆಲಂಗಾಣ ರಾಜ್ಯವಾಗಿ ರೂಪುಗೊಂಡು ಹೈದರಾಬಾದ್ ಅದರ ಪಾಲಾದ ಮೇಲೆ ಆಂಧ್ರ ಪ್ರದೇಶಕ್ಕೆ ಪ್ರತ್ಯೇಕ ರಾಜಧಾನಿಯನ್ನು ಹೊಂದುವಂಥ ಅನಿವಾರ್ಯತೆ ಸೃಷ್ಟಿಯಾಯಿತು. ಅದು
ಚಂದ್ರಬಾಬು ನಾಯ್ಡುವಿಗೆ ಸಿಕ್ಕಿರುವ ಎರಡನೇ ಅವಕಾಶ. ಅದಕ್ಕೇ ಅಮರಾವತಿ (ವಿಜಯವಾಡ ಮತ್ತು ಗುಂಟೂರು ಜಿಲ್ಲೆಯ ಪ್ರದೇಶ) ರೂಪುಗೊಳ್ಳುತ್ತಿದೆ. ದೇಶದ ಅತ್ಯಂತ ಸ್ಮಾರ್ಟ್ ರಾಜಧಾನಿಯಾಗಿಸಬೇಕೆಂಬ ಹಠ ಸಂರಚನೆಯಲ್ಲಿ ಕಾಣುತ್ತಿದೆ. ಒಂದು ಸಮಾಧಾನದ ಸಂಗತಿಯೆಂದರೆ ತನ್ನ ನಗರ ಮತ್ತೂಂದು ಯುರೋಪಿನ ಪ್ರತಿಕೃತಿಯಾಗಬಾರದೆಂಬ ಸಣ್ಣದೊಂದು ಪ್ರಜ್ಞೆಯೂ ಜಾಗೃತ ಸ್ಥಿತಿಯಲ್ಲಿರುವುದು. ಆದ್ದರಿಂದಲೇ ಅಮರಾವತಿ ನಗರ ಇನ್ನೂ ಕುತೂಹಲದ ನೆಲೆಯಲ್ಲಿದೆ.
ಎಲ್ಲ ನಗರಗಳಂತೆ ನಮ್ಮದೂ ಆಗಬೇಕಿಲ್ಲ ಮತ್ತು ಆಗಬಾರದೆಂಬ ಕಾಳಜಿ ಹಾಗೂ ಪ್ರಜ್ಞೆ ಎಲ್ಲ ಆಡಳಿತಗಾರರಲ್ಲೂ ಇದ್ದೇ ಇರುತ್ತದೆ. ಆದರೆ ಪ್ರಗತಿಯ ಸಂದರ್ಭದಲ್ಲಿ ಕೆಲವರು ಮರೆಯುತ್ತಾರೆ. ಇನ್ನು ಕೆಲವರು ವರ್ತಮಾನದೊಂದಿಗೆ ಅಗತ್ಯ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತಾರೆ. ಅದರ ಪರಿಣಾಮವೆಂದರೆ ಎಲ್ಲ ನಗರಗ ಳಂತೆಯೇ ನಮ್ಮದೂ ಆಗಿಬಿಡುತ್ತದೆ. ಅಂತಿಮವಾಗಿ ನೀಡುವ ಕಾರಣಗಳು, ಸಬೂಬುಗಳು ಇದ್ದದ್ದೇ. ಆದರೆ ಕನಸನ್ನೇ ಧ್ಯಾನಿಸುತ್ತಾ ವಾಸ್ತವಕ್ಕೆ ಪರಿವರ್ತಿಸುವುದು ಕಡಿಮೆ ಕಷ್ಟದ್ದಲ್ಲ.
ವಿಧಾನಸೌಧದ ಕಥೆ ಗೊತ್ತಲ್ಲ
1952ರಿಂದ 1956ವರೆಗೆ ಕೆಂಗಲ್ ಹನುಮಂತಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಅವರ ಆಡಳಿತದ ಸಂದರ್ಭದಲ್ಲಿ ಒಮ್ಮೆ ರಷ್ಯಾ ದೇಶದ ಗಣ್ಯರ ನಿಯೋಗವೊಂದು ಬೆಂಗಳೂರಿಗೆ ಭೇಟಿ ನೀಡಿತಂತೆ. ಇಡೀ ನಗರವನ್ನು ಸುತ್ತಾಡಿ ಬಂದ ನಿಯೋಗದಲ್ಲಿನ ಗಣ್ಯರು ಮುಖ್ಯಮಂತ್ರಿಯವರಲ್ಲಿ ಒಂದು ಪ್ರಶ್ನೆ ಇಟ್ಟರಂತೆ-“ಇಡೀ ನಗರದಲ್ಲಿ ಬರೀ ಯರೋಪಿಯನ್ ಮಾದರಿಯ ಕಟ್ಟಡಗಳಿವೆ. ನಿಮ್ಮದೆಂದು ಏನಿದೆ?’ಎಂದು. ಇದು ಕೆಂಗಲ್ ಹನುಮಂತಯ್ಯನವರ ಕಣ್ತೆರೆಸಿತಂತೆ. ಬಳಿಕ ರೂಪುಗೊಂಡದ್ದು ವಿಧಾನಸೌಧ. ಇಲ್ಲದಿದ್ದರೆ
ಮತ್ತೂಂದು ಯರೋಪಿಯನ್ ಕಟ್ಟಡ ಬಂದು ಬಿಟ್ಟಿರುತ್ತಿತ್ತೇನೋ? ಇಂದಿಗೂ ವಿಧಾನಸೌಧ ಅಪರೂಪದ ವಾಸ್ತುಶಿಲ್ಪ ಮಾದರಿಯಾಗಿ ಪರಿಗಣಿತವಾಗಿದೆ.
ಇದೇ ಎಚ್ಚರ ಚಂದ್ರಬಾಬು ನಾಯ್ಡುರಲ್ಲೂ ಇದೆ ಎಂಬುದು ಸುಳ್ಳಲ್ಲ. ಇಲ್ಲದಿದ್ದರೆ ಬಾಹುಬಲಿ ಸಿನಿಮಾದಲ್ಲಿನ ಮಹಿಷ್ಮತಿ ಸಂಸ್ಥಾ ನದ ಕಲ್ಪನೆಯನ್ನು ಮೆಚ್ಚಿಕೊಳ್ಳುತ್ತಿರಲಿಲ್ಲ. ಅಷ್ಟೇ ಅಲ್ಲ, ಅಂಥ ದೊಂದು ನಗರ ನಮ್ಮ ಅಮರಾವತಿಯೂ ಆಗಬೇಕೆಂದುಕೊಳ್ಳುತ್ತಿರಲಿಲ್ಲ. ಸುಮ್ಮ ನೊಂದು ನಗರ ಮಾಡಿಬಿಡಿ ಎಂದು ವಾಸ್ತುಶಿಲ್ಪಿಗಳಿಗೆ, ಎಂಜಿನಿಯರ್‌ಗಳಿಗೆ ಸೂಚಿಸುತ್ತಿದ್ದರು. ಬಾಹುಬಲಿ ಸಿನಿಮಾದ ನಿರ್ದೇಶಕ ರಾಜಮೌಳಿಯ ಸಲಹೆಯನ್ನು ಪಡೆಯಿರಿ ಎಂದು ನಗರ ವಿನ್ಯಾಸದ ಗುತ್ತಿಗೆ ಹೊತ್ತ ಕಂಪೆನಿಗಳಿಗಾಗಲೀ, ವಾಸ್ತುಶಿಲ್ಪಿಗಾಗಲೀ ಸೂಚಿಸುತ್ತಿರಲಿಲ್ಲ. ಹೆಸರಾಂತ ಕಲಾ ನಿರ್ದೇಶಕ ಸಾಬು ಸಿರಿಲ್ ಮತ್ತು ತಂಡ ಈ ಚಿತ್ರದ ಕಲಾ ನಿರ್ದೇಶನವನ್ನು ಮಾಡಿತ್ತು. ಮುಖ್ಯಮಂತ್ರಿ ಯವರ ಈ ಸೂಚನೆ ಎಲ್ಲರ ಹುಬ್ಬೇರಿಸಿತ್ತು. ಆದರೆ, ನಾವು ಬದುಕುವ ನಗರಗಳಲ್ಲಿ ನಮ್ಮ ಪರಿಕಲ್ಪನೆಗಳ ಪಡಿಯಚ್ಚುಗಳು ಮೂಡಬೇ ಕೆಂಬುದು ಬಯಸುವುದು ಸಹಜ.
ನವನಗರ
ನಗರ ನಿರ್ಮಾಣದ ಹೊಣೆ ಹೊತ್ತಿರುವುದು ಸಿಂಗಾಪುರ ಮತ್ತು ಜಪಾನಿನ ಕಂಪೆನಿಗಳು. ಇಡೀ ನಗರವನ್ನು ಒಂಬತ್ತು ವಿಷಯಾಧರಿತ ನೆಲೆಗಳಲ್ಲಿ ರೂಪಿಸಲಾಗುತ್ತಿದೆ. ಕೃಷ್ಣಾ ನದಿ ದಂಡೆಯಲ್ಲಿ ರೂಪಿತ ವಾಗುತ್ತಿರುವ ಅಮರಾವತಿ ಸುಮಾರು 55 ಸಾವಿರ ಎಕ್ರೆ ಪ್ರದೇಶದಲ್ಲಿ ಅರಳಿಕೊಳ್ಳಲಿದೆ. 2015ರ ಅಕ್ಟೋಬರ್ 22ರಂದು ರಾಜಧಾನಿಯ ನಿರ್ಮಾಣಕ್ಕೆ ಉದ್ದಂಡರಾಯುನಿಪಾಲೇಂ ಹಳ್ಳಿಯಲ್ಲಿ ಶಿಲಾನ್ಯಾಸ
ನೆರವೇರಿಸಲಾಗಿತ್ತು. ಅದೇ ಇನ್ನು ಮುಂದೆ ಅಮರಾವತಿ. ಮೊದಲ ಹಂತದಲ್ಲಿ ಕೆಲವು ಸೀಮಿತ ಕಚೇರಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಎರಡನೇ ಹಂತದ ನಿರ್ಮಾಣ ಕಾಮಗಾರಿಯೂ ಆರಂಭವಾಗಿದೆ.
2018 ರೊಳಗೆ ಅಧಿಕಾರಿಗಳ ವಸತಿ ಸಮುಚ್ಚಯ, ಸರಕಾರಿ ಕಚೇರಿಗಳೆಲ್ಲಾ ನಿರ್ಮಾಣಗೊಳ್ಳಬಹುದು. ಅದಾದ ಬಳಿಕ ಬಹುತೇಕ ಆಡಳಿತ ಇಲ್ಲಿಗೆ ಸ್ಥಳಾಂತರಗೊಳ್ಳಲಿದೆ. ಅಲ್ಲಿವರೆಗೆ ಹೈದರಾಬಾದ್ ರಾಜಧಾನಿ. ಚಂದ್ರಬಾಬು ನಾಯ್ಡು ಪತ್ರಿಕೆಯೊಂದರಲ್ಲಿ ಹೇಳಿದ ಮಾತು ಸೂಕ್ತವೆನಿಸುತ್ತದೆ. “ನಾವು ಆಡಳಿತ ಮಾಡುವಲ್ಲಿ ನಮ್ಮ ಇತಿಹಾಸ,ಪರಂಪರೆ, ಪೌರಾಣಿಕ ನೆಲೆಯ ಕುರುಹುಗಳಿರಬೇಕು’. ನಿಜವೇ ತಾನೇ? ಅವು ನಮ್ಮ ಸಂಸ್ಕೃತಿಯ ಭಾಗ. ನಮ್ಮ ಅಸ್ಮಿತೆಯನ್ನು ಸದಾ ಎಚ್ಚರದಲ್ಲಿಟ್ಟುಕೊಳ್ಳುವ ವಿಧಾನವೂ ಹೌದು. ಇಷ್ಟೆಲ್ಲಾ ವಿಶೇಷಗಳ ಅಮರಾವತಿಯೆಂಬ ಕನಸು ರೂಪುಗೊಳ್ಳುವ ವಿವಿಧ ಹಂತದಲ್ಲಿ ಮತ್ತೂಂದು ಸಿಂಗಾಪುರ ಆಗಿಬಿಡಬಹುದೇ ಎಂಬ ಆತಂಕ ಇನ್ನೂ ದೂರವಾಗಿಲ್ಲ. ಕಾದು ನೋಡಬೇಕಷ್ಟೇ. ಸಾತವಾಹನ ರಾಜವಂಶದ ಆಳ್ವಿಕೆಯ ಹಿನ್ನೆಲೆಯಲ್ಲಿ ಪ್ರದೇಶಕ್ಕೆ ಆಧುನಿಕ ವಿನ್ಯಾಸಗಳು
ಎಷ್ಟರಮಟ್ಟಿಗೆ ಹೊಂದಬಹುದೆಂಬುದೂ ಎನ್ನುವುದು ದೊಡ್ಡ ಪ್ರಶ್ನೆಯೇ. ಇದಕ್ಕೆ ಉತ್ತರ ಸಿಕ್ಕರೆ ನಮ್ಮ ಇನ್ನಷ್ಟು ಭವಿಷ್ಯದ ನಗರಗಳು ಸುಂದರವಾಗಿ ರೂಪುಗೊಳ್ಳಬಹುದು. ಯಾಕೆಂದರೆ ಇನ್ನೇನಿದ್ದರೂ ನಗರ ಯುಗ.
*ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.