ಕೇಪ್ ಟೌನ್ ಅಷ್ಟೇ ಅಲ್ಲ, ನಮ್ಮ ನಗರಗಳದ್ದೂ ಅದೇ ಕಥೆ
Team Udayavani, Mar 24, 2018, 7:30 AM IST
ನಮ್ಮ ನಗರಗಳಲ್ಲಿನ ನಲ್ಲಿಗಳೆಲ್ಲಾ ತಟಕ್ಕನೆ ನೀರು ಸುರಿಸುವುದಿಲ್ಲ ಎಂದರೆ ಹೇಗಿರಬಹುದು. ಅಂಥದೊಂದು ಸ್ಥಿತಿ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲೇ ಉದ್ಭವಿಸಿದೆಯಂತೆ. ಜನವರಿಯಿಂದಲೇ ಒಬ್ಬ ಪ್ರಜೆಗೆ ಒಂದು ದಿನಕ್ಕೆ ಕೇವಲ 87 ಲೀಟರ್‌ನಷ್ಟೇ ನೀರನ್ನು ಬಳಸುವಂತೆ ನಿರ್ಬಂಧ ಹೇರಲಾಗಿತ್ತು. ಅದು ಮುಂದಿನ ತಿಂಗಳ ಬಳಿಕ 25 ಲೀಟರ್‌ಗೆ ಇಳಿಯುವ ಸಂಭವವಿದೆ.
ನಾಲ್ಕು ದಿನಗಳಿಂದ ಜಗತ್ತಿನ ಎಲ್ಲ ನಗರಗಳ ನಾಗರಿಕರನ್ನು ಬೆಚ್ಚಿ ಬೀಳಿಸಿರುವುದು “ಡೇ ಜೀರೋ’ ಎಂಬ ಪದ. ಈ ಪದಕ್ಕೆ ನಗರೀಕರಣದ ಶಬ್ದಕೋಶದಲ್ಲಿ ಒಂದು ತೊಟ್ಟೂ ನೀರಿಲ್ಲದ ಸ್ಥಿತಿ ಎಂದು ಅಥೆಸಬಹುದು. ಕೊಂಚ ವಿವರಣೆಗೆ ಇಳಿದರೆ, ಬರ ಎಂಬುದು ಅಪ್ಪಳಿಸಿ ಇರುವ ಸ್ವಲ್ಪವೇ ಸ್ವಲ್ಪ ನೀರೂ ಖಾಲಿಯಾಗುವ ಸಾಧ್ಯತೆ ಆವರಿಸಿದಾಗ ಸ್ಥಳೀಯ ಆಡಳಿತ ನೀರು ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ. ಎಲ್ಲ ನಲ್ಲಿಗಳೂ ಸ್ತಬ್ಧಗೊಳ್ಳುತ್ತವೆ.
ಸ್ಥಳೀಯ ಆಡಳಿತ ತನ್ನ ನಾಗರಿಕರನ್ನು ಬದುಕಿಸುವ ಸಲುವಾಗಿ ಪರ್ಯಾಯ ಪೂರೈಕೆ ಕ್ರಮ ಅನುಸರಿಸುತ್ತದೆ. ಕೆಲವು ಸಾರ್ವಜನಿಕ ನಲ್ಲಿಗಳಲ್ಲಿ ಕನಿಷ್ಠ ಪ್ರಮಾಣದ ನೀರನ್ನು ಪೂರೈಸುತ್ತದೆ. ಎಲ್ಲರೂ ಸಾಲುಗಟ್ಟಿ ನಿಲ್ಲಬೇಕು. ಅವರು ಕೊಟ್ಟಷ್ಟು ಪಡೆದು ಬದುಕುವ ಸ್ಥಿತಿ ನಾಗರಿಕರಾದ ನಮ್ಮದಾಗಿರುತ್ತದೆ. ಈ ರೇಷನಿಂಗ್ ಸ್ಥಿತಿ ನಮ್ಮ ನಗರಗಳಲ್ಲೂ ಆಗಾಗ್ಗೆ ಬರುವುದುಂಟು. ಕಳೆದ ವರ್ಷ ಮಂಗಳೂರಿನಲ್ಲೂ ನೀರು ರೇಷನಿಂಗ್ ಮಾಡುವಂತಾಗಿತ್ತು. ಅಂದರೆ ದಿನವೂ ಸಿಗುತ್ತಿದ್ದ ನೀರು ಎರಡು ದಿನಕ್ಕೊಮ್ಮೆ, ಮೂರು ದಿನಕ್ಕೊಮ್ಮೆ ಎನ್ನುವ ರೀತಿ. ಈ ಮಧ್ಯೆ ಸರಕಾರಗಳೂ, ಸ್ಥಳೀಯ ಆಡಳಿತಗಳೂ ಒಂದೊಂದು ಹನಿ ಹಿಡಿದು ತರಲು ಹರಸಾಹಸ ಪಡುತ್ತವೆ. ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ, ಒಂದು ಕೊಡ ನೀರು ತನ್ನಿ ಎಂದರೂ ಸಿಗಬೇಕಲ್ಲ.
ನಮ್ಮ ಬೆಂಗಳೂರು ಸೇರಿದಂತೆ ಜಗತ್ತಿನ 11 ನಗರಗಳು ಸದ್ಯವೇ ಕೇಪ್ ಟೌನ್‌ಗಳಾಗುತ್ತವೆ ಎಂದು ಹಲವು ಸಮೀಕ್ಷೆಗಳು, ಅಧ್ಯಯನಗಳು ಹೇಳಿವೆ. ಡೌನ್ ಟು ಅರ್ಥ್ ಮ್ಯಾಗಜಿನ್ ಸಹ ಈ ಕುರಿತು ಸವಿವರ ಸಂಚಿಕೆಯನ್ನು ಮಾಡಿತ್ತು. ಆತಂಕದ ಬಿಂದು ಎಲ್ಲಿದೆ ಎಂದರೆ ಈ ಸಮೀಕ್ಷೆಗಳು ಪಟ್ಟಿ ಮಾಡಿರುವ ನಗರಗಳಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನವಿದೆ. ಬ್ರೆಜಿಲ್‌ನ ರಾಜಧಾನಿ ಸೌಪೋಲೊ ಬಳಿಕ ಬೆಂಗಳೂರು ಸ್ಪರ್ಧೆ ಮಾಡುತ್ತಿದೆ.
ಕೇಪ್ ಟೌನ್ ಸ್ಥಿತಿ
ಚೆನ್ನಾಗಿ ನಡೆಯುತ್ತಿದ್ದವ ಇದ್ದಕ್ಕಿದ್ದಂತೆ ಕುಸಿದರೆ ಎಂಥ ಆಘಾತವಾಗಬಹುದು? ದಕ್ಷಿಣ ಆಫ್ರಿಕಾದ ರಾಜಧಾನಿ ಹಾಗೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸುಂದರ ನಗರ ಕೇಪ್ ಟೌನ್‌ಸಿ§ತಿ ಇದೇ ಆಗಿದೆ. ಜನವರಿ ತಿಂಗಳ ಸುಮಾರಿಗೆ ಅಲ್ಲಿಯ ಮೇಯರ್ ಸೇರಿದಂತೆ ಎಲ್ಲರೂ ಆಕಾಶಕ್ಕೆ ಮುಖ ಮಾಡಿ ಕುಳಿತಿದ್ದರು. ಒಂದಿಷ್ಟು ಮಳೆ ಬರಲಿ, ನಮ್ಮ ಜಲಾಶಯಗಳು ತುಂಬಲಿ ಎಂದು ಮೊರೆ ಇಡುತ್ತಿದ್ದರು. ನಿರಂತರವಾಗಿ ಮೂರುವ ವರ್ಷಗಳಿಂದ ಅಪ್ಪಳಿಸಿದ ಬರ ಎಲ್ಲ ಆರು ಜಲಾಶಯಗಳನ್ನೂ ಬರಿದು ಮಾಡಿತ್ತು. ಬಹಳ ಪ್ರಮುಖವಾದ ಜಲಾಶಯದಲ್ಲೂ ಶೇ. 14 ಕ್ಕಿಂತ ಕೆಳಮಟ್ಟಕ್ಕೆ ನೀರಿನ ಪ್ರಮಾಣ ಇಳಿಯುವ ಸಾಧ್ಯತೆ ತೋರಿದಂತೆಯೇ ಮೇಯರ್, “ಜನರೆಲ್ಲರೂ ಡೇ ಜೀರೋ’ಗೆ ಸಿದ್ಧರಾಗಿ ಎಂದು ಪ್ರಕಟಿಸಿದರು. ಅವರ ಲೆಕ್ಕಾಚಾರದಲ್ಲಿ ಏಪ್ರಿಲ್‌ನಲ್ಲಿ ಬದಕು ಸ್ತಬ್ಧಗೊಳ್ಳುವ ಸ್ಥಿತಿ ಉದ್ಭವಿಸಬಹುದು.
ಜನವರಿಯಿಂದಲೇ ಒಬ್ಬ ಪ್ರಜೆಗೆ ಒಂದು ದಿನಕ್ಕೆ ಕೇವಲ 87 ಲೀಟರ್‌ನಷ್ಟೇ ನೀರನ್ನು ಬಳಸುವಂತೆ ನಿರ್ಬಂಧ ಹೇರಲಾಗಿತ್ತು. ಅದು ಮುಂದಿನ ತಿಂಗಳ ಬಳಿಕ 25 ಲೀಟರ್‌ಗೆ ಇಳಿಯುವ ಸಂಭವವಿದೆ. ಹೆಚ್ಚು ಹೊತ್ತು ಸ್ನಾನ ಮಾಡುವಂತಿಲ್ಲ, ಅನಾವಶ್ಯಕವಾಗಿ ನೀರನ್ನು ಉದ್ಯಾನಗಳಿಗೆ ಹರಿಸಿ ವ್ಯರ್ಥ ಮಾಡುವಂತಿಲ್ಲ. ವಿಶೇಷವೆಂದರೆ ಈ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಭಾರತದ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾದೊಂದಿಗೆ ಕ್ರಿಕೆಟ್ ಪಂದ್ಯ ಆಡಲೆಂದು ಕೇಪ್ ಟೌನ್‌ಗೆ ಬಂದಿಳಿಯಿತು. ಆಗ ಹೊಟೇಲ್‌ಗಳ ಮಾಲಕರು ಮತ್ತು ಪಂದ್ಯ ಸಂಘಟಕರು ನೀಡಿದ ಸಲಹೆ ಏನು ಗೊತ್ತೇ? “ಎರಡು ನಿಮಿಷಕ್ಕಿಂತ ಹೆಚ್ಚು ಹೊತ್ತು ಸ್ನಾನ ಮಾಡಿ ನೀರು ವ್ಯರ್ಥ ಮಾಡಬೇಡಿ’ ಎಂಬುದಂತೆ. ಈ ಮಧ್ಯೆ ಜನವರಿಯ ಬಳಿಕ ಡೇ ಜೀರೋದ ಕಲ್ಪನೆಯಿಂದ ಬೆವೆತಿರುವ ನಾಗರಿಕರು ಏಕಾಏಕಿ ನೀರನ್ನು ಸಂಪನ್ಮೂಲವಾಗಿ ಬಳಸಲು ಆರಂಭಿಸಿದ್ದಾರಂತೆ. ಈ ಹಿನ್ನೆಲೆಯಲ್ಲಿ ಈ ಡೇ ಜೀರೋದ ಸ್ಥಿತಿ ಇನ್ನೆರಡು ತಿಂಗಳು ಮುಂದೂಡುವ ಸ್ಥಿತಿ ಉದ್ಭವಿಸಬಹುದೇನೋ? ಅಷ್ಟಾದರೆ ಸುಮಾರು ನಲ್ವತ್ತು ಲಕ್ಷ ನಾಗರಿಕರು ನಿಟ್ಟುಸಿರುಬಿಡಬಲ್ಲರು.
ಕೇಪ್ ಟೌನ್ ಆಫ್ರಿಕಾ ಖಂಡದ ಒಂದು ಸಿರಿವಂತ ಪಟ್ಟಣ. ವಿಚಿತ್ರವೆಂದರೆ ಕೆಲವೇ ವರ್ಷಗಳ ಹಿಂದೆ ಅತ್ಯುತ್ತಮ ಜಲ ಸಂರಕ್ಷಣಾ ಪ್ರಶಸ್ತಿಯನ್ನೂ ಪಡೆದಿತ್ತು. ಆದರೆ ಈಗ ಕಡು ಕಷ್ಟವನ್ನು ಎದುರಿಸುತ್ತಿದೆ. ನೂರು ವರ್ಷಗಳಲ್ಲೇ ಇಂಥ ಕಠಿನ ಸ್ಥಿತಿ ಬಂದಿರಲಿಲ್ಲವಂತೆ. ಒಂದುವೇಳೆ ಡೇ ಜೀರೋ ಸ್ಥಿತಿ ಉದ್ಭವಿಸಿದರೆ, ಇಂಥದೊಂದು ಭೀಕರ ನೀರಿನ ಕೊರತೆ ಎದುರಿಸಿದ ಜಗತ್ತಿನ ಮೊದಲ ಮೆಟ್ರೊ ಸಿಟಿ ಎಂಬ ಅಪವಾದಕ್ಕೆ ತುತ್ತಾಗಲಿದೆ.
ಒಂದು ಹನಿಯ ಮಹತ್ವ
ನಾವೆಲ್ಲ ಸಮೃದ್ಧ ಸ್ಥಿತಿಯಲ್ಲಿದ್ದೇವೆ ಎಂದು ಅಂದುಕೊಳ್ಳಬಹುದು. ಯಾಕೆಂದರೆ ನಮ್ಮ ಊರುಗಳಲ್ಲಿ ಇನ್ನೂ ಕೇಪ್ ಟೌನ್‌ನ ಭೀಕರತೆ ತಟ್ಟಿಲ್ಲ. ಹಾಗೆಂದು ನೀರಿನ ಕೊರತೆ ಇಲ್ಲವೆಂದು ಹೇಳುವಂತಿಲ್ಲ. ಬೇಸಗೆಯ ಎರಡು ತಿಂಗಳು ಬಾವಿಗಳಲ್ಲೂ ನೀರು ತಳ ಹಿಡಿದಿರುತ್ತದೆ. ಇನ್ನು ಬೆಂಗಳೂರಿನಲ್ಲಿ ಹೇಳಬೇಕೇನಿಲ್ಲ. ಬಹುತೇಕ ಬಡಾವಣೆಗಳು ಟ್ಯಾಂಕರ್ ನೀರನ್ನೇ ಅವಲಂಬಿಸಿರುತ್ತವೆ. ಆ ಟ್ಯಾಂಕರ್‌ಗಳೂ ತರುವುದು ಸುಮಾರು ಒಂದು ಸಾವಿರ, ಒಂದು ಸಾವಿರದ ಇನ್ನೂರು ಅಡಿಯಲ್ಲಿರುವ ಅಂತರ್ಜಲವನ್ನು. ಈ ನೀರು ಮುಂದೆಷ್ಟೋ ಭವಿಷ್ಯದ ತಲೆಮಾರುಗಳಿಗೆ ಕೂಡಿಡಬೇಕಾದದ್ದು. ಆದರೆ ನಮ್ಮ ಅವ್ಯವಸ್ಥಿತ ಅಭಿವೃದ್ಧಿಯಿಂದ ಈ ಶತಮಾನದಲ್ಲೇ ಮುಗಿಸುವ ದೈತ್ಯ ಸಂಭ್ರಮದಲ್ಲಿದ್ದೇವೆ. ಮಳೆ ನೀರು ಇಂಗಿಸುವ, ಬಳಸುವ, ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಪುನರ್ ಬಳಸುವಂಥ ಯಾವ ಕ್ರಮಕ್ಕೂ ನಾವು ಮೊರೆ ಹೋಗುತ್ತಿಲ್ಲ. ಹೊರಗೆ ಬಹಳ ಬಿಸಿಲಿದೆ ಎಂದು ಶವರ್‌ನ ಕೆಳಗೆ ಹತ್ತು ನಿಮಿಷ ಜಾಸ್ತಿ ಹೊತ್ತು ನಿಂತು ತಲೆ ತಂಪು ಮಾಡಿಕೊಂಡು ಬರುತ್ತೇವೆ. ಆದರೆ ಆ ಖುಷಿಯಲ್ಲಿ ಎಷ್ಟು ಗ್ಯಾಲನ್ ನೀರು ಹರಿದು ತ್ಯಾಜ್ಯವಾಯಿತೆಂದು ಯೋಚಿಸುವುದಿಲ್ಲ.
ಕೇಪ್ ಟೌನ್‌ನಲ್ಲಿ ಮೇಯರ್ ಅವರು, ನಾವು ಡೇ ಜೀರೋದ ಬಳಿ ಇದ್ದೇವೆ ಎಂದು ಪ್ರಕಟಿಸುತ್ತಿದ್ದಂತೆಯೇ ಆದದ್ದು ಏನು ಗೊತ್ತೇ? ಇಡೀ ಕೇಪ್ ಟೌನ್‌ನ ನಾಗರಿಕರಿಗೆ ಪ್ರತಿ ಹನಿಯ ಮಹತ್ವ ಗೊತ್ತಾದದ್ದು. 600 ಮಿಲಿಯನ್ ಲೀಟರ್‌ನ ಬಳಕೆ ಒಂದಿಷ್ಟು ಕಡಿಮೆಯಾಯಿತಂತೆ. ಅದು ಡೇ ಜೀರೋದ ವೇಳಾಪಟ್ಟಿಯನ್ನು ಆಚೀಚೆ ಎಳೆಯುತ್ತಿದೆ. ಅಣೆಕಟ್ಟಿಗಳಲ್ಲಿರುವ ನೀರಿನ ಪ್ರಮಾಣ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಶೇ.14 ರ ಮಟ್ಟಕ್ಕೆ ಬಂದಿಳಿದರೆ ಡೇ ಜೀರೋ. ಇಂದಿನ ಅಲ್ಲಿನ ಜಲಾಶಯಗಳ ಒಟ್ಟೂ ನೀರಿನ ಮಟ್ಟ ಶೇ. 22.5 ಕ್ಕೆ ಬಂದು ತಲುಪಿದೆ.
ಯಾಕೆ ಹೀಗೆ?
ನಗರೀಕರಣದ ಹುಚ್ಚು ಮತ್ತು ಅವ್ಯವಸ್ಥಿತ ಅಭಿವೃದ್ಧಿ ನಮ್ಮನ್ನು ಇಂಥದೊಂದು ಸ್ಥಿತಿಗೆ ತಂದು ನಿಲ್ಲಿಸಿದೆ. ಕೇಪ್ ಟೌನ್ ಮೇಯರ್ ಈ ಮಾತನ್ನು ಬಹಳ ಅರ್ಥಪೂರ್ಣವಾಗಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದರು. “ನಾವು ವಾಪಸು ಹೋಗಲಾಗದ ಸ್ಥಿತಿಯನ್ನು ತಲುಪಿದ್ದೇವೆ’. ವಿಶ್ವಸಂಸ್ಥೆಯು ಅಂದಾಜು ಮಾಡಿದಂತೆ ಬೆಂಗಳೂರು ಸೇರಿದಂತೆ ಹನ್ನೊಂದು ನಗರಗಳು ಇದೇ ಸ್ಥಿತಿಯಲ್ಲಿವೆ. ಬೀಜಿಂಗ್, ಕೈರೋ, ಜಕಾರ್ತ, ಮಾಸ್ಕೋ, ಇಸ್ತಾಂಬುಲ್, ಮೆಕ್ಸಿಕೋ, ಲಂಡನ್, ಟೋಕಿಯೋ ಹಾಗೂ ಮಿಯಾಮಿ ಇತರೆ ನಗರಗಳು. ಒಟ್ಟೂ ಸುಮಾರು 200 ನಗರಗಳು ವ್ಯಾಪಕ ನೀರಿನ ಕೊರತೆಗೆ ತುತ್ತಾಗಲಿವೆ. ಪ್ರಸ್ತುತ ನಗರಗಳಲ್ಲಿರುವ ಸುಮಾರು 400 ಮಿಲಿಯನ್ ಜನರಿಗೆ ಸಾಕಷ್ಟು ನೀರು ಸಿಗುತ್ತಿಲ್ಲ. ಹನಿ ನೀರಿಗೂ ಬೆವರು ಸುರಿಸುವಂತಾಗಿದೆ. 2050ರ ವೇಳೆಗೆ ಈ ಸಂಖ್ಯೆ ಒಂದು ಬಿಲಿಯನ್ ಮುಟ್ಟಬಹುದಂತೆ.
ಎಷ್ಟು ವಿಚಿತ್ರ ನೋಡಿ. ಹೀಗೆ ಒಣಗಿ ಹೋಗುವ ನಗರಗಳ ಪಟ್ಟಿಯಲ್ಲಿರುವ ಎಲ್ಲವೂ ಮಹಾನಗರಗಳು. ಅದರಲ್ಲೂ ವಿಶೇಷವೆಂದರೆ ಮಿಯಾಮಿ ಹೊರತುಪಡಿಸಿದಂತೆ ಎಲ್ಲವೂ ರಾಜಧಾನಿಗಳು. ಉದ್ಯೋಗಾವಕಾಶದಿಂದ ಹಿಡಿದು ಅತ್ಯುತ್ತಮವಾದ ಜೀವನಮಟ್ಟದ ಹಂಬಲವನ್ನು ಎಲ್ಲರಲ್ಲೂ ಹುಟ್ಟಿಸಿದವು.
ಬೆಂಗಳೂರಿನ ಕಥೆ ಮತ್ತೂಮ್ಮೆ ಚರ್ಚಿಸೋಣ. ನೀರಿಲ್ಲದಿದ್ದರೆ ಬದುಕೇ ಸ್ತಬ್ಧಗೊಂಡಂತೆ. ಆದ ಕಾರಣ, ಡೇ ಜೀರೋದ ಸತ್ಯಾಸತ್ಯತೆ ಅಥವಾ ವೈಭವೀಕರಣದ ಬಗ್ಗೆ ಆಮೇಲೆ ಯೋಚಿಸೋಣ. ಮೊದಲು ನಮ್ಮ ನಗರಗಳನ್ನು ಮುಂದಿನ ಸಂದರ್ಭಗಳಿಗೆ ಪುನರ್ ರೂಪಿಸಿಕೊಳ್ಳಲು ಇದು ಸಕಾಲ. ಆಗಲಾದರೂ ಮಹಾನಗರಗಳು ಇನ್ನಷ್ಟು ದಿನ ಬದುಕಿಯಾವು. ಯಾಕೆಂದರೆ, ಡೇ ಜೀರೋದ ಸ್ಥಿತಿಯನ್ನು ತಪ್ಪಿಸಲು ಸಾಧ್ಯವಿಲ್ಲವಂತೆ, ಒಂದಷ್ಟು ಕಾಲ ಮುಂದೂಡಬಹುದು. ಅದೂ ನಾವು ಕೈಗೊಳ್ಳುವ ಸಣ್ಣ ಸಣ್ಣ ನಿರ್ಧಾರ, ಉಪಕ್ರಮಗಳಿಂದಲೇ ಹೊರತು ಸರಕಾರಗಳ, ಸ್ಥಳೀಯಾಡಳಿತಗಳ, ರಾಜಕಾರಣಿಗಳ ಘೋಷಣೆಗಳಿಂದಲ್ಲ. ಅದಕ್ಕಾಗಿಯೇ ಇಂದಿನಿಂದಲೇ ನೀರನ್ನು ವಿವೇಚನೆಯಿಂದ ಬಳಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.