ನಮ್ಮ ನಗರಗಳಿಗೂ ಒಂದು ಬಣ್ಣಬೇಕು, ಅದು ಸುಸ್ಥಿರವಾಗಬೇಕು!
Team Udayavani, Oct 27, 2018, 6:00 AM IST
ಬಣ್ಣಗಳಿಗೂ ನಗರಕ್ಕೂ ಸಂಬಂಧವಿದೆ. ಒಂದೊಂದು ಬಣ್ಣ ಒಂದೊಂದು ನಗರವನ್ನು ಆಳುತ್ತಿವೆ. ನೀಲಿ ಜೋಧಪುರವನ್ನು ತುಂಬಿದರೆ, ಗುಲಾಬಿ ಬಣ್ಣ ಜೈಪುರವನ್ನು ಆವರಿಸಿಕೊಂಡಿದೆ. ಹಾಗಾದರೆ ನಮ್ಮ ನಗರಗಳ ಬಣ್ಣ ಯಾವುದಾಗಿದ್ದರೆ ಚೆನ್ನ? ಅದೇ ನಿಜವಾದ ಪ್ರಶ್ನೆ.
ನಮ್ಮ ನಗರಗಳ ಬಣ್ಣ ಯಾವುದು?
ಈ ಪ್ರಶ್ನೆಗೆ ಹಲವರಿಂದ ಸಿಗುವ ಸಾಮಾನ್ಯ ನೇತ್ಯಾತ್ಮಕ ಉತ್ತರವೆಂದರೆ, ಯಾವ ಬಣ್ಣ? ಉಸಿರುಗಟ್ಟಿಸುವ ವಾತಾವರಣ, ಧೂಳು, ಕಲುಷಿತ ಗಾಳಿ-ಇದೆಲ್ಲದರ ಮಧ್ಯೆ ಬಣ್ಣವೇ ಕರಗಿ ಹೋಗಿದೆ. ಏನೋ ಇರಬೇಕೆಂದು ಬಂದಿದ್ದೇವೆ, ಒಂದಿಷ್ಟು ವರ್ಷ ಇರುವುದು. ಬಳಿಕ ಹೊರಡುವುದು ನಮ್ಮ ಊರಿಗೆ. ಇಂಥ ಮಾತುಗಳನ್ನು ನಿತ್ಯವೂ ಕೇಳುತ್ತೇವೆ. ಕರಗಿ ಹೋಗುತ್ತಿರುವ ಬಣ್ಣದ ಬಗ್ಗೆ ಆತಂಕವೂ ಇದೆ, ಅದು ಅನಿವಾರ್ಯ ಎನ್ನುವ ಅರಿವೂ ಇದೆ. ಎಷ್ಟು ವಿಚಿತ್ರವಲ್ಲವೇ?
ಆದರೂ ನಮ್ಮ ನಗರಗಳಿಗೂ, ಅದರ ಬಣ್ಣಕ್ಕೂ ಹಾಗೂ ನಮ್ಮ ಬಾಂಧವ್ಯಕ್ಕೂ ಸಂಬಂಧವಿದೆ. ಇನ್ನೂ ವಿಶೇಷವೆಂದರೆ ನಮ್ಮೊಳಗೆ ಹುಟ್ಟುವ ಭಾವನೆಗಳಿಗೂ ನಗರದ ಬಣ್ಣ ಒಂದು ಹಂತದಲ್ಲಿ ಕಾರಣವಾಗಬಹುದೇನೋ? ಖಂಡಿತಾ ಎನಿಸದೇ ಇರದು. ಸುಮ್ಮನೇ ಕಲ್ಪಿಸಿಕೊಳ್ಳಿ, ನಿಮ್ಮ ನಗರದ ಪ್ರತಿ ಮನೆಯ ಹೊರಗಿನ ಒಂದಾದರೂ ಗೋಡೆ ಅಥವಾ ಜನರಿಗೆ ಕಾಣುವ ಗೋಡೆಯ ಪಾರ್ಶ್ವ ಯಾವುದಾದರೂ ಒಂದು ಬಣ್ಣದಿಂದ ಕೂಡಿದ್ದರೆ ಏನನ್ನಿಸಬಹುದು?
ಇಲ್ಲೊಂದು ನಗರ
ಇದು ದಕ್ಷಿಣ ಸ್ಪೇನ್‌ನ ಕಥೆ. ಇಲ್ಲೊಂದು ಉಬ್ರಿಕ್ ಎಂಬ ನಗರವಿದೆ. ಇಲ್ಲಿ ಪ್ರತಿ ಮನೆಯ ಗೋಡೆಗಳ ಬಣ್ಣ ಬಿಳಿ. ಎಷ್ಟು ವಿಚಿತ್ರವೆಂದರೆ ಈ ಸ್ಪೇನ್‌ನಲ್ಲಿ ಒಟ್ಟೂ 1500 ಬಿಳಿ ನಗರಗಳಿವೆಯಂತೆ. ಇನ್ನೂ ವಿಚಿತ್ರವೆಂದರೆ ಇವೆಲ್ಲವೂ ಸ್ಪೇನ್‌ನ ದಕ್ಷಿಣ ಭಾಗದ ಅಂಡಲೂಷಿಯಾ ಪ್ರದೇಶಕ್ಕೆ ಸೇರಿದ್ದು. ಈ 1500 ಪುಟ್ಟ ಪುಟ್ಟ ನಗರಗಳೂ ಇದೇ ಪ್ರದೇಶದಲ್ಲಿವೆ. ನಿಜಕ್ಕೂ ವಿಶೇಷವೆನಿಸುವುದಿಲ್ಲವೇ? ಇದಕ್ಕೆ ಕೊಡುವ ಕಾರಣವಿಷ್ಟೇ. ಅದರಲ್ಲೂ ಈ ಉಬ್ರಿಕ್ ಸ್ವಲ್ಪ ದೊಡ್ಡ ನಗರ. ಸುಮಾರು 18 ಸಾವಿರ ಕುಟುಂಬಗಳಿರಬಹುದು ಎಂದು ಅಂದಾಜು. ಇಲ್ಲಿನ ಮನೆ, ಶಿಕ್ಷಣ ಸಂಸ್ಥೆಗಳು, ಆಡಳಿತ ಸಂಸ್ಥೆಗಳು-ಎಲ್ಲದರ ಗೋಡೆಯೂ ಬಿಳಿಯೇ. ಈ ಪ್ರದೇಶದಲ್ಲಿ ಸೂರ್ಯನ ಬಿಸಿಲು ಹೆಚ್ಚಂತೆ. ಹಾಗಾಗಿ ಮನೆಯೊಳಗೆ ತಂಪಾಗಿಸಲು ಗೋಡೆಗಳಿಗೆ ಬಿಳಿ ಬಣ್ಣ ಬಳಿದಿದ್ದಾರೆ. ಇದೂ ನಿಜವೇ. ಬಿಳಿ ಬಣ್ಣ ಶಾಖವನ್ನು ವರ್ಗಾಯಿಸದು.
ಮತ್ತೂಂದು ನಗರದ ಬಣ್ಣ ಕೇಳಿ
ಮೊರೊಕ್ಕೊ ಹೆಸರು ಕೇಳಿರಬಹುದು. ಆಫ್ರಿಕಾ ಖಂಡದಲ್ಲಿ ಬರುವಂಥದ್ದು. ಅಫ್ರಿಕಾ ಖಂಡದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ದೇಶ. ಅಲ್ಲಿನ ಚೆಫ್ಚೆವೇನ್ ನಗರ ಇಂಥದ್ದೇ ವಿಶೇಷತೆಯನ್ನು ಹೊಂದಿದೆ. ಆ ನಗರದ ಪ್ರತಿ ಗೋಡೆಗಳೂ ಕಡುನೀಲಿ, ತಿಳಿನೀಲಿಯ ಬಣ್ಣವನ್ನು ಹೊಂದಿವೆ. ಒಟ್ಟೂ ನೀಲಿಯ ಅಲೆಗಳದ್ದೇ ಅಬ್ಬರ. ಯಾವ ಗಲ್ಲಿಗೆ ಹೋದರೂ ನಿಮಗೆ ನೀಲಿ ಹಿಂಬಾಲಿಸದೇ ಇರದು. ಪ್ರಮುಖ ಬೀದಿಗಳಲ್ಲಿ ನಡೆದರೂ ಆಕರ್ಷಿಸುವುದು ನೀಲಿಯೇ. ಇದೂ ಒಂದು ರೀತಿಯಲ್ಲಿ ನೀಲಿ ನಗರ.
ನಮ್ಮ ಪುರಗಳಿಗೆ ಬರೋಣ
ಇದು ನಮ್ಮ ಪುರಗಳ ಕಥೆ. ಅಂದರೆ ರಾಜಸ್ಥಾನದ ಮೂರು ಪುರಗಳಿಗೆ ಮೂರು ಬಣ್ಣವಿದೆ. ಅದೇ ಅಲ್ಲಿನ ವಿಶೇಷ. ಜೈಪುರಕ್ಕೆ ಗುಲಾಬಿ (ಪಿಂಕ್) , ಉದಯಪುರಕ್ಕೆ ಬಿಳಿ, ಜೋಧಪುರಕ್ಕೆ ನೀಲಿ. ರಾಜಸ್ಥಾನದ ಸುಪ್ರಸಿದ್ಧ ಪಟ್ಟಣ ಜೋಧಪುರ. ಅಲ್ಲಿನ ಕೋಟೆ ನೋಡಲೇಬೇಕಾದದ್ದು. ಇಲ್ಲಿಗೂ ಇಂಥದ್ದೇ ಬಣ್ಣದ ಒಂದು ಕಥೆಯಿದೆ. ಜೋಧಪುರದ ಮನೆಗಳೆಲ್ಲಾ ನೀಲಿ ಬಣ್ಣಗಳಿಂದ ಕಂಗೊಳಿಸುತ್ತಿವೆ. ಸಣ್ಣ ಕಟ್ಟಡಗಳಿಂದ ಹಿಡಿದು ದೊಡ್ಡ ಕಟ್ಟಡಗಳವರೆಗೂ ಹೋದರೂ ಅದೇ ಕಥೆ. ಅದರಲ್ಲೂ ಒಂದು ಕಟ್ಟಡದ ಗೋಡೆಗಳನ್ನು ನೋಡಿದಾಗ ನಮ್ಮನ್ನು ನೀಲಿ ಅಷ್ಟೊಂದು ಪ್ರಭಾವಿಸದು. ಆದರೆ ಯಾವುದಾದರೂ ಎತ್ತರದ ಪ್ರದೇಶಕ್ಕೆ ಹೋಗಿ ನಿಂತು ಇಡೀ ಊರನ್ನು ನೋಡಬೇಕು. ನೀಲಿ ನಮ್ಮ ಕಂಗಳನ್ನು ತುಂಬಿಕೊಳ್ಳುತ್ತದೆ. ಒಂದು ಬಣ್ಣ ಆವರಿಸುವುದೆಂದರೆ ಅದೇ ತಾನೇ. ಕೆಲವೇ ಕ್ಷಣಗಳಲ್ಲಿ ನಾವೂ ಅದೇ ಬಣ್ಣವಾಗಿಬಿಡುತ್ತೇವೆ. ನೀಲಿಯೊಳಗೆ ನಾವು ನೀಲಿಯಾಗಿ ಕರಗಿ ಹೋಗುತ್ತೇವೆ.
ಇದು ರಾಜಸ್ಥಾನದಲ್ಲೇ ಎರಡನೇ ದೊಡ್ಡ ನಗರ. ಆ ನಗರವನ್ನು ಸೂರ್ಯನ ನಗರವೆಂದೂ ಕರೆಯುವುದಿದೆ. ಯಾಕೆಂದರೆ ಬಿಸಿಲೆಂಬುದು ವರ್ಷಪೂರ್ತಿ ಇದ್ದದ್ದೇ. ಹಲವು ಅರಮನೆ, ಕೋಟೆ ಹಾಗೂ ದೇಗುಲಗಳಿರುವ ಪಟ್ಟಣ. ಪ್ರತಿ ವರ್ಷವೂ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಪಟ್ಟಣ. ಜತೆಗೆ ಇಡೀ ನಗರಕ್ಕೆ ಹಿನ್ನೆಲೆಯಾಗಿ ನಿಂತಿರುವ ಥಾರ್ ಮರುಭೂಮಿ.
ಇನ್ನು ನೀವು ಜೈಪುರದತ್ತ ನಡೆದು ಬನ್ನಿ. ಪಿಂಕ್ ಸಿಟಿ ಅಥವಾ ರೆಡ್ ಸಿಟಿ ಎಂದೇ ಪ್ರಸಿದ್ಧ ಆಗಿರುವ ಈ ನಗರದ ವಿಶಿಷ್ಟತೆಯೂ ಇದೆ. ಅರಮನೆಯ ಬಣ್ಣ ದಿಂದ ಹಿಡಿದು ಎಲ್ಲಿ ಹೋದರೂ ನಿಮಗೆ ಒಂದು ಬಗೆಯ ಗುಲಾಬಿ ಬಣ್ಣ, ಒಂದು ಬಗೆಯ ಕೆಂಪು ಹಿಂಬಾಲಿಸುತ್ತದೆ. ಯಾಕೆಂದರೆ ಗುಲಾಬಿ ಬಣ್ಣವೆಂಬುದು ಆತಿಥ್ಯವನ್ನು ಸಂಕೇತಿಸುತ್ತದಂತೆ. ಅದಕ್ಕಾಗಿ ಅಲ್ಲಿಯ ರಾಜ ರಾಮ್ ಸಿಂಗ್ ಈ ಬಣ್ಣವನ್ನು ನಗರಕ್ಕೆ ಬಳಸಿದರಂತೆ. ಈ ಮಾತೂ ನಿಜವೇ. ಈ ಬಣ್ಣದ ಕಾರಣಕ್ಕಾಗಿಯೇ ಈ ನಗರ ಸುಪ್ರಸಿದ್ಧವಾಗಿದೆ. ಇಲ್ಲಿನ ಅರಮನೆಯೂ ನೋಡಲು ಸುಂದರವೇ. ಇನ್ನು ಉದಯಪುರ. ನಗರವಿಡೀ ಬಿಳಿ ಬಣ್ಣದಿಂದ ಅರಳಿ ನಿಂತಿದೆ. ಅದರಲ್ಲೂ ಅಲ್ಲಿರುವ ಹಲವಾರು ಕೆರೆಗಳ ಕಾರಣವೂ ಈ ಅಭಿಪ್ರಾಯ ಬಂದಿದೆ. ಇದರೊಂದಿಗೆ ಇಲ್ಲಿರುವ ಹಲವಾರು ಕಟ್ಟಡಗಳು ಅಮೃತಶಿಲೆಯಿಂದ ನಿರ್ಮಿಸಿದಂಥವು. ಅದರ ಬಣ್ಣ ಬಹುತೇಕ ಬಿಳಿಯೇ. ಜನರೂ ಮತ್ತು ಆಡಳಿತಗಾರರೂ ಬಿಳಿ ಬಣ್ಣಕ್ಕೆ ಆದ್ಯತೆ ನೀಡಿದ್ದಾರೆ. ಜತೆಗೆ ಕೆರೆಗಳ ನಗರವೆಂದೂ ಹೆಸರುವಾಸಿಯಾಗಿದೆ.
ನಮ್ಮ ಬಣ್ಣ ಯಾವುದು?
ಈ ಮಾತಿಗೆ ಉತ್ತರವಿನ್ನೂ ಸಿಕ್ಕಿಲ್ಲ. ಸಣ್ಣದೊಂದು ಉದಾಹರಣೆಯಾಗಿ ಬೆಂಗಳೂರೇ ತೆಗೆದುಕೊಳ್ಳೋಣ. ಸುತ್ತಲೂ ಹಸಿರಿತ್ತು, ಈಗ ಕಡಿಮೆಯಾಗಿದೆ. ನೂರಾರು ಕೆರೆಗಳಿದ್ದವು. ಅವುಗಳೂ ಕಡಿಮೆಯಾಗಿದೆ. ಒಂದು ಕಾಲದಲ್ಲಿ ಗಿರಿಧಾಮದಂಥ ವಾತಾವರಣವನ್ನು ಹೊಂದಿತ್ತು. ಅದೂ ಈಗ ಕಡಿಮೆಯಾಗಿದೆ. ಹೀಗೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ಜನರಲ್ಲೂ ಒಂದು ಬಗೆಯ ಪ್ರೇರಣೆ ನೀಡಲು ಯಾವುದಾದರೂ ಬಣ್ಣ ಬಳಸಬಹುದೇ? ತಿಳಿ ನೀಲಿಯೋ, ತಿಳಿ ಹಸಿರೋ, ತಿಳಿ ಹಳದಿಯೋಬಣ್ಣ ಬಳಸಿದರೆ ಹೇಗೆಂದು ತೋರಬಹುದು?
ಬೆಂಗಳೂರು ನೋಡಲು ಬರುವವರ ಸಂಖ್ಯೆ ಹೆಚ್ಚಾಗಬಹುದು. ಈಗಾಗಲೇ ಬಣ್ಣಗಳಿಂದಲೇ ಪ್ರಾಮುಖ್ಯ ಪಡೆದಿರುವ ನಗರಗಳ ಸಾಲಿಗೆ ನಮ್ಮದೂ ಸೇರಬಹುದು. ಅಷ್ಟಕ್ಕೇ ಎಲ್ಲವೂ ಮುಗಿಯಿತು ಎಂದುಕೊಳ್ಳುವ ಅಗತ್ಯವಿಲ್ಲ. ಯಾವುದಾದರೂ ಪರವಾಗಿಲ್ಲ. ಅದು ನಮ್ಮನ್ನು ಪ್ರಭಾವಿಸುತ್ತಾ, ಹೆಚ್ಚೆಚ್ಚು ಪರಿಸರ ಸ್ನೇಹಿಯಾಗಲು ಪ್ರೇರೇಪಿಸಬೇಕು. ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬಹುದು. ನಮ್ಮ ಆಡಳಿತಯಂತ್ರಗಳೂ ಪರಿಸರ ಸ್ನೇಹಿ ನಡವಳಿಕೆಯನ್ನೇ ಪ್ರಧಾನವಾಗಿಸಿಕೊಳ್ಳಬೇಕು. ನಾಗರಿಕರಾದ ನಾವೂ ಹೆಚ್ಚು ಪರಿಸರ ಸ್ನೇಹಿ ತೀರ್ಮಾನಗಳನ್ನು ಬೆಂಬಲಿಸಿ ಹಸಿರು ನಗರವಾಗಿಸಬಹುದು.
ಇಷ್ಟಾದರೆ ನಮ್ಮ ಕೆರೆಗಳು ನಳನಳಿಸುತ್ತವೆ, ಮರಗಳು ಅರಳಿ ನಿಲ್ಲುತ್ತವೆ. ಗುಲ್‌ಮೊಹರ್‌ನ ಸಾಲು ಬಣ್ಣ ತುಂಬಿಕೊಳ್ಳುತ್ತದೆ, ಉಸಿರಾಡುವ ಗಾಳಿ ಹಿತವೆನಿಸುತ್ತದೆ, ಋತುಮಾನಗಳು ಖುಷಿಕೊಡತೊಡಗುತ್ತವೆ. ಇಷ್ಟೆಲ್ಲಾ ಆಯಿತೆಂದು ಕೊಳ್ಳೋಣ, ವಸಂತಕಾಲವೇ ಹೊರತು ಮತ್ತೇನೂ ಅಲ್ಲ.
ಇದಕ್ಕೆ ಯಾರೊಬ್ಬರೋ ತೀರ್ಮಾನ ಮಾಡಿದರಾಗದು. ಮೊದಲಿಗೆ ಸರಕಾರ ದಿಟ್ಟ ತೀರ್ಮಾನ ಕೈಗೊಳ್ಳಬೇಕು. ಅದಕ್ಕೆ ಸ್ಥಳೀಯ ಸಂಸ್ಥೆಗಳು ಬೆಂಬಲ ನೀಡಬೇಕು. ತೀರ್ಮಾನದ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ತೊಡಗಬೇಕು. ಜನರೂ ಬೆಂಬಲಿಸಬೇಕು. ಬರೀ ಗೋಡೆಯ ಬಣ್ಣ ಬದಲಿಸಿದರೆ ಸಾಲದು, ಪ್ರತಿ ಕಾರ್ಯದಲ್ಲೂ ಅದೇ ಬಣ್ಣವನ್ನು ತುಂಬಿಕೊಳ್ಳಬೇಕು. ಅದೇ ಸುಸ್ಥಿರ ಬದುಕಿನ ಬಣ್ಣ. ಅದು ನಮ್ಮ ನಗರವನ್ನು ವ್ಯಾಪಿಸಿಕೊಂಡರೆ ನಮ್ಮ ಬದುಕೂ ಸುಸ್ಥಿರವೇ. ಅದಕ್ಕಿಂತ ಇನ್ನೇನಾಗಬೇಕು ? ಹಾಗಾಗಿ ನಮ್ಮ ನಗರಗಳಿಗೂ ಬಣ್ಣವೊಂದು ಬೇಕು. ಅದು ಹಸಿರಾಗಿರಬೇಕು. ಅಂದರೆ ಹಸಿರೇ ಅಲ್ಲ, ಆ ಬಣ್ಣದ ಮೂಲಕ ಬದುಕು ಸುಸ್ಥಿರವಾಗಬೇಕು.
ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.