ನಗರಕ್ಕಿರುವ ಚುಂಬಕಶಕ್ತಿ ಉಳಿಸಿಕೊಳ್ಳುವ ಬಗೆ
Team Udayavani, Dec 9, 2017, 1:10 PM IST
ಜಗತ್ತಿನಲ್ಲಿ ಈಗ ಇರುವ ಪ್ರಶ್ನೆಯೇ ಅದು. ನಗರಗಳು ತಮ್ಮ ಚುಂಬಕ ಶಕ್ತಿ ಕಳೆದುಕೊಳ್ಳದಂತೆ ಏನು ಮಾಡಬೇಕೆಂಬುದು. ವಸತಿ ಸಮಸ್ಯೆಯ ಸಮರ್ಥ ನಿರ್ವಹಣೆಯೂ ಆ ನಿಟ್ಟಿನಲ್ಲಿ ಪರಿಹಾರವಾಗಿ ತೋರಬಲ್ಲದು.
ಅವರ ಸಮಸ್ಯೆಯೂ ಇದೇ. ನಮ್ಮ ಸಮಸ್ಯೆಯೂ ಇದೇ. ಬಹುತೇಕ ನಗರಗಳ ಸಮಸ್ಯೆಯೂ ಇದೇ. ದಿನೇದಿನೇ ಲಕ್ಷಾಂತರ ಸಂಖ್ಯೆಯಲ್ಲಿ ವಲಸಿಗರನ್ನು (ಗ್ರಾಮದಿಂದ ನಗರಕ್ಕೆ) ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ನಗರಗಳು ಬೆಳೆಯುತ್ತಿರುವುದು ಅಡ್ಡಾದಿಡ್ಡಿಯಾಗಿಯೇ. ಈ ಯೋಜಿತವಲ್ಲದ ಅಭಿವೃದ್ಧಿ ಸೃಷ್ಟಿಸುತ್ತಿರುವ ಸಮಸ್ಯೆಗಳನ್ನು ಲೆಕ್ಕ ಹಾಕಿ ಕುಳಿತುಕೊಂಡರೆ ಸಾಲದು.
ಲಂಡನ್‌ನ ಮೇಯರ್ ಸಾದಿಕ್ ಖಾನ್ ನಗರದಲ್ಲಿ ಹೆಚ್ಚುತ್ತಿರುವ ವಸತಿ ಸಮಸ್ಯೆ ಕುರಿತು ಇತ್ತೀಚೆಗಷ್ಟೇ ತಮ್ಮ “ಲಂಡನ್ ಅಭಿವೃದ್ಧಿ-ಕರಡು ಪ್ರಸ್ತಾವನೆ’ಯಲ್ಲಿ ಉಲ್ಲೇಖೀಸಿದ್ದರು. ಇದು ಒಂದು ಬಗೆಯ ಮುಂದಿನ ಚುನಾವಣೆಗೆ ನಡೆಸುತ್ತಿರುವ ಸಿದ್ಧತೆ ಎನ್ನುವ ಮಾತೂ ಕೇಳಿಬಂದಿತು. ಹಲವು ಪತ್ರಿಕೆಗಳು, ಈ ಕರಡು ಪ್ರಸ್ತಾವನೆಯಲ್ಲಿನ ಕೆಲವು ಒಳ್ಳೆಯ ಅಂಶಗಳನ್ನು ಪಟ್ಟಿ ಮಾಡುತ್ತಲೇ, ಕರಡು ಪ್ರಸ್ತಾವನೆಯ ಕಾರ್ಯ ಸಾಧ್ಯತೆ ಕುರಿತೂ ಚರ್ಚೆ ನಡೆಸಿದವು. ಈ ಪ್ರಸ್ತಾವನೆ ಕಾರ್ಯ ಸಾಧ್ಯವೇ ಅಥವಾ ಅಲ್ಲವೇ ಎಂಬುದಕ್ಕಿಂತ ಎಲ್ಲ ನಗರಗಳ ಅಭಿವೃದ್ಧಿ ಸಂಬಂಧದ ಒಂದು ಮಗ್ಗುಲ ಮುಳ್ಳಿನ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಿದೆ ಎನ್ನುವುದಕ್ಕೆ ಯಾವುದೇ ಅನುಮಾನವಿಲ್ಲ.
ಸುಮಾರು 500 ಪುಟಗಳ ಕರಡು ಪ್ರಸ್ತಾವನೆಯಲ್ಲಿ ನಗರದಲ್ಲಿ ದಿನೇದಿನೇ ಕಗ್ಗಂಟಾಗುತ್ತಿರುವ ವಸತಿ ಸಮಸ್ಯೆ ಕುರಿತು ಪ್ರಸ್ತಾಪಿಸಿದ್ದಾರೆ. ಲಂಡನ್ ನಗರದ ಜನಸಂಖ್ಯೆ 2041ರ ವೇಳೆಗೆ ಒಂದು ಕೋಟಿಯನ್ನು ಮೀರಲಿದೆ. ವರ್ಷಕ್ಕೆ ಕನಿಷ್ಠ 70 ಸಾವಿರದಷ್ಟು ಮಂದಿ ಲಂಡನ್ ನಗರವನ್ನು ಸೇರಿಕೊಳ್ಳುತ್ತಿದ್ದಾರೆ. ಹಾಗಾಗಿ ಇವರೆಲ್ಲರಿಗೂ ಲಂಡನ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವುದೆಂದರೆ ದೊಡ್ಡ ಸವಾಲು. ಪ್ರತಿ ವರ್ಷ 66 ಸಾವಿರ ಮನೆಗಳನ್ನು ನಿರ್ಮಿಸಿ ಪೂರೈಸಬೇಕು ಎಂಬುದು ಸದ್ಯದ ಲೆಕ್ಕಾಚಾರ.
ಜಗತ್ತಿನಾದ್ಯಂತ ಇರುವ ಈ ಸಮಸ್ಯೆಯ ವ್ಯಾಪಕತೆ ಕುರಿತು ಸಣ್ಣದೊಂದು ನೋಟ ಹರಿಸುವುದಾದರೆ, ಮೆಕೆಂಜಿ ಸಂಸ್ಥೆ ನಡೆಸಿದ ಒಂದು ಅಧ್ಯಯನದ ಪ್ರಕಾರ (ಐದು ವರ್ಷದ ಹಿಂದೆ) ಸುಮಾರು 33 ಕೋಟಿ ಮಂದಿ ನಗರ ನಿವಾಸಿಗಳು ಯೋಗ್ಯ ವಸತಿ ವ್ಯವಸ್ಥೆ ಹೊಂದಿರದವರು ಎಂದು ಲೆಕ್ಕ ಹಾಕಿತ್ತು. ಈ ಸಂಖ್ಯೆ 2030ರ ವೇಳೆಗೆ 1.2 ಬಿಲಿಯನ್ ಮುಟ್ಟಬಹುದು. 2035ರ ಸುಮಾರಿಗೆ 1.8 ಬಿಲಿಯನ್ ತಲುಪಬಹುದು ಎಂದು ಅಂದಾಜಿಸಿತ್ತು. ಈ ಸಮೀಕ್ಷೆಯಲ್ಲಿ ಕಂಡು ಬಂದಿದ್ದ ಮತ್ತೂಂದು ವಿಚಿತ್ರ ಅಂಶವೆಂದರೆ ಜಗತ್ತಿನ ಒಟ್ಟೂ ವಸತಿ ಕೊರತೆಯ ಶೇ. 60 ಪ್ರಮಾಣ ಕೇವಲ ಹತ್ತು ದೇಶಗಳಲ್ಲಿದೆ. ಚೀನಾ, ನೈಜೀರಿಯಾ, ಬ್ರೆಜಿಲ್ ಸೇರಿದಂತೆ ನಮ್ಮ ದೇಶವೂ ಆ ಸಾಲಿನಲ್ಲಿತ್ತು. ಇಂಡೋನೇಷಿಯಾ, ಬಾಂಗ್ಲಾದೇಶ, ಫಿಲಿಪ್ಪೀನ್ಸ್, ಪಾಕಿಸ್ತಾನ, ರಷ್ಯಾ ಹಾಗೂ ಇರಾನ್ ಇನ್ನಿತರ ರಾಷ್ಟ್ರಗಳು. ಈ ಪೈಕಿ ಆಗಲೇ 28 ಮಿಲಿಯನ್ ಮಂದಿ ಸೂಕ್ತವಲ್ಲದ ಮನೆಗಳಲ್ಲಿ ವಾಸಿಸುತ್ತಿದ್ದರು. ಇದರರ್ಥ ಕೇವಲ ನಾಲ್ಕು ಗೋಡೆಗಳು ಅಥವಾ ಆಸರೆಯ ವ್ಯವಸ್ಥೆಯನ್ನು ಹೊರತುಪಡಿಸಿದರೆ ಉಳಿದಾವ ಮೂಲಸೌಕರ್ಯಗಳು ಕಡಿಮೆ ಇರುವಂಥದ್ದು. ಚೀನಾದಲ್ಲಿ ಈ ಸಂಖ್ಯೆ 52 ಮಿಲಿಯನ್ ಇದ್ದಿದ್ದರೆ, ಬ್ರೆಜಿಲ್ ಮತ್ತು ನೈಜೀರಿಯಾದಲ್ಲಿ 11 ಮಿಲಿಯನ್ ತಲುಪಿತ್ತು. ರಿಯಲ್ ಎಸ್ಟೇಟ್ ಅಷ್ಟೊಂದು ಪ್ರವರ್ಧಮಾನದಲ್ಲಿರದ ಆ ಸಂದರ್ಭದಲ್ಲೇ ಸುಮಾರು 40 ಕೋಟಿ ಮಂದಿ ಮಾರುಕಟ್ಟೆ ದರವನ್ನು ಪಾವತಿಸಿ ಮನೆಯನ್ನು ಕೊಂಡು ಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಇವತ್ತಿನ ಸ್ಥಿತಿ ಮತ್ತು ಸಂಖ್ಯೆ ಇದಕ್ಕಿಂತ ಬಹಳ ಭಿನ್ನವಾಗಿಲ್ಲ.
ಎಲ್ಲ ನಗರಗಳದ್ದೂ ಇದೇ ಕಥೆ
ಲಂಡನ್‌ನಿಂದ ನಮ್ಮ ನಗರಗಳಿಗೆ ಬರೋಣ. ದಿಲ್ಲಿ, ಮುಂಬಯಿ, ಕೋಲ್ಕತ್ತಾ, ಬೆಂಗಳೂರು ಸೇರಿದಂತೆ ಯಾವುದೇ ನಗರಗಳನ್ನು ಹೊಕ್ಕರೂ ಕಂಡು ಬರುವುದು ಇದೇ ಸಮಸ್ಯೆ. ಹೆಚ್ಚುತ್ತಿರುವ ವಲಸೆ ಮಾತ್ರ ಸಮಸ್ಯೆ ಅಲ್ಲ. ಇದರೊಂದಿಗೆ ಒಂದೆಡೆ ಜಾಗದ ಕೊರತೆ ಕಾಡುತ್ತಿದ್ದರೆ, ಮತ್ತೂಂದೆಡೆ ಜಾಗದ ಸದ್ಭಳಕೆಯ ಮಹತ್ವದ ಪ್ರಶ್ನೆಯೂ ಇದೆ. ಇಷ್ಟೇ ಅಲ್ಲದೇ, ಇರುವ ಮನೆಗಳು ವಾಸಕ್ಕೆ ಯೋಗ್ಯವೇ ಎಂಬ ಪ್ರಶ್ನೆಯೂ ಇದೆ. ಸೂಕ್ತ ಮೂಲಸೌಕರ್ಯವಿಲ್ಲದೇ, ಕೇವಲ ಬಿಸಿಲು-ಮಳೆಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುವ ಮಟ್ಟಕ್ಕಷ್ಟೇ ಇರುವ ಮನೆಗಳೂ ಇವೆ. ಜನನಿಬಿಡ ಹಲವು ನಗರಗಳಲ್ಲಿ ಕಂಡು ಬರುವ ಅನೇಕ ಮನೆಗಳು ಇದಕ್ಕೆ ಉದಾಹರಣೆಯಾಗಿವೆ. ದಿನಕ್ಕೊಂದರಂತೆ ಏಳುವ ಕೊಳೆಗೇರಿಗಳಲ್ಲಿನ ವಸತಿ ವ್ಯವಸ್ಥೆ ಎಷ್ಟರಮಟ್ಟಿಗೆ ಚೆನ್ನಾಗಿರುತ್ತದೆ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ.
ಸಾಮಾನ್ಯವಾಗಿ ನಗರದ ತಗ್ಗು ಪ್ರದೇಶಗಳಲ್ಲಿ ಇರುವ ಕೊಳೆಗೇರಿಗಳು ಮಳೆಗಾಲದಲ್ಲಿ ಅನುಭವಿಸುವ ಯಾತನೆ ಹೇಳಲು ಅಸಾಧ್ಯವಾದುದು. ಮುಂಬಯಿಯಲ್ಲಿ ಪ್ರತಿ ಬಾರಿ ಮಳೆ ಜೋರಾಗಿ ಬಿದ್ದಾಗಲೆಲ್ಲಾ ಕೊಳಗೇರಿಗಳಲ್ಲಿರುವ ಕುಟುಂಬಗಳು ಸಂಕಷ್ಟವನ್ನು ಎದುರಿಸುತ್ತವೆ. ಈ ಮಾತು ಬರೀ ಮುಂಬಯಿಗೆ ಹೇಳಿಕೊಂಡು ಕುಳಿತುಕೊಳ್ಳಬೇಕೇನೂ ಇಲ್ಲ. ಬೆಂಗಳೂರಿನಲ್ಲೂ ಇದೇ ಸ್ಥಿತಿ ಇದೆ.
ಈ ಸಮಸ್ಯೆ ಖಂಡಿತಾ ಏಕಮುಖದ್ದಲ್ಲ ; ಬದಲಾಗಿ ದಶಮುಖ. ನಗರಗಳಲ್ಲಿ ಉದ್ಭವಿಸಬಹುದಾದ ವಸತಿ ಸಮಸ್ಯೆಯನ್ನು ನಿರ್ವಹಿಸಲು ಕೇಂದ್ರ ಸರಕಾರಗಳು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿವೆ. ನರ್ಮ್ ಯೋಜನೆ, ಪ್ರಧಾನ ಮಂತ್ರಿ ವಸತಿ ಯೋಜನೆ, ರಾಜೀವ್ ವಸತಿ ಯೋಜನೆ ಹೀಗೆ ಹಲವಾರು ರೂಪಗಳಲ್ಲಿ ಈ ಸಮಸ್ಯೆಯನ್ನು ನಿರ್ವಹಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಇಷ್ಟೆಲ್ಲಾ ಯೋಜನೆಗಳಿಂದ ಸಾಧ್ಯವಾಗಿರುವುದು ಸುಮಾರು 11 ಲಕ್ಷ ಮನೆಗಳ ನಿರ್ಮಾಣ. ಪ್ರಸ್ತುತ ಲೆಕ್ಕಾಚಾರದ ಪ್ರಕಾರ, ಸುಮಾರು 65 ಮಿಲಿಯನ್ ಮಂದಿ ನಗರಗಳ ಕೊಳೆಗೇರಿಗಳಲ್ಲಿದ್ದಾರೆ. ಕುಟುಂಬಗಳ ಲೆಕ್ಕದಲ್ಲಿ ತೆಗೆದುಕೊಳ್ಳುವುದಾದರೆ 13.6 ಮಿಲಿಯನ್ ಕುಟುಂಬಗಳು. ಇದು 2011 ರ ಜನಗಣತಿ ನೀಡಿದ ಲೆಕ್ಕ. 2025 ರ ವೇಳೆಗೆ ದೇಶದ ಶೇ. 38 ರಷ್ಟು ಪ್ರದೇಶ ನಗರೀಕರಣಕ್ಕೆ ಒಳಗಾಗಿರುತ್ತದೆ. ಅಂದರೆ ಸುಮಾರು 540 ಮಿಲಿಯನ್ (54 ಕೋಟಿ) ಮಂದಿ ನಗರಗಳಲ್ಲಿರುತ್ತಾರೆ. ಇವರ ಪೈಕಿ ಸುಮಾರು 18 ಮಿಲಿಯನ್ ಮಂದಿಗೆ ಕಡಿಮೆ ವೆಚ್ಚದಲ್ಲಿ ಮನೆಗಳು ಬೇಕು. ಇದು ಬರೀ ವಸತಿ ವ್ಯವಸ್ಥೆಯ ಕಥೆ. ಇನ್ನು ಒಳಚರಂಡಿ, ರಸ್ತೆ, ಸಾರ್ವಜನಿಕ ಶೌಚಾಲಯದಂಥ ಯಾವುದೇ ಮೂಲ ಸೌಲಭ್ಯಗಳನ್ನು ಈ ಪ್ರದೇಶಗಳಿಗೆ ಸೇರಿಸುತ್ತಿಲ್ಲ.
ಹಾಗಾದರೆ ಮನೆಗಳನ್ನು ನಿರ್ಮಿಸುತ್ತಾ ಹೊರಟರೆ ಈ ಸಮಸ್ಯೆಗೆ ಕೊನೆ ಹೇಳಲು ಸಾಧ್ಯವೇ ಎಂದು ಕೇಳಬೇಡಿ. ನಿಜಕ್ಕೂ ಸಾಧ್ಯವಿಲ್ಲ. ಲಂಡನ್‌ನ ಮೇಯರ್ ಸಹ ಇದೇ ಪ್ರಶ್ನೆಯ ನೆಲೆಯಲ್ಲಿ ಯೋಚಿಸುತ್ತಿರುವುದು. ಹೆಚ್ಚುತ್ತಿರುವ ವಲಸೆ ನಿಯಂತ್ರಣಕ್ಕೆ ಪರ್ಯಾಯ ಕ್ರಮಗಳನ್ನು ಕಂಡುಕೊಳ್ಳದೇ, ಉಪ ನಗರಗಳನ್ನು ನಿರ್ಮಿಸಿ ಉದ್ಯೋಗವೂ ಸೇರಿದಂತೆ ಇತರೆ ಎಲ್ಲ ಸಾಧ್ಯತೆಗಳನ್ನು ವಿಸ್ತರಿಸದೇ ಯಾವ ಕ್ರಮಗಳನ್ನು ಕೈಗೊಂಡರೂ ಅವು ಸಮಸ್ಯೆಗೆ ಪರಿಹಾರವಾಗಿ ಕಾಣುವುದಿಲ್ಲ. ಉದ್ಯೋಗಕ್ಕೆಂದೇ ಎಲ್ಲರೂ ನಗರಕ್ಕೆ ವಲಸೆ ಬರುವುದರಿಂದ ಇಲ್ಲಿಗೇ ಪರಿಹಾರ ಹುಡುಕುವ ಅಗತ್ಯವಿದೆ.
ಕೆಲಸ ಸಿಕ್ಕರೆ ಸಾಕು
ಗ್ರಾಮೀಣ ಪ್ರದೇಶದಲ್ಲಿ ಕೃಷಿಯನ್ನು ಹೊರತುಪಡಿಸಿ ಬೇರೆ ಉದ್ಯೋಗಗಳಿಲ್ಲ ಎಂಬ ಅಭಿಪ್ರಾಯ ಒಂದೆಡೆ0 ನಗರದತ್ತ ವಲಸೆಗೆ ಕಾರಣವಾದರೆ ಮತ್ತೂಂದೆಡೆ ಕೃಷಿ ಉದ್ಯೋಗವಲ್ಲ, ಅದು ಏನಿದ್ದರೂ ಉಪ ಆದಾಯಕ್ಕೆ ಸಂಬಂಧಿಸಿದ್ದು. ಯಾವುದಾದರೂ ನಗರದಲ್ಲಿ ಕಚೇರಿಯಲ್ಲಿ ಒಂದು ಉದ್ಯೋಗ ಸಿಕ್ಕರೆ ಅದು ಅನುಕೂಲ ಎಂಬ ಜನರಲ್ಲಿನ ಅಭಿಪ್ರಾಯವೂ ಸಮಸ್ಯೆಗೆ ತನ್ನ ಕೊಡುಗೆ ನೀಡಿದೆ. ನೀವು ನಗರಕ್ಕೆ ಹೋಗುವ ಯಾರನ್ನೇ ಕೇಳಿದರೂ, ಅವರಿಗೆ ಅಲ್ಲಿ ಸಿಗಬಹುದಾದ ಉದ್ಯೋಗದ ಬಗ್ಗೆ ಇರುವಷ್ಟು ಆತಂಕ ವಸತಿ ಬಗ್ಗೆ ಇರುವುದಿಲ್ಲ.”ಉಳಿದುಕೊಳ್ಳೋಕೆ ಏನು ಮಾಡ್ತೀರಿ?’ ಎಂದು ಕೇಳಿದರೆ, ಸಮಸ್ಯೆಯೇ ಬಹಳ ಸರಳ ಎನ್ನುವಂತೆ ಎಲ್ಲಿಯಾದರೂ ಇದ್ದರೆ ಸರಿ. ಕೆಲಸ ಮುಖ್ಯ ಎನ್ನುವವರೇ ಬಹಳ. ಕೆಲಸವೊಂದು ಸಿಕ್ಕರೆ ಬಸ್ ಸ್ಟಾಂಡ್‌ನಲ್ಲಿ ಇದ್ದಾದರೂ ಬದುಕುತ್ತೇನೆ ಎನ್ನುವ ಮಾತೂ ಸಹ ನಮಗೆ ಕೇಳಿಬರುತ್ತದೆ. ಈ ಮಾತುಗಳು ಕೇವಲ ಉದ್ಯೋಗದ ಅಗತ್ಯವನ್ನು ಪ್ರತಿಪಾದಿಸುತ್ತವೆ. ಆ ಕಾರಣದಿಂದಲೇ ವಲಸೆಯನ್ನು ತಡೆಯಲು ಈ ನೆಲೆಯಲ್ಲೇ ಪರಿಹಾರ ಹುಡುಕಬೇಕು. ಅದು ಸಾಧ್ಯವಾದರೆ ನಗರದಲ್ಲಿನ ವಸತಿ ಸಮಸ್ಯೆಗೂ ಪರಿಹಾರ ಸಿಗಬಹುದು.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕನಸೆಂದರೆ 2022ರೊಳಗೆ ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸಬೇಕೆಂಬುದು. ಅದನ್ನು ಸಾಧ್ಯವಾಗಿಸಲು ಯಾವುದೋ ಒಂದು ಮಂತ್ರದಂಡ ಹಿಡಿದು ಹೊರಟರೆ ಸಾಧ್ಯವಾಗದು. ಬದಲಾಗಿ ಕಾರ್ಯ ಸಾಧ್ಯವಾಗುವ ಯೋಜನೆಗಳನ್ನು ರೂಪಿಸಬೇಕು. ಜತೆಗೆ ಯೋಜನಾಬದ್ಧ ಪ್ರಗತಿಯ ಪಾಠ ನಗರವನ್ನು ಆಳುವ ಎಲ್ಲ ಆಡಳಿತಗಾರರಿಗೂ ತುರ್ತಾಗಿ ಆಗಬೇಕು. ಆಗ ನಗರಗಳು ತಮ್ಮ ಚುಂಬಕ ಶಕ್ತಿಯನ್ನು ಕಳೆದುಕೊಳ್ಳಲಾರವು. ಈ ನಿಟ್ಟಿನಲ್ಲಿ ವಸತಿ ಸಮಸ್ಯೆಯ ಸಮರ್ಥ ನಿರ್ವಹಣೆ ದೊಡ್ಡ ಪರಿಹಾರವಾಗಿ ತೋರುವುದರಲ್ಲಿ ಅಚ್ಚರಿ ಏನಿಲ್ಲ.
ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.