ಶಿಮ್ಲಾವನ್ನು ಪ್ರೀತಿಸುವುದಾದರೆ ದಯವಿಟ್ಟು ಸ್ವಲ್ಪ ದಿನ ಹೋಗಬೇಡಿ
Team Udayavani, Jun 2, 2018, 6:00 AM IST
ಶಿಮ್ಲಾವನ್ನು ಉಳಿಸುವ ಕೆಲಸ ನಮ್ಮೆಲ್ಲರದ್ದು. ಬರಡು ಭೂಮಿಯಂತಾಗುತ್ತಿರುವ ಗಿರಿಧಾಮಕ್ಕೆ ಉಸಿರಾಡಲು ಬಿಡಬೇಕು. ಅಲ್ಲಿನ ಸಮಸ್ಯೆಯನ್ನು ಅರಿತಾದರೂ ನಮ್ಮ ನಗರಗಳ ಅಭಿವೃದ್ಧಿಯತ್ತ ಹೊರಳಿ ನೋಡಬೇಕು.
ಮೇ - ಜೂನ್ ಬಂತೆಂದರೆ ನಾವು ಯಾವುದೋ ಗಿರಿಧಾಮದತ್ತ ಮುಖ ಮಾಡುತ್ತೇವೆ. ಮಕ್ಕಳಿಗೂ ರಜಾ ಸಮಯ, ವಾತಾವರಣವೂ ಬಿಸಿ. ಒಂದೆರಡು ದಿನವಾದರೂ ತಣ್ಣಗೆ ಇದ್ದು ಬರೋಣ ಎಂದು ಗಿರಿಧಾಮಗಳ ವಿಳಾಸವನ್ನು ಹುಡುಕುತ್ತೇವೆ. ಅದರಲ್ಲೂ ಶಿಮ್ಲಾ, ಕುಲು, ಮನಾಲಿ ತಣ್ಣಗಿರಲು ಹೇಳಿ ಮಾಡಿಸಿದ ಸ್ಥಳವೆಂದು ಸಾಬೀತಾಗಿ ಹೋಗಿದೆ. ಅಲ್ಲಿನ ನಿಸರ್ಗರಮ್ಯತೆ, ವಾತಾವರಣವೆಲ್ಲವೂ ಬಹಳ ಮುದ ನೀಡುವಂಥದ್ದು. ಹಾಗಾಗಿ ಎಲ್ಲರ ಆಯ್ಕೆಯ ಸ್ಥಳವಾಗಿದೆ ಅವು. ಹಾಗೆಯೇ ತಮಿಳುನಾಡಿನ ಊಟಿ (ಉದಕಮಂಡಲಂ) ಇರಬಹುದು.
ಬಹಳ ವಿಚಿತ್ರವೆಂದರೆ ನಾವೆಲ್ಲಾ ತಣ್ಣಗಿರೋಣ ಎಂದು ಹೋಗಿ ಅಲ್ಲೀಗ ನೀರಿನ ಕೊರತೆಯ ಕಾವು ಏರಿದೆ. ತೊಟ್ಟು ನೀರಿಲ್ಲ. ನಿತ್ಯವೂ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಆಡಳಿತ ವ್ಯವಸ್ಥೆ ಕೊಟ್ಟಷ್ಟು ನೀರು ಹಿಡಿದು ಬದುಕುವ ಸ್ಥಿತಿ ಅಲ್ಲೀಗ ಉದ್ಭವಿಸಿದೆ. ಕಳೆದ ಒಂದು ವಾರದಿಂದ ದಿನವೂ ಇದೇ ಸಮಸ್ಯೆ. ಇದು ಎಲ್ಲಿಯವರೆಗೆ ತಲುಪಿದೆಯೆಂದರೆ, ಶುಕ್ರವಾರ ರಾಷ್ಟ್ರೀಯ ಹೆದ್ದಾರಿಯನ್ನೇ ಸ್ಥಳೀಯರು ಬ್ಲಾಕ್ ಮಾಡಿ ಪ್ರತಿಭಟನೆ ನಡೆಸಿದರು.”ನಮಗೆ ನೀರು ಕೊಡಿ, ಮತ್ತೇನೂ ಬೇಡ’ ಎಂದು ಆಗ್ರಹಿಸಿದರು. ಗಂಟೆಗಟ್ಟಲೆ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತವು.
ಇಷ್ಟಾದರೆ ಪರವಾಗಿಲ್ಲ, ಇನ್ನೂ ವಿಚಿತ್ರವಾದ ಸ್ಥಿತಿ ಎಂದರೆ, ಸ್ಥಳೀಯರು “ನೀವು ಶಿಮ್ಲಾವನ್ನು ಪ್ರೀತಿಸುತ್ತೀರಾದರೆ ದಯವಿಟ್ಟು ಸ್ವಲ್ಪ ದಿನ ಬರಬೇಡಿ. ಅದು ಉಸಿರಾಡಿಕೊಳ್ಳಲಿ’ ಎನ್ನುತ್ತಿದ್ದಾರೆ. ಎಂಥ ದಯನೀಯ ಸ್ಥಿತಿ ನೋಡಿ. ಏಕೆಂದರೆ ಹಿಮಾಚಲ ಪ್ರದೇಶದ ಆರ್ಥಿಕತೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ. ದಿನೇ ದಿನೇ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಹಿಮಾಚಲ ಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶಗಳ ಪ್ರಕಾರವೇ ರಾಜ್ಯದ ಪ್ರವಾಸ ತಾಣಗಳಿಗೆ 2017ರಲ್ಲಿ 2016ಕ್ಕಿಂತ ಶೇ. 6. 2 ರಷ್ಟು ಪ್ರವಾಸಿಗರು ಹೆಚ್ಚಳವಾಗಿದ್ದರು. ಇದು ಜಿಎಸ್‌ಟಿ ಮತ್ತು ಅಮಾನ್ಯಿಕರಣದ ಪರಿಣಾಮವಿದ್ದಾಗಲೂ ನಡೆದದ್ದು. ಸುಮಾರು 1.96 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರು. ಈ ಪೈಕಿ ಸುಮಾರು 4.80 ಲಕ್ಷ ಮಂದಿ ವಿದೇಶಿಗರಾಗಿದ್ದರೆ, ಉಳಿದವರೆಲ್ಲಾ ದೇಶಿಗರು. ಇದೇ ಸಂಖ್ಯೆ 2016ರಲ್ಲಿ 1.84 ಕೋಟಿ ಆಸುಪಾಸಿನಲ್ಲಿತ್ತು. ಅದರಲ್ಲೂ ಹೆಚ್ಚು ಮಂದಿ ಪ್ರವಾಸಿಗರು ಆಯ್ಕೆ ಮಾಡಿ ಕೊಳ್ಳುವುದು ಮೊದಲು ಶಿಮ್ಲಾವನ್ನೇ. ಬಳಿಕ ಕುಲು,ಮನಾಲಿ ಕಡೆಗೆ ನಡೆಯುತ್ತಾರೆ. ಇರುವ ಹೆಚ್ಚು ದಿನ ಕಳೆಯುವುದು ಶಿಮ್ಲಾದಲ್ಲೇ. ಜತೆಗೆ ಇತ್ತೀಚೆಗೆ ಕಂಗ್ರಾ ಮತ್ತು ಕುಲು ಜಿಲ್ಲೆಯತ್ತಲೂ ಪ್ರವಾಸಿಗರು ಮನಸ್ಸು ಮಾಡುತ್ತಿದ್ದಾರೆ. ಇವೆಲ್ಲವೂ ಸ್ಥಳೀಯರಿಗೆ ಖುಷಿ ಕೊಟ್ಟಂತ ಬೆಳವಣಿಗೆಯೇ. ಸ್ಥಳೀಯ ಪಂಚಾಯತ್‌ಗಳೂ ಒಂದಿಷ್ಟು ಹಣದ ಮುಖ ನೋಡಿ ಅಭಿವೃದ್ಧಿಯ ಜಪ ಮಾಡುತ್ತಿವೆ. ಅದರಲ್ಲೂ ಸ್ಥಳೀಯ ಆರ್ಥಿಕತೆಯ ಸುಧಾರಣೆಗೆ ಪ್ರವಾಸೋದ್ಯಮ ಸಾಕಷ್ಟು ಸಹಾಯ ಮಾಡಿರುವುದರಲ್ಲಿ ಸಂದೇಹವೇ ಇಲ್ಲ.
ಅಂಥ ಊರಿನಲ್ಲಿ ಈಗ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ. ಯಾವುದು ಆದಾಯದ ಭಾಗವಾಗಿತ್ತೋ ಅದನ್ನೇ ಬೇಡ ಎನ್ನುವ ಸ್ಥಿತಿ ಉದ್ಭವಿಸಿದೆ. ಅದರಲ್ಲೂ ಮೇ-ಜೂನ್ ತಿಂಗಳಲ್ಲಿ ನಿತ್ಯವೂ ಸುಮಾರು 20 ರಿಂದ 22 ಸಾವಿರ ಮಂದಿ ಪ್ರವಾಸಿಗರು ಶಿಮ್ಲಾಕ್ಕೆ ಭೇಟಿ ನೀಡುತ್ತಾರೆ. ಇಂಥ ಹೊತ್ತಿನಲ್ಲೇ ನೀರಿನ ಕೊರತೆ ಉದ್ಭವಿಸಿದರೆ ಹೇಗೆ? ಸ್ಥಳೀಯ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರನ್ನು ಆಕರ್ಷಿಸಲು ಜೂನ್ 1ರಿಂದ 5ರವರೆಗೆ ಶಿಮ್ಲಾ ಸಮ್ಮರ್ ಫೆಸ್ಟಿವಲ್ ಎಂಬುದನ್ನೂ ಆಚರಿಸುತ್ತಿತ್ತು. ಅದನ್ನೂ ಮುಂದೂಡಲಾಗಿದೆ. ಒಟ್ಟೂ ಶಿಮ್ಲಾ ಕುಸಿದಿದೆ ಎಂದೇ ಹೇಳಬಹುದು. ಇಲ್ಲಿನ ಜನಸಂಖ್ಯೆ 2.20 ಲಕ್ಷದಷ್ಟು. ಪ್ರತಿ ವೀಕೆಂಡ್ ಕಳೆಯಲು ಬರುವ ಸಂಖ್ಯೆ 30 ಸಾವಿರ ದಾಟುತ್ತದೆ. ಇಂಥ ನಮ್ಮ ಸುಂದರ ಶಿಮ್ಲಾ ಯಾಕೆ ಹೀಗಾಯಿತು?
ಪ್ರವಾಸಿಗರ ಸಂಖ್ಯೆ ಹೆಚ್ಚಳ
ಯಾವುದರ ಆಕರ್ಷಣೆಗೆ ಜನರು ಬರುತ್ತಿದ್ದರೋ ಅದನ್ನೇ ಬೇಡ ಎನ್ನುವ, ಸಹವಾಸ ಸಾಕಪ್ಪಾ ಎನ್ನುವ ಸ್ಥಿತಿಗೆ ಬಂದಿದ್ದೇವೆ. ಶಿಮ್ಲಾದ ಹಿಮ, ಭೂ ದೃಶ್ಯವೆಲ್ಲವೂ ಮನಮೋಹಕ. ಅದರಿಂದಲೇ ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆ ಸ್ಥಳೀಯವಾಗಿ ಲಭ್ಯವಿರುವ ಸೀಮಿತ ಸಂಪನ್ಮೂಲಗಳ ಮೇಲೆ ಅನಗತ್ಯ ಒತ್ತಡ ಹೇರುತ್ತಿದೆ. ಇದು ಇನ್ನೊಂದು ಅರ್ಥದಲ್ಲಿ ಸಂಪನ್ಮೂಲಗಳ ಶೋಷಣೆ. ವರ್ಷದಿಂದ ವರ್ಷಕ್ಕೆ ವಿಪರೀತ ಎನ್ನುವಂತೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದು ಸಮಸ್ಯೆ ಬಿಗಡಾಯಿಸುವಂತೆ ಮಾಡುತ್ತಿದೆ. ಪ್ರವಾಸಿಗರಿಗೆ ತೊಂದರೆಯಾಗದಿರಲೆಂದು ಈ ಸಂದರ್ಭದಲ್ಲಿ ಹೋಟೆಲ್‌ಗಳಿಗೆ, ರೆಸ್ಟೋರೆಂಟ್‌ಗಳಿಗೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಸುತ್ತಿದ್ದರೂ ಬೇಕಾಗುವಷ್ಟು ಅಲ್ಲ. ಅದರಿಂದಲೇ ಸ್ಥಳೀಯರು, ಪ್ರವಾಸಿಗರಿಗೆ ಬರಬೇಡಿ ಎಂದು ಕೇಳಿಕೊಳ್ಳುತ್ತಿರುವುದು.
ಅರ್ಥವಿಲ್ಲದ ಅಭಿವೃದ್ಧಿ
ಅರ್ಥ (ಹಣ)ಕ್ಕಾಗಿ ಅರ್ಥವಿಲ್ಲದ ಅಭಿವೃದ್ಧಿಯತ್ತ ಮುಖ ಮಾಡಿ ರುವುದು ನಮ್ಮ ನಗರಗಳು. ಅದರಲ್ಲಿ ಎಲ್ಲ ನಗರಗಳಲ್ಲೂ ಇದೇ ಪರಿಸ್ಥಿತಿ ಇದೆ. ನಮ್ಮ ಪ್ರವಾಸೋದ್ಯಮ ತಾಣಗಳೂ ಇದೇ ಪರಿಸ್ಥಿತಿ ಎದುರಿಸುತ್ತಿವೆ. ಪ್ರವಾಸಿಗರ ಸಂಖ್ಯೆಗೆ ತಕ್ಕಂತೆ ಮೂಲ ಸೌಲಭ್ಯ ಕಲ್ಪಿಸಲು ಇದ್ದ ಪ್ರದೇಶದಲ್ಲೆಲ್ಲ ಒಂದಿಷ್ಟು ಕಟ್ಟಡಗಳನ್ನು ನಿರ್ಮಿಸ ಲಾಗಿದೆ. ಕಾಂಕ್ರೀಟ್‌ಮಯವಾಗುತ್ತಿದೆ ಎಂದು ಹೇಳಬಹುದು. ಸಣ್ಣ ಪಟ್ಟಣ. ಸುತ್ತಲೂ ಕಟ್ಟಡಗಳು ಎದ್ದು ಬಿಟ್ಟರೆ ಕಿಟಕಿಗಳಲ್ಲಿ ನಾವು ನಿಸರ್ಗವನ್ನು ಕಂಡು ಸುಖೀಸಬೇಕು. ಆ ಸ್ಥಿತಿಯೂ ನಿರ್ಮಾಣ ವಾಗುತ್ತಿದೆ. ಸರಿಯಾದ ರೀತಿಯಲ್ಲಿ ನಗರ ಯೋಜನೆ ಮಾಡದೇ ಬೇಕಾಬಿಟ್ಟಿ ಅಭಿವೃದ್ಧಿಗೆ ಅವಕಾಶ ಮಾಡಿಕೊಟ್ಟಿರುವುದೂ ಇಂದಿನ ಸಮಸ್ಯೆಗೆ ದೊಡ್ಡ ಕೊಡುಗೆಯನ್ನೇ ನೀಡಿದೆ. ಯಾಕೆಂದರೆ, ಮೊನ್ನೆ ಮಂಗಳೂರು ಮುಳುಗಿದ್ದೂ ಹಾಗೆಯೇ ಅಲ್ಲವೇ. ಕನಿಷ್ಠ ಮಳೆ ನೀರು ಹರಿದು ಹೋಗಲು ಬಿಡದೇ ಸಿಕ್ಕ ಸಿಕ್ಕಲ್ಲೆಲ್ಲಾ ಡಾಮರು ಹಾಕಿ, ಕಟ್ಟಡ ಕಟ್ಟಿ ಮುಗಿಸಿದ್ದೇವೆ. ನೀರು ಎಲ್ಲಿಗೂ ಹರಿಯದಿದ್ದರೆ ನಿಲ್ಲದೇ ಏನು ಮಾಡೀತು? ಆದೇ ಸ್ಥಿತಿ ಶಿಮ್ಲಾದಲ್ಲೂ ಉದ್ಭವಿಸಿದೆ. ನೀರು ಹರಿದು ಹೋಗಲು ಸ್ಥಳವಿಲ್ಲ, ಜತೆಗೆ ಸೂಕ್ತ ಚರಂಡಿ ವ್ಯವಸ್ಥೆಯೂ ಇಲ್ಲ. ಎಲ್ಲದರ ಪರಿಣಾಮ ಶಿಮ್ಲಾ ಕುಸಿಯುತ್ತಿದೆ.
ವಾತಾವರಣ ವೈಪರೀತ್ಯ
ವಾತಾವರಣ ವೈಪರೀತ್ಯದ ಪರಿಣಾಮವೂ ಇದೆ ಎನ್ನಲಾಗುತ್ತಿದೆ. ಹಿಮಾಲಯ ಪ್ರಾಂತ್ಯದ ಸುತ್ತ ಇದ್ದ ಮಂಜಿನ ಕೋಟೆ ಕರಗಿ ಕ್ಷೀಣಿಸುತ್ತಿದೆ. ಹಾಗಾಗಿ ರಾವಿ, ಸಟ್ಲೆಜ್, ಚೆನಾಬ್, ಬಿಯಾಸ್, ಪಾರ್ವತಿ ಮತ್ತಿತರ ನದಿಗಳಲ್ಲೂ ನೀರಿನ ಪ್ರಮಾಣ ತಗ್ಗುತ್ತಿದೆ. ಈ ನದಿಗಳು ಮತ್ತು ಉಪನದಿಗಳಿಗೆ ಬೇಸಗೆಯಲ್ಲಿ ಹಿಮ ಕರಗಿ ಬರುವ ನೀರೇ ಆಧಾರ. ಎಲ್ಲದರ ಒತ್ತಡವೂ ಈಗ ಶಿಮ್ಲಾದ ಮೇಲೆ ಬಿದ್ದಿದೆ. ಭವಿಷ್ಯದಲ್ಲಿ ಯಾರೇ ಶಿಮ್ಲಾಕ್ಕೆ ಹೊರಡುವುದಿದ್ದರೂ, “ಅಲ್ಲಿ ನೀರು ಸಿಗೋಲ್ಲ, ಹುಷಾರು’ ಎಂದು ಎಚ್ಚರಿಸುವಂತಾಗಿದೆ. ಇದರೊಂದಿಗೆ ಇರುವ ನೀರಿನ ಪೂರೈಕೆ ವ್ಯವಸ್ಥೆಯಲ್ಲಿ ಆಗುತ್ತಿರುವ ಲೋಪಗಳು. ಅದರಲ್ಲೂ ಅಪಾರ ಪ್ರಮಾಣದಲ್ಲಾಗುತ್ತಿರುವ ಸೋರಿಕೆ. ಕನಿಷ್ಠ 4 ಎಂಎಲ್‌ಡಿ ಲೀಟರ್ ನೀರು ಬರೀ ಸೋರಿಕೆಯಾಗು ತ್ತಿದೆ. ಇದಕ್ಕೆ ಮತ್ತೆ ಅದೇ ಹಳೇ ಕಾರಣ. ಏನೆಂದರೆ ನೀರನ್ನು ಸಾಗಿಸುವ ಪೈಪುಗಳು ಹಳೆಯದಾಗಿವೆ, ಅಲ್ಲಲ್ಲಿ ಒಡೆದು ಹೋಗಿವೆ, ಇತ್ಯಾದಿ. ಇದೆಲ್ಲದರ ಹಿನ್ನೆಲೆಯಲ್ಲಿ ದಿನವೊಂದಕ್ಕೆ ಕನಿಷ್ಠ 4.50 ಕೋಟಿ ಲೀಟರ್ ನೀರು ಬೇಕು ಶಿಮ್ಲಾಕ್ಕೆ. ಈಗ ಪೂರೈಕೆಯಾಗುತ್ತಿರು ವುದು ಬರೀ 1.80 ಕೋಟಿ ಲೀಟರ್.ಅಂದರೆ ಸುಮಾರು 2.70 ಕೋಟಿಯಷ್ಟು ಕೊರತೆ. ಅರ್ಧ ಪ್ರಮಾಣದಷ್ಟೂ ನೀರು ಸಿಗದಿದ್ದರೆ ಕೋಲಾಹಲವಾಗದೇ ಇನ್ನೇನಾದೀತು? ಅದಕ್ಕೇ ಹೈಕೋರ್ಟ್ ಸಹ ಯಾವುದೇ ನಿರ್ಮಾಣ ಕಾಮಗಾರಿ ನಡೆಸದಂತೆಯೂ ಆದೇಶಿಸಿದೆ.
ಮುಂದೇನು?
ಶಿಮ್ಲಾವೂ ಅನಿವಾರ್ಯವಾಗಿ ತನ್ನ ಹಳೆಯ ಪಠ್ಯಕ್ರಮವನ್ನು ತೆಗೆದು ಓದತೊಡಗಬೇಕು. ಅಂದರೆ ನೀರು ಉಳಿಸಿಕೊಳ್ಳುವ, ಅಂತರ್ಜಲ ಪ್ರಮಾಣ ಹೆಚ್ಚಿಸುವಂಥ, ಜಲ ಸಂರಕ್ಷಣೆಯ ಅಭಿ ಯಾನವನ್ನು ಕೈಗೊಳ್ಳಬೇಕು. ಮಳೆ ನೀರನ್ನು ಒಂದಿಷ್ಟು ಕಾಪಿಟ್ಟು ಕೊಂಡು ದಿನಕಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪ್ರವಾಸಿಗರಿಂದ ಹಿಡಿದು ಎಲ್ಲರಿಗೂ ಜಲ ಸಂರಕ್ಷಣೆ ಹಾಗೂ ಮಿತ ಬಳಕೆಯನ್ನು ಅನುಸರಿಸುವಂತೆ ಕಡ್ಡಾಯಗೊಳಿಸಬೇಕು. ಇಂಥ ಹತ್ತಾರು ಪದ್ಧತಿಗಳನ್ನು ಅಳವಡಿಸಿಕೊಳ್ಳದಿದ್ದರೆ ಶಿಮ್ಲಾ ಮುಳುಗುವುದಿಲ್ಲ ; ಬದಲಾಗಿ ಒಣಗುತ್ತದೆ. ಅದಾದ ಬಳಿಕ ಯಾರೂ ಶಿಮ್ಲಾವನ್ನು ಪ್ರೀತಿಸುವುದಿಲ್ಲ.
ನಾವೇನು ಮಾಡಬೇಕು?
ನಮ್ಮ ತಲೆಮಾರಿಗೂ ಶಿಮ್ಲಾ ಉಳಿಯಬೇಕಿದೆ. ಅದಕ್ಕೇ ನಾವು ಶಿಮ್ಲಾದ ಮೇಲಿನ ಒತ್ತಡ ಕಡಿಮೆ ಮಾಡಬೇಕು. ಪರಿಸರಸ್ನೇಹಿ ನಡವಳಿಕೆ, ಸಂಪನ್ಮೂಲಗಳ ಮಿತಬಳಕೆ ಎಲ್ಲವೂ ನಮ್ಮ ಮೌಲ್ಯಗ ಳಾಗಬೇಕು. ಅಷ್ಟೆಲ್ಲಾ ಆದರೆ ಬರೀ ಶಿಮ್ಲಾ ಉಳಿಯುವುದಿಲ್ಲ; ಇಡೀ ಭಾರತವೇ ಉಳಿಯುತ್ತದೆ. ನೀವೂ ಶಿಮ್ಲಾವನ್ನು ಪ್ರೀತಿಸುವುದಾದರೆ ಸ್ವಲ್ಪ ದಿನ ಅತ್ತ ಹೋಗಬೇಡಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.