ಕೀನ್ಯಾದಿಂದ ಈ ಪಾಠವನ್ನು ಕಲಿಯುವುದು ಒಳ್ಳೆಯದು
Team Udayavani, Sep 2, 2017, 10:15 AM IST
ಈಗ ನಾವಿರುವುದೇ ಬೆಂಕಿಯ ಮೇಲೆ. ಬದುಕನ್ನು ಉಳಿಸಿಕೊಳ್ಳಬೇಕಾದರೆ ಬೆಂಕಿಯಿಂದ ಹೊರಬೇಕು ಅಥವಾ ಆರಿಸಬೇಕು. ಯಾವುದು ದುಬಾರಿಯೋ ಅದನ್ನು ಕೈಗೆತ್ತಿಕೊಳ್ಳುವುದಕ್ಕಿಂತ ಅಗ್ಗವಾದುದೇ ಒಳ್ಳೆಯದು. ಆ ನಿಟ್ಟಿನಲ್ಲಿ ಕೀನ್ಯಾ ನಮಗೆ ಮಾದರಿಯಾಗಲಿ.
ನಾವೆಲ್ಲಾ ಇನ್ನೂ ಪ್ಲಾಸ್ಟಿಕ್‌ನ್ನು ನಿಷೇಧಿಸಬೇಕೋ ಬೇಡವೋ ಎಂಬ ಚರ್ಚೆಯಲ್ಲಿ ಮುಳುಗಿದ್ದೇವೆ. ವಿಚಿತ್ರವೆಂದರೆ, ನಮ್ಮ ಎದುರೇ ಈಗಾಗಲೇ ಪ್ರಾಣಿ ಪಕ್ಷಿಗಳೆಲ್ಲ ನಾವು ಬಳಸುವ ಪ್ಲಾಸ್ಟಿಕ್ ನುಂಗಿ ಸಾಯುತ್ತಿವೆ. ಆದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ತರಲು ನಾವು ತಯಾರಿಲ್ಲ.
ಒಂದು ಕುಟುಂಬದಲ್ಲಿ ಮಹತ್ವದ ತೀರ್ಮಾನಗಳು ಆಗುವುದು ಎರಡೇ ಕಡೆ. ಒಂದು ಹಜಾರ, ಮತ್ತೂಂದು ಅಡುಗೆ ಮನೆ. ದುರಂತವೆಂದರೆ ಭಾರತದಂಥ ದೇಶದಲ್ಲಿ ಪ್ಲಾಸ್ಟಿಕ್ ನಿಷೇಧಿಸಲು ಎಲ್ಲೂ ಸ್ಪಷ್ಟ ತೀರ್ಮಾನವಾಗಿಲ್ಲ. ಯಾವ ಗ್ರಾ.ಪಂಚಾಯತ್ ಸಹ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ನಿಷೇಧಕ್ಕೆ ಮುಂದಾಗಿಲ್ಲ. ಅದನ್ನು ಬಳಸದಿರಲು ಕಾರಣ ಹುಡುಕುವುದಕ್ಕಿಂತ ಹೆಚ್ಚಾಗಿ ಬಳಸುವುದಕ್ಕೆ ಕಾರಣ ಹುಡುಕುತ್ತಾ ಕಾಲ ಕಳೆಯುತ್ತಿದ್ದೇವೆ.
ಇಂಥದೊಂದು ಒಣ ಚರ್ಚೆಗೆ ನಾವೊಬ್ಬರೇ ತೊಡಗಿಲ್ಲ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇಂಥದ್ದೇ ಚರ್ಚೆ ನಡೆಯುತ್ತಲೇ ಇದೆ, ಹಲವಾರು ವರ್ಷಗಳಿಂದ. ಇಷ್ಟಕ್ಕೂ ಆದ ಪ್ರಯೋಜನವೇನು ಎಂದರೆ ಶೂನ್ಯ ಸಂಪಾದನೆ. ವಿಚಿತ್ರ ನೋಡಿ. ಶೂನ್ಯ ಸಂಪಾದನೆಗೆ ಆಧ್ಯಾತ್ಮಿಕ ನೆಲೆಯಲ್ಲಿ ಬಹಳ ದೊಡ್ಡ ಅರ್ಥವಿದೆ. ಆದರೆ ನಮ್ಮ ನೀರಸ ಮತ್ತು ಪ್ರಯೋಜನವಿಲ್ಲದ ಚರ್ಚೆ ಅಂಥದೊಂದು ಪದದ ಗಂಭೀರತೆಯನ್ನು ಕಡಿಮೆ ಮಾಡುತ್ತಿರುವುದು ಸುಳ್ಳಲ್ಲ.
ಕೀನ್ಯಾದ ಕಥೆ ಕೇಳಿ
ಅಭಿವೃದ್ಧಿಗೊಂಡ ರಾಷ್ಟ್ರಗಳದ್ದು ಪ್ಲಾಸ್ಟಿಕ್ ವಿಷಯದಲ್ಲಿ ಒಂದು ಕಥೆ. ಅಭಿವೃದ್ಧಿ ಶೀಲ ರಾಷ್ಟ್ರಗಳದ್ದು ಮತ್ತೂಂದು ಕಥೆ. ಇನ್ನೂ ಅಭಿವೃದ್ಧಿಗೊಳ್ಳದ ಅಥವಾ ನಿಧಾನಗತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಮಗದೊಂದು ಕಥೆ. ಹಾಗೆ ಹೇಳುವುದಾದರೆ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಬಡತನ, ನಿರುದ್ಯೋಗ ಸೇರಿದಂತೆ ಹತ್ತಾರು ಸಮಸ್ಯೆಗಳಿದ್ದರೂ ಪರಿಸರದ ಬಗೆಗಿನ ವಿಷಯಗಳಲ್ಲಿ ಕೆಲವು ಖಚಿತ ತೀರ್ಮಾನಗಳನ್ನು ಕೈಗೊಳ್ಳುತ್ತವೆ. ಅದಕ್ಕೆ ಅವು ಎಂದಿಗೂ ಹಿಂಜರಿಯುವುದಿಲ್ಲ. ಇದೇ ಮಾತನ್ನು ನಮ್ಮ ರಾಷ್ಟ್ರವೂ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಿಗಾಗಲೀ ಅಥವಾ ಅಭಿವೃದ್ಧಿಗೊಂಡ ರಾಷ್ಟ್ರಗಳಿಗಾಗಲೀ ಅನ್ವಯಿಸಲಾಗದು. ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಗೆ ಕಿತ್ತು ತಿನ್ನುವ ಬಡತನವಿಲ್ಲ. ಆದರೂ ನಮಗೆ ಪರಿಸರದ ಬಗ್ಗೆ ಇರುವ ಕಾಳಜಿಯೂ ಅಷ್ಟೇ. ನಮಗೆ ಪರಿಸರವೆನ್ನುವುದು ಬಳಸಿ ಬಿಸಾಡುವ ವಸ್ತುವೆನಿಸಿದರೆ, ಅಭಿವೃದ್ಧಿಗೊಂಡ ರಾಷ್ಟ್ರಗಳ ಮಂದಿಗೆ ಅದು ಕೊಂಡುಕೊಳ್ಳುವ ವಸ್ತು. ಅಂದರೆ ಅಂಗಡಿಗಳಲ್ಲಿ ಬಿಕರಿಗಿಟ್ಟ ವಸ್ತು. ಬೇಕಾದಷ್ಟು ಖರೀದಿಸಿ, ಅನುಭೋಗಿಸಿ, ವ್ಯರ್ಥ ಮಾಡಿ ಕಾಗದದಿಂದ ಕೈ ಒರೆಸಿಕೊಂಡು ಹೋದಂತೆ ಹೋಗಿಬಿಡಬಹುದು. ಜತೆಗೆ ಜಾಗತಿಕ ಮಟ್ಟದಲ್ಲಿ ಪರಿಸರಸ್ನೇಹಿಯಾಗಿ ಬಿಂಬಿಸಿಕೊಳ್ಳಲು ಸಣ್ಣ ಪುಟ್ಟ ರಾಷ್ಟ್ರಗಳಲ್ಲಿನ ಪರಿಸರ ಯೋಜನೆಗಳಿಗೆ, ಪರಿಸರ ಮಾಲಿನ್ಯ ತಡೆಯುವಂಥ ಪ್ರಯತ್ನಗಳಿಗೆ ಒಂದಿಷ್ಟು ಬಿಡಿಗಾಸು ಕೊಟ್ಟು ಕಳೆದರಾಯಿತು. ಇದು ನಮ್ಮ ದೃಷ್ಟಿಕೋನ.
ಅತ್ಯಂತ ಕಠಿಣ ನಿಯಮ
ಈ ಮಾತನ್ನು ಪುಷ್ಟೀಕರಿಸುವಂತೆಯೇ ಇದೆ ಕೀನ್ಯಾದ ಕಥೆ. ಕೀನ್ಯಾ, ಆಫ್ರಿಕಾ ಖಂಡದಲ್ಲಿ ಬರುವ ಸಣ್ಣ ರಾಷ್ಟ್ರ. ಅಲ್ಲಿ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿರುವ ಎಲ್ಲ ಸಮಸ್ಯೆಗಳೂ ಇವೆ. ನಿರುದ್ಯೋಗವಿದೆ, ಬಡತನ ಬೆನ್ನು ಬಿಟ್ಟಿಲ್ಲ. ಆದರೂ, ನಾವೆಲ್ಲಾ ಶಹಭಾಷ್ ಹೇಳುವಂತೆ ನಿರಂತರ ಒಂದು ದಶಕದ ಪ್ರಯತ್ನದಿಂದ ಸ್ಥಳೀಯ ಆಡಳಿತ, ಇಡೀ ಜಗತ್ತಿನಲ್ಲೇ ಅತ್ಯಂತ ಕಠಿಣವೆನ್ನಬಹುದಾದ ನಿಯಮವನ್ನು ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ತಂದಿದೆ. ಆ ನೆಲೆಯಲ್ಲಿ ನಾವು ಯೋಚಿಸುವುದಾದರೆ ನಿಜಕ್ಕೂ ದೊಡ್ಡ ಕೆಲಸ.
ಕೀನ್ಯಾ ರಾಷ್ಟ್ರ ಜಾರಿ ತಂದಿರುವ ನಿಯಮದ ಪ್ರಕಾರ, ಪ್ಲಾಸ್ಟಿಕ್‌ಉತ್ಪಾದಿಸುವುದಾಗಲೀ, ಮಾರುವುದಾಗಲೀ, ಆಮದು ಮಾಡಿಕೊಳ್ಳುವುದಾಗಲೀ ಅಥವಾ ಬಳಸುವುದಾಗಲೀ ಸಲ್ಲದು. ಅದು ಬರೀ ತಪ್ಪಲ್ಲ; ದೊಡ್ಡ ಅಪರಾಧ. ಇದಕ್ಕೆ ಪ್ರತಿಯಾಗಿ ತಪ್ಪಿತಸ್ಥ 40 ಸಾವಿರ ಅಮೆರಿಕನ್ ಡಾಲರ್‌ಗಳನ್ನು ದಂಡವಾಗಿ ಕಟ್ಟಬೇಕು ಅಥವಾ 4 ವರ್ಷ ಜೈಲುವಾಸ ಅನುಭವಿಸಬೇಕು.
ಹಾಗೆಂದು ಈ ನಿರ್ಧಾರವೇನೂ ಬಹಳ ಸುಲಭವಾಗಿ ಆದದ್ದಲ್ಲ. ಸುಮಾರು ಒಂದು ದಶಕದಿಂದ ಪ್ಲಾಸ್ಟಿಕ್ ನಿಷೇಧಿಸಬೇಕೋ, ಬೇಡವೋ ಎಂಬ ಗೊಂದಲದಲ್ಲೇ ಕೀನ್ಯಾ ಸಹ ಮುಳುಗಿತ್ತು. ಒಂದಿಷ್ಟು ಜನ ಇದು ಕೈಗಾರಿಕೆ. ಒಂದುವೇಳೆ ಬಂದ್ ಮಾಡಿದರೆ ಕೋಟ್ಯಂತರ ರೂ. ನಷ್ಟಕ್ಕೆ ಒಳಗಾಗುತ್ತದೆ, 176 ಕಂಪೆನಿಗಳು ಬಾಗಿಲು ಹಾಕುವುದರಿಂದ 60 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಾರೆ… ಇತ್ಯಾದಿ ಲೆಕ್ಕಗಳೆಲ್ಲ ಬಂದು ಎದುರು ಕುಳಿತವು. ಯಾಕೆಂದರೆ ಕೀನ್ಯಾ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಬಹಳ ದೊಡ್ಡ ಪ್ಲಾಸ್ಟಿಕ್ ರಫ್ತು ರಾಷ್ಟ್ರವಾಗಿತ್ತು. ಇವೆಲ್ಲವನ್ನೂ ಅಳೆದು, ತೂಗಿ ಕೊನೆಗೂ ಒಂದು ಸ್ಪಷ್ಟ ತೀರ್ಮಾನಕ್ಕೆ ಬಂದಿತು.
ಹತ್ತು ವರ್ಷದ ಪರಿಣಾಮವೇನು?
ಇಂಥದೊಂದು ತೀರ್ಮಾನದ ಹಿಂದೆ ಹತ್ತು ವರ್ಷಗಳಲ್ಲಿನ ಪರಿಣಾಮ ಕೆಲಸ ಮಾಡಿದೆ. ಯಾಕೆಂದರೆ ಆ ಪ್ರದೇಶದಲ್ಲಿನ ಹಸು ಸೇರಿದಂತೆ ಹಲವು ಪ್ರಾಣಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಸಿಗತೊಡಗಿತು. ಡಾಲ್ಫಿನ್, ಮೀನುಗಳು, ಆಮೆಗಳು ಎಲ್ಲದರ ಹೊಟ್ಟೆಯಲ್ಲೂ ಪ್ಲಾಸಿಕ್ ಇತ್ತು. ಅದನ್ನು ಅಲ್ಲಿಯ ಒಬ್ಬ ನಾಗರಿಕ ಪತ್ರಿಕೆಯೊಂದಕ್ಕೆ ಹೇಳಿದ ಮಾತು ಇಡೀ ಸನ್ನಿವೇಶದ ಭೀಕರತೆ ಕನ್ನಡಿ ಹಿಡಿಯುತ್ತದೆ. “”ಈ ಹಿಂದಿನ ಹತ್ತು ವರ್ಷಗಳಲ್ಲಿ ಹೀಗೆ ದನ-ಕರುಗಳು ಸೇರಿದಂತೆ ಪ್ರಾಣಿ-ಪಕ್ಷಿಗಳ ಹೊಟ್ಟೆಗಳಲ್ಲಿ ಪ್ಲಾಸ್ಟಿಕ್ ಕಂಡಿರಲಿಲ್ಲ. ಈಗ ಅವೆಲ್ಲವೂ ಕಾಣುತ್ತಿದೆ”.
ವಿಶ್ವಸಂಸ್ಥೆಯ ಪರಿಸರ ಯೋಜನೆಯಲ್ಲಿ ಸಮುದ್ರ ತ್ಯಾಜ್ಯ ನಿರ್ವಹಣೆ ಕುರಿತು ಕಾರ್ಯ ನಿರ್ವಹಿಸುತ್ತಿರುವ ಪರಿಣತರೊಬ್ಬರು ಇಂಥದ್ದೇ ಆತಂಕವನ್ನು ವ್ಯಕ್ತಪಡಿಸಿದ್ದಾರೆ. “”ಇದೇ ಸ್ಥಿತಿ (ಪ್ಲಾಸ್ಟಿಕ್ ಬಳಕೆ ) ಹೀಗೇ ಮುಂದುವರಿದರೆ 2050ರ ವೇಳೆಗೆ ಸಮುದ್ರದಲ್ಲಿ ಮೀನುಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಇರುತ್ತದೆ”. ಇದು ನಾವು ಎಷ್ಟು ಪ್ಲಾಸ್ಟಿಕ್ ಬಳಸುತ್ತಿದ್ದೇವೆ ಮತ್ತು ಹೇಗೆ ಅದರ ಬೇಜವಾಬ್ದಾರಿ ವಿಲೇವಾರಿ ಮಾಡುತ್ತಿದ್ದೇವೆ ಎಂಬುದಕ್ಕೆ ಸ್ಪಷ್ಟ ನಿದರ್ಶನ. ಅವರ ಆತಂಕವೆಂದರೆ, ಈ ಪ್ಲಾಸ್ಟಿಕ್ ನಾಶವಾಗಬೇಕೆಂದರೆ ಕನಿಷ್ಠ 500-1000 ಸಾವಿರ ವರ್ಷಗಳು ಬೇಕು. ಈ ಮಧ್ಯೆ ಆಹಾರ ಸರಪಳಿಯ ಮೂಲಕ ನಮ್ಮ ಹೊಟ್ಟೆಯನ್ನೂ ಪ್ರವೇಶಿಸುತ್ತದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು. ಹಾಗೆ ನೋಡುವುದಾದರೆ, ಜಗತ್ತಿನಲ್ಲಿ ಪೂರ್ವ ಆಫ್ರಿಕಾ ಪ್ರದೇಶದಲ್ಲಿ ಸುಮಾರು 40 ರಾಷ್ಟ್ರಗಳು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿವೆ. ದಂಡ ಮತ್ತು ಶಿಕ್ಷೆಯ ಪರಿಣಾಮ ಬೇರೆ ಬೇರೆ ಇದೆ. ಇದಲ್ಲದೇ ಜಗತ್ತಿನ ಕೆಲವು ರಾಷ್ಟ್ರಗಳು ಆಂಶಿಕವಾಗಿ ಅಥವಾ ಭಾಗಶಃ ಪ್ಲಾಸ್ಟಿಕ್‌ನ್ನು ನಿಷೇದಿಸಿವೆ.
ಭವಿಷ್ಯದ ತಲೆಮಾರಿಗೆ ಕೊಡುಗೆ
ಕೀನ್ಯಾದ ಈ ತೀರ್ಮಾನದಿಂದ ವರ್ತಮಾನದಲ್ಲಿ ಒಂದಿಷ್ಟು ಸಂಕಷ್ಟ ಎದುರಾಗಬಹುದು. ಅಲ್ಲಿನ ಪ್ಲಾಸ್ಟಿಕ್ ಉತ್ಪಾದಕ ಸಂಘದವರು ಹೇಳುವಂತೆ, 60 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ನಾಶಗೊಳ್ಳಬಹುದು. ಒಂದಿಷ್ಟು ಜನರು ನಿರುದ್ಯೋಗದ ಸಮಸ್ಯೆಗೆ ಸಿಲುಕಬಹುದು. ಇವೆಲ್ಲವೂ ಒಂದು ತೀರ್ಮಾನದಿಂದ ಆಗುವ ಸಂಭವನೀಯ ನಷ್ಟಗಳು. ಆದರೆ, ಒಂದಿಷ್ಟು ನಿಗದಿತ ವರ್ಷಗಳಲ್ಲಿ ಸಕಾರಾತ್ಮಕ ಹೆಜ್ಜೆಗಳ ಮೂಲಕ ಈ ನಷ್ಟವನ್ನು ಭರಿಸಬಹುದು. ಆದರೆ ಪರಿಸರಕ್ಕಾಗುವ ನಷ್ಟವನ್ನು ತಪ್ಪಿಸಿದ ತೃಪ್ತಿಯಷ್ಟೇ ಇರುವುದಿಲ್ಲ. ಭವಿಷ್ಯದ ತಲೆಮಾರನ್ನು ಉಳಿಸಿದ ಸಂತೃಪ್ತಿ ಇರುತ್ತದೆ.
ಕೀನ್ಯಾದ ಭವಿಷ್ಯದ ತಲೆಮಾರಿಗೆ ಕೊಟ್ಟ ಭವ್ಯ ಉಡುಗೊರೆಯಿದು. ಕಲುಷಿತ ರಹಿತ ಪ್ರಕೃತಿ ಸಂಪನ್ಮೂಲಗಳನ್ನು ಸವಿಯಬೇಕೆಂಬ ಅವರ ಹಕ್ಕನ್ನು ಕಿತ್ತುಕೊಂಡಂತಾಗುವುದಿಲ್ಲ. ಇದೇ ಇಂಥದೊಂದು ದೊಡ್ಡ ತೀರ್ಮಾನದ ಹಿಂದೆ ಇರಬಹುದಾದ ಸಮಾಧಾನದ ಗೆರೆ. ಅದನ್ನು ಒಪ್ಪಲೇಬೇಕು. ನಮ್ಮ ದೇಶವೂ ಇದೇ ಹಾದಿಯಲ್ಲಿ ಸಾಗಬೇಕೆಂಬುದು ಬರೀ ಆಶಯವಷ್ಟೇ ಅಲ್ಲ ; ಹಕ್ಕೊತ್ತಾಯವೂ ಸಹ.
ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.