ನಮ್ಮ ನಗರಗಳಿಗೆ ಗಡಿ ಗುರುತು ಮಾಡಿಕೊಳ್ಳೋಣ
Team Udayavani, Jan 13, 2018, 8:50 AM IST
ನಾಲ್ಕು ಜತೆ ಎತ್ತುಗಳು ಒಂದು ನಗರದ ಗಡಿಯನ್ನು ನಿರ್ಧರಿಸಿದ್ದವೆಂದರೆ ಎಷ್ಟು ಸೋಜಿಗದ ಸಂಗತಿ. ಅವುಗಳಿಗೆ ಇದ್ದ ನಗರದ ಆರೋಗ್ಯದ ಬಗೆಗಿನ ಕಾಳಜಿ ಇಂದು ನಮಗಿಲ್ಲ. ನಮಗೆ ನಗರವೆಂದರೆ ಬೆಳೆಯುತ್ತಲೇ ಇರಬೇಕು! ನಮಗೆ ನಮ್ಮ ನಗರಗಳ ಎಲ್ಲೆಗಳನ್ನು ಗುರುತಿಸಲಿಕ್ಕೇ ಮನಸ್ಸಿಲ್ಲ.
ಬೆಂಗಳೂರಿನ ನಿರ್ಮಾತೃ ರಾಜ ಕೆಂಪೇಗೌಡರಂತೆ ನಮ್ಮ ಆಡಳಿತ ಸಂಸ್ಥೆಗಳು, ಜನಪ್ರತಿಧಿಗಳು ಯೋಚಿಸಬೇಕೆಂದರೆ ಹೇಗೆ ಎಂಬ ಪ್ರಶ್ನೆಯೊಂದಿಗೆ ಉತ್ತರ ಹುಡುಕುತ್ತಾ ಹೋದರೆ ಬಹಳ ಸಂತಸದಾಯಕವಾದ ನೆಲೆಯನ್ನು ತಲುಪುತ್ತೇವೆ. ಕೆಂಪೇಗೌಡರ ದೂರದೃಷ್ಟಿತ್ವವಷ್ಟೇ ತಿಳಿಯುವುದಿಲ್ಲ, ಅವರ ತೀರ್ಮಾನಗಳಲ್ಲಿನ ಸ್ಪಷ್ಟತೆ ತೋರುತ್ತದೆ. ಹಿರಿಯ ಕೆಂಪೇಗೌಡ ಅಥವಾ ಮೊದಲನೇ ಕೆಂಪೇಗೌಡ (ಲಭ್ಯ ಮಾಹಿತಿ ಪ್ರಕಾರ) ಇಂದಿನ ಬೆಂಗಳೂರಿನ ನಿರ್ಮಾತೃ. ಸಾಮಂತ ರಾಜ್ಯವಾಗಿದ್ದ ಯಲಹಂಕದ ಪಾಳೇಗಾರ ರಾಗಿದ್ದರು ಅವರು.
ಅವರು ಅಂದು ನಿರ್ಮಿಸಿದ ಬೆಂಗಳೂರು ಎಗ್ಗಿಲ್ಲದೇ ಬೆಳೆದಿದೆ ಇಂದು. ದೇಶದ ಏಳು ಮೆಟ್ರೋ ನಗರಗಳಲ್ಲಿ ಬೆಂಗಳೂರು ಸಹ ಒಂದು. ಉಳಿದವು ದಿಲ್ಲಿ, ಮುಂಬಯಿ, ಕೋಲ್ಕತ್ತಾ, ಚೆನ್ನೈ, ಪುಣೆ ಹಾಗೂ ಹೈದರಾಬಾದ್. ಈ ಏಳರಲ್ಲೂ ಹೆಚ್ಚಿನ ಜನಸಂಖ್ಯೆ ಇರುವುದು ದಿಲ್ಲಿಯಲ್ಲೇ (2.5 ಕೋಟಿ) ಇದೆ. ಉಳಿದಂತೆ ಮುಂಬಯಿ (2 ಕೋಟಿ), ಕೋಲ್ಕತ್ತಾ (1.4 ಕೋಟಿ), ಪುಣೆ( 1 ಕೋಟಿ), ಹೈದರಾಬಾದ್ (97 ಲಕ್ಷ) ಹಾಗೂ ಚೆನ್ನೈ (86 ಲಕ್ಷ) ಸಾಲಿನಲ್ಲಿವೆ. ಹಾಗೆ ನೋಡಿದರೆ ಜನಸಂಖ್ಯೆಯಲ್ಲಿ ಬೆಳೆಯುತ್ತಿರುವ ಮೂರನೇ ನಗರವೆಂಬ ಖ್ಯಾತಿ ಬೆಂಗಳೂರಿಗೆ (1.05 ಕೋಟಿ) ಇದೆ. ಈಗಾಗಲೇ ಈ ಬೆಳವಣಿಗೆ ತಂದೊಡ್ಡುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಇದ್ದೇ ಇದೆ. ಆದರೂ ಬೆಂಗಳೂರಿನ ಬೆಳವಣಿಗೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಕೆಂಪೇಗೌಡ ಹೇಗೆ ತನ್ನ ನಗರಕ್ಕೊಂದು ಗೊತ್ತು ಗುರಿ ಇಟ್ಟಿದ್ದರು ಎಂಬುದೇ ಕುತೂಹಲ.
ನಾಲ್ಕು ದಿಕ್ಕಿಗೂ ನಾಲ್ಕು ಬಾಗಿಲು
ಕೆಂಪೇಗೌಡರು ಬೆಂಗಳೂರು ನಗರವನ್ನು ನಿರ್ಮಿಸುವಾಗ ಅವರು ಅನುಸರಿಸಿದ ಮಾರ್ಗ ಕಂಡರೆ ಒಂದು ನಗರವೆಂಬುದು ಎಷ್ಟು ದೊಡ್ಡದಾಗಿರಬೇಕು ಎಂಬ ಕಲ್ಪನೆ ಬಹಳ ಸ್ಪಷ್ಟವಾಗಿತ್ತು. ತೀರಾ ದೊಡ್ಡದೆನಿಸದ ಮತ್ತು ಸಣ್ಣದೂ ಎನಿಸದ ಸಹಜ ವಿಸ್ತೀರ್ಣವೆನಿಸುವಂತಿರಬೇಕು ನಗರಕ್ಕೆ ಎಂಬುದು ಅವರ ಪ್ರಾಥಮಿಕ ಜ್ಞಾನ. ಅದಕ್ಕೆ ಅವರು ಅನುಸರಿಸಿದ ಮಾರ್ಗವೆಂದರೆ ದೊಡ್ಡಪೇಟೆ-ಚಿಕ್ಕಪೇಟೆ ಸಂಧಿಸುವ ಸ್ಥಳದಲ್ಲಿ ನಗರ ನಿರ್ಮಾಣಕ್ಕೆ ಶಿಲಾನ್ಯಾಸ ಹಾಕುವ ದಿನ ಎತ್ತಿನ ನಾಲ್ಕು ಚಕ್ಕಡಿಗಳನ್ನು ನಾಲ್ಕು ದಿಕ್ಕುಗಳಿಗೂ ಕಳುಹಿಸಿದರು. ಆ ಎತ್ತುಗಳು ಎಲ್ಲಿ ನಿಲ್ಲುತ್ತವೋ ಅದೇ ಆ ದಿಕ್ಕುಗಳ ಎಲ್ಲೆ ಅಂದರೆ ಗಡಿ. ಅದಕ್ಕೇ ಅಲ್ಲಿ ಹಲಸೂರು ದ್ವಾರ, ಸೊಂಡೆಕೊಪ್ಪದ ದ್ವಾರ, ಯಲಹಂಕ ದ್ವಾರ, ಆನೇಕಲ್ ದ್ವಾರ ಎಂದಿದೆ.
ಇದನ್ನು ಇನ್ನೂ ಸೂಕ್ಷ್ಮವಾಗಿ ಅವಲೋಕಿಸಿದರೆ ಸಿಗುವ ಸಂಗತಿಗಳು ಇನ್ನಷ್ಟು ಅಚ್ಚರಿ ಎನಿಸುವಂಥವು. ಸಾಮಾನ್ಯವಾಗಿ ರಾಜನಿಗೆ ಅಥವಾ ಆ ಊರಿನ ನಾಯಕನಿಗೆ ತಾನು ನಿರ್ಮಿಸುವ ನಗರ ಅತಿ ದೊಡ್ಡದಾಗಿರಬೇಕೆಂಬ ಹಂಬಲ ಇದ್ದೇ ಇರುತ್ತದೆ. ಅಂಥದೊಂದು ನಗರ ಎಲ್ಲಿಯೂ ನಿರ್ಮಾಣವಾಗಿರಬಾರದು ಮತ್ತು ನಿರ್ಮಾಣವಾಗಬಾರದು ಎಂಬ ಅಭಿಲಾಷೆಯೂ ಇರುತ್ತದೆ. ಆದರೆ ಭವಿಷ್ಯದಲ್ಲಿ ಅದರ ನಿರ್ವಹಣೆ ಸಾಧ್ಯವೋ ಎಂಬುದರ ಬಗ್ಗೆ ಯೋಚಿಸುತ್ತಿಲ್ಲ. ಕಾರಣ, ಕನಸಿನಲ್ಲಿ ಬಣ್ಣಗಳಿಗೆ ಮಿತಿಯೇ ಇರುವುದಿಲ್ಲ. ಈ ಮಿತಿ ಇದ್ದದ್ದರಿಂದಲೇ ಕೆಂಪೇಗೌಡರು ತನ್ನ ಮಹತ್ವದ ನಗರದ ಗಡಿಗಳನ್ನು ಗುರುತಿಸಿಕೊಳ್ಳಲಿಕ್ಕೆ ಎತ್ತುಗಳನ್ನು ಬಳಸಿ ಕೊಂಡರು. ವಿಚಿತ್ರವೆಂದರೆ ನಮಗೆ ನಮ್ಮ ನಗರಗಳ ಎಲ್ಲೆಗಳನ್ನು ಗುರುತಿಸಲಿಕ್ಕೇ ಮನಸ್ಸಿಲ್ಲ. ಅದು ತನ್ನ ಮನಸ್ಸಿಗೆ ಬಂದಂತೆ ಬೆಳೆಯಬೇಕೆಂದೆನಿಸಿದೆ. ಅದರ ಪರಿಸ್ಥಿತಿ ಅನಿವಾರ್ಯತೆಯನ್ನು ಸೃಷ್ಟಿಸುತ್ತಿರುವುದು ಸುಳ್ಳಲ್ಲ. ಆಧುನಿಕ ಸಂದರ್ಭದ ಮೆಟ್ರೋ ನಗರಗಳ ಕಲ್ಪನೆಗಳು ಬೃಹದಾಕಾರವಾಗಿ ಬೆಳೆದದ್ದು ನಿಜ. ಖಂಡಿತಾ ಹಿಂದಿನ ನಗರಗಳ ಕಲ್ಪನೆ ಇಷ್ಟೊಂದು ಬೃಹತ್ತಾಗಿರಲಿಲ್ಲ ವೆಂದುಕೊಳ್ಳೋಣ. ಸಿಂಧೂ ನಾಗರಿಕತೆಯ ಸಂದರ್ಭದ ಹರಪ್ಪ ನಗರವೂ ಸಹ ಸುಮಾರು 150 ಹೆಕ್ಟೇರ್ ಪ್ರದೇಶ (ಸುಮಾರು 370 ಎಕ್ರೆ) ದಷ್ಟಿತ್ತು ಎಂಬ ಅಂಶ ಪ್ರಾಚೀನ ದಾಖಲೆಗಳಲ್ಲಿವೆ.
ಈ ಪ್ರದೇಶದಲ್ಲಿದ್ದ ಜನಸಂಖ್ಯೆಯೂ ಸುಮಾರು 20 ಸಾವಿರ ದಷ್ಟಿತ್ತು. ಆದರೆ, ಈಗ ಸಣ್ಣ ನಗರಗಳಲ್ಲೂ ಕಾಣದಿದ್ದಷ್ಟು ಮೂಲ ಸೌಲಭ್ಯಗಳು ಆ ನಗರದಲ್ಲಿದ್ದವಂತೆ. ಒಳಚರಂಡಿಯಂಥ ಪರಿಕಲ್ಪನೆಯೂ ಆಗ ಜಾರಿಗೊಂಡಿತ್ತೆಂದರೆ ಲೆಕ್ಕ ಹಾಕೋಣ. ಇದನ್ನೆಲ್ಲಾ ಇಟ್ಟುಕೊಂಡು ಕೆಂಪೇಗೌಡರ ಗಡಿ ಹಾಕುವ ಕ್ರಮವನ್ನು ಬಿಡಿ ಬಿಡಿಯಾಗಿ ನೋಡಿದರೆ ಕಾಣುವ ಸತ್ಯದ ಸಾಧ್ಯತೆಯೇ ಬೇರೆ. ಬಹುಶಃ ನಗರವೊಂದು ಆರೋಗ್ಯಪೂರ್ಣ ವಾಗಿರಬೇಕೆಂದರೆ ನಾಗರಿಕರಿಗೆ ಅವಲಂಬನೆಯ ಪ್ರಮಾಣ ಅತ್ಯಂತ ಕಡಿಮೆ ಇರಬೇಕು. ಅದು ಸಾರಿಗೆ ವಿಷಯಕ್ಕಾಗಲೀ, ತಮ್ಮ ಅಗತ್ಯಗಳನ್ನು ಪಡೆಯುವ ಸಂಗತಿಯಾಗಲೀ-ಯಾವುದೇ ಇರಲಿ, ಒಂದು ಬಗೆಯ ಸ್ವತಂತ್ರತೆ ಇರಬೇಕು. ಅದೇ ದೃಷ್ಟಿ ಯಿಂದಲೇ ಎತ್ತುಗಳು ನಡೆದು ಹೋದ ದೂರಕ್ಕೆ ಗಡಿಯನ್ನು ಗುರುತಿಸಿದ್ದು. ಎತ್ತಿನ ಬದಲು ಓಡುವ ಕುದುರೆಗಳನ್ನು ಏಕೆ ಬಳಸಲಿಲ್ಲ ಎಂಬ ಪ್ರಶ್ನೆ ಏಳುವುದು ಸಹಜ. ಬಹುಶಃ ಓಡುವ ಕುದುರೆಗಳನ್ನು ಬಳಸಿಕೊಂಡಿದ್ದರೆ ಇವರ ಗಡಿ ಇನ್ನಷ್ಟು ದೂರ ಹೋಗುತ್ತಿತ್ತು. ಆಗ ನಾವಿರುವ ನಗರದಂತೆಯೇ ಆಗಿರುತ್ತಿತ್ತು ಎಂದುಕೊಳ್ಳೋಣ. ಎತ್ತುಗಳು ಸಾಗಿದ ದೂರಗಳನ್ನೇ ನೋಡಿ ಕೊಂಡರೆ, ಸಹಜವಾಗಿ ನಿರ್ವಹಣೆ ಸಾಧ್ಯವಾಗುವಷ್ಟು ಪ್ರದೇಶ. ಪರ್ಯಾಯ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ ಪರಿಸ್ಥಿತಿಯನ್ನು ನಿರ್ವಹಿಸಲು ಸಾಧ್ಯವಾಗುವಷ್ಟು ದೂರವಿತ್ತು. ಆಗ ಜನರು ಎಲ್ಲದಕ್ಕೂ ಮತ್ತೂಂದು ವ್ಯವಸ್ಥೆಯನ್ನು ಅವಲಂಬಿಸುತ್ತಿರಲಿಲ್ಲ.
ನಾವು ಎಡವಿದ್ದು ಇಲ್ಲಿಯೇ
ನಾವು ಎಡವಿದ್ದು ಎಲ್ಲಿ ಎಂದು ಕೇಳಿಕೊಂಡರೆ ಸಿಗುವ ಉತ್ತರ ನಮ್ಮನ್ನು ನಂಬಿಸಲಾರದು. ಬೆಳವಣಿಗೆಯನ್ನು ಹತ್ತಿಕ್ಕುವುದು ಅಥವಾ ನಿಯಂತ್ರಿಸುವುದು ಕಷ್ಟ ಸಾಧ್ಯದ ಕೆಲಸ. ಅದನ್ನು ಒಪ್ಪಿಕೊಳ್ಳ ಲೇಬೇಕು. ಆದರೆ ಆಳುವವರು ಮತ್ತು ಆಡಳಿತಗಾರರು, ಭವಿಷ್ಯದ ಲೆಕ್ಕಾಚಾರ ಇಟ್ಟುಕೊಂಡು ಮತ್ತೂಂದು ಗಡಿಯನ್ನು ನಿಗದಿಪಡಿಸಬಹುದಿತ್ತು. ಬಳಿಕ ಕೆಂಪೇಗೌಡರು ನಿಗದಿಪಡಿಸಿದ್ದ ಗಡಿಯನ್ನು “ಕೇಂದ್ರ ಪ್ರದೇಶ’ ಎಂದು ನಿರ್ಧರಿಸಿ, ಅನಂತರದ ಪ್ರದೇಶವನ್ನು ವಿಸ್ತರಿತ ನಗರವೆಂದು ಪರಿಗಣಿಸ ಬೇಕಿತ್ತು. ಕೇಂದ್ರ ಪ್ರದೇಶವನ್ನು ಆಡಳಿತಕ್ಕೆ ಬಳಸಿಕೊಳ್ಳಬಹು ದಾಗಿತ್ತು. ಅದಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿ, ಅದೇ ಸೌಲಭ್ಯ ಗಳನ್ನು ಕ್ರಮೇಣವಾಗಿ ವಿಸ್ತರಿತ ನಗರಕ್ಕೂ ಕಲ್ಪಿಸಿದ್ದರೆ ಎಷ್ಟೊಂದು ಸಮಸ್ಯೆಗಳನ್ನು ತಡೆಯಲು ಸಾಧ್ಯವಿತ್ತೆಂದುಕೊಳ್ಳೋಣ. ಇಂದು ಬರೀ ವಿಧಾನಸೌದದ ಬಳಿ ಬರಬೇಕೆಂದರೆ ಪ್ರದಕ್ಷಿಣೆ ಹಾಕಿಕೊಂಡು ಬರಬೇಕು. ಅದರ ಮಧ್ಯೆ ಟ್ರಾಫಿಕ್ ಜಾಮ್‌ಗಳಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡಬೇಕು. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗುವುದಕ್ಕೆ ಕನಿಷ್ಟ ಒಂದೂವರೆ ಗಂಟೆಯನ್ನು ಮೀಸಲಿಡಬೇಕು. ಅದರ ಮಧ್ಯೆ ಹತ್ತಿರದಲ್ಲೆಲ್ಲೋ ಆದ ಟ್ರಾಫಿಕ್ ಜಾಮ್‌ನ ಒತ್ತಡವನ್ನು ಅನುಭವಿಸಬೇಕು. ವಾಹನಗಳ ಹೊಗೆ, ಧೂಳು ಎಲ್ಲವನ್ನೂ ಮೌನದಿಂದ ಸಹಿಸಿಕೊಳ್ಳುತ್ತಾ ಆರೋಗ್ಯದ ಬಗ್ಗೆ ಕಾಳಜಿಯ ಮಾತುಗಳನ್ನಾಡಬೇಕು. ಅದರಲ್ಲೂ ಹೆಚ್ಚು ವಾಹನ ದಟ್ಟಣೆ ಇರುವ (ಪೀಕ್ ಅವರ್) ಸಂದರ್ಭದಲ್ಲಂತೂ ರಸ್ತೆಗಳಲ್ಲಿ ಕಾಲವೇ ನಿಂತಿದೆ ಎಂದೆನಿಸುವುದೂ ಇದೆ.
ನಾಗರಿಕರ ಒತ್ತಡವನ್ನು ಸಹಿಸಲಾಗದೇ ಒಂದಿಷ್ಟು ಫ್ಲೈಓವರ್‌ಗಳನ್ನು ಕಟ್ಟಬೇಕು. ಕಂಡಲ್ಲೆಲ್ಲಾ ಫ್ಲೈಓವರ್‌ಗಳು ಅಥವಾ ಗ್ರೇಡ್ ಸಪರೇಟರ್‌ಗಳನ್ನು ನಿರ್ಮಿಸಿ ಜನರನ್ನು ಸಮಾಧಾನ ಪಡಿಸಬೇಕು. ಅದರಲ್ಲೂ ಫ್ಲೈಓವರ್‌ಗಳನ್ನು ಕಡಿಮೆ ಕಾಲಮಿತಿಯೊಳಗೆ ಕಲ್ಪಿಸುತ್ತೇವೆಯೇ? ಅದೂ ಇಲ್ಲ. ವರ್ಷಕ್ಕೊಮ್ಮೆ ಪರಿಸರ ಪ್ರೀತಿ ಯನ್ನು ತೋರಿಸಿ ಸುಮ್ಮನಾಗಬೇಕು. ಹೀಗೆ ನಮ್ಮ ದ್ವಂದ್ವ ನಡೆಗಳೇ ಇಂದು ಸಮಸ್ಯೆಗೆ ಕಾರಣವಾಗುತ್ತಿವೆ. ಒಂದೆಡೆ ಪರಿಸರದ ಮೇಲೂ ಪ್ರೀತಿ ಇದೆ, ಮತ್ತೂಂದೆಡೆ ಸುಸಜ್ಜಿತವಲ್ಲದ ನಗರದ ಬೆಳವಣಿಗೆಯನ್ನು ನಿಯಂತ್ರಿಸಲೂ ಮನಸ್ಸಿಲ್ಲ.
ನಮ್ಮನ್ನಾಳುವವರು ಚಿಂತನೆ ಹೇಗೆ ಗೊತ್ತೇ?ಇಂದಿನ ಕಥೆ ಇಂದಿಗೆ ಮುಗಿದರೆ ಸಾಕು, ನಾಳೆ ಬಗ್ಗೆ ಬಂದವರು ಯೋಚಿಸು ತ್ತಾರೆ. ಎಷ್ಟು ವಿಪರ್ಯಾಸವೆಂದರೆ ನಾಳೆ ಬಂದವರೂ ಹಾಗೆಯೇ. ಅವರಿಗೆ ನಾಳೆ ಎಂಬುದು ಇಂದೇ. ಅದೇ ಕಾರಣಕ್ಕಾಗಿ ನಗರದ ನಾಳೆಗಳ ಬಗ್ಗೆ ಯೋಚಿಸಿದವರೆ ಬಹಳ ಕಡಿಮೆ. ಇದರ ಮಧ್ಯೆಯೂ ನಾಳೆಗಳಿಗಾಗಿ ಕೆರೆಗಳನ್ನು ಉಳಿಸಿ ಎಂದ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಆಯುಕ್ತ , ಕೆರೆಗಳನ್ನು ಉಳಿಸಿ ಎಂದು ಹೇಳಿದ ಎನ್. ಲಕ್ಷಣ್ ರಾವ್‌ರಂಥವರು ತೀರಾ ಅಪರೂಪದವರು. ಬಹುಶಃ ಇಂಥ ಅಪರೂಪದವರಿಂದಲೇ ಇನ್ನೂ ನಮ್ಮ ಬೆಂಗಳೂರು ದಿಲ್ಲಿಯಾಗಿಲ್ಲ !
ಈಗಲಾದರೂ ನಮ್ಮ ನಗರಗಳಿಗೆ ಗಡಿ ಗುರುತು ಹಾಕಿಕೊಳ್ಳೋಣ.
ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.