ಸಂಚಾರ ದಟ್ಟಣೆ ಅಪಾಯಕ್ಕೆ ಈಗಲೇ ಪರಿಹಾರ ಹುಡುಕೋಣ
Team Udayavani, Apr 21, 2018, 7:23 PM IST
ಸಂಚಾರ ದಟ್ಟಣೆಯೇ ಭವಿಷ್ಯದಲ್ಲಿ ನಮ್ಮ ನಗರಗಳನ್ನು ಹಿಂಡಿ ಹಿಪ್ಪೆ ಮಾಡುವಂಥದ್ದು. ಅದು ಇತ್ತೀಚಿನ ಸಮೀಕ್ಷೆಯಲ್ಲೂ ದೃಢಪಟ್ಟಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ನಾವೆಲ್ಲ ನಡೆದು ಹೋಗುವುದು ರಸ್ತೆಯ ಮೇಲಲ್ಲ, ಮತ್ತೂಬ್ಬರ ತಲೆಯ ಮೇಲೆ.
ಇದು ಕಾಕತಾಳೀಯವೋ ಖಂಡಿತಾ ಗೊತ್ತಿಲ್ಲ. ಕಳೆದ ವಾರವಷ್ಟೇ ಪುಣೆಯ ತುಂಬೆಲ್ಲಾ ವಾಹನಗಳು ತುಂಬಿ ಹೋಗಿರುವ ಮಾಹಿತಿ ಯನ್ನು ಚರ್ಚೆ ಮಾಡುತ್ತಿದ್ದೆವು. ಜನಸಂಖ್ಯೆಗಿಂತ ಹೆಚ್ಚು ಅಥವಾ ಅದಕ್ಕೆ ಸಮನಾಗಿ ವಾಹನಗಳು ರಸ್ತೆಗಿಳಿದರೆ ಭವಿಷ್ಯದ ಸ್ಥಿತಿ ಊಹಿಸುವುದೂ ಕಷ್ಟ. ಅದರಲ್ಲೂ ಪುಣೆಯಲ್ಲಿ ಅಂಥದೊಂದು ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಕುರಿತೂ ಪ್ರಸ್ತಾಪಿಸಲಾಗಿತ್ತು. ಇಂಥ ನಗರಗಳಲ್ಲಿ ಆಯಾಯ ಸ್ಥಳೀಯ ಸಂಸ್ಥೆಗಳು ಕೈಗೊಳ್ಳುವ ಪ್ರತಿ ತೀರ್ಮಾನವೂ ನಗರದ ಭವಿಷ್ಯವನ್ನು ಸ್ವರ್ಗದತ್ತ ಕೊಂಡೊಯ್ಯುತ್ತವೆ ಅಥವಾ ನರಕದತ್ತ ಕೊಂಡೊಯ್ಯತ್ತವೆ. ಇದೇ ಸಂದರ್ಭದಲ್ಲಿ ನಾಗರಿಕರಾದ ನಮ್ಮ ಎಚ್ಚರವೂ ಎರಡೂ ಸ್ಥಿತಿಯನ್ನು ನಿರ್ಧರಿಸಬಲ್ಲವು.
ಮತ್ತೆ ಈ ವಾರ ಬೆಂಗಳೂರು ಚರ್ಚೆಗೀಡಾಗಿರುವುದು ಅದರ ಸಂಚಾರ ದಟ್ಟಣೆಯಿಂದ. ಇತ್ತೀಚೆಗಷ್ಟೇ ಬಿಸಿಜಿ ಎಂಬ ಸಂಸ್ಥೆಯು ನಡೆಸಿರುವ ಅಧ್ಯಯನದ ಅಂಶದ ಪ್ರಕಾರ ನೈರುತ್ಯ ಏಷ್ಯಾದಲ್ಲೇ ಬೆಂಗಳೂರಿಗೂ ಮಹತ್ವದ ಸ್ಥಾನ ಸಿಕ್ಕಿದೆ. ಅಂದರೆ ವಿಪರೀತ ಸಂಚಾರ ದಟ್ಟಣೆಗೆ ಬೆಂಗಳೂರು ಖ್ಯಾತಿಗಳಿಸಿದೆ. ನಿತ್ಯವೂ ನಮ್ಮ ಅನುಭವಕ್ಕೆ ಬರುವಂಥ ಅಂಶ ಇದು. ಎಷ್ಟೇ ಮೇಲ್ಸೇತುವೆಗಳಿದ್ದರೂ ಹಾಗೂ ಮತ್ತಷ್ಟು ಮೇಲ್ಸೇತುವೆ ಇತ್ಯಾದಿ ಪರ್ಯಾಯ ಕ್ರಮಗಳು ಜಾರಿ ಯಾಗುತ್ತಿದ್ದರೂ ಸಂಚಾರ ದಟ್ಟಣೆಯ ಪ್ರಮಾಣವೇನೂ ಕಡಿಮೆ ಯಾಗಿಲ್ಲ. ಹಾಗಾಗಿ ನಮ್ಮೆದುರೇ ಕಣ್ಣಿಗೆ ಕಾಣುತ್ತಿದ್ದೂ ವೈಜ್ಞಾನಿಕವಾಗಿ ಗೊತ್ತಿರದ ಅಂಶವನ್ನು ಈ ಅಧ್ಯಯನ ದೃಢಪಡಿಸಿದೆಯಷ್ಟೇ. ಈ ಅಧ್ಯಯನದಲ್ಲಿ ದಿಲ್ಲಿ, ಮುಂಬಯಿಯಂಥ ನಗರಗಳಲ್ಲಿನ ಸ್ಥಿತಿಗೂ ಆತಂಕ ವ್ಯಕ್ತವಾಗಿದೆ. ಜತೆಗೆ ಹಾಂಗ್‌ಕಾಂಗ್, ಮನಿಲಾದಲ್ಲಿನ ಸ್ಥಿತಿಯನ್ನೂ ಕಷ್ಟ ಎಂದು ಉಲ್ಲೇಖೀಸಿದೆ. ಇವೆಲ್ಲವೂ ನಮಗಷ್ಟೇ ಕಷ್ಟವಿಲ್ಲ, ಅವರಿಗೂ ಇದೆಯಲ್ಲ ಎಂದು ನಮ್ಮನ್ನು ನಾವು ಸಮಾಧಾನ ಪಡಿಸಿಕೊಳ್ಳಬಲ್ಲ ಅಂಶಗಳಾಗಿ ತೋರಬಲ್ಲವು ನಮ್ಮ ಜನಪ್ರತಿ ನಿಧಿಗಳಿಗೆ ಮತ್ತು ನಮ್ಮ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ.
ಅಧ್ಯಯನದಲ್ಲಿನ ಮತ್ತೂಂದು ಅಂಶವೆಂದರೆ ಸಂಚಾರ ದಟ್ಟಣೆಯ ಪ್ರಮಾಣ. ದಿಲ್ಲಿ, ಮುಂಬಯಿ, ಕೋಲ್ಕತ್ತಾ ಹಾಗೂ ಬೆಂಗಳೂರುಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ವಾಹನ ದಟ್ಟಣೆ ಇರುವ ಸಂದರ್ಭದಲ್ಲಿ ಉಳಿದ ಕೆಲವು ಜಾಗತಿಕ ನಗರಗಳಿಗೆ ಹೋಲಿಸಿದರೆ ಶೇ. 149 ರಷ್ಟು ಹೆಚ್ಚಂತೆ. ಇದರಿಂದ ಆಗುತ್ತಿರುವ ಸಮಸ್ಯೆಯೆಂದರೆ, ನಾಗರಿಕರು ನಿರ್ದಿಷ್ಟ ದೂರವನ್ನು ಕ್ರಮಿಸಲು ಸುಮಾರು ಒಂದೂವರೆ ಪಟ್ಟು ಹೆಚ್ಚಿನ ಸಮಯವನ್ನು ವಿನಿಯೋಗಿಸುತ್ತಿದ್ದಾರೆ. ಅಲ್ಲಿಗೆ, ಬೆಂಗಳೂರಿನ ದಟ್ಟಣೆಯನ್ನು ಕಂಡು ಹೇಳುವ ಗ್ರಾಮೀಣರ ಮಾತು ಸರಿ ಎಂದಾಯಿತು.”ಬೆಂಗಳೂರಿನಲ್ಲಿ ಬಿಡಿ, ಅರ್ಧ ಜೀವನ ಟ್ರಾಫಿಕ್‌ನಲ್ಲೇ ಕಳೆಯುತ್ತಾರೆಂಬುದು’.
ಭಯ ಹುಟ್ಟಿಸುವ ಸ್ಥಿತಿ
ನಗರಗಳಲ್ಲಿ ಬದುಕುವವರಿಗೆ ವಾಹನ ದಟ್ಟಣೆ, ಟ್ರಾಫಿಕ್ ಜಾಮ್ ಇತ್ಯಾದಿ ಸಾಮಾನ್ಯ ಎಂದಾಗಿರುತ್ತದೆ. ಅವೆಲ್ಲವೂ ನಿತ್ಯದ ಸಮಸ್ಯೆಗಳು. ಅದನ್ನು ಬಿಟ್ಟು ಬರಲು ಸಾಧ್ಯವಿಲ್ಲ, ಅನುಭವಿಸಲೇಬೇಕೆಂಬ ಅನಿವಾ ರ್ಯತೆ ಎನಿಸಿಬಿಟ್ಟಿದೆ ಎನ್ನಬಹುದು. ಇದರೊಂದಿಗೆ ಇನ್ನೊಂದು ಅಂಶವನ್ನು ಕೇಳಿ, ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ಮತ್ತು ಕೋಲ್ಕತ್ತಾದ ಶೇ. 89 ರಷ್ಟು ಮಂದಿ ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ ಒಂದು ಕಾರನ್ನು ಹೊಂದುವುದಾಗಿ ಹೇಳಿದ್ದಾರೆ. ಇದು ಈಗಿನ ಪರಿಸ್ಥಿತಿಯನ್ನು ಇನ್ನಷ್ಟು ಭೀಕರಗೊಳಿಸಬಹುದು. ಯಾಕೆಂದರೆ ಈ ನಗರಗಳಲ್ಲಿನ ಅರ್ಧದಷ್ಟು ಜನಸಂಖ್ಯೆ ಮುಂಬರುವ ಐದು ವರ್ಷಗಳಲ್ಲಿ ಕಾರಿನ ಮಾಲಕರಾಗುತ್ತಾರೆ !
ಅಲ್ಲಿಗೆ ಚಲಿಸುವ ವೇಗ ಇನ್ನಷ್ಟು ಕುಸಿಯಲಿದೆ. 2005ರಲ್ಲಿ ಬೆಂಗಳೂರಿನಲ್ಲಿ ವಾಹನಗಳು ಚಲಿಸುವ ವೇಗ ಗಂಟೆಗೆ 35 ಕಿ.ಮೀ ಗಳಿತ್ತು. 2014 ರಲ್ಲಿ ಅದು 9.2 ಕಿ.ಮೀ ಗೆ ಇಳಿಯಿತು. ಈಗ ಬರೋಬ್ಬರಿ 6-7 ಕಿ.ಮೀಗೆ ಬಂದಿರಬಹುದು (ಇತ್ತೀಚಿನ ಸಮೀಕ್ಷೆ ನಡೆಸಿದ ಉದಾಹರಣೆ ಇಲ್ಲ). ಈ ಅಂಶ ಇರುವುದೂ ಹೊರವರ್ತುಲ ರಸ್ತೆಗಳಲ್ಲಿಯೇ ಹೊರತು ನಗರದ ಹೃದಯ ಭಾಗದಲ್ಲಲ್ಲ. 2005ರ ಸಂದರ್ಭದಲ್ಲಿ ಟ್ರಾಫಿಕ್ ಜಂಕ್ಷನ್ ಇದ್ದದ್ದೇ ಕಡಿಮೆ. ಆದರೆ ಈಗ ಅಡಿಗೆ ಒಂದರಂತೆ ಜಂಕ್ಷನ್ ಕಂಡು ಬರುತ್ತದೆ. ಎಂಥ ಚಿಕ್ಕ ಬಡಾವಣೆಯಲ್ಲೂ ಹತ್ತು ಜಂಕ್ಷನ್‌ಗಳಿಗೆ ಕೊರತೆ ಇಲ್ಲ. ಪ್ರತಿ ಜಂಕ್ಷನ್‌ನಲ್ಲೂ ಕನಿಷ್ಠ 5 ನಿಮಿಷ ಕಾಯಲೇಬೇಕು. ಇದರಿಂದ ಆಗುತ್ತಿರುವ ದುಂದುವೆಚ್ಚವನ್ನು ಒಮ್ಮೆ ಲೆಕ್ಕ ಹಾಕಿ.
ಇಂಧನ, ಪರಿಸರ ಮಾಲಿನ್ಯ, ಅಪಘಾತಗಳು,ಮಾನವ ಸಂಪನ್ಮೂ ಲದ ಅಮೂಲ್ಯ ಸಮಯಗಳನ್ನೆಲ್ಲಾ ಲೆಕ್ಕ ಹಾಕಿದರೆ ಭಯ ಹುಟ್ಟಿಸದೇ ಇರದು. ಈ ಸಂಚಾರ ದಟ್ಟಣೆಯ ಪರಿಣಾಮದ ಸಾಮಾಜಿಕ ಲೆಕ್ಕ ಎಷ್ಟು ಗೊತ್ತೇ? ಬೆಂಗಳೂರಿನಲ್ಲಿ ವಾರ್ಷಿಕ 37 ಸಾವಿರ ಕೋಟಿ ರೂ. ನಷ್ಟವೆನಿಸಿದರೆ, ದಿಲ್ಲಿಯಲ್ಲಿ ಈ ಮೊತ್ತ 60 ಸಾವಿರ ಕೋಟಿಗಳಿಗಿವೆ. ಈ ಅಧ್ಯಯನಕ್ಕೆ ಉಬರ್ ಸಂಸ್ಥೆಯೂ ಕೈಜೋಡಿಸಿತ್ತು.
ಗಮನಿಸಬೇಕಾದದ್ದು ಇಲ್ಲಿ
ನಮ್ಮ ಆಡಳಿತದವರು ಹಾಗೂ ಸ್ಥಳೀಯ ಸಂಸ್ಥೆಗಳು ಗಮನಿಸಬೇ ಕಾದದ್ದು ಇಲ್ಲಿಯೇ. ಒಂದೇ ಸ್ಥಳಕ್ಕೆ ಮತ್ತೂಬ್ಬರೊಂದಿಗೆ ಹಂಚಿಕೊಂಡು ಟ್ಯಾಕ್ಸಿಯಲ್ಲಿ ಹೋಗುವ ಕ್ರಮದಿಂದ ಒಂದಿಷ್ಟು ಲಾಭಗಳಿರುವುದು ನಿಜ. ಉಬರ್ ಸಂಸ್ಥೆಯೂ ಇದೇ ಉದ್ದೇಶದಿಂದ ಅಧ್ಯಯನ ಕೈಗೊಂಡದ್ದು. ಇಂಥದೊಂದು ಕಲ್ಪನೆಗೆ ಸಿಗಬಹುದಾದ ಜನರ ಸಹಕಾರ ಕುರಿತು ಅಧ್ಯಯನ ನಡೆಸುವುದು ಪ್ರಮುಖ ಉದ್ದೇಶವಾ ಗಿತ್ತು. ಆ ಲೆಕ್ಕದಲ್ಲಿ ಬಹಳಷ್ಟು ಮಂದಿ ಇಂಥದೊಂದು ಕಲ್ಪನೆಗೆ ಒಗ್ಗಿಕೊಳ್ಳಲು ಸಿದ್ಧರಿದ್ದಾರೆ. ಆದರೆ, ಸುಮಾರು ಶೇ. 52ರಷ್ಟು ಮಂದಿ “ನಮಗೆ ಯೋಗ್ಯ ಮತ್ತು ಉತ್ತಮವಾದ ರೈಡ್ ಶೇರ್ ಸೌಲಭ್ಯ ಸಿಕ್ಕರೆ ನಮಗೆ ಕಾರು ಬೇಕಿಲ್ಲ’ ಎಂದಿದ್ದಾರೆ.
ವಾಹನ ಪೂಲಿಂಗ್ ಮಾಡುವುದೆಂದರೂ ಇಂಥದೇ ಒಂದು ಪರಿಕಲ್ಪನೆ. ಒಂದೇ ಸ್ಥಳಕ್ಕೆ ಹೋಗುವ ನೆರೆಹೊರೆಯವರು ವಾಹನ ವನ್ನು ಹಂಚಿಕೊಂಡು ಪ್ರಯಾಣಿಸುವುದು. ಉದಾಹರಣೆಗೆ ಸರಕಾರಿ ನೌಕರರ ವಸತಿಗೃಹಗಳಿವೆ ಎಂದುಕೊಳ್ಳಿ. ಅಲ್ಲಿ ವಾಸಿಸುವ ಬಹುತೇಕರು ಉದ್ಯೋಗಕ್ಕೆಂದು ಹೋಗುವುದು ಒಂದೇ ಸ್ಥಳಕ್ಕೆ. ಇಂಥ ಸಂದರ್ಭದಲ್ಲಿ ಎಲ್ಲರೂ ತಮ್ಮ ತಮ್ಮ ವಾಹನಗಳಲ್ಲಿ ಒಬ್ಬರೇ ಹೋಗುವುದಕ್ಕಿಂತ ನಾಲ್ಕೈದು ಜನ ಹಂಚಿಕೊಂಡು ಒಂದೇ ವಾಹನದಲ್ಲಿ ಹೋಗುವುದು ಪರಿಸರ ಪೂರಕವೂ ಹಾಗೂ ಆರ್ಥಿಕ ವಾಗಿ ಲಾಭಕರವೂ ಹೌದು. ಇದರಿಂದ ಇಂಧನ ವೆಚ್ಚ, ರಸ್ತೆ ಮೇಲೆ ಬೀಳಬಹುದಾದ ಒತ್ತಡ, ದಟ್ಟಣೆ ಎಲ್ಲವೂ ಕಡಿಮೆಯಾಗುತ್ತದೆ.
ಇಂಥ ಪರಿಕಲ್ಪನೆಗಳು ಜಾರಿಗೆ ಬರದಿದ್ದರೆ ನಮ್ಮ ನಗರಗಳಿಗೆ ಉಳಿಗಾಲವಿಲ್ಲ. ಎರಡು ವರ್ಷಗಳ ಹಿಂದೆ ನಮ್ಮ ಬೆಂಗಳೂರಿನಲ್ಲಿ ಇದ್ದ ಬಸ್ಸುಗಳ ವ್ಯವಸ್ಥೆ ಸುಮಾರು ಶೇ. 45ರಷ್ಟು ಜನದಟ್ಟಣೆಯನ್ನು ನಿಭಾಯಿಸಲು. ಇಂದಿಗೆ ಬಹಳ ಬದಲಾವಣೆಯಾಗಿಲ್ಲ.
ಆ ಪ್ರಮಾಣ ಇನ್ನಷ್ಟು ಕಡಿಮೆಯಾಗಿದೆಯೆಂದೇ ಹೇಳಬಹುದು. ಅಂದರೆ ಬಸ್ಸುಗಳ ಲೆಕ್ಕ ಜಾಸ್ತಿಯಾಗಿರಬಹುದು. ಆದರೆ, ಅದಕ್ಕೆ ಎರಡರಷ್ಟೋ, ಮೂರರಷ್ಟೋ ಪ್ರಮಾಣದಲ್ಲಿ ನಗರಕ್ಕೆ ವಲಸಿಗರು ಹೆಚ್ಚಾಗಿದ್ದಾರೆ. ಹಾಗಾಗಿ ಮೆಟ್ರೋ ರೈಲು ಸಂಪರ್ಕ ಆರಂಭವಾದರೂ ಬಹಳ ದೊಡ್ಡ ಪ್ರಮಾಣವನ್ನು ಬೀರಿದಂತಿಲ್ಲ. ಇದರರ್ಥ ಏನೂ ಲಾಭವಾಗಿಲ್ಲವೆಂದಲ್ಲ, ವಾಹನ ದಟ್ಟಣೆ ತಡೆಯುವಲ್ಲಿ ಗಂಭೀರವಾದ ಪರಿಣಾಮವನ್ನು ಬೀರಿಲ್ಲವೆಂದಷ್ಟೇ. ಒಂದಷ್ಟು ಮಂದಿ ತಮ್ಮ ಸ್ವಂತ ವಾಹನವನ್ನು ನಿರ್ದಿಷ್ಟ ಸ್ಥಳದವರೆಗೆ ತಂದು, ಬಳಿಕ ರೈಲನ್ನು ಅವಲಂಬಿಸುತ್ತಿರುಬಹುದು. ಇದರಿಂದ ಆಗಿರುವ ಉಪಕಾರವೆಂದರೆ ಈಗಾಗಲೇ ವಾಹನ ದಟ್ಟಣೆಯಿಂದ ಸೋತಿರುವ ನಗರದ ಹೃದಯ ಭಾಗಗಳು ಸ್ವಲ್ಪ ನಿಟ್ಟುಸಿರು ಬಿಡುತ್ತಿರಬಹುದು.
ಒಟ್ಟೂ ವಾಹನ ದಟ್ಟಣೆ, ಸಂಚಾರ ಒತ್ತಡವೇ ನಗರಗಳ ಭವಿಷ್ಯದ ದೊಡ್ಡ ಸಮಸ್ಯೆಗಳು. ಅವುಗಳನ್ನು ನಿಭಾಯಿಸುವ ಚಾಕಚಕ್ಯತೆಯನ್ನು ಈಗಲೇ ರೂಢಿಸಿಕೊಳ್ಳಬೇಕು. ಇಂಥ ಹಲವಾರು ಕ್ರಮಗಳು ಜಗತ್ತಿನ ಸಿಂಗಾಪುರ ಸೇರಿದಂತೆ ಹತ್ತಾರು ನಗರ ಗಳಲ್ಲಿ ಜಾರಿಯಲ್ಲಿದೆ. ಅಲ್ಲಿನ ಸರಕಾರಗಳೂ ಇಂಥ ಪದ್ಧತಿಯನ್ನು ಬೆಂಬಲಿಸುತ್ತವೆ. ನಮ್ಮಲ್ಲೂ ಅಂಥ ವ್ಯವಸ್ಥೆಯನ್ನು ಆಡಳಿತ ಸಂಸ್ಥೆಗಳು ಕೈಗೊಳ್ಳಬೇಕು. ಕನಿಷ್ಠ ಪಕ್ಷ ಇಂಥ ಪದ್ಧತಿಯನ್ನು ಅನುಸರಿಸುತ್ತಿರು ವವರಿಗೆ ತೆರಿಗೆ ವಿನಾಯಿತಿಯಂಥ ಸೌಲಭ್ಯ ಕಲ್ಪಿಸಬೇಕು. ಇಲ್ಲವೇ ಅಂಥವರ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಶುಲ್ಕದಲ್ಲಿ ವಿನಾಯಿತಿ ಯಂಥ ಉತ್ತೇಜಕ ಕ್ರಮಗಳನ್ನು ಅನುಸರಿಸಬೇಕು. ಇದೂ ಸಾಧ್ಯ ವಾಗದಿದ್ದರೆ, ಅಂಥವರು ಇರುವ ಬಡಾವಣೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಆದ್ಯತೆ ನೀಡ ಬೇಕು. ಹೀಗೆ ಹತ್ತಾರು ರೀತಿಯಲ್ಲಿ ಯೋಚಿಸಿ ಕ್ರಿಯಾಶೀಲವಾಗದಿ ದ್ದರೆ ಎಲ್ಲ ನಗರಗಳೂ ಕಿಷ್ಕಿಂಧೆಯಾಗಿ ಬಿಡುತ್ತವೆ. ಆಗ ನಾವು ಒಬ್ಬರ ತಲೆ ಮೇಲೆ ಮತ್ತೂಬ್ಬರು ಕಾಲನ್ನು ಇಟ್ಟು ಸಾಗುವ ಸ್ಥಿತಿ ನಿರ್ಮಾಣ ವಾಗುತ್ತದೆ. ಇದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!
Dharmasthala: ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್ ಧನ್‌ಕರ್
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು
Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.