ಕೆರೆಗಳನ್ನು ಮುಗಿಸಲು ನಾವೀಗ ದಂಡಯಾತ್ರೆ ಹೊರಟಿದ್ದೇವೆ!
Team Udayavani, Aug 12, 2017, 8:45 AM IST
ಬರದ ಸ್ಥಿತಿಯನ್ನು ಅರಿತೂ ಸರಕಾರ ಸತ್ತಿವೆ ಎನ್ನಲಾದ ಕೆರೆಗಳ ಸದುಪಯೋಗಕ್ಕೆ ಹೊರಟಿದೆ. ಅಂದರೆ ಮತ್ತೂಂದು ಕಟ್ಟಡ, ಮತ್ತಷ್ಟು ತ್ಯಾಜ್ಯ ಸುರಿದು, ಕೊಳಚೆ ಹರಿಸಿ ಮತ್ತೂಂದಿಷ್ಟು ಜಲಮೂಲಗಳನ್ನು ನಾಶಪಡಿಸುತ್ತೇವೆ ಎಂದರ್ಥ. ಕೆರೆಗಳನ್ನು ಮುಗಿಸಲು ಸರಕಾರವೀಗ ದಂಡಯಾತ್ರೆ ಹೊರಟಿದೆ.
ಇಂಥದೊಂದು ದುರಂತ ಸನ್ನಿವೇಶವನ್ನು ನೆನಪು ಮಾಡಿಕೊಳ್ಳಬಾರದು ಎಂದೆನಿಸುತ್ತದೆ. ಆದರೆ ಈ ಹೊತ್ತಿನ ವರ್ತನೆಗಳು ಹೊಸ ಭರವಸೆಯನ್ನು ಮೂಡಿಸುವುದಿಲ್ಲ. ಸೋಮಾಲಿಯಾ ದೇಶದಲ್ಲಿನ ಬರದ ಸ್ಥಿತಿಯ ಸಂದರ್ಭದಲ್ಲಿ ಎಲ್ಲರ ಮನಸ್ಸಿಗೂ ತಟ್ಟಿದ್ದು ಮತ್ತು ಆ ದೇಶದಲ್ಲಿನ ಭೀಕರ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದು ಒಬ್ಬ ಸುದ್ದಿ ಛಾಯಾಗ್ರಾಹಕ ತೆಗೆದ ರಣಹದ್ದು ಮತ್ತು ಅಪೌಷ್ಟಿಕತೆಯಿಂದ ಬಳಲಿದ ಒಂದು ಮಗುವಿನ ಚಿತ್ರ. ಇಡೀ ಸ್ಥಿತಿಯ ಭೀಕರತೆಯನ್ನು ಅರ್ಥೈಸಲಿಕ್ಕೆ ಅದು ಸಾಕಾಗಿತ್ತು.
ಅಂಥದ್ದೇ ಒಂದು ಚಿತ್ರ ಈಗ ನೆನಪಾಗುವುದು ನಮ್ಮ ನಗರಗಳಲ್ಲಿನ ಕೆರೆಗಳ ಬಗ್ಗೆ. ಒಂದೆಡೆ ಇರುವ ಊರುಗಳನ್ನೆಲ್ಲ ನಗರಗಳನ್ನಾಗಿ ಮಾಡುವ ರಾಕ್ಷಸ ಹಂಬಲದಲ್ಲಿದ್ದೇವೆ. ಇನ್ನೈದು ವರ್ಷಗಳಲ್ಲಿ ರಾಜ್ಯ ಸರಕಾರವೆಂದು, ಕೇಂದ್ರ ಸರಕಾರವೆಂದು, ಸ್ಮಾರ್ಟ್ ಸಿಟಿ ನೆಪದಲ್ಲಿ, ಅಮೃತ್ ಎನ್ನುವ ಹೆಸರಿನಲ್ಲಿ, ನಗರೋತ್ಥಾನ ನಿಧಿ ಎನ್ನುತ್ತಾ ಕೋಟ್ಯಂತರ ರೂ. ಗಳನ್ನು ನಗರಗಳ ಅಭಿವೃದ್ಧಿಗೆ ಸುರಿಯಲಾಗುತ್ತಿದೆ. ಎಲ್ಲ ನಗರಗಳಲ್ಲೂ ಮೂಲಸೌಕರ್ಯಗಳನ್ನು ಕಲ್ಪಿಸಬೇಕು, ನಗರಗಳು ಆರ್ಥಿಕ ಶಕ್ತಿ ಕೇಂದ್ರಗಳನ್ನಾಗಿ ರೂಪಿಸಬೇಕು, ಅವಕಾಶಗಳ ಸ್ವರ್ಗವೆಂದೆನಿಸಬೇಕು ಎಂಬುದು ಮೂಲ ಉದ್ದೇಶವಿರಬಹುದು. ದುರಂತವೆಂದರೆ, ಅವೆಲ್ಲವೂ ಅನ್ನಿಸಿಕೊಂಡಷ್ಟು ಸುಲಭವೇ? ಅದರಲ್ಲೂ ಯಾವುದೇ ದೂರದೃಷ್ಟಿಯಿಲ್ಲದೇ, ಸಮೃದ್ಧ ವನಸಿರಿಯನ್ನು ಇಲ್ಲವಾಗಿಸಿಕೊಂಡು ನಾವು ಹೋಗುತ್ತಿರುವುದು ಎಲ್ಲಿಗೆ ಎಂಬ ಅರಿವಾದರೂ ಇದೆಯೇ?
ಕೆರೆಗಳ ಕಥೆ ಮುಗಿಯಿತು: ನಗರಗಳಲ್ಲಿರುವ ಕೆರೆಗಳ ಕಥೆ ಮುಗಿಯಿತು ಎಂದುಕೊಳ್ಳುವುದು ಒಳಿತು. ರಾಜ್ಯ ಸರಕಾರ ಸತ್ತ ಕೆರೆಗಳನ್ನು ಇಟ್ಟುಕೊಂಡು ಏನು ಮಾಡುವುದು, ಹೂತು ಬಿಡುವುದೇ ಒಳ್ಳೆಯದು ಎಂದು ಯೋಚಿಸುತ್ತಿದೆ. ಯಾಕೆಂದರೆ ಅದೇ ಅರ್ಥದ ಮಾತುಗಳನ್ನು ಸರಕಾರ ಮತ್ತು ನಗರಾಭಿವೃದ್ಧಿ ಸಚಿವರು ಆಡುತ್ತಿದ್ದಾರೆ. “ಪ್ರಯೋಜನಕ್ಕೆ ಬಾರದ ಕೆರೆಗಳನ್ನು ನಾವು ಡಿನೋಟಿಫೈ ಮಾಡುತ್ತಿದ್ದೇವೆ’ ಎಂಬುದು ಸಚಿವರ ಸಮರ್ಥನೆ. ಇಂಥದ್ದೇ ಹಾಳು ಸಮರ್ಥನೆಗಳಿಂದ ಬೆಂಗಳೂರು ಇಂದು ಮತ್ತೂಂದು ದಿಲ್ಲಿಯಾಗುತ್ತಿರುವುದು. ದಿನೇ ದಿನೇ ಪರಿಸರ ಮಾಲಿನ್ಯ ಹೆಚ್ಚುತ್ತಿದೆ, ಕುಡಿಯುವ ನೀರಿನ ಕೊರತೆ ಉದ್ಭವಿಸುತ್ತಿದೆ, ಕಾವೇರಿ ಮೇಲಿನ ಒತ್ತಡ ಹೆಚ್ಚುತ್ತಿದೆ. ಈಗಾಗಲೇ ಹಲವಾರು ಕೆರೆಗಳ ಮೇಲೆ ನಾವು ಕಟ್ಟಡಗಳನ್ನು ಕಟ್ಟಿ ಖುಷಿ ಪಟ್ಟಿದ್ದೇವೆ, ಹಾಗಾಗಿ ಬಹುಶಃ ಸರಕಾರ, ಆಡಳಿತಗಾರರು ಜಲಮೂಲಗಳ ಮೇಲೆ ದಂಡೆತ್ತಿ ಹೊರಟಿದ್ದಾರೆ! ಸಚಿವರು ಹೇಳುತ್ತಿರುವುದೂ ತಮಾಷೆಯಾಗಿದೆ. ಈಗ ಒಂದು ಪ್ರಾಣಿ ಸತ್ತ ಮೇಲೆ ಇಟ್ಟುಕೊಂಡು ಏನು ಮಾಡುವುದು? ಇಲ್ಲವೇ ತಿನ್ನಬೇಕು ಅಥವಾ ಹೂಳಬೇಕು ಎನ್ನುವಂತಿದೆ ಅವರ ಮಾತು. ಆದರೆ, ಇದರ ಕ್ರೌರ್ಯವೆಂದರೆ ಹಾಗೆ ಸಾಯಲು ನಮ್ಮ ನೀತಿ, ಕ್ರಮಗಳು ಕಾರಣ ಎಂಬ ಕನಿಷ್ಠ ಅಳುಕೂ ಆಳುವವರಿಗೆ ಬರುವುದಿಲ್ಲ. ಅಷ್ಟೇ ಏಕೆ? ಇನ್ನಷ್ಟು ಸಾಯುತ್ತಿರುವ ಪ್ರಾಣಿಗಳನ್ನು ಸಾಯಲಿ ಎಂದು ಕಾಯುವ ಕ್ರೌರ್ಯ ಕಾಣುತ್ತದೆ.
ರಾಜರ ಕಥೆ ನೆನಪು: ನಮ್ಮ ಚರಿತ್ರೆಯಲ್ಲಿ, ಇತಿಹಾಸದೊಳಗೆ ಹೊಕ್ಕು ನೋಡೋಣ. ನಮ್ಮ ಹಿಂದಿನ ಆಳುವವರೆಲ್ಲ ಕಂಡಕಂಡಲ್ಲಿ ಕೆರೆಗಳು, ಸಾರ್ವಜನಿಕ ಬಾವಿಗಳನ್ನು ತೋಡಿಸಿ ಮಾದರಿ ರೂಪಿಸಿದವರು. ದೇಶದಲ್ಲಿ ಎಂಥ ಬಡತನ ಬಂದರೂ, ದಾರಿದ್ರ್ಯಗಳು ಎದುರಾದರೂ ಕೊನೇಪಕ್ಷ ನೀರನ್ನು ಕುಡಿದಾದರು ಜನರು ಬದುಕಲಿ ; ಅದಕ್ಕೂ ತತ್ವಾರ ಉಂಟಾಗಬಾರದೆಂಬುದು ಎಲ್ಲರ ಕಾಳಜಿಯಾಗಿತ್ತು. ಕೆರೆಗಳನ್ನು ನಾಶಪಡಿಸಿ ಸಂಭ್ರಮಿಸಿದ್ದು ಕಡಿಮೆ. ಆದರೆ ಆಧುನಿಕ ಆಡಳಿತಗಾರರದ್ದು ತದ್ವಿರುದ್ಧವಾದ ಕ್ರಮ. ನಿಜವಾಗಲೂ ನಾನು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಕಾಲಕ್ಕೆ ಹೋಗುತ್ತಿಲ್ಲ. ಸುಮಾರು 1970ರ ಸುಮಾರಿಗೆ ಬೆಂಗಳೂರಿನಲ್ಲಿ 285 ಕೆರೆಗಳು ಚೆನ್ನಾಗಿದ್ದವು. ಈ ಮಾತು ಬರೀ ಜೀವಂತವಾಗಿದ್ದವು ಎಂದಲ್ಲ. ಅವುಗಳಿಂದ ಅಗತ್ಯಕ್ಕೆ ತಕ್ಕಷ್ಟು ನೀರು ಸಿಗುತ್ತಿತ್ತು. ಇವತ್ತು ಆ ಸಂಖ್ಯೆ 150ರ ಹತ್ತಿರ ಬಂದು ನಿಂತಿದೆ. ಇವುಗಳಲ್ಲಿ ಬಹುಪಾಲು ಒಳಚರಂಡಿಯ ಕೊಳಚೆ ತುಂಬಿ ನಾರುತ್ತಿವೆ. ಕೆಲವು ಕೆರೆಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಖಾಸಗಿಯವರಿಗೆ ಕೊಟ್ಟು ಒಂದಿಷ್ಟು ತಪ್ಪು ಮಾಡಿದೆವು. ಇನ್ನಷ್ಟು ಕೆರೆಗಳಿಗೆ ಕಟ್ಟಡದ ಅವಶೇಷಗಳನ್ನು ತುಂಬಿ, ಕಸ ತ್ಯಾಜ್ಯಗಳನ್ನು ಸುರಿದು, ಒಳಚರಂಡಿಯ ಕೊಳಚೆ ಹರಿಸಿ ಹಾಳು ಮಾಡಿದೆವು. ಕೆರೆಗೆ ಬರಬಹುದಾದ ಮಳೆ ನೀರಿನ ಮೂಲಗಳನ್ನು ನಾಶಪಡಿಸಿದೆವು. ರಾಜಕಾಲುವೆಗಳ ಮೇಲೆ ಮನೆ ಕಟ್ಟಿ ರಾರಾಜಿಸಿದೆವು.
ಒಬ್ಬ ವ್ಯಕ್ತಿ ತಾನೇ ಅನ್ನ-ನೀರು ಆಹಾರಗಳನ್ನೆಲ್ಲ ತ್ಯಜಿಸಿ ಕುಳಿತರೆ ನಿರಾಹಾರಿ ಎನ್ನಬಹುದು. ಅವನಿಗೆ ಅನ್ನ ನೀರಿನ ಅಗತ್ಯವಿರದು. ಯಾವುದೋ ಒಂದು ನಿರ್ದಿಷ್ಟ ಉದ್ದೇಶ ಈಡೇರಬೇಕೆಂದು ಆಗ್ರಹಿಸಿ ಆಳುವವರ ಮುಂದೆ ಇದೇ ರೀತಿ ಕುಳಿತರೆ ನಿರಶನ ಎನ್ನುತ್ತಾರೆ. ಆದರೆ, ನಾವೇ ಯಾವಾದರೊಬ್ಬನಿಗೆ ಅನ್ನ, ನೀರು ಒದಗಿಸಲು ನಿರಾಕರಿಸಿ ಉಪವಾಸ ಬಿದ್ದು ಸಾಯು ಎನ್ನುವ ರೀತಿಯಲ್ಲಿ ಮೂಲೆಗೆಸೆದರೆ ಏನನ್ನಬಹುದು? ಅದನ್ನೇ ಆಳುವವರು ಮಾಡುತ್ತಿರುವುದು ಎಂದರೆ ಖಂಡಿತ ಅಪವಾದವೆನಿಸದು.
ನಾವೆಲ್ಲಿಗೆ ಹೋಗುತ್ತಿದ್ದೇವೆ?: ಈ ಪ್ರಶ್ನೆಯೇ ಎಲ್ಲರನ್ನೂ ಕಾಡುತ್ತಿದೆ. ವಿಚಿತ್ರವೆಂದರೆ ಈ ಪ್ರಶ್ನೆ ನಮ್ಮನ್ನಾಳುವವರನ್ನು ಕಾಡುತ್ತಿಲ್ಲ ಎಂಬುದು. ಪರಿಣಿತರ ಒಂದು ಅಂದಾಜಿನ ಪ್ರಕಾರ 2025ರ ಹೊತ್ತಿಗೆ ಬೆಂಗಳೂರಿನಲ್ಲಿ ಜೀವಿಸುವುದೇ ಕಷ್ಟವಾಗಬಹುದು. ಅದಕ್ಕೂ ಕಾರಣವಿದೆ. ಎರಡು ವರ್ಷಗಳ ಹಿಂದೆಯೇ ಬೆಂಗಳೂರಿನ ಹಲವೆಡೆ ಸುಮಾರು ಒಂದು ಸಾವಿರ ಅಡಿಯಷ್ಟು ಕೆಳಗೆ ಹೋದರೂ ನೀರು ಸಿಗುವುದು ಖಚಿತವಿರಲಿಲ್ಲ. ಇಂದು ಆ ಸ್ಥಿತಿ ಮತ್ತೂ ವಿಷಮಿಸಿದೆ. ಇದು ಹೇಗಿದೆ ಎಂದರೆ, ನೀರೇ ಇಲ್ಲದ ಮರುಭೂಮಿಯಂಥ ಸ್ಥಿತಿ. ರಾಯಚೂರಿನಂಥ ಕಡೆ 800 ಅಡಿಯಷ್ಟು ಆಳಕ್ಕೆ ಹೋಗುವ ಸ್ಥಿತಿ ಇದೆ, ಹನಿ ನೀರಿಗಾಗಿ. ದಿನದಿನಕ್ಕೂ ಬೆಂಗಳೂರಿಗೆ ಉದ್ಯೋಗ ಅರಸಿ ಬರುವವರು ಹೆಚ್ಚಾಗುತ್ತಿದ್ದಾರೆ. ಜನವಸತಿ ಪ್ರದೇಶಗಳ ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ಪರಿಸರ ಮಾಲಿನ್ಯ ಹೆಚ್ಚುತ್ತಿದೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ಕೊರತೆಯೂ ಹೆಚ್ಚುತ್ತಿದೆ. ಒಂದೊಂದಾಗಿ ಈ ಸಮಸ್ಯೆಗಳನ್ನು ಪರಿಹರಿಸುವ ಬದಲು ನಾವೀಗ, ಸತ್ತ ಕೆರೆಗಳ ಪ್ರದೇಶಗಳನ್ನು ಸದುಪಯೋಗಪಡಿಸಿಕೊಳ್ಳಲು ಹೊರಟಿದ್ದೇವೆ. ಅಂದರೆ, ‘ಕೆರೆಗಳನ್ನು ಉಳಿಸಿ’ ಎಂದು ಒಂದೆಡೆ ಹೇಳುತ್ತಾ, ಇನ್ನೊಂದು ಕಡೆ ಸತ್ತಿವೆ ಎನ್ನುವಂತೆ ತೋರುವ ಕೆರೆಗಳಿಗೆ ಮರಣಶಾಸನ ಹೊರಡಿಸಿ, ಒಂದು ದೊಡ್ಡ ಕಟ್ಟಡದ, ವಾಣಿಜ್ಯ ಸಂಕೀರ್ಣದ ಶಿಲಾನ್ಯಾಸ ಮಾಡಲಿಕ್ಕೆ ನಮಗೆ ಸಂಭ್ರಮವೋ ಸಂಭ್ರಮ.
ವಾಸ್ತವವಾಗಿ ಆಗಬೇಕಾದದ್ದೇನು?: ಸರಕಾರವೆಂದರೆ ಶಕ್ತಿ. ಅದು ಏನು ಬೇಕಾದರೂ ಮಾಡಬಹುದು. ಧನಾತ್ಮಕವಾಗಿ ಯೋಚಿಸಿ ಅಡಿಯಿಟ್ಟರೆ ಸ್ವರ್ಗವನ್ನೂ ನಿರ್ಮಿಸಬಹುದು. ಅದಕ್ಕೆ ಏನು ಮಾಡಬೇಕು ಎಂಬುದು ಅರ್ಥವಾಗಬೇಕಷ್ಟೇ. ಅದು ಸಾಧ್ಯವಾದರೆ ಎಲ್ಲವೂ ಸಾಧ್ಯ. ಒಂದುವೇಳೆ ನೇತ್ಯಾತ್ಮಕವಾದ ನೆಲೆಯಲ್ಲಿ ಹೊರಟರೆ ಭಸ್ಮಾಸುರ. ಎಲ್ಲವನ್ನೂ ನಾಶ ಮಾಡಿಬಿಡಬಹುದು. ನಮ್ಮ ಕೈಯಲ್ಲಿ ಏನಿದೆಯೋ ಅದನ್ನು ಉಳಿಸಿಕೊಂಡು, ಹೊರಗಿನಿಂದ ತರುವುದು ಜಾಣತನದ ನಡವಳಿಕೆ. ಅದು ಬಿಟ್ಟು ನಮ್ಮಲ್ಲಿದ್ದದ್ದನ್ನೆಲ್ಲ ಬೇಕಾಬಿಟ್ಟಿ ಖರ್ಚು ಮಾಡಿಕೊಂಡು, ಅರೆಹೊತ್ತಿಗೂ ಹೊರಗಿನಿಂದ ತಂದು ಸಾಲದಲ್ಲಿ ಬದುಕುವ ರೀತಿ (ಇಲ್ಲಿ ಸಾಲವೆಂದರೆ ಬರೀ ಹಣದ ಲೆಕ್ಕಾಚಾರದಲ್ಲಲ್ಲ) ಎಷ್ಟು ದಯನೀಯಲ್ಲವೇ? ನಾವೀಗ ಅದೇ ಸ್ಥಿತಿಯಲ್ಲಿದ್ದೇವೆ. ನಮ್ಮನ್ನಾಳುವವರು ಆ ಸ್ಥಿತಿಯನ್ನು ಸೃಷ್ಟಿಸುತ್ತಿದ್ದಾರೆ. ಬೆಳೆಯುತ್ತಿರುವ ನಗರ ಮತ್ತು ಅದರ ಅಗತ್ಯವನ್ನು ಅರ್ಥಮಾಡಿಕೊಂಡು, ಒತ್ತುವರಿಯಾದ ಕೆರೆಗಳನ್ನು ದಿಟ್ಟತನದಿಂದ ತೆರವುಗೊಳಿಸಿ, ಅವುಗಳನ್ನು ಪುನರುಜ್ಜೀವನಗೊಳಿಸಬೇಕಾದದ್ದು ಸರಕಾರದ ಕರ್ತವ್ಯ, ಸಚಿವರುಗಳ ಹೊಣೆಗಾರಿಕೆ. ಹಾಗೆ ಸರಕಾರ ಅಭಿಯಾನ ಆರಂಭಿಸಿದರೆ ಪ್ರತಿ ಊರಿನಲ್ಲೂ ಜನರು ಸಾಥ್ ನಿಲ್ಲುತ್ತಾರೆ. ಪ್ರತಿ ವರ್ಷ ಎದುರಿಸುತ್ತಿರುವ ಬರದ ಸಮಸ್ಯೆ ನಿವಾರಣೆಯಾಗುತ್ತದೆ. ನಮ್ಮ ದುರಾದೃಷ್ಟವೆನ್ನೋಣ; ಭೂ ಅಭಿವೃದ್ಧಿದಾರರ ಒತ್ತಡ, ಸರಕಾರದೊಳಗಿರುವ, ಆಡಳಿತದಲ್ಲಿರುವವರ ಸಂಕುಚಿತ ದೃಷ್ಟಿಕೋನ, ಲಾಭಗಾರಿಕೆ-ಎಲ್ಲದರ ಫಲವಾಗಿ ಸರಕಾರವೇ ಈಗ ಸತ್ತಿವೆ ಎನ್ನಲಾದ ಕೆರೆಗಳ ಸದುಪಯೋಗಕ್ಕೆ ಹೊರಟಿದೆ. ಅಲ್ಲಿಗೆ ಆರಂಭದಲ್ಲೇ ಹೇಳಲಾದ ಒಂದು ಸನ್ನಿವೇಶವನ್ನು ಈಗ ನೆನಪಿಸಿಕೊಂಡರೆ ಹೆಚ್ಚೇನೂ ವ್ಯತ್ಯಾಸ ಕಾಣದು. ಅಷ್ಟಕ್ಕೂ ಒಂದು ಕೆರೆ ಎನ್ನುವುದು ಎಂದಾದರೂ ಸಾಯುವುದೇ?
– ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.