ಒಂದು ಅನ್ನದ ಅಗುಳಿನ ಮಹತ್ವ ಹಸಿದವನಿಗಷ್ಟೇ ಗೊತ್ತು
Team Udayavani, Mar 4, 2017, 10:09 AM IST
ನಮ್ಮ ಮನೆಯನ್ನು ನಾವು ಬರೀ ಮೊದಲ ಪಾಠಶಾಲೆಗೆ ಸೀಮಿತಗೊಳಿಸಿದ್ದೇವೆ. ಅದನ್ನು ಹೊಸ ಸಂದರ್ಭ ಮತ್ತು ಹೊಸ ಸವಾಲುಗಳಿಗೆ ಪ್ರಯೋಗಶಾಲೆಯಾಗಿಯೂ ಮಾಡಿದರೆ ಸುಸ್ಥಿರ ಅಭಿವೃದ್ಧಿಗೆ ಕೊಡುವ ಕೊಡುಗೆಯ ಪ್ರಮಾಣ ದುಪ್ಪಟ್ಟಾಗುತ್ತದೆ. ಸಂಪನ್ಮೂಲದ ಬಗ್ಗೆ ನಮ್ಮ ಕಾಳಜಿ ಹೆಚ್ಚಿದಷ್ಟೂ ಜೇಬಿನಲ್ಲಿ ಕುಣಿಯುವ ಹಣದ ಮೇಲಿನ ಮೋಹ ಕಡಿಮೆಯಾಗಿ ವಾಸ್ತವದ ಅರಿವಾಗಬಲ್ಲದು.
ಆಹಾರ ಪೋಲಿನ ಬಗ್ಗೆ ಜರ್ಮನಿಯ ಒಂದು ಒಳ್ಳೆಯ ಉದಾಹರಣೆ ಇದೆ. ಜರ್ಮನಿ, ಯುರೋಪ್ ಖಂಡದಲ್ಲಿ ಬಹಳ ಅಭಿವೃದ್ಧಿಗೊಂಡಿರುವ ರಾಷ್ಟ್ರ. ಶ್ರೀಮಂತಿಕೆ ಎಂಬುದಕ್ಕೆ ಕಡಿಮೆ ಇಲ್ಲ. ಆದರೂ ಅವರು ಸಂಪನ್ಮೂಲಗಳನ್ನು ಕಾಣುವ ದೃಷ್ಟಿ ಮತ್ತು ಅವುಗಳ ಬಗೆಗಿನ ಅವರ ದೃಷ್ಟಿಕೋನದಿಂದ ನಾವು ಕಲಿಯುವಂಥದ್ದು ಬೇಕಾದಷ್ಟಿದೆ. ಭಾರತೀಯರೊಬ್ಬರು ಜರ್ಮನಿಗೆ ಹೋಗಿದ್ದರು. ಅಲ್ಲಿ ಅವರ ಗೆಳೆಯರೊಂದಿಗೆ ಸ್ಥಳೀಯ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದರು. ಒಮ್ಮೆ ಅಲ್ಲಿಯ ಒಂದು ಹೊಟೇಲ್‌ನಲ್ಲಿ ಗೆಳೆಯರೊಬ್ಬರ ಹುಟ್ಟುಹಬ್ಬ ಆಚರಿಸಲು ಸಿದ್ಧತೆ ನಡೆದಿತ್ತು. ಅದರಂತೆ ರಾತ್ರಿ ಇವರು ಆ ಹೊಟೇಲ್‌ಗೆ ಹೋದರಂತೆ. ಅಲ್ಲಿ ಒಂದು ದಂಪತಿ ಊಟ ಮಾಡುತ್ತಿದ್ದರು. ಒಂದು ಸಣ್ಣ ಪಾತ್ರೆಯಲ್ಲಿ ಒಂದಿಷ್ಟು ಆಹಾರ ಇಟ್ಟುಕೊಂಡು ಇಬ್ಬರೂ ಸವಿಯುತ್ತಿದ್ದರು. ಮತ್ತೂಂದು ತುದಿಯಲ್ಲಿ ಕೆಲವು ಹಿರಿಯ ಮಹಿಳೆಯರು ಊಟ ಮಾಡುತ್ತಿದ್ದರು. ನಾನು ಮತ್ತು ನನ್ನ ಗೆಳೆಯರಾದ ನಾವು ಬೇಕಾದ ತಿಂಡಿಯನ್ನು ಆದೇಶಿಸಿದೆವು. ಅದರಲ್ಲಿ ತುಸು ಹೆಚ್ಚೆನಿಸುವಷ್ಟೇ ಹೇಳಿದೆವು.
ಸ್ವಲ್ಪ ಹೊತ್ತಿನ ಬಳಿಕ ನಾವು ಹೇಳಿದ ತಿನಿಸುಗಳು ಬಂದವು. ನಾವಿಬ್ಬರೂ ಒಂದಿಷ್ಟು ತಿಂದು ಉಳಿದದ್ದನ್ನು ಹಾಗೆಯೇ ತಟ್ಟೆಯಲ್ಲಿ ಬಿಟ್ಟೆವು. ಅಷ್ಟರಲ್ಲಿ ಆ ಮಹಿಳೆಯರು ಬಂದು, ‘ತಟ್ಟೆಯಲ್ಲಿ ಆಹಾರವನ್ನು ಬಿಡಬಾರದು’ ಎಂದು ಹೇಳಿದರು. ನಮಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿತು. ‘ಅಷ್ಟೂ ಆಹಾರಕ್ಕೆ ಈಗಾಗಲೇ ದುಡ್ಡನ್ನು ಕೊಟ್ಟಿದ್ದೇವೆ. ನಾವೆಷ್ಟು ತಿಂದರೇನು? ಬಿಟ್ಟರೇನು?’ ಎಂದು ಕೇಳಿದರಂತೆ. ಕೋಪಗೊಂಡ ಮಹಿಳೆ ಕೂಡಲೇ ಯಾವುದೋ ನಂಬರ್‌ಗೆ ಫೋನ್ ಮಾಡಿದಳು. ಕೆಲವೇ ಕ್ಷಣಗಳಲ್ಲಿ ಅಧಿಕಾರಿಯೊಬ್ಬರು ಬಂದರು. ಪರಿಸ್ಥಿತಿಯನ್ನು ಅವಲೋಕಿಸಿದ ಆ ಅಧಿಕಾರಿ, ದಂಡ ವಿಧಿಸಿದರು. ಈ ಬಗ್ಗೆ ಪ್ರಶ್ನಿಸಿದಾಗ ಆ ಅಧಿಕಾರಿ, ‘ದುಡ್ಡು ನಿಮ್ಮದೇ. ಸಂಪನ್ಮೂಲ ಸಮಾಜದ್ದು. ನೀವು ಎಷ್ಟಾದರೂ ತಿನ್ನಿ. ಅದು ನಿಮ್ಮ ಹಕ್ಕು. ಆದರೆ, ಆಹಾರವನ್ನು ಪೋಲು ಮಾಡುವುದಕ್ಕೆ ನಿಮಗೆ ಯಾವ ಅಧಿಕಾರವಿಲ್ಲ. ಲಕ್ಷಾಂತರ ಮಂದಿ ಆಹಾರವಿಲ್ಲದೇ ಬದುಕುತ್ತಿರುವಾಗ ನಾವು ಪೋಲು ಮಾಡಬಾರದು’ ಎಂದು ಬುದ್ಧಿ ಹೇಳಿದರಂತೆ. ಇದು ನಡೆದಿದೆಯೋ ಇಲ್ಲವೋ ಎಂಬ ತರ್ಕಕ್ಕೆ ಇಳಿಯುವುದು ಬೇಡ. ಹಾಗೆಯೇ ಜರ್ಮನಿಯ ಹಿಂದಿನ ಒಂದು ಘಟನೆ, ಈಗಲೂ ಇದೇ ಶಿಸ್ತು ಇದೆಯೇ ಎಂದೆಲ್ಲ ಮೊಂಡುವಾದಕ್ಕೆ ಇಳಿದು ತಲೆ ಕೆಡಿಸಿಕೊಳ್ಳುವುದಕ್ಕಿಂತ ಅದನ್ನೇ ಆದರ್ಶವಾಗಿಟ್ಟುಕೊಂಡು ಪಾಲಿಸಿದರೆ ಎಂಥಾ ಧನಾತ್ಮಕ ಬದಲಾವಣೆ ಸಾಧ್ಯವಾಗಬಹುದಲ್ಲ.
ಹೊಟೇಲ್ ಪದ್ಧತಿ ಗಮನಿಸಿದ್ದೀರಾ?
ಮಹಾನಗರಗಳ ಬಹುತೇಕ ಹೊಟೇಲ್‌ಗಳಲ್ಲಿ ಈಗ ಚಾಲ್ತಿಯಲ್ಲಿರುವ ಪದ್ಧತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? ಅಲ್ಲಿರುವುದೂ ಪಾಶ್ಚಾತ್ಯ ಕ್ರಮದ ಆಲೋಚನೆ. ಅಂದರೆ ಸಂಪನ್ಮೂಲ ಮತ್ತು ಜೀವ (ಮಾನವ) ಎಂಬ ಸಂಬಂಧದಿಂದ ಜಿಗಿದು ಗ್ರಾಹಕ ಮತ್ತು ವಸ್ತು ಎಂಬ ವ್ಯಾಖ್ಯಾನಕ್ಕೆ ಬಂದು ಬಿಟ್ಟಿದೆ. ಜರ್ಮನಿಯ ಒಂದು ಉದಾಹರಣೆ ಸೃಷ್ಟಿಯಾದದ್ದೂ ಸಂಪನ್ಮೂಲ ಮತ್ತು ಜೀವದಿಂದಲ್ಲ; ಬದಲಾಗಿ ಗ್ರಾಹಕ ಮತ್ತು ವಸ್ತು ಎಂಬ ನಮ್ಮ ದೃಷ್ಟಿಕೋನದಿಂದಲೇ. ಆದ ಕಾರಣ, ಹೊಟೇಲ್ ಗಳಲ್ಲೂ ಸಂಪನ್ಮೂಲಗಳ ಬಗೆಗಿನ ಕಾಳಜಿ ಕಡಿಮೆಯಾಗಿದೆ. ತನಗೆ ನಷ್ಟವಾಗಬಾರದೆಂಬ ಭಾವನೆ ಗಟ್ಟಿಯಾಗಿದೆ. ಉದಾಹರಣೆಗೆ ಮಹಾನಗರಗಳಲ್ಲಿನ ಹೊಟೇಲ್‌ಗಳಲ್ಲಿ ಈಗ ಆಹಾರವೆಂದರೆ ಕಡಿಮೆ ಸಿಗುವುದಿಲ್ಲ. ಬರೋಬ್ಬರಿ ಪ್ರಮಾಣದಲ್ಲೇ ಸಿಗುವಂಥದ್ದು. ಒಂದು ಕುಟುಂಬದ ದೃಷ್ಟಿಕೋನ (ಗಂಡ-ಹೆಂಡತಿ ಇಲ್ಲವೆ ಗಂಡ-ಹೆಂಡತಿ ಎರಡು ಮಕ್ಕಳು)ದ ನೆಲೆಯಲ್ಲೇ ಮೆನು ಮತ್ತು ಪ್ರಮಾಣ ಸಿದ್ಧವಾಗುವುದು. ಒಂದುವೇಳೆ ನಾವು ಒಬ್ಬರೇ ಹೋದಾಗ ‘ಇಷ್ಟೊಂದು ಪ್ರಮಾಣದ ಆಹಾರ ಬೇಕಿಲ್ಲ. ಸ್ವಲ್ಪ ಕಡಿಮೆ ಸಿಗುತ್ತದೆಯೇ?’ ಎಂದು ಕೇಳಿದರೆ ಹೊಟೇಲ್‌ನವರು ಸೊಗಸಾಗಿ, ‘ಸಾರ್, ಇದು ಮಿನಿಮಮ್. ಇದಕ್ಕಿಂತ ಕಡಿಮೆ ಇಲ್ಲ’ ಎಂಬ ಉತ್ತರ ಕೊಡುತ್ತಾರೆ. ಇಲ್ಲಿರುವ ಸೂಕ್ಷ್ಮಗಳೆಂದರೆ ಗ್ರಾಹಕ, ತನ್ನಿಂದ ಅಷ್ಟೊಂದು ತಿನ್ನಲಿಕ್ಕಾಗದೇ ಪೋಲು ಮಾಡಬೇಕಲ್ಲ ಎಂದುಕೊಂಡು ಕಡಿಮೆ ಕೇಳಿದರೆ ಎಲ್ಲಿಯೂ ಸಿಗದು.
ಒಬ್ಬ ವ್ಯಕ್ತಿಗೆ ಎರಡು ರೊಟ್ಟಿ ಮತ್ತು ಸ್ವಲ್ಪ ಸಬ್ಜಿ (ಪಲ್ಯ) ಸಾಕಾಗುತ್ತದೆ ಎಂದುಕೊಳ್ಳೋಣ. ಆ ಸಬ್ಜಿ ನಾಲ್ಕು ಮಂದಿ ತಿನ್ನುವಷ್ಟು ಕೊಡುತ್ತಾರೆ. ಒಬ್ಬರಿಗೆ ಅದು ಹೆಚ್ಚು. ಆದರೆ, ಅದೇ ಅಲ್ಲಿ ಕನಿಷ್ಟ ಪ್ರಮಾಣ. ಹಾಗಾಗಿಯೇ ಹೊಟೇಲ್‌ಗಳಲ್ಲಿ ಉತ್ತರ ಭಾರತೀಯ ತಿನಿಸು/ಪಲ್ಯಗಳಿಗೆ ಒಂದು ದೊಡ್ಡ ಬೌಲ್ ಮಾದರಿಯ ಪಾತ್ರೆಗಳು ಬಂದಿರುವುದು. ನಮ್ಮ ಮುಂದೆ ಅಂಥ ಸಂದರ್ಭದಲ್ಲಿ ಇರಬಹುದಾದ ಅವಕಾಶಗಳು ಎರಡೇ. ಒಂದು – ಸಾಧ್ಯವಾದಷ್ಟು ತಿನ್ನಬೇಕು. ಎರಡನೆಯದು – ಅದನ್ನು ಬಿಟ್ಟು ಬೇರೆ ಏನಾದರೂ ತಿನ್ನಬೇಕು. ಹೀಗೆ ತಟ್ಟೆಯಲ್ಲಿ ಉಳಿದ ಶೇ. 90ರಷ್ಟು ಆಹಾರ ಮರು ಬಳಕೆಯಾಗುವುದಿಲ್ಲ. ಹೊಟೇಲ್‌ನವರ ಸಮಸ್ಯೆಯೆಂದರೆ, ಸ್ವಲ್ಪ ಕಡಿಮೆ ಎಂದ ಕೂಡಲೇ ಹತ್ತಾರು ಸಮಸ್ಯೆಗಳಿರುತ್ತವೆ. ತಯಾರಿ, ಬಳಸುವ ಪದಾರ್ಥಗಳು ಮತ್ತು ಹಲವಾರು ಆಯ್ಕೆಗಳನ್ನು ಗ್ರಾಹಕರು ಬಯಸುತ್ತಾರೆಂದು ಅಂದುಕೊಂಡು ಈ ನಿಯಮವನ್ನು ಜಾರಿ ತರುತ್ತಾರೆ. ಇದು ಹಲವು ವರ್ಷಗಳಿಂದ ಮುಂದುವರಿಸಿರುವ ಪದ್ಧತಿ. ನಾವು ಇಂಥ ಸಂದರ್ಭಗಳಲ್ಲಿ ಆಯ್ಕೆಯನ್ನು ಬಿಟ್ಟು ಸಂಪನ್ಮೂಲದ ಉಳಿವಿಗೆ ಮಹತ್ವ ಕೊಡುವುದು ಒಳಿತು.
ನಮ್ಮ ಒಂದು ಅನ್ನದ ಅಗುಳಿನ ಮಹತ್ವ
ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯ ಇತ್ಯಾದಿ ಹಲವು ಕಾರಣಗಳಿಂದ ಆಹಾರ ಸ್ವಾವಲಂಬನೆಗೆ ಧಕ್ಕೆಯಾಗಿದೆ. ನಮ್ಮ ಆಹಾರ ಬೆಳೆಗಳ ಇಳುವರಿ ಮೇಲೆ ಅಗಾಧ ಪ್ರಮಾಣ ಬೀರುತ್ತಿವೆ ಎಂದು ಹೇಳುತ್ತವೆ ಸಂಶೋಧನೆಗಳು. ಕನಿಷ್ಠ ಶೇ. 25ರಷ್ಟು ಇಳುವರಿ ಇವುಗಳ ಕಾರಣದಿಂದಲೇ ಕುಸಿಯುತ್ತಿದೆ ಎಂಬ ಅಂದಾಜನ್ನೂ ಮಾಡಲಾಗಿದೆ. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಅಂದಾಜು ಮಾಡಿರುವಂತೆ, 2050ರ ವೇಳೆಗೆ ಈಗಿನ ಆಹಾರ ಉತ್ಪಾದನೆ ಪ್ರಮಾಣದಲ್ಲಿ ಶೇ. 50ರಷ್ಟಾದರೂ ಹೆಚ್ಚಳವಾಗದಿದ್ದರೆ ಆಹಾರ ಕೊರತೆ ದೊಡ್ಡ ಸಮಸ್ಯೆಯಾಗಿ ಉದ್ಭವಿಸಲಿದೆ ಎಂದು ಹೇಳುತ್ತದೆ. ಎಫ್ಎಒ ಹೇಳುವ ಪ್ರಕಾರ, 2015ರ ಮುಸುಕಿನ ಜೋಳದ ಉತ್ಪಾದನೆಯ ಮೇಲೆ ಜಾಗತಿಕ ತಾಪಮಾನದ ಪರಿಣಾಮ ಹೇಗಿತ್ತೆಂದರೆ ಶೇ. 27ರಷ್ಟು ಇಳುವರಿ ಕುಸಿಯಿತು. ನಮ್ಮ ಮನೆಯ ಅಂಗಳದಲ್ಲೂ ಇದರ ಬೇರೆ ಬೇರೆ ರೂಪಗಳನ್ನು ಕಾಣುತ್ತಿದ್ದೇವೆ.
ಸಣ್ಣವರಿದ್ದಾಗ ಶಾಲೆಯಲ್ಲಿ ಆಹಾರ ಸರಪಳಿಯ ಪಾಠ ಮಾಡಿದ್ದು ಇನ್ನೂ ನೆನಪಿದೆ. ಒಂದಕ್ಕೊಂದು ಸೇರಿ ಹೇಗೆ ಆಹಾರ ಸರಪಳಿ ನಿರ್ಮಾಣವಾಗಿದೆಯೋ ಅದೇ ರೀತಿ ಸಂಬಂಧಗಳು ಕಡಿತಗೊಂಡಿರುವುದರಿಂದ ಸಮಸ್ಯೆಗಳ ಸರಪಳಿಯನ್ನು ತೊಡುವಂತಾಗಿದೆ. ಲಕ್ಷಾಂತರ ಮಕ್ಕಳು ಪೌಷ್ಟಿಕಾಂಶಯುಕ್ತ ಆಹಾರ ಸಿಗದೇ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಲಕ್ಷಾಂತರ ಮಕ್ಕಳು ಇಂಥ ಸ್ಥಿತಿಗೆ ತಲುಪಿದರೆ, ಆ ದೇಶಕ್ಕೆ ಬಹಳ ದೊಡ್ಡ ನಷ್ಟ. ಹಲವಾರು ವರ್ಷಗಳಲ್ಲಿ ಇಂಥ ಬೆಳವಣಿಗೆಗಳು ಆಯಾ ದೇಶದಲ್ಲಿ ಸಮರ್ಥ ಮಾನವ ಸಂಪನ್ಮೂಲದ ಕೊರತೆಯಾಗಿಯೂ ಕಾಡುತ್ತದೆ. ಇಂಥ ಸಂದರ್ಭದಲ್ಲಿ ನಮ್ಮ ಒಂದು ಅನ್ನದ ಅಗುಳಿನ ಮಹತ್ವವನ್ನು ನೆನಪಿಸಿಕೊಳ್ಳಬೇಕಿದೆ. ಸುಸ್ಥಿರ ಅಭಿವೃದ್ಧಿಯ ಕಲ್ಪನೆಯ ಹಿನ್ನೆಲೆಯಲ್ಲಿ ಚರ್ಚೆಗೆ ಹೊರಟ, ಒಂದು ಅಗುಳಿನ ಉಳಿತಾಯ, ನೂರು ಅಗುಳುಗಳ ಉತ್ಪಾದನೆಗಿಂತಲೂ ದೊಡ್ಡದು ಎಂಬ ಮಾತಿನ ಅರ್ಥವನ್ನು ಅರಿತುಕೊಳ್ಳುವುದಷ್ಟೆ ಅಲ್ಲ; ಅನುಷ್ಠಾನಗೊಳಿಸಬೇಕು. ನಾಲ್ಕು ಅಗುಳು ಕಡಿಮೆ ತಿಂದರೂ ಪರವಾಗಿಲ್ಲ, ಹತ್ತು ಅಗುಳು ಹೆಚ್ಚಾಗಿ ತ್ಯಾಜ್ಯವಾಗದಂತೆ ಪ್ರಜ್ಞಾಪೂರ್ವಕ ತೀರ್ಮಾನಗಳನ್ನು ನಮ್ಮ ಮನೆಗಳಲ್ಲಿ ಜಾರಿಗೊಳಿಸಬೇಕು. ಅಲ್ಲಿಂದ ಈ ಆಹಾರ ಉಳಿತಾಯದ ಆಂದೋಲನ ಆರಂಭವಾಗಬಹುದು. ಮನೆಯೇ ಮೊದಲ ಪಾಠಶಾಲೆಯಷ್ಟೇ ಅಲ್ಲ; ಮೊದಲ ಪ್ರಯೋಗ ಶಾಲೆಯೂ ಸಹ.
– ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು
Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.