ನಗರವೆಂಬುದು ವರ್ತಮಾನವಿಲ್ಲದ ಬದುಕಿಗೊಂದು ರೂಪಕ


Team Udayavani, Aug 5, 2017, 7:20 AM IST

05-anakana-1.jpg

ವರ್ತಮಾನದ ಬಿಸಿಲಿನ ಸಖ್ಯವಿಲ್ಲದೇ ಭವಿಷ್ಯದ ಬಳ್ಳಿ ಬೆಳೆಯದು. ನಗರವೆಂಬುದು ವರ್ತಮಾನವಿಲ್ಲದ ಬದುಕಿಗೊಂದು ರೂಪಕ. ನಾವೀಗ ಸ್ಟೇಟಸ್‌ ಬದಲಾಯಿಸಿಕೊಳ್ಳಬೇಕು, “ನಾವು ಬದುಕುತ್ತಿದ್ದೇವೆ’ ಎಂದು. 

ಒಂದು ಮಾತಿದೆ. “ನಗರದಲ್ಲಿರುವವರಿಗೆ ವರ್ತಮಾನ ಇರುವುದಿಲ್ಲ’. ಈ ಮಾತು ಹೌದೋ ಅಲ್ಲವೋ ಎಂದು ವಿಶದವಾಗಿ ಚರ್ಚಿಸುತ್ತಾ ಕುಳಿತರೆ ಇಡೀ ಚರ್ಚೆಯೇ ಬೇರೆಡೆಗೆ ಹರಿದು ಬಿಡಬಹುದು. ಆದರೆ, ಆ ಮಾತಿನಲ್ಲಿ ನಾವು ಲಘುಕೋನದಲ್ಲಿ ಅರ್ಥೈಸಿಕೊಂಡರೆ ನಗರದಲ್ಲಿರುವವರ ಬಗ್ಗೆ ನೇತ್ಯಾತ್ಮಕ ಅಭಿಪ್ರಾಯ ಬೆಳೆಸುವಂಥ ಮಾತು ಎನಿಸಬಹುದು. ವಿಶಾಲ ಕೋನದಲ್ಲಿ ನೋಡಿದರೆ ಆ ಮಾತಿನ ಆಂತರ್ಯ ತಿಳಿಯಬಹುದು. 

ನಗರದ ಬದುಕು ಬಗೆಗೆ ಬಹಳ ಸ್ಪಷ್ಟವಾದ ಅರಿವಿದೆ. ದಿನಕ್ಕೊಂದು ಬ್ಯುಸಿಗಳನ್ನು ಸೇರಿಸಿಕೊಳ್ಳುತ್ತಾ ಮನೆಯಲ್ಲಿ ಇರುವುದು ಒಂದೇ. ಅದೆಂದರೆ ಬ್ಯುಸಿಗಳ ಪಟ್ಟಿ. ಸಿಗುವ ಒಂದು ರವಿವಾರಕ್ಕೂ ಸಿಗುವುದು ಕೇವಲ ಹತ್ತು ಗಂಟೆ. ಅದರಲ್ಲಿ ಎಷ್ಟೊಂದು ಕೆಲಸಗಳಿರುತ್ತವೆಯೆಂದರೆ, ಯಾವುದೂ ಬೇಡ ಎಂದು ಬಿಸಾಡಿ ಹೋಗುವಷ್ಟು. ಅದಕ್ಕೇ ಏನೋ ಇತ್ತೀಚೆಗೆ ನಗರಗಳಲ್ಲಿನ ರಸ್ತೆಗಳು ರವಿವಾರದಂದು ಬಿಕೋ ಎನ್ನುತ್ತವೆ. ಯಾಕೆಂದರೆ, ಎಲ್ಲರೂ ನಿತ್ಯದ ಸಂಚಾರ ದಟ್ಟಣೆ ಬಗ್ಗೆ ರೋಸಿ ಹೋಗಿ, ಒಬ್ಬರೂ ರಸ್ತೆಗಿಳಿಯುವುದೇ ಇಲ್ಲ. 

ವರ್ತಮಾನ ಎನ್ನುವುದೊಂದು ಸ್ಟೇಟಸ್‌ ಎನ್ನಬಹುದೇ? ಈ ಸ್ಟೇಟಸ್‌ ಎನ್ನುವುದು ಅಂತಸ್ತಿನ ನೆಲೆಯಲ್ಲಲ್ಲ. ಸಾಮಾಜಿಕ ಮಾಧ್ಯಮಗಳು ನಮ್ಮ ಬದುಕನ್ನು ಆವರಿಸಿಕೊಂಡ ಮೇಲೆ ನಾವೆಲ್ಲರೂ ರಿಯಾಲಿಟಿ ಷೋನಲ್ಲಿನ ಪಾತ್ರಧಾರಿಗಳಂತಾಗಿ ಬಿಟ್ಟಿದ್ದೇವೆ. ನಮ್ಮ ಬದುಕಿನ ಪ್ರತಿ ಕ್ಷಣವನ್ನೂ ಬಹಿರಂಗಗೊಳಿಸಬೇಕೆಂಬ ಇಚ್ಛೆಯಲ್ಲಿ ಕ್ರಿಯಾಶೀಲವಾಗಿದ್ದೇವೆ. ಆ ನೆಲೆಯಲ್ಲೇ ಈ ಸ್ಟೇಟಸ್‌ ಎನ್ನುವ ಪದ ಹುಟ್ಟಿಕೊಂಡದ್ದು. ಎಷ್ಟೋ ಮಂದಿಯ ಮಾನಸಿಕ ಸ್ಥಿತಿಯನ್ನು, ವರ್ತಮಾನವನ್ನು ಅವರ ಸಾಮಾಜಿಕ ಮಾಧ್ಯಮಗಳ ಸ್ಟೇಟಸ್‌ನಿಂದ ಕಂಡು ಹಿಡಿಯಬಹುದು. ಎಲ್ಲದರ ಬಗೆಗಿನ ದುಃಖ, ಸಿಟ್ಟು, ಖುಷಿಯನ್ನು ಹಂಚಿಕೊಳ್ಳಲು ಇರುವುದು ಈ ಸಾಮಾಜಿಕ ಮಾಧ್ಯಮಗಳೇ. 

ನಮ್ಮನ್ನು ಕಳೆದುಕೊಂಡಿರುವುದೇ ಇಲ್ಲಿ
ಭೂತದಿಂದ ಭವಿಷ್ಯತ್‌ಗೆ ಹಾರುವಾಗ ವರ್ತಮಾನ ಒಂದು ಚಿಮ್ಮುವ ಹಲಗೆಯಾಗಿ ಕಾಣುತ್ತದೆ ನಮಗೆ. ಸ್ಟಡಿ ಮತ್ತು ಕೆರಿಯರ್‌ ಎಂಬ ಪದಗಳೂ ಸಾಕಷ್ಟು ಔನ್ನತ್ಯವನ್ನು ಕಂಡಿದ್ದು ನಗರೀಕರಣದ ನೆಲೆಯಲ್ಲೇ. ಅದೇ ಕಾರಣದಿಂದ ಅವೆರಡೂ ನಮಗೆ ಕಾಣುವುದು ಭೂತ ಮತ್ತು ಭವಿಷ್ಯತ್‌ಗಳಾಗಿ. ಈ ಆಲೋಚನ ಕ್ರಮವನ್ನು ನಾನು ನೇತ್ಯಾತ್ಮಕ ನೆಲೆಯಿಂದ ನೋಡುತ್ತಿಲ್ಲ; ಬದಲಾಗಿ ಈ ಹೊತ್ತಿನದು ಎಂದು ಹೇಳಲು ಪ್ರಯತ್ನಿಸುತ್ತಿದ್ದೇನೆ. ಈಗ ಹಳ್ಳಿ ಎಂದು ನಗರಗಳಾಗುತ್ತಿರುವ ಗ್ರಾಮೀಣ ಪ್ರದೇಶಗಳಿಗೂ ಈ ಭಾವ ಆವರಿಸಿಕೊಂಡಿದೆ. ಇದು ಸುಳ್ಳಲ್ಲ. 

ಮನೆಯಲ್ಲೂ ನಾವು ನಮ್ಮ ಮಕ್ಕಳನ್ನು ಹೊಂದಿಸುತ್ತಿರುವುದೂ ಎರಡೇ ಸ್ಥಿತಿಗಳಿಗಾಗಿ. ಒಂದು-ಏನಾಗಿದ್ದೆ? ಎರಡು-ಏನಾಗಬೇಕು? ಇವೆರಡರ ಮಧ್ಯೆ ಇರುವ ಸ್ಥಿತಿ ಈಗೇನಾಗಿದ್ದೀಯಾ? ಪ್ರಸ್ತುತ ಏನಾಗಿದ್ದೀ ಎಂಬುದನ್ನು ಮರೆತಿದ್ದೇವೆ. ಇದಕ್ಕೂ ಸ್ಪಷ್ಟ ಕಾರಣವಿದೆ. ನಾವು ಒಂದು ಸ್ಥಿತಿಯಿಂದ ಮತ್ತೂಂದು ಸ್ಥಿತಿಗೆ ಸಾಗಬೇಕೋ? ಹಾರಬೇಕೋ? ಎಂಬುದು ಅತ್ಯವಶ್ಯ. ಹಾರುವಾಗ ಮಧ್ಯದ ಸ್ಥಿತಿ ನಗಣ್ಯವಾಗುತ್ತದೆ. ಸಾಗುವಾಗ ಮಧ್ಯ ಸ್ಥಿತಿಯೂ ಒಂದು ಮೆಟ್ಟಿಲಾಗುತ್ತದೆ. ನಾವೀಗ ಸಾಗುವುದನ್ನು ಕಡೆಗಣಿಸಿದ್ದೇವೆ; ಹಾರುವುದನ್ನು ಕಲಿಸುತ್ತಿದ್ದೇವೆ. ಹಾಗೆ ನೋಡುವುದಾದರೆ ನಮ್ಮ ಮುಂದಿನ ಪೀಳಿಗೆ ಬದುಕನ್ನು ಹುಡುಕುತ್ತಲೇ ಪೂರ್ಣಾಯುಷ್ಯವನ್ನು ಕಳೆದುಬಿಡುತ್ತದೆ ಎಂದು ಹೇಳಿದರೆ ಅಚ್ಚರಿ ಪಡಲೂ ಬೇಕಿಲ್ಲ; ಕಣ್ಣರಳಿಸಲೂ ಬೇಕಿಲ್ಲ. 

ಬದುಕು ಇರುವುದು ಎಲ್ಲಿ?
ನಮ್ಮ ಹಿರಿಯರ ಬದುಕಿನ ಕ್ರಮವನ್ನು ಒಮ್ಮೆ ಇಣುಕಿನೋಡಿ. ಇನ್ಯಾರದ್ದೂ ಬೇಡ. ನಮ್ಮ ಅಪ್ಪ-ಅಮ್ಮ, ಅಜ್ಜಂದಿರದ್ದು. ಅವರು ಹೆಚ್ಚು ಬದುಕಿದ್ದು ವರ್ತಮಾನದಲ್ಲೇ ಹೊರತು ಭೂತದ ಮೇಲಿನ ಅವಲಂಬನೆಯಲ್ಲೂ ಅಲ್ಲ; ಭವಿಷ್ಯತ್‌ನ ಮಹಾತ್ವಾಕಾಂಕ್ಷೆಯಲ್ಲೂ ಅಲ್ಲ. ಹಾಗೆಂದು ಅವರಿಗೆ ಭವಿಷ್ಯದ ಮೇಲೆ ಪ್ರೀತಿ ಇರಲಿಲ್ಲವೇ ? ಲಕ್ಷ್ಯ ಇರಲಿಲ್ಲವೇ? ಎಲ್ಲವೂ  ಇತ್ತು. ಭವಿಷ್ಯವನ್ನೂ ಚೆನ್ನಾಗಿಯೇ ಪ್ರೀತಿಸುತ್ತಿದ್ದರು. ಹೇಗೆ ಎಂದರೆ ಬಹಳ ಸರಳ. 

ನಮ್ಮ ಅಪ್ಪಂದಿರ ತಲೆಮಾರಿನ ಯಾರನ್ನೇ ಕೇಳಿದರೂ ಹೇಳುತ್ತಿದ್ದ ಸಾಮಾನ್ಯ ಮಾತೆಂದರೆ, “ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿಸಬೇಕು’. ಇದೊಂದೇ ಭವಿಷ್ಯ. ಮಕ್ಕಳಲ್ಲಿ ಭವಿಷ್ಯವನ್ನು ಕಾಣುತ್ತಿದ್ದರು. ಹಾಗಾಗಿ ಬೇರೆ ಯಾವುದರ ಬಗ್ಗೆಯೂ ಗಮನವಿರಲಿಲ್ಲ; ಆಸ್ತಿ ಕ್ರೋಢೀಕರಣದ ಮೋಹವಿರಲಿಲ್ಲ. ಕಷ್ಟಪಟ್ಟು ಓದಿಸುವುದಕ್ಕೆ ಪೂರಕವಾದ ಸೌಲಭ್ಯ ಕಲ್ಪಿಸುವಲ್ಲೇ ತಮ್ಮ ಶ್ರಮವನ್ನು ವಿನಿಯೋಗಿಸುತ್ತಿದ್ದರು. ಹಾಗಾಗಿಯೇ ಪ್ರತಿ ಊರಿನಲ್ಲೂ ಕಾಲೇಜು-ಶಾಲೆಗಳು ಅವತರಿಸಿದ್ದು. 

ಬದುಕನ್ನು ಅರ್ಥೈಸಿಕೊಳ್ಳಲಿಕ್ಕೆ ಮತ್ತು ಬದುಕಲಿಕ್ಕೆ ಇದಕ್ಕಿಂತ ಉದಾತ್ತವಾದ ನೆಲೆ ಇದೆಯೇ ಎಂದು ಕೇಳಿಕೊಳ್ಳೋಣ. ಖಂಡಿತ ಇಲ್ಲ. ವರ್ತಮಾನದಲ್ಲಿ ಯಾವ ನಷ್ಟವನ್ನೂ ಮಾಡಿಕೊಳ್ಳದೇ, ದುಡಿದಿದ್ದರಲ್ಲಿ ಒಂದಿಷ್ಟು ಹಣವನ್ನು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಿ, ಮಕ್ಕಳು ಓದಿ ದೊಡ್ಡವರಾಗಿ ಬಂದ ಮೇಲೆ, ಇಡೀ ಸಮಾಜ ಪಡುವ ಸಂಭ್ರಮವನ್ನು ತಮ್ಮ ಸಂಭ್ರಮವನ್ನಾಗಿಸಿಕೊಂಡು ಬದುಕಿದ ತಲೆಮಾರು ಅದು. ಅವರಿಗೆ ತಾವು ಮುಳುಗುವಷ್ಟು ಆಸ್ತಿ ಮಾಡಲಿಲ್ಲವೆಂಬ ಬೇಸರವಿರಲಿಲ್ಲ. ಇದ್ದದ್ದರಲ್ಲಿ ಚೆನ್ನಾಗಿರುವುದನ್ನು ಕಲಿತಿದ್ದರು. ರಾತ್ರಿ ಚೆನ್ನಾಗಿ ನಿದ್ದೆ ಮಾಡುತ್ತಿದ್ದರು, ಶ್ರಮಪಟ್ಟು ದುಡಿಯುತ್ತಿದ್ದರು. ನಿಜಕ್ಕೂ ಬದುಕುತ್ತಿದ್ದರು. 

ನಮ್ಮ ನೆಲೆಯೇ ಬೇರೆ
ಈಗ ನಮ್ಮ ಬದುಕಿನ ಚಿತ್ರದ ಚಿತ್ರಣವನ್ನೂ ಕಣ್ಣ ಮುಂದೆ ಹರಡಿಕೊಳ್ಳೋಣ. ಓದಿದ್ದಾಯಿತು. ಹಲವು ಪ್ರವೇಶ ಪರೀಕ್ಷೆ ಎದುರಿಸಿ, ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ಭಾಗಿಯಾಗಿ ಕೊನೆಗೂ ಲಾಂಗ್‌ ಜಂಪ್‌ ಎನ್ನುವಂತೆ ಯಾವುದಾದರೂ ಕಂಪೆನಿಯ ತೆಕ್ಕೆಗೆ ಹಾರಿಬಿಡುತ್ತೇವೆ. ಬಳಿಕ ಕಂಫ‌ರ್ಟ್ಸ್ಗಳ ಬೆನ್ನಿಗೆ ಬೀಳುತ್ತೇವೆ. ದುಡಿದ ಎಲ್ಲವನ್ನೂ ಸಂಗ್ರಹಿಸುತ್ತಾ ಹೋಗುತ್ತೇವೆ. ಒಂದು ಸೈಟು ಕೊಂಡೆವು. ಸಾಕಾಗದು ಎನಿಸಿತು. ಮತ್ತೂಂದು ಪಡೆದೆವು. ಅದಕ್ಕಾಗಿ ಸಾಲ ಪಡೆದೆವು. ಪಡೆದ ಸಾಲ ತೀರಿಸಲಿಕ್ಕೆ ಕಷ್ಟವಾದರೂ ಅದೇ ಕೆಲಸದಲ್ಲಿ ಮುಂದುವರಿದೆವು. ಹೀಗೆ ಒಂದಕ್ಕೊಂದು ನಾವೇ ಬಲೆಗಳನ್ನು ಸೃಷ್ಟಿಸಿಕೊಳ್ಳುತ್ತಾ, ಬಿಡಿಸಿಕೊಳ್ಳುತ್ತಾ ಹೊರಗೆ ಬರುವಷ್ಟರಲ್ಲಿ ನಮಗೆ ಅರಿವಿಲ್ಲದೆ ಮತ್ತೂಂದು ಗಂಟು ಬಿದ್ದಿರುತ್ತದೆ. ಹೊರಗೆ ಬರಲು ಅದನ್ನು ಬಿಡಿಸಿಕೊಳ್ಳಬೇಕು. 

ಹೀಗೆ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳುತ್ತಾ, ವರ್ತಮಾನವನ್ನು ಸಂಪೂರ್ಣವಾಗಿ ಅಲಕ್ಷಿಸಿ ಬದುಕನ್ನು ಹುಡುಕಿಕೊಂಡೆ ಹೊರಡುತ್ತೇವೆ. ಕೊನೆಗೂ ಸಿಗುವುದಿಲ್ಲ. ಆದರೆ ಹೇಗೆ ಭೂತ ಮತ್ತು ಭವಿಷ್ಯತ್‌ನ ಮಧ್ಯೆ ಹಾರುವ ಸಂಭ್ರಮದಲ್ಲಿ ನೆಲದ (ಭೂಮಿಯ) ಸಂಪರ್ಕವನ್ನು ಕಳೆದುಕೊಂಡು ಆಕಾಶದಲ್ಲಿರುವ ಒಂದು ಸಂಭ್ರಮ (ಇಲ್ಯೂಶನ್‌)ವನ್ನು ಅನುಭವಿಸುತ್ತೇವೆಯೋ ಹಾಗೂ ಅದನ್ನೇ ನಿಜವೆಂದೂ, ವರ್ತಮಾನವೆಂದು ಭ್ರಮಿಸುತ್ತೇವೆಯೋ ಹಾಗೆಯೇ ಬದುಕಿದ್ದೇವೆ ಎಂಬ ಭಾವದಲ್ಲೇ ಮುಳುಗಿರುತ್ತೇವೆ. ಅಂಥ ಸಂಭ್ರಮ. 

ವರ್ತಮಾನದ ಬಿಸಿಲು
ಇದೇ ಕಾರಣದಿಂದ ಹೇಳುತ್ತಿರುವುದು ನಗರಗಳಲ್ಲಿದ್ದು ನಾವು ವರ್ತಮಾನವನ್ನು ಕಳೆದುಕೊಂಡಿದ್ದೇವೆ. ವರ್ತಮಾನದ ಬಿಸಿಲು ಬೆಳವಣಿಗೆಗೆ ಬಹಳ ಮುಖ್ಯವಾದುದು. ಆದರೆ, ನಾವು ಕತ್ತಲಲ್ಲೇ ಬದುಕು ಸಾಗಿಸುತ್ತಿದ್ದೇವೆ ಎಂದೇ ಸದಾ ಅನಿಸುತ್ತದೆ. ಹಾಗೆಂದು ನಗರದ ಕತ್ತಲೆಯಲ್ಲೂ ಬೆಳಕು ಹುಡುಕಿಕೊಂಡು, ಬೆಳಕಾದವರು ಮತ್ತು ಬೆಳಕನ್ನು ಉಂಡು ಸಂಭ್ರಮಿಸುವವರು ಇಲ್ಲವೆಂದಲ್ಲ. ಬಹಳ ಅಪರೂಪ. ಅಂಥವರು ಉಳಿದವರಿಗೆ ಅನ್ಯ ಗ್ರಹಗಳಿಂದ ಬಂದ ಜೀವಿಗಳಂತೆಯೇ ತೋರುತ್ತಾರೆ. 

ವರ್ತಮಾನಕ್ಕೆ ಬರೋಣ
ನಾವೀಗ ಮಾಡಬೇಕಿರುವುದು ವರ್ತಮಾನಕ್ಕೊಂದು ಸ್ಟೇಟಸ್‌ ಕೊಡುವುದು. ನಮ್ಮ ಭೂತ, ಭವಿಷ್ಯದ ಸ್ಟೇಟಸ್‌ ಮಧ್ಯೆ ವರ್ತಮಾನಕ್ಕೊಂದು ಸ್ಥಾನ ಕಲ್ಪಿಸಿ, ಸಂಭ್ರಮದಿಂದ “ನಾವು ಬದುಕುತ್ತಿದ್ದೇವೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸ್ಟೇಟಸ್‌ ಹಾಕಿಕೊಳ್ಳಬೇಕು. ಅಷ್ಟಾದರೆ ಸಾಲದು; ಬದುಕಲು ಆರಂಭಿಸಬೇಕು. 

ಬ್ಯುಸಿಗಳ ಪಟ್ಟಿಯಲ್ಲಿ ನಾವು ವ್ಯವಕಲನ ಆರಂಭಿಸಬೇಕು. ಒಂದೊಂದನ್ನೇ ಕಳೆಯುತ್ತಾ, ತೆಗೆಯುತ್ತಾ ಅನುಭವಗಳನ್ನು ಸಂಕಲಿಸಿಕೊಳ್ಳುತ್ತಾ ಬಂದಾಗ ಬದುಕು ನಮಗೆ ಸಿಗುತ್ತದೆ. ನಮ್ಮಪ್ಪ-ಅಮ್ಮ ಮಾಡಿದ್ದು ಇದನ್ನೇ. ನಿನ್ನೆ-ನಾಳೆಗಳ ನಡುವೆ ಇಂದೂ ಬದುಕಿದ್ದರು!

ಅರವಿಂದ ನಾವಡ

ಟಾಪ್ ನ್ಯೂಸ್

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.