ಇದ್ದದ್ದನ್ನೆಲ್ಲಾ ಮಾರಿಕೊಂಡು ಉಪ್ಪಿಗೆ ಕಡ ಕೇಳಿದವನ ಕಥೆ
Team Udayavani, Jun 23, 2018, 6:00 AM IST
ಇರುವುದನ್ನೆಲ್ಲಾ ಮಾರಿಕೊಂಡು ಉಪ್ಪಿಗೆ ಪಕ್ಕದ ಮನೆಯಲ್ಲಿ ಸಾಲ ಕೇಳಿ ಹೊರಟವನ ಕಥೆ ಮಹಾನಗರಗಳದ್ದಾಗುತ್ತಿದೆ. ಬೆಂಗಳೂರು ಸಣ್ಣದೊಂದು ಉದಾಹರಣೆ. ಬೇರೆ ಮಹಾನಗರಗಳದ್ದೂ ಅದೇ ಕಥೆ. ಈ ಮಧ್ಯೆಯೂ ನಾವು ನಡೆಯಬೇಕಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಈಗಲೂ ಕಾಲ ಮಿಂಚಿಲ್ಲ.
ನಾವು ಇದನ್ನು ಏನೆಂದು ಕರೆಯಬೇಕೋ ತಿಳಿಯುತ್ತಿಲ್ಲ. ಒಂದು ಬಗೆಯಲ್ಲಿ ಪರಿಸರದ ಅಸಮರ್ಪಕ ನಿರ್ವಹಣೆ ಎಂದು ಕರೆದು ಬಿಡಬಹುದೇನೋ. ಇನ್ನೊಂದೆಡೆ ಪರಿಸರದ ದುರ್ಬಳಕೆ ಎಂದು ಹೇಳಿಯೂ ತಣ್ಣಗಾಗಬಹುದು. ಆದರೆ ಈ ವ್ಯಾಖ್ಯಾನಗಳಿಗಿಂತ ಅಥವಾ ಅರ್ಥೈಸುವಿಕೆಗಿಂತ ಭೀಕರವಾದ ಅಪಾಯ ನಮ್ಮ ಕಾಲ ಕೆಳಗೇ ಘಟಿಸುತ್ತಿದೆ. ಅದನ್ನು ಅರಿಯಲು ಪ್ರಯತ್ನಿಸದೇ ನಾವು ವೃಥಾ ಚರ್ಚೆಯಲ್ಲೇ ಮುಳುಗುತ್ತಿದ್ದೇವೆಯೇ ಎಂದೂ ಅನಿಸಿದ್ದುಂಟು.
ಒಂದು ನಗರ ಮತ್ತು ನಗರದಲ್ಲಿರುವ ನಾವು ಎಷ್ಟರ ಮಟ್ಟಿಗೆ ಸ್ವತಂತ್ರರು ಎಂದುಕೊಂಡು ಯೋಚಿಸುತ್ತಾ ಕುಳಿತರೆ ನಮ್ಮೊಳಗೆ ದೊಡ್ಡದೊಂದು ಶೂನ್ಯ ಮೂಡಬಹುದು. ಯಾಕೆಂದರೆ, ಅಷ್ಟರ ಮಟ್ಟಿಗೆ ನಾವು ಅಂದರೆ ನಗರದ ನಾಗರಿಕರು ಪರತಂತ್ರರು. ನಿತ್ಯದ ಬದುಕಿನ ಗೊಡವೆಯನ್ನು ಇಲ್ಲಿ ಪ್ರಸ್ತಾಪಿಸುವುದೇ ಇಲ್ಲ. ಹಳ್ಳಿಗೂ ಮತ್ತು ನಗರಕ್ಕೂ ಇರಬಹುದಾದ ಹಲವು ವ್ಯತ್ಯಾಸಗಳಲ್ಲಿ ಇವೂ ಕೆಲವು ಎಂದುಕೊಳ್ಳೋಣ. ಬಹಳ ಮುಖ್ಯವಾಗಿ ಕುಡಿಯುವ ನೀರಿನ ವಿಷಯವನ್ನು ಗಮನಿಸಿದರೆ, ನಮ್ಮ ಬಹುತೇಕ ಮೆಗಾ ಸಿಟಿಗಳು ಅವಲಂಬಿಸಿರುವುದು ಬೇರೆ ಭಾಗದ ನೀರನ್ನೇ.
ಬೆಂಗಳೂರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಕಾವೇರಿ ನದಿಯ ನೀರೇ ಬದುಕಿಸುತ್ತಿರುವುದು. ಎಲ್ಲ ಜಲ ಮೂಲಗಳನ್ನು ಹಾಳು ಮಾಡಿಕೊಂಡು, ಕೆಲವನ್ನು ಬೇರೆ ಉದ್ದೇಶಗಳಿಗೆ ಮಾರಿಕೊಂಡು ಬೇರೆ ಕಡೆಯಿಂದ ನೀರು ತರಿಸಿಕೊಂಡು ಬದುಕುವುದು ನಗರದ ಒಂದು ಗುಣವೆಂಬಷ್ಟು ಸ್ವಾಭಾವಿಕವಾಗಿದೆ. ಇದು ಬಹುತೇಕ ನಗರಗಳಿಗೆ ಅನ್ವಯ ವಾಗುವಂಥದ್ದು. ಕೆರೆಗಳಿದ್ದರೆ ಅವುಗಳನ್ನು ಹಾಳು ಮಾಡಿರುತ್ತೇವೆ, ಇಲ್ಲವೇ ಒತ್ತುವರಿ ಮಾಡಿ ಅನ್ಯ ಉದ್ದೇಶಕ್ಕೆ ಬಳಸಿರುತ್ತೇವೆ. ಅದೂ ಇಲ್ಲವೆಂದುಕೊಳ್ಳೋಣ. ನಮ್ಮ ನಾಗರಿಕ ತ್ಯಾಜ್ಯಗಳನ್ನು, ಕೈಗಾರಿಕ ತ್ಯಾಜ್ಯಗಳನ್ನು ಬಿಟ್ಟು ಕೊಲ್ಲುತ್ತೇವೆ. ಇವೆಲ್ಲವನ್ನೂ ನಾವು ಉದ್ದೇಶ ಪೂರ್ವಕವಾಗಿಯೇ ಮಾಡುತ್ತಿರುತ್ತೇವೆ.
ಅದಕ್ಕೆ ಬೆಳ್ಳಂದೂರು ಕೆರೆಯಿಂದ ಹಿಡಿದು ಬೇಕಾದಷ್ಟು ಕೆರೆಗಳು ನಮ್ಮ ಕಣ್ಣ ಎದುರೇ ಇವೆ. ಅಷ್ಟೇ ಏಕೆ? ರಾಜ ಕೆಂಪೇಗೌಡನ ಕಾಲದಲ್ಲಿ ಎಷ್ಟು ಕೆರೆಗಳಿತ್ತೋ ಆ ಲೆಕ್ಕಕ್ಕೆ ಹೋಗುವುದೇ ಬೇಡ. ಯಾಕೆಂದರೆ ಅಷ್ಟೊಂದು ದೊಡ್ಡ ಕೆರೆಗಳನ್ನು ಉಳಿಸಿಕೊಳ್ಳುವಷ್ಟು ಉದಾರಿಗಳೂ ನಾವಲ್ಲ. ಕೆಂಪೇಗೌಡ ಹಲಸೂರು ಕೆರೆ ನಿರ್ಮಿಸಿದಾಗ ಅದರ ವಿಸ್ತಾರ ಎಷ್ಟಿತ್ತು ಗೊತ್ತೇ? 125 ಎಕ್ರೆ ಪ್ರದೇಶದಷ್ಟು. ಈಗ ಏನಾಗಿದೆ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ. 1960ರ ಸುಮಾರಿನಲ್ಲಿ 262 ಕೆರೆಗಳಿದ್ದವು ಎಂಬ ಮಾಹಿತಿ ಇದೆ. ಈಗ ಸುಮಾರು 81 ಕೆರೆಗಳಿದ್ದು, ಅವುಗಳಲ್ಲಿ 34 ಜೀವಂತ ಕೆರೆಗಳೆಂದು ಗುರುತಿಸಲಾಗಿದೆ. ಇದು ಸರಕಾರ ಇಲಾಖೆಗಳೇ ನೀಡಿರುವ ಮಾಹಿತಿ. ವಿಚಿತ್ರವೆಂದರೆ, ಇವುಗಳಾವುದೂ ಮೂಲ ಸ್ವರೂಪದಲ್ಲಿಲ್ಲ. ಅಂದ ಮೇಲೆ ನೀರು ಸಂಗ್ರಹ ಸಾಮರ್ಥಯ, ಅಂತರ್ಜಲ ಮಟ್ಟ ಹೆಚ್ಚಳ ಮಾಡಬಹುದಾದ ವಿಸ್ತಾರ ಎಲ್ಲವೂ ಕ್ಷೀಣಿಸಿದೆ ಎಂದು ರಾಜಾರೋಷವಾಗಿ ಹೇಳಬಹುದು. ಹಾಗಾಗಿಯೇ ಇಂದು ನೀರಿನ ಕೊರತೆ ಉದ್ಭವ ವಾಗಿರಬಹುದು.
ಮತ್ತೂಂದು ನದಿಯತ್ತ
ಈಗಾಗಲೇ ನಮ್ಮಲ್ಲಿರುವ ಎಲ್ಲ ಜಲಮೂಲಗಳನ್ನು ಬರಿದು ಮಾಡಿಕೊಂಡು, ಮತ್ತೂಂದು ನದಿಯತ್ತ ನೋಡುವ ಸ್ವಭಾವವೇ ನಮ್ಮನ್ನು ಇಂಥದೊಂದು ಸ್ಥಿತಿಗೆ ತಂದು ನಿಲ್ಲಿಸಿರುವುದು. ಇದು ನಮ್ಮ ಜನಪ್ರತಿನಿಧಿಗಳಿಗಾಗಲೀ, ಆಡಳಿತಗಾರರಿಗಾಗಲೀ ತಿಳಿಯುತ್ತಿಲ್ಲ. ಕೆಲವು ಜನಪ್ರತಿನಿಧಿಗಳಿಗೆ ಹೊರ ಪ್ರದೇಶದಿಂದ ನೀರನ್ನು ತಂದು ಪೂರೈಸುವುದೂ ಮತಗಳನ್ನು ತಂದೀತೆಂಬ ನಂಬಿಕೆ. ಕಾವೇರಿ ನಾಲ್ಕನೇ ಹಂತದಲ್ಲಿ ನೀರು ತರಿಸುವುದಾಗಿ ಹೇಳಿಯೇ ಬೆಂಗಳೂರಿನ ನಾಗರಿಕರ ಮತ ಪಡೆದವರು ಬೇಕಾದಷ್ಟಿದ್ದಾರೆ. ಅದರಲ್ಲೂ ಮಹಾ ನಗರಪಾಲಿಕೆಯ ವಾರ್ಡ್‌ಗಳಲ್ಲಿ ಕಾವೇರಿ ನೀರು ಹರಿಯುವುದೂ ಒಂದು ಭರವಸೆಯಾಗಿದ್ದಿದೆ.
ಇತ್ತೀಚಿನ ಕಾವೇರಿ ಕುರಿತ ತೀರ್ಪಿನಲ್ಲೂ ಬೆಂಗಳೂರಿಗೆ ಕೊಂಚ ಸಮಾಧಾನ ತರುವ ಅಂಶವಿದ್ದದ್ದು ನಿಜ. ಬೆಂಗಳೂರು ಬೆಳೆದ ಪರಿಯನ್ನು ಕಂಡು ಸುಪ್ರೀಂಕೋರ್ಟ್ ಸಹ ಸುಮಾರು 14.5 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಕೊಡಲು ಸಮ್ಮತಿಸಿತ್ತು. ಅದರಂತೆ ಹಿಂದಿನ 18.25 ಟಿಎಂಸಿ ಬದಲು 23 ಟಿಎಂಸಿ ನೀರು ಹೆಚ್ಚಾಗಿದೆ. ಇಷ್ಟನ್ನೂ ಬೆಂಗಳೂರಿನ ಕುಡಿಯುವ ನೀರಿನ ಬಳಕೆಯೆಂದು ಪರಿಗಣಿಸಿ ನೀಡಿರುವುದು. ರಾಜ್ಯ ಸರಕಾರ ಕೇಳಿದಷ್ಟು ನೀರು (30 ಟಿಎಂಸಿ) ನಮಗೆ ಲಭ್ಯವಾಗದಿದ್ದರೂ ಸ್ವಲ್ಪ ಸಿಕ್ಕಿರುವುದೇ ಸಮಾಧಾನ ತಂದಿರುವುದು ಸತ್ಯ. ವಿಚಿತ್ರವೆಂದರೆ ಇಷ್ಟು ಎಲ್ಲಿಗೆ ಸಾಕಾಗುತ್ತದೆ ಎಂಬ ಪ್ರಶ್ನೆ.
2011 ರ ಜನಗಣತಿ ಪ್ರಕಾರ ಜನಸಂಖ್ಯೆ 85 ಲಕ್ಷ. ಅದೀಗ ಕೋಟಿ ದಾಟಿದೆ. ನೀರಿಗೆ ಬೇಡಿಕೆಯೂ ಹೆಚ್ಚಿದೆ. ಆದರೂ ಸ್ಥಳೀಯ ಜಲಮಂಡಳಿ ಎರಡು ವರ್ಷಗಳ ಹಿಂದೆ ಪೂರೈಸುತ್ತಿದ್ದುದು ಸುಮಾರು ದಿನಕ್ಕೆ 1, 400 ಮಿಲಿಯನ್ ಲೀಟರ್. ಸುಮಾರು 8.60 ಲಕ್ಷಕ್ಕೂ ಹೆಚ್ಚು ನಲ್ಲಿ ಸಂಪರ್ಕಗಳಿದ್ದವು. ಅವೆಲ್ಲವನ್ನೂ ಲೆಕ್ಕ ಹಾಕಿದರೂ ದಿನಕ್ಕೆ ಸರಾಸರಿ 65 ಲೀಟರ್ ನೀರನ್ನು ಪೂರೈಸಲಾಗುತ್ತಿತ್ತು. ಹಾಗೆ ನೋಡುವುದಾದರೆ ದೂರದಿಂದ ನೀರನ್ನು ತರುವುದು, ಸಂಗ್ರಹಿ ಸುವುದು, ಮತ್ತೆ ಅಗತ್ಯವಿದ್ದೆಡೆ ಪಂಪ್ ಮಾಡುವುದು ಎಲ್ಲದಕ್ಕೂ ತಗಲುವ ವೆಚ್ಚ ಸುಮಾರು ಒಂದು ಸಾವಿರ ಲೀಟರ್‌ಗೆ 28 ರೂ. ಗಳಷ್ಟಾಗುತ್ತಿತ್ತು. ಈಗ ಕೊಂಚ ಹೆಚ್ಚಾಗಿರಬಹುದು ಎಂದುಕೊಳ್ಳೋಣ. ಪರಿಸ್ಥಿತಿ ಹೀಗಿರುವಾಗ ಹಾಗೂ ವಲಸಿಗರ ಸಂಖ್ಯೆ ಏರುತ್ತಿರುವಾಗ ಎಲ್ಲರಿಗೂ ನೀರು ಪೂರೈಸುವುದು ಸಾಧ್ಯವೇ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.
ತರುವುದರಲ್ಲೇ ಬ್ಯುಸಿ
ನಮ್ಮ ಆಡಳಿತಗಾರರು ಹಾಗೂ ಜನಪ್ರತಿನಿಧಿಗಳು ಬೇರೆ ಕಡೆಯಿಂದ ಸಂಪನ್ಮೂಲ ತರುವುದರಲ್ಲೇ ಬ್ಯುಸಿಯಾಗಿರುತ್ತಾರೆ. ಯಾರೊಬ್ಬರಿಗೂ ಇಲ್ಲಿರುವ ಜಲಸಂಪನ್ಮೂಲಗಳನ್ನು ಉಳಿಸಿ ಕೊಳ್ಳುವತ್ತ ಯೋಚಿಸಲು ಪುರಸೊತ್ತೇ ಇಲ್ಲ. ಕೆಲವೊಮ್ಮೆ ಅದು ಮತ್ತೂಂದು ಬಗೆಯ ವ್ಯಾಖ್ಯಾನಕ್ಕೂ ಎಡೆ ಮಾಡಿಕೊಡುವುದಿದೆ. ಬರ ಬಂದರೂ ಕೆಲವರಿಗೆ ಲಾಭ, ನೆರೆ ಬಂದರೂ ಮತ್ತೆ ಕೆಲವರಿಗೆ ಲಾಭವಂತೆ. ಹಾಗಾಗಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುವವರು ಕಡಿಮೆ ಎನ್ನುವುದೂ ಇದೆ. ಈ ಮಾತೂ ಸತ್ಯವೆಂಬಂತೆ ತೋರುವುದುಂಟು. ನಮ್ಮಲ್ಲಿರುವ ಕೆರೆಗಳನ್ನು ಉಳಿಸಿಕೊಳ್ಳೋಣ ಎಂದರೆ ಮತಗಳು ಬರುವುದಿಲ್ಲ. ಅದೇ ದೂರದ ಊರಿನಿಂದ ನದಿ ನೀರು ತರುತ್ತೇವೆ ಎಂದು ಮತ ಬರುತ್ತದೆ ಎಂಬ ನಂಬಿಕೆಯೂ ಕಾರಣವಾಗಿದ್ದಿದೆ.
ಒಂದು ವಿಪರ್ಯಾಸದ ಸಂಗತಿಯನ್ನು ಹೇಳಬೇಕು. ಜಲ ಮಂಡಳಿಯ ಅಧಿಕಾರಿಗಳೇ ಹೇಳುವಂತೆ ನಿತ್ಯವೂ 1,400 ಮಿಲಿಯನ್ ಲಕ್ಷ ಲೀಟರ್ ನೀರನ್ನು ನಗರಕ್ಕೆ ಪೈಪುಗಳ ಮೂಲಕ ಹರಿಸಲಾಗುತ್ತದೆ. ಅದರೆ ಜನರಿಗೆ ತಲುಪುವುದೆಷ್ಟು ಗೊತ್ತೇ? ಕೇವಲ 800 ಮಿಲಿಯನ್ ಲೀಟರ್. ಉಳಿದ 600 ಮಿಲಿಯನ್ ಲೀಟರ್ ಸೋರಿಕೆಯಾಗುತ್ತದೆ. ಈ ಸೋರಿಕೆಗೆ ಹಲವು ಕಾರಣಗಳಿರಬಹುದು. ಆದರೆ ಪ್ರಮುಖವಾದುದೆಂದರೆ, ಮೊದಲನೆಯದು- ದುರ್ಬಲ ಗೊಂಡ ಪೈಪ್‌ಲೈನ್‌ಗಳು. ಎರಡನೆಯದು-ಅನಧಿಕೃತ ಸಂಪರ್ಕ ಗಳು. ಶೇ. 46 ರಷ್ಟು ಸೋರಿಕೆ ನಮ್ಮಲ್ಲಿ. ಇದೂ ದುಬಾರಿ ಎಂದೆನಿಸುವುದು ಎಲ್ಲಿ ಎಂದರೆ, ನೂರು ಕಿ.ಮೀನಷ್ಟು ದೂರದ ಕೃಷ್ಣ ರಾಜ ಸಾಗರ ಜಲಾಶಯದಿಂದ ಕೋಟ್ಯಂತರ ರೂ. ವೆಚ್ಚ ಮಾಡಿ ಪಂಪ್‌ಗ್ಳನ್ನು ಹಾಕಿ ತಂದ ನೀರಿನಲ್ಲಿ ಸರಿ ಸುಮಾರು ಅರ್ಧದಷ್ಟು ನೀರನ್ನು ಸೋರಿಕೆ ಮಾಡುತ್ತಿದ್ದೇವೆಂದರೆ ವಿಪರ್ಯಾಸವೆನಿಸದೇ ಇರದು.
ನಮ್ಮ ದೇಶದಲ್ಲೇ ಹೆಚ್ಚು ನೀರು ಸೋರಿಕೆ ಮಾಡುತ್ತಿರುವ ನಗರಗಳ ಪೈಕಿ ಬೆಂಗಳೂರೇ ಎರಡನೇ ಸ್ಥಾನದಲ್ಲಿರುವುದು. ಮೊದಲಿನ ಸ್ಥಾನ ಕೋಲ್ಕತ್ತಾಕ್ಕಿದೆ. ಅಲ್ಲಿ ಬರೋಬ್ಬರಿ ಅರ್ಧದಷ್ಟು (ಶೇ.50) ನೀರು ಸೋರಿಕೆಯಾಗುತ್ತದೆ. ಹಾಗೆಯೇ ದಿಲ್ಲಿಯಲ್ಲಿ ಶೇ. 26, ಚೆನ್ನೈಯಲ್ಲಿ ಶೇ.20, ಮುಂಬಯಿಯಲ್ಲಿ ಶೇ. 18ರಷ್ಟು ನೀರು ಸೋರಿಕೆ ಆಗುತ್ತಿದೆ.
ಮತ್ತೂಂದು ನದಿ
ಇಷ್ಟೆಲ್ಲಾ ಇರುವಾಗ ನಮ್ಮ ಗಮನ ಮತ್ತೂಂದು ನದಿಯತ್ತ ಹೊರಟಿದೆ. É ಶರಾವತಿ ಒಡಲಿನಿಂದ ನೀರು ತರಲು ನಮ್ಮನ್ನಾಳುವವರು ಯೋಚಿಸತೊಡಗಿದ್ದಾರೆ. ಈ ಕುರಿತು ಸಾಕಷ್ಟು ಚರ್ಚೆಯೂ ಆರಂಭವಾಗಿದೆ. ಅಲ್ಲಿಗೆ ನೂರು ಕಿ.ಮೀ ಕಾಲ ಮುಗಿಯಿತು, ಇನ್ನು ನಾಲ್ಕು ನೂರು ಕಿ.ಮೀಗಳ ಕಥೆ. ಮಹಾನಗರಗಳ ನಾಗರಿಕರಾದ ನಾವು ಹೀಗೆಯೇ ಪ್ರತಿ ಹಂತದಲ್ಲೂ ಪರತಂತ್ರದ ಕಬ್ಜದಲ್ಲಿ ಒಳಗಾಗುತ್ತಲೇ ಇರಬೇಕು. ಸಣ್ಣ ಸಣ್ಣ ಪ್ರಯತ್ನಗಳ ಮಧ್ಯೆ ಸ್ವಾತಂತ್ರ್ಯ ಹೊಂದುವ ಇಚ್ಛೆತೋರಿದರೂ ಸಾಧ್ಯವಾಗುವುದಿಲ್ಲ. ಒಂದರಿಂದ ಬಿಡಿಸಿಕೊಂಡೆವೆಂದರೆ ಮತ್ತೂಂದರಲ್ಲಿ ಬಂಧಿಯಾ ಗುತ್ತೇವೆ. ಈಗ ಹಾಗಲ್ಲ,ಕಾವೇರಿಯಲ್ಲೂಬಂಧಿಯಾಗಿದ್ದೇವೆ, ಶರಾವತಿಯಲ್ಲೂ ಬಂಧಿಯಾಗುತ್ತೇವೆ.. ಮುಕ್ತಿಯ ಮಾತು ಕೇಳುವಂತಿಲ್ಲ.
ಇರುವುದನ್ನೆಲ್ಲಾ ಮಾರಿಕೊಂಡು ಉಪ್ಪಿಗೆ ಪಕ್ಕದ ಮನೆಯಲ್ಲಿ ಸಾಲ ಕೇಳಿ ಹೊರಟವನ ಕಥೆ ನಮ್ಮದು. ಈ ಮಧ್ಯೆಯೂ ನಾವು ನಡೆಯಬೇಕಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಈಗಲೂ ಕಾಲ ಮಿಂಚಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.