ನಗರ ಹೊಗೆಗೂಡಾಗದಿರಲು ಇದೂ ಒಂದು ವಿಧಾನ
Team Udayavani, Dec 2, 2017, 9:40 AM IST
ಹೊಗೆಯುಗುಳುವ ವಾಹನಗಳನ್ನು ಇನ್ನು ಮರೆತುಬಿಡಿ. ಇನ್ನೇನಿದ್ದರೂ ಎಲೆಕ್ಟ್ರಿಕ್ ವಾಹನಗಳ ಮಾತು. ಎಲ್ಲವೂ ಅಂದುಕೊಂಡಂತೆ ನಡೆದರೆ 2030ರ ವೇಳೆಗೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಯುಗ.
ವಾಹನಗಳ ಹೊಗೆಗಳಿಂದ ನಗರಗಳನ್ನು ಮುಕ್ತಿಗೊಳಿಸಲು ಸಾಧ್ಯವೇ ಎಂದು ಯೋಚಿಸುವ ಕ್ರಮ ಹೊಸತೇನೂ ಅಲ್ಲ. ಯುರೋಪಿನಲ್ಲಿ ಕೆಲವು ವರ್ಷಗಳಿಂದ ವಿವಿಧ ರೀತಿಯ ಪ್ರಯತ್ನಗಳು ಚಾಲ್ತಿಯಲ್ಲಿವೆ. ನೀವು ನಂಬಲಾರಿರಿ, ನಮ್ಮಲ್ಲಿ ನಾವು ಹೇಗೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಮುಗಿಬೀಳುತ್ತೇವೆಯೋ ಹಾಗೆಯೇ ನಾರ್ವೆಯಲ್ಲಿನ ಜನ ಮತ್ತು ಸರಕಾರ ಎಲೆಕ್ಟ್ರಿಕ್ ವಾಹನಗಳಿಗೆ ಮುಗಿಬೀಳುತ್ತಿದೆ. ನೋಡ ನೋಡುತ್ತಿದ್ದಂತೆ ಸಣ್ಣದೊಂದು ರಾಷ್ಟ್ರದ ಎಲೆಕ್ಟ್ರಿಕ್ ವಾಹನಗಳ ಮೇಲಿನ ಪ್ರೀತಿ ಇಡೀ ರಾಷ್ಟ್ರವನ್ನೇ ಪರ್ಯಾಯ ಇಂಧನ ಬಳಸುವ ಚಳವಳಿಯೊಂದಕ್ಕೆ ನಾಯಕತ್ವ ಒದಗಿಸಿದೆ.
ಪ್ರಸ್ತುತ ಸಂದರ್ಭದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗೆಗಿನ ಮೋಹ ನಮ್ಮ ದೇಶದಲ್ಲಿ ಕಡಿಮೆಯೇ. ಆದರೂ ಕೊಂಚ ಸಮಾಧಾನದ ಸಂಗತಿಯೆಂದರೆ, ನಿಧಾನವಾಗಿ ಆಡಳಿತ ನಡೆಸುವವರಿಗೆ ಇದರ ಬಗೆಗಿನ ಅಗತ್ಯ ಅರಿವಾಗುತ್ತಿದೆ. ಮೆಲ್ಲಗೆ ವರ್ತಮಾನವನ್ನು ಅರಿತುಕೊಳ್ಳುವ ಪ್ರಯತ್ನ ನಡೆದಿದೆ. ಮಹಾರಾಷ್ಟ್ರದಲ್ಲಿ ಸ್ಥಳೀಯ ಸರಕಾರ ಆರು ತಿಂಗಳ ಹಿಂದೆ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿನಾಯಿತಿ ಘೋಷಿಸಿತು. ನಮ್ಮ ರಾಜ್ಯದಲ್ಲೂ ಎಲೆಕ್ಟ್ರಿಕ್ ವಾಹನಗಳ ಪ್ರೋತ್ಸಾಹಕ್ಕೆ ರಾಜ್ಯ ಸರಕಾರ ನೀತಿ ರೂಪಿಸಿದೆ. ಎರಡು ದಿನಗಳ ಹಿಂದಷ್ಟೇ ಎಲೆಕ್ಟ್ರಿಕ್ ಬಸ್‌ಗಳನ್ನೂ ಆರಂಭಿಸುವ ಬಗ್ಗೆ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಪ್ರಕಟಿಸಿದ್ದಾರೆ. ರಾಜ್ಯ ಸರಕಾರವು ಎಲೆಕ್ಟ್ರಿಕ್ ಸ್ಟಾರ್ಟಪ್‌ಗ್ಳು ಮತ್ತು ಉದ್ಯಮಿಗಳ ಜತೆ ಸಭೆಯನ್ನೂ ನಡೆಸಿದ್ದಾರೆ. ಇದೆಲ್ಲವೂ ಹೊಗೆಮುಕ್ತ ರಾಷ್ಟ್ರವನ್ನು ಕಟ್ಟುವತ್ತ ಪ್ರಮುಖ ಮೆಟ್ಟಿಲುಗಳಾಗಿ ಪರಿಣಮಿಸುವುದು ಖಂಡಿತ.
ಇಂದಿನ ಸಂದರ್ಭ ಹೇಗಿದೆ?
ನಾರ್ವೆಯೂ ಸೇರಿದಂತೆ ಹೊರ ರಾಷ್ಟ್ರಗಳ ಬಗ್ಗೆ ಹೇಳುವ ಮೊದಲು ನಮ್ಮ ದೇಶದಲ್ಲಿನ ಪರಿಸ್ಥಿತಿ ಹೇಳುವುದು ಸೂಕ್ತ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2030ರ ವೇಳೆಗೆ ಎಲೆಕ್ಟ್ರಿಕ್ ವಾಹನಗಳದ್ದೇ ದರಬಾರು ನಡೆಯಬೇಕು ಎಂದು ಘೋಷಿಸಿದೆ. ಅದಕ್ಕೆ ಪೂರಕವಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಹ ಕೆಲವು ಬಾರಿ ಎಲೆಕ್ಟ್ರಿಕ್ ವಾಹನಗಳ ಯುಗಕ್ಕೆ ಹೋಗಬೇಕಾದ ಅನಿವಾರ್ಯತೆ ಕುರಿತು ಮಾತನಾಡುತ್ತಿದ್ದಾರೆ. ಇವೆಲ್ಲವೂ ಭವಿಷ್ಯದ ಭಾರತದ ಬಗೆಗಿನ ಆಲೋಚನೆಗಳು. ಒಂದು ಹಂತದಲ್ಲಿ ಇದು ಬಹುದೊಡ್ಡ ಕನಸು. ಹಾಗೆಂದೇ ಅರ್ಥೈಸುವುದು ಒಳಿತು. ಈ ಕನಸು ನನಸಾದರೆ ದೇಶಕ್ಕಾಗುವ ಲಾಭ ಹಲವು ಇವೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಬಹಳ ಮುಖ್ಯವಾಗಿ ಪೆಟ್ರೋಲ್-ಡೀಸೆಲ್ ಆಮದಿನ ಪ್ರಮಾಣ ಗಮನಾರ್ಹವಾಗಿ ಕುಸಿಯಲಿದೆ. ಇದರಿಂದ ಸುಮಾರು 20 ಲಕ್ಷ ಕೋಟಿಯಷ್ಟು ಹಣ ಕೇಂದ್ರದ ಬೊಕ್ಕಸಕ್ಕೆ ಉಳಿತಾಯವಾಗಲಿದೆ ಎಂಬ ಅಂದಾಜಿದೆ.
ಹಾಗೆಂದು ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಬಳಕೆ ಮತ್ತು ಬೇಡಿಕೆ ಕುರಿತು ಮಾಹಿತಿ ಹುಡುಕಿಕೊಂಡು ಹೊರಟರೆ ನಗೆಪಾಟಲಿಗೀಡಾಗುವ ಸ್ಥಿತಿ. ಸದ್ಯಕ್ಕೆ ರಸ್ತೆಯ ಮೇಲೆ ಓಡುತ್ತಿರುವ ಸುಮಾರು 20 ಕೋಟಿ ವಾಹನಗಳಲ್ಲಿ ಶೇಕಡಾ ಒಂದರಷ್ಟೂ ಎಲೆಕ್ಟ್ರಿಕ್ ವಾಹನಗಳಿಲ್ಲ. ಇದರೊಂದಿಗೆ ಲಭ್ಯ ಮಾಹಿತಿ ಪ್ರಕಾರ ದಿನವೂ ಸುಮಾರು 50 ಸಾವಿರಕ್ಕೂ ಹೆಚ್ಚು ಪೆಟ್ರೋಲ್-ಡೀಸೆಲ್ ಇಂಧನ ಆಧಾರಿತ ವಾಹನಗಳು ರಸ್ತೆಗಿಳಿಯುತ್ತಿವೆ. ಇದು ಬರೀ ಕಾರುಗಳ ಬಗೆಗಿನ ಮಾತಲ್ಲ. ವಾಸ್ತವ ಹೀಗಿರುವಾಗ ಮುಂದಿನ 13 ವರ್ಷಗಳಲ್ಲಿ ಇಡೀ ದೇಶ ಎಲೆಕ್ಟ್ರಿಕ್ ವಾಹನಗಳ ಮೇಲೆ ಸವಾರಿ ಮಾಡುತ್ತದೆ ಎಂದರೆ ನಂಬಲಿಕ್ಕೆ ತುಸು ಕಷ್ಟ. ಆದರೆ ಆಗಲಾರದು ಎಂದು ಖಡಾಖಂಡಿತವಾಗಿ ಹೇಳಲಿಕ್ಕಾಗದು. ಕಾರಣವೆಂದರೆ, ಈ ಉದ್ದೇಶ ಈಡೇರಿಸಲೇಬೇಕಾದ ಅನಿವಾರ್ಯತೆ ಸದ್ಯಕ್ಕಿದೆ. ಒಂದೆಡೆ ಜಾಗತಿಕ ಹವಾಮಾನ ಬದಲಾವಣೆ ಕುರಿತ ಒಪ್ಪಂದಗಳಿಗೆ ಸಹಿ ಹಾಕಿರುವ ಭಾರತ, 2030ರ ವೇಳೆಗೆ ಇಂಗಾಲಾಮ್ಲದ ಪ್ರಮಾಣವನ್ನು ತಗ್ಗಿಸಲೇಬೇಕಿದೆ. ಮತ್ತೂಂದೆಡೆ ವಾಹನಗಳ ಮೇಲಿನ ಪ್ರೀತಿ (ಅದರಲ್ಲೂ ಖಾಸಗಿ ವೈಯಕ್ತಿಕ ಸಾರಿಗೆ ವಾಹನಗಳು) ಹೆಚ್ಚುತ್ತಿರುವುದು ಪೆಟ್ರೋಲ್ ಆಮದಿನ ವೆಚ್ಚವನ್ನು ಹೆಚ್ಚಿಸುತ್ತಿದೆ.
ಸಮಸ್ಯೆ ಇರುವುದು ಎಲ್ಲಿ?
ಈಗ ವಾರ್ಷಿಕ ಎಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುತ್ತಿದ್ದೇವೆ ಎಂಬುದನ್ನು ಮುಂದೆ ಚರ್ಚಿಸೋಣ. ಎಲೆಕ್ಟ್ರಿಕ್ ವಾಹನಗಳ ಕ್ರಾಂತಿ ಸಾಧ್ಯವಾಗಬೇಕೆಂದರೆ, ಅವುಗಳ ಉತ್ಪಾದನೆಗಿಂತಲೂ ಇಂಧನ ಪೂರೈಕೆ ಬಗೆಗಿನದ್ದೇ ದೊಡ್ಡ ಚಿಂತೆ. ವಾಹನಗಳಿಗೆ ಇಂಧನ ತುಂಬಿಸಿಕೊಳ್ಳಲು (ಚಾರ್ಜ್ ಮಾಡಿಕೊಳ್ಳುವ ಕೇಂದ್ರಗಳು) ಎಲ್ಲೆಂದರಲ್ಲಿ ಲಭ್ಯವಾಗಬೇಕು. ಒಂದು ಅಂದಾಜಿನ ಪ್ರಕಾರ ನಮ್ಮಲ್ಲೀಗ ಸುಮಾರು 56 ಸಾವಿರದಷ್ಟು ಪೆಟ್ರೋಲ್ ಬಂಕ್‌ಗಳು ಇವೆ. ಆದರೆ ಸಮುದಾಯ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ಗಳ ಸಂಖ್ಯೆ 200ಕ್ಕಿಂತ ತುಸು ಹೆಚ್ಚು. ಈ ಸಂಖ್ಯೆಯಲ್ಲಿ ಕ್ರಾಂತಿಕಾರಕ ಹೆಚ್ಚಳ ಸಾಧ್ಯವಾಗದಿದ್ದರೆ ಸರಕಾರ ಎಲ್ಲರ ತಲೆ ಮೇಲೆ ತೂಗುಕತ್ತಿ ಹಾಕಿದರೂ ಎಲೆಕ್ಟ್ರಿಕ್ ವಾಹನಗಳನ್ನು ಜನರು ಕೊಳ್ಳಲಾರರು. ಸಮಸ್ಯೆ ಇರುವುದೇ ಇಲ್ಲಿ. ಜನರಿಗೆ ಸುಲಭ ದರದಲ್ಲಿ ಮತ್ತು ಅನಾಯಾಸವಾಗಿ ಚಾರ್ಜಿಂಗ್ ಮಾಡಿಕೊಳ್ಳಲು ಅವಕಾಶ ಸಿಗಬೇಕು. ಅದಕ್ಕೋಸ್ಕರ ಗಂಟೆಗಳನ್ನು ವ್ಯಯಿಸುವುದು ಇಷ್ಟವಿಲ್ಲ. ಅದರಲ್ಲೂ ನಗರ ಜೀವನದಲ್ಲಿ ಹಣಕ್ಕಿಂತಲೂ ಸಮಯಕ್ಕೇ ದೊಡ್ಡ ಬೆಲೆ. ಒಂದು ಗಂಟೆ ಉಳಿಸಿಕೊಳ್ಳಲು ಮತ್ತು ಮೌಲ್ಯಯುತವಾಗಿ ದುಡಿಸಿಕೊಳ್ಳಲು ಸಾವಿರಾರು ರೂ.ಗಳನ್ನು ವೆಚ್ಚ ಮಾಡಲು ನಾಗರಿಕರು ತಯಾರಿರುತ್ತಾರೆ. ಹಾಗಾಗಿ ಅವರಿಗೆ ಹಣ ಖಂಡಿತ ಮುಖ್ಯವಲ್ಲ. ಈ ದೃಷ್ಟಿಕೋನವನ್ನೂ ಕಂಪೆನಿಗಳು ಮತ್ತು ಸರಕಾರ ಗಮನದಲ್ಲಿಟ್ಟುಕೊಳ್ಳುವುದು ಉಚಿತ. ಇಲ್ಲವಾದರೆ ಉದ್ದೇಶಿತ ಪಯಣವೇ ವಿಫಲತೆ ಕಡೆ ಸಾಗುವುದರಲ್ಲಿ ಸಂದೇಹವಿಲ್ಲ.
ಮುಂಬಯಿ ಸೇರಿದಂತೆ ಕೆಲವು ನಗರಗಳಲ್ಲಿ ಬೃಹತ್ ಮೋಟಾರು ನಿರ್ಮಾಣ ಕಂಪೆನಿಗಳು ಈಗಾಗಲೇ ಹೊಸ ಕನಸಿಗೆ ಬುನಾದಿ ಹಾಕುವ ಕೆಲಸ ಆರಂಭಿಸಿವೆ. ಮುಂಬಯಿ, ಪುಣೆ ಸೇರಿದಂತೆ ಹಲವು ನಗರಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳು ಆರಂಭವಾಗಿವೆ. ನಾಗಪುರದಲ್ಲಿ ಓಲಾ ಕಂಪೆನಿ 50ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿ ಸೇವೆ ಆರಂಭಿಸಿದೆ. ಕೇಂದ್ರ ಸರಕಾರವೂ ಇದರತ್ತ ಗಮನಹರಿಸಿರುವುದು ಸ್ವಾಗತಾರ್ಹ. ಸರಕಾರದ ಕಂಪೆನಿ ಇಇಎಸ್‌ಎಲ್ ಈಗಾಗಲೇ 10 ಸಾವಿರ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಕಂಪೆನಿಗಳಿಗೆ ಆದೇಶಿಸಿದೆ. ಸರಕಾರಿ ವಾಹನಗಳನ್ನು ಬದಲಾಯಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇವೆಲ್ಲವು ತ್ವರಿತಗತಿಯಲ್ಲಿ ಸಾಧ್ಯವಾದರೆ ಒಂದಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು. ಸೌರಶಕ್ತಿಯನ್ನೂ ಸೇರಿದಂತೆ ವಿವಿಧ ಪರ್ಯಾಯ ಇಂಧನ ಮೂಲಗಳನ್ನು ಬಳಸಿ ವಿದ್ಯುತ್ ಉತ್ಪಾದನೆಯತ್ತಲೂ ಗಮನಹರಿಸಲಾಗಿದೆ. ಈ ನಿಟ್ಟಿನಲ್ಲೇ ಪ್ರಯತ್ನಗಳು ಚಾಲ್ತಿಯಲ್ಲಿರುವುದು ಮತ್ತಷ್ಟು ಸಮಾಧಾನ ತಂದಿದೆ.
ಒಂದು ದಿಟ್ಟ ಹೆಜ್ಜೆ
ಪರಿಸರ ಸ್ನೇಹಿ ಬದುಕನ್ನು ರೂಢಿಸಿಕೊಳ್ಳಲು ಪರ್ಯಾಯ ಇಂಧನಗಳ ಸಾರಿಗೆ ವ್ಯವಸ್ಥೆಗೆ ವರ್ಗಾವಣೆಗೊಳ್ಳುವುದು ತೀರಾ ಆವಶ್ಯಕವಾದುದು. ನಾವು ಈಗಾಗಲೇ ದಿಲ್ಲಿಯ, ಬೆಂಗಳೂರಿನ ವಾಯು ಮಾಲಿನ್ಯದ ದುಷ್ಪರಿಣಾಮಗಳನ್ನು ಕಣ್ಣಾರೆ ಬರೀ ಕಾಣುತ್ತಿಲ್ಲ; ಅನುಭವಿಸುತ್ತಿದ್ದೇವೆ. ಎಲ್ಲ ನಗರಗಳೂ ಹೊಗೆಗೂಡಾಗುತ್ತಿವೆ. ವಾಯುಮಾಲಿನ್ಯದ ಸಂಕಷ್ಟವನ್ನು ಎದುರಿಸಲಾಗದೇ ಕಚೇರಿಗಳಿಗೆ, ಶಾಲೆಗಳಿಗೆ ರಜೆ ಕೊಡುವ ಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿ ಕೇವಲ ಬೆಂಗಳೂರು, ದಿಲ್ಲಿಯದ್ದೆಂದು ಹೇಳಿಕೊಂಡು ಕುಳಿತುಕೊಳ್ಳಬೇಕಿಲ್ಲ. ಕಾನ್ಪುರದ ಕಥೆಯೂ ಬಹುತೇಕ ಅದೇ. ಮುಂಬಯಿಯಲ್ಲೂ ಇದೇ ಪರಿಸ್ಥಿತಿ. ಅದೃಷ್ಟವಶಾತ್ ಮುಂಬಯಿಯಲ್ಲಿ ಜನಪ್ರಿಯಗೊಂಡಿರುವ ರೈಲು ಸೇವೆ ಪರಿಸರದ ಮೇಲಿನ ಒತ್ತಡವನ್ನು ಒಂದಿಷ್ಟು ಕಡಿಮೆ ಮಾಡಿರಬಹುದು. ಉಳಿದಂತೆ ನಮ್ಮ ಪ್ರತಿ ಊರುಗಳೂ ಸಣ್ಣ ಸಣ್ಣ ಹೊಗೆಗೂಡುಗಳಾಗಿ ಪರಿವರ್ತಿತವಾಗುತ್ತಿರುವುದು ಸುಳ್ಳಲ್ಲ. ಬದಲಾವಣೆಗೆ ಒಗ್ಗಿಕೊಂಡು, ಹೊಸ ಸಾರಿಗೆ ವ್ಯವಸ್ಥೆ ಮತ್ತು ಕ್ರಮಗಳತ್ತ ನಾವು ಮತ್ತು ಆಡಳಿತಗಾರರು ಚಲಿಸದಿದ್ದರೆ ದೊಡ್ಡ ದುರಂತ ಕಾದಿಟ್ಟ ಬುತ್ತಿ.
ಹೊಗೆಯುಗುಳುವ ವಾಹನಗಳನ್ನು ಇನ್ನು ಮರೆತುಬಿಡಿ. ಇನ್ನೇನಿದ್ದರೂ ಎಲೆಕ್ಟ್ರಿಕ್ ವಾಹನಗಳ ಮಾತು.
ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.