ಬದುಕು ಬದಲಿಸಿದ ಆತ್ಮಶೋಧನೆಯ ಪಯಣ
Team Udayavani, Jan 24, 2019, 12:30 AM IST
ನಮ್ಮ ಯೋಚನೆಗಳು ಮತ್ತು ಮಿತಿಗಳು ನಮ್ಮನ್ನು ಕಟ್ಟಿಹಾಕುತ್ತವೆ ಎನ್ನುವುದು ಅರಿವಾಯಿತು. ನಾವು ವಿಶ್ವವಿಸ್ತಾರದ ಎದುರು ನಿಂತು ಅದಕ್ಕೆ ಯಾವಾಗ ಶರಣಾಗುತ್ತೀವೋ, ನಾವೆಲ್ಲರೂ ಈ ಬೃಹತ್ ಬ್ರಹ್ಮಾಂಡದ ಚಿಕ್ಕ ತುಣುಕಷ್ಟೆ ಎನ್ನುವುದನ್ನು ಯಾವಾಗ ಅರ್ಥ ಮಾಡಿಕೊಳ್ಳುತ್ತೀವೋ, ಆಗ ನಮ್ಮಲ್ಲಿ ಅಹಂಕಾರದ ಲವಲೇಶವೂ ಇಲ್ಲವಾಗುತ್ತದೆ. ಆಗ ಜೀವನ ನಿಜಕ್ಕೂ ಆರಂಭವಾಗುತ್ತದೆ!
ಎಂಟು ಜನರಿದ್ದ ನಮ್ಮ ಕುಟುಂಬ, 40×12 ಅಡಿಯ ಪುಟ್ಟ ಮನೆಯಲ್ಲಿ ವಾಸಿಸುತ್ತಿತ್ತು. ಆದರೂ ನಮಗೆಲ್ಲ ಅದು ಸಾಕಾಗುತ್ತಿತ್ತು. ಅಮ್ಮನಿಗೆ ಶಿಕ್ಷಣ ಪಡೆಯುವ ಸೌಭಾಗ್ಯ ಸಿಗಲಿಲ್ಲ, ಆದರೆ ದೇವರ ದಯೆಯಿಂದ, ಆಕೆಗೆ ಪುಟ್ಟ ಮಕ್ಕಳ ರೋಗವಾಸಿ ಮಾಡುವ ವಿಶೇಷ ಜ್ಞಾನವಿತ್ತು. ನಮ್ಮಮ್ಮ ನವಜಾತ ಶಿಶುಗಳು ಮತ್ತು ಪುಟ್ಟ ಮಕ್ಕಳಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಚಿಕಿತ್ಸೆ ಕೊಡುತ್ತಿದ್ದಳು. ಹೀಗಾಗಿ, ನಮ್ಮ ಮನೆಯ ಮುಂದೆ ನಿತ್ಯವೂ ತಾಯಂದಿರೆಲ್ಲ ಬೆಳಗ್ಗೆಯಿಂದಲೇ ಸಾಲುಗಟ್ಟುತ್ತಿದ್ದರು. ಈ ಕಾರಣಕ್ಕಾಗಿಯೇ ಬೆಳಗ್ಗೆ 5ಕ್ಕೇ ನಮ್ಮ ದಿನ ಆರಂಭವಾಗಿಬಿಡುತ್ತಿತ್ತು. ರಾತ್ರಿಯೆಲ್ಲ ನಾನು ಮತ್ತು ನನ್ನ ಸಹೋದರ ಪಾಳಿ ಬದಲಿಸುತ್ತಾ ಒಲೆಯಲ್ಲಿನ ಕೆಂಡ ಆರದಂತೆ ನೋಡಿಕೊಳ್ಳುತ್ತಿದ್ದೆವು.
ನಸುಕಲ್ಲಿ ಮನೆಯಿಂದ ಹೊರಬಿದ್ದು ನೇರವಾಗಿ ರೈಲ್ವೆ ಸ್ಟೇಷನ್‌ಗೆ ಹೋಗಿ ಅಲ್ಲಿ ಅಪ್ಪನ ಟೀ ಸ್ಟಾಲ್ ತೆರೆದು, ಅದನ್ನು ಸ್ವತ್ಛಗೊಳಿಸಿ, ನಂತರ ಶಾಲೆಗೆ ಹೋಗುತ್ತಿದ್ದೆ. ಶಾಲೆ ಮುಗಿಯುತ್ತಿದ್ದಂತೆಯೇ ಮತ್ತೆ ರೈಲ್ವೆ ಸ್ಟೇಷನ್‌ಗೆ ದೌಡಾಯಿಸಿ ಅಪ್ಪನಿಗೆ ಸಹಾಯ ಮಾಡುತ್ತಿದ್ದೆ. ಆ ಸ್ಟೇಷನ್‌ನಲ್ಲಿ ನಾನು ನಿಜಕ್ಕೂ ನಿರೀಕ್ಷಿಸುತ್ತಿದ್ದದ್ದು, ದೇಶಾದ್ಯಂತದ ಜನರನ್ನು ಭೇಟಿಯಾಗುವ ಅವಕಾಶವನ್ನು! ನಾನು ಅವರಿಗೆಲ್ಲ ಚಹಾ ಕೊಟ್ಟು, ಅವರು ಹೇಳುವ ಕಥೆಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ನಾನು ಹಿಂದಿ ಭಾಷೆಯಲ್ಲಿ ಮಾತನಾಡುವುದನ್ನು ಕಲಿತದ್ದೇ ಹೀಗೆ. ಆಗೆಲ್ಲ ಕೆಲವು ವ್ಯಾಪಾರಿಗಳು “ಬಾಂಬೆ’ಯ ಬಗ್ಗೆ ಮಾತನಾಡುವುದನ್ನು ಕೇಳಿಸಿಕೊಂಡಾಗಲೆಲ್ಲ, “ಜೀವನದಲ್ಲಿ ಒಮ್ಮೆಯಾದರೂ ಆ ಕನಸಿನ ನಗರಿಯನ್ನು ನೋಡಬಲ್ಲೆನಾ?’ ಎಂದು ಅಚ್ಚರಿಪಡುತ್ತಿದ್ದೆ.
ನಾನು ಮೊದಲಿನಿಂದಲೂ ಕುತೂಹಲ ತುಂಬಿದ್ದ ಹುಡುಗನಾಗಿದ್ದೆ. ಗ್ರಂಥಾಲಯಕ್ಕೆ ಹೋಗಿ ಕೈಗೆ ಸಿಕ್ಕ ಪುಸ್ತಕಗಳನ್ನೆಲ್ಲ ಓದುತ್ತಿದ್ದೆ. 8ನೇ ವಯಸ್ಸಿಗೆ ಮೊದಲ ಬಾರಿ ಆರ್‌ಎಸ್‌ಎಸ್ ಸಭೆಗೆ ಹಾಜರಾದೆ. 9ನೇ ವಯಸ್ಸಿನಲ್ಲಿಯೇ ಜನರಿಗೆ ಸಹಾಯ ಮಾಡುವ ಅವಕಾಶ ನನಗೆ ಎದುರಾಯಿತು. ಆಗ ಗುಜರಾತ್‌ನಲ್ಲಿ ಪ್ರವಾಹವುಂಟಾಗಿತ್ತು. ನೆರೆ ಸಂತ್ರಸ್ತರಿಗೆ ಸಹಾಯ ಮಾಡುವುದಕ್ಕಾಗಿ ನಾನು ಮತ್ತು ಕೆಲ ಸ್ನೇಹಿತರು ಸೇರಿ ಆಹಾರದ ಸ್ಟಾಲ್ ಹಾಕಿದ್ದೆವು. ಜನರಿಗೆ ಮತ್ತಷ್ಟು ಸಹಾಯ ಮಾಡಬೇಕೆಂಬ ಬಯಕೆಯಿತ್ತಾದರೂ, ನಮ್ಮ ಬಳಿ ಅಷ್ಟು ಸಂಪನ್ಮೂಲವಿಲ್ಲ ಎನ್ನುವುದು ನನಗೆ ತಿಳಿದಿತ್ತು.
ಆ ವಯಸ್ಸಿನಲ್ಲೂ ಕೂಡ ನನಗೆ “ದೇವರು ನಮ್ಮೆಲ್ಲರನ್ನೂ ಒಂದೇ ರೀತಿಯಲ್ಲಿ ಸೃಷ್ಟಿಸಿದ್ದಾನೆ’ ಎಂಬ ಬಲವಾದ ನಂಬಿಕೆಯಿತ್ತು. ನಾವು ಎಂಥ ಸಂದರ್ಭದಲ್ಲಿ/ ಪರಿಸ್ಥಿತಿಯಲ್ಲೇ ಹುಟ್ಟಿರಲಿ, ಅವನ್ನು ಮೀರಿ ಮುಂದೆ ಸಾಗಲು ಸಾಧ್ಯವಿದೆ. ಹೀಗಾಗಿ, ಆ ಸಮಯದಲ್ಲಿ ನನ್ನ ಕಷ್ಟಗಳು-ಒದ್ದಾಟಗಳೇನಿದ್ದವು ಎಂದು ನೀವು ಪ್ರಶ್ನಿಸಿದರೆ, “ಯಾವ ಒದ್ದಾಟವೂ ಇರಲಿಲ್ಲ’ ಎಂದು ನಾನು ಹೇಳುತ್ತೇನೆ. ನನಗೆ ಐಷಾರಾಮವೆಂದರೆ ಗೊತ್ತಿರಲಿಲ್ಲ, “ಉತ್ತಮ’ ಬದುಕನ್ನು ನೋಡಿರಲಿಲ್ಲ. ಹೀಗಾಗಿ, ಆ ಪುಟ್ಟ ಪ್ರಪಂಚದಲ್ಲೇ, ಅಂದರೆ, ಇರುವುದರಲ್ಲೇ ನಾನು ಖುಷಿಯಾಗಿದ್ದೆ.
ಸಾಗುವ ದಾರಿ ಕಷ್ಟಕರವಾಗಿದ್ದರೆ ನನ್ನದೇ ದಾರಿಯನ್ನು ಕಂಡುಕೊಳ್ಳಲಾರಂಭಿಸಿದೆ. ಇಸಿŒ ಪೆಟ್ಟಿಗೆ ಖರೀದಿಸಲು ನಮ್ಮ ಬಳಿ ದುಡ್ಡಿರಲಿಲ್ಲ. ಹೀಗಾಗಿ ಹಳೆಯ ಲೋಟವೊಂದರಲ್ಲಿ ಇದ್ದಿಲು ಹಾಕಿ, ಲೋಟಕ್ಕೆ ವಸ್ತ್ರ ಸುತ್ತಿ ಅದರಿಂದ ನನ್ನ ಬಟ್ಟೆಗಳನ್ನು ಇಸಿŒ ಮಾಡಿಕೊಳ್ಳುತ್ತಿದೆ. ಇಸ್ತ್ರಿ ಪೆಟ್ಟಿಗೆಯಿಂದ ಪ್ರಸ್ ಮಾಡಿದರೂ, ಇದ್ದಿಲಿನ ಲೋಟದಿಂದ ಮಾಡಿದರೂ ಇಸಿŒಯಂತೂ ಆಗುತ್ತಿತ್ತಲ್ಲವೇ? ಫಲಿತಾಂಶ ಒಂದೇ ಎಂದಮೇಲೆ ದಾರಿಯ ಬಗ್ಗೆ ದೂರಿ ಏನು ಪ್ರಯೋಜನ? ನಾನು ಇಂದು ಏನಾಗಿದ್ದೀನೋ ಅದೆಲ್ಲದರ ಮೊಳಕೆಯಿರುವುದು ಆ ಸಮಯದಲ್ಲೇ. ಆದರೆ ನನಗಾಗ ಇದೆಲ್ಲ ಗೊತ್ತಿರಲೇ ಇಲ್ಲ. ಹೀಗಾಗಿ, ಒಂದು ವೇಳೆ ನೀವೇನಾದರೂ ಆ ಸಮಯಕ್ಕೆ ಹಿಂದಿರುಗಿ, ತನ್ನ ಅಪ್ಪನ ಚಹಾದ ಅಂಗಡಿಯನ್ನು ಸ್ವತ್ಛಗೊಳಿಸುತ್ತಾ, ಸ್ಟೇಷನ್ನಿನಲ್ಲಿ ಚಹಾ ಮಾರುತ್ತಾ ಓಡಾಡುತ್ತಿದ್ದ ಆ 8 ವರ್ಷದ ನರೇಂದ್ರ ಮೋದಿಯನ್ನೇನಾದರೂ ಹಿಡಿದು “ಪ್ರಧಾನಿಯಾಗುವ ಕನಸನ್ನಾದರೂ ಕಾಣಬಲ್ಲೆಯಾ?’ ಎಂದು ಪ್ರಶ್ನಿಸಿದ್ದರೆ…. “ಇಲ್ಲ’ ಎನ್ನುವುದೇ ನನ್ನ ಉತ್ತರವಾಗಿರುತ್ತಿತ್ತು.
ಬೆಳೆಯುವ ವಯಸ್ಸಲ್ಲಿ ನನಗೆ ಬಹಳ ಕುತೂಹಲವಿರುತ್ತಿತ್ತು, ಆದರೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಸಮವಸ್ತ್ರದಲ್ಲಿದ್ದ ಸೈನಿಕರನ್ನು ನೋಡಿ, “ದೇಶ ಸೇವೆಗೆ ಇದೊಂದೇ ಮಾರ್ಗವಿದೆ’ ಎಂದು ನಾನು ಯೋಚಿಸುತ್ತಿದ್ದೆ. ಆದರೆ ರೈಲ್ವೆ ಸ್ಟೇಷನ್‌ನಲ್ಲಿ ಸಾಧು-ಸಂತರೊಂದಿಗಿನ ನನ್ನ ಮಾತುಕತೆಗಳು ಗಂಭೀರವಾಗುತ್ತಾ ಸಾಗಿದಂತೆಲ್ಲ, ಇದೂ ಕೂಡ ಅನ್ವೇಷಿಸಲೇಬೇಕಾದ ಸಂಗತಿ ಎಂದು ನನಗೆ ಅರ್ಥವಾಯಿತು.
ಆಗಲೇ ಹೇಳಿದಂತೆ ನನಗೆ ಒಂದು ಸ್ಪಷ್ಟತೆ ಇರಲಿಲ್ಲ, ಮಾರ್ಗದರ್ಶನವಿರಲಿಲ್ಲ-ಎಲ್ಲಿಗೆ ಹೋಗಬೇಕು, ಏನು ಮಾಡಬೇಕು, ಮಾಡಿದರೂ ಏಕೆ ಮಾಡಬೇಕು…ಇದ್ಯಾವುದೂ ಅರಿವಿರಲಿಲ್ಲ. ಆದರೆ ಏನನ್ನಾದರೂ ಮಾಡಲೇಬೇಕು ಎನ್ನುವುದಷ್ಟೇ ನನಗೆ ಗೊತ್ತಿತ್ತು. ಹೀಗಾಗಿ ನಾನು ದೇವರಿಗೆ ಶರಣಾಗಿ, ನನ್ನ 17ನೇ ವಯಸ್ಸಿಗೆ ಹಿಮಾಲಯಕ್ಕೆ ಹೊರಟುನಿಂತೆ. ಹೊರಡುವ ಮುನ್ನ ಅಪ್ಪ-ಅಮ್ಮನ ಆಶೀರ್ವಾದ ಪಡೆದೆ. ಅಮ್ಮ ನನ್ನ ಪ್ರಯಾಣ ಶುಭಕರವಾಗಲೆಂದು ಹಾರೈಸಿ ಹಣೆಗೆ ತಿಲಕವಿಟ್ಟು, ಸಿಹಿ ತಿನ್ನಿಸಿ ಕಳುಹಿಸಿದಳು.
ದೇವರು ನನ್ನನ್ನು ಎಲ್ಲೆಲ್ಲಿ ಕರೆದೊಯ್ಯಲು ಬಯಸಿದನೋ ಅಲ್ಲೆಲ್ಲಾ ನಾನು ಹೋದೆ. ಅದು ನನ್ನ ಜೀವನದ ಅನಿರ್ಣಾಯಕ ಸಮಯವಾಗಿತ್ತಾದರೂ, ಆ ಅವಧಿಯಲ್ಲಿ ಅನೇಕ ಉತ್ತರಗಳು ನನಗೆ ಸಿಕ್ಕವು. ನನ್ನನ್ನು ನಾನು ಅರ್ಥಮಾಡಿಕೊಳ್ಳುವುದಕ್ಕೋಸ್ಕರ ಜಗತ್ತನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ದೂರದೂರದವರೆಗೂ ಪ್ರಯಾಣ ಬೆಳೆಸಿದೆ, ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಅಲೆಯುತ್ತಿದ್ದೆ. ತಲೆಯ ಮೇಲೊಂದು ಸೂರಿರಲಿಲ್ಲ. ಆದರೆ ಮನೆಯಲ್ಲೇ ಇದ್ದಂಥ ಭದ್ರ ಭಾವವಿತ್ತು. ಈ ತಿರುಗಾಟದ ಅವಧಿಯಲ್ಲೇ ರಾಮಕೃಷ್ಣ ಮಿಷನ್‌ನಲ್ಲಿ ಸಮಯ ಕಳೆದೆ. ನಂತರ ಹಿಮಾಲಯಕ್ಕೆ ತೆರಳಿ ಸಾಧು ಸಂತರನ್ನು ಭೇಟಿಯಾಗಿ ಅವರೊಂದಿಗೆ ಆತ್ಮಾನ್ವೇಷಣೆ ಆರಂಭಿಸಿದೆ.
ಹಿಮಾಲಯದಲ್ಲಿ ಪ್ರತಿ ದಿನ ನಾನು ಬ್ರಹ್ಮಮುಹೂರ್ತದಲ್ಲಿ, ಅಂದರೆ ಮುಂಜಾವು 3 ಮತ್ತು 3.45ರೊಳಗೆ ಎದ್ದು, ಮೈಕೊರೆಯುವ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುತ್ತಿದ್ದೆ. ಆದರೆ ಆ ಥರಗುಟ್ಟಿಸುವ ಚಳಿಯ ನಡುವೆಯೂ ಅದೇನೋ ಬೆಚ್ಚನೆಯ ಅನುಭೂತಿ ಇರುತ್ತಿತ್ತು. ಜಲಪಾತದ ಸರಳ ಸದ್ದಿನಲ್ಲೂ “ಶಾಂತಿ’, “ಏಕತೆ’ ಮತ್ತು “ಧ್ಯಾನ’ವನ್ನು ಹುಡುಕಬಹುದು ಎನ್ನುವುದನ್ನು ನಾನಾಗ ಕಲಿತೆ. ಯಾವ ಸಾಧುಗಳ ಜೊತೆಗಿದ್ದೆನೋ, ಅವರೆಲ್ಲ ನನಗೆ ವಿಶ್ವದ ಲಯದೊಂದಿಗೆ ಏಕವಾಗುವುದು ಹೇಗೆ ಎನ್ನುವುದನ್ನು ಕಲಿಸಿಕೊಟ್ಟರು. ಅವರು ಹೇಳಿದಂತೆ ಮಾಡಿದೆ-ಆಗ ನನ್ನ ಅನುಭವಕ್ಕೆ ಬಂದ ಅಂತರ್‌ಜ್ಞಾನವು ಈಗಲೂ ನನಗೆ ಸಹಾಯ ಮಾಡುತ್ತಿದೆ.
ನಮ್ಮ ಯೋಚನೆಗಳು ಮತ್ತು ಮಿತಿಗಳು ನಮ್ಮನ್ನು ಕಟ್ಟಿಹಾಕುತ್ತವೆ ಎನ್ನುವುದು ಅರಿವಾಯಿತು. ನಾವು ವಿಶ್ವವಿಸ್ತಾರದ ಎದುರು ನಿಂತು ಅದಕ್ಕೆ ಯಾವಾಗ ಶರಣಾಗುತ್ತೀವೋ, ನಾವೆಲ್ಲರೂ ಈ ಬೃಹತ್ ಬ್ರಹ್ಮಾಂಡದ ಚಿಕ್ಕ ತುಣುಕಷ್ಟೆ ಎನ್ನುವುದನ್ನು ಯಾವಾಗ ಅರ್ಥಮಾಡಿಕೊಳ್ಳುತ್ತೀವೋ, ಆಗ ನಮ್ಮಲ್ಲಿ ಅಹಂಕಾರದ ಲವಲೇಶವೂ ಇಲ್ಲವಾಗುತ್ತದೆ. ಅಳಿದುಳಿದ ಅಹಂಕಾರವೂ ಕರಗಿಹೋಗುತ್ತದೆ. ಜೀವನ ನಿಜಕ್ಕೂ ಆರಂಭವಾಗುವುದೇ ಆಗ!
ಹಿಮಾಲಯದಲ್ಲಿ ಕಳೆದ ಆ ಅವಧಿಯಲ್ಲೇ ಎಲ್ಲವೂ ಬದಲಾಯಿತು. ಬದುಕಿನ ಮುಂದಿನ ಪಯಣದ ಬಗ್ಗೆ ಸ್ಪಷ್ಟತೆ ಮತ್ತು ಪ್ರೇರಣಾ ಶಕ್ತಿಯನ್ನು ಹೊತ್ತು ಎರಡು ವರ್ಷದ ನಂತರ ಮನೆಗೆ ಹಿಂದಿರುಗಿದೆ…ಹಿಮಾಲಯದಿಂದ ಹಿಂದುರಿಗಿದ ನಂತರ, ನನ್ನ ಬದುಕು ಇತರರ ಸೇವೆಗೆ ಮುಡಿಪಾಗಬೇಕು ಎನ್ನುವ ಸ್ಪಷ್ಟತೆ ನನಗಿತ್ತು. ವಾಪಸ್ ಬಂದ ಕೆಲವೇ ಸಮಯದಲ್ಲೇ, ಅಹಮದಾಬಾದ್‌ಗೆ ಹೋದೆ. ಅದೇ ಮೊದಲ ಬಾರಿ ನಾನು ಅಂಥ ದೊಡ್ಡ ನಗರವೊಂದರಲ್ಲಿ ವಾಸಿಸಲಾರಂಭಿಸಿದ್ದೆ. ಆ ನಗರಜೀವನದ ಗತಿ ಬಹಳ ಭಿನ್ನವಾಗಿತ್ತು. ಅಲ್ಲಿ ನನ್ನ ಚಿಕ್ಕಪ್ಪನ ಕ್ಯಾಂಟೀನ್‌ಗೆ ಹೋಗಿ, ಆತನಿಗೆ ಸಹಾಯ ಮಾಡಲಾರಂಭಿಸಿದೆ.
ಕೊನೆಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣಾವಧಿ ಪ್ರಚಾರಕನಾದೆ. ಸಂಘದಲ್ಲಿ ನನಗೆ ವಿವಿಧ ಕ್ಷೇತ್ರಗಳ ಜನರೊಂದಿಗೆ ಒಡನಾಡುವ, ವಿವಿಧ ರೀತಿಯ ಕೆಲಸ ಮಾಡುವ ಅವಕಾಶ ಸಿಕ್ಕಿತು. ಪಾಳಿಯ ಪ್ರಕಾರ ನಾವೆಲ್ಲ ಆರ್‌ಎಸ್‌ಎಸ್ ಕಚೇರಿಯನ್ನು ಸ್ವತ್ಛಗೊಳಿಸುತ್ತಿದ್ದೆವು, ಚಹಾ ತಯಾರಿಸುತ್ತಿದ್ದೆವು, ಸಹೋದ್ಯೋಗಿಗಳಿಗೆ ಆಹಾರ ತಯಾರು ಮಾಡುತ್ತಿದ್ದೆವು ಹಾಗೂ ಪಾತ್ರೆ ತೊಳೆಯುತ್ತಿದ್ದೆವು.
ಬದುಕು ಬಹಳ ಕಟ್ಟುನಿಟ್ಟಾಗಿತ್ತು, ಬ್ಯುಸಿಯಾಗಿತ್ತು. ಆದರೆ ಆ ಎಲ್ಲಾ ಕರ್ತವ್ಯಗಳ ನಡುವೆಯೂ, “ಹಿಮಾಲಯದಿಂದ ಕಲಿತ ಪಾಠಗಳನ್ನು ಮರೆಯಬಾರದು’ ಎಂಬ ದೃಢನಿಶ್ಚಯ ನನಗಿತ್ತು. ಜೀವನದ ಈ ಹೊಸ ಹಂತವು, ನಾನು ಹಿಮಾಲಯದಲ್ಲಿ ಗಳಿಸಿದ ಶಾಂತತೆಯನ್ನು ಅಳಿಸದಿರಲಿ ಎಂಬ ಕಾರಣಕ್ಕಾಗಿ, ಪ್ರತಿ ವರ್ಷವೂ ಆತ್ಮಾವಲೋಕನಕ್ಕೆ ತುಸು ಸಮಯ ಮೀಸಲಿಡಬೇಕೆಂದು ನಿರ್ಧರಿಸಿದೆ. ಇದು, ಜೀವನದಲ್ಲಿ ಸಮತೋಲನ ಕಾಪಾಡಿ ಕೊಳ್ಳುವುದಕ್ಕಾಗಿ ನಾನು ಕಂಡುಕೊಂಡ ಮಾರ್ಗ.
ಈ ವಿಷಯ ಬಹಳ ಜನಕ್ಕೆ ಗೊತ್ತಿಲ್ಲ, ನಾನು ದೀಪಾವಳಿಯಂದು 5 ದಿನಗಳ ಕಾಲ ಯಾವುದಾದರೂ ಅರಣ್ಯಪ್ರದೇಶಕ್ಕೆ ಹೋಗಿಬಿಡುತ್ತಿದ್ದೆ. ಜನರಿಲ್ಲದ, ಬರೀ ಶುಭ್ರನೀರಿರುವ ಪ್ರದೇಶಕ್ಕೆ. ಆ 5 ದಿನಗಳಿಗೆ ಸಾಕಾಗುವಷ್ಟು ಆಹಾರವನ್ನು ಪ್ಯಾಕ್ ಮಾಡಿಕೊಂಡು ಒಯ್ದಿರುತ್ತಿದ್ದೆ. ಅಲ್ಲಿ ರೇಡಿಯೋ ಅಥವಾ ಪತ್ರಿಕೆಗಳಿರುತ್ತಿರಲಿಲ್ಲ, ಮತ್ತು ಆ ಸಮಯದಲ್ಲಿ ಟಿ.ವಿ. ಅಥವಾ ಇಂಟರ್ನೆಟ್ ಕೂಡ ಇರುತ್ತಿರಲಿಲ್ಲ. ಆ ಏಕಾಂತದ ಸಮಯದಲ್ಲಿ ನಾನು ಗಳಿಸಿದ ಶಕ್ತಿ ಮತ್ತು ವಿವಿಧ ಅನುಭವಗಳು ಈಗಲೂ ಜೀವನ ನಿರ್ವಹಣೆಯಲ್ಲಿ ನನಗೆ ಸಹಾಯ ಮಾಡುತ್ತವೆ. ಆಗೆಲ್ಲ ಜನರು “ಯಾರನ್ನು ಭೇಟಿಯಾಗೋದಕ್ಕೆ ಹೊರಟಿದ್ದೀರಾ?’ ಎಂದು ನನ್ನನ್ನು ಕೇಳಿದಾಗಲೆಲ್ಲ, ನಾನನ್ನುತ್ತಿದ್ದೆ- “ನನ್ನನ್ನು ನಾನು ಭೇಟಿಯಾಗೋದಕ್ಕೆ ಹೊರಟಿದ್ದೇನೆ’
ಇದೇ ಕಾರಣಕ್ಕಾಗಿಯೇ ನಾನು ಎಲ್ಲರಿಗೂ ಹೇಳುತ್ತೇನೆ (ಅದರಲ್ಲೂ ಮುಖ್ಯವಾಗಿ ನನ್ನ ಯುವ ಸ್ನೇಹಿತರಿಗೆ), ನಿಮ್ಮ ವೇಗದ ಜೀವನ ಮತ್ತು ಬ್ಯುಸಿ ಶೆಡ್ನೂಲ್‌ನಿಂದ ತುಸು ವಿರಾಮ ಪಡೆಯಿರಿ. ಆತ್ಮಾವಲೋಕನಕ್ಕೆ ಸಮಯ ಮೀಸಲಿಡಿ. ಆತ್ಮಶೋಧನೆಯು ಬದುಕಿನ ಬಗೆಗಿನ ನಿಮ್ಮ ಗ್ರಹಿಕೆಯನ್ನು ಬದಲಿಸುತ್ತದೆ. ನಿಮ್ಮ ಅಂತರಾಳವನ್ನು ನೀವು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೀರಿ. ಆಗ ನಿಜ ಅರ್ಥದಲ್ಲಿ ಬದುಕಲಾರಂಭಿಸುತ್ತೀರಿ! ಇದು ನಿಮ್ಮಲ್ಲಿ ಹೆಚ್ಚು ಆತ್ಮವಿಶ್ವಾಸ ಮೂಡಿಸುತ್ತದೆ, ಬೇರೆಯವರು ನಿಮ್ಮ ಬಗ್ಗೆ ಆಡುವ ಮಾತುಗಳಿಗೆ ರಕ್ಷಾಕವಚವಾಗುತ್ತದೆ.
ಮುಂಬರುವ ಸಮಯದಲ್ಲಿ ಈ ಸಂಗತಿಗಳೆಲ್ಲ ನಿಮ್ಮ ಸಹಾಯಕ್ಕೆ ಬರುತ್ತವೆ. ಹೀಗಾಗಿ, ಪ್ರತಿಯೊಬ್ಬರಿಗೂ ನಾನು ಹೇಳುವುದಿಷ್ಟೆ- ನೀವೆಲ್ಲರೂ ವಿಶೇಷ ವ್ಯಕ್ತಿಗಳು, ಬದುಕಲ್ಲಿ ಬೆಳಕನ್ನು ನೀವು ಎಲ್ಲೋ ಹೊರಗೆ ಹುಡುಕಬೇಕಿಲ್ಲ, ಆ ಬೆಳಕು ನಿಮ್ಮೊಳಗೇ ಇದೆ!
(ಮೂಲ: ಹ್ಯೂಮನ್ಸ್ ಆಫ್ ಬಾಂಬೆ ಫೇಸ್‌ಬುಕ್ ಪೇಜ್)
ಪ್ರಧಾನಿ ನರೇಂದ್ರ ಮೋದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.