ಈಶ್ವರ ಸತ್ಯವೋ, ನಶ್ವರ ಸತ್ಯವೋ?
Team Udayavani, Jul 29, 2017, 7:31 AM IST
ಮಾಯೆಯ ಒಳಗೆ ಮಾದಕತೆಯಿರುತ್ತದೆ. ಇದು ತನ್ನ ಇಂದ್ರಜಾಲದಿಂದ ಎಂಥ ಮಿಥ್ಯಾ ಸಂಸಾರವನ್ನು ಸೃಷ್ಟಿಸಿಬಿಡುತ್ತದೆಂದರೆ, ನಮಗೆ ಜಲದ ಜಾಗದಲ್ಲಿ ನೆಲ, ನೆಲದ ಜಾಗದಲ್ಲಿ ಜಲ ಕಾಣಿಸಲಾರಂಭಿಸುತ್ತದೆ.
ಒಂದೆಡೆ ನಾವು “ಸತ್ಯ’ವನ್ನು ಶಿವ ಎನ್ನುತ್ತೇವೆ, ಸತ್ಯವನ್ನು ಸುಂದರ ಎಂದೂ, ಉದ್ಧಾರಕ ಎಂದೂ ಬಣ್ಣಿಸುತ್ತೇವೆ.(ಸತ್ಯ ಹೀ ಶಿವ್ ಹೇ, ಶಿವ್ ಹೀ ಸುಂದರ್). ಆದರೆ ಇನ್ನೊಂದೆಡೆ ಸತ್ಯವನ್ನು ನಾವು “ಕಹಿ’ ಎಂದು ಬಿಡುತ್ತೇವೆ! ಒಟ್ಟಲ್ಲಿ ನಮ್ಮ ಈ ಅನಿಸಿಕೆಗಳಿಂದಾಗಿ ಸತ್ಯ ಎನ್ನುವ ಪದ ನಮ್ಮ “ಚರ್ಚೆ’ಯಲ್ಲಿ ಸ್ಥಾನ ಪಡೆಯುತ್ತದೆ, ನಮ್ಮ “ಚರ್ಯೆ’ಯಲ್ಲಿ ಅಲ್ಲ.
ಯೋಚಿಸಲೇಬೇಕಾದ ಸಂಗತಿಯೆಂದರೆ ಒಂದು ವೇಳೆ ಸತ್ಯ ಕಹಿಯಾಗಿದ್ದರೆ ಅದು ಶಿವ, ಸುಂದರ ಮತ್ತು ಉದ್ಧಾರಕ ಹೇಗಾಗಬಲ್ಲದು? ಒಂದು ವೇಳೆ ಸತ್ಯವೇನಾದರೂ ಶಿವ, ಸುಂದರ, ಕಲ್ಯಾಣಕಾರಿಯಾಗಿದ್ದರೆ ಅದು ಕಹಿ ಆಗಲು ಹೇಗೆ ಸಾಧ್ಯ?
ಸತ್ಯವನ್ನು ಸೇವಿಸುವ (ಸ್ವೀಕರಿಸುವ) ಶಕ್ತಿ ನಮ್ಮಲ್ಲೇಕಿಲ್ಲ? ನಮ್ಮನ್ನು ಉದ್ಧರಿಸಬಲ್ಲ ಶಕ್ತಿ ಅದಕ್ಕಿದೆಯೆಂದರೆ ಅದರಿಂದ ನಾವೇಕೆ ದೂರ ಓಡುತ್ತೇವೆ? ಒಂದು ವೇಳೆ ಅದರಲ್ಲಿ ಶಕ್ತಿ ಇರುವುದೇ ನಿಜವಾದರೆ ಸತ್ಯದ ಸಂಪರ್ಕ ಮಾತ್ರದಿಂದ ಶಕ್ತಿಹೀನನೊಬ್ಬ ಶಕ್ತಿಶಾಲಿಯಾಗಬೇಕಲ್ಲ? ಆದರೆ ಆಗುವುದು ಉಲ್ಟಾಪಲ್ಟಾ! ಸತ್ಯದ ಪರ ನಿಂತವನು ಏಕಾಂಗಿಯಾಗಿಬಿಡುತ್ತಾನೆ. ಹಾಗಿದ್ದರೆ ನಾವು ಯಾವುದನ್ನು ನಂಬಬೇಕು? ಸತ್ಯದಲ್ಲಿ ಶಕ್ತಿ ಇದೆಯೆಂದೋ ಅಥವಾ ಯಾರ ಬಳಿ ಶಕ್ತಿಯಿದೆಯೋ ಅದೇ ಸತ್ಯವೆಂದೋ?
ಸತ್ಯವನ್ನು ಸ್ವೀಕರಿಸುವುದು ಸಾಮಾನ್ಯ ಮನುಷ್ಯನಿಗೆ ಸಾಧ್ಯವಿಲ್ಲ ಎಂದು ಜನರನ್ನುತ್ತಾರೆ. ಆದರೆ ಸತ್ಯದ ಸ್ಪರ್ಶದಿಂದ ಸಾಧಾರಣನೂ ಅಸಾಧಾರಣನಾಗುತ್ತಾನೆ ಎನ್ನುವುದನ್ನೂ ಅವರು ಸೇರಿಸುತ್ತಾರೆ. ಈಗ ಪ್ರಶ್ನೆ ಮತ್ತೆ ಎದ್ದು ನಿಲ್ಲುತ್ತದೆ. ಸತ್ಯದ ಪರವಾಗಿ ನಿಂತ ಸಾಧಾರಣ ವ್ಯಕ್ತಿ ಅಸಾಧಾರಣನಾಗುತ್ತಾನೋ ಅಥವಾ ಅಸಾಧಾರಣ ರೂಪದಲ್ಲಿ ಶಕ್ತಿಸಂಪನ್ನನಾಗಿರುವ ವ್ಯಕ್ತಿಯ ಪಕ್ಷವೇ ಸತ್ಯವೆನಿಸಿಕೊಳ್ಳುತ್ತದೋ?
ಸತ್ಯವೇ ಶಿವ, ಶಿವನೇ ಸುಂದರ ಎನ್ನುವ ಸಿದ್ಧಾಂತವನ್ನು ನಾವು ನಂಬುತ್ತೇವೆ ಎಂದಾದರೆ ಸತ್ಯವೆಂದಿಗೂ ಕಹಿಯಾಗಲಾರದು. ಹಾಂ..ಒಮ್ಮೆಮ್ಮೊ ಅಂತರಂಗದ ಸಂಬಂಧಗಳಲ್ಲಿ ಅಚಾನಕ್ಕಾಗಿ ಕಹಿ ಅನುಭವಗಳು ಎದುರಾಗಿ ಕೆಲ ತಥ್ಯಗಳು ಬೆಳಕಿಗೆ ಬಂದು ಬಿಡುತ್ತವೆ. ಕಹಿ ಭಾವನೆಯ
ಮೂಲಕ ಹುಟ್ಟಿದ ಈ ತಥ್ಯಗಳನ್ನೇ ನಾವು ಸತ್ಯದ ಹೆಸರಲ್ಲಿ ಕರೆಯಲಾರಂಭಿಸುತ್ತೇವೆ. ಈ ಸಂಗತಿ ಕಾಲಾಂತರದಲ್ಲಿ “ಸತ್ಯ ಯಾವತ್ತಿಗೂ ಕಹಿ’ ಎಂಬ ಮಾತಾಗಿ ಬದಲಾಗಿಬಿಟ್ಟಿದೆ. ಕಹಿಯಾದ ಅಂಶಗಳು ಎಷ್ಟೋ ಉಪಯುಕ್ತವಾಗಿರಲಿ, ಅವು ನಮಗೆ ಮನೋಹರವಾಗಿಯಂತೂ ಕಾಣಿಸುವುದಿಲ್ಲ. ಅಲ್ಲ, ಸತ್ಯವೆನ್ನುವ ಉಪಯೋಗಿ ಸಂಗತಿಯಿಂದ ದೂರವಿಡುವುದಕ್ಕಾಗಿಯೇ ಕಲಿಯುಗದಲ್ಲಿ “ಸತ್ಯ ಕಹಿ’ ಎನ್ನುವ ಪ್ರಚಾರ ಮಾಡಲಾಗಿದೆಯೇ? ಕಲಿಯುಗದಲ್ಲಿ ಆಚಾರಕ್ಕಿಂತಲೂ ಪ್ರಚಾರಕ್ಕೇ ಹೆಚ್ಚು ಮಹತ್ವ ಕೊಡಲಾಗುತ್ತದೆ. ಇದೇ ಕಾರಣಕ್ಕಾಗಿಯೇ ಯಾವುದು ಒಳ್ಳೆಯದು ಎಂದು ತಿಳಿದಿದ್ದರೂ ನಾವು ಸತ್ಯದ ವಿರುದ್ಧ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಮಾಯೆಯ (ಮಿಥ್ಯೆಯ) ಸಾಮ್ರಾಜ್ಯವನ್ನು ಅಂತ್ಯಗೊಳಿಸುವ ಕ್ಷಮತೆಯಿರುವ ಏಕ ಮಾತ್ರ ಅಸ್ತ್ರವೆಂದರೆ ಸತ್ಯ. ಈ ಕಾರಣಕ್ಕಾಗಿಯೇ ಅದರಿಂದ ಜನರನ್ನು ದೂರವಿಡಲಾಗುತ್ತಿದೆಯೇ? ಇನ್ನು ಕಲಿಯುಗವಂತೂ ಮಾಯಾಯುಗವೇ ಸರಿ. ಇಲ್ಲಿ ನಮ್ಮೆಲ್ಲರ ಅಸ್ತಿತ್ವ ಸತ್ಯ-ಅಸತ್ಯದ ಮೇಲಲ್ಲ, ಮಿಥ್ಯೆಯ ಮೇಲೆಯೇ ನಿಂತಿದೆ. ವಾಸ್ತವದಲ್ಲಿ ನಾವು ಸತ್ಯದ ಹೆಸರಲ್ಲಿ ಪ್ರಸ್ತುತ ಪಡಿಸುವುದು ಸತ್ಯವೂ ಅಲ್ಲ, ಅಸತ್ಯವೂ ಅಲ್ಲ. ಬದಲಾಗಿ ಅದು ಮಿಥ್ಯೆಯಷ್ಟೆ. ಮಿಥ್ಯೆಯೆನ್ನುವುದು ಸತ್ಯದ ಶ್ರೇಣಿಯಲ್ಲೂ ಬರದ, ಅಸತ್ಯದ ಪರ್ಯಾಯವೂ ಅಲ್ಲದ ವಾಸ್ತವಿಕತೆ. ಅದು ಮೊದಲೂ ಇತ್ತು, ಇಂದೂ ಇದೆ, ನಾಳೆಯೂ ಇರುತ್ತದೆ.
ಯಾವುದು ಮೊದಲು ಇರಲಿಲ್ಲವೋ, ಇಂದು ಇಲ್ಲವೋ ಮತ್ತು ನಾಳೆಯೂ ಇರುವುದಿಲ್ಲವೋ ಅದೇ ಅಸತ್ಯ. ಆದರೆ ಯಾವುದು ಮೊದಲು ಇರಲಿಲ್ಲವೋ ಆದರೆ “ಇಂದು ಇದೆಯೋ’ ಅದೇ ಮಿಥ್ಯೆ.ಮಿಥ್ಯೆಯೆನ್ನುವುದು ಸತ್ಯದ ಭೂಮಿಯ ಮೇಲೆ ಬೆಳೆಯುವ ಕಳೆ. ಅದಕ್ಕೆ ಸತ್ಯದ ಭೂಮಿಯನ್ನು ನಷ್ಟ ಮಾಡುವ ಸಾಮರ್ಥಯವಿಲ್ಲದಿದ್ದರೂ, ಭ್ರಷ್ಟಗೊಳಿಸುವ ಕ್ಷಮತೆಯಂತೂ ಇದ್ದೇ ಇರುತ್ತದೆ.
ಈ ಕಾರಣಕ್ಕಾಗಿಯೇ ನಮ್ಮ ಋಷಿಮುನಿಗಳು “ಬ್ರಹ್ಮಂ ಸತ್ಯಂ, ಜಗತ್ ಅಸತ್ಯಂ’ ಎಂದು ಹೇಳಲಿಲ್ಲ. ಬದಲಾಗಿ, “ಬ್ರಹ್ಮಂ ಸತ್ಯಂ ಜಗತ್ ಮಿಥ್ಯಾ’ ಎಂದಿದ್ದಾರೆ. ಈ ಮಿಥ್ಯೆಯ ಇನ್ನೊಂದು ಹೆಸರೇ ಮಾಯೆ. ಅದರಲ್ಲಿ ಲಿಪ್ತನಾಗಿದ್ದರೂ ಅಲಿಪ್ತನಾಗಿರಬೇಕೆಂಬ ನಿರ್ದೇಶನ ನಮಗೆ ನೀಡಲಾಗಿದೆ. ಆಗಲೇ ಹೇಳಿದಂತೆ, ಮಿಥ್ಯೆಯು ಸತ್ಯದ ಭೂಮಿಯ ಮೇಲೆ ಹುಟ್ಟಿಕೊಳ್ಳುವುದರಿಂದ ಅದನ್ನೂ ಸತ್ಯವೆಂದೇ ಭಾವಿಸಲಾಗುತ್ತದೆ. ಅದು ಸತ್ಯವಲ್ಲದಿದ್ದರೂ ಅದಕ್ಕೆ ಸತ್ಯದ ಮಾನ್ಯತೆ ಸಿಗುವುದರಿಂದಲೇ ನಮ್ಮಲ್ಲಿ ಕಹಿ ಭಾವನೆಗೆ ಕಾರಣವಾಗುತ್ತದೆ. ಸತ್ಯವೇನಿದ್ದರೂ ವ್ಯಕ್ತಿಯನ್ನು ಶುದ್ಧ ಮತ್ತು ಶುಭ್ರಗೊಳಿಸುವ ಸಾಧನ. ಆದರೆ ಇಂದು ವ್ಯಕ್ತಿಯನ್ನು ಕ್ರುದ್ಧ ಮತ್ತು ಕಳಂಕಿತಗೊಳಿಸಲು ಅದನ್ನು ಬಳಸಲಾಗುತ್ತಿದೆ. ಸತ್ಯವನ್ನು ನಾವು ನಮ್ಮ ಜೀವನದ ಆಧಾರವಲ್ಲ, ಅಸ್ತವನ್ನಾಗಿಸಿಕೊಂಡಿದ್ದೇವೆ. ಸತ್ಯವಿಂದು ಜನರನ್ನು ಶಿಷ್ಟರನ್ನಾಗಿಸುವ ಬದಲು, ನಷ್ಟಗೊಳಿಸುವ ಸಾಧನವಾಗಿದೆ. ಕಲಿಯುಗದ ಸತ್ಯದಲ್ಲಿ ರೂಪ ವಿಶಿಷ್ಟತೆಯಿಲ್ಲ, ಅದರಲ್ಲಿ ಅಶಿಷ್ಟತೆಯೇ ತುಂಬಿದೆ.
ಸತ್ಯ ಇಂದು ನಮ್ಮ ಶಕ್ತಿಯಾಗಿ ಅಸ್ತಿತ್ವದಲ್ಲಿಲ್ಲ, ನಮ್ಮ ಸ್ವಾರ್ಥ ಮತ್ತು ಅನುಕೂಲವಾಗಿ ಬದಲಾಗಿದೆ. ಏಕೆಂದರೆ ಕಲಿಯುಗದಲ್ಲಿ ಸ್ವಾರ್ಥದ ಮೂಲಕ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಳ್ಳುವುದನ್ನೇ ಉದ್ಧಾರ ಎಂದು ಭಾವಿಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ನಾವಿಂದು “ಯಾವ ವ್ಯಕ್ತಿಯೂ ಅಸತ್ಯ ನುಡಿಯುವುದಿಲ್ಲ, ಒಬ್ಬೊಬ್ಬರದ್ದೂ ಒಂದೊಂದು ಸತ್ಯವಿರುತ್ತದೆ’ ಎಂದು ಹೇಳುತ್ತಾ ಸತ್ಯದ ಪರಿಭಾಷೆಯನ್ನೇ ಬದಲಿಸಿಬಿಟ್ಟಿದ್ದೇವೆ.
ಈ ಪರಿಭಾಷೆ ಎಷ್ಟು ಸುಂದರವಾಗಿದೆ ಮತ್ತು ಚಾಲಾಕಿತನದಿಂದ ಕೂಡಿದೆಯೆಂದರೆ ಸತ್ಯದ ವಿಶೇಷತೆಯನ್ನು ಇದು ನಷ್ಟಮಾಡದೆಯೇ, ನಮ್ಮ ಸ್ವಾರ್ಥವನ್ನು ಸತ್ಯದ ಶ್ರೇಣಿಗೊಯ್ದು ನಿಲ್ಲಿಸಿಬಿಡುತ್ತದೆ. ನಮ್ಮ ಲೋಭ, ದುರಾಸೆ ಎಲ್ಲವೂ ಈ ಪರಿಭಾಷೆಯಲ್ಲಿ ಆಶ್ರಯ ಪಡೆದು ಸತ್ಯದ ರೂಪದಲ್ಲಿ ಉದ್ಭವಿಸಲಾರಂಭಿಸುತ್ತವೆ. ಮಾಯೆಯ ವಿಲಕ್ಷಣತೆಯೇ ಇದು. ಮಾಯೆಯ ಒಳಗೆ ಮಾದಕತೆಯಿರುತ್ತದೆ. ಇದು ತನ್ನ ಇಂದ್ರಜಾಲದಿಂದ ಎಂಥ ಮಿಥ್ಯಾ ಸಂಸಾರವನ್ನು ಸೃಷ್ಟಿಸಿಬಿಡುತ್ತದೆಂದರೆ, ನಮಗೆ ಜಲದ ಜಾಗದಲ್ಲಿ ನೆಲ, ನೆಲದ ಜಾಗದಲ್ಲಿ ಜಲ ಕಾಣಿಸಲಾರಂಭಿಸುತ್ತದೆ. ನಾವು ಈ ಮಾಯಾಭವನದಲ್ಲಿ ತಿರುಗಾಡುತ್ತಾ ಜಲವನ್ನು ನೆಲವೆಂದು ಭಾವಿಸಿ ದುರ್ಯೋಧನನಂತೆ ಕೆಳಕ್ಕುರುಳಿಬಿಡುತ್ತೇವೆ. ಕಣ್ಣಿದ್ದರೂ “ಕುರುಡನ ಪುತ್ರ ಕುರುಡನೇ ಆಗಿರುತ್ತಾನೆ’ (ಧೃತರಾಷ್ಟ್ರನ ಮಗ) ಎಂಬ ವ್ಯಂಗ್ಯಬಾಣವನ್ನು ನಾವು ಎದುರಿಸಬೇಕಾಗುತ್ತದೆ. ಇದರಿಂದ ಘಾಸಿಗೊಂಡು, ನಾವಾಗಿಯೇ ಆಂತರಿಕ ಯುದ್ಧವನ್ನು ಸೃಷ್ಟಿಸಿಬಿಡುತ್ತೇವೆ. ಪರಿಣಾಮವಾಗಿ ನಮ್ಮನ್ನು ನಾವೇ ನಾಶಮಾಡಿಕೊಳ್ಳುತ್ತೇವೆ. ನಮ್ಮ ಕೈಯಾರೆ ನಮ್ಮ ಸಂತತಿ ಮತ್ತು ನಮ್ಮ ಸಂಪತ್ತಿಯನ್ನು ಸತ್ಯನಾಶ ಮಾಡಿಬಿಡುತ್ತೇವೆ.
ಈ ಕಾರಣಕ್ಕಾಗಿಯೇ ನಮ್ಮ ಅನುಭಾವಿಗಳು, ಯೋಗಿಗಳು “ಮಾಯೆಯ ಬಗ್ಗೆ ಜಾಗರೂಕರಾಗಿರಿ’ ಎಂದು ನಮಗೆ ಎಚ್ಚರಿಕೆ ನೀಡಿದರು, ಏಕೆಂದರೆ ಮಿಥ್ಯಾಚಾರವೆನ್ನುವುದು ಭ್ರಷ್ಟಾಚಾರಕ್ಕಿಂತಲೂ ಬಹಳ ಘಾತುಕವಾದದ್ದು. ಇದಕ್ಕೆ, ನಮ್ಮಿಂದಲೇ ನಮ್ಮ ಸರ್ವನಾಶ ಮಾಡಿಸಬಲ್ಲ ಅದಮ್ಯ ಶಕ್ತಿಯಿರುತ್ತದೆ. ಮಿಥ್ಯೆಯು ನಮ್ಮನ್ನೇ ನಮ್ಮ ವಿರುದ್ಧ ನಿಲ್ಲಿಸಿಬಿಡುತ್ತದೆ. ಈ ಕಾರಣಕ್ಕಾಗಿಯೇ ಈಶ್ವರನ ಸತ್ಯಕ್ಕೂ ಮತ್ತು ನಶ್ವರನ ಸತ್ಯಕ್ಕೂ ವ್ಯತ್ಯಾಸವಿದೆ ಎನ್ನುವುದನ್ನು ನಾವು ನೆನಪಿಡಬೇಕು.
ಈಶ್ವರನ ಸತ್ಯವು ನಮ್ಮನ್ನು ಉದ್ಧರಿಸುವಂಥದ್ದು, ಅದು ಸುಂದರವಾದದ್ದು. ನಶ್ವರನ ಸತ್ಯವು ಮಾಯೆ, ಮಿಥ್ಯೆ ಮತ್ತು ಪೀಡಿಕವಾದದ್ದು. ಶುಭಂ ಭವತು!
ಸದಾ ಬ್ಯೂಸಿ ಇರ್ತಾರೆ ಆದರೂ ಇಷ್ಟೆಲ್ಲ ಬರೀತಾರೆ!
ಅಶುತೋಶ್ ರಾಣಾ ಹಿಂದಿಯ ಖ್ಯಾತ ಖಳ ನಟ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.