ವಿಐಪಿ ಕಾಲಂ: ಅಮ್ಮ ನನ್ನ ಬಗ್ಗೆ ಹೆಮ್ಮೆ ಪಡಲೇ ಇಲ್ಲ
Team Udayavani, Oct 22, 2020, 6:10 AM IST
ನನ್ನನ್ನು ಒಂದು ಸಮಯದಲ್ಲಿ ಜಗತ್ತಿನ ಅತಿ ಬಲಿಷ್ಠ ವ್ಯಕ್ತಿ ಎಂದು ಕರೆಯಲಾಗುತ್ತಿತ್ತು. ಆದರೆ, ಒಂದು ಸತ್ಯ ಮಾತ್ರ ಯಾರಿಗೂ ಗೊತ್ತಿರಲೇ ಇಲ್ಲ. ನಾನು ಬಾಕ್ಸಿಂಗ್ ರಿಂಗ್‌ನಲ್ಲಷ್ಟೇ ಬಲಿಷ್ಠ ವ್ಯಕ್ತಿಯಾಗಿದ್ದವನು, ನಿಜ ಜೀವನದಲ್ಲಿ ಮೊದಲಿನಿಂದಲೂ ನಾನು ಭಯಭೀತ ಪುಟ್ಟ ಹುಡುಗನೇ ಆಗಿದ್ದೇನೆ. ಆ ಭಯಭೀತ ಮಗು ನನ್ನಿಂದ ಎಂದಿಗೂ ದೂರವಾಗುವುದೇ ಇಲ್ಲ ಎಂದು ಅರ್ಥವಾಗಿದೆ.
ಬಾಲ್ಯದಲ್ಲಿ ನಾನು ಅತ್ಯಂತ ನಾಚಿಕೆಯ ಸ್ವಭಾವದವನಾಗಿದ್ದೆ, ಕೀಳರಿಮೆಯಿಂದಾಗಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ, ಮಾತನಾಡುವಾಗ ತೊದಲುತ್ತೇನಾದ್ದರಿಂದ ಅನ್ಯ ಹುಡುಗರೆಲ್ಲ ನನ್ನನ್ನು ಛೇಡಿಸುತ್ತಿದ್ದರು-ಹೊಡೆಯುತ್ತಿದ್ದರು. ಮನೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ನಾನು ಎರಡು ವರ್ಷದ ಮಗುವಿದ್ದಾಗಲೇ ಅಪ್ಪ ಸತ್ತುಹೋಗಿದ್ದ. ಹೀಗಾಗಿ, ಮನೆಯ ಜವಾಬ್ದಾರಿಯೆಲ್ಲ ಅಮ್ಮನ ಹೆಗಲೇರಿತ್ತು. ಆ ಜವಾಬ್ದಾರಿಯ ಭಾರದ ಕಿರಿಕಿರಿಯಿಂದಲೋ ಏನೋ ಅಮ್ಮ ಸದಾ ನಮ್ಮನ್ನು ಹೊಡೆಯುತ್ತಿದ್ದಳು, ಮನೆಯೆನ್ನುವುದು ನರಕವಾಗಿಹೋಗಿತ್ತು. ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯವೇ ನನಗಿರಲಿಲ್ಲ. ಈಗಲೂ ಅಷ್ಟೇ, ಅಮ್ಮ ಸತ್ತು ಎಷ್ಟೋ ವರ್ಷಗಳಾದರೂ, ಆಕೆಯನ್ನು ನೆನಪಿಸಿಕೊಂಡಾಕ್ಷಣ ನಡುಗಿಹೋಗುತ್ತೇನೆ.
ನನ್ನ ಬಾಲ್ಯ ಕ್ರೌರ್ಯ, ಕೀಳರಿಮೆಯೇ ತುಂಬಿದ್ದ ಜಗತ್ತಾಗಿತ್ತು. ನನಗಿನ್ನೂ ನೆನಪಿದೆ- ಒಮ್ಮೆ ನನ್ನ ಅಮ್ಮ ಮತ್ತು ಆಕೆಯ ಬಾಯ್‌ಫ್ರೆಂಡ್ “ಎಡ್ಡಿ’ ನಡುವೆ ಜೋರು ಜಗಳ ಆರಂಭವಾಗಿತ್ತು. ಮಾತಿಗೆ ಮಾತು ಬೆಳೆದು ಎಡ್ಡಿ ಅಮ್ಮನ ಮುಖಕ್ಕೆ ಮುಷ್ಠಿಯಿಂದ ಗುದ್ದಿಬಿಟ್ಟ. ಆ ಪೆಟ್ಟಿಗೆ ಅಮ್ಮನ ಹಲ್ಲೊಂದು ಮುರಿದು ನಮ್ಮ ಮುಂದೆ ಬಂದು ಬಿತ್ತು! ಕೋಣೆಯೆಲ್ಲ ರಕ್ತಮಯ. ಅಮ್ಮ ಸತ್ತೇಹೋಗುತ್ತಾಳೇನೋ ಎಂದು ನಾನು-ನನ್ನ ತಂಗಿಯಷ್ಟೇ ಅಲ್ಲ, ಎಡ್ಡಿಯೂ ಬೆಚ್ಚಿಬಿದ್ದ! ಆದರೆ ಕೆಲವೇ ಕ್ಷಣಗಳಲ್ಲಿ ಚೇತರಿಸಿಕೊಂಡು ಎದ್ದುನಿಂತ ಅಮ್ಮ, ನೇರವಾಗಿ ಅಡುಗೆಮನೆಗೆ ಹೋದಳು. ನಾನು ನನ್ನ ತಂಗಿ ಆಕೆಯನ್ನು ಹಿಂಬಾ ಲಿಸಿದೆವು. ಏನೂ ಆಗಿಯೇ ಇಲ್ಲವೇನೋ ಅನ್ನುವ ರೀತಿಯಲ್ಲಿ ಆಕೆ ಸ್ಟೌವ್ ಆನ್ ಮಾಡಿ ಪಾತ್ರೆಯಲ್ಲಿ ನೀರು ಇಟ್ಟಳು. ಅಡುಗೆಮನೆಗೆ ಬಂದ ಎಡ್ಡಿ, ಆಕೆ ಚಹಾ ಮಾಡುತ್ತಿದ್ದಾಳೆಂದು ಭಾವಿಸಿದ! ನೋಡನೋಡುತ್ತಿದ್ದಂತೆಯೇ ಅಮ್ಮ, ಆ ಕುದಿಯುವ ಪಾತ್ರೆಯನ್ನು ಬರಿಗೈಯಲ್ಲಿ ಎತ್ತಿಕೊಂಡಳು. ಹೆದರಿದ ಎಡ್ಡಿ ಓಡಿಹೋಗಲು ಪ್ರಯತ್ನಿಸಿದ. ಅಷ್ಟರಲ್ಲೇ ಅಮ್ಮ, ಆ ಕುದಿವ ನೀರನ್ನು ಅವನ ಮೇಲೆ ಎರಚಿಬಿಟ್ಟಳು. ಎಡ್ಡಿ, ಕಾಲಿಗೆ ಸಿಕ್ಕು ನರಳುವ ಹಲ್ಲಿಯಂತೆ ನೆಲದ ಮೇಲೆ ಬಿದ್ದು ಒದ್ದಾಡಲಾರಂಭಿಸಿದ. ಆತನ ಬೆನ್ನು, ಕೈ ಮೇಲೆಲ್ಲ ಬೊಬ್ಬೆಯೇಳತೊಡಗಿದ್ದವು. ಅಮ್ಮ ಕೆಟ್ಟದಾಗಿ ನಿಂದಿಸುತ್ತಾ ಸೀದಾ ಬಾತ್‌ರೂಮಿಗೆ ಸ್ನಾನ ಮಾಡಲು ಹೋದಳು!
ನನ್ನ ತಂಗಿ ಎಡ್ಡಿಯ ಮೈಗೆ ಮುಲಾಮು ಹಚ್ಚಲಾರಂಭಿಸಿದಳು. ನಾನು ಅವನನ್ನು ಸಮಾಧಾನಪಡಿಸುವುದಕ್ಕಾಗಿ ಕಿಸೆಯಲ್ಲಿದ್ದ ಒಂದಿಷ್ಟು ಹಣವನ್ನು ಆತನ ಕೈಗಿತ್ತೆ. ಅವನು ಎದ್ದುಕೂತವನೇ ನರಳುತ್ತಾ ನೇರವಾಗಿ ಹತ್ತಿರದ ಬಾರ್‌ಗೆ ಹೋದ. ಅಲ್ಲಿಂದ ಬರುವಾಗ ಆ ಹಣದಲ್ಲಿ ಅಮ್ಮನಿಗಾಗಿ ಮದ್ಯದ ಬಾಟಲಿ ತಂದುಕೊಟ್ಟ!
ನಿಜಕ್ಕೂ ಕ್ರೌರ್ಯ ತುಂಬಿದ ಮನೆಯಾಗಿತ್ತು ನಮ್ಮದು. ಹೀಗಾಗಿ, ಮನೆಗೆ ಹೋಗುವುದನ್ನೇ ನಿಲ್ಲಿಸಿ ಹೊರಗೇ ಹೆಚ್ಚಾಗಿ ಅಲೆಯಲಾರಂಭಿಸಿದೆ. ಆದರೆ ಹೊರಗೆ ಕಾಲಿಟ್ಟರೆ ಪುಟ್ಟ ಗಾತ್ರದ ನನ್ನನ್ನು ಛೇಡಿಸುವ ಹುಡುಗರು! ಆದರೆ, ದಿನಗಳೆದಂತೆ ಈ ಪುಂಡ ಹುಡುಗರೇ ನನ್ನ ಸ್ನೇಹಿತರಾದರು. ಆದರೂ ನನ್ನನ್ನು ಛೇಡಿಸುವುದನ್ನು ಅವರು ಬಿಡಲಿಲ್ಲ, ಈ ಕಾಟದಿಂದ ತಪ್ಪಿಸಿಕೊಳ್ಳಲು ನಾನು ಸ್ಟ್ರೀಟ್ ಫೈಟಿಂಗ್‌ನತ್ತ ವಾಲಿಬಿಟ್ಟೆ. ಎದುರಿನವ ಒಂದೇಟು ಹಾಕಿದರೆ, ಹತ್ತೇಟು ಅವನಿಗೆ ಬಿಗಿಯಲಾರಂಭಿಸಿದೆ. ಈ ಹುಡುಗರ ಸಂಗ ಮಾಡಿ ಹೊಡೆದಾಟವನ್ನಷ್ಟೇ ಅಲ್ಲ, ಮಾದಕ ವ್ಯಸನವನ್ನೂ ಕಲಿತುಬಿಟ್ಟೆ. ಪರಿಣಾಮವಾಗಿ 13ನೇ ವಯಸ್ಸಿಗೇ ಹಲವುಬಾರಿ ಜೈಲಿಗೆ ಹೋಗಿ ಬಂದೆ. ಕೊನೆಗೆ ಪರಿಚಿತರೊಬ್ಬರು ನನ್ನನ್ನು ಸರಿದಾರಿಗೆ ತರಬೇಕೆಂದು ಹತ್ತಿರದ ಶಾಲೆಯೊಂದಕ್ಕೆ ಸೇರಿಸಿದರು. ಅದು ನನ್ನಂಥ ಹುಡುಗರ ಸುಧಾರಣೆಗಾಗಿಯೇ ನಡೆಯುತ್ತಿದ್ದ ಶಾಲೆ. ಅಲ್ಲೇ ನನಗೆ ಸಿಕ್ಕಿದ್ದು, ಬಾಬ್ ಸ್ಟೀವರ್ಟ್ ಎನ್ನುವ ಟೀಚರ್. ಬಾಕ್ಸಿಂಗ್ ಪಟುವಾಗಿದ್ದ ಬಾಬ್ ಸ್ಟೀವರ್ಟ್ “ಮೈಕ್, ನಿನ್ನ ಸಿಟ್ಟು-ಪಟ್ಟುಗಳನ್ನೆಲ್ಲ ಬಾಕ್ಸಿಂಗ್‌ನಲ್ಲಿ ತೋರಿಸು, ರಸ್ತೆಯಲ್ಲಲ್ಲ’ ಎಂದು ತರಬೇತಿ ಆರಂಭಿಸಿಬಿಟ್ಟರು. ಹಾಗೆ ಆರಂಭವಾಯಿತು ನನ್ನ ಬಾಕ್ಸಿಂಗ್ ಪಯಣ.
ಮುಂದೆ ಬಾಬ್ ಸ್ಟೀವರ್ಟ್ ನನ್ನನ್ನು ಪ್ರಖ್ಯಾತ ಬಾಕ್ಸಿಂಗ್ ಮ್ಯಾನೇಜರ್ ಕಾನ್‌ಸ್ಟಂಟೀನ್ ಅಮಾಟೋರ ಬಳಿ ಕರೆದೊಯ್ದರು. ಕಾನ್ಸ್‌ಟಂಟೀನ್, ಅಂದು ನನಗೆ ಹೇಳಿದ್ದು ಒಂದೇ ಮಾತು-“”ನಾನು ನಿನ್ನನ್ನು ಅತಿ ಕಿರಿಯ ಬಾಕ್ಸಿಂಗ್ ವಿಶ್ವಚಾಂಪಿಯನ್ ಮಾಡುತ್ತೇನೆ. ಆದರೆ, ಒಂದು ಷರತ್ತು. ನಾನು ಹೇಳಿದಂತೆ ನೀನು ಕೇಳಬೇಕು”.
ಕಾನ್‌ಸ್ಟಂಟೀನ್ ಬರೀ ಬಾಕ್ಸಿಂಗ್ ಪಟ್ಟುಗಳ ಬಗ್ಗೆ ಹೇಳುತ್ತಾ ರೇನೋ ಎಂದು ನಾನು ಭಾವಿಸಿದ್ದೆ, ಆದರೆ ಬಾಕ್ಸಿಂಗ್ ಎನ್ನುವುದು ಬಲಿಷ್ಠರ ಆಟವಲ್ಲ, ಅದು ಬುದ್ಧಿವಂತರ ಆಟ ಎನ್ನುವುದನ್ನು ಕಲಿಸಿಕೊಟ್ಟರು. ಆಟಗಾರನೊಬ್ಬ ಎಷ್ಟೇ ಬಲಿಷ್ಠನಾಗಿರಲಿ, ಆತ ಚಾಣಾಕ್ಷನಾಗದಿದ್ದರೆ ಕ್ಷಣಾರ್ಧದಲ್ಲಿ ನೆಲಕ್ಕುರುಳುತ್ತಾನೆ ಎನ್ನುವುದು ನನಗೆ ಮನದಟ್ಟಾದದ್ದು ಆಗಲೇ. ಆದರೆ, ಅಂಥ ಚಾಣಾಕ್ಷತೆ ಬೆಳೆಯಲು ಅಪಾರ ಶ್ರದ್ಧೆ, ಬದ್ಧತೆ ಬಹಳ ಮುಖ್ಯ.
ಆದರೆ, ಅಂಥ ಶ್ರದ್ಧೆ ಆರಂಭದಲ್ಲಿ ನನಗಿರಲಿಲ್ಲ. ಕೆಲವೊಂದು ದಿನ ತರಬೇತಿಗೆ ಹೋಗಲು, ವ್ಯಾಯಾಮ ಮಾಡಲು ಮನಸ್ಸು ಬರುತ್ತಲೇ ಇರಲಿಲ್ಲ. ಒಮ್ಮೆ ಈ ವಿಷಯವನ್ನು ಕಾನ್‌ಸ್ಟಂಟೀನ್ ಅವರ ಬಳಿಯೂ ಹೇಳಿದೆ. ಆಗ ಅವರಂದರು- “”ಮೈಕ್ ಶಿಸ್ತು ಅಂದರೆ ಏನೆಂದು ಗೊತ್ತೇ? ಒಂದು ಚಟುವಟಿಕೆಯನ್ನು ನಾವು ಎಷ್ಟೇ ದ್ವೇಷಿಸುತ್ತಿದ್ದರೂ, ಅದನ್ನು ನಿಜಕ್ಕೂ ಪ್ರೀತಿಸುತ್ತಿದ್ದೇವೆ ಎಂಬ ರೀತಿಯಲ್ಲಿ ಪರಿಪಾಲಿಸುವುದು! ಬೇಸರವಾಗಲಿ, ಕಿರಿಕಿರಿಯಾಗಲಿ, ಸುಸ್ತಾಗಿರಲಿ, ಸಿಟ್ಟುಬರಲಿ ಕೈಹಿಡಿದ ಕೆಲಸವನ್ನು ಬಿಡಬಾರದು”
ಈ ನಿಯಮವೇ ನನ್ನ ಬದುಕಾಗಿಬಿಟ್ಟಿತು. ಕಾನ್‌ಸ್ಟಂಟೀನ್ ಹೇಳಿದಂತೆಯೇ, ಅತಿ ಚಿಕ್ಕವಯಸ್ಸಿನಲ್ಲೇ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಆದೆ..ಆದರೆ, ದುರದೃಷ್ಟವೇನು ಗೊತ್ತೇ? ಇದನ್ನು ನೋಡಲು ನನ್ನ ಅಮ್ಮನೇ ಇರಲಿಲ್ಲ. ಇದ್ದರೂ ಆಕೆ ಖುಷಿಪಡುತ್ತಿರಲಿಲ್ಲವೇನೋ?! ಏಕೆಂದರೆ, ನಾನು ವಿಶ್ವಚಾಂಪಿಯನ್ ಆಗುವ ಮುನ್ನವೇ ಹಲವು ಫೈಟ್‌ಗಳನ್ನು ಗೆಲ್ಲಲಾರಂಭಿಸಿದ್ದೆ. ನಿತ್ಯ ನನ್ನ ಬಗ್ಗೆ ವರದಿಗಳು ಪತ್ರಿಕೆಗಳಲ್ಲಿ ಬರಲಾರಂಭಿಸಿದ್ದವು. ಆ ಸುದ್ದಿಯನ್ನೆಲ್ಲ ನಾನು ಅಮ್ಮನಿಗೆ ಹೋಗಿ ತೋರಿಸಿದರೆ, ಆಕೆ ಅದನ್ನು ನೋಡುತ್ತಲೇ ಇರಲಿಲ್ಲ. “ಆಮೇಲೆ ಓದಿ¤àನಿ’ ಎಂದು ಹೇಳಿ ಎದ್ದುಹೋಗಿಬಿಡುತ್ತಿದ್ದಳು. ಆಕೆ ನನ್ನ ಬಗ್ಗೆ ಎಷ್ಟು ಭರವಸೆ ಕಳೆದುಕೊಂಡುಬಿಟ್ಟಿದ್ದಳು ಎಂದರೆ, “ಇವನನ್ನ ಆ ಬಿಳಿಯರು ಅಷ್ಟಾéಕೆ ಇಷ್ಟಪಡ್ತಾರೋ’ ಅಂತ ಅಚ್ಚರಿಗೊಳ್ಳುತ್ತಿದ್ದಳೆನಿಸುತ್ತದೆ! ಅಮ್ಮ ನನ್ನ ಬಗ್ಗೆ ಯಾವತ್ತೂ ಸಂತೋಷ-ಹೆಮ್ಮೆ ಪಟ್ಟಿದ್ದನ್ನು ನಾನು ನೋಡಲೇ ಇಲ್ಲ. ಆಕೆಗೆ ಗೊತ್ತಿದ್ದ ಮೈಕ್ ಟೈಸನ್ ಒಬ್ಬನೇ- ರಸ್ತೆಗಳಲ್ಲಿ ಪುಂಡ ಹುಡುಗರ ಜತೆ ಅಡ್ಡಾಡುತ್ತಿದ್ದ ಟೈಸನ್ ಮಾತ್ರ. ಈ ಸಂಗತಿ, ಈಗಲೂ ನನ್ನನ್ನು ಭಾವನಾತ್ಮಕವಾಗಿ ತುಳಿಯುತ್ತಲೇ ಇದೆ.
ಅಮ್ಮ ಸತ್ತ ನಂತರ ಅನಾಥನಾಗಿದ್ದ ನನ್ನನ್ನು ಕಾನ್‌ಸ್ಟಂಟೀನ್ ದತ್ತುಮಗನಾಗಿ ಸ್ವೀಕರಿಸಿದರು. ಜೀವನದಲ್ಲಿ ಅಪ್ಪನನ್ನೇ ನೋಡದ ನನಗೆ, ಅವರೇ ತಂದೆ-ತಾಯಿಯಾದರು. ಆದರೆ, ಕೆಲವೇ ವರ್ಷ ಗಳಲ್ಲಿ ಅವರೂ ನಿಧನರಾಗಿ ಮತ್ತೆ ನನ್ನನ್ನು ಅನಾಥನನ್ನಾಗಿಸಿಬಿಟ್ಟರು. ಅವರು ಹೋದದ್ದೇ, ಮತ್ತೆ ನಾನು ಅದೇ ಹಾದಿತಪ್ಪಿದ ಹುಡುಗನಾಗಿಬಿಟ್ಟೆ.
ನಾನು ಯಾವುದೇ ಸಂದರ್ಶನದಲ್ಲಿ ಭಾಗವಹಿಸಲಿ, ಯಾರೊಂ ದಿಗಾದರೂ ಮಾತನಾಡಲಿ…ಅವರೆಲ್ಲ ನನ್ನ ಬಾಕ್ಸಿಂಗ್ ದಿನಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಆ ಪ್ರಶ್ನೆಗಳು ಎದುರಾದಾಗಲೆಲ್ಲ ಒಂದು ಕ್ಷಣಕ್ಕೆ ನಡುಗಿ ಹೋಗುತ್ತೇನೆ. ಸತ್ಯವೇನೆಂದರೆ, ಆ ದಿನಗಳನ್ನು ಹಿಂದಿ ರುಗಿನೋಡಲು ನನಗೆ ಕಷ್ಟವಾಗುತ್ತದೆ. ಏಕೆಂದರೆ ಬಾಕ್ಸಿಂಗ್ ನನಗೆ ಅಪಾರ ಸಂಪತ್ತನ್ನು, ಖ್ಯಾತಿಯನ್ನು ತಂದು ಕೊಟ್ಟಿತು, ಸಂತೋಷವನ್ನಲ್ಲ. ಆ ಸಮಯದಲ್ಲಿ ಬಾಕ್ಸಿಂಗ್ ರಿಂಗ್‌ನಲ್ಲಿ ಎದು ರಾಳಿಗೆ ಸಾಧ್ಯವಾದಷ್ಟು ನೋವು ಕೊಡಬೇಕು ಎನ್ನುವುದಷ್ಟೇ ನನ್ನ ಗುರಿಯಾಗಿರುತ್ತಿತ್ತು. ಎದುರಾಳಿಯು ರಿಂಗ್‌ಗೆ ಕಾಲಿಡುವ ಮುನ್ನವೇ ಆತನ ಕಣ್ಣಿನಲ್ಲಿ ನನಗೆ ಸೋಲು-ಭಯ ಕಂಡು ಬಿಡು ತ್ತಿತ್ತು. ಆತ ಮತ್ತೆಂದೂ ಚೇತರಿಸಿಕೊಳ್ಳದಂಥ ಪೆಟ್ಟು ನೀಡಬೇಕು ಎಂಬುದೇ ನನ್ನ ಧ್ಯೇಯವಾಗಿರುತ್ತಿತ್ತು. ಈಗ ನಾನು ಬದುಕಿಗೆ ಸರೆಂಡರ್ ಆಗಿದ್ದೇನೆ. ಒಂದು ಸಮಯದಲ್ಲಿ ನಾನು ಜೀವನ ಎನ್ನುವುದು ಬರೀ ಕಲೆಹಾಕುವ ಪ್ರಕ್ರಿಯೆ ಎಂದು ಭಾವಿಸಿದ್ದೆ, ಈಗ ವಯಸ್ಸಾಗುತ್ತಾ ಸಾಗುತ್ತಿದ್ದಂತೆಯೇ, ಬದುಕು ಎಂದರೆ ಕಳೆದುಕೊಳ್ಳುತ್ತಾ ಹೋಗುವ ಪ್ರಕ್ರಿಯೆ ಎನ್ನು ವುದು ಅರ್ಥವಾಗಿದೆ. ಆದರೆ ಇನ್ನೊಂದು ವಿಷಯವೂ ಸ್ಪಷ್ಟವಾಗಿದೆ- ನಾನೆಂದಿಗೂ ಸಂತೋಷವಾಗಿ ಇರಲಾರೆ. ಜೀವನಪರ್ಯಂತ ನಾನು ಎಲ್ಲರ ನಡುವೆಯಿದ್ದೂ ಒಂಟಿತನವನ್ನೇ ಅನುಭವಿಸುತ್ತಾ ಬಂದಿದ್ದೇನೆ. ಬಾಲ್ಯದಲ್ಲಿ ಹುಟ್ಟಿಕೊಂಡ ನನ್ನೊಳಗಿನ ನೋವು, ಭಯ ಎಂದಿಗೂ ದೂರವಾಗುವುದಿಲ್ಲ ಎನ್ನುವು ದನ್ನು ಅರಿತಿದ್ದೇನೆ. ಆದರೆ, ಭಯ ಎನ್ನುವುದು ಬೆಂಕಿಯಿದ್ದಂತೆ ಅದನ್ನು ಸರಿಯಾಗಿ ಬಳಸಿದರೆ ಬಹಳ ಉಪಯೋಗಕ್ಕೆ ಬರುತ್ತದೆ. ಬಳಸದಿದ್ದರೆ ನಮ್ಮನ್ನೇ ಆಹುತಿ ಪಡೆಯುತ್ತದೆ ಎಂಬ ಸತ್ಯವನ್ನೂ ಅರಿತಿದ್ದೇನೆ.
ಮೈಕ್ ಟೈಸನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.