ಸರದಿ ಬಂದಾಗ ಜವಾಬ್ದಾರಿ ನಿಭಾಯಿಸಬೇಕು
ನನ್ನ ಹೆಂಡತಿ ಹೇಳುತ್ತಾಳೆ- ""ಸೋನು ನೀನು ಜೀವನದಲ್ಲಿ ನಿರ್ವಹಿಸಿದ ಅತ್ಯುತ್ತಮ ಪಾತ್ರ ಇದು'' ಎಂದು!
Team Udayavani, Nov 20, 2020, 6:32 AM IST
ಒಂದು ದಿನ ಆಹಾರ ಪೂರೈಸುವ ವೇಳೆಯಲ್ಲೇ, ಕುಟುಂಬವೊಂದು ನಮ್ಮ ಬಳಿ ಬಂದಿತು. ಅವರನ್ನು ಮಾತನಾಡಿಸಿದಾಗ ನನಗೆ ತಿಳಿದದ್ದೇನೆಂದರೆ, ಆ ಬಡ ಕುಟುಂಬ ಕಾಲ್ನಡಿಗೆಯಲ್ಲೇ ಕರ್ನಾಟಕದವರೆಗೆ ಹೋಗಲು ನಿರ್ಧರಿಸಿತ್ತಂತೆ. ಅವರು ಕಾಲ್ನಡಿಗೆಯಲ್ಲೇ ತಮ್ಮ ಊರಿಗೆ ತಲುಪಲು ಏನಿಲ್ಲವೆಂದರೂ 10 ದಿನ ಹಿಡಿಯುತ್ತದೆ ಎನ್ನುವುದನ್ನು ಕೇಳಿ ವಿಪರೀತ ನೋವಾಯಿತು.
ಕೋವಿಡ್ ಸಮಯದಲ್ಲಿ ಕಷ್ಟದಲ್ಲಿ ಸಿಲುಕಿರುವವರಿಗೆ ಸಹಾಯ ಮಾಡಲು ನಾನು ನಿರ್ಧರಿಸಿದ್ದು ಏಕೆ ಎಂಬ ಪ್ರಶ್ನೆ ಬಹಳ ಎದುರಾಗುತ್ತದೆ. ಬಹುಶಃ ಬದುಕಿನಲ್ಲಿ ಕೈಲಾದಷ್ಟೂ ಜನರಿಗಾದರೂ ಸಹಾಯ ಮಾಡಬೇಕು ಎಂಬ ನನ್ನ ನಿರ್ಧಾರದ ಹಿಂದೆ ಅಪ್ಪ-ಅಮ್ಮ ಪ್ರೇರಣೆ ಇದೆ ಎನಿಸುತ್ತದೆ. ನನ್ನ ಪೋಷಕರು ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದರು. ಅಮ್ಮ ಬದುಕಿನುದ್ದಕ್ಕೂ ಬಡಮಕ್ಕಳಿಗೆ ಇಂಗ್ಲಿಷ್ ಪಾಠ ಹೇಳಿಕೊಡುತ್ತಿದ್ದಳು, ಇನ್ನೊಂದೆಡೆ ಅಪ್ಪ ತನ್ನ ಅಂಗಡಿಯ ಮುಂದೆ ಅನ್ನದಾನ ಮಾಡುತ್ತಿದ್ದ.
ಮಹಾಮಾರಿಯ ಸಂಕಷ್ಟ ಎದುರಾದಾಗ ಅನೇಕರು ಕಷ್ಟಕ್ಕೆ ಸಿಲುಕಿಬಿಟ್ಟರು. ಯಾವ ಮಟ್ಟಿಗೆ ಎಂದರೆ, ಸಮಾಜಸೇವೆ ಮಾಡುವ ಜನರೂ ಕೂಡ ಸಂಕಷ್ಟಕ್ಕೆ ಈಡಾದರು. ಆಗಲೇ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ನಾನು ಲಾಯಕ್ಕಿದ್ದೇನಾ ಎನ್ನುವುದನ್ನು ತಿಳಿದುಕೊಳ್ಳುವ ಸಮಯ ಬಂದಿತ್ತು.
ಈ ಸೇವೆಯಲ್ಲಿ ನನ್ನ ಪತ್ನಿಯ ಸಹಯೋಗ ಬಹಳ ಇದೆ. ಆಕೆ ಹೇಳುತ್ತಿರುತ್ತಾಳೆ, “”ಸೋನು ನೀನು ನಿನ್ನ ಜೀವನದಲ್ಲಿ ನಿರ್ವಹಿಸಿದ ಅತ್ಯುತ್ತಮ ಪಾತ್ರ ಇದು” ಎಂದು. ನನ್ನ ಪ್ರಕಾರ ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎಂದು ನಿರ್ಧರಿದರೆ, ದೇವರೇ ನಿಮಗೆ ಮಾರ್ಗ ತೋರಿಸುತ್ತಾನೆ.
ಆರಂಭದಲ್ಲಿ ಕೆಲ ದಿನ ಸಂಕಷ್ಟದ ತೀವ್ರತೆ ಎಷ್ಟಿದೆ ಎನ್ನುವುದು ನನಗೆ ಅರಿವಿರಲಿಲ್ಲ. ಒಂದು ವಾರ ಅನ್ನದಾನ ಶಿಬಿರಗಳನ್ನು ಆಯೋಜಿಸಿ, ನನ್ನ ಗುರಿಯನ್ನು ಅಷ್ಟಕ್ಕೆ ಮಾತ್ರ ಸೀಮಿತಗೊಳಿಸಿದ್ದೆ. ಆದರೆ ಒಂದು ದಿನ ಆಹಾರ ಪೂರೈಸುವ ವೇಳೆಯಲ್ಲೇ, ಕುಟುಂಬವೊಂದು ನಮ್ಮ ಬಳಿ ಬಂದಿತು. ಅವರನ್ನು ಮಾತನಾಡಿಸಿದಾಗ ನನಗೆ ತಿಳಿದದ್ದೇನೆಂದರೆ, ಆ ಬಡ ಕುಟುಂಬ ಕಾಲ್ನಡಿಗೆಯಲ್ಲೇ ಕರ್ನಾಟಕದವರೆಗೆ ಹೋಗಲು ನಿರ್ಧರಿಸಿತ್ತಂತೆ. ಅವರು ಕಾಲ್ನಡಿಗೆಯಲ್ಲೇ ತಮ್ಮ ಊರಿಗೆ ತಲುಪಲು ಏನಿಲ್ಲವೆಂದರೂ 10 ದಿನ ಹಿಡಿಯುತ್ತದೆ ಎನ್ನುವುದನ್ನು ಕೇಳಿ ವಿಪರೀತ ನೋವಾಯಿತು. ಆಗಲೇ ಶ್ರಮಿಕರನ್ನು ಅವರ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಿದರೆ ಹೇಗೆ ಎನ್ನುವ ಯೋಚನೆ ಬಂದದ್ದು.
ಇದೊಂದು ದೊಡ್ಡ ಟಾಸ್ಕ್ ಆಗಿತ್ತು. ಅಷ್ಟೊಂದು ಪ್ರಮಾಣದ ಜನರಿಗೆಲ್ಲ ವಾಹನ, ಆಹಾರ ವ್ಯವಸ್ಥೆ ಮಾಡಲು ಸಾಧ್ಯವೇ ಎನ್ನುವುದೂ ನನಗೆ ತಿಳಿದಿರಲಿಲ್ಲ. ಆದರೆ, ಮನೆಯಿಂದ ಹೆಜ್ಜೆ ಹೊರಗಿಟ್ಟದ್ದೇ ತಾನಾಗಿಯೇ ಮಾರ್ಗಗಳು ತೆರೆದುಕೊಳ್ಳಲಾರಂಭಿಸಿದವು. ಅನೇಕ ದಾನಿಗಳು ಮುಂದೆ ಬಂದರು. ನಿಸ್ಸಂಶಯವಾಗಿಯೂ ನಮ್ಮ ಪ್ರಯತ್ನದ ಹಿಂದೆ ಅನೇಕರ ಸಹಾಯಹಸ್ತವಿದೆ. ಆದರೆ, ಜನರು ನನ್ನೊಂದಿಗೆ ಕೈ ಜೋಡಿಸಿದಿದ್ದರೂ, ನಾನು ನನ್ನ ಕೈಲಾದಮಟ್ಟಿಗೆ ಇನ್ನೊಬ್ಬರಿಗೆ ಸಹಾಯ ಮಾಡುತ್ತೇನೆ ಎಂದು ನಿರ್ಧರಿಸಿದ್ದೆ. ನನಗನ್ನಿಸುತ್ತದೆ ಇದು ನನ್ನ ಡ್ನೂಟಿ/ ಕೆಲಸ ಎಂದು. ನಮ್ಮ ನಂಬರ್ ಬಂದಾಗ ನಾವು ಹಿಂಜರಿಯದೇ ಕೆಲಸ ಮಾಡಿಬಿಡಬೇಕು. ಆಗಲೇ ಹೇಳಿದಂತೆ ಈ ಎಲ್ಲಾ ಕೆಲಸಗಳನ್ನು ಆ ದೇವರೇ ಮಾಡುತ್ತಿದ್ದಾನೆ, ಆತ ನನ್ನನ್ನು ಕೇವಲ ಒಂದು ಮಾರ್ಗವಾಗಿ ಆಯ್ಕೆ ಮಾಡಿಕೊಂಡಿದ್ದಾನಷ್ಟೆ. ಈ ಸಂಕಷ್ಟವು ನನಗೆ ಕಲಿಸಿದ ಅತಿದೊಡ್ಡ ಪಾಠವೆಂದರೆ, ನಾವು ಕೇವಲ ನಮಗೋಸ್ಕರ ಅಲ್ಲ, ಅನ್ಯರಿಗಾಗಿಯೂ ಬದುಕಬೇಕು ಎನ್ನುವುದು.
ಆರಂಭದ ದಿನಗಳಲ್ಲಿ ನಾವು 100-200 ಜನಕ್ಕೆ ಆಹಾರ ವಿತರಿಸಲಾರಂಭಿಸಿದೆವು, ನಂತರ ಈ ಸಂಖ್ಯೆ 400-500 ಜನಕ್ಕೆ ವಿಸ್ತರಿಸಿತು, 1000ವನ್ನೂ ದಾಟಿತು. ಒಂದು ದಿನವಂತೂ ನಮ್ಮ ತಂಡ 45,000 ಜನರಿಗೆ ಆಹಾರ ಒದಗಿಸಿತು. ಆದರೆ ನಮ್ಮ ಕಾರ್ಯವೈಖರಿಯು ಪಾರದರ್ಶಕವಾಗಿರಬೇಕು ಎನ್ನುವುದು ನನ್ನ ನಿಲುವಾಗಿದೆ. ಈ ಕಾರಣಕ್ಕಾಗಿಯೇ, ನಮ್ಮ ತಂಡ ಹೇಗೆ ಕಾರ್ಯನಿರ್ವಹಿಸುತ್ತಿದೆ, ಎಷ್ಟು ಜನಕ್ಕೆ ಸಹಾಯ ಮಾಡುತ್ತಿದ್ದೇವೆ, ನಮ್ಮನ್ನು ತಲುಪುವುದು ಹೇಗೆ ಎನ್ನುವ ವಿವಿರಗಳನ್ನೆಲ್ಲ ಕೇವಲ ಟ್ವಿಟರ್‌ನಲ್ಲಷ್ಟೇ ಅಲ್ಲದೇ, ಫೋನ್ ಮಾಡಿಯೂ ತಿಳಿದುಕೊಳ್ಳುವ ವ್ಯವಸ್ಥೆ ಮಾಡಿದೆವು. ಉಚಿತ ಸಹಾಯವಾಣಿಯನ್ನೂ ಸ್ಥಾಪಿಸಿದೆವು. ಅನೇಕರು ಇನ್ಸ್‌ಟಾಗ್ರಾಂ ಮತ್ತು ಇಮೇಲ್ ಮೂಲಕವೂ ನಮ್ಮ ಬಳಿ ಮಾಹಿತಿ ಪಡೆಯುತ್ತಿದ್ದಾರೆ.
ಋಣಾತ್ಮಕವಾಗಿ ಮಾತನಾಡುವುದೇ ಕೆಲವರ ಗುಣ: ಈ ವಿಚಾರದಲ್ಲಿ ಅನೇಕರು ನನ್ನನ್ನು ಟ್ರೋಲ್ ಮಾಡಿದ್ದು, ಸಿನಿಕತನದಿಂದ ಪ್ರಶ್ನಿಸಿದ್ದೂ ಇದೆ. ಆದರೆ, ನನ್ನ ಉದ್ದೇಶಗಳನ್ನು ಅನುಮಾನಿಸುವವರ ಮುಂದೆಲ್ಲ ನನ್ನನ್ನು ನಾನು ಸಮರ್ಥಿಸಿಕೊಳ್ಳಬೇಕೆಂಬ ದರ್ದು ನನಗಿಲ್ಲ. ಕೆಲವರಿಗೆ ಋಣಾತ್ಮಕವಾಗಿ ಮಾತನಾಡುವುದು ವಂಶವಾಹಿಯಲ್ಲೇ ಬಂದಿರುತ್ತದೆ. ಇದರಲ್ಲಿ ಅವರದ್ದೇನೂ ತಪ್ಪಿಲ್ಲ ಬಿಡಿ. ಏಕೆಂದರೆ ಅವರೆಲ್ಲರೂ ಟ್ರಾಲ್‌ಗಳಷ್ಟೇ. ಇನ್ನೊಬ್ಬರಿಗೆ ಒಳಿತು ಮಾಡುವ ಬೆನ್ನೆಲುಬು ಅವರಿಗಿಲ್ಲ. ಹಂಗಿಸುವವರು, ಸಿನಿಕರು ಏನು ಬೇಕಾದರೂ ಮಾತಾಡಿಕೊಳ್ಳಲಿ. ಸತ್ಯವೇನೆಂದರೆ, ಅವರ ಈ ಋಣಾತ್ಮಕತೆಯೇ ನನಗೆ ಮತ್ತಷ್ಟು ಉತ್ತಮ ವ್ಯಕ್ತಿಯಾಗಲು ಪ್ರಚೋದನೆ ನೀಡುತ್ತದೆ.
ಕಳೆದ ಕೆಲವು ತಿಂಗಳಿವೆಯಲ್ಲ, ಆ ಸಮಯದಲ್ಲಿ ವಲಸಿಗ ಕಾರ್ಮಿಕರ ಜತೆ ನಿತ್ಯ 16-18 ಗಂಟೆ ಮಾತನಾಡಿದ್ದು, ಅವರ ನೋವನ್ನು ಕೇಳಿಸಿಕೊಂಡಿದ್ದು ನನ್ನ ಪಾಲಿಗೆ ಜೀವನವನ್ನೇ ಬದಲಿಸುವಂಥ ಅನುಭವಗಳನ್ನು ಕೊಟ್ಟಿವೆ. ಅವರು ಬಸ್ಸೇರಿ ತಮ್ಮೂರಿನ ಕಡೆ ಪಯಣಿಸಲು ಸಿದ್ಧರಾದಾಗ, ನನ್ನ ಹೃದಯ ನೆಮ್ಮದಿ ಮತ್ತು ಸಂತೋಷದಿಂದ ತುಳುಕುತ್ತಿತ್ತು. ಅವರ ಮುಖಗಳಲ್ಲಿನ ಮಂದಹಾಸ, ಆನಂದಬಾಷ್ಪಗಳು ನನ್ನ ಜೀವನದ ಅತ್ಯಂತ ವಿಶೇಷ ಅನುಭವಗಳಾಗಿವೆ. ನಾನು ಮುಂಬೈಗೆ ಬಂದದ್ದು, ನಟನಾದದ್ದು ಇದೇ ಉದ್ದೇಶಕ್ಕೇನೋ ಎಂದು ಅನಿಸುತ್ತಿದೆ.
ಈ ಅಲ್ಪ ಅವಧಿಯಲ್ಲೇ ನಾವು ಯಾರಿಗೆಲ್ಲ ಸಹಾಯ ಮಾಡಲು ಸಾಧ್ಯವಾಯಿತೋ ಅವರೆಲ್ಲರೂ ನನ್ನ ಕುಟುಂಬದ ಸದಸ್ಯರಾಗಿ ಬದಲಾಗಿದ್ದಾರೆ. ಈಗ ನನ್ನ ಪರಿವಾರ ಚಿಕ್ಕದಾಗಿಲ್ಲ, ಬಿಹಾರ, ಕರ್ನಾಟಕ, ಜಾರ್ಖಂಡ್, ಉತ್ತರಾಖಂಡ್, ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೂ ವಿಸ್ತರಿಸಿಕೊಂಡಿದೆ.
ನನಗೆ ರಾಜಕೀಯ ಆಕಾಂಕ್ಷೆಗಳಿರುವ ಕಾರಣಕ್ಕೇ ಇದೆಲ್ಲ ಮಾಡುತ್ತಿದ್ದೇನೆ ಎಂಬ ಆರೋಪ ಇದೆೆ. ಒಂದು ವಿಷಯ ಹೇಳುತ್ತೇನೆ- ಮತಗಳಿಗಾಗಿಯೇ ಒಳ್ಳೆಯ ಕೆಲಸ ಮಾಡಬೇಕಿಲ್ಲ. ನನಗೆ ಇಷ್ಟೊಂದು ಜನರ ಪ್ರೀತಿ ದೊರಕುತ್ತಿದೆ, ನನ್ನ ಕುಟುಂಬ ಇಷ್ಟು ವಿಸ್ತಾರವಾಗಿದೆ. ಇದಕ್ಕಿಂತ ಹೆಚ್ಚೇನು ಬಯಸಲಿ?
– ಸೋನು ಸೂದ್, ಬಾಲಿ ವುಡ್ ನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.