ಕಂಗೆಟ್ಟ ಮನಸ್ಸಿಗೆ ಸ್ಪೂರ್ತಿಯ ಚಿಲುಮೆ ಈ ನಮ್ಮ ಜಯರಾಮ್ ಶೆಟ್ರು…!
Team Udayavani, Jul 5, 2018, 11:17 AM IST
ನಾನು ಇವತ್ತು ಹೇಳಲು ಹೊರಟಿರುವುದು ವ್ಯಕ್ತಿಯೊಬ್ಬರ ಸ್ಪೂರ್ತಿಯ ಕಥೆಯನ್ನು. ಇವರ ಬದುಕೇ ಒಂದು ವಿಸ್ಮಯ, ಇವರು ಯೋಚಿಸುವ ರೀತಿ ವಿಭಿನ್ನ, ಈ ವ್ಯಕ್ತಿ ತಾನು ಮಲಗಿರುವ ಸ್ಥಿತಿಯಲ್ಲಿದ್ದರೂ ಪ್ರಪಂಚವನ್ನು ನೋಡುವ ರೀತಿ ತೀರಾ ಭಿನ್ನ… ಇಷ್ಟು ಮುನ್ನುಡಿಯನ್ನು ಕೊಟ್ಟು ನಾನೀಗ ನೇರವಾಗಿ ಈ ವ್ಯಕ್ತಿಯ ಸ್ಪೂರ್ತಿ ಚಿಲುಮೆಯ ಕುರಿತಾಗಿ ಹೇಳುತ್ತೇನೆ.
ಇವರೇ ಕಾವ್ರಾಡಿ ಜಯರಾಮ ಶೆಟ್ರು. ಬಸ್ರೂರಿನ ಕಂಡ್ಲೂರು ಸಮೀಪದ ಕಾವ್ರಾಡಿ ಎಂಬಲ್ಲಿ ಇವರ ಮನೆ ಇದೆ. ಇವರು ಕಳೆದ 26 ವರ್ಷಗಳಿಂದ ಹಾಸಿಗೆಯಲ್ಲಿ ಮಲಗಿದ ಸ್ಥಿತಿಯಲ್ಲೇ ಇದ್ದಾರೆ! ಮಾತ್ರವಲ್ಲ ಇವರ ದೇಹದ ಅರ್ಧ ಭಾಗದ ಸ್ವಾಧೀನವೇ ಇಲ್ಲದ ಸ್ಥಿತಿಯಲ್ಲಿ ಇವರು ಬದುಕುತ್ತಿದ್ದಾರೆ. ಆದರೆ, ಇವರ ಮಾತಿನಲ್ಲಿ ಈ ಯಾವುದೇ ಸಮಸ್ಯೆಗಳು, ನೋವು, ಹತಾಶೆ, ಖಿನ್ನತೆ ಯಾವುದೂ ಕಾಣುವುದೇ ಇಲ್ಲ. ಬದಲಿಗೆ ; ಬಂದದ್ದನ್ನು ಬಂದಹಾಗೆ ಸ್ವೀಕರಿಸಬೇಕು ಎನ್ನುವ ತತ್ವಜ್ಞಾನ ಇವರದು.
ಶೆಟ್ರಿಗೆ ಆದದ್ದಾರೂ ಏನು?
26 ವರ್ಷಗಳ ಹಿಂದೆ, ಅಂದರೆ 1992ನೇ ಇಸವಿಯಲ್ಲಿ ಕೊಂಕಣ ರೈಲ್ವೇ ಹಳಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಶೆಟ್ರು ಗುತ್ತಿಗೆ ಕಂಪೆನಿಯೊಂದರ ಪರವಾಗಿ ಸ್ಪೋಟಕಗಳನ್ನು ಬಳಸಿ ಬಂಡೆಗಳನ್ನು ಒಡೆಯುವ ಕೆಲಸಕ್ಕೆ ಸೇರಿಕೊಂಡಿದ್ದರು. ಮಹಾರಾಷ್ಟ್ರದ ರತ್ನಗಿರಿ ಸಮೀಪ ಬಂಡೆಗಳನ್ನು ಒಡೆದು ಸುರಂಗ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಅದೊಂದು ದಿನ ಇವರು ಬಂಡೆಗಳನ್ನು ಸ್ಫೋಟಿಸಲು ಸ್ಫೋಟಕಗಳನ್ನು ಇಟ್ಟು ಅದು ಸಿಡಿದ ಬಳಿಕ ಆ ಜಾಗಕ್ಕೆ ಹೋದ ಸಂದರ್ಭದಲ್ಲಿ ಅದೆಲ್ಲಿಂದಲೋ ದೊಡ್ಡ ಕಲ್ಲೊಂದು ಇವರ ಮೇಲೆ ಬೀಳುತ್ತದೆ. ಆ ಕಲ್ಲಿನ ದೊಡ್ಡ ತುಂಡು ಬಿದ್ದ ಏಟಿಗೆ ಇವರ ಭುಜ ಭಾಗದ ಮೂಳೆ (ಕಾಲರ್ ಬೋನ್) ಮುರಿತವಾಗುತ್ತದೆ ಮಾತ್ರವಲ್ಲದೆ ಬೆನ್ನುಹುರಿಯ ನರಗಳೂ ಘಾಸಿಗೊಳ್ಳುತ್ತವೆ. ತಕ್ಷಣವೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ ಮತ್ತೆ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಕರೆತರಲಾಗುತ್ತದೆ. ಬೆನ್ನುಹುರಿ ಸ್ವಾಧೀನವಿಲ್ಲದಿರುವ ಸಮಸ್ಯೆ ನಿಧಾನವಾಗಿ ಸರಿಹೋಗಬಹುದೆಂಬ ಭರವಸೆಯನ್ನು ವೈದ್ಯರು ನೀಡಿದರೂ ಮತ್ತೆಂದೂ ಆ ಸಮಸ್ಯೆ ಸರಿಯಾಗುವುದೇ ಇಲ್ಲ. ಈ ರೀತಿಯಲ್ಲಿ, ಹೊಟ್ಟೆಯ ಕೆಳಭಾಗದಿಂದ ದೇಹ ಸ್ವಾಧೀನವಿಲ್ಲದಿರುವ ಮತ್ತು ಸ್ಪರ್ಶಜ್ಞಾನವೂ ಇಲ್ಲದಿರುವ ಸ್ಥಿತಿಯಲ್ಲಿ ಶೆಟ್ಟರು ತಮ್ಮ ಬದುಕಿನ ಕಾಲು ಶತಮಾನವನ್ನು (26 ವರ್ಷ) ಹಾಸಿಗೆಯಲ್ಲೇ ಕಳೆದುಬಿಟ್ಟಿದ್ದಾರೆ.
ಚೇತರಿಕೆಯ ವಿಶ್ವಾಸ ಕಳೆದುಕೊಂಡರು… ಬದುಕಿನ ಉತ್ಸಾಹವನ್ನಲ್ಲ..!!
ಈ ಘಟನೆ ನಡೆದು ಸುಮಾರು 5-6 ವರ್ಷಗಳವರೆಗೆ ತಮ್ಮ ಆರೋಗ್ಯ ಸ್ಥಿತಿ ಸುಧಾರಿಸಬಹುದೆನ್ನುವ ವಿಶ್ವಾಸ ಜಯರಾಮ ಶೆಟ್ಟಿ ಮತ್ತು ಅವರ ಕುಟುಂಬ ಸದಸ್ಯರಿಗೆ ಇತ್ತು. ಆದರೆ ಆ ಬಳಿಕ ಇದು ಇನ್ನು ಸರಿಹೋಗದು ಎನ್ನವುದು ಇವರಿಗೆ ಮನವರಿಕೆಯಾಗಿಬಿಟ್ಟಿತ್ತು. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಸಮಸ್ಯೆಗೊಳಗಾದ ವ್ಯಕ್ತಿಗಳು ಬದುಕುವ ಆಸೆಯನ್ನೇ ಕೈಬಿಡುತ್ತಾರೆ, ಹತಾಶೆಗೆ ಒಳಗಾಗಿ ಖಿನ್ನತೆಗೆ ಜಾರುತ್ತಾರೆ. ಮನೆಮಂದಿಗೆ ಹೊರೆಯಾದೆವಲ್ಲಾ ಎಂದು ನೊಂದುಕೊಳ್ಳುತ್ತಾರೆ. ಆದರೆ ಶೆಟ್ಟರ ಬದುಕಿನಲ್ಲಿ ಇದ್ಯಾವುದಕ್ಕೂ ಜಾಗವೇ ಇಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅವರೆದುರು ಕುಳಿತು ಮಾತನಾಡುತ್ತಿರುವ ವ್ಯಕ್ತಿಯ ಆತ್ಮವಿಶ್ವಾಸಕ್ಕೇ ಸವಾಲೆಸೆಯುವ ರೀತಿಯಲ್ಲಿ ಶೆಟ್ರು ಮಾತನಾಡುತ್ತಾರೆ. ಈ ಕಾರಣಕ್ಕಾಗಿಯೇ ನಾನು ಹೆಳಿದ್ದು ಇವರೊಂದು ಆತ್ಮವಿಶ್ವಾಸದ ಗಣಿ ಎಂದು!
‘ಬದುಕಿನಲ್ಲಿ ಬಂದದ್ದನ್ನು ಬಂದ ಹಾಗೇ ಸ್ವೀಕರಿಸಿದ್ದೇನೆ…’
‘ಬದುಕಿನಲ್ಲಿ ಬಂದದ್ದನ್ನು ಬಂದ ಹಾಗೆ ಸ್ವೀಕರಿಸಬೇಕು…’ಎನ್ನುವ ಸಲಹೆಯನ್ನು ನಾವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಯಾರಿಗಾದರೂ ನೀಡಿಯೇ ಇರುತ್ತೇವೆ. ಆದರೆ ಸಮಸ್ಯೆಗಳೆಂಬುದು ನಮ್ಮ ಕಾಲಬುಡಕ್ಕೇ ಬಂದಾಗ ಕೈಚೆಲ್ಲಿ ಕುಳಿತುಕೊಳ್ಳುತ್ತೇವೆ, ಅದನ್ನ ಕನಿಷ್ಠ ಎದುರಿಸುವ ಪ್ರಯತ್ನವನ್ನೂ ಮಾಡುವುದಿಲ್ಲ, ಬದಲಾಗಿ ಆತ್ಮಹತ್ಯೆಯಂತಹ ದುಡುಕು ನಿರ್ಧಾರಗಳನ್ನು ತೆಗೆದಿಕೊಳ್ಳುವವರನ್ನೂ ನಾವು ನೋಡಿದ್ದೇವೆ. ಜಯರಾಮ ಶೆಟ್ರು ಈ ಎಲ್ಲಾ ಹಂತವನ್ನು ಮೀರಿ ನಿಂತಿದ್ದಾರೆ. ಅವರು ಹೇಳುವ ಆತ್ಮವಿಶ್ವಾಸ ತುಂಬಿದ ಮಾತುಗಳ ಎದುರಿಗಿದ್ದವರ ಸಮಾಧಾನಕ್ಕೆಂದು ಹೇಳುವುದಲ್ಲ, ಬದಲಾಗಿ ನಾನಿರುವುದೇ ಹೀಗೆ, ಈ ಬದುಕು ನನಗೆ ಕೊಟ್ಟಿರುವುದು ಇದನ್ನೇ ಎಂಬ ವಾಸ್ತವವನ್ನು ಅವರು ದೃಢ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದಾರೆ. ಇದನ್ನೆಲ್ಲಾ ನಾನಿಲ್ಲಿ ಬರೆದ ಮಾತ್ರಕ್ಕೆ ನಿಮಗೆಲ್ಲಾ ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟಕರವಾದೀತು ; ಆದರೆ ಒಂದು ಸಲ ಇವರ ಹತ್ತಿರ ನೀವು ಮಾತನಾಡಿದರೆಂದಾದರೆ ಅಥವಾ ಇವರೆದುರಿಗೆ ಹತ್ತುನಿಮಿಷಗಳ ಕಾಲ ಕುಳಿತಿರೆಂದಾದರೆ ನನ್ನ ಮಾತಿನ ಅರ್ಥ ನಿಮಗಾದೀತು…! ಹಾಗೆಂದು ಈ ರೀತಿಯ ಗಂಭೀರ ಪರಿಸ್ಥಿತಿಯಲ್ಲಿದ್ದರೂ ಜಯರಾಮ ಶೆಟ್ಟರ ಆತ್ಮವಿಶ್ವಾಸವನ್ನು ಕುಗ್ಗಿಸಲು ಬಿಡದ ಅಂಶಗಳೆಂದರೆ, ಪುಸ್ತಕಗಳ ಓದು, 95 ವರ್ಷ ಪ್ರಾಯದ ಅಮ್ಮ ಸೇರಿದಂತೆ ಕುಟುಂಬದ ಇತರೇ ಸದಸ್ಯರ ನಿರಂತರ ಬೆಂಬಲ, ಸ್ನೇಹಿತ ವರ್ಗದವರ ಸಹಕಾರ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಅವರಲ್ಲಿರುವ ಮನೋಸಾಮರ್ಥ್ಯ ಅಥವಾ ವಿಲ್ ಪವರ್.
ಸಾಮಾನ್ಯ ವಿಷಯವಲ್ಲ…!
ತನ್ನಷ್ಟಕ್ಕೆ ತಾನೇ ದೇಹವನ್ನು ಅಲುಗಾಡಿಸಲಾಗದಿರುವ ಸ್ಥಿತಿ, ಕಳೆದ 26 ವರ್ಷಗಳಿಂದ ಎರಡೇ ಭಂಗಿಗಳಲ್ಲಿ ಹಾಸಿಗೆಯಲ್ಲಿ, ನೀರು ಕುಡಿಯಬೇಕೆಂದರೂ ಇನ್ನೊಬ್ಬರನ್ನು ಅವಲಂಬಿಸಬೇಕಾದ ಸ್ಥಿತಿ, ಆಗಾಗ ಕಾಡುವ ಆರೋಗ್ಯ ಸಮಸ್ಯೆ, ಕಿಟಿಕಿಯಿಂದಲೇ ತನ್ನ ಸುತ್ತಲಿನ ಪರಿಸರವನ್ನು ನೋಡಬೇಕಾದ ಅನಿವಾರ್ಯತೆ, ಕೇವಲ ಮಾಧ್ಯಮಗಳ ಮೂಲಕವೇ ಪ್ರಪಂಚ ವ್ಯವಹಾರವನ್ನು ತಿಳಿದುಕೊಳ್ಳಬೇಕಾಗಿರುವ ಸ್ಥಿತಿ… ಒಬ್ಬ ಮನುಷ್ಯನನ್ನು ದಾರುಣವಾಗಿ ಕಂಗೆಡಿಸಲು ಇನ್ನೇನು ಬೇಕು? ಆದರೆ ಇವನ್ನೆಲ್ಲಾ ಮೆಟ್ಟಿನಿಂತು, ‘ಈ ಬದುಕು ದೊಡ್ಡದು… ಬಂದದ್ದನ್ನು ಬಂದ ಹಾಗೆಯೇ ಸ್ವೀಕರಿಸದ್ದೇನೆ…’ ಎನ್ನುವ ಮಾತನ್ನು ಹೇಳಬೇಕಾದರೆ ಆ ವ್ಯಕ್ತಿಯ ಮನೋಬಲ ಎಷ್ಟಿರಬೇಡ, ಆಲೋಚನೆ ಮಾಡಿ…!
ಜಯರಾಮ ಶೆಟ್ರ ಬಗ್ಗೆ ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳಲ್ಲಿ ಈಗಾಗಲೇ ಹಲವಾರು ವರದಿಗಳು ಬಂದಿವೆ. ಇದರಿಂದ ಅವರಿಗೆ ಒಂದಷ್ಟು ನೆರವೂ ದೊರಕಿದೆ. ಸಹೃದಯರ ಸಹಕಾರವೂ ಇದೆ. ತನಗೆ ಸಿಕ್ಕಿದ ಧನಸಹಕಾರದ ನೆರವಿನಿಂದ ಒಂದು ಮಾರುತಿ ಅಮ್ನಿ ವಾಹನವನ್ನು ಖರೀದಿಸಿ ಅದನ್ನು ತನ್ನ ಗೆಳೆಯನ ನೆರವಿನಿಂದ ಬಾಡಿಗೆ ಬಿಟ್ಟಿರುವ ಇವರು ತನ್ನ ಔಷಧಿಗೆ ಅಗತ್ಯವಿರುವ ದುಡ್ಡನ್ನು ದುಡಿಯುತ್ತಿದ್ದಾರೆ. ಆದರೆ ತನ್ನ ಒಂಟಿತನವನ್ನು ಮೆಟ್ಟಿ ನಿಲ್ಲಲು, ಮನಸ್ಸಿನಲ್ಲಿ ನೆಗೆಟಿವ್ ಆಲೋಚನೆಗಳು ಸುಳಿಯದಂತಿರಲು ಪುಸ್ತಕಗಳು, ಟಿ.ವಿ., ಗೆಳೆಯರೊಂದಿಗೆ ಮಾತುಕತೆ ಸಹಕಾರಿಯಾಗಿದೆ. ಮಾತ್ರವಲ್ಲದೇ, ಸಣ್ಣಪುಟ್ಟ ವಿಚಾರಗಳಿಗೆಲ್ಲಾ ತಮ್ಮ ಬದುಕನ್ನು ದುರಂತ ಅಂತ್ಯಗೊಳಿಸುತ್ತಿರುವವರ ಕುರಿತು ಶೆಟ್ರು ಬೇಜಾರು ಮಾಡಿಕೊಳ್ಳುತ್ತಾರೆ. ಸಣ್ಣಪುಟ್ಟ ಸೋಲುಗಳಿಗೂ ಕಂಗೆಡುವ ಯುವಜನಾಂಗಕ್ಕೆ ಅವರು ‘ಬದುಕು ದೊಡ್ಡದೆನ್ನುವ…’ ಕಿವಿಮಾತು ಹೇಳುತ್ತಾರೆ. 26 ವರ್ಷಗಳಿಂದ ಒಬ್ಬ ವ್ಯಕ್ತಿ ಮಲಗಿದ ಸ್ಥಿತಿಯಲ್ಲಿದ್ದಾರೆ ಎಂಬುದು ಊಹಿಸಲೂ ಆಗದಿರುವ ಸಂಗತಿ. ಈ ರೀತಿಯ ವ್ಯಕ್ತಿಗಳು ನಮ್ಮ ನಿಮ್ಮ ನಡುವೆ ಅನೇಕರಿರಬಹುದು. ಎಲ್ಲರೂ ಶೆಟ್ಟರ ತರಹದ ಮನೋಬಲ ಇರುವವರೇನಲ್ಲ. ಆದ್ದರಿಂದ ಈ ರೀತಿಯ ಸಮಸ್ಯೆಗಳಿಗೊಳಗಾಗಿರುವ ವ್ಯಕ್ತಿಗಳಿದ್ದರೆ ಅವರಿಗೆ ನಮ್ಮ ಸಾಂತ್ವನ, ಸಹಾಯದ ಅಗತ್ಯವಿರಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಬದುಕಿನಲ್ಲೇ ನಮಗೆ ಎಂದಾದರೂ ನಿರಾಶೆ, ಹತಾಶೆ ಆವರಿಸಿಕೊಂಡಾಗ, ಎಲ್ಲವೂ ಮುಗಿದುಹೋಯಿತು ಎನ್ನುವ ಯೋಚನೆಗೆ ನಾವು ಬಿದ್ದಾಗ ದಯವಿಟ್ಟು ಜಯರಾಮ ಶೆಟ್ಟರನ್ನೊಮ್ಮೆ ನೆನಪಿಸಿಕೊಳ್ಳೋಣ, ಅವರ ಮನೋಬಲವನ್ನೊಮ್ಮೆ ನಮ್ಮಲ್ಲಿ ಆವಾಹಿಸಿಕೊಳ್ಳೋಣ… ಯಾಕೆಂದರೆ ಈ ಬದುಕು ದೊಡ್ಡದು ; ಮಾತ್ರವಲ್ಲ ಯಾರದ್ದೇ ಬದುಕು ಬದುಕಲಾರದಷ್ಟು ಕೆಟ್ಟದಾಗಿರುವುದಿಲ್ಲ…!!
– ಹರಿಪ್ರಸಾದ್ ನೆಲ್ಯಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.