ಹಳ್ಳಿಗನೊಬ್ಬ ವಿಶ್ವರೂಪಿಯಾದ ಸಮಾಚಾರ
Team Udayavani, Jun 25, 2019, 5:06 PM IST
ಪುತಿನ ಅವರ ಗೋಕುಲ ನಿರ್ಗಮನದ ಬಗ್ಗೆ ಚಿಂತಿಸದೆ ಕೆ. ವಿ. ಸುಬ್ಬಣ್ಣನವರ ಬಗ್ಗೆ ಯೋಚಿಸಲಾಗದು. ಸ್ಮತಿ ಅವಶೇಷವಾಗಿದ್ದ ಗೋಕುಲ ನಿರ್ಗಮನವನ್ನು ಮತ್ತೆ ವರ್ತಮಾನದ ಚಾಲ್ತಿಗೆ ಆವಾಹಿಸಿದವರಲ್ಲಿ ಸುಬ್ಬಣ್ಣ ಮುಖ್ಯರು. ಅವರಿಗೆ ಗೋಕುಲ ನಿರ್ಗಮನ ಆತ್ಮವನ್ನು ನೋಡಿಕೊಳ್ಳುವ ಕನ್ನಡಿಯಾಗಿರಬೇಕೆಂದು ನನಗೆ ಯಾವಾಗಲೂ ಅನಿಸುವುದು. ಬೋಧಿಯ ನಂತರ ಕಪಿಲವಸ್ತುವಿಗೆ ಬಂದ ಬುದ್ಧನಂತೆ ಗೋಕುಲದ ಕೃಷ್ಣ ತನ್ನ ಹಳ್ಳಿಗೆ ಹಿಂದಿರುಗಲಿಲ್ಲ, ನಿಜ. ಆದರೆ, ಆ ಹಳ್ಳಿಯನ್ನು ಅವನ ವ್ಯಕ್ತಿತ್ವ ತನ್ನೊಳಗೆ ಅಳವಡಿಸಿಕೊಂಡುಬಿಟ್ಟಿತ್ತು. ಕೃಷ್ಣನೆಂಬ ಗೊಲ್ಲರ ಹುಡುಗ ಇಡೀ ವಿಶ್ವವನ್ನೇ ತನ್ನೊಳಗೆ ಆವಾಹಿಸಿಕೊಂಡುಬಿಟ್ಟ. ವಿಶ್ವರೂಪವೆನ್ನುವುದು ಅದರ ಸಾಂಕೇತಿಕ ಗ್ರಹಿಕೆಯಷ್ಟೆ. ಸಮಾಜವನ್ನು ಪ್ರಕೃತಿ ಸಮಸ್ತದೊಂದಿಗೆ ಗುಳುಂ ಮಾಡಿಕೊಳ್ಳುವ ಸುಬ್ಬಣ್ಣನ ಪ್ರವೃತ್ತಿ ಮತ್ತೂಂದು ಬಗೆಯ ವಿಶ್ವರೂಪದ ಪ್ರಸಕ್ತಿಯೇ ಆಗಿದೆ. ದಾಸರಲ್ಲಿ ಬಯಲು ಆಲಯದೊಳಗೊ ಆಲಯವು ಬಯಲೊಳಗೊ ಎಂಬ ಮಹಾವಾಕ್ಯವೊಂದುಂಟು. ಕೃಷ್ಣ ಬಾಲ್ಯದಲ್ಲಿ ಬಾಯೊಳಗೆ ಧರಿತ್ರಿಯನ್ನು ಧರಿಸಿದ. ಪ್ರೌಢನಾದಾಗ ಧರಿತ್ರಿಯೊಳಗೆ ತಾನು ಅನೂನವಾಗಿ ಕರಗಿಹೋದ. ಝೆನ್ ತತ್ವದಲ್ಲಿ ಬರುವ ಪ್ರಕೃತಿಯಲ್ಲಿ ಸಮರಸಗೊಳ್ಳುವುದೆಂದರೆ ಇದೇ ಅಲ್ಲವೇ? ವಿಶ್ವರೂಪವೆನ್ನುವುದು ಒಂದು ಸ್ಥಿತಿಯಲ್ಲ; ಅದೊಂದು ಸಾಧನೆ.
ಸಾಹಿತ್ಯವೊಂದೇ ಆಸಕ್ತಿಯಾಗಿ ಸಾಹಿತ್ಯೋಪಜೀವಿಯಾಗಿ ನಮ್ಮಲ್ಲಿ ಅನೇಕರು ಬದುಕುವರು. ಸಾಹಿತ್ಯ ಬರೆದು, ಸಾಹಿತ್ಯ ಮಾತಾಡಿ, ಸಾಹಿತ್ಯವನ್ನೇ ಸದಾ ತೇಗುವಂಥವರು. ಕೃಷ್ಣ ಏಕಾಸಕ್ತಿಯ ಪೈಕಿಯಲ್ಲ. ಅವನಿಗೆ ಕೊಳಲು ಬೇಕು. ಗೋಪಾಲನೆ ಬೇಕು. ಗೊಲ್ಲ ಬಾಲರ ಗೆಳೆತನ ಬೇಕು. ಸಮಾಜದ ದುಷ್ಟತೆಯ ವಿರುದ್ಧ ಹೋರಾಟವೂ ಬೇಕು. ಅಪಾಮಾರ್ಗದಲ್ಲಿರುವ ರಾಜಕೀಯವನ್ನು ಸರಿದಾರಿಗೆ ತರುವ ರಾಜಕಾರಣವೂ ಬೇಕು. ಐಂದ್ರಿಕ ಜಗತ್ತಲ್ಲಿ ಅದನ್ನು ಮೀರಿ ಸೆಳೆಯುವ ಅತೀಂದ್ರಿ ಯವೂ ಬೇಕು. ಯೋಗ- ಪ್ರಯೋಗ ಗಳು ಅವನಲ್ಲಿ ದ್ವಿದಳವಾಗಿ ಒಡೆದು ಕೊಳ್ಳುವುದಿಲ್ಲ. ಸುಬ್ಬಣ್ಣನವರ ಬಗ್ಗೆಯೂ ನನಗೆ ಹೀಗೇ ಯೋಚಿಸಬೇಕು ಅನ್ನಿಸುತ್ತದೆ. ಅವರ ಆಸಕ್ತಿ ಹಲವು. ಸಾಹಿತ್ಯ, ಪುಸ್ತಕ ಪ್ರಕಟಣೆ, ರಂಗಭೂಮಿ, ಅಡಕೆ ಬೆಳೆ, ರಾಜಕಾರಣ, ಸಿನಿಮಾ, ಗಾಂಧಿ- ಅಂಬೇಡ್ಕರ್ ಎಂಬ ಪೂರಕದ್ವಂದ್ವದ ಚಿಂತನೆ, ಸಂಘಟನೆ, ಮೇಲ್ವರ್ಗ ಎಂದು ಕರೆಸಿಕೊಂಡವರು ವಿನಯ ಸಾಧಿಸಬೇಕೆಂಬ ಹಠ, ತನ್ನ ಹಳ್ಳಿಗೆ ಜಗತ್ತನ್ನೇ ಆವಾಹಿಸಬೇಕೆಂಬ ಹುಚ್ಚು. ಇದೊಂದು ಬಗೆಯ ವಿಶ್ವರೂಪ ಸಾಧನೆಯೇ… ಧರಿತ್ರಿಯನ್ನು- ಸುಲಭದ ಮಾತಲ್ಲಿ ಸಮಾಜವನ್ನು- ತನ್ನೊಳಗೆ ತಕ್ಕೊಂಡು, ಅದರ ಬಲೆಯಿಂದ ಪಡೆದ ಸಂಕೀರ್ಣ ಅನುಭವ ಪ್ರಪಂಚದಿಂದ ಆತ್ಮವನ್ನು ತಿದ್ದಿಕೊಳ್ಳುವ ಕ್ರಮ. ತನ್ನ ಅನುಭವವನ್ನು ತನ್ನ ಸ್ವಂತದ್ದೇ ಆದ ಭಾಷೆಯ ಮೂಲಕ ಆತ್ಮಕ್ಕೆ ಸೋಸಿಕೊಳ್ಳುವ ಆಖ್ಯಾನ.
ಸುಬ್ಬಣ್ಣ ಬದುಕಿದ ಪರಿ, ತನ್ನ ಆಳದನುಭವಕ್ಕೆ ಮಾತಿನ ದಾಂಪತ್ಯ ದೊರಕಿಸಿದ ಪರಿ, ಸಾಹಿತ್ಯ, ರಂಗಭೂಮಿ, ಸಿನಿಮಾ, ರಾಜಕಾರಣ, ಸಂಘಟನೆ, ಚಲುವಳಿ, ವೃತ್ತಿ, ಪ್ರವೃತ್ತಿ… ಇದೊಂದು ಪ್ರತ್ಯೇಕಗೊಳ್ಳದ ಅಖಂಡ ಎರಕ. ಹೀಗೆ ಬಹುಳಾಸಕ್ತಿಗಳ ಸಮೇತ ಸುಬ್ಬಣ್ಣ ಬದುಕಿದ್ದು. ಜಗತ್ತಿನ ಧ್ಯಾನದಲ್ಲಿರುವ ಬೆಟ್ಟಗೋಡಿನ ಶ್ರಮಣನಂತೆ. ಅವರು ತಮ್ಮ ಸ್ವಾನುಭವದ ಅನೇಕ ಸಂಕಥನಗಳನ್ನು ಭಾಷೆಯ ಮೂಲಕ ಬಹುಕಾಲದಿಂದಲೂ ಅಭಿವ್ಯಕ್ತಿಸುತ್ತ ಬಂದಿರುವರು. ಅವರು ಕಾಲಕಾಲಕ್ಕೆ ಬರೆದ ಶ್ರೇಷ್ಠತೆಯ ವ್ಯಸನ, ಗೋಕುಲನಿರ್ಗಮನ, ಕುವೆಂಪುಗೆ ಪುಟ್ಟ ಕನ್ನಡಿ, ಕವಿರಾಜಮಾರ್ಗವು ನಿರ್ಮಿಸಿದ ಕನ್ನಡ ಜಗತ್ತು, ಬಿ.ವಿ. ಕಾರಂತ : ಒಂದು ರಂಗಪ್ರಯೋಗ, ಈ ಶತಮಾನದ ಹೊಸ ಭಾಷೆ ಸಿನಿಮಾ, ಪಂಪನ ಕವಿತೆ-ಅನುಸಂಧಾನದ ಮಾರ್ಗ, ಅಂಬೇಡ್ಕರ್ ಮತ್ತು ಗಾಂಧಿ ಮುಂತಾದ ಪ್ರಬಂಧಗಳು (ವಿಮಶಾì ಲೇಖನಗಳು ಎನ್ನಲು ಏಕೋ ಹಿಂಜರಿವೆ) ನನ್ನ ಒಳಜಗತ್ತನ್ನು ವಿಸ್ತರಿಸಿವೆ. ಅವರೊಂದಿಗೆ ಸಲುಗೆಯ ಸ್ನೇಹ ನನಗೆ ಸಾಧ್ಯವಿತ್ತು. ತಾನು ದೊಡ್ಡವನೆಂದು ತೋರಿಸಿಕೊಳ್ಳದ ದೊಡ್ಡ ಮನುಷ್ಯರಾಗಿದ್ದರು ಸುಬ್ಬಣ್ಣ. ನಾನು ಎಂಎ ವಿದ್ಯಾರ್ಥಿಯಾಗಿದ್ದಾಗ ಡಾ| ಚಿದಾನಂದಮೂರ್ತಿಗಳೊಂದಿಗೆ, ನನ್ನ ಸಹಪಾಠಿ ಮಿತ್ರರೊಂದಿಗೆ ಹೆಗ್ಗೊಡಿಗೆ ಭೇಟ್ಟಿ ಕೊಟ್ಟದ್ದು ಸುಬ್ಬಣ್ಣನವರೊಂದಿಗೆ ನನ್ನ ಮೊದಲ ಮುಖಾಮುಖೀ. ತುಂಡಂಗಿಯಲ್ಲಿದ್ದ ಸುಬ್ಬಣ್ಣ ನಮ್ಮನ್ನು ನೀನಾಸಂ ರಂಗಮಂದಿರಕ್ಕೆ ಕರೆದೊಯ್ದು ಅದರ ಮೂಲೆ ಮುಡುಕುಗಳನ್ನೆಲ್ಲ ಆಪ್ತವಾಗಿ ತೋರಿಸಿ ತೋರಿಸಿ ವಿವರಿಸಿದ್ದನ್ನು ನಾನು ಮರೆಯಲಾರೆ. ಮುಂದೆ ಕವಿತೆಯ ಹುಚ್ಚಲ್ಲಿ ನನ್ನ ಕಾವ್ಯಸಂಗ್ರಹಗಳನ್ನು ನಾನೇ ಪ್ರಕಟಿಸಿ ಕೈಸುಟ್ಟುಕೊಂಡಾಗ, ಅವುಗಳ ವಿತರಣೆಯ ಜವಾಬ್ದಾರಿ ಹೊತ್ತು, ಸಹಕರಿಸಿದವರು, ನನ್ನ ಋತುವಿಲಾಸವನ್ನು ಮುಕ್ತಕಂಠದಿಂದ ಪ್ರಶಂಸಿಸಿದವರು, ಎಷ್ಟೊಂದು ಮುಗಿಲು ಸಾನೆಟ್ ಸಂಗ್ರಹವನ್ನು ಬಹುವಾಗಿ ಮೆಚ್ಚಿ ಪ್ರಕಟಿಸಿದವರು. ಎಷ್ಟೊಂದು ಮುಗಿಲು ಪ್ರಕಟಣೆಯ ವೇಳೆ ನಡೆದ ಒಂದು ಘಟನೆಯನ್ನು ಇಲ್ಲಿ ವಿವರಿಸಲೇ ಬೇಕು. ನಾನು ಮೊದಲು ಹಸ್ತಪ್ರತಿಯನ್ನು ಸುಬ್ಬಣ್ಣನವರಿಗೆ ಕಳುಹಿಸಿ, “ಪ್ರಕಟಣೆ ಸಾಧ್ಯವಿದ್ದರೆ ಒಂದು ಕಾಗದ ಬರೆಯಿರಿ’ ಎಂದು ಬರೆದಿದ್ದೆ. ತಿಂಗಳೊಳಗೇ ಸುಬ್ಬಣ್ಣನ ಕಾಗದ ಬಂತು. “ನಾನೂ, ಅಕ್ಷರ ಇಬ್ಬರೂ ನಿಮ್ಮ ಸಾನೆಟ್ಟುಗಳನ್ನು ಓದಿ ಸಂತೋಷಪಟ್ಟೆವು. ಅದನ್ನು ಬೇಗ ಅಚ್ಚುಹಾಕುವೆ!’ ಈ ಪತ್ರ ಬಂದು ಹದಿನೈದು ದಿನಗಳಾಗಿಲ್ಲ. ಸುಬ್ಬಣ್ಣನವರಿಂದ ಇನ್ನೊಂದು ಪತ್ರ. “ಎಚ್ಚೆಸ್ವಿ, ನಿಮ್ಮ ಸಾನೆಟ್ಟುಗಳನ್ನು ಪ್ರಕಟಿಸುವೆನೆಂದು ಬರೆಯಲು ಮರೆತೇ ಹೋಗಿತ್ತು. ಬೇಗ ಅದನ್ನು ಹೊರತರುತ್ತೇನೆ. ಕವಿತೆಗಳು ತುಂಬ ಇಷ್ಟ ಆಗಿವೆ! ಕಾಗದ ತಡವಾಗಿ ಬರೆದದ್ದಕ್ಕೆ ಬೇಜಾರಿಲ್ಲ ತಾನೆ?’ ಇದು ಸುಬ್ಬಣ್ಣನ ಸ್ವಭಾವ. ತಾವು ಕಾಗದ ಬರೆದದ್ದು ಅವರಿಗೆ ಮರೆತು ಹೋಗಿತ್ತು. ಮತ್ತೂಂದು ಕಾಗದ ಬರೆದು ನನಗೆ ಸಮಾಧಾನದ ಮಾತು ಹೇಳಿದ್ದರು.
ಸುಬ್ಬಣ್ಣ ಸಾಹಿತ್ಯದ ಬಗ್ಗೆ ಬರೆದಾಗಲೂ ಕೇವಲ ಸಾಹಿತ್ಯದ ಬಗ್ಗೆ ಬರೆಯುತ್ತಿರಲಿಲ್ಲ. ಅದೊಂದು ನಿಬಿಡವಾದ ಸ್ಮತಿಗಳ ಶೋಧನೆಯಾಗಿರುತ್ತಿತ್ತು. ಪಂಪನ ಕಾಲ, ಆವತ್ತಿನ ರಾಜಕೀಯ ಒಳಸುಳಿಗಳು, ಧಾರ್ಮಿಕ ಒತ್ತಡಗಳು, ಅವುಗಳನ್ನು ನಿರಾಳವಾಗಿ ವಿಸ್ತಾರವಾಗಿ ದಾಖಲಿಸಿ, ಈವತ್ತಿನ ತುರ್ತುಗಳನ್ನು ಗಮನಿಸುತ್ತ, ಪಂಪನ ಕಾವ್ಯಗಳನ್ನು ಅರ್ಥೈಸುವ ಪ್ರಯತ್ನ ಮಾಡುತ್ತಿದ್ದರು. ಸಾಹಿತ್ಯದೊಂದಿಗೆ ಬೇರೇನೂ ಬೆರೆಯತಲ್ಲದ್ದಲ್ಲ ಎಂಬ ಶುದ್ಧಮಡಿಯ ಪ್ರವೃತ್ತಿ ಅವರಿಗೆ ಹಿಡಿಸುತ್ತಿರಲಿಲ್ಲ. ಟಿ. ಪಿ. ಅಶೋಕ ಹೇಳುವಂತೆ ಅದು ಕೃತಿಕೇಂದ್ರಿತವೂ ಅಲ್ಲ, ಕವಿಕೇಂದ್ರಿತವೂ ಅಲ್ಲ, ವಿಮರ್ಶೆಯ ಎಲ್ಲ ಪ್ರಚಲಿತ ಪಟ್ಟುಗಳನ್ನೂ ನಿರಾಕರಿಸಿ, ಈ ಒಂದು ಕೃತಿ ತನ್ನ ಸಂದರ್ಭದೊಂದಿಗೆ ಓದುಗನ ಮೇಲೆ ಮಾಡುವ ಪರಿಣಾಮವೇನು, ಅದು ಕೊಡುವ ಅನುಭವದ ಮೌಲ್ಯವೇನು ಎಂದು ಅವರ ಪ್ರಬಂಧಗಳು ಚರ್ಚಿಸುತ್ತವೆ.
ಪಂಪನ ಮಹೋನ್ನತಿ ಯಾತರಲ್ಲಿದೆ ಎಂಬ ಮೂಲಭೂತ ಪ್ರಶ್ನೆಯನ್ನು ಸುಬ್ಬಣ್ಣ ತಮ್ಮ ಲೇಖನದಲ್ಲಿ ಎದುರಿಸುತ್ತಾರೆ. ಕಥಾಸಂಗ್ರಹಣ ಕೌಶಲದಲ್ಲೇ? ಅನುವಾದದ ಸಾಮರ್ಥ್ಯ ದಲ್ಲೇ? ವರ್ಣನೆ, ಸೂಕ್ತಿಗಳು, ಪಾತ್ರಸನ್ನಿವೇಶ ನಿರ್ಮಾಣದಲ್ಲೇ? ಬಹಳಷ್ಟು ವಿಮರ್ಶಕರ ಟೀಕೆಗೆ ಕಾರಣವಾಗಿರುವ ಪುರಾಣ ಮತ್ತು ವರ್ತಮಾನಗಳನ್ನು ಅಭಿನ್ನವಾಗಿ ಬೆಸೆಯುವ ಪಂಪನ ತಗುಳುcವ ಸಂವಿಧಾನವೇ ಪಂಪನ ಮಹೋನ್ನತಿಗೆ ಕಾರಣವೆನ್ನುವುದು ಸುಬ್ಬಣ್ಣನವರ ಖಚಿತ ನಿಲುವು. ಪಂಪ ಯೋಜಿಸಿದ್ದು ಸ್ಮತಿಯನ್ನು ಕೈವಶ ಮಾಡಿಕೊಳ್ಳುವ ಅಪೂರ್ವಯತ್ನವನ್ನು. ಪುತಿನ ಗೋಕುಲ ನಿರ್ಗಮನದಲ್ಲಿ ಮಾಡಿದ್ದೂ ಅದನ್ನೇ. ಕೀರ್ತಿನಾಥ ಕುರ್ತಕೋಟಿಯವರ ಪ್ರತ್ಯಭಿಜ್ಞಾನ ಎಂಬ ಕಲ್ಪನೆ ಇದೇ ಸಂಗತಿಯನ್ನು ಬೇರೆ ಪರಿಭಾಷೆಯಲ್ಲಿ ಕಥಿಸುತ್ತ¤ ಇದೆ. ತಾವು ಒಲಿದಂತೆ ಹಾಡುವವರು ಸುಬ್ಬಣ್ಣ. ಯಾರಂತೆ ಎಂದರೆ ಊರಂತೆ ಎನ್ನುವವರಲ್ಲ. ಹಾಗಂತ ಪ್ರತ್ಯೇಕತೆ ಅವರ ಹಠವಲ್ಲ. ಕೃತಿಯನ್ನು ಇತಿಹಾಸದೊಂದಿಗೆ ಸಮಗ್ರವಾಗಿ ನೋಡುವ ಆಶಯದಿಂದಲೇ ಸುಬ್ಬಣ್ಣನವರ ಸೋಪಜ್ಞವಾದ ಅನೇಕ ಲೇಖನಗಳು ಉದ್ಭವಿಸಿವೆ.
ಕವಿರಾಜಮಾರ್ಗದ ಬಗ್ಗೆ ಸುಬ್ಬಣ್ಣ ಬರೆದ ಘನವಾದ ಪ್ರಬಂಧ (ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು) ನನಗೀಗ ನೆನಪಾಗುತ್ತ ಇದೆ. ಕನ್ನಡ ಜಗತ್ತು ಎಂಬುದು ಸುಬ್ಬಣ್ಣನವರ ಈ ಪ್ರಬಂಧದ ಕೇಂದ್ರ ಪ್ರತಿಮೆ. ಕನ್ನಡ ಚಿಕ್ಕದು. ಆದರೆ, ಜಗತ್ತನ್ನೇ ಅದು ವಿಲೀಕರಣ ಮಾಡಿಕೊಂಡಿದೆ. ಈ ಭೂಭಾಗದಲ್ಲಿ ದೀರ್ಘ ಕಾಲದಿಂದಲೂ ಅನೇಕಾನೇಕ ಜನಾಂಗ-ಕುಲ-ಬುಡಕಟ್ಟುಗಳೂ, ಅನೇಕ ಭಾಷೆಗಳೂ ಅಂತರ್ಗತಗೊಂಡಿವೆ. ಅನೇಕಧರ್ಮಗಳು ಬಾಳಿಬದುಕಿವೆ. ಬೌದ್ಧ, ಜೈನ, ಶೈವ, ಸ್ಮಾರ್ತ, ವೈಷ್ಣವ, ತಾಂತ್ರಿಕ, ಭಕ್ತಿ ಪಂಥಗಳಿಂದಲೂ, ಇಸ್ಲಾಮ…, ಸೂಫಿ, ಕ್ರೈಸ್ತ ಮುಂತಾದ ವಿದೇಶೀ ಧರ್ಮಗಳಿಂದಲೂ ಕನ್ನಡ ಜಾನಪದವು ಪ್ರಭಾವಿತವಾಗಿದೆ. ಹಾಗಾಗಿ ಸುಬ್ಬಣ್ಣ ಹೇಳುತ್ತಾರೆ: ನಾವು ವಿಶ್ವ ಮಾನವರು; ಕನ್ನಡ ವಿಶ್ವ ಭಾಷೆ!
ವಸುಧಾ-ವಲಯ-ವಿಶದ-ವಿಲೀನ-ವಿಷಯ-ವಿಶೇಷಂ ಎಂಬ ಭಾಷಾ ಪ್ರತಿಮೆಯ ವಿಶ್ಲೇಷಣೆಯಿಂದ, ಕನ್ನಡವೆಂಬುದು ಕೇವಲ ಭೌಗೋಳಿಕ ಘಟಕವಷ್ಟೇ ಅಲ್ಲ-ಅದು ಭಾವಿತವಾದದ್ದು. ಅಂದರೆ ಕನ್ನಡವೆಂಬುದು ಒಂದು ಚಿತ್-ಜಗತ್ತು. ಸುಬ್ಬಣ್ಣ ಮುಂದುವರೆಸುತ್ತಾರೆ: ಈಗ ಎಲ್ಲರೂ ಜಾಗತೀಕರಣದ ಬಗ್ಗೆ ಮಾತಾಡುತ್ತಿ¨ªಾರೆ. ಜಗತ್ತೇ ಒಂದು ಹಳ್ಳಿಯಾಗುವ ಬಗ್ಗೆ ಮಾತಾಡುತ್ತಿ¨ªಾರೆ. ಕವಿರಾಜಮಾರ್ಗ ನಮ್ಮ ಕಣ್ಣ ಮುಂದೆ ಇರಿಸಿರುವುದು ಕನ್ನಡವೇ ಜಗತ್ತಾಗುವ ಸ್ಥಳೀಕರಣದ ಪ್ರಮೇಯವನ್ನು. ಸುಬ್ಬಣ್ಣ ಎತ್ತಿಹಿಡಿಯುವುದೂ ಈ ಸ್ಥಳೀಕರಣದ ಪ್ರಮೇಯವನ್ನೇ.
ಕಣ್ಣು ಕವಡೆಯ ಅಗಲ; ನೋಟವೋ ತಿಮಿಂಗಲ! ಕೃಷ್ಣನ ವಿಶ್ವರೂಪಾಂತರವು ಇಂಥ ಯತ್ನವೇ. ಸೀಮಿತ ಪ್ರಮಾಣದಲ್ಲಿ ಸುಬ್ಬಣ್ಣ ಹೆಗ್ಗೊàಡಲ್ಲಿ ಮಾಡಿದ್ದೂ ಹಳ್ಳಿಯೊಂದರಲ್ಲಿ ಜಗತ್ತನ್ನು ಕಾಣುವ ವಿಲೀಕರಣ ಉದ್ಯಮವನ್ನೇ. ಆದ ಕಾರಣವೇ ಅವರಲ್ಲಿ ನನಗೆ ವಿಶೇಷವಾದ ಗೌರವಾಸಕ್ತಿ.
ಈ ಅಂಕಣದ ಎಲ್ಲ ಬರಹಗಳಿಗೆ (ಎರಡನ್ನು ಹೊರತುಪಡಿಸಿ) ಭಾವಚಿತ್ರಗಳನ್ನು ಒದಗಿಸಿದವರು ನಾಡಿನ ಪ್ರಸಿದ್ಧ ಛಾಯಾಗ್ರಾಹಕ ಎ. ಎನ್. ಮುಕುಂದ್. ಸಾಹಿತಿಗಳ “ಮುಖಮುದ್ರೆ’ ಯನ್ನು ಸಂಗ್ರಹಿಸುವ ಹವ್ಯಾಸವನ್ನು “ವ್ಯಸನ’ದಂತೆ ಪಾಲಿಸಿಕೊಂಡು ಬಂದಿರುವ ಮುಕುಂದ್ ಅವರಲ್ಲಿ ಹಿರಿ-ಕಿರಿಯ ಸಾಹಿತಿಗಳ ಅಗಣಿತ ಭಾವಚಿತ್ರಗಳಿವೆ. ಸ್ಥಾಯಿಭಾವವನ್ನೂ ಸಂಚಾರಿಭಾವವನ್ನೂ ಕಟ್ಟಿಕೊಡುವ ವಿಶಿಷ್ಟ “ಭಾವ’ಚಿತ್ರಗಳು, “ಇದು ಮುಕುಂದ್ ಅವರದೇ ಕೆಮರಾ ಕೌಶಲ’ ಎಂದು ಯಾರಾದರೂ ಗುರುತಿಸುವಂತೆ ಅನನ್ಯವಾಗಿರುತ್ತವೆ. ಈ ಅಂಕಣದಲ್ಲಿ ಮುಕುಂದ್ ಅವರ ಛಾಯಾಚಿತ್ರಗಳು ಎಚ್. ಎಸ್. ವೆಂಕಟೇಶಮೂರ್ತಿಯವರ ಬರಹಗಳಿಗೆ ಸೂಕ್ತ ಸಾಥಿ ನೀಡಿದವು.
ಎಚ್. ಎಸ್. ವೆಂಕಟೇಶಮೂರ್ತಿ
(ಅಂಕಣ ಮುಕ್ತಾಯ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.