ಕಂಡ ಭವ್ಯ ಕನಸನ್ನು ನನಸು ಮಾಡಿ ಮಕ್ಕಳಿಗೆ ಮಾದರಿಯಾದ ಧೀರೂಭಾಯಿ!
Team Udayavani, Jun 16, 2018, 3:00 PM IST
ನಿನ್ನ ಕನಸನ್ನು ನೀನು ಕಟ್ಟದಿದ್ದರೆ ಇನ್ನೊಬ್ಬಾತ ತನ್ನ ಕನಸನ್ನು ನನಸುಗೊಳಿಸಲು ನಿನ್ನನ್ನು ಉದ್ಯೋಗಕ್ಕೆ ಇಟ್ಟುಕೊಂಡು ಬಳಸಿಕೊಳ್ಳುತ್ತಾನೆ. ಎಂದೂ ಬತ್ತದ ಉತ್ಸಾಹದೊಂದಿಗೆ ಅತ್ಯಂತ ಪರಿಶ್ರಮದಿಂದ ಅಹರ್ನಿಶಿ ದುಡಿದು ತನ್ನ ಜೀವನದಲ್ಲಿ ಮಹತ್ಸಾಧನೆಯನ್ನು ಮಾಡಿ ವಿಶ್ವ ವಿಖ್ಯಾತಿ ಗಳಿಸಿದ ಓರ್ವ ಅಪ್ಪ ತನ್ನ ಮಗನಿಗೆ ಈ ಮಾತನ್ನು ಹೇಳಿದ್ದ ಎನ್ನುವ ಕಾರಣಕ್ಕೆ ಅಪ್ಪಂದಿರ ದಿನದ ಸಂದರ್ಭದಲ್ಲಿ ಈ ಆತ್ಮವಿಶ್ವಾಸದ ಮಾತು ಯುವ ಪೀಳಿಗೆಗೆ ತುಂಬ ಪ್ರಸ್ತುತವಾಗುತ್ತದೆ.
ಸಾಧನೆಯ ಬದುಕಿನ ಮೂಲಕ ಅಪಾರ ಯಶಸ್ಸು, ಸಂಪತ್ತು, ಹೆಸರು ಎಲ್ಲವನ್ನೂ ಗಳಿಸಿದ್ದ ಆ ಅಪ್ಪ ಗುಜರಾತ್‌ನ ಒಂದು ಹಳ್ಳಿಯಲ್ಲಿ ದುಡಿಯುತ್ತಿದ್ದ ಸಾಮಾನ್ಯ ಶಾಲಾ ಶಿಕ್ಷಕರೊಬ್ಬರ ಮಗನಾಗಿದ್ದ.
ವಿದ್ಯೆಗೆ ವಿನಯವೇ ಭೂಷಣ, ಸಂಪತ್ತಿಗೆ ದಾನವೇ ಭೂಷಣ, ಕಠಿನ ಪರಿಶ್ರಮಕ್ಕೆ ಯಶಸ್ಸೇ ಭೂಷಣ ಎಂಬ ಹಿತನುಡಿಗಳನ್ನು ಆ ಶಿಕ್ಷಕ ಸದಾ ತನ್ನ ಮಗನಿಗೆ ಹೇಳುತ್ತಿದ್ದ.ಪರಿಣಾಮವಾಗಿ ಆತನ ಮಗ ಒಬ್ಬ ಸಾಧಕನಾದ; ಅಪಾರ ಸಂಪತ್ತಿನ ಒಡೆಯನಾದ; ಆದರೂ ತನ್ನ ಅಪ್ಪ ಸದಾ ಹೇಳಿತ್ತಿದ್ದ ಹಿತನುಡಿಗಳನ್ನು ಎಂದೂ ಮರೆಯದ ವಿನಯಶೀಲನಾದ, ದಾನಶೂರನೂ ಆದ. ಭಾರತೀಯ ಕೈಗಾರಿಕಾ ರಂಗದ ಹೆಮ್ಮೆಯ ಪುತ್ರ ಎನಿಸಿದ. ಹಾಗೆಯೇ ತನ್ನ ಮಕ್ಕಳಿಗೂ ತಾನು ಆದರ್ಶಪ್ರಾಯನಾದ; ಆ ಮಕ್ಕಳ ಹೆಮ್ಮೆಯ ಅಪ್ಪ ಎನಿಸಿಕೊಂಡ !
ಆ ಹೆಮ್ಮೆಯ ಅಪ್ಪ ಯಾರಂತೀರಿ ? ಇಂದು ಭಾರತೀಯ ಉದ್ಯಮ ರಂಗದಲ್ಲಿ ಮಹಾ ದಿಗ್ಗಜ ಸಂಸ್ಥೆಯಾಗಿ ಬೆಳೆದಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಸ್ಥಾಪಕ ಧೀರೂಭಾಯಿ ಅಂಬಾನಿ.
ಧೀರೂಭಾಯಿ ಅಂಬಾನಿ ಅವರ ಪೂರ್ಣ ಹೆಸರು ಧೀರಜ್‌ಲಾಲ್ ಧೀರೂಭಾಯಿ ಹೀರಾಚಂದ್ ಅಂಬಾನಿ. ಹುಟ್ಟಿದ್ದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ – 1932ರ ಡಿಸೆಂಬರ್ 28ರಂದು. ಅವರ ತಂದೆ ಹೀರಾಚಾಂದ್ ಗೋವರ್ಧನ್‌ಭಾಯಿ ಅಂಬಾನಿ, ವೃತ್ತಿಯಲ್ಲಿ ಶಿಕ್ಷಕರು; ತಾಯಿ ಜಮ್ನಾಬೆನ್.
ಜುನಾಗಢದ ಬಹಾದ್ದೂರ್ ಕಂಜೀ ಹೈಸ್ಕೂಲ್ ನಲ್ಲಿ ಓದಿ ಬೆಳೆದು ಅರ್ವತ್ತರ ದಶಕದಲ್ಲಿ ಮುಂಬಯಿ ಚಾಲ್‌ನ ಒಂದು ಕೋಣೆಯಲ್ಲಿ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ವೃತ್ತಿ ಬದುಕಿನ ಹೋರಾಟ ನಡೆಸುತ್ತಿದ್ದ ಧೀರೂಭಾಯಿ ಅಂಬಾನಿ ಮುಂದೊಂದು ದಿನ ವಿಶ್ವದ 138ನೇ ಅತಿ ಸಿರಿವಂತ ವ್ಯಕ್ತಿ (ಫೋರ್‌ಬ್ಸ್) ಎಂಬ ಹೆಗ್ಗಳಿಕೆಗೆ ಪಾತ್ರರಾಗುವರೆಂದು ಯಾರೊಬ್ಬರೂ ಕನಸಿನಲ್ಲೂ ಊಹಿಸಿರಲಿಲ್ಲ.
ಆದರೆ ಧೀರೂಭಾಯಿ ಮಾತ್ರ ಅಂತಹ ಒಂದು ಕನಸನ್ನು ಕಾಣುತ್ತಿದ್ದರು ಎನ್ನಲೇಬೇಕು; ಅವರಿಗೆ ಅತ್ಯಂತ ಪ್ರಿಯವಾಗಿದ್ದ ಹಲವು ಕೋಟೇಬಲ್ ಕೋಟ್ಸ್ ಗಳಲ್ಲಿ ಇದೂ ಒಂದಾಗಿತ್ತು : ನಿನ್ನ ಕನಸನ್ನು ನೀನು ಕಟ್ಟದಿದ್ದರೆ ಇನ್ನೊಬ್ಟಾತ ತನ್ನ ಕನಸನ್ನು ನನಸುಗೊಳಿಸಲು ನಿನ್ನನ್ನು ಬಳಸಿಕೊಳ್ಳುತ್ತಾನೆ !
ಮುಂಬಯಿಯ ಪೆಟ್ರೋಲ್ ಪಂಪ್ ಒಂದರಲ್ಲಿ ಸಹಾಯಕನಾಗಿ ತನ್ನ ವೃತ್ತಿ ಬದುಕಿಗೆ ತೊಡಗಿಕೊಂಡು ಶೀಘ್ರವೇ ತೈಲ ಕಂಪೆನಿಯೊಂದರಲ್ಲಿ ಕ್ಲರ್ಕ್ ಆದ ಧೀರೂಭಾಯಿ ತನ್ನ 26ರ ಹರೆಯದಲ್ಲೇ ಹಣ ಮಾಡುವ ಕಲೆ ಮತ್ತು ಸಾಮರ್ಥ್ಯ ತನ್ನಲ್ಲಿರುವುದನ್ನು ಕಂಡುಕೊಂಡಿದ್ದರು.
ಕೇವಲ ತನ್ನ ಆತ್ಮ ವಿಶ್ವಾಸ ಮತ್ತು ದೃಢ ಸಂಕಲ್ಪದ ಫಲವಾಗಿ ಉದ್ಯಮ ಕ್ಷೇತ್ರಕ್ಕೆ ಮುನ್ನುಗ್ಗಿದ ಧೀರೂಭಾಯಿ ಮೊದಲಾಗಿ ಸ್ಥಾಪಿಸಿದ್ದು ರಿಲಯನ್ಸ್ ಟ್ರೇಡಿಂಗ್ ಕಾರ್ಪೋರೇಶನ್. ಅನಂತರದಲ್ಲಿ ಇದರ ಹೆಸರು° ರಿಲಯನ್ಸ್ ಟೆಕ್ಸ್‌ಟೈಲ್‌ಸ್ ಕಾರ್ಪೊರೇಶನ್ ಎಂದೂ ಆ ಬಳಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಎಂದೂ ಪುನರ್ ನಾಮಕರಣ ಮಾಡಲಾಯಿತು. 1958ರಲ್ಲಿ ಧೀರೂಭಾಯಿ ಉದ್ಯಮ ಕ್ಷೇತ್ರವನ್ನು ಪ್ರವೇಶಿಸಿದ್ದು ಕೇವಲ 50,000 ರೂ. ಬಂಡವಾಳದೊಂದಿಗೆ. ಆಗಿನ್ನೂ ಅವರ ವಯಸ್ಸು 26.
ಇಂದು ರಿಲಯನ್ಸ್ ಕಂಪೆನಿ ದೇಶದ ಅಗ್ರಗಣ್ಯ ಔದ್ಯಮಿಕ ಸಂಸ್ಥೆಯಾಗಿ ಯಶಸ್ಸಿನ ಉತ್ತುಂಗಕ್ಕೆ ಏರಿದೆ. ದೇಶದಲ್ಲೇ ಮೊದಲ ಬಾರಿಗೆ ಸಣ್ಣ ಹೂಡಿಕೆದಾರರನ್ನು ತನ್ನ ಕಂಪೆನಿಯ ತೆಕ್ಕೆಗೆ ಒಳಪಡಿಸಿಕೊಂಡ ಧೀರೂಭಾಯಿ ಅವರು 10 ರೂ. ಮುಖಬೆಲೆಯ 28 ಲಕ್ಷ ಶೇರುಗಳನ್ನು ಸಾರ್ವಜನಿಕರಿಗೆ ನೀಡುವ ಐಪಿಓ ಕೈಗೊಂಡರು. 1978ರ ಜನವರಿಯಲ್ಲಿ ರಿಲಯನ್ಸ್ ಶೇರುಗಳು ಮುಂಬಯಿ ಮತ್ತು ಅಹ್ಮದಾಬಾದ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್ ಆದವು. 1976-77ರಲ್ಲೇ ರಿಲಯನ್ಸ್ ವಾರ್ಷಿಕ ವಹಿವಾಟು 70 ಕೋಟಿ ರೂ ಇತ್ತು. ವಿಮಲ್ ಬ್ರಾಂಡ್ ಉತ್ಪನ್ನ ರಿಲಯನ್ಸ್‌ನ ಹೆಗ್ಗಳಿಕೆಯಾಗಿತ್ತು.
1990ರ ದಶಕದಲ್ಲಿ ಧೀರೂಭಾಯಿ ಪೆಟ್ರೋಕೆಮಿಕಲ್ಸ್, ತೈಲ ಸಂಸ್ಕರಣೆ, ದೂರಸಂಪರ್ಕ ಮತ್ತು ಹಣಕಾಸು ಸೇವಾ ರಂಗಕ್ಕೂ ಲಗ್ಗೆ ಇಟ್ಟರು.ಅಪ್ರತಿಮ ಸಾಧನೆಯ ಹಾದಿಯಲ್ಲಿ ಇದ್ದಾಗಲೇ ಧೀರೂಭಾಯಿ ಅವರು 2002ರ ಜುಲೈ 6ರಂದು ಮುಂಬಯಿಯಲ್ಲಿ ನಿಧನಹೊಂದಿದರು. ಹೆಮ್ಮೆಯ ಅಪ್ಪನ ಹೆಮ್ಮೆಯ ಪುತ್ರರಾದ ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಅವರು ತಂದೆಯ ಕನಸುಗಳನ್ನು ಅನ್ವೇಷಿಸುವುದರೊಂದಿಗೆ ತಮ್ಮ ಕನಸುಗಳನ್ನೂ ಸಾಕಾರಗೊಳಿಸುವ ಹಾದಿಯಲ್ಲಿ ಹೆಜ್ಜೆ ಹಾಕತೊಡಗಿದರು. ತಾಯಿ ಕೋಕಿಲಾಬೆನ್ ಅಂಬಾನಿ ಕೂಡ ಇವರಿಗೆ ಆದರ್ಶಪ್ರಾಯರಾದರು. ಹೆಮ್ಮೆಯ ಅಪ್ಪ ಇಲ್ಲದಿದ್ದರೂ ಆತನಿಂದ ಸ್ಫೂರ್ತಿ ಪಡೆದಿರುವ ಹೆಮ್ಮೆಯ ಮಕ್ಕಳ ಪೈಕಿ ಮುಕೇಶ್ ಅಂಬಾನಿ ಇಂದು ದೇಶದ ಅತ್ಯಂತ ಯಶಸ್ವೀ ಉದ್ಯಮಿ ಎನಿಸಿಕೊಂಡಿದ್ದಾರೆ. ಆರಂಭಿಕ ಭಿನ್ನಮತ, ವಿರಸಗಳ ಹೊರತಾಗಿಯೂ ಅನಿಲ್ ಅಂಬಾನಿ ಕೂಡ ತನ್ನ ಹಿರಿಯ ಸಹೋದರನನ್ನು ಅನುಸರಿಸುತ್ತಿದ್ದಾರೆ. ರಿಲಯನ್ಸ್ ಎನ್ನುವುದು ಇಂದು ದೇಶದ ಎಲ್ಲ ಯುವ ಉದ್ಯಮಿಗಳ ಕನಸಿನ ಮೇರು ಪರ್ವತವಾಗಿದೆ.
ಪಿ.ಸತೀಶ್ ಮಲ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.