ವಾಯುದೇವನ ಕೋಪಕ್ಕೆ ನೂರು ಸುಂದರಿಯರು ಕುಬ್ಜರಾಗಿದ್ದೇಕೆ ಗೊತ್ತಾ?
Team Udayavani, Feb 5, 2019, 10:53 AM IST
ಹಿಂದೆ ಬ್ರಹ್ಮದೇವರ ಪುತ್ರನಾದ ಕುಶನೆಂಬ ಮಹಾತಪಸ್ವಿಯಾದ ಪ್ರಸಿದ್ಧ ರಾಜನೊಬ್ಬನಿದ್ದನು. ಅವನು ವ್ರತನಿಷ್ಠನೂ, ಧರ್ಮಜ್ಞನೂ ಆಗಿದ್ದನು. ಧರ್ಮಾತ್ಮರನ್ನೂ,ಮಹಾತ್ಮರನ್ನೂ ಸದಾ ಆಧರಿಸುತ್ತಾ ಸತ್ಕರಿಸುತ್ತಿದ್ದನು. ಸತ್ಕುಲ ಪ್ರಸೂತೆಯಾದ ವಿದರ್ಭ ರಾಜಕುಮಾರಿ ವೈದರ್ಭಿ ಎಂಬ ಭಾರ್ಯೆಯಲ್ಲಿ ಮಹಾತ್ಮನಾದ ನರೇಶನು ತನಗೆ ಅನುರೂಪರಾದ ಕುಶಾಂಬ, ಕುಶಾನಾಭ, ಅಮೂರ್ತರಜಸ ಹಾಗೂ ವಸ್ಸು ಎಂಬ ನಾಲ್ಕು ಪುತ್ರರನ್ನು ಪಡೆದನು.
ಅವನ ನಾಲ್ವರು ಪುತ್ರರು ಮಹಾಉತ್ಸಾಹಿಗಳೂ, ತೇಜಸ್ವಿಗಳೂ ಆಗಿದ್ದರು. ರಾಜಾ ಕುಶನು ಪ್ರಜಾರಕ್ಷಣರೂಪೀ ಕ್ಷಾತ್ರಧರ್ಮ ಪಾಲಿಸುವ ಇಚ್ಛೆಯಿಂದ ತನ್ನ ಧರ್ಮಿಷ್ಠರೂ ಸತ್ಯವಾದಿಗಳೂ ಆದ ಪುತ್ರರಲ್ಲಿ ” ಪ್ರಜೆಯನ್ನು ಪಾಲಿಸಿರಿ ಇದರಿಂದ ನಿಮಗೆ ಧರ್ಮದ ಪೂರ್ಣಫಲ ಸಿಗುವುದು” ಎಂದು ಹೇಳಿದನು. ತನ್ನ ಪಿತನಾದ ಕುಶನ ಈ ಮಾತನ್ನು ಕೇಳಿ ಲೋಕೋತ್ತರರಾದ ಆ ನಾಲ್ವರು ನರ ಶ್ರೇಷ್ಠ ರಾಜಕುಮಾರರು ಆಗ ತಮ-ತಮಗಾಗಿ ಬೇರೆ ಬೇರೆ ನಗರಗಳನ್ನು ನಿರ್ಮಿಸಿಕೊಂಡರು.
ಮಹಾತೇಜಸ್ವಿ ಕುಶಾಂಬನು ‘ಕೌಶಾಂಬಿ’ ಎಂಬ ಪುರವನ್ನು ನೆಲೆಗೊಳಿಸಿದನು. (ಅದನ್ನು ಕೋಸಲ ಎಂದು ಕರೆಯುತ್ತಾರೆ). ಧರ್ಮಾತ್ಮನಾದ ಕುಶನಾಭನು ‘ಮಹೋದಯ’ ಎಂಬ ನಗರವನ್ನು ನಿರ್ಮಾಣ ಮಾಡಿದನು. ಪರಮ ಬುದ್ಧಿವಂತನಾದ ಅಸುರತರಜಸ್ಸನು ‘ಧರ್ಮಾರಣ್ಯ’ ಎಂಬ ಒಂದು ಶ್ರೇಷ್ಠ ನಗರವನ್ನು ನೆಲೆಗೊಳಿಸಿದನು ಹಾಗೂ ವಸುವು ‘ಗಿರಿವಜ್ರ’ ಎಂಬ ನಗರವನ್ನು ಸ್ಥಾಪಿಸಿದನು. ಈ ಗಿರಿವಜ್ರದ ಸುತ್ತಲೂ ವಿಫುಲ,ವರಾಹ,ಋಷಭ,ಋಷಗಿರಿ ಮತ್ತು ಚೈತ್ಯಕ ಎಂಬ ಐದು ಶ್ರೇಷ್ಠಪರ್ವತಗಳು ಸುಶೋಭಿತವಾಗಿದ್ದು ಈ ಐದು ಪರ್ವತಗಳ ನಡುವೆ ಒಂದು ರಮಣೀಯವಾದ ಶೋಣನದಿಯು ದಕ್ಷಿಣ ಪಶ್ಚಿಮವಾಗಿ ಹರಿಯುತ್ತ ಮಗಧ ದೇಶವನ್ನು ತಲುಪುತ್ತದೆ. ಹಾಗಾಗಿ ಈ ನದಿಯು ‘ಸುಮಗಧೀ’ ಎಂಬ ಹೆಸರಿಂದಲೂ ವಿಖ್ಯಾತವಾಗಿದೆ. ಶೋಣನದಿಯು ವಸುವಿನ ನಗರದೊಂದಿಗೆ ಬೆಸೆದಿರುವುದರಿಂದ ವಸುಭೂಮಿ ಎಂದೂ ಕರೆಯುತ್ತಾರೆ. ಈ ನದಿಯ ಇಕ್ಕೆಲಗಳಲ್ಲಿಯ ಭೂಮಿಯು ಯಾವಾಗಲು ಫಲವತ್ತಾಗಿರುತ್ತದೆ. ಹಾಗಾಗಿ ಈ ಗಿರಿವಜ್ರ ಎಂಬ ರಾಜಧಾನಿಯೂ ವಸುಭೂಮಿ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.
ಧರ್ಮಾತ್ಮ ರಾಜರ್ಷಿ ಕುಶನಾಭನಿಂದ ಘೃತಾಚಿ ಅಪ್ಸರೆಯ ಗರ್ಭದಿಂದ ಪರಮೋತ್ತಮರಾದ ನೂರು ಕನ್ಯೆಯರು ಹುಟ್ಟಿದರು. ಅವರೆಲ್ಲರೂ ರೂಪ ಲಾವಣ್ಯದಿಂದ ಸುಂದರರಾಗಿ ಶೋಭಿಸುತ್ತಿದ್ದರು. ಒಂದು ದಿನ ವಸ್ತ್ರಾಭರಣಗಳಿಂದ ಅಲಂಕೃತರಾದ ಆ ರಾಜಕನ್ಯೆಯರು ಅಂದವಾದ ಉದ್ಯಾನವನದಲ್ಲಿ ವರ್ಷಋತುವಿನಲ್ಲಿ ಪ್ರಕಾಶಿಸುವ ವಿದ್ಯುಲ್ಲತೆಗಳಂತೆ ಶೋಭಿಸುತ್ತಿದ್ದರು. ಸುಂದರಾಂಗಿಯರಾದ ಆ ಅಂಗನೆಯರು ಹಾಡುತ್ತ-ಕುಣಿಯುತ್ತ ಆಮೋದ-ಪ್ರಮೋದದಲ್ಲಿ ಮುಳುಗಿದ್ದರು. ಈ ಭೂತಳದಲ್ಲಿ ಇವರ ರೂಪ ಸೌಂದರ್ಯಕ್ಕೆ ಎಣೆಯೇ ಇರಲಿಲ್ಲ. ಆಕಾಶದ ಮೋಡಗಳಲ್ಲಿ ಕಣ್ಣುಮುಚ್ಚಾಲೆಯಾಡುವ ನಕ್ಷತ್ರಗಳಂತೆ ಅವರು ಆ ಉದ್ಯಾನವನದಲ್ಲಿ ಶೋಭಿಸುತ್ತಿದ್ದರು.
ಆಗ ಉತ್ತಮ ಗುಣಸಂಪನ್ನ, ರೂಪ ಯೌವನದಿಂದ ಶೋಭಿಸುವ ಆ ಎಲ್ಲ ರಾಜಕುಮಾರಿಯರನ್ನು ನೋಡಿ ಸರ್ವಾತ್ಮನಾದ ವಾಯುದೇವರು ಆಕರ್ಷಿತರಾಗಿ “ಸುಂದರಿಯರೇ! ನಾನು ನಿಮ್ಮೆಲ್ಲರನ್ನು ನನ್ನ ಪ್ರೇಯಸಿಯರಾಗಿ ಪಡೆಯಬೇಕೆಂದು ಬಯಸುತ್ತಿರುವೆನು. ನೀವೆಲ್ಲರೂ ನನ್ನ ಪತ್ನಿಯರಾದರೆ, ಆಗ ನಿಮ್ಮ ಈ ಮನುಷ್ಯಭಾವವನ್ನು ತ್ಯಜಿಸಿ ದೇವಾಂಗನೆಯರಂತೆ ದೀರ್ಘಾಯುವನ್ನು ಹೊಂದಿರಿ. ಸಾಧಾರಣವಾಗಿ ಮಾನವ ಶರೀರದಲ್ಲಿ ತಾರುಣ್ಯವು ಎಂದೂ ಸ್ಥಿರವಾಗಿ ಇರುವುದಿಲ್ಲ. ಪ್ರತಿಕ್ಷಣ ಕ್ಷೀಣವಾಗುತ್ತ ಇರುತ್ತದೆ. ನನ್ನ ಸಂಬಂಧ ಪಡೆದರೆ ನೀವೆಲ್ಲ ಅಕ್ಷಯ ಯವ್ವನವನ್ನು ಪಡೆಯುವಿರಿ” ಎಂದೂ ಹೇಳಿದರು.
ನಿರಾತಂಕವಾಗಿ ಮಹಾಕಾರ್ಯವನ್ನು ಮಾಡುವ ವಾಯುದೇವರ ಮಾತನ್ನು ಕೇಳಿ ಆ ನೂರು ಕನ್ಯೆಯರು ಅಪಹಾಸ್ಯ ಮಾಡಿ ನಗುತ್ತ “ದೇವಾ ನೀನು ಪ್ರಾಣವಾಯುವಾಗಿ ಸಮಸ್ತ ಪ್ರಾಣಿಗಳ ಒಳಗೆ ಸಂಚರಿಸುತ್ತಿರುವೆ. ನಮ್ಮಲ್ಲಿಯೂ ನೀನು ವ್ಯಾಪ್ತನಾಗಿರುವೆ. ಹಾಗಿರುವಾಗ ನಮ್ಮೆಲ್ಲರ ಮನಸ್ಸಿನಲ್ಲಿ ನಿನ್ನ ಕುರಿತಾದ ಆಕರ್ಷಣೆ ಇಲ್ಲವೆಂಬುದು ತಿಳಿಯಲಾರೆಯಾ?ನಮಗೆ ನಿನ್ನ ಕುರಿತು ಅನುರಾಗವಿಲ್ಲವೆಂದು ತಿಳಿದಿದ್ದರೂ ಇಂತಹ ಅನುಚಿತ ಪ್ರಸ್ತಾಪವನ್ನು ಮಾಡಿ ನಮ್ಮನ್ನು ಏಕೆ ಅಪಮಾನ ಪಡಿಸುತ್ತಿರುವೆ? ನಾವು ನಮ್ಮ ಸತ್ಯವಾದಿ ತಂದೆಯನ್ನು ಅವಹೇಳನ ಮಾಡಿ ಅತ್ಯಂತ ಅಧರ್ಮಪೂರ್ವಕ ಸ್ವತಃ ವರನನ್ನು ಹುಡುಕಿಕೊಳ್ಳುವ ಸಮಯ ಎಂದಿಗೂ ಬಾರದಿರಲಿ. ನಮಗೆ ತಂದೆಯೇ ಪ್ರಭುವಾಗಿರುವನು, ಅವರೇ ನಮಗೆ ಸರ್ವಶ್ರೇಷ್ಠ ದೇವತೆಯಾಗಿರುವರು. ನಮ್ಮ ಪಿತನು ನಮ್ಮನ್ನು ಯಾರ ಕೈಗೊಪ್ಪಿಸುವನೋ ಅವನೇ ನಮಗೆ ಪತಿಯಾಗುವನು.
ಅವರ ಈ ಮಾತನ್ನು ಕೇಳಿ ವಾಯುದೇವರು ಅತ್ಯಂತ ಕುಪಿತರಾಗಿ ಅವರೊಳಗೆ ಪ್ರವೇಶಿಸಿ ಅವರ ಎಲ್ಲ ಅವಯವಗಳನ್ನು ಅಂಕುಡೊಂಕಾಗಿಸಿದನು. ಶರೀರವು ಮುದುಡಿ ಹೋದದ್ದರಿಂದ ಅವರು ಕುಬ್ಜರಾದರು. ಅವರ ಆಕೃತಿ ಮುಷ್ಟಿಬಿಗಿದ ಅಂಗೈಯಂತೆ ಆಯಿತು .
ಕುಬ್ಜೆಯರಾದ ರಾಜಕುಮಾರಿಯರು ಭಯದಿಂದ ವ್ಯಾಕುಲರಾಗಿ ಅರಮನೆಯನ್ನು ಪ್ರವೇಶಿಸಿ ನಡೆದ ವೃತಾಂತ್ತವನ್ನೆಲ್ಲ ತಂದೆಯಲ್ಲಿ ಅರುಹಿದರು. ದೇವತೆಗಳಂತೆ ಪರಾಕ್ರಮಿಯಾದ ರಾಜ ಕುಶನಾಭ, ಕನ್ಯೆಯರ ಮಾತನ್ನು ಕೇಳಿ “ಪುತ್ರಿಯರೇ ! ಕ್ಷಮಾಶೀಲ ಮಹಾಪುರುಷರು ಮಾಡುವ ಕಾರ್ಯವನ್ನೇ ನೀವು ಮಾಡಿರುವಿರಿ. ನೀವೆಲ್ಲರೂ ಐಕ್ಯಮತ್ಯರಾಗಿ ಕುಲಧರ್ಮವನ್ನು ನೆನೆದು, ಕಾಮಕ್ಕೆ ವಶರಾಗದೆ ಮಹತ್ಕಾರ್ಯ ಮಾಡಿರುವಿರಿ. ಕ್ಷಮೆಯೇ ದಾನವಾಗಿದೆ. ಕ್ಷಮೆಯೇ ಸತ್ಯ, ಯಜ್ಞ,ಯಶ, ಧರ್ಮವಾಗಿದೆ. ಕ್ಷಮೆಯ ಮೇಲೆಯೇ ಈ ಜಗತ್ತು ಸ್ಥಿರವಾಗಿದೆ” ಎಂದೂ ಸಂತೈಸಿ ತನ್ನ ಕನ್ಯೆಯರನ್ನು ಅಂತಃಪುರಕ್ಕೆ ಕಳುಹಿಸಿ ಮಂತ್ರಿಗಳೊಂದಿಗೆ ಕುಳಿತು ತನ್ನ ಕನ್ಯೆಯರ ವಿವಾಹದ ವಿಚಾರವಾಗಿ ಚರ್ಚೆ ನಡೆಸಿದ್ದ.
ಅದೇ ಸಮಯದಲ್ಲಿ ಚೋಲಿ ಎಂಬ ತೇಜಸ್ವಿ , ನೈಷ್ಠಿಕ ಬ್ರಹ್ಮಚಾರಿ ಮುನಿಯು ವೇದೋಕ್ತ ತಪಸ್ಸನ್ನು ಮಾಡುತ್ತಿದ್ದನು. ಊರ್ಮಿಳೆಯ ಪುತ್ರಿ ಸೋಮದ ಎಂಬ ಗಂಧರ್ವಕನ್ಯೆಯೂ ಆ ತಪಸ್ವಿಯ ಸೇವೆ ಮಾಡುತ್ತಿದ್ದಳು. ಅವಳ ಸೇವೆಯಿಂದ ಸಂತುಷ್ಟನಾದ ಚೋಲಿ ಮುನಿಯು ಅವಳಿಗೆ ‘ನಿನಗೆ ಯಾವ ವರ ಬೇಕು ಕೇಳು’ ಎಂದು ಹೇಳಿದನು. ಆ ಗಂಧರ್ವ ಕನ್ಯೆಯು ಮುನಿಯಲ್ಲಿ “ನಾನು ನಿಮ್ಮ ಸೇವೆಗೆ ಬಂದಿರುವೆನು. ನನಗೆ ಮದುವೆಯಾಗಿಲ್ಲ ಹಾಗೂ ಆಗುವುದು ಇಲ್ಲ . ಆದರೆ ನನಗೆ ಮಾತೆಯಾಗುವ ಬಯಕೆ ಇದೆ . ನನಗೆ ನಿಮ್ಮ ತಪಃ ಶಕ್ತಿಯಿಂದ ಒಬ್ಬ ಪುತ್ರನನ್ನು ಕರುಣಿಸಬೇಕು” ಎಂದೂ ಕೇಳಿಕೊಂಡಳು. ಆಗ ಚೋಲಿ ಋಷಿಯು ಪರಮೋತ್ತಮ ಬ್ರಹ್ಮತಪಸ್ಸಿನಿಂದ ಮಾನಸಿಕ ಸಂಕಲ್ಪವನ್ನು ಮಾಡಿ ಮಾನಸ ಪುತ್ರನನ್ನು ಪಡೆದು ಅವಳಿಗೆ ನೀಡಿದರು. ಅವನ ಹೆಸರು ‘ಬ್ರಹ್ಮದತ್ತ’
ಕುಶಾನಭಾನು ತನ್ನ ನೂರು ಕನ್ಯೆಯರನ್ನು ವಿವಾಹಮಾಡಿಕೊಡಲು ಸರ್ವಗುಣ ಸಂಪನ್ನನಾದ ರಾಜ ಬ್ರಹ್ಮದತ್ತನು ಉತ್ತಮ ವರನೆಂದು ನಿಶ್ಚಯಿಸಿ, ಅತ್ಯಂತ ಸಂತೋಷದಿಂದ ಬ್ರಹ್ಮದತ್ತನಿಗೆ ಒಪ್ಪಿಸಿದನು. ಬ್ರಹ್ಮದತ್ತನು ಕ್ರಮವಾಗಿ ನೂರು ಕನ್ಯೆಯರನ್ನು ಪಾಣಿಗ್ರಹಣವನ್ನು ಮಾಡಿದನು. ವಿವಾಹ ಕಾಲದಲ್ಲಿ ಬ್ರಹ್ಮದತ್ತನು ಪಾಣಿಗ್ರಹಣ ಮಾಡಿದಾಕ್ಷಣ ಅವರೆಲ್ಲರ ಕುಬ್ಜತ್ವದೋಷದಿಂದ ರಹಿತ, ನಿರೋಗಿ ಹಾಗೂ ಉತ್ತಮ ಶೋಭಾಸಂಪನ್ನರಾದರು. ವಾತರೋಗದ ರೂಪದಲ್ಲಿ ಬಂದಿರುವ ವಾಯುದೇವರು ಆ ಕನ್ಯೆಯರನ್ನು ಬಿಟ್ಟುಬಿಟ್ಟನು. ಇದನ್ನು ನೋಡಿದ ಕುಶನಾಭ ರಾಜನು ಬಹಳ ಸಂತೋಷಗೊಂಡು ಪದೇ-ಪದೇ ಹರ್ಷಿತನಾಗುತ್ತಿದ್ದನು.
ಪಲ್ಲವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.