ನಟನ ಸಾವಿನ ಸುದ್ದಿಯಿಂದ ಧೋನಿಗೆ ಆಘಾತ: ರೀಲ್ ಧೋನಿ ಜತೆಗೆ ರಿಯಲ್ ಧೋನಿ ಸ್ನೇಹ ಹೇಗಿತ್ತು?
Team Udayavani, Jun 26, 2020, 7:53 PM IST
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನ ಕುರಿತ “ಎಂ.ಎಸ್.ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಸಿನಿಮಾವನ್ನು ನೋಡದಿರುವವರು ಕಡಿಮೆ. ಆ ಚಿತ್ರದಲ್ಲಿ ಧೋನಿ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಧೋನಿ ಅಭಿಮಾನಿಗಳ ಸಹಿತ ಎಲ್ಲರನ್ನು ನೋವಿನ ಪ್ರಪಾತಕ್ಕೆ ದೂಡಿದೆ.
ಹೌದು, ಧೋನಿಯನ್ನು ಪ್ರೀತಿಸುವ ಅಭಿಮಾನಿಗಳು ಸುಶಾಂತ್ ಸಿಂಗ್ ರಲ್ಲಿ ಧೋನಿಯನ್ನು ಕಂಡಿದ್ದರು. ಸ್ವತಃ ಕ್ಯಾಪ್ಟನ್ ಕೂಲ್ ಧೋನಿ ಕೂಡ ಸುಶಾಂತ್ ಸಿಂಗ್ ಅವರಲ್ಲಿ ತಮ್ಮನ ಸ್ನೇಹ ಕಂಡಿದ್ದರು. ಸಿನಿಮಾ ತೆರೆಗೆ ಬಂದ ಬಳಿಕ ಇಬ್ಬರ ನಡುವೆ ಗಾಢವಾದ ಸ್ನೇಹ ಬೆಳೆದಿತ್ತು.
ನಿರ್ದೇಶಕ ನೀರಜ್ ಪಾಂಡೆ ಮೂಲಕ ಧೋನಿಗೆ ಸುಶಾಂತ್ ಸಿಂಗ್ ಪರಿಚಯವಾಗಿತ್ತು. ವಿಶೇಷವೆಂದರೆ ಧೋನಿ-ಸುಶಾಂತ್ ಇಬ್ಬರೂ ಕೂಡ ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನುಂಡು ಮೇಲೆ ಬಂದವರು. ತಳ ಮಟ್ಟದಿಂದ ತಮ್ಮ ಸ್ವಂತ ಪ್ರಯತ್ನದಿಂದ ಸಾಧನೆಯ ಗುರಿ ತಲುಪಿದವರು. ಧೋನಿ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದ ಸುಶಾಂತ್ ಸಿಂಗ್ ಅವರನ್ನು ಪ್ರಮುಖವಾಗಿರಿಸಿಕೊಂಡು ನೀರಜ್ ಪಾಂಡೆ ಸಿನಿಮಾ ಮಾಡಿಯೇ ಬಿಟ್ಟರು, ಬಾಲಿವುಡ್ ಬಾಕ್ಸ್ ಆಫೀಸ್ ಸೂಪರ್ ಹಿಟ್ ಆಗಿದ್ದ ಈ ಸಿನಿಮಾದಿಂದ ಸುಶಾಂತ್ ಸಿಂಗ್ ರಜಪೂತ್ ಜೀವನವೇ ಬದಲಾಯಿತು. ಎಷ್ಟರ ಮಟ್ಟಿಗೆ ಎಂದರೆ ಗೂಗಲ್ ನಲ್ಲಿ ಧೋನಿ ಅವರ ಹೆಸರಿನಲ್ಲಿ ಹುಡುಕಿದರೆ ಧೋನಿಗಿಂತ ಹೆಚ್ಚು ಸುಶಾಂತ್ ಫೋಟೊಗಳು ಬರುತ್ತಿತ್ತು ಎಂದು ಸ್ವತಃ ಧೋನಿಯೇ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.
ಕುಸಿದು ಹೋದ ಧೋನಿ!
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಧೋನಿ ಮಾನಸಿಕವಾಗಿ ಕುಸಿದು ಹೋಗಿದ್ದರು. ಸ್ವತಃ ಈ ವಿಷಯವನ್ನು ನೀರಜ್ ಪಾಂಡೆ ಬಹಿರಂಗ ಪಡಿಸಿದ್ದಾರೆ. “ಧೋನಿಯ ಮನಸ್ಸು ನುಚ್ಚುನೂರಾಗಿದೆ. ಕುಸಿದು ಬೀಳುವ ಅನುಭವ ಅವರಿಗೆ ಆಗಿದೆ. ಅತೀವ ನೋವು ಸಂಕಟ ಅವರನ್ನು ಆವರಿಸಿದೆ’ ಎಂದು ಸನ್ನಿವೇಶವನ್ನು ನೆನಪಿಸಿಕೊಂಡಿದ್ದಾರೆ.
ಧೋನಿಗೆ ವಿಶೇಷ ಪ್ರೀತಿ
ಸಿನಿಮಾ ಆರಂಭವಾದ ಬಳಿಕ ಸುಶಾಂತ್ ಸಿಂಗ್‌ಗೆ ಧೋನಿ ಪರಿಚಯವಾಯಿತು. ಇದಕ್ಕೂ ಮೊದಲು ಸುಶಾಂತ್ ಸಿಂಗ್ ಧೋನಿ ಪಾತ್ರವನ್ನು ಮಾಡಬಲ್ಲರೇ ಎನ್ನುವ ಬಗ್ಗೆ ಬಾಲಿವುಡ್ ಒಳಗೆ ಬಾರೀ ಚರ್ಚೆ ನಡೆದಿತ್ತು. ಆತನಿಂದ ಅಷ್ಟು ದೊಡ್ಡ ಪಾತ್ರ ನಿರ್ವಹಿಸುವುದು ಕಷ್ಟ ಎಂದು ಕೆಲವರು ಆಡಿಕೊಂಡಿದ್ದರು. ಆದರೆ ಇದಕ್ಕೆಲ್ಲ ಧೋನಿ ತಲೆ ಕೆಡಿಸಿಕೊಳ್ಳಲಿಲ್ಲ. ನಂಬಿಕೆ ಇಟ್ಟು ಸುಶಾಂತ್ ಸಿನಿಮಾದ ನಾಯಕನಾಗಲು ಗ್ರೀನ್ ಸಿಗ್ನಲ್ ಕೊಟ್ಟರು. ಸಿನಿಮಾ ಶೂಟಿಂಗ್ ಮುಗಿದ ಬಳಿಕ ಸ್ವತಃ ಧೋನಿ ಸುಶಾಂತ್ ನಟನೆ ಕಂಡು ಅಚ್ಚರಿ ಪಟ್ಟಿದ್ದರು. “ನೀನು ನನ್ನನ್ನು ಸೇಮ್ ಟು ಸೇಮ್ ನಕಲು ಮಾಡಿದ್ದೀಯಾ’ ಎಂದು ಧೋನಿ ಸುಶಾಂತ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಬಳಿಕ ಇಬ್ಬರ ನಡುವಿನ ಸ್ನೇಹ ಮತ್ತಷ್ಟು ಗಾಢವಾಯಿತು.
ಹೆಲಿಕಾಪ್ಟರ್ ಶಾಟ್ ಬಗ್ಗೆ ಮೆಚ್ಚುಗೆ
ಸಿನಿಮಾಕ್ಕೂ ಮೊದಲು ಸುಶಾಂತ್ ಸಿಂಗ್ ಸಾಕಷ್ಟು ಅಭ್ಯಾಸ ಮಾಡಿದ್ದರು, ಧೋನಿಯ ನಡಿಗೆ, ಬ್ಯಾಟಿಂಗ್ ಶೈಲಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಅಧ್ಯಯನ ನಡೆಸಿದ್ದರು. ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಜತೆಗೆ ಧೋನಿ ಸಿನಿಮಾಕ್ಕಾಗಿ ಸುಶಾಂತ್ ಕ್ರಿಕೆಟ್ ಅಭ್ಯಾಸ ನಡೆಸಿದ್ದರು. ಅದರಲ್ಲೂ ಧೋನಿಯ “ಹೆಲಿಕಾಪ್ಟರ್ ಶಾಟ್’ ಕಲಿತು ಧೋನಿಯಂತೆ ಬ್ಯಾಟ್ ಬೀಸಿದ್ದರು. ಎಲ್ಲರನ್ನು ಇದು ಅಚ್ಚರಿಗೆ ಒಳಪಡಿಸಿತ್ತು. ಈ ಕುರಿತಂತೆ ಕಾರ್ಯಕ್ರಮವೊಂದರಲ್ಲಿ ಧೋನಿ ಮಾತನಾಡಿದ್ದು ಹೀಗೆ, “ನಾವಿಬ್ಬರು ಒಟ್ಟಿಗೆ ಇದ್ದದ್ದು ಕಡಿಮೆ, ಆದರೆ ಸಿನಿಮಾದಲ್ಲಿ ಸುಶಾಂತ್ ಸಿಂಗ್ ನಟನೆ ನೋಡಿ ಅವರು ನನ್ನ ಪಾತ್ರಕ್ಕಾಗಿ ಎಷ್ಟು ಶ್ರಮ ಪಟ್ಟಿದ್ದಾರೆ ಎನ್ನುವುದನ್ನು ಅರಿತುಕೊಂಡೆ. ಅದರಲ್ಲೂ ಬ್ಯಾಟಿಂಗ್ ಶೈಲಿ, ಹೆಲಿಕಾಪ್ಟರ್ ಶಾಟ್‌ನಲ್ಲಿ ನನ್ನನ್ನೇ ನಾನು ಕಂಡೆ’ ಎಂದು ಹೇಳಿದ್ದರು.
ಧೋನಿಯಂತೆ ಸುಶಾಂತ್ ಕೂಡಾ ಸಮಾಜದ ಕಷ್ಟ ಕಾರ್ಪಣ್ಯಗಳನ್ನು ಕಂಡು ಬಂದವರು. ಒಂದೊಂದೇ ಸವಾಲುಗಳನ್ನು ಮೆಟ್ಟಿ ನಿಂತವರು. ಮೇಲೆರಗಿ ಬಂದ ಬೌನ್ಸರ್ ಗಳಿಗೆ ಡಕ್ ಮಾಡಿ, ಸಿಕ್ಕ ಫ್ರೀ ಹಿಟ್ ಗಳನ್ನು ಸಮರ್ಪಕವಾಗಿ ಬಳಸುತ್ತಾ ವೃತ್ತಿ ಜೀವನದಲ್ಲಿ ಸಿಕ್ಸರ್ ಬಾರಿಸಿದವರು.
ಧೋನಿ ಅದೆಷ್ಟೋ ಪಂದ್ಯಗಳಲ್ಲಿ ಏಕಾಂಗಿಯಾಗಿ ನಿಂತು ಎದುರಾಳಿಗೆ ಸಡ್ಡು ಹೊಡೆದು ಭಾರತಕ್ಕೆ ಗೆಲುವಿನ ಹಾರ ತೊಡಿಸಿದವರು. ಆದರೆ ಸುಶಾಂತ್ ಮಾತ್ರ ಬಾಲಿವುಡ್ ಅಂಗಳದಲ್ಲಿ ಏಕಾಂಗಿಯಾಗುವ ದುಗುಡದಿಂದ ಎದುರಿಗೆ ಬರುವ ಸವಾಲೆಂಬ ಚೆಂಡನ್ನು ಎದುರಿಸಲಾಗದೇ ಮೈದಾನ ಬಿಟ್ಟು ನಡೆದರು. ಆದರೆ ರಿಯಲ್ ಧೋನಿಗೆ ಜೀವ ತುಂಬಿದ ರೀಲ್ ಧೋನಿಯ ನೆನಪು ಮಾತ್ರ ಅಜರಾಮರ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.