ಯಕ್ಷಲೋಕದ ನಿಜಾರ್ಥದ ನಾಯಕ ಹಾರಾಡಿ ರಾಮಗಾಣಿಗರು
Team Udayavani, Oct 7, 2018, 2:22 PM IST
ಬಡಗುತಿಟ್ಟು ಯಕ್ಷಗಾನರಂಗದಲ್ಲಿ ಸಾಟಿಯೇ ಇಲ್ಲದ ಪ್ರತಿಭೆ, ಮತ್ತೆ ಕಾಣುವುದು ಅಸಾಧ್ಯ ಎಂದು ಹಿರಿಯ ವಿದ್ವಾಂಸರು, ವಿಮರ್ಶಕರು ಇಂದಿಗೆ ಗುರುತಿಸುವುದು ಬೆರಳೆಣಿಕೆಯ ಕೆಲವು ಮೇರು ಕಲಾವಿದರನ್ನು ಮಾತ್ರ. ಅಂತಹ ಮೇರು ಕಲಾವಿದರಲ್ಲಿ ಸದಾ ನೆನಪಾಗುವ ಹೆಸರು ಹಾರಾಡಿ ರಾಮಗಾಣಿಗರದ್ದು.
ಯಕ್ಷರಂಗದ ಮೇರು ಶಿಖರವಾಗಿದ್ದ ಹಾರಾಡಿ ರಾಮಗಾಣಿಗರು ನಮ್ಮನ್ನಗಲಿ (1968)50 ವರ್ಷಗಳು ಸಂದರೂ ಇಂದಿಗೂ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ.
ತನ್ನ ಗತ್ತು ಗೈರತ್ತು , ಹಿತಮಿತವಾದ ಅದ್ಭುತ ಮಾತುಗಾರಿಗೆ , ಸುಂದರವಾದ ಆಳಂಗ, ಆಳ್ತನದಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಕರಾವಳಿಯ ರೀಯಲ್ ಹೀರೋ ಎನಿಸಿಕೊಂಡಿದ್ದವರು ರಾಮಗಾಣಿಗರು. ಇಂದಿಗೂ ಅವರ ಪಾತ್ರ ವೈಭವವನ್ನು 70 ವರ್ಷ ದಾಟಿದ ಹಿರಿಯರು ನೆನಪಿಸಿಕೊಳ್ಳುತ್ತಾರೆ.
ನಡುತಿಟ್ಟನ್ನು ಬೆಳಗಿದ ಹಾರಾಡಿ ರಾಮಗಾಣಿಗರು ಕರ್ಣ,ಋತುಪರ್ಣ,ತಾಮ್ರಧ್ವಜ, ಅರ್ಜುನ , ಕೌಂಡ್ಲಿಕ, ಮಾರ್ತಾಂಡತೇಜ, ಭೀಮ ಹಿರಣ್ಯ ಕಶ್ಯಪು,ಜಾಂಬವ,ಭೀಷ್ಮ, ಅಂಗಾರವರ್ಮ, ಚಿತ್ರಸೇನ ಮೊದಲಾದ ಪಾತ್ರಗಳಿಂದ ಪ್ರಖ್ಯಾತರಾಗಿದ್ದರು. ಅವರು ಮಾಡಿದ ಪಾತ್ರಗಳನ್ನು ಬೇರೆಯವರು ಸರಿಗಟ್ಟುವುದು ಅಸಾಧ್ಯ ಎನ್ನುವುದು ಯಕ್ಷಗಾನ ಅಭಿಮಾನಿಗಳ ಅಭಿಪ್ರಾಯ.
ಬ್ರಹ್ಮಾವರದ ಬಳಿಯ ಹಾರಾಡಿಯಲ್ಲಿ 1902 ಮೇ 27 ರಂದು ಸುಬ್ಬಣ್ಣ ಗಾಣಿಗ ಮತ್ತು ಕೊಲ್ಲು ದಂಪತಿಗಳ 2 ನೇ ಪುತ್ರನಾಗಿ ಜನಿಸಿದ ರಾಮ ಗಾಣಿಗರು ಬೈಕಾಡಿಯ ಐಗಳ ಮಠದಲ್ಲಿ 2 ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದು.
ಯಕ್ಷಗಾನ ರಂಗಕ್ಕೆ 14 ನೇ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ ಅವರು ಮೊದಲು ಗೆಜ್ಜೆ ಕಟ್ಟಿದ್ದು ಮಾರಣಕಟ್ಟೆ ಮೇಳದಲ್ಲಿ ಬಾಲಗೋಪಾಲನಾಗಿ. ಒಂದು ವರ್ಷದ ತಿರುಗಾಟದ ಬಳಿಕ ಮಂದಾರ್ತಿ ಮೇಳಕ್ಕೆ ಸೇರ್ಪಡೆಯಾದ ಅವರು ಮತ್ತೆ ಹಿಂತಿರುಗಿ ನೋಡಿದವರಲ್ಲ. ಪ್ರಖ್ಯಾತಿಯ ಉತ್ತುಂಗಕ್ಕೇರಿದ ಅವರು ಕಲಾಮಾತೆಯ ಮೇಳವೊಂದರಲ್ಲಿ 45 ವರ್ಷಗಳ ಕಾಲ ತಿರುಗಾಟ ನಡೆಸಿದ್ದು ದಾಖಲೆಯಾಗಿದೆ. ಮಂದಾರ್ತಿ ಮೇಳ ಮಾತ್ರವಲ್ಲದೆ ಅಮೃತೇಶ್ವರಿ ಮೇಳ ಕೋಟ, ಅಂದಿನ ಕಾಲದ ವರಂಗ ಮೇಳ, ಸೌಕೂರು ಮೇಳ, ಸಾಲಿಗ್ರಾಮ ಮೇಳದಲ್ಲೂ ಕೆಲ ಕಾಲ ತಿರುಗಾಟ ಮಾಡಿದ್ದರು ಎನ್ನುವುದು ದಾಖಲೆಗಳಿಂದ ಲಭ್ಯವಾಗಿದೆ.
ರಂಗದಲ್ಲೇ ಹಂತ ಹಂತವಾಗಿ ಕಲಿತ ರಾಮಗಾಣಿಗರು ತೆಕ್ಕಟ್ಟೆ ಬಾಬಣ್ಣ ಶ್ಯಾನುಭೋಗರು ಮಾತುಕತೆಯನ್ನು ಕಲಿಸಿದರೆ, ಪಾಂಡೇಶ್ವರ ಪುಟ್ಟಯ್ಯ, ಸಕ್ಕಟ್ಟು ಸುಬ್ಬಣ್ಣಯ್ಯ ಅವರು ಕುಣಿತವನ್ನು ಕಲಿಸಿದ್ದರು. ವೇದಮೂರ್ತಿ ಬಿರ್ತಿ ರಾಮಚಂದ್ರ ಶಾಸ್ತ್ರೀಗಳೂ ರಂಗದ ಕುರಿತಾಗಿ ಮಾರ್ಗದರ್ಶನ ನೀಡಿದ್ದರು.
ರಂಗದಲ್ಲೂ ಕೆಲ ಕಲಾವಿದರನ್ನು ನೆಚ್ಚಿಕೊಂಡಿದ್ದ ರಾಮಗಾಣಿಗರು ಕುಂಜಾಲು ಶೇಷಗಿರಿ ಕಿಣಿ, ಜಾನುವಾರು ಕಟ್ಟೆ ಗೋಪಾಲಕೃಷ್ಣ ಕಾಮತ್, ಗೋರ್ಪಾಡಿ ವಿಟ್ಠಲ ಪಾಟೀಲ್ , ಗುಂಡ್ಮಿ ರಾಮಚಂದ್ರ ನಾವಡರಂತಹ ಭಾಗವತರನ್ನು ನೆಚ್ಚಿಕೊಂಡಿದ್ದರು. ಸಹ ಪಾತ್ರಗಳಲ್ಲಿ ನೀಲಾವರ ಸುಬ್ಬಣ್ಣ ಶೆಟ್ಟಿ, ಕೊಳ್ಕೆಬೈಲು ಶೀನ, ಶಿರಿಯಾರ ಮಂಜು ನಾಯ್ಕ, ಹಾರಾಡಿ ಕುಷ್ಟ ಗಾಣಿಗ, ಹಾರಾಡಿ ನಾರಾಯಣ, ಉಡುಪಿ ಬಸವ , ಮಾರ್ವಿ ಹೆಬ್ಬಾರ್ ಮೊದಲಾದವರನ್ನು ನೆಚ್ಚಿಕೊಂಡಿದ್ದರು.
ಪಾತ್ರವೈಭವದ ಮೂಲಕ ಬಯಲಾಟ ರಂಗವನ್ನು ಶ್ರೀಮಂತಗೊಳಿಸಿದ್ದ ರಾಮಗಾಣಿಗರಿಗೆ 1961 ರಲ್ಲಿ ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, 1962 ರಲ್ಲಿ ರಾಜ್ಯ ಪ್ರಶಸ್ತಿಯನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ನಿಜಲಿಂಗಪ್ಪನವರು ಪ್ರದಾನ ಮಾಡಿದ್ದರು.
ಕರಾವಳಿಯ ಮೇರು ಕಲೆಗೆ ಮೊದಲ ರಾಷ್ಟ್ರಪ್ರಶಸ್ತಿಯನ್ನು ತಂದಿತ್ತ ರಾಮಗಾಣಿಗರು 1964 ರಲ್ಲಿ ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಅವರು ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.
ಆ ಕಾಲದಲ್ಲಿ ಕರಾವಳಿಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ರಾಮಗಾಣಿಗ ಅವರು ರಂಗದಲ್ಲೂ ನಿಜ ಜೀವನದಲ್ಲೂ ಆದರ್ಶಪ್ರಾಯ ವ್ಯಕ್ತಿಯಾಗಿದ್ದರು ಎನ್ನುವುದು ಅವರ ಅಭಿಮಾನಿಗಳ ಅಭಿಪ್ರಾಯ.
ಮಿತಭಾಷಿಯಾಗಿದ್ದ ಅವರು ಅಷ್ಟೊಂದು ಅಭಿಮಾನಿಗಳನ್ನು ಸಂಪಾದಿಸಿದ ಹೊರತಾಗಿಯೂ ನಿರಾಡಂಬರ ಜೀವನನ್ನು ನಡೆಸಿದವರು ಎನ್ನುತ್ತಾರೆ ಅವರ ಒಡನಾಡಿ, 99 ರ ಹರೆಯದ ಹಿರಿಯ ಮದ್ದಲೆ ವಾದಕರಾದ ಹಿರಿಯಡಕ ಗೋಪಾಲ ರಾಯರು.
ಅಂದಿನ ಕಾಲದಲ್ಲಿ ಮೇಳದ ಪೆಟ್ಟಿಗೆಗಳು ಹೊತ್ತುಕೊಂಡು ಹೋಗುವ ಕಾಲವಿತ್ತು.ಒಮ್ಮೆ ಆಟ ಮುಗಿಸಿ ಬರುವಾಗ ದಾರಿಯಲ್ಲಿ ಪೆಟ್ಟಿಗೆ ಹೊತ್ತ ಆಳಿನ ಕಾಲಿಗೆ ದೊಡ್ಡ ಮುಳ್ಳು ಚುಚ್ಚಿ ರಕ್ತ ಬರಲಾರಂಭಿಸಿತಂತೆ. ಪಕ್ಷದಲ್ಲಿದ್ದ ರಾಮಗಾಣಿಗರು ತಕ್ಷಣ ಆತನ ತಲೆಮೇಲಿದ್ದ ಪೆಟ್ಟಿಗೆಯನ್ನು ತಾನು ಹೊತ್ತಿದ್ದರಂತೆ. ಈ ವಿಚಾರವನ್ನು ಹಿರಿಯಡಕ ಗೋಪಾಲ ರಾಯರೇ ನಮ್ಮ ಬಳಿ ಹಂಚಿಕೊಂಡು ರಾಮಗಾಣಿಗರನ್ನು ನೆನೆಸಿಕೊಂಡರು. ಅವರ ಬಗ್ಗೆ ಹೇಳ ಹೊರಟರೆ ಒಂದು ದಿನವಲ್ಲ , ವರ್ಷ ಕಳೆದರೂ ಹೇಳುವಷ್ಟಿದೆ ಎನ್ನುವುದು ರಾಯರ ಅಭಿಪ್ರಾಯ.
1966ರಲ್ಲಿ ಪಾರ್ಶ್ವವಾಯು ಪೀಡಿತರಾದ ರಾಮಗಾಣಿಗರು 1968 ಡಿಸೆಂಬರ್ 11 ರಂದು ಇಹಲೋಕದ ಯಾತ್ರೆ ಮುಗಿಸಿದರು.
ಅವರ ಕಾಲಾನಂತರ ಶ್ರೀ ಕ್ಷೇತ್ರ ಮಂದಾರ್ತಿ ವತಿಯಿಂದ ಅವರ ಕಲಾ ಜೀವನದ ಕುರಿತಾಗಿ ಶ್ರೀ ಕ್ಷೇತ್ರ ಮಂದಾರ್ತಿ ಮೇಳದಲ್ಲಿ ಹಾರಾಡಿ ರಾಮಗಾಣಿಗರು ಎಂಬ ಪುಸ್ತಕವನ್ನು ಪ್ರಕಟಿಸಲಾಗಿದೆ.
ಜನ್ಮ ಶಾತಾಬ್ಧಿ ವೇಳೆ ಯಕ್ಷಲೋಕದ ಕೋಲ್ಮಿಂಚು ಎಂಬ ವಿಶೇಷ ಸಂಕಲನವನ್ನೂ ಪ್ರಕಟಿಸಿ ಯುವ ಪೀಳಿಗೆ ರಾಮಗಾಣಿಗರ ಕುರಿತಾಗಿನ ಪರಿಚಯ ಮಾಡುವ ಕಾರ್ಯವನ್ನು ಯಕ್ಷ ದೇಗುಲ ಸಂಸ್ಥೆ ಮಾಡಿದೆ.
ಇಂದಿಗೂ ಹಿರಿಯ ಅಭಿಮಾನಿಗಳ ಮನದಲ್ಲಿ ರಾಮಗಾಣಿಗರು ನಿರ್ವಹಿಸಿದ ಪಾತ್ರಗಳು ರಾರಾಜಿಸುತ್ತಿವೆ. ರಾಮಗಾಣಿಗರ ಆದರ್ಶಗಳು ಇಂದಿನ ಯುವ ಕಲಾವಿದರಿಗೆ ಆದರ್ಶವಾಗಲಿ ಎನ್ನುವುದು ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.