ಬಾಲಕ ಭಕ್ತ ಪ್ರಹ್ಲಾದನಾಗಿ ಮಿಂಚಿದ್ದ ನಟ ಲೋಕೇಶ್ ಇಂದಿಗೂ ಅಜರಾಮರ!
Team Udayavani, Sep 13, 2018, 11:31 PM IST
ಕನ್ನಡ ಚಿತ್ರರಂಗದ ನಟ ಲೋಕೇಶ್ ಅವರ ಅಭಿನಯ ಸದಾ ಪ್ರೇಕ್ಷಕರಲ್ಲಿ, ಅಭಿಮಾನಿಗಳಲ್ಲಿ ಕಾಡುತ್ತಲೇ ಇರುತ್ತದೆ. ನಾಯಕ ನಟರಾಗಿ ಮಾತ್ರವಲ್ಲ, ಅನೇಕ ಚಿತ್ರಗಳಲ್ಲಿ ಪೋಷಕ ನಟನಾಗಿಯೂ ಅಭಿನಯಿಸಿದ್ದರು. ಪ್ರಸಿದ್ಧ ರಂಗ ಕಲಾವಿದರಾಗಿದ್ದ ಲೋಕೇಶ್ ಕನ್ನಡ ಚಿತ್ರರಂಗ ಕಂಡ ಪ್ರಥಮ ನಾಯಕ ನಟ. ಅಷ್ಟೇ ಅಲ್ಲ ಭುಜಂಗಯ್ಯನ ದಶಾವತಾರ ದಿ.ಆಲನಹಳ್ಳಿ ಕೃಷ್ಣ ಅವರ ವಿಶಿಷ್ಟ ಕಾದಂಬರಿಯನ್ನು ಚಿತ್ರ ಮಾಡುವ ಮೂಲಕ ನಿರ್ದೇಶನಕ್ಕೂ ಕೈ ಹಾಕಿ ಯಶಸ್ಸು ಪಡೆದ ಹೆಗ್ಗಳಿಕೆ ಲೋಕೇಶ್ ಅವರದ್ದು. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್, ಶ್ರೀನಾಥ್ ಪ್ರಭಾಕರ್ ಇವರೆಲ್ಲ ತಮ್ಮದೇ ಆದ ನಟನೆ ಹಾಗೂ ಫೈಟ್, ಡ್ಯುಯೆಟ್ ಮೂಲಕ ಪ್ರಸಿದ್ಧರಾಗಿದ್ದರು. ಆದರೆ ಲೋಕೇಶ್ ಅವರು ತಮ್ಮ ಸಹಜವಾಗಿ ಶ್ರೇಷ್ಠ ಅಭಿನಯ ನೀಡಿದ ಮಹಾನ್ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ..
ಲೋಕೇಶ್ ಅವರ ಹಾದಿ ಸುಖದ ಸುಪ್ಪತ್ತಿಗೆ ಆಗಿರಲಿಲ್ಲ!
ತಮಗೆ ದೊರೆತ ಪಾತ್ರಕ್ಕೆ ತಕ್ಕಂತೆ ನಟಿಸಿ ಅದಕ್ಕೆ ಜೀವ ತುಂಬಿ ಅಪಾರ ಅಭಿಮಾನಿಗಳನ್ನು ಪಡೆದುಕೊಂಡವರು ಲೋಕೇಶ್. ಕಷ್ಟ, ಕಾರ್ಪಣ್ಯಗಳ ಮೂಲಕ ಹೋರಾಡಿ ಕನ್ನಡ ಚಿತ್ರರಂಗದಲ್ಲಿ, ಅಭಿಮಾನಿಗಳಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿಕೊಂಡಿದ್ದಾರೆ.
ಲೋಕೇಶ್ ಅವರು ತಮ್ಮ 10ನೆಯ ವಯಸ್ಸಿಗೆ ಭಕ್ತ ಪ್ರಹ್ಲಾದನ ಪಾತ್ರ( ಡಾ.ರಾಜ್ ಕುಮಾರ್ ಅಭಿನಯಿಸಿದ್ದ ಭಕ್ತ ಪ್ರಹ್ಲಾದ ಸಿನಿಮಾಕ್ಕಿಂತ ಮೊದಲು 1958ರಲ್ಲಿ ಎಚ್ ಎಸ್ ಕೃಷ್ಣಸ್ವಾಮಿ ಹಾಗೂ ಸುಬ್ಬಯ್ಯ ನಾಯ್ಡು ಅವರು ನಿರ್ದೇಶಿಸಿದ್ದ ಭಕ್ತ ಪ್ರಹ್ಲಾದ ಸಿನಿಮಾದಲ್ಲಿನ ಪಾತ್ರ. ಇದರಲ್ಲಿ ಉದಯ್ ಕುಮಾರ್, ಕೆಎಸ್ ಅಶ್ವತ್ಥ್, ಲೀಲಾವತಿ, ಬಾಲಕ ಲೋಕೇಶ್ ನಟಿಸಿದ್ದರು) ಮಾಡುವ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟಿದ್ದರು.
ಹುಣಸೂರು ಕೃಷ್ಣಮೂರ್ತಿ ಅವರ ಅಡ್ಡದಾರಿ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದ ಲೋಕೇಶ್ ನಂತರ ಕೆಲವು ಕಾಲ ಕೆಲಸವಿಲ್ಲದೆ ಕುಳಿತಿದ್ದರು. ತದನಂತರ ಗಿರೀಶ್ ಕಾರ್ನಾಡ್ ಅವರ ಕಾಡು ಚಿತ್ರದಲ್ಲಿ ಅಭಿನಯಿಸಿ ತಮ್ಮ ಪ್ರತಿಭೆಯನ್ನು ಹೊರಹಾಕಿದ್ದರು. ಭೂತಯ್ಯನ ಮಗ ಅಯ್ಯು ಕನ್ನಡ ಚಿತ್ರರಂಗದ ಮೈಲಿಗಲ್ಲಾದ ಚಿತ್ರ..ಇದರಲ್ಲಿ ಲೋಕೇಶ್ ಅವರ ಅಭಿನಯ ಪ್ರೇಕ್ಷಕರ ಮನದಾಳದಲ್ಲಿ ಅಚ್ಚೊತ್ತಿ ಬಿಟ್ಟಿತ್ತು. ಇದು ಅವರ ಅದ್ಭುತ ನಟನೆಗೆ ಸಾಕ್ಷಿ. ಭೂತಯ್ಯನ ಮಗ ಅಯ್ಯು ಚಿತ್ರ ತಮಿಳು, ಹಿಂದಿ ಹಾಗೂ ತೆಲುಗಿಗೆ ರಿಮೇಕ್ ಆಗಿತ್ತು.
ರಂಗಭೂಮಿಯಲ್ಲಿ ತಮ್ಮ ನಟನೆಯ ತಾಕತ್ತು ತೋರಿಸಿದ್ದ ಲೋಕೇಶ್ ಅವರು ಚಿತ್ರರಂಗದಲ್ಲಿಯೂ ಅದನ್ನು ಸಾಬೀತುಪಡಿಸಿದ್ದರು. ತಂದೆ ಸುಬ್ಬಯ್ಯ ನಾಯ್ಡು ಅವರು ರಂಗಭೂಮಿಯ ದಿಗ್ಗಜ ಎನ್ನಿಸಿಕೊಂಡಿದ್ದರು. ತಂದೆಯ ನಿಧನದ ನಂತರ ಲೋಕೇಶ್ ಅವರು ನಟರಂಗ ನಾಟಕ ರಂಗ ಕಟ್ಟಿದ್ದರು. ತುಘಲಕ್, ಕಾಕನಕೋಟೆ, ಷಹಜಹಾನ್, ಮಿಡ್ ಸಮ್ಮರ್ ನೈಟ್ ಡ್ರೀಮ್ಸ್ ಮುಂತಾದ ಪ್ರಮುಖ ನಾಟಕಗಳನ್ನು ಪ್ರದರ್ಶಿಸಿ ಯಶಸ್ಸು ಗಳಿಸಿದ್ದರು. ಕಾಕನಕೋಟೆ ಸಿನಿಮಾದ ಮೂಲಕ ಲೋಕೇಶ್ ಅವರು ಮತ್ತಷ್ಟು ಜನಪ್ರಿಯಗೊಂಡಿದ್ದರು.
ಡಾಕ್ಟರ್ ಆಗಬೇಕೆಂದು ಆಗಿದ್ದು ನಟ…
ಲೋಕೇಶ್ ಅವರು ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕೆಂಬ ಮಹದಾಸೆ ಹೊಂದಿದ್ದರು. ಆದರೆ ಕಲಿಕೆ ಅವರಿಗೆ ಪ್ರಯಾಸದಾಯಕವಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಇಂಜೆಕ್ಷನ್ ಅಂದರೆ ಲೋಕೇಶ್ ಗೆ ಎಲ್ಲಿಲ್ಲದ ಭಯವಿತ್ತಂತೆ. ಕೊನೆಗೆ ಇಂಜಿನಿಯರ್ ಆಗೋದು ಬೇಡ, ಡಾಕ್ಟರ್ ಆಗೋದು ಬೇಡ ಎಂದು ಕಾಲಿಟ್ಟಿದ್ದು ಮತ್ತದೇ ನಟನೆಗೆ! ಅಂತೂ 1958ರಲ್ಲಿ ತೆರೆ ಕಂಡ ಭಕ್ತ ಪ್ರಹ್ಲಾದಲ್ಲಿ ಬಾಲ ನಟನಾಗಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.
ನಿನಗಾಗಿ ನಾನು, ದೇವರ ಕಣ್ಣು, ಪರಿವರ್ತನೆ, ಕಾಕನಕೋಟೆ, ವಂಶ ಜ್ಯೋತಿ, ಪರಸಂಗದ ಗೆಂಡೆತಿಮ್ಮ, ಸುಳಿ, ಅದಲು ಬದಲು, ಮುಯ್ಯಿ, ದಾಹ, ಚಂದನದ ಗೊಂಬೆ, ಭಕ್ತ ಸಿರಿಯಾಳ, ಹದ್ದಿನ ಕಣ್ಣು, ಎಲ್ಲಿಂದಲೋ ಬಂದವರು, ಯಾವು ಹೂವು, ಯಾರ ಮುಡಿಗೋ ಹೀಗೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದ ಲೋಕೇಶ್ ಅವರು ಪರಭಾಷೆ ಚಿತ್ರಗಳಲ್ಲಿ ನಟಿಸದೇ ಕನ್ನಡ ಚಿತ್ರರಂಗದಲ್ಲಿಯೇ ಭದ್ರವಾಗಿ ನೆಲೆಯೂರಿ ಪ್ರೇಕ್ಷಕರ ಮನಗೆದ್ದಿದ್ದರು.
ಲೋಕೇಶ್ ಅವರ ನಾಟಕದಲ್ಲಿನ ಅದ್ಭುತ ಪಾತ್ರಕ್ಕೆ ಮನಸೋತಿದ್ದ ಗಿರಿಜಾ ಅವರು ಗೆಳತಿಯರಲ್ಲಿ ಪಂಥಕಟ್ಟಿ ಲೋಕೇಶ್ ಅವರನ್ನು ಮಾತನಾಡಿಸಿದ್ದರಂತೆ. ಹೀಗೆ ಬೆಳೆದ ಸ್ನೇಹದಿಂದಾಗಿಯೇ ಕೊನೆಗೆ ಇಬ್ಬರು ಸತಿ, ಪತಿಗಳಾಗಿದ್ದರು. ಹಿರಿಯರ ಒಪ್ಪಗೆಯೊಂದಿಗೆ ಲೋಕೇಶ್ ಹಾಗೂ ಗಿರಿಜಾ ಅವರು ದೇವಸ್ಥಾನವೊಂದರಲ್ಲಿ ಸರಳವಾಗಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಮದುವೆಯಾಗಿದ್ದರು. ಅದೇ ದಿನ ಕಲಾಕ್ಷೇತ್ರದಲ್ಲಿ ಇಬ್ಬರೂ ನಾಟಕದಲ್ಲಿ ಪಾತ್ರ ಮಾಡಿದ್ದರಂತೆ. ಅಲ್ಲಿ ಲೋಕೇಶ್ ಅಪ್ಪ, ಗಿರಿಜಾ ಅವರದ್ದು ಮಗಳ ಪಾತ್ರವಂತೆ. ನಾಟಕದ ಕೊನೆಯ ದೃಶ್ಯದಲ್ಲಿ ಇಬ್ಬರೂ ಹಾರ ಬದಲಾಯಿಸಿಕೊಳ್ಳುವ ಮೂಲಕ ದಂಪತಿಗಳಾಗುತ್ತಿದ್ದಾರೆ ಎಂದು ಅನೌನ್ಸ್ ಮಾಡಿದ್ದರು!
ಶಿಸ್ತು, ಮುಂಗೋಪಿ, ಮೂಡಿಯಾಗಿದ್ದ ಲೋಕೇಶರ ಭೂತಯ್ಯನ ಮಗ ಅಯ್ಯು, ಪರಸಂಗದ ಗೆಂಡೆ ತಿಮ್ಮ ಹಾಗೂ ಬ್ಯಾಂಕರ್ ಮಾರ್ಗಯ್ಯ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಕರ್ನಾಟಕ ಸ್ಟೇಟ್ ಫಿಲ್ಮ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಸೃಜನ್ ಹಾಗೂ ಪೂಜಾ ಲೋಕೇಶ್, ಪತ್ನಿ ಗಿರಿಜಾ ಜೊತೆ ಸಂತೃಪ್ತ ಜೀವನ ನಡೆಸುತ್ತಿದ್ದ ಲೋಕೇಶ್ ಅವರು 2004ರ ಅಕ್ಟೋಬರ್ 14ರಂದು ಇಹಲೋಕ ತ್ಯಜಿಸಿದ್ದರು. ಆದರೂ ಲೋಕೇಶ್ ಅವರ ಪಾತ್ರ ಇಂದಿಗೂ ನಮ್ಮನ್ನು ಕಾಡುತ್ತೆ ಎಂಬುದರಲ್ಲಿ ಎರಡು ಮಾತಿಲ್ಲ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.