ವಿಮೆ ಬಗ್ಗೆ ಅಸಡ್ಡೆ ಬೇಡ ; ಕೇರಳ, ಕೊಡಗು ಪ್ರವಾಹ ಕಲಿಸಿದೆ ಪಾಠ !
Team Udayavani, Sep 3, 2018, 7:00 AM IST
ವಿಮೆ ಮಾಡುವುದರಲ್ಲಿ ಭಾರತೀಯರ ನಿರಾಸಕ್ತಿ ಜಗತ್ ಪ್ರಸಿದ್ಧ. ವಿಮೆಯ ರೂಪದಲ್ಲಿ ಜನರಿಗೆ ಒದಗುವ ಸಾಮಾಜಿಕ ಭದ್ರತೆ ಇಲ್ಲಿ ಬಹುತೇಕ ಶೂನ್ಯ ಎನ್ನುವುದೊಂದು ವಿಸ್ಮಯ, ಸೋಜಿಗ, ದುರದೃಷ್ಟಕರ !
ಹಾಗೆ ನೋಡಿದರೆ ರಾಷ್ಟ್ರಪತಿ ಮಹಾತ್ಮಾ ಗಾಂಧೀಜಿಯವರಿಗೆ ಕೂಡ ವಿಮೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ವಿಮೆ ಮಾಡಿದರೆ ನಮಗೆ ದೇವರ ಮೇಲಿನ ವಿಶ್ವಾಸ ಕುಗ್ಗುತ್ತದೆ ಎಂಬುದೇ ಅವರ ಅಭಿಪ್ರಾಯವಾಗಿತ್ತು. ಆದರೆ ಜಗತ್ತು ಈಗ ಸಾಕಷ್ಟು ಬದಲಾಗಿದೆ. ಇಂದಿನ ಅತ್ಯಂತ ಅನಿಶ್ಚಿತ ದಿನಗಳಲ್ಲಿ ವಿಮೆ ಅಲ್ಲದೆ ಬೇರೆಯದರಲ್ಲಿ ವಿಶ್ವಾಸ ಇಡುವುದು ಅಸಾಧ್ಯ ಎಂಬಷ್ಟು ಜಗತ್ತು ವಿಪರ್ಯಾಸಕರವಾಗಿ ಬದಲಾಗಿದೆ.
ಇಂದು ಎಲ್ಲದಕ್ಕೂ ವಿಮೆ ಮಾಡುವ ಸ್ಥಿತಿ ಒದಗಿದೆ. ಕೇವಲ ಜೀವ ವಿಮೆ ಮಾತ್ರವಲ್ಲ; ವಾಹನ ವಿಮೆ, ಗೃಹ ವಿಮೆ, ಆರೋಗ್ಯ ವಿಮೆ, ಮಹಾ ರೋಗಗಳ ವಿರುದ್ಧವೂ ವಿಮೆ – ಹೀಗೆ ನಮ್ಮ ಆಧುನಿಕ ಬದುಕು ಸಂಪೂರ್ಣವಾಗಿ ವಿಮೆಗೆ ಒಳಪಡುವಂತಹ ಭಯಾನಕ ಸ್ಥಿತಿಯಲ್ಲಿ ನಾವು ಜೀವಿಸುತ್ತಿದ್ದೇವೆ.
ಪ್ರಪಂಚದಲ್ಲೇ ಇಂದು ಅತ್ಯಧಿಕ ಜನರು ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಸಾಯುತ್ತಾರೆ; ಹಾಗಿರುವಾಗ ಭಾರತೀಯರಿಗೆ ಅಪಘಾತ ವಿಮೆ ನಮಗೆ ಅತೀ ಮುಖ್ಯವಾಗುತ್ತದೆ ಎಂದು ಪರಿಣತರು ಹೇಳುತ್ತಾರೆ. ಯಾವುದೇ ಸುಳಿವು ನೀಡದೆ ದೊಡ್ಡ ದೊಡ್ಡ ರೋಗಗಳಿಗೆ ನಾವು ಧುತ್ತನೇ ಬಲಿಯಾಗುವ ಸ್ಥಿತಿಯಲ್ಲಿ ನಮಗೆ ಕ್ಯಾನ್ಸರ್ ನಂತಹ ಮಹಾ ರೋಗಗಳ ವಿರುದ್ಧವೂ ವಿಮೆ ಅಗತ್ಯವೆನಿಸುತ್ತದೆ. ಆರೋಗ್ಯ ವಿಮೆಯಂತೂ ಎಲ್ಲರಿಗೂ ಅಗತ್ಯವಾಗಿದೆ. ಅಂತೆಯೇ 30,000 ರೂ. ವರೆಗಿನ ಮೆಡಿಕಲ್ ಪಾಲಿಸಿ ಪ್ರೀಮಿಯಂ ಮೇಲೆ ಆದಾಯ ತೆರಿಗೆ ವಿನಾಯಿತಿಯನ್ನು ಸರಕಾರವೇ ನಮಗೆ ದಯಪಾಲಿಸಿದೆ.
ಈಗ ದೇಶವನ್ನು ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆ ಎಂದರೆ ನೈಸರ್ಗಿಕ ವಿಕೋಪ. ದೇಶದ ಬಹುಭಾಗಗಳಲ್ಲಿ ಇಂದು ಹವಾಮಾನ ವೈಪರೀತ್ಯದ ಫಲವಾಗಿ ನಿರಂತರ ಜಡಿ ಮಳೆ, ಭೂಕುಸಿತ, ಪ್ರವಾಹ ಮುಂತಾದ ದುರಂತಗಳು ಸಂಭವಿಸುತ್ತಿವೆ. ಕುಂಭ ದ್ರೋಣ ಮಳೆ ಬಂದು ಪ್ರವಾಹ, ಭೂಕುಸಿತ ಉಂಟಾಯಿತೆಂದರೆ ಅಮಾಯಕ ಮನುಷ್ಯ ತನ್ನ ಮನೆಯ ಸದಸ್ಯರನ್ನು, ಮನೆ ಮಠ, ಆಸ್ತಿ, ಪಾಸ್ತಿ, ಸೊತ್ತು, ವಾಹನ ಮುಂತಾಗಿ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ.
ದೇವರ ನಾಡು ಎನಿಸಿರುವ ಕೇರಳ ಮತ್ತು ಕರ್ನಾಟಕದ ಕೊಡಗು ಇದಕ್ಕೊಂದು ತಾಜಾ ಉದಾಹರಣೆ. ಕೇರಳದಲ್ಲಿ ಈ ಆಗಸ್ಟ್ ತಿಂಗಳಲ್ಲಿ ಸುರಿದ ನಿರಂತರ ಮಳೆ, ಅದರಿಂದ ಉಂಟಾದ ಪ್ರವಾಹ, ಭೂಕುಸಿತಕ್ಕೆ ವ್ಯಾಪಕ ನಾಶ, ನಷ್ಟ , ಜೀವ ಹಾನಿ ಉಂಟಾಗಿದೆ. ಅಣೆಕಟ್ಟುಗಳು ತುಂಬಿ ಹರಿದ ಪರಿಣಾಮವಾಗಿ ಹೊರ ಬಿಡಲಾದ ಅಗಾಧ ನೀರಿನ ಪ್ರಮಾಣವೇ ತಗ್ಗು ಪ್ರದೇಶಗಳಲ್ಲಿ ವ್ಯಾಪಕ ನೆರೆ, ಭೂಕುಸಿತ ಉಂಟು ಮಾಡಿದೆ.
ಕೇವಲ ಒಂದೇ ತಿಂಗಳ ಮಹಾ ಮಳೆ ಕೇರಳದಲ್ಲಿ 370 ಜೀವಗಳನ್ನು ಬಲಿ ಪಡೆದಿದೆ. ರಾಜ್ಯಕ್ಕೆ 20,000 ಕೋಟಿ ರೂ. ಗಳ ಆರ್ಥಿಕ ನಷ್ಟ ಉಂಟಾಗಿದೆ. ವಿಶೇಷದ ಮಾತೆಂದರೆ ಇದರಲ್ಲಿ ಈ ತನಕ ದಾಖಲಾಗಿರುವಂತೆ ವಿಮಾ- ನಷ್ಟದ ಪ್ರಮಾಣ ಕೇವಲ 1,000 ಕೋಟಿ ರೂ. ಉಳಿದು 19,000 ಕೋಟಿ ರೂ. ನಷ್ಟವನ್ನು ರಾಜ್ಯ ಸರಕಾರವೇ ಭರಿಸಬೇಕಾಗಿದೆ. ಕೊಡಗಿನ ಸ್ಥಿತಿ ಕೂಡ ಇದೇ ಆಗಿದೆ.
ಕೇರಳ ಮತ್ತು ಕೊಡಗು ಕಂಡಿರುವ ಭಾರೀ ಜೀವ ಹಾನಿ ಮತ್ತು ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಇದೀಗ ವಿಮಾ ಕಂಪೆನಿಗಳ ವ್ಯವಹಾರದಲ್ಲಿ ಬಿರುಸು ತೋರಿ ಬಂದಿದೆ. ಜೀವ ವಿಮೆ ಮಾತ್ರವಲ್ಲದೆ ವಾಹನ, ಆರೋಗ್ಯ, ಮೋಟಾರು ವಾಹನ, ಮನೆ, ಆಸ್ತಿ ಪಾಸ್ತಿ ಮುಂತಾದ ಸರ್ವ ಬಗೆಯ ವಿಮಾ ಯೋಜನೆಗಳ ಬಗ್ಗೆ ಜನರು ಭಾರೀ ಸಂಖ್ಯೆಯಲ್ಲಿ ವಿಚಾರಿಸುತ್ತಿದ್ದಾರೆ ! ಹಿಂದೆಂದೂ ಕಂಡು ಬಾರದಿದ್ದ ಈ ವಿಮಾ ಪ್ರವೃತ್ತಿ ಈಗ ದಿಢೀರನೆ ತೋರಿ ಬಂದಿರುವುದು ಎಲ್ಲ ದೃಷ್ಟಿಯಿಂದಲೂ ಸ್ವಾಗತಾರ್ಹವೇ ಆಗಿದೆ.
ನಿಜಕ್ಕಾದರೆ ವಿಮೆ ನಮ್ಮ ಜೀವನದ ಒಂದು ಮುಖ್ಯ ಭಾಗವೇ ಆಗಬೇಕಾಗಿದೆ. ನಾವು ಉದ್ಯೋಗಕ್ಕೋ, ವ್ಯಾಪಾರ ವಹಿವಾಟಿಗೋ ತೊಡಗಿ ಆದಾಯ ಗಳಿಸಲು ತೊಡಗಿದಾಕ್ಷಣವೇ ಜೀವ ವಿಮೆ, ಆರೋಗ್ಯ ವಿಮೆ, ಅಪಘಾತ ವಿಮೆ ಮುಂತಾಗಿ ಯಾವೆಲ್ಲ ಜೀವನಾವಶ್ಯಕ ವಿಮೆಗಳು ಇವೆಯೋ ಅವೆಲ್ಲವುಗಳ ಬಗ್ಗೆ ಆಸಕ್ತಿಯನ್ನು ತೋರುವುದು ಅಗತ್ಯ.
ವಿಶೇಷವೆಂದರೆ ನಮ್ಮ ದೇಶದಲ್ಲಿ ಜನರು ಭಾರೀ ದುರಂತಗಳಿಗೆ ಗುರಿಯಾಗಿ ತಮ್ಮ ಬದುಕು ಮೂರಾಬಟ್ಟೆ ಆದಾಗಲೇ ವಿಮೆಯ ಬಗ್ಗೆ ವಿಚಾರಿಸುವುದು ರೂಢಿ. ಕೆಲ ಸಮಯದ ಹಿಂದೆ ಚೆನ್ನೈನಲ್ಲಿ ಸುರಿದಿದ್ದ ಮಹಾ ಮಳೆಗೆ ಮಹಾ ಪ್ರವಾಹವೇ ಉಂಟಾಗಿತ್ತು. ಅಂತಾರಾಷ್ಟ್ರೀಯ ಪರಿಣತರ ಅಧ್ಯಯನದ ಪ್ರಕಾರ ಆ ದುರಂತದಲ್ಲಿ ಸಂಭವಿಸಿದ್ದ ನಷ್ಟ 2.2 ಶತಕೋಟಿ ಡಾಲರ್ (ಸುಮಾರು 15,000 ಕೋಟಿ ರೂ.). ಆದರೆ ವಿಮೆಗೆ ಒಳಪಟ್ಟ ನಷ್ಟದ ಮೊತ್ತ ಕೇವಲ 4,800 ಕೋಟಿ ರೂ. ವಿಶೇಷವೆಂದರೆ ಈ ಮೊತ್ತದಲ್ಲಿ ಸಾಮಾನ್ಯ ವಿಮಾ ಕ್ಷೇತ್ರದ ನಷ್ಟ ಜೀವವಿಮಾ ಕ್ಷೇತ್ರದ ನಷ್ಟಕ್ಕಿಂತ ಹೆಚ್ಚಾಗಿತ್ತು. ಎಂದರೆ ಮನುಷ್ಯ ಜೀವಕ್ಕಿಂತಲೂ ಆತನ ಆಸ್ತಿ ಪಾಸ್ತಿ ಸೊತ್ತುಗಳಿಗೆ ಸಂದ ವಿಮಾ ಪರಿಹಾರವೇ ಅಧಿಕ !
ಚೆನ್ನೈ ನೆರೆಗೆ 420 ಜನರು ಬಲಿಯಾಗಿದ್ದರು. ಹಲವು ಸಾವಿರ ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಿದ್ದರೂ ಗರಿಷ್ಠ ವಿಮಾ ಕ್ಲೇಮುಗಳು ಬಂದದ್ದು ಮನುಷ್ಯ ಜೀವ ನಷ್ಟಕ್ಕಲ್ಲ; ಬದಲು ವಾಹನಗಳಿಗೆ ಮತ್ತು ಸಾದಾ ಸೊತ್ತುಗಳಿಗೆ ! ಉದ್ಯಮ ನಷ್ಟಕ್ಕೆ ಸಂಬಂಧಿಸಿದ ಕಂಪೆನಿ ಕ್ಲೇಮುಗಳು ಗಮನಾರ್ಹವಾಗಿದ್ದವು.
ನಿಜಕ್ಕಾದರೆ ಜೀವ ವಿಮೆಯನ್ನು ಸಣ್ಣ ವಯಸ್ಸಿನಲ್ಲೇ ಮಾಡಬೇಕು. ಏಕೆಂದರೆ ಕಡಿಮೆ ಲೈಫ್ ರಿಸ್ಕ್ ಇರುವ ಕಾರಣ ಪ್ರೀಮಿಯಂ ಕೂಡ ಕಡಿಮೆಯೇ ಇರುತ್ತದೆ. 50 ದಾಟುವ ಹೆತ್ತವರು ಆರೋಗ್ಯ ವಿಮೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು.
ನಮ್ಮಲ್ಲಿ ಹೆಚ್ಚಿನವರು ತಮ್ಮ ಉದ್ಯೋಗದಾತರು ಒದಗಿಸುವ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ನೆಚ್ಚಿಕೊಳ್ಳುತ್ತಾರೆ ಮತ್ತು ತಾವು ಸ್ವತಃ ತಮಗೆ, ತಮ್ಮ ಕುಟುಂಬದವರಿಗೆ ಪರ್ಯಾಪ್ತ ಪ್ರಮಾಣದ ಆರೋಗ್ಯವಿಮೆ ಪಡೆಯುವುದನ್ನು ಮುಂದೂಡುತ್ತಾರೆ ! ಸಮೂಹ ವಿಮೆಯಲ್ಲಿ ಒಳಗೊಳ್ಳುವ ವಿಮೆಯ ಪ್ರಮಾಣ ಕಡಿಮೆ ಇರುತ್ತದೆ; ಆಸ್ಪತ್ರೆ ಭೇಟಿ, ಭರ್ತಿ ವಿಷಯದಲ್ಲಿ ಅದರ ಆರ್ಥಿಕ ಸೌಲಭ್ಯ ಅಪರ್ಯಾಪ್ತವಾಗಿರುತ್ತದೆ. ಇದರ ನಿಖರ ಚಿತ್ರ ಅದೆಷ್ಟೋ ಮಂದಿಗೆ ಗೊತ್ತೇ ಇರುವುದಿಲ್ಲ.
ಅತ್ಯಧಿಕ ಬಡ್ಡಿಗೆ ಗೃಹ ಸಾಲ ಪಡೆದು ಸ್ವಂತ ಮನೆ ಹೊಂದುವ ಮಧ್ಯಮ ವರ್ಗದವರಿಗೆ ಗೃಹ ವಿಮೆಯು ಹೆಚ್ಚುವರಿ ಹೊರೆಯಾಗಿ ಕಾಣುವುದರಿಂದ ಅದನ್ನು ಅವರು ಅಲಕ್ಷಿಸುತ್ತಾರೆ. ಗೃಹ ಸಾಲ, ಬಡ್ಡಿ ಹೊರೆಯೇ ಅವರ ಮೇಲೆ ಕನಿಷ್ಠ 20 ವರ್ಷಗಳ ಮಟ್ಟಿಗೆ ಅಸಹನೀಯ ಆರ್ಥಿಕ ಹೊರೆಯನ್ನು ಹಾಕಿರುತ್ತದೆ ಎನ್ನುವುದು ಸತ್ಯ. ವಿದೇಶಗಳಲ್ಲಿ ಗೃಹ ಸಾಲ ಕಡ್ಡಾಯ. ಜೀವ ವಿಮೆ, ಆರೋಗ್ಯ ವಿಮೆ, ಅಪಘಾತ ವಿಮೆಗಳೂ ಕಡ್ಡಾಯ.
ಕೇರಳ, ಕೊಡಗಿನಲ್ಲಿ ಆಗಿರುವಂತಹ ಮಹಾ ನೈಸರ್ಗಿಕ ಪ್ರಕೋಪಗಳು ಮನುಕುಲವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟ ವಿಪರೀತವಾಗಿ ಕಾಡುತ್ತಲೆ ಇರುತ್ತವೆ. ಏಕೆಂದರೆ ವಿಜ್ಞಾನ, ತಂತ್ರಜ್ಞಾನ ಬೆಳೆದಂತೆ ಮನುಷ್ಯ ಪ್ರಕೃತಿಯನ್ನು ಇನ್ನಷ್ಟು ಹಿಂಡಿ ಹಿಪ್ಪೆ ಮಾಡುತ್ತಾನೆ; ಶೋಷಿಸುತ್ತಾನೆ. ಇದಕ್ಕೆ ಪ್ರತಿಯಾಗಿ ಮಿತಿ ಮೀರಿದ ಒಂದು ಹಂತದಲ್ಲಿ ಪ್ರಕೃತಿಯೇ ಮನುಕುಲದ ನಾಶಕ್ಕೆ ಕಾರಣವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.