ಮಕ್ಕಳ ಶಿಕ್ಷಣಕ್ಕೆ ತಗಲುವ ವೆಚ್ಚ ಎಷ್ಟು? ದೀರ್ಘಾವಧಿ ಹೂಡಿಕೆ ಅಗತ್ಯ
Team Udayavani, Nov 19, 2018, 11:29 AM IST
ಮಕ್ಕಳ ಭವಿಷ್ಯವನ್ನು ಆರ್ಥಿಕವಾಗಿ ಭದ್ರಗೊಳಿಸುವುದು ಬಹುತೇಕ ಎಲ್ಲ ಹೆತ್ತವರ ಜೀವನೋದ್ದೇಶವಾಗಿರುವುದರಲ್ಲಿ ಯಾವುದೇ ಅತಿಶಯ ಇಲ್ಲ. ಹಾಗಿದ್ದರೂ ಈ ನಿಟ್ಟಿನಲ್ಲಿ ವಸ್ತು ನಿಷ್ಠ ಚಿಂತನೆ ಹಿಂದೆಂದಿಗಿಂತಲೂ ಇಂದು ಮುಖ್ಯವಾಗುತ್ತದೆ.
ಮಕ್ಕಳು ದೊಡ್ಡವರಾದಾಗ ಡಾಕ್ಟರ್, ಇಂಜಿನಿಯರ್, ವಿಜ್ಞಾನಿ ಮುಂತಾಗಿ ಏನೇನೆಲ್ಲ ಆಗಬೇಕೆಂದು ಹೆತ್ತವರು ಕನಸು ಕಾಣುತ್ತಾರೆ. ಆದರೆ ಮಕ್ಕಳಿಗಾಗಿನ ತಮ್ಮ ಈ ಆಶೋತ್ತರಗಳನ್ನು ಈಡೇರಿಸುವ ಆರ್ಥಿಕ ಮಾರ್ಗೋಪಾಯಗಳನ್ನು ಮಾತ್ರ ಬಹತೇಕ ಹೆಚ್ಚಿನ ತಂದೆ-ತಾಯಿಗಳು ಅರಿತಿರುವುದಿಲ್ಲ ಎನ್ನುವುದು ವಾಸ್ತವ.
ಇದಕ್ಕೆ ಮುಖ್ಯ ಕಾರಣ ನಮ್ಮ ಜೀವನಕ್ಕೆ ನಾವೆಂದೂ ದೀರ್ಘಾವಧಿಯ ಯೋಜನೆಗಳನ್ನು ಹಾಕಿಕೊಳ್ಳದಿರುವುದು. ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ದೀರ್ಘಾವಧಿಯ ಯೋಜನೆ ಇರುವುದು ಮುಖ್ಯ. ನಾವು ಕನಸು ಕಾಣುವವರಾದರೆ ಸಾಲದು; ಅದನ್ನು ನನಸುಗೊಳಿಸುವ ಸಂಕಲ್ಪ ಕೂಡ ನಮ್ಮಲ್ಲಿರಬೇಕಾಗುತ್ತದೆ.
ಮಕ್ಕಳ ಭವ್ಯ ಭವಿಷ್ಯಕ್ಕಾಗಿ ದೀರ್ಘಾವಧಿಯ ಆರ್ಥಿಕ ಭದ್ರತೆಯನ್ನು ರೂಪಿಸುವುದು ಅಗತ್ಯವಾಗಿರುತ್ತದೆ. ಏಕೆಂದರೆ ಇಂದಿನ ದಿನಗಳಲ್ಲಿ ಎಲ್ಕೆಜಿ, ಯುಕೆಜಿ ಯಿಂದಲೇ ಹೆತ್ತವರು ಸಾವಿರಗಟ್ಟಲೆ ರೂಪಾಯಿಗಳನ್ನು ಶೈಕ್ಷಣಿಕ ಶುಲ್ಕ, ವೆಚ್ಚವಾಗಿ ಭರಿಸಬೇಕಾಗಿರುತ್ತದೆ. ಅಂತಿರುವಾಗ ಅವರ ಸ್ನಾತಕೋತ್ತರ, ವೃತ್ತಿ ಶಿಕ್ಷಣ, ವಿದೇಶ ಶಿಕ್ಷಣ ಇತ್ಯಾದಿಗಳಿಗೆ ತಗಲುವ ಖರ್ಚು, ವೆಚ್ಚಗಳ ಹೊರೆ ಅತ್ಯಪಾರವಾಗಿರುತ್ತದೆ.
ಆದುದರಿಂದಲೇ ಮಕ್ಕಳ ಶೈಕ್ಷಣಿಕ, ಔದ್ಯೋಗಿಕ ಭವಿಷ್ಯಕ್ಕೆಂದು ಅವರ ಚಿಕ್ಕ ಪ್ರಾಯದಿಂದಲೇ ಹೆತ್ತವರು ದೀರ್ಘಾವಧಿ ಯೋಜನಗಳಲ್ಲಿ ಹಣ ಹೂಡುವುದು ಅಗತ್ಯವೂ ಅನಿವಾರ್ಯವೂ ಆಗಿರುತ್ತದೆ. ಅಂತೆಯೇ ಈ ನಿಟ್ಟಿನಲ್ಲಿ ಸಾಕಷ್ಟು ಎಚ್ಚರಿಕೆ, ವ್ಯವಧಾನ, ಅರಿವು, ತಿಳಿವಳಿಕೆ ಹೊಂದಿರುವ ಅಗತ್ಯವಿದೆ. ಅಂತೆಯೇ ನಾವಿಲ್ಲಿ ಮಕ್ಕಳ ಭದ್ರ, ಭವ್ಯ ಭವಿಷ್ಯವನ್ನು ಸಾಕಾರಗೊಳಿಸಲೆಂದೇ ರೂಪಿಸಲಾಗಿರುವ ವಿವಿಧ ಯೋಜನೆಗಳನ್ನು ತಿಳಿದುಕೊಳ್ಳಬಹುದು.
ಮಕ್ಕಳ ಭವಿಷ್ಯಕ್ಕಾಗಿ ದೀರ್ಘಾವಧಿಯ ಯೋಜನೆಗಳಲ್ಲಿ ಹಣ ಹೂಡುವ ಮುನ್ನ ಹೆತ್ತವರು ಅನೇಕ ರೀತಿಯ ಹೋಮ್ ವರ್ಕ್ ಮಾಡಬೇಕಾಗಿರುತ್ತದೆ. ಮಕ್ಕಳ ಆಸಕ್ತಿಯ ವಿಷಯ ಯಾವುದು, ಕಲಿಕೆಯ ಮಟ್ಟ ಹೇಗಿದೆ, ಬುದ್ಧಿಮತ್ತೆಯ ಮಟ್ಟ ಹೇಗಿದೆ, ಆತ ಅಥವಾ ಆಕೆ ಕಲೆ, ಸಾಹಿತ್ಯ, ವಿಜ್ಞಾನ, ಸಂಗೀತ, ಚಿತ್ರಕಲೆಯೇ ಮುಂತಾಗಿ ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ತೋರುತ್ತಾನೆ/ಳೆ ಎಂಬಿತ್ಯಾದಿ ಸಂಗತಿಗಳ ಬಗ್ಗೆ ತಿಳಿವಳಿಕೆ ಹೊಂದಿರುವುದು ಅಗತ್ಯವಾಗುತ್ತದೆ.
ಮಕ್ಕಳ ಜ್ಞಾನಾಸಕ್ತಿ ಬಗೆಗಿನ ಈ ಸಂಗತಿಗಳು ಏಕೆ ಮುಖ್ಯವಾಗುತ್ತವೆ ಎಂದರೆ ಅವರ ಜೀವನದ ಶೈಕ್ಷಣಿಕ ಗುರಿಗಳನ್ನು ಅಂದಾಜಿಸಲು ಸಾಧ್ಯವಾಗುವ ಕಾರಣಕ್ಕೆ. ಇವತ್ತಿನ ದಿನದಲ್ಲಿ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಅಥವಾ ಎಂಬಿಎ, ಅರೆ ವೈದ್ಯಕೀಯ ಮೊದಲಾದ ಶಿಕ್ಷಣಕ್ಕೆ ತಗಲುವ ಖರ್ಚು, ವೆಚ್ಚಗಳು 16 ವರ್ಷದ ಬಳಿಕ ಎಷ್ಟಾಗಬಹುದು ಎಂಬುದನ್ನು ಅಂದಾಜಿಸಬೇಕಾದರೆ ಅವುಗಳ ಮೇಲಾಗುವ ಹಣದುಬ್ಬರದ ಪರಿಣಾಮವನ್ನು ಕೂಡ ಸಣ್ಣ ಮಟ್ಟಿಗೆ ಅಧ್ಯಯನ ಮಾಡಬೇಕಾಗುತ್ತದೆ; ಲೆಕ್ಕಾಚಾರ ಹಾಕಬೇಕಾಗುತ್ತದೆ.
ಉದಾಹರಣೆಗೆ ಇವತ್ತು ಇಂಜಿನಿಯರಿಂಗ್ ಕೋರ್ಸ್ ಕೈಗೊಳ್ಳಲು 4 ಲಕ್ಷ ರೂ. ಬೇಕು ಎಂದಿಟ್ಟುಕೊಳ್ಳೋಣ. 16 ವರ್ಷದ ಬಳಿಕ ಇದೇ ಕೋರ್ಸಿಗೆ ಕನಿಷ್ಠ 10 ಲಕ್ಷವಾದರೂ ಬೇಕಾಗಬಹುದು. ಎಂದರೆ ನಾವು ಹೆತ್ತವರಾಗಿ ಮಕ್ಕಳ ಹೆಸರಲ್ಲಿ ಮಾಡುವ ಹೂಡಿಕೆಯು ಶೇ.15ರ ಪ್ರಮಾಣದಲ್ಲಿ ಬೆಳೆಯಬೇಕಾಗುತ್ತದೆ. ಎಂದರೆ ಮಗು ಹುಟ್ಟಿದಾಕ್ಷಣವೇ ಅದರ ಹೆಸರಲ್ಲಿ ತಿಂಗಳಿಗೆ 1,300 ರೂ.ಗಳನ್ನು ತೆಗೆದಿಡಬೇಕಾಗುತ್ತದೆ.
ಇದೇ ರೀತಿ ಇವತ್ತು ಎರಡು ವರ್ಷಗಳ ಫುಲ್ ಟೈಮ್ ಎಂಬಿಎ ಕೋರ್ಸಿಗೆ 11.50 ಲಕ್ಷ ರೂ. ಬೇಕಿದೆ ಎಂದಾದರೆ 21 ವರ್ಷಗಳ ಬಳಿಕ ಈ ವೆಚ್ಚ ಕನಿಷ್ಠ 40 ಲಕ್ಷ ರೂ. ಆಗುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಈಗಿನ ಶೇ.6ರ ಹಣದುಬ್ಬರ ಅಂತೆಯೇ ಮುಂದುವರಿದರೆ ಈ ಅಂದಾಜು ಮೊತ್ತ ಅತಿಶಯದ ಮೊತ್ತವಾಗುವುದಿಲ್ಲ ಎನ್ನುವುದು ಖಚಿತವಾಗುತ್ತದೆ.
ಈಗಿನ ಈಕ್ವಿಟಿ ಶೇರು ಮಾರುಕಟ್ಟೆಯಲ್ಲಿನ ಹೂಡಿಕೆಯು ವರ್ಷಕ್ಕೆ ಶೇ.15ರ (ವಾರ್ಷಿಕ ಚಕ್ರಬಡ್ಡಿ ಪ್ರಮಾಣದಲ್ಲಿ) ಬೆಳೆಯುವುದೆಂಬ ಲೆಕ್ಕಾಚಾರದಲ್ಲಿ 40 ಲಕ್ಷ ರೂ.ಗಳ ಗುರಿಯನ್ನು ತಲುಪಲು ಈಗಿಂದಲೇ ತಿಂಗಳಿಗೆ 2,233 ರೂ.ಗಳನ್ನು ತೆಗೆದಿಡಬೇಕಾಗುತ್ತದೆ.
ಇಷ್ಟಕ್ಕೂ ಹಣದುಬ್ಬರದಿಂದ ನಮ್ಮ ಹೂಡಿಕೆ ಮೌಲ್ಯ ಕೊರೆದು ಹೋಗುವುದನ್ನು ನಾವು ಎಂದೂ ಮರೆಯುವ ಹಾಗಿಲ್ಲ. ರೂಪಾಯಿಯ ಮಾರುಕಟ್ಟೆ ಖರೀದಿ ಮೌಲ್ಯ ಯಾವ ಪ್ರಮಾಣದಲ್ಲಿ ಕೊರೆದು ಹೋಗುತ್ತಿದೆ ಎಂಬುದನ್ನು ಹಣದುಬ್ಬರ ಪ್ರಮಾಣ ಸ್ಪಷ್ಟವಾಗಿ ಸಾರುತ್ತದೆ.
ಈ ಹಿನ್ನೆಲೆಯಲ್ಲಿ ನಾವು ಮಗುವಿನ ಭವ್ಯ ಭವಿಷ್ಯಕ್ಕಾಗಿ ದೀರ್ಘಾವಧಿಯ ಹೂಡಿಕೆಗಾಗಿ ಕೆಲವೊಂದು ಯೋಜನೆಗಳನ್ನು ಇಲ್ಲಿ ಚರ್ಚಿಸಬಹುದಾಗಿದೆ. ಅವುಗಳು ಅನುಕ್ರಮವಾಗಿ ಹೀಗಿವೆ :
1. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)
2. ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ವೈ)
3. ಈಕ್ವಿಟಿ ಮ್ಯೂಚುವಲ್ ಫಂಡ್ ಗಳು
ಈ ಮೂರು ಯೋಜನೆಗಳನು ವಿಸ್ತೃತವಾಗಿ ಚರ್ಚಿಸುವ ಮುನ್ನ ಒಂದು ಮಾತನ್ನು ನಾವು ನೆನಪಿನಲ್ಲಿಟ್ಟು ಕೊಳ್ಳಬೇಕು. ಮಕ್ಕಳಿಗಾಗಿ ಸಂಪತ್ತು ಕೂಡಿಡುವುದು ಹೆತ್ತವರ ಉದ್ದೇಶ ಅಲ್ಲ. ಕೂತು ಉಣ್ಣುವವನಿಗೆ ಹೊನ್ನ ಮಡಿಕೆಯೂ ಸಾಲದು ಎಂಬ ಮಾತಿದೆ.
ಮಕ್ಕಳಿಗೆ ಹೆತ್ತವರು ಕೊಡಬೇಕಿರುವುದು ಎಂದೂ ಕರಗದ ಜ್ಞಾನ ಸಂಪತ್ತನ್ನು. ಅದಕ್ಕಾಗಿ ಅವರಿಗೆ ಹೆತ್ತವರು ಗರಿಷ್ಠ ಸಾಧ್ಯವಿರುವ ಉತ್ತಮ ಶಿಕ್ಷಣವನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೀಡಬೇಕಾಗಿದೆ. ಆ ದಿಶೆಯಲ್ಲಿನ ಗುರಿಯನ್ನು ಸಾಧಿಸಲು ಹಣ ಒಂದು ಮಾಧ್ಯಮವೇ ಹೊರತು ಅದುವೇ ಸರ್ವಸ್ವ ಅಲ್ಲ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.