ಲೆಫ್ಟಿನೆಂಟ್ ಗರೀಮಾ ಯಾದವ್ ಎಂಬ ದಿಟ್ಟೆಯ ಸ್ಪೂರ್ತಿಯ ಕಥೆ
ಆ ಸಂದಿಗ್ಧ ಪರಿಸ್ಥಿತಿಯಲ್ಲಿ ಗರೀಮಾ ಇಟಲಿಯ ಕನಸನ್ನು ಬದಿಗಿಟ್ಟು ಚೆನ್ನೈ ಕಡೆಗೆ ನಡೆದೇಬಿಟ್ಟರು...
ಹರಿಪ್ರಸಾದ್, Apr 12, 2019, 4:06 PM IST
ಆಕೆ ಓದಿದ್ದು ರಾಷ್ಟ್ರ ರಾಜಧಾನಿ ದೆಹಲಿಯ ಸೈಂಟ್ ಸ್ಟೀಫನ್ ಪ್ರತಿಷ್ಠಿತ ಕಾಲೇಜಿನಲ್ಲಿ. ಐ.ಎ.ಎಸ್. ಓದಿ ಸರಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕೆಂಬುದು ಆಕೆಯ ಕನಸಾಗಿತ್ತು. ಆದರೆ ಐ.ಎ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗುತ್ತಾರೆ.
ತಮ್ಮ ಕಾಲೇಜು ದಿನಗಳಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಜಯಗಳಿಸಿ ‘ಬ್ಯೂಟಿ ಕ್ವೀನ್’ ಕಿರೀಟವನ್ನು ಧರಿಸಿದ ಅದೃಷ್ಟವೂ ಆಕೆಯದ್ದಾಗಿತ್ತು. ಈ ಅರ್ಹತೆಯನ್ನೇ ಬಂಡವಾಳವಾಗಿಸಿಕೊಂಡು ಆಕೆಗೆ ಮಾಡೆಲಿಂಗ್, ಬಾಲಿವುಡ್ ಕ್ಷೇತ್ರದಲ್ಲಿ ತನ್ನ ಬದುಕನ್ನು ರೂಪಿಸಿಕೊಳ್ಳಲು ಮತ್ತು ವೃತ್ತಿಜೀವನವನ್ನು ಆರಿಸಿಕೊಳ್ಳುವ ಅವಕಾಶವಿತ್ತು. ಆದರೆ ಆಕೆ ಆರಿಸಿಕೊಂಡದ್ದೇ ಬೇರೆ. ಇದೇ ‘ಬಾರತದ ಮುದ್ದು ಮುಖದ ಕುವರಿ’ ಸೌಂದರ್ಯ ಪ್ರಶಸ್ತಿ ವಿಜೇತೆ ಭಾರತ ಸೇನೆಯ ಲೆಫ್ಟಿನೆಂಟ್ ಹುದ್ದೆಗೇರಲು ಸಜ್ಜಾಗಿರುವ ಗರೀಮಾ ಯಾದವ್ ಎಂಬ ಹೆಣ್ಣು ಮಗಳ ಸ್ಪೂರ್ತಿದಾಯಕ ಕಥೆ.
2017ರಲ್ಲಿ ನಡೆದಿದ್ದ ‘ಇಂಡಿಯಾಸ್ ಮಿಸ್ ಚಾರ್ಮಿಂಗ್ ಫೇಸ್’ ಎಂಬ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವಿನ ಕಿರೀಟ ತೊಟ್ಟಿದ್ದ ಗರೀಮಾ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಟಲಿಯಲ್ಲಿ ನಡೆಯಲಿದ್ದ ಮುಂದಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿತ್ತು. ಆದರೆ ಇದೇ ಸಂದರ್ಭದಲ್ಲಿ ಗರೀಮಾ ಅವರು ಕಂಬೈನ್ಡ್ ಡಿಫೆನ್ಸ್ ಸರ್ವಿಸ್ ನಲ್ಲಿ ಸೇವೆ ಸಲ್ಲಿಸಲು ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿ ಪರೀಕ್ಷೆಗೂ ಹಾಜರಾಗಬೇಕಿತ್ತು. ಆಯ್ಕೆಯ ಸವಾಲು ಆಕೆಯ ಎದುರಿಗಿತ್ತು!
ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಝಗಮಗಿಸುವ ಬೆಳಕಿನ ಲೋಕದಲ್ಲಿ ಕಿನ್ನರಿಯಾಗಿ ಮೆರೆಯುವ ಮೂಲಕ ಬಣ್ಣದ ಲೋಕದಲ್ಲಿ ಹಾಯಾಗಿರುವ ಆಯ್ಕೆ ಒಂದಡೆಯಾದರೆ, ಆಫಿಸರ್ಸ್ ಟ್ರೈನಿಂಗ್ ಪರೀಕ್ಷೆಗೆ ಹಾಜರಾಗಿ ಅಲ್ಲಿ ಆಯ್ಕೆಯಾದರೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ದೇಶ ಸೇವೆಯ ಅವಕಾಶ. ಬೇರೆ ಇನ್ಯಾರೇ ಆಗಿದ್ದರೂ ಮೊದಲನೆಯದ್ದನ್ನೇ ಆರಿಸಿಕೊಳ್ಳುತ್ತಿದ್ದರೋ ಏನೋ.. ಆದರೆ ಗರೀಮಾ ಇಟಲಿಯ ಕನಸನ್ನು ಬದಿಗಿಟ್ಟು ಚೆನ್ನೈ ಕಡೆಗೆ ನಡೆದೇಬಿಟ್ಟರು. ಅಲ್ಲಿ ಸಿ.ಡಿ.ಎಸ್. ಪರೀಕ್ಷೆ ಬರೆದು ಪ್ರಥಮ ಪ್ರಯತ್ನದಲ್ಲೇ ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿಗೆ ಪ್ರವೇಶ ಪಡೆದುಕೊಂಡರು.
ಇದನ್ನೆಲ್ಲಾ ಈಗ ಬರೆಯುವುದೋ ಅಥವಾ ಹೇಳುವುದೋ ಸುಲಭ. ಆದರೆ ನಮ್ಮ ಎದುರಲ್ಲೇ ಇಂತಹ ಆಯ್ಕೆಯನ್ನು ಇಟ್ಟಾಗ ನಮ್ಮ ಮನಸ್ಸಿನಲ್ಲಿ ಎಷ್ಟು ಗೊಂದಲ ಉಂಟಾಗಬಹುದೋ ಅಷ್ಟೇ ಗೊಂದಲ, ಆತಂಕ ಗರೀಮಾ ಯಾದವ್ ಅವರ ಮನಸ್ಸಿನಲ್ಲೂ ಎದ್ದಿರಬಹುದು. ಆದರೆ ದೃಢ ನಿರ್ಧಾರ ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸಬೇಕೆಂಬ ತುಡಿತವೇ ಆಕೆಯನ್ನು ಇವತ್ತು ಸೌಂದರ್ಯ ರಾಣಿ ಗರೀಮಾಳಿಂದ ಲೆಫ್ಟಿನೆಂಟ್ ಗರೀಮಾ ಯಾದವ್ ರನ್ನಾಗಿ ಮಾಡಿದೆ.
ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿನ ತನ್ನ ತರಬೇತಿಯ ಅನುಭವಗಳನ್ನು ಗರೀಮಾ ಹಂಚಿಕೊಳ್ಳುವುದು ಹೀಗೆ, ‘ಮೊದ ಮೊದಲಿಗೆ ನನಗೆ ಇಲ್ಲಿನ ಕಠಿಣ ತರಬೇತಿ ಬಹಳ ಕಷ್ಟ ಅನ್ನಿಸುತ್ತಿತ್ತು, ಇಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಮತ್ತೆ ನನಗೆ ಅಷ್ಟೊಂದು ಉತ್ತಮ ದೈಹಿಕ ಸಾಮರ್ಥ್ಯವೂ ಇರಲಿಲ್ಲ ಆದರೆ ದಿನಕಳೆದಂತೆ ನಾನು ಎಲ್ಲದಕ್ಕೂ ಹೊಂದಿಕೊಂಡು ಹೋದೆ. ಮಾತ್ರವಲ್ಲದೆ ಅಲ್ಲಿನ ಎಲ್ಲಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದೆ. ಅದರ ಫಲಶ್ರುತಿಯಾಗಿ ಇವತ್ತು ನಾನು ಸೇನೆಯ ಓರ್ವ ಶಿಸ್ತಿನ ಸಿಪಾಯಿಯಾಗಿ ರೂಪುಗೊಂಡಿದ್ದೇನೆ’ ಎಂದು ಗರೀಮಾ ಅವರು ಹೆಮ್ಮೆಯಿಂದ ಹೇಳುತ್ತಾರೆ.
ಸಶಸ್ತ್ರ ಸೀಮಾ ಬಲಕ್ಕೆ ಸೇರಿಕೊಳ್ಳಬೇಕಾದರೆ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಪರಿಣತರಾಗಿರಬೇಕೆಂದು ಅಂದುಕೊಳ್ಳುವವರೇ ಹೆಚ್ಚು. ಆದರೆ ಇದು ಸತ್ಯವಲ್ಲ, ನಿಮ್ಮ ದೌರ್ಬಲ್ಯವನ್ನು ಒಪ್ಪಿಕೊಳ್ಳುವ ಮನಸ್ಸು ನಿಮ್ಮಲ್ಲಿರಬೇಕು ಹಾಗೂ ಆ ದೌರ್ಬಲ್ಯವನ್ನು ಮೆಟ್ಟಿನಿಲ್ಲುವ ಛಲವೂ ಇರಬೇಕು. ಪ್ರತೀ ದಿನ ನಿಮ್ಮನ್ನು ನೀವು ಉತ್ತಮಗೊಳಿಸುತ್ತಾ ಹೋದಾಗ ಅಂತಿಮವಾಗಿ ಜಯ ನಿಮ್ಮದಾಗುತ್ತದೆ ಎಂಬುದು ಈ ವೀರನಾರಿಯ ಅನುಭವದ ಮಾತು.
ವಿದ್ಯೆ, ವೃತ್ತಿ, ವ್ಯವಹಾರ ಹೀಗೆ ಯಾವುದೇ ಕ್ಷೇತ್ರದಲ್ಲಿ ಇವತ್ತು ಆಯ್ಕೆಯ ಗೊಂದಲದಲ್ಲಿ ಇರುವ ಅನೇಕರಿಗೆ ಗರೀಮಾ ಯಾದವ್ ಅವರ ಈ ಸಾಧನೆಯ ಕಥೆ ಸ್ಪೂರ್ತಿಯಾಗಬೇಕಿದೆ. ಇನ್ನು ಮಹಿಳೆಯೊಬ್ಬಳು ಮನಸ್ಸು ಮಾಡಿದರೆ ಯಾವ ಸಾಧನೆಯನ್ನೂ ಬೇಕಾದರೂ ಮಾಡಬಹುದು ಎಂಬುದಕ್ಕೂ ಗರೀಮಾಳ ಹಿರಿಮೆಯೇ ಸಾಕ್ಷಿಯಾಗಿದೆ. ನಮ್ಮ ದೇಶದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಅವಕಾಶಗಳಿವೆ ಆದರೆ ಅವುಗಳನ್ನು ಸದುಪಯೋಗಪಡಿಸಿಕೊಂಡು ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂಬ ವಿಚಾರಕ್ಕೂ ಗರೀಮಾ ಯಾದವ್ ಅವರ ಈ ಕಥೆಯೇ ಸ್ಪೂರ್ತಿಯಾಗಲಿ ಎಂಬುದೇ ನಮ್ಮ ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ
Udupi; ಮಕರ ಸಂಕ್ರಾಂತಿ ಸಂಭ್ರಮ: ಕೃಷ್ಣ ಗೀತಾನುಗ್ರಹ ಮಂಟಪ ಉದ್ಘಾಟನೆ
ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್
Kota ಸರಣಿ ಸುಸೈ*ಡ್ ಬೆನ್ನಲ್ಲೇ ಐಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹ*ತ್ಯೆ!
Ukraine-Russia war: ರಷ್ಯಾ ಸೇನೆಯಲ್ಲಿದ್ದ ಕೇರಳದ ವ್ಯಕ್ತಿ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.