ಉಜ್ವಲ ಭವಿಷ್ಯದ ಕನಸು ಕಂಡಿದ್ದ ನಝೀರ್ ದಂಪತಿ ಕನಸು ಕಮರಿದ ಕಥೆ
Team Udayavani, Mar 20, 2019, 8:40 AM IST
ಕಳೆದ ಶುಕ್ರವಾರದಂದು ನ್ಯೂಝಿಲ್ಯಾಂಡಿನಲ್ಲಿ ಎರಡು ಮಸೀದಿಗಳ ಮೇಲೆ ಜನಾಂಗೀಯ ತೀವ್ರಗಾಮಿ ನಡೆಸಿದ ಗುಂಡಿನ ದಾಳಿಯಲ್ಲಿ ಬಲಿಯಾದ 49 ಜನರಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆ. ಇನ್ನು ಸಾವೀಗೀಡಾದವರಲ್ಲಿ ಐದು ಜನ ಭಾರತೀಯರೂ ಇದ್ದರೆಂಬುದು ಖೇದಕರ. ಇವರಲ್ಲಿ ಕೇರಳ ಮೂಲದ ಈ ನವ ದಂಪತಿಯ ಕಥೆ ಮಾತ್ರ ನಮ್ಮೆಲ್ಲರ ಮನ ಕಲುಕುವಂತಿದೆ. ಮೊನ್ನೆ ಮಾರ್ಚ್ 15ರವರೆಗೆ ಕೇರಳ ಮೂಲದ ಅಬ್ದುಲ್ ನಝೀರ್ ಮತ್ತು ಅನ್ಸಿ ಆಲಿಬಾವಾ ಅವರ ಜೀವನ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಆ ಒಂದು ಘಟನೆ ಅವರ ಭವಿಷ್ಯದ ಕನಸುಗಳನ್ನೇ ನುಚ್ಚುನೂರಾಗಿಸಿತು. ಅಂದು ಮಾರ್ಚ್ 15ರ ಶುಕ್ರವಾರದಂದು ನಝೀರ್ ಮತ್ತು ಅಲಿಬಾವಾ ಅವರು ಕ್ರೈಸ್ಟ್ ಚರ್ಚ್‌ನಲ್ಲಿರುವ ಅಲ್-ನೂರ್ ಮಸೀದಿಯಲ್ಲಿ ಪ್ರಾರ್ಥನೆಗಾಗಿ ಬಂದಿದ್ದರು.
ಅಬ್ದುಲ್ ನಝೀರ್ ಅವರು ಅನ್ಸಿ ಆಲಿಬಾವಾ ಅವರನ್ನು ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಬಳಿಕ ಅನ್ಸಿ ಆಲಿಬಾವ ಅವರು ಉತ್ತಮ ಭವಿಷ್ಯದ ಕನಸನ್ನು ಕಂಡು ನ್ಯೂಝಿಲ್ಯಾಂಡ್ ಗೆ ತಮ್ಮ ಪತಿಯೊಂದಿಗೆ ತೆರಳಿದ್ದರು. ಅನ್ಸಿ ಆಲಿಬಾವಾ ಅವರು ಕೃಷಿ ವ್ಯವಹಾರ ಮ್ಯಾನೇಜ್ ಮೆಂಟ್ ನಲ್ಲಿ ಪದವಿ ಪಡೆಯುವ ಉದ್ದೇಶವನ್ನು ಹೊಂದಿದ್ದರು. ಈ ಉದ್ದೇಶಕ್ಕಾಗಿ ನಝೀರ್ ದಂಪತಿ ಕಳೆದ ವರ್ಷ ಕೇರಳದಲ್ಲಿ ಸುಮಾರು 33 ಲಕ್ಷ ರೂಪಾಯಿಗಳ ಸಾಲವನ್ನು ಪಡೆದುಕೊಂಡಿದ್ದರು. ಈ ಹಣದ ಮೂಲಕ ತನ್ನ ಪತ್ನಿಗೆ ಇಲ್ಲಿ ಉತ್ತಮ ಶಿಕ್ಷಣ ಕೊಡಿಸುವ ಉದ್ದೇಶವನ್ನು ಅಬ್ದುಲ್ ನಝೀರ್ ಅವರು ಹೊಂದಿದ್ದರು. ಇಷ್ಟು ಮಾತ್ರವಲ್ಲದೇ ನಝೀರ್ ಅವರು ಇಲ್ಲಿನ ಸ್ಥಳೀಯ ಸೂಪರ್ ಮಾರ್ಕೆಟ್ ಒಂದರಲ್ಲಿ ಕೆಲಸವನ್ನು ಮಾಡಿ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದರು.
ಆ ದಿನದ ಕರಾಳ ನೆನಪನ್ನು ಅಬ್ದುಲ್ ನಝೀರ್ ಬಿಚ್ಚಿಟ್ಟಿದ್ದು ಹೀಗೆ…
‘ಅಂದು ಅಲ್-ನೂರ್ ಮಸೀದಿಯಲ್ಲಿ ನಾವು ಪ್ರಾರ್ಥನೆಗಾಗಿ ಸೇರಿದ್ದೆವು. ಗಂಡಸರೆಲ್ಲಾ ಎಡಬದಿಯಲ್ಲಿ ಮತ್ತು ಹೆಂಗಸರೆಲ್ಲಾ ಬಲಬದಿಯಲ್ಲಿ ಕುಳಿತುಕೊಂಡಿದ್ದರು. ಪ್ರಾರ್ಥನೆಯ ಪ್ರಮುಖ ಹಂತದಲ್ಲಿ ಒಂದು ಫೈರಿಂಗ್ ಸದ್ದು ಕೇಳಿಸಿತು, ಹೊರಭಾಗದಲ್ಲಿ ಮಕ್ಕಳೆಲ್ಲೋ ಬಲೂನ್ ಒಡೆಯುತ್ತಿದ್ದಾರೆ ಎಂದು ನಾನು ಭಾವಿಸಿಕೊಂಡೆ. ಆದರೆ ಮತ್ತೆ ಕೆಲವೇ ಸೆಕೆಂಡುಗಳಲ್ಲಿ ನಿರಂತರವಾಗಿ ಫೈರಿಂಗ್ ಮಾಡುತ್ತಿರುವ ಸದ್ದು ಕೇಳಿಸಿತು, ಮತ್ತಿದು ಯಾರೋ ಶಕ್ತಿಯುತ ಗನ್ ಮೂಲಕವೇ ಶೂಟಿಂಗ್ ಮಾಡುತ್ತಿದ್ದಾರೆಂದು ನಮಗೆಲ್ಲಾ ಅರಿವಾಗಿತ್ತು. ತಕ್ಷಣವೇ ಮಸೀದಿಯೊಳಗಿದ್ದ ಸುಮಾರು 300ಕ್ಕೂ ಹೆಚ್ಚು ಜನರು ದಿಕ್ಕಾಪಾಲಾಗತೊಡಗಿದರು. ಅಲ್ಲಿದ್ದವರಲ್ಲಿ ಯಾರೋ ಒಬ್ಬರು ‘ತುರ್ತು ನಿರ್ಗಮನ’ ದ್ವಾರದ ಗಾಜುಗಳನ್ನು ಒಡೆದರು ಇದೇ ಸಂದರ್ಭದಲ್ಲಿ ಅದಕ್ಕೆ ಹತ್ತಿರದಲ್ಲೇ ಇದ್ದ ನಾನು ಹೊರಜಿಗಿದು ನೇರವಾಗಿ ಹತ್ತಿರದಲ್ಲೇ ಇದ್ದ ಮನೆಯೊಂದಕ್ಕೆ ಹೋಗಿ ತಕ್ಷಣವೇ ಪೊಲೀಸರಿಗೆ ಫೋನ್ ಮಾಡಿ ಸುದ್ದಿ ಮುಟ್ಟಿಸುತ್ತೇನೆ’ ಎಂದು ಆ ಭೀಕರ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ ಅಬ್ದುಲ್ ನಝೀರ್.
ಅಲ್ಲಿಂದ ನೇರವಾಗಿ ಮಸೀದಿಗೆ ಹಿಂದುರಿಗಿದಾಗ ನಝೀರ್ ಅವರು ಕಂಡ ಆ ಭೀಕರ ದೃಶ್ಯ ಅದೆಷ್ಟು ಭಯಾನಕವಾಗಿತ್ತೆಂದರೆ, ಮೈಯೆಲ್ಲಾ ರಕ್ತಸಿಕ್ತವಾಗಿದ್ದ ಗಾಯಗೊಂಡ ಜನರು ಸಿಕ್ಕಸಿಕ್ಕಲ್ಲಿ ಓಡುತ್ತಿದ್ದರು ಇನ್ನು ಮಸೀದಿಯ ಒಳಭಾಗದಲ್ಲಿ ಗುಂಡೇಟು ತಿಂದು ಪ್ರಾಣಬಿಟ್ಟವರ ಮೃತದೇಹಗಳು ಘಟನೆಯ ಭೀಕರತೆಯನ್ನು ಸಾರುತ್ತಿದ್ದವು. ಇವೆಲ್ಲಕ್ಕಿಂತ ಅಬ್ದುಲ್ ನಝೀರ್ ಅವರನ್ನು ದೃತಿಗೆಡಿಸಿದ್ದು ಆ ಒಂದು ದೃಶ್ಯ…!
ರಕ್ತದ ಮಡುವಿನಲ್ಲಿತ್ತು ಪ್ರೀತಿಪಾತ್ರ ಪತ್ನಿಯ ದೇಹ!
ರಕ್ತದ ಮಡುವಿನಲ್ಲಿದ್ದ ತನ್ನ ಪತ್ನಿಯ ದೇಹವನ್ನು ಕಂಡು ನಝೀರ್ ಅವರಿಗೆ ಕ್ಷಣಕಾಲ ದಿಕ್ಕೇ ತೋಚದಂತಾಗಿತ್ತು. ಸಾವರಿಸಿಕೊಂಡು ಪತ್ನಿಯ ದೇಹದ ಬಳಿ ಓಡಿಹೋಗಲು ಪ್ರಯತ್ನಿಸುತ್ತಿದ್ದಂತೆಯೇ ಅವರನ್ನು ತಡೆದ ಪೊಲೀಸ್ ಒಬ್ಬ ತಕ್ಷಣವೇ ಈ ಜಾಗದಿಂದ ದೂರ ಹೋಗುವಂತೆ ಹೇಳುತ್ತಾರೆ. ಈ ವೇಳೆಗಾಗಲೇ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ಪ್ರಾರಂಭಗೊಂಡಿತ್ತು. ಶನಿವಾರ ರಾತ್ರಿವರೆಗೆ ನಝೀರ್ ಅವರಿಗೆ ತಮ್ಮ ಹೆಂಡತಿ ಬದುಕುಳಿದಿರಬಹುದು ಎಂಬ ಕ್ಷೀಣ ಆಸೆಯೊಂದು ಉಳಿದುಕೊಂಡಿತ್ತು. ಆದರೆ ಶನಿವಾರದಂದು ನ್ಯೂಝಿಲ್ಯಾಂಡ್ ಪೊಲೀಸರು ಘಟನೆಯಲ್ಲಿ ಮೃತಪಟ್ಟವರ ಪಟ್ಟಿಯನ್ನು ಬಿಡುಗಡೆ ಮಾಡಿದಾಗ ಅದರಲ್ಲಿ ಆಲಿಬಾವಾ ಅವರ ಹೆಸರೂ ಇರುವುದನ್ನೂ ಕಂಡು ನಝೀರ್ ಕುಸಿದು ಬೀಳುತ್ತಾರೆ. ಈ ಸಂದರ್ಭದಲ್ಲಿ ಅವರ ಜೊತೆಗಿದ್ದ ಗೆಳೆಯ ಜಾರ್ಜ್ ಅವರನ್ನು ಸಮಾಧಾನಪಡಿಸುತ್ತಾರೆ ಮತ್ತು ಉಪಚರಿಸುತ್ತಾರೆ. ‘ಕೊನೇ ಕ್ಷಣದವರೆಗೂ ಏನಾದರೊಂದು ಪವಾಡ ಸಂಭವಿಸಬಹುದೆಂದು ನಾವು ನಿರೀಕ್ಷಿಸುತ್ತಿದ್ದೆವು’ ಎಂದು ನಝೀರ್ ಗೆಳೆಯ ಜಾರ್ಜ್ ದುಃಖದಿಂದ ಹೇಳುತ್ತಾರೆ. ಇನ್ನು ಲಿಂಕೊಲ್ನ್ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿದ್ದ ಆಲಿಬಾವಾ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು ಎನ್ನುತ್ತಾರೆ ಆಕೆಯ ಪ್ರಾಚಾರ್ಯರು.
ಕೇರಳ ಸಮುದಾಯದಿಂದ ನಝೀರ್ ಗೆ ನೆರವಿನ ಹಸ್ತ
ಸೂಪರ್ ಮಾರ್ಕೆಟ್ ಒಂದರಲ್ಲಿ ಕೆಲಸ ಮಾಡುತ್ತಾ ತನ್ನ ಪ್ರೀತಿಯ ಪತ್ನಿಯನ್ನು ಚೆನ್ನಾಗಿ ಓದಿಸಿ ಉತ್ತಮ ನೌಕರಿಗೆ ಸೇರಿಸಬೇಕೆಂದು ಕನಸು ಕಂಡಿದ್ದ ಅಬ್ದುಲ್ ನಝೀರ್ ಪಾಲಿಗೆ ಇವತ್ತು ಪತ್ನಿ ನಕ್ಷತ್ರವಾಗಿದ್ದಾಳೆ. ಈಗ ನಝೀರ್ ಪಾಲಿಗೆ ಉಳಿದಿರುವುದು ಆಕೆಯ ನೆನಪು ಮತ್ತು ತಾನು ಊರಲ್ಲಿ ಮಾಡಿಕೊಂಡಿರುವ ಸಾಲದ ಹೊರೆ. ಇದೀಗ ಕ್ರೈಸ್ಟ್ ಚರ್ಚ್‌ನಲ್ಲಿರುವ ಕೇರಳ ಸಮುದಾಯದವರು ನಝೀರ್ ಅವರಿಗೆ ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ. ‘ಗಿವ್ ಎ ಲಿಟಿಲ್’ ಎಂಬ ಪೇಜ್ ಮೂಲಕ ಸಹಾಯ ಧನ ಸಂಗ್ರಹಿಸಲು ಕೇರಳ ಸಮುದಾಯ ನಿರ್ಧರಿಸಿದೆ. ತನ್ನ ಪತ್ನಿಯ ಮೃತದೇಹವನ್ನು ಕೇರಳಕ್ಕೆ ಕೊಂಡೊಯ್ಯಬೇಕೆಂಬ ಬಯಕೆ ನಝೀರ್ ಗಿದೆ. ತ್ರಿಶ್ಯೂರ್ ಜಿಲ್ಲೆಯಲ್ಲಿರುವ ಕೊಡುಂಗಲ್ಲೂರು ಎಂಬ ಊರಿನಲ್ಲಿ ಆಲಿಬಾವಾ ಅವರ ತಾಯಿ ಮತ್ತು ಸಹೋದರ ವಾಸಿಸುತ್ತಿದ್ದಾರೆ. ಈ ಪ್ರಕ್ರಿಯೆಗೂ ಸಾಕಷ್ಟು ಹಣದ ಅಗತ್ಯವಿದ್ದು ಇದಕ್ಕೆ ಕೇರಳ ಸಮುದಾಯ ಸಹಾಯ ಹಸ್ತ ಚಾಚಲಿದೆ.
ಇಲ್ಲಿ ನನ್ನ ಮತ್ತು ಅವಳ ಸವಿ ನೆನಪುಗಳಿವೆ ; ಹಾಗಾಗಿ ಇಲ್ಲೇ ಇರುತ್ತೇನೆ
ತನ್ನ ಕನಸನ್ನೇ ಕಳೆದುಕೊಂಡಿರುವ ಅಬ್ದುಲ್ ನಝೀರ್ ಅವರಿಗೆ ಈಗ ಭವಿಷ್ಯದ ಬಗ್ಗೆ ಏನೂ ತೋಚದ ಪರಿಸ್ಥಿತಿ. ಆದರೆ ತನ್ನ ಪತ್ನಿಯೊಂದಿಗೆ ಕಳೆದ ಮಧುರ ಕ್ಷಣಗಳ ನೆನಪು ಈ ನೆಲದಲ್ಲಿ ಇರುವುದರಿಂದ ನಾನಿಲ್ಲೇ ಇರಲು ನಿರ್ಧರಿಸಿದ್ದೇನೆ ಎಂದು ಅಬ್ದುಲ್ ಭಾರವಾದ ಹೃದಯದಿಂದ ನುಡಿಯುತ್ತಾರೆ. ‘ಅವಳಲ್ಲಿ ಬಹಳಷ್ಟು ಕನಸಿತ್ತು…’ ‘ಈ ರೀತಿಯ ಘಟನೆ ನಡೆಯಬೇಕೆಂದು ಯಾರೂ ಬಯಸುವುದಿಲ್ಲ. ಇಲ್ಲೂ ಒಳ್ಳೆಯ ಜನರಿದ್ದಾರೆ… ಯಾರ ಕುಟುಂಬಕ್ಕೂ ಈ ರೀತಿಯ ನೋವಿನ ಘಟನೆಯಾಗುವುದು ಬೇಡ’ ಎಂದು ಅಬ್ದುಲ್ ನಝೀರ್ ಅವರು ನೋವಿನಿಂದಲೇ ತಮ್ಮ ಮಾತನ್ನು ಮುಗಿಸುತ್ತಾ ಆಗಸದಲ್ಲೆಲ್ಲೋ ನಕ್ಷತ್ರವಾಗಿರಬಹುದಾದ ತನ್ನ ಪ್ರೀತಿಯ ಪತ್ನಿಯ ನೆನಪಲ್ಲಿ ಕಣ್ಣೀರಾಗುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.