ಶಿಕ್ಷಕಿಯೊಬ್ಬರ ವಿಜ್ಞಾಪನೆ!: ‘ನನ್ನ ಶಾಲೆಗೊಂದು ಪುಸ್ತಕ ಕೊಡುವಿರಾ?’
Team Udayavani, Feb 13, 2019, 4:47 PM IST
ಸರಕಾರಿ ಶಾಲೆ ಕಾಲೇಜುಗಳೆಂದರೆ ಎಲ್ಲರಿಗೂ ಅಸಡ್ಡೆ. ಹೆತ್ತವರಿಗೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಸೇರಿಸುವ ಬಯಕೆಯಾದರೆ, ನಮ್ಮನ್ನಾಳುವವರಿಗೆ ಸಾಧ್ಯವಾದಷ್ಟು ಸರಕಾರಿ ಶಾಲೆಗಳನ್ನು ಮುಚ್ಚಿ ಆ ಮೂಲಕ ಪರೋಕ್ಷವಾಗಿ ಖಾಸಗಿ ಶಾಲೆಗಳಿಗೆ ಬೆಂಬಲ ನೀಡುವ ಮನಸ್ಥಿತಿ. ಇಂತಹ ಸ್ಥಿತಿಯಲ್ಲಿರುವ ನಮ್ಮ ಸರಕಾರಿ ಶಾಲೆಗಳಲ್ಲಿ ಊರವರ, ದಾನಿಗಳ, ಹಳೇ ವಿದ್ಯಾರ್ಥಿಗಳ ಮತ್ತು ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಕೆಲವೊಂದು ಬದಲಾವಣೆಗಳು ಹಾಗೂ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಕಾಣುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯೇ ಸರಿ. ಈ ರೀತಿಯಾಗಿ ನಮ್ಮ ರಾಜ್ಯದ ಕೆಲವೊಂದು ಜಿಲ್ಲೆಗಳ ಸರಕಾರಿ ಶಾಲೆಗಳು ಇವತ್ತು ಮಾದರಿ ಶಿಕ್ಷಣ ಕೇಂದ್ರಗಳಾಗಿ ಮಕ್ಕಳನ್ನು ಮತ್ತು ಪಾಲಕರನ್ನು ತನ್ನೆಡೆಗೆ ಸೆಳೆಯುತ್ತಿದೆ.
ಸರಕಾರಿ ಶಾಲೆಗಳನ್ನು ಜನಸ್ನೇಹಿಗೊಳಿಸುವಲ್ಲಿ ಶಾಲಾ ಶಿಕ್ಷಕ ವರ್ಗದವರ ಪಾತ್ರವೂ ಬಹಳ ಪ್ರಾಮುಖ್ಯವಾದುದಾಗಿದೆ. ಅಂತಹ ಒಂದು ಉದಾಹರಣೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿರುವ ವಳಾಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಈ ಪ್ರೌಢಶಾಲೆಯ ಶಿಕ್ಷಕಿಯೊಬ್ಬರು ತಮ್ಮ ಶಾಲೆಯ ವಾಚನಾಲಯದಲ್ಲಿ ವಿದ್ಯಾರ್ಥಿಗಳಿಗೆ ಓದಲು ಉತ್ತಮ ಪುಸ್ತಕಗಳನ್ನು ಸಂಗ್ರಹಿಸಲು ಸಾಮಾಜಿಕ ಜಾಲತಾಣದ ಮೂಲಕ ಹರಿಯಬಿಟ್ಟಿರುವ ಸಂದೇಶವೊಂದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಆ ಶಿಕ್ಷಕಿ ಮಾಡಿಕೊಂಡಿರುವ ಮನವಿ ಈ ರೀತಿಯಾಗಿದೆ…
ಆದರಣೀಯರೇ ಶುಭ ನಮನಗಳು…
‘ನಾನು ವಳಾಲು ಪ್ರೌಢಶಾಲಾ ಶಿಕ್ಷಕಿ ಶ್ರೀಮತಿ ಪುಷ್ಪಲತಾ.ಎಂ. ಪ್ರಕೃತ ವರ್ಷ ನನ್ನ ಶಾಲಾ ಗ್ರಂಥಾಲಯದ ಜವಾಬ್ದಾರಿ ನನ್ನದಾಗಿರುತ್ತದೆ. ಸರಕಾರ ಕೊಡಮಾಡಿದ ಒಂದಷ್ಟು ಪುಸ್ತಕಗಳ ಜತೆಗೆ ನನ್ನ ಪ್ರಯತ್ನದಿಂದ ಮತ್ತಷ್ಟು ಪುಸ್ತಕಗಳನ್ನು ಸೇರಿಸಿ ಗ್ರಂಥಾಲಯವನ್ನು ಅಭಿವೃಧ್ಧಿಪಡಿಸುವ ಆಸೆ. ತಾಂತ್ರಿಕ ಯುಗದ ಈ ದಿನಗಳಲ್ಲಿ ಓದುವ ಹವ್ಯಾಸ ಮರೆಯಾಗುತ್ತಿದೆ. ಉತ್ತಮ ಪುಸ್ತಕಗಳಿದ್ದಾಗ ಸಹಜವಾಗಿ ವಿದ್ಯಾರ್ಥಿಗಳು ಓದಿನ ಕಡೆ ಆಕರ್ಷಿತರಾಗಬಹುದೆಂಬುದು ನನ್ನ ನಂಬಿಕೆ. ಬಂಧುಗಳೇ ಸಹೃದಯರಾದ ತಮ್ಮಲ್ಲಿ ನನ್ನದೊಂದು ವಿಜ್ಞಾಪನೆ. ನಿಮ್ಮ ಮಕ್ಕಳ ಹುಟ್ಟು ಹಬ್ಬ, ಮದುವೆ ದಿನ, ಮದುವೆ ವಾರ್ಷಿಕೋತ್ಸವ, ಗೃಹಪ್ರವೇಶವೇ ಮೊದಲಾದ ಸುದಿನಗಳ ನೆನಪಿಗೆ ನಮ್ಮ ಶಾಲೆಗೊಂದು ಪುಸ್ತಕದ ಉಡುಗೊರೆ ನೀಡುವಿರಾ? ಪ್ರೀತಿಯಿಂದ ನೀವು ಕಳುಹಿಸಿದ ಪುಸ್ತಕಗಳನ್ನು ಜತನದಿಂದ ರಕ್ಷಿಸಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಬಳಸುವೆನೆಂದು ಪ್ರಮಾಣಿಸುವೆನು. ನೀವು ಪುಸ್ತಕಗಳ ಉಡುಗೊರೆಯನ್ನು ಕಳುಹಿಸಿ ನನ್ನ ಪ್ರಯತ್ನಕ್ಕೆ ಸಾರ ನೀರೆರೆಯುವಿರೆಂಬ ನಂಬಿಕೆಯೊಂದಿಗೆ ವಿರಮಿಸುವೆ.
ನನ್ನ ಶಾಲಾ ವಿಳಾಸ…
ಸರಕಾರಿ ಪ್ರೌಢಶಾಲೆ ವಳಾಲು, ಬಜತ್ತೂರು, ಪುತ್ತೂರು ತಾಲೂಕು, ದಕ್ಷಿಣ ಕನ್ನಡ, ಕರ್ನಾಟಕ – 574241. ಹೀಗೆ ಒಂದು ಮನವಿಯನ್ನು ಸಿದ್ಧಪಡಿಸಿ ಅವುಗಳನ್ನು ಪ್ರಾರಂಭದಲ್ಲಿ ತಮ್ಮ ಆಪ್ತವಲಯದಲ್ಲಿ ಪುಷ್ಟಲತಾ ಅವರು ಹಂಚಿಕೊಂಡರು. ಅವರ ಈ ಮನವಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಲಾರಂಭಿಸಿದಾಗ ಮತ್ತೆ ಈ ಸಂದೇಶವನ್ನು ತಾನಿದ್ದ ಕೆಲವು ಸಮಾನಾಸಕ್ತ ವಾಟ್ಸ್ಯಾಪ್ ಗುಂಪುಗಳಲ್ಲಿ ಹಂಚಿಕೊಂಡಿದ್ದರು. ಹಲವರು ಇವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಮ್ಮಲ್ಲಿರುವ ಪುಸ್ತಕಗಳನ್ನು ನೀಡುವ ಭರವಸೆಯನ್ನು ನೀಡುತ್ತಾರೆ. ಮತ್ತೆ ಕೆಲವರು ತಮ್ಮ ಪಾಲಿನ ಪುಸ್ತಕಗಳನ್ನು ಈಗಾಗಲೇ ಶಾಲೆಗೆ ತಲುಪಿಸಿಯಾಗಿದೆ ಎಂದು ಪುಷ್ಪಲತಾ ಅವರು ಸಂತೋಷದಿಂದ ಹೇಳುತ್ತಾರೆ.
ಶಿಕ್ಷಕಿಯ ‘ಪುಸ್ತಕ ಕೊಡುಗೆ’ ಮನವಿಗೆ ಉತ್ತಮ ಸ್ಪಂದನೆ
ಮೊತ್ತಮೊದಲಿಗೆ ‘ನಮ್ಮೂರು ನೆಕ್ಕಿಲಾಡಿ’ ಸಂಸ್ಥೆಯ ಅಧ್ಯಕ್ಷರಾಗಿರುವ ಜತೀಂದ್ರ ಶೆಟ್ಟಿ ಮತ್ತು ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿಯವರು ಶಿಕ್ಷಕಿಯ ಮನವಿಗೆ ಸ್ಪಂದಿಸಿ 25 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಇನ್ನು ಬೆಂಗಳೂರಿನ ಗೆಳೆಯರ ಬಳಗದವರು ಐದು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಮಂಗಳೂರಿನಲ್ಲಿರುವ ನವಕರ್ನಾಟಕ ಪ್ರಕಾಶನದ ಮೂಲಕ ಶಾಲೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಹೆಬ್ರಿ ಸಮೀಪದ ಶಿವಪುರದ ಬಿ.ಸಿ. ರಾವ್ ಎಂಬ 77 ವರ್ಷದ ಹಿರಿಯ ಸಾಹಿತಿ ಮತ್ತು ಹರಿಕಥಾ ವಿದ್ವಾಂಸರು ತಮ್ಮ ಸಂಗ್ರಹದಲ್ಲಿರುವ ಪುಸ್ತಕಗಳ ಪೈಕಿ ಮಕ್ಕಳಿಗೆ ಪ್ರಯೋಜನವಾಗಬಹುದಾಗಿರುವ ಎರಡು ಬಾಕ್ಸ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಭರವಸೆಯನ್ನು ಈಗಾಗಲೇ ನೀಡಿದ್ದಾರೆ. ಇನ್ನೂ ಹಲವಾರು ವ್ಯಕ್ತಿಗಳು ವಳಾಲು ಶಾಲೆಗೆ ಪುಸ್ತಕಗಳನ್ನು ನೀಡಲು ಮುಂದೆ ಬಂದಿದ್ದು ಶಿಕ್ಷಕಿಯ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ತಮ್ಮ ಈ ವಿನೂತನ ಪ್ರಯತ್ನಕ್ಕೆ ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ ಮತ್ತು ತಮ್ಮ ಸಹ ಶಿಕ್ಷಕರ ಸಹಕಾರ ಅಮೂಲ್ಯ ಎಂಬುದನ್ನು ಹೇಳಲು ಮರೆಯುವುದಿಲ್ಲ.
ಕ್ಯಾಶ್ ಬೇಡ ಬುಕ್ಸ್ ಕೊಡಿ
ನಾವು ಹಣ ನೀಡುತ್ತೇವೆ ಮಕ್ಕಳಿಗೆ ಅಗತ್ಯವಿರುವ ಪುಸ್ತಕಗಳನ್ನು ನೀವೇ ಖರೀದಿಸಿ ಕೊಡಿಸಿ ಎಂದು ಹಲವರು ಶಿಕ್ಷಕಿ ಪುಷ್ಪಲತಾ ಅವರಿಗೆ ಹೇಳುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೆ ನಾವು ಹಣವನ್ನು ಸ್ವೀಕರಿಸುವುದಿಲ್ಲ ; ನಮ್ಮ ಉದ್ದೇಶ ನಾಡಿನ ಪುಸ್ತಕ ಪ್ರಿಯರ ಸಂಗ್ರಹದಲ್ಲಿರುವ ಪುಸ್ತಕಗಳು ನಮ್ಮ ಶಾಲೆಯ ಮಕ್ಕಳಿಗೆ ಸಿಗುವಂತಾಗಬೇಕು ಎಂಬುದಾಗಿದೆ, ಹಾಗಾಗಿ ದಯವಿಟ್ಟು ಪುಸ್ತಕಗಳನ್ನು ಮಾತ್ರ ಕಳುಹಿಸಿಕೊಡಿ ಎಂದು ಪುಷ್ಪಲತಾ ಅವರು ಮನವಿ ಮಾಡಿಕೊಂಡಿದ್ದಾರೆ.
ತಾನು ಕರ್ತವ್ಯನಿರ್ವಹಿಸುತ್ತಿರುವ ಗ್ರಾಮೀಣ ಭಾಗದ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ‘ಪ್ರೌಢ’ರನ್ನಾಗಿ ಮಾಡಬೇಕೆಂದು ಶಿಕ್ಷಕಿ ಪುಷ್ಪಲತಾ ಅವರು ಸಾಮಾಜಿಕ ಜಾಲತಾಣವನ್ನು ಸಶಕ್ತವಾಗಿ ಬಳಸಿಕೊಂಡಿರುವುದು ಮತ್ತು ಆ ಮೂಲಕ ಅವರು ಮಾಡಿಕೊಂಡಿರುವ ಮನವಿಗೆ ಇದೀಗ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನೋವಿಕಾಸಕ್ಕಾಗಿ ಈ ಶಿಕ್ಷಕಿ ಮಾಡುತ್ತಿರುವ ಪ್ರಯತ್ನವನ್ನು ನಾವೆಲ್ಲರೂ ಬೆಂಬಲಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.