ಭರತ ಚಕ್ರವರ್ತಿಯ ವ್ಯಾಮೋಹ ! ಜಿಂಕೆಯ ರೂಪದ ವ್ಯಥೆ ….
Team Udayavani, Oct 16, 2018, 3:47 PM IST
ಮನುವಿನ ವಂಶದಲ್ಲಿ ಹುಟ್ಟಿದ ಋಷಭ ದೇವನ ಮಗನಾದ ಭರತನು ತಂದೆಯ ಆಜ್ಞೆಯಂತೆ ವಿಶ್ವರೂಪನ ಮಗಳಾದ ಪಂಚಜನಿಯನ್ನು ವಿವಾಹವಾದನು.ಅವಳಲ್ಲಿ ತನಗೆ ಸಮಾನರಾದ ಸುಮತಿ,ರಾಷ್ಟ್ರಭೃತ್ , ಸುದರ್ಶನ, ಆವರಣ ಮತ್ತು ಧೂಮ್ರಕೇತು ಎಂಬ ಐದು ಪುತ್ರರನ್ನು ಪಡೆದನು. ಭರತನು ಯಜ್ಞರೂಪಿಯಾದ ಭಗವಂತನನ್ನು ಆರಾಧಿಸುತ್ತಿದ್ದನು.ಅದರಿಂದ ಪ್ರಾಪ್ತವಾಗುವ ಪುಣ್ಯಫಲವನ್ನು ಯಜ್ನೇಶ್ವರನಿಗೆ ಸಮರ್ಪಿಸುತ್ತಿದ್ದನು.ವಾಸ್ತವವಾಗಿ ಆ ಪರಬ್ರಹ್ಮನೇ ಇಂದ್ರಾದಿ ಸಮಸ್ತ ದೇವತೆಗಳ ಪ್ರಕಾಶಕನೂ ,ಮಂತ್ರಗಳ ನಿಜವಾದ ಪ್ರತಿಪಾದ್ಯನೂ ಹಾಗೂ ಆ ದೇವತೆಗಳ ನಿಯಾಮಕನೂ ಆಗಿದ್ದರಿಂದ ಮುಖ್ಯ ಕರ್ತೃವೂ, ಪ್ರಧಾನ ದೇವನೂ ಆತನೇ ಆಗಿದ್ದಾನೆ.ಇದನ್ನು ಮನಸ್ಸಿನಲ್ಲಿ ಧೃಢವಾಗಿಸಿ, ದೇವತೆಗಳನ್ನು ಭಗವಂತನ ಅವಯವಗಳಲ್ಲಿ ಧ್ಯಾನ ಮಾಡುತ್ತಿದ್ದನು.
ಈ ರೀತಿಯಾದ ಕರ್ಮಶುದ್ಧಿಯಿಂದ ಆತನ ಅಂತಃಕರಣವು ಪರಿಶುದ್ಧವಾಯಿತು. ಆಗ ಆತನಿಗೆ ಶ್ರೀವತ್ಸ ,ಕೌಸ್ತುಭ ,ವನಮಾಲೆ,ಚಕ್ರ,ಶಂಖ ಮತ್ತು ಗದೆ ಮುಂತಾದ ದಿವ್ಯಾಭರಣ ಹಾಗೂ ದಿವ್ಯಾಯುಧಗಳಿಂದ ಶೋಭಿಸುವ ವಾಸುದೇವನನ್ನು ತನ್ನ ಅಂತರಂಗದಲ್ಲಿ ಕಂಡನು. ಈ ಪ್ರಕಾರ ಒಂದು ಕೋಟಿ ವರ್ಷಗಳು ಕಳೆಯಲು, ಆತನಿಗೆ ರಾಜ್ಯಭೋಗದ ವ್ಯಾಮೋಹವು ಕ್ಷೀಣಿಸಲು ,ಪರಂಪರಾಗತವಾದ ತನ್ನ ಸಂಪತ್ತೆಲ್ಲವನ್ನೂ ತನ್ನ ಪುತ್ರರಿಗೆ ಹಂಚಿ ಕೊಟ್ಟು, ಪುಲಹಾಶ್ರಮಕ್ಕೆ ಹೊರಟು ಹೋದನು.ಅಲ್ಲಿಯ ತನಕ ಅಜನಾಭ ವರ್ಷವೆಂದು ಕರೆಯಲ್ಪಡುತ್ತಿದ್ದ ಈ ವರ್ಷಕ್ಕೆ ಭರತ ಚಕ್ರವರ್ತಿಯ ಕಾಲದಿಂದ ಭರತ ವರ್ಷವೆಂದು ಹೆಸರಾಯಿತು.
ಆ ಪುಲಹಾಶ್ರಮದ ಉಪವನದಲ್ಲಿ ಭರತನು ಏಕಾಂತವಾದ ಜಗದಲ್ಲಿ ಒಬ್ಬಂಟಿಗನಾಗಿದ್ದು ಅನೇಕ ಪ್ರಕಾರದ ಪತ್ರ, ಪುಷ್ಪ, ತುಳಸೀದಳ , ಜಲ ಮತ್ತು ಗೆಡ್ಡೆ-ಗೆಣಸುಗಳೇ ಮುಂತಾದ ನೈವೇದ್ಯಗಳಿಂದ ಶ್ರೀಭಗವಂತನನ್ನು ಆರಾಧಿಸುತ್ತಿದ್ದನು.
ಒಂದು ದಿನ ಮಹಾತ್ಮನಾದ ಭರತನು ಗಂಡಕೀ ನದಿಯಲ್ಲಿ ಸ್ನಾನ ಮಾಡಿ ನಿತ್ಯ-ನೈಮಿತ್ತಿಕಾದಿ ಆಹ್ನಿಕಗಳನ್ನು ಮುಗಿಸಿಕೊಂಡು ಪ್ರಣವವನ್ನು ಜಪಿಸುತ್ತ ಮೂರು ಮುಹೂರ್ತಗಳ ಕಾಲದವರೆಗೆ ನದಿಯ ದಂಡೆಯ ಬಳಿಯೇ ಕುಳಿತಿದ್ದನು. ಅದೇ ಸಮಯಕ್ಕೆ ಒಂದು ಗರ್ಭಧರಿಸಿದ್ದ ಹೆಣ್ಣು ಜಿಂಕೆಯು ಬಾಯಾರಿಕೆಯಿಂದ ಪೀಡಿತವಾಗಿ ನೀರು ಕುಡಿಯಲಿಕ್ಕಾಗಿ ಒಂಟಿಯಾಗಿಯೇ ನದಿತೀರಕ್ಕೆ ಬಂತು. ಅದು ಇನ್ನೇನು ನೀರು ಕುಡಿಯಬೇಕೆಂದಾಗ ಇದ್ದಕಿದ್ದಂತೆ ಲೋಕಭಯಂಕರವಾದ ಒಂದು ಸಿಂಹಘರ್ಜನೆ ಕೇಳಿಬಂತು. ಜಿಂಕೆಯ ಸ್ವಭಾವವೇ ಅಂಜುಬುರುಕುತನವಿರುತ್ತದೆ. ಆದುದರಿಂದ ಅದು ಮೊದಲೇ ಚಕಿತದೃಷ್ಟಿಯಿಂದ ಅತ್ತ-ಇತ್ತ ನೋಡುತ್ತಿತ್ತು. ಆ ಭೀಕರವಾದ ಶಬ್ದವು ಕಿವಿಗೆ ಬೀಳುತ್ತಲೇ ಸಿಂಹದ ಭಯದಿಂದ ಎದೆಯು ಢವಗುಟ್ಟುತ್ತಿರಲು, ಬಾಯಾರಿಕೆಯು ತಣಿಯುವುದಕ್ಕೆ ಮೊದಲೇ ಪ್ರಾಣಭಯದಿಂದ ನದಿಯನ್ನು ದಾಟಲೆಂದು ಚಂಗನೆ ನೆಗೆಯಿತು.
ಅದು ಗರ್ಭಧರಿಸಿದ್ದ ಜಿಂಕೆಯಾದ್ದರಿಂದ ಮೇಲೆ ಹಾರಿದಾಗ ಭಯದಿಂದ ಅದರ ಗರ್ಭವು ಜಾರಿ ನದಿಯ ಪ್ರವಾಹದಲ್ಲಿ ಬಿದ್ದು ಬಿಟ್ಟಿತು. ಸಿಂಹದ ಭಯದಿಂದ ಹಾಗು ಪ್ರಸವದ ಆಯಾಸ ಪೀಡಿತವಾದ ಆ ಜಿಂಕೆಯು ಓಡುತ್ತಾ ಒಂದು ಗುಹೆಯಲ್ಲಿ ಬಿದ್ದು ಪ್ರಾಣ ಬಿಟ್ಟಿತು. ಇತ್ತ ನದಿಯಲ್ಲಿ ಬಿದ್ದ ಜಿಂಕೆಮರಿಯು ತನ್ನವರನ್ನೆಲ್ಲ ಕಳೆದುಕೊಂಡು ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವುದನ್ನು ಕಂಡ ರಾಜರ್ಷಿಯಾದ ಭರತನಿಗೆ ಕರುಣೆಯುಂಟಾಗಿ ಆ ಮರಿಯನ್ನು ಎತ್ತಿಕೊಂಡು ತನ್ನ ಆಶ್ರಮಕ್ಕೆ ಬಂದನು. ಆ ಜಿಂಕೆಯ ಮರಿಯಮೇಲೆ ದಿನ-ದಿನಕ್ಕೆ ಭರತನ ಮಮತೆಯು ಹೆಚ್ಚತೊಡಗಿತು. ಆತನು ಪ್ರತಿದಿನವೂ ಅದಕ್ಕೆ ಆಹಾರ-ಪಾನೀಯಗಳನ್ನು ಒದಗಿಸುವುದು, ಅದನ್ನು ಹುಲಿ ಮುಂತಾದವುಗಳಿಂದ ರಕ್ಷಿಸುವುದು, ಮೈದಡವಿ ಮುದ್ದಿಸುವುದು ಮುಂತಾದ ಚಿಂತೆಗಳಲ್ಲೇ ಮುಳುಗ ತೊಡಗಿದನು. ಕೆಲವೇ ದಿನಗಳಲ್ಲಿ ಅವನ ಜಪ, ತಪ ಭಗವತ್ಪೂಜೆ ಮುಂತಾದ ಅವಶ್ಯಕವಾದ ವಿಧಿಗಳು ಒಂದೊಂದಾಗಿ ಬಿಟ್ಟು ಹೋಗುತ್ತಾ, ಕೊನೆಗೆ ಎಲ್ಲವೂ ಬಿಟ್ಟು ಹೋಯಿತು .
ಅವನು ಯಾವಾಗಲು ಜಿಂಕೆಮರಿಯನ್ನು ಪೋಷಿಸುತ್ತಾ, ಅದನ್ನು ರಕ್ಷಿಸುತ್ತಾ ಯಾವಾಗಲು ಅದರ ಬಗ್ಗೆ ಕನಿಕರದಿಂದ ” ಈ ಬಡಪಾಯಿಯಾದ ಜಿಂಕೆಯ ಮರಿಯು ತನ್ನವರನ್ನೆಲ್ಲ ಆಗಲಿ ಕೊನೆಗೆ ನನ್ನ ಆಸರೆಗೆ ಬಂದು ಸೇರಿತಲ್ಲ! ಈಗ ಇದು ನನ್ನನ್ನೇ ತನ್ನ ತಾಯಿ, ಬಂಧುವೆಂದು ತಿಳಿದುಕೊಂಡಿದೆ. ನನ್ನಲ್ಲಿ ಪೂರ್ಣವಾದ ನಂಬಿಕೆಯೂ ಇದಕ್ಕೆ ಉಂಟಾಗಿದೆ. ಶರಣು ಬಂದವರನ್ನು ಕೈಬಿಡುವುದು ಮಹದೋಷವೆಂದೂ, ತನ್ನ ಎಲ್ಲ ದೋಷಬುದ್ಧಿಯನ್ನು ಬಿಟ್ಟು ಸಾಕಿ-ಸಲಹಿ ಮುದ್ದಿಸುತ್ತಾ ಬೆಳೆಸಬೇಕು”. ಎಂಬ ವ್ಯಾಮೋಹದಿಂದ, ಆತನ ಮನಸ್ಸು ಕುಳಿತಿರುವಾಗಲೂ, ಮಲಗುವಾಗಲೂ, ನಿಲ್ಲುವಾಗಲೂ, ಆಹಾರವನ್ನು ಸೇವಿಸುವಾಗಲೂ –ಅದನ್ನೇ ಯೋಚಿಸುತ್ತ ಸ್ನೇಹಪಾಶಕ್ಕೆ ಕಟ್ಟುಬಿದ್ದಿದ್ದನು.
ತಪ್ಪಸ್ವೀ ಭರತನು ಜಿಂಕೆಯಮರಿಯ ರೂಪದಲ್ಲಿ ಕಾಣಿಸಿಕೊಂಡ ಪ್ರಾರಬ್ಧಕರ್ಮದಿಂದ ಶ್ರೀ ಭಗವಂತನ ಆರಾಧನೆಯ ರೂಪವಾದ ಕರ್ಮಗಳಿಂದಲೂ, ಯೋಗಾನುಷ್ಠಾನದಿಂದಲೂ ಜಾರಿಬಿಟ್ಟಿದ್ದನ್ನು. ಮೋಕ್ಷಮಾರ್ಗಕ್ಕೆ ಸಾಕ್ಷಾತ್ತಾಗಿ ವಿಘ್ನರೂಪವೆಂದು ಭಾವಿಸಿ ಬಿಡುವುದಕ್ಕೆ ಅತಿಕಷ್ಟವಾಗಿದ್ದ ತನ್ನ ಪುತ್ರಾದಿಗಳನ್ನೂ ಕೂಡ ತ್ಯಜಿಸಿದ್ದನು. ಅಂತಹವನಿಗೆ ಬೇರೆ ಜಾತಿಯ ಪ್ರಾಣಿಯಾದ ಜಿಂಕೆಯ ಮರಿಯಲ್ಲಿ ಇಂತಹ ಆಸಕ್ತಿ ಉಂಟಾದುದಕ್ಕೆ ಪ್ರಾರಬ್ಧಕರ್ಮವಲ್ಲದೆ ಮತ್ತಾವ ಕಾರಣವಿದ್ದೀತು ? ಹೀಗೆ ರಾಜರ್ಷಿ ಭರತನು ವಿಘ್ನಗಳಿಗೆ ವಶನಾಗಿ ಯೋಗ್ಯ ಸಾಧನೆಯಿಂದ ಭ್ರಷ್ಟನಾಗಿ ಆ ಜಿಂಕೆಯ ಮರಿಯ ಪಾಲನೆ-ಪೋಷಣೆ ಮತ್ತು ಮುದ್ದಿಸುವುದರಲ್ಲೇ ತೊಡಗಿರುವುದರಿಂದ ಆತ್ಮಸ್ವರೂಪವನ್ನು ಮರೆತುಬಿಟ್ಟನು. ಆಗಲೇ ಯಾರಿಂದಲೂ ತಪ್ಪಿಸಿಕೊಳ್ಳಲು ಅಸಾಧ್ಯವಾದ ಬಲಶಾಲಿಯೂ, ವೇಗಶಾಲಿಯೂ ಆದ ಕರಾಳ-ಕಾಲವು- ಇಲಿಯ ಬಿಲಕ್ಕೆ ಹಾವು ನುಗ್ಗುವಂತೆ – ಆ ರಾಜರ್ಷಿಯನ್ನು ಮರಣವು ಆಕ್ರಮಿಸಿತು.
ಇಂತಹ ಸಮಯದಲ್ಲೂ ತನ್ನ ಬಳಿಯಲ್ಲಿ ಪುತ್ರನಂತೆ ಶೋಕಾತುರವಾಗಿ ಕುಳಿತಿದ್ದ ಆ ಜಿಂಕೆಯ ಮರಿಯನ್ನೇ ನೋಡುತ್ತಾ ಅದರಲ್ಲೇ ಅವನ ಚಿತ್ತವು ತೊಡಗಿತ್ತು. ಹೀಗೆ ಅವನ ಆತ್ಮವು ಮೃಗದೊಂದಿಗೆ ಅವನ ಶರೀರವನ್ನು ಬಿಟ್ಟು ಹೋಯಿತು. ಅನಂತರ ಅವನಿಗೆ ಅಂತ್ಯಕಾಲದ ಭಾವನೆಗನುಸಾರವಾಗಿ ಬೇರೆ ಸಾಧಾರಣ ಮನುಷ್ಯರಂತೆ ಮೃಗ [ಜಿಂಕೆಯ] ಶರೀರವೆ ದೊರೆಯಿತು. ಆದರೆ ಅವನ ಸಾಧನೆ ಪೂರ್ಣವಾಗಿತ್ತು, ಅದರಿಂದಾಗಿ ಅವನಿಗೆ ಹಿಂದಿನ ಜನ್ಮದ ಸ್ಮೃತಿಯು ನಾಶವಾಗಲಿಲ್ಲ. ಹಿಂದಿನ ಜನ್ಮದ ಭಗವದಾರಾಧನೆಯ ಪ್ರಭಾವದಿಂದ ನಾನು ಮೃಗರೂಪನಾದ ಕಾರಣವನ್ನು ಅರಿತುಕೊಂಡು ಅವನು ಅತ್ಯಂತ ಪಶ್ಚತ್ತಾಪ ಪಡುತ್ತಾ ಹೀಗೆ ಹೇಳ ತೊಡಗಿದನು.
ಅಯ್ಯೋ! ” ನಾನು ಸಂಯಮಶೀಲ ಮಹಾನುಭಾವರ ಮಾರ್ಗದಿಂದ ಪತಿತನಾದೆನು. ನಾನಾದರೋ ಧೈರ್ಯದಿಂದ ಎಲ್ಲರೀತಿಯ ಆಸಕ್ತಿಯನ್ನು ಬಿಟ್ಟು ಏಕಾಂತವೂ, ಪವಿತ್ರವೂ ಆದವನನ್ನು ಆಶ್ರಯಿಸಿದ್ದೆ. ಅಲ್ಲಿದ್ದುಕೊಂಡು ನನ್ನ ಚಿತ್ತವನ್ನು ಸರ್ವಭೂತಾತ್ಮ ಶ್ರೀವಾಸುದೇವನಲ್ಲಿ, ನಿರಂತರ ಅವನ ಗುಣಗಳನ್ನು ಶ್ರವಣಿಸುತ್ತಾ, ಮನನಮಾಡುತ್ತಾ, ಸಂಕೀರ್ತನೆಮಾಡುತ್ತ ಹಾಗು ಪ್ರತಿಯೊಂದು ಕ್ಷಣವನ್ನು ಅವನ ಆರಾಧನೆ ಮತ್ತು ಸ್ಮರಣಾದಿಗಳಿಂದ ಸಫಲಗೊಳಿಸಿಕೊಂಡು ಸ್ಥಿರಭಾವದಿಂದ ಪೂರ್ಣವಾಗಿ ತೊಡಗಿಸಿಬಿಟ್ಟಿದ್ದೆ. ಅಜ್ಞಾನಿಯಾದ ನನ್ನನ್ನು ಅದೇ ಮನಸ್ಸು ಅಕಸ್ಮಾತ್ತಾಗಿ ಒಂದು ಎಳೆಯ ಜಿಂಕೆಯಮರಿಯ ಹಿಂದೆಬಿದ್ದು ನನ್ನ ಲಕ್ಶ್ಯದಿಂದ ಜಾರಿಬಿಟ್ಟೆನಲ್ಲ “. ಮೃಗರೂಪನಾಗಿದ್ದ ರಾಜಶ್ರೀ ಭರತನು ಹೀಗೆ ತನ್ನ ಮನಸಿನಲ್ಲಿ ಎಚ್ಚರಗೊಂಡಿದ್ದ ವೈರಾಗ್ಯಭಾವವನ್ನು ಅಡಗಿಸಿಟ್ಟುಕೊಂಡು, ತನ್ನ ತಾಯಿಯಾದ ಜಿಂಕೆಯನ್ನು ತೊರೆದು, ತಾನು ಹುಟ್ಟಿದ್ದ ಕಾಲಂಜರ ಪರ್ವತದಿಂದ ಮತ್ತೆ ಶಾಂತ ಸ್ವಭಾವರಾದ ಮುನಿಗಳಿಗೆ ಪ್ರಿಯವಾದ ಅದೇ ಭಗವತ್ ಕ್ಷೇತ್ರವಾದ ಶಾಲಗ್ರಾಮ ತೀರ್ಥದಲ್ಲಿದ್ದ ಪುಲಸ್ತ್ಯ ಮತ್ತು ಪುಲಹ ಋಷಿಗಳ ಆಶ್ರಮಕ್ಕೆ ಬಂದು ಸೇರಿದನು.
ಅಲ್ಲಿ ವಾಸವಿದ್ದಾಗಲೂ ಅವನು ಕಾಲವನ್ನೇ ಇದಿರುನೋಡುತ್ತಿದ್ದನು. ‘ಆಸಕ್ತಿ’ ಎಂದರೆ ಅವನಿಗೆ ಭಯವಾಗುತ್ತಿತ್ತು. ಅಲ್ಲಿ ಆತನು ಒಣ ಎಲೆ, ಹುಲ್ಲು, ಪೊದೆ ಮುಂತಾದವುಗಳಿಂದ ಜೀವನವನ್ನು ನಿರ್ವಹಿಸುತ್ತಾ,ತನಗೆ ಜಿಂಕೆಯ ಜನ್ಮ ಬರಲು ಕಾರಣವಾಗಿದ್ದ ಪ್ರಾರಬ್ಧದ ಕ್ಷಯದ ದಾರಿಯನ್ನೇ ನೋಡುತ್ತಿದ್ದನು. ಕೊನೆಗೆ ಅವನು ತನ್ನ ಶರೀರದ ಅರ್ಧಭಾಗವನ್ನು ಗಂಡಕೀ ನದಿಯಲ್ಲಿ ಮುಳುಗಿಸಿಕೊಂಡು ಆ ಮೃಗೇಶರೀರವನ್ನು ತ್ಯಜಿಸಿಬಿಟ್ಟನು.
ಮುಂದುವರೆಯುವುದು…….
ಪಲ್ಲವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.