ದಶಾವತಾರದ ಹಿಂದಿನ ರಹಸ್ಯವೇನು; ದೂರ್ವಾಸ ಮುನಿಯ ಶಾಪವೇ ಕಾರಣ!
Team Udayavani, May 1, 2018, 12:49 PM IST
ಹಿಂದೊಮ್ಮೆ ಅಂಬಋಷಿ ಎಂಬೊಬ್ಬ ದ್ವಿಜನು, ಪ್ರತಿ ಏಕಾದಶಿ ವ್ರತವನ್ನು ಒಳ್ಳೆ ಭಕ್ತಿ ನಿಷ್ಠೆಯಿಂದ ತಪ್ಪದೇ ಆಚರಿಸುತ್ತಿದ್ದನು. ಅವನ ಭಕ್ತಿಗೆ ಮೆಚ್ಚಿದ ಶ್ರೀಹರಿಯು, ಅಂಬಋಷಿ ” ನಿನಗೆ ಸಂಕಟ ಒದಗಿದಾಗ, ನೀನು ನನ್ನನ್ನು ಸ್ಮರಿಸಿದ ತಕ್ಷಣ ಸುದರ್ಶನಚಕ್ರವು ನಿನ್ನ ಸಹಾಯಕ್ಕೆ ಬರುತ್ತದೆ ಎಂದು ವರ ನೀಡುತ್ತಾನೆ. ವರ ಪಡೆದ ನಂತರವೂ ಅಂಬಋಷಿಯು ಅವನ ವ್ರತ ನಿಷ್ಠೆಯನ್ನು ಮಾಡುತ್ತಿದ್ದನು. ಇದರ ಪರಿಣಾಮವಾಗಿಯೇ ಶ್ರೀ ವಿಷ್ಣುವು ಅನೇಕ ಅವತಾರಗಳನ್ನು ತಾಳಬೇಕಾಯಿತು.
ಅದು ಹೇಗೆಂದರೆ ಒಂದು ಸಾರಿ ಅಂಬಋಷಿಯು ಏಕಾದಶಿಯ ವ್ರತಸ್ಥನಾಗಿರುವ ಸಮಯದಲ್ಲಿ, ದೂರ್ವಾಸ ಮುನಿಯು ಆತನ ವ್ರತಭಂಗ ಮಾಡಬೇಕೆಂಬ ಉದ್ದೇಶದಿಂದಲೇ ಆತನ ಮನೆಗೆ ಅತಿಥಿಯಾಗಿ ಬಂದರು . ಆ ಸಲ ಒಂದೇ ಒಂದು ಗಳಿಗೆಯ ಮಟ್ಟಿಗೆ ಸಾಧನ ದ್ವಾದಶಿ ತಿಥಿಯಿತ್ತು. ಕಾರಣ ಮಹಾ ಪುರುಷನೊಬ್ಬನು ಅಥಿತಿಯಾಗಿ ಬಂದಿರುವ ಈ ಸಂದಿಗ್ಧ ಸಮಯದಲ್ಲಿ ತನ್ನ ದ್ವಾದಶಿ ವ್ರತವು ಹೇಗೆ ಪೂರ್ಣವಾದೀತೋ ಎಂದು ಅಂಬಋಷಿಗೆ ಚಿಂತೆಯಾಯಿತು. ಆದರೂ ಬಂದ ಅತಿಥಿಯನ್ನು ಅರ್ಘ್ಯ ಪಾದ್ಯಾದಿಗಳಿಂದ ಸತ್ಕರಿಸಿ ಪೂಜೆ ಮಾಡಿ, ” ಸ್ವಾಮಿ ಈ ದಿನ ಒಂದೇ ಒಂದು ಗಳಿಗೆ ಸಾಧನ ದ್ವಾದಶಿ ಇದೆ. ಆದ ಕಾರಣ ತಾವು ಆದಷ್ಟು ಬೇಗ ತಮ್ಮ ಸ್ನಾನಾನುಷ್ಠಾನಗಳನ್ನು ತೀರಿಸಿಕೊಂಡು ಸಮಯಕ್ಕೆ ಸರಿಯಾಗಿ ಬರುವ ಕೃಪೆಯಾಗಬೇಕು” ಎಂದು ವಿನಯದಿಂದ ನಮಸ್ಕರಿಸಿ ಬೇಡಿಕೊಂಡನು.
ಸರಿ ಎಂದು ನದಿಗೆ ಹೋದ ದೂರ್ವಾಸ ಮುನಿಗಳು ವಿಧಿಪೂರ್ವಕವಾಗಿ ಅನುಷ್ಠಾನ ಮಾಡುತ್ತ ಕುಳಿತುಬಿಟ್ಟರು. ಪಾರಣೆಯ ಗಳಿಗೆ ಬಂದೊದಗಿಯೇ ಬಿಟ್ಟಿತು. ಈಗ ಅಂಬಋಷಿಯು, ವ್ರತ ಭಂಗ ಮಾಡಿಕೊಳ್ಳಬೇಕೋ ಅಥವಾ ಅತಿಥಿಯನ್ನು ಅಲಕ್ಷಿಸಬೇಕೋ ಎಂದು ದ್ವಂದ್ವ ಸಮಸ್ಯೆಯಲ್ಲಿ ಸಿಲುಕಿಕೊಂಡನು. ಕೊನೆಗೆ ಅತಿಥಿಯ ದಾರಿಕಾಯ್ದು ಬೇಸತ್ತು ಸಾಧನೆಯ ಗಳಿಗೆ ಕಳೆದು ಹೋಗಬಾರದೆಂಬ ನಿರ್ಧಾರದಿಂದ ಕೇವಲ ಒಂದು ಉದ್ಧರಣೆ ತೀರ್ಥವನ್ನು ಮಾತ್ರ ಸೇವಿಸುತ್ತಾನೆ.
ಅನುಷ್ಠಾನ ಮುಗಿಸಿಕೊಂಡು ನದಿಯಿಂದ ಮರಳಿ ಬಂದ ದೂರ್ವಾಸ ಮುನಿಗಳಿಗೆ, ಅಂಬಾ ಋಷಿಯು ತೀರ್ಥಪ್ರಾಶನ ಮಾಡಿದ್ದು ಜ್ಞಾನ ದೃಷ್ಟಿಯಿಂದ ತಿಳಿದುಹೋಯಿತು . ಕೋಪದಿಂದ ” ದುರಾತ್ಮಾ.. ಅತಿಥಿಯನ್ನು ಬಿಟ್ಟು ಪಾರಣೆ ಮಾಡಿದ್ದೀಯ …. ನೀನು ಹಲವಾರು ಯೋನಿಗಳಲ್ಲಿ ಜನ್ಮ ಪಡೆ” ಎಂದು ಶಾಪ ಕೊಡುವಷ್ಟರಲ್ಲಿಯೇ ಹರಿಭಕ್ತನಾದ ಅಂಬಋಷಿಯು ” ಭಗವಂತಾ….. ಶ್ರೀ ಹರಿ ಕಾಪಾಡು ” ಎಂದು ಕೂಗಿಕೊಳ್ಳಲು, ಶ್ರೀಹರಿಯ ಸುದರ್ಶನಚಕ್ರವು ದೂರ್ವಾಸರನ್ನು ಹಿಮ್ಮೆಟ್ಟಿಸಿತ್ತು. ದೂರ್ವಾಸರು ಎಲ್ಲಿಗೆ ಹೋದರು ಅವರನ್ನು ಬೆಂಬಿಡದೆ ಹಿಂಬಾಲಿಸಿತು, ಕೊನೆಗೆ ದೂರ್ವಾಸರು ಶ್ರೀಹರಿಯ ಬಳಿಗೆ ಬಂದು ಕ್ಷಮೆ ಯಾಚಿಸಿದರು, ಆದರೆ ಶ್ರೀಹರಿಯು ಇದನ್ನು ನಿಲ್ಲಿಸಲು ನನ್ನಿಂದಲೂ ಸಾಧ್ಯವಿಲ್ಲ ಎಲ್ಲಿ ಶುರುವಾಯಿತೋ ಅಲ್ಲಿಗೆ ಹೋಗು ಎಂದು ಹೇಳಲು, ದೂರ್ವಾಸರಿಗೆ ತನ್ನ ತಪ್ಪಿನ ಅರಿವಾಗಿ ಅಂಬಾಋಷಿಯ ಬಳಿಗೆ ಬಂದು ಕ್ಷಮೆ ಯಾಚಿಸಿದರು, ಆಗ ಸುದರ್ಶನ ಚಕ್ರವು ಹಿಂತಿರುಗಿತು.
ಆದರೆ ಒಮ್ಮೆ ಮಂತ್ರಿತ ಶಾಪ ಜಲವು ಹಿಂಪಡೆಯಲು ಸಾಧ್ಯವಿಲ್ಲ , ಇದನ್ನು ನೀನು ಸ್ವೀಕರಿಸಲೇ ಬೇಕು ಎಂದು ಹೇಳಲು. ಅಂಬಋಷಿಯು ಶ್ರೀಹರಿಯನ್ನು ಭಕ್ತಿಯಿಂದ ” ಹೇ ಭಗವಂತಾ….ಈ ಮುನಿಯ ಶಾಪದಿಂದ ನನ್ನನ್ನು ರಕ್ಷಿಸು ತಂದೆ” ಎಂದು ಬೇಡಲು, ಭಕ್ತವತ್ಸಲನಾದ ಶ್ರೀಹರಿಯು, ಕರುವಿನ ಧ್ವನಿಯನ್ನಾಲಿಸಿದ ಹಸುವು ಓಡಿ ಬರುವಂತೆ ಅಲ್ಲಿಗೆ ಧಾವಿಸಿ ಬಂದನು. ಶಾಪೋದಕವನ್ನೆಸೆಯಲು ಕೈ ಎತ್ತಿದ ದೂರ್ವಾಸರಿಗೆ ವಂದಿಸಿ, ” ಮುನಿವರ್ಯಾ….. ನೀವು ನನ್ನ ಭಕ್ತನಿಗೆ ಶಾಪ ನೀಡಬೇಡಿ.. ಭಕ್ತ ರಕ್ಷಣೆಯು ನನ್ನ ಕರ್ತವ್ಯವಾಗಿದೆ. ಆದ್ದರಿಂದ ನೀವು ಕೊಡುವ ಶಾಪವನ್ನು ನನಗೆ ಕೊಟ್ಟುಬಿಡಿ; ನಾನೇ ಅನುಭವಿಸುತ್ತೇನೆ’ ಎಂದು ವಿನಂತಿಸಿಕೊಂಡನು.
ದೂರ್ವಾಸರೆಂದರೆ ಸಾಮಾನ್ಯರಲ್ಲ , ಬ್ರಹ್ಮ ಜ್ಞಾನಿಗಳು.. ಇನ್ನು ಮುಂದೆ ಭೂ ಭಾರವನ್ನು ಕಡಿಮೆ ಮಾಡುವುದಕ್ಕೆ ವಿಷ್ಣುವಿನ ಅವತಾರಗಳ ಅವಶ್ಯಕತೆ ಇದೆ ಎಂಬುದನ್ನು ತಮ್ಮಜ್ಞಾನ ದೃಷ್ಟಿಯಿಂದ ಅರಿತುಕೊಂಡು, ವಿಷ್ಣುವಿಗೆ ” ಹಾಗೆ ಮಾಡು ಶ್ರೀಹರಿಯೇ .. ನನ್ನ ಶಾಪದ ನಿಮಿತ್ತವಾಗಿ ಭಕ್ತ ಜನರನ್ನುದ್ಧರಿಸಲು ನೀನು ಭೂಮಿಯ ಮೇಲೆ ಹಲವಾರು ಸ್ಥಳಗಳಲ್ಲಿ ಹಲವಾರು ರೂಪದಿಂದ ಜನ್ಮಹೊಂದು ” ಎಂದು ಶಾಪೋದಕವನ್ನೆರೆದರು. ಹೀಗೆ ಉದ್ದೇಶಪೂರ್ವಕವಾಗಿ ದೂರ್ವಾಸರಿಂದ ಕೊಡಲ್ಪಟ್ಟ ಶಾಪವನ್ನು ಶ್ರೀಮನ್ನಾರಾಯಣನು ಸ್ವೀಕರಿಸಿ, ಪೌರಾಣಿಕವಾದ ದಶಾವತಾರಗಳನ್ನು ಎತ್ತಬೇಕಾಯಿತು. ಹೀಗೆ ಭಗವಂತಾ ಭಕ್ತನಿಗಾಗಿ ಹಲವಾರು ರೀತಿಯ ರೂಪ ಧರಿಸಿ ಭೂಮಿಗೆ ಬರಬೇಕಾಯಿತು.
(ಕೃಪೆ:ಗುರುಚರಿತ್ರೆಯಿಂದ ಆಯ್ದ ಭಾಗ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್