Ayodhya Ram Mandir; ದೇಶದೆಲ್ಲೆಡೆ ದೀಪಾವಳಿ
ರಾಮನ ಆಗಮನವನ್ನು ಸಂಭ್ರಮದಿಂದ ಸ್ವಾಗತಿಸಿದ ಭರತಭೂಮಿಯಲ್ಲಿ ರಾಮಜ್ಯೋತಿ
Team Udayavani, Jan 23, 2024, 12:40 AM IST
ಅಯೋಧ್ಯೆಯಲ್ಲಿ ಸೋಮವಾರ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಮತ್ತು ರಾಮ ಮಂದಿರ ಉದ್ಘಾಟನೆ ನೆರವೇರುತ್ತಿದ್ದಂತೆ, ಅದಕ್ಕೆ ಪೂರಕವಾಗಿ ದೇಶದ ಮೂಲೆ ಮೂಲೆಗಳಲ್ಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹಲವಾರು ಸ್ಥಳಗಳಲ್ಲಿ ಮಂದಿರ ಉದ್ಘಾಟನೆಯ ನೇರ ಪ್ರಸಾರ ವೀಕ್ಷಣೆ, ಪ್ರಸಾದ ವಿತರಣೆ, ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎಲ್ಲೆಲ್ಲೂ ರಾಮನಾಮವೇ ಮಾರ್ದನಿಸುತ್ತಿತ್ತು. ಜನ್ಮಭೂಮಿಗೆ ರಾಮನ ಆಗಮನವನ್ನು ಇಡೀ ದೇಶವೇ “ದೀಪಾವಳಿ’ಯಂತೆ ಸಂಭ್ರಮಿಸಿತು.
ತ್ರಿಪ್ರಯಾರ್‌ನಲ್ಲಿ ವಿಶೇಷ ಪೂಜೆ
ಪ್ರಧಾನಿ ಮೋದಿ ಇತ್ತೀಚೆಗೆ ಭೇಟಿ ನೀಡಿದ ಕೇರಳದ ತ್ರಿಪ್ರಯಾರ್ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ತಿರುವನಂತಪುರದ ರಾಮ ದೇಗುಲವೊಂದರಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿಶೇಷ ಪೂಜೆ ಸಲ್ಲಿಸಿದರು. ದೇವರೊಲಿದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು.
ದಿಲ್ಲಿಯಲ್ಲಿ ಸಂಭ್ರಮ
ಮಂದಿರ ಲೋಕಾರ್ಪಣೆ ಕಾರ್ಯಕ್ರಮ ನೇರ ಪ್ರಸಾರದ ಜತೆಗೆ ದೇವಸ್ಥಾನಗಳಲ್ಲಿ ಕೀರ್ತನೆಗಳನ್ನು ಕೇಳಿಸಲಾಗುತ್ತಿತ್ತು. ಸಂಜೆಯ ವೇಳೆಗೆ ಮನೆಗಳಲ್ಲಿ, ದೇಗುಲಗಳಲ್ಲಿ ಹಣತೆಗಳನ್ನು ಬೆಳಗಿಸಲಾಯಿತು. ರಾಮನ ಮೂರ್ತಿ, ಫೋಟೋದ ಮೆರವ ಣಿಯನ್ನೂ ನಡೆಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನವದೆಹಲಿಯ ಶಿವದೇಗುಕ್ಕೆ ಭೇಟಿ ನೀಡಿದರು.
ಜಮ್ಮು ಮತ್ತು ಕಾಶ್ಮೀರ
ಕೇಂದ್ರಾಡಳಿತ ಪ್ರದೇಶದ ಅನಂತನಾಗ್‌ನಲ್ಲಿರುವ ಸೂರ್ಯ ದೇಗುಲದಲ್ಲಿ ವಿಶೇಷ ಹೋಮ ಆಯೋಜಿಸಲಾಗಿತ್ತು. ಈ ವೇಳೆ ಕಾಶ್ಮೀರದಲ್ಲಿ ಶೀಘ್ರ ಸಾಮಾನ್ಯ ಸ್ಥಿತಿ ನೆಲೆಸಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ರಾಜಸ್ಥಾನ
ರಾಜಧಾನಿ ಜೈಪುರ ಸೇರಿದಂತೆ ವಿವಿಧ ನಗರಗಳಲ್ಲಿ ಸಾರ್ವಜನಿಕರು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಮನೆಗಳಲ್ಲಿ, ದೇಗುಲಗಳಲ್ಲಿ ರಾಮಾಯಣದ ವಿವಿಧ ಕಾಂಡಗಳ ಪಾರಾಯಣವನ್ನು ಭಕ್ತಿಯಿಂದ ಜನರು ನಡೆಸಿಕೊಟ್ಟರು.
ಅಸ್ಸಾಂನಲ್ಲಿ ಸುಡುಮದ್ದು ಪ್ರದರ್ಶನ
ಈಶಾನ್ಯ ರಾಜ್ಯ ಅಸ್ಸಾಂನ ವಿವಿಧ ಭಾಗಗಳಲ್ಲಿ ದೇಗುಲಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರ ಜತೆಗೆ ಸಂಜೆಯ ವೇಳೆಗೆ ವಿವಿಧೆಡೆ ಸುಡುಮದ್ದು ಪ್ರದರ್ಶನ ಆಯೋಜಿಸಲಾಗಿತ್ತು.
ಕೋಲ್ಕತಾದಲ್ಲಿ ಬೃಹತ್ ಮೆರವಣಿಗೆ
ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾ ಸೇರಿದಂತೆ ವಿವಿಧೆಡೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾಳಿ ಮಾತೆ ರಾಮ ಪೂಜೆ ಸಲ್ಲಿಸುವ ಸ್ತಬ್ದಚಿತ್ರವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಯಿತು.
ಇಂದಿನಿಂದ ಭಕ್ತರಿಗೆ ಮಂದಿರ ದರ್ಶನದ ಅವಕಾಶ
ದೇಶದ ಕೋಟ್ಯಂತರು ರಾಮಭಕ್ತರು ರಾಮಲಲ್ಲಾನ ದರ್ಶನ ಪಡೆಯಲು ಸದವಕಾಶ ದೊರೆತಿದ್ದು, ಮಂಗಳವಾರದಿಂದಲೇ ಭಕ್ತರು ಮಂದಿರಕ್ಕೆ ಆಗಮಿಸಬಹುದೆಂದು ಮಂದಿರದ ಪ್ರಧಾನ ಅರ್ಚಕರಾದ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ. ದಿನವೂ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ ದೇಗುಲ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಮಲಲ್ಲಾನಿಗೆ ನಿತ್ಯವೂ 3 ಬಾರಿ ವಿಶೇಷ ಆರತಿಗಳನ್ನು ನಡೆಸಲಾಗುತ್ತದೆ. ಬೆಳಗ್ಗೆ 6.30ಕ್ಕೆ ಶೃಂಗಾರ ಆರತಿ, ಮಧ್ಯಾಹ್ನ 12.00ಗಂಟೆಗೆ ಭೋಗ್ ಆರತಿ ಮತ್ತು ಸಂಜೆ 7.30ಕ್ಕೆ ಸಂಧ್ಯಾ ಆರತಿಯನ್ನು ನೆರವೇರಿಸಲಾಗುತ್ತದೆ. ಆರತಿ ಸಂದರ್ಭದಲ್ಲಿ ಭಾಗಿಯಾಗಲು ಕೇವಲ 30 ಭಕ್ತಾದಿಗಳಿಗೆ ಮಾತ್ರ ಅವಕಾಶ ಇರುವ ಹಿನ್ನೆಲೆಯಲ್ಲಿ ಇದಕ್ಕೆ ಪ್ರತ್ಯೇಕ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬೇಕಾಗುತ್ತದೆ.
ಮಂದಿರದ ಮುಂದೆ ಅಮೂಲ್ ಗರ್ಲ್: ಡೂಡಲ್ ವೈರಲ್
ಡೇರಿ ಬ್ರ್ಯಾಂಡ್ ಅಮೂಲ್ ಎಂದಿನಂತೆ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆಯ ದಿನವೂ ಕ್ರಿಯಾಶೀಲ ಜಾಹೀರಾತಿನೊಂದಿಗೆ ಮನಗೆದ್ದಿದೆ. ರಾಮಮಂದಿರದ ಮುಂದೆ ಅಮೂಲ್ ಗರ್ಲ್ ಬರಿಗಾಲಲ್ಲಿ ನಿಂತು ಕೈಮುಗಿಯುತ್ತಿರುವ ಚಿತ್ರವನ್ನು ಹಾಕಲಾಗಿದೆ. “ಕೋಟಿ ಭರವಸೆಗಳ ಮಂದಿರ’ ಎಂಬ ಶೀರ್ಷಿಕೆ ಮತ್ತು “ಟಾಪಿಕಲ್: ಅಯೋಧ್ಯಾ ರಾಮಮಂದಿರ ಉದ್ಘಾಟನೆ’ ಎಂಬ ಅಡಿಬರಹ ನೀಡಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉಚಿತ ದೋಸೆ ಹಂಚಿದ ವ್ಯಾಪಾರಿ
ರಾಮಮಂದಿರ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿಯ ಬೀದಿಬದಿ ವ್ಯಾಪಾರಿಯೊಬ್ಬರು ಸೋಮವಾರ ಎಲ್ಲ ಗ್ರಾಹಕರಿಗೂ ಉಚಿತವಾಗಿ ದೋಸೆ ವಿತರಿಸುವ ಮೂಲಕ ರಾಮಭಕ್ತಿ ಮೆರೆದಿದ್ದಾರೆ. ರಾಹುಲ್ ಅವರ ದೋಸೆ ಅಂಗಡಿಗೆ ಜನ ಮುಗಿಬಿದ್ದು ದೋಸೆ ಸವಿದಿದ್ದಾರೆ. “ಎಷ್ಟು ಬೇಕೋ ಅಷ್ಟು ದೋಸೆ ತಿನ್ನಿ. ಈಗ ರಾಮ ಬಂದಿದ್ದಾನೆ. ಅವನು ನಮ್ಮೆಲ್ಲರನ್ನೂ ಕಾಯುತ್ತಾನೆ, ನಮ್ಮೆಲ್ಲ ಸಮಸ್ಯೆಗಳನ್ನೂ ಪರಿಹರಿಸುತ್ತಾನೆ’ ಎಂದು ರಾಹುಲ್ ಹೇಳಿದ್ದಾರೆ.
ದಶಾಶ್ವಮೇಧ ಘಾಟ್‌ನಲ್ಲಿ “ಗಂಗಾರತಿ’
ಮಂದಿರ ಪ್ರಾಣ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ “ಗಂಗಾ ಮಹಾ ಆರತಿ’ ನಡೆದಿದೆ. ಸಾಮಾನ್ಯವಾಗಿ ಗಂಗಾ ಆರತಿಯನ್ನು 7 ಅರ್ಚಕರು ನಡೆಸಿಕೊಡುತ್ತಾರೆ. ಆದರೆ, ಸೋಮವಾರ ವಿಶೇಷವೆಂಬಂತೆ 9 ಅರ್ಚಕರು ಸೇರಿ ಮಹಾ ಆರತಿ ನಡೆಸಿದ್ದಾರೆ.
ಒಡಿಶಾದಲ್ಲೂ ಮಂದಿರ ಉದ್ಘಾಟನೆ
ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ನೆರವೇರುತ್ತಿದ್ದಂತೆಯೇ ಅಲ್ಲಿಂದ 1 ಸಾವಿರ ಕಿ.ಮೀ. ದೂರದಲ್ಲಿರುವ ಒಡಿಶಾದ ನಾರಾಯಣಗಢದಲ್ಲಿ ಮತ್ತೂಂದು ರಾಮ ದೇಗುಲ ಉದ್ಘಾಟನೆಯಾಗಿದೆ. ಸಮುದ್ರಮಟ್ಟದಿಂದ 1,800 ಅಡಿ ಎತ್ತರದಲ್ಲಿ ಇರುವ ಪರ್ವತದಲ್ಲಿ ಅದನ್ನು ನಿರ್ಮಿಸಲಾಗಿದೆ. ಆ ದೇಗುಲದಲ್ಲಿ 73 ಅಡಿ ಎತ್ತರದ ರಾಮನ ಮೂರ್ತಿಯನ್ನು ನಿರ್ಮಿಸಲಾಗಿದೆ. 2017ರಲ್ಲಿ ಈ ದೇಗುಲದ ನಿರ್ಮಾಣ ಕಾಮಗಾರಿಯನ್ನು 150ಕ್ಕೂ ಅಧಿಕ ಕಾರ್ಮಿಕರು ಆರಂಭಿಸಿದ್ದರು. ಒಟ್ಟು ಏಳು ವರ್ಷಗಳ ಅವಧಿಯಲ್ಲಿ ಈ ದೇಗುಲವನ್ನು ನಿರ್ಮಿಸಲಾಗಿದೆ. ದೇಗುಲದ ಗರ್ಭಗುಡಿಯ ಎತ್ತರವೇ 65 ಅಡಿ ಇದೆ. ದೇಗುಲವನ್ನು ಒಡಿಶಾ ಶಿಲ್ಪಕಲೆ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.