ನವಭಾರತಕೆ ಅಯೋಧ್ಯಾ ಹೊಸ ಅಧ್ಯಾಯ
Team Udayavani, Aug 5, 2020, 2:52 PM IST
ಜಗತ್ತಿನ ಕೋಟ್ಯಂತರ ಭಕ್ತರು, ಅಭಿಮಾನಿಗಳ ಪಾಲಿಗೆ ಇವತ್ತು ಅವಿಸ್ಮರಣೀಯವಾದ ಪರ್ವ ದಿನ. ಮರ್ಯಾದಾ ಪುರುಷೋತ್ತಮನೆಂದು ಕೊಂಡಾಡಲ್ಪಡುವ, ನಾರಾಯಣನ ಅವತಾರಗಳಲ್ಲಿ ಒಂದಾಗಿರುವ ಶ್ರೀರಾಮಚಂದ್ರನಿಗೆ ಅವನ ಜನ್ಮಸ್ಥಾನವಾಗಿರುವ ಸರಯೂ ನದಿ ತೀರದ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇರಿಸುವ ದಿನ. ನೂರಾರು ವರ್ಷಗಳ ಕನಸು ಕೈಗೂಡುತ್ತಿರುವ ದಿನ. ಸುಂದರ ಮಂದಿರವು ಶೀಘ್ರ ಸಾಕಾರವಾಗಲಿ, ಸರ್ವಧರ್ಮಗಳ ನೆಲೆವೀಡು ಭಾರತದಲ್ಲಿ ಸೌಹಾರ್ದದ ಮಂದಿರ ಇದಾಗಲಿ ಎಂಬುದು ಆಶಯ.
ಆದರ್ಶಮೂರ್ತಿಯ ಮಂದಿರ
ಶ್ರೀರಾಮ ಭಗವಂತನ ಅವತಾರವೆಂಬುದು ಭಾರತೀಯರ ನಂಬಿಕೆ, ಶ್ರದ್ಧೆ. ಭೂಮಿಯಲ್ಲಿ ಅವತರಿಸಿದ ಬಳಿಕ ಮರ್ಯಾದಾ ಪುರುಷೋತ್ತಮನೆನಿಸಿ ತನ್ನ ವ್ಯಕ್ತಿತ್ವ, ದೃಢ ನಿರ್ಧಾರಗಳಿಂದಾಗಿ ಜನಮಾನಸದಲ್ಲಿ ನೆಲೆಯಾಗಿ ವಿಶ್ವವ್ಯಾಪಿಯಾದ. ರಾಮರಾಜ್ಯದ ಕಲ್ಪನೆಗೆ ಕೇಂದ್ರವಾಗಿರುವ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರಲೆಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ.
-ಡಾ| ಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ
ಮಂದಿರ: ರಾಷ್ಟ್ರೀಯ ಸ್ಥಳವಾಗಲಿ
ಶ್ರೀರಾಮ ಸ್ವಯಂ ಸುಖೀ, “ಆರಾಮ’. ಕಾಡಿಗೆ ಹೋಗುವಾಗಲೂ ಸಕಲವನ್ನು ದಾನ ಮಾಡಿ ಹೋದವ. ರಾಜನಾಗಿ ದುಷ್ಟರನ್ನು ನಿಗ್ರಹಿಸಿದವ. ಸಹಬಾಳ್ವೆ ನೀತಿಯನ್ನೂ ಅನುಸರಿಸಿದವ. ಇಂತಹ ಅವತಾರಿ ರಾಮನ ಪ್ರತೀಕ ಅವನ ಜನ್ಮಸ್ಥಳದಲ್ಲಿಯೇ ನಿರ್ಮಾಣಗೊಳ್ಳುವುದು ಮುಖ್ಯ. ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀರಾಮ ಮಂದಿರವು ರಾಷ್ಟ್ರೀಯ ಸ್ಥಳವಾಗಿ ಘೋಷಣೆಯಾಗಲಿ. – ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪರ್ಯಾಯ ಅದಮಾರು ಮಠ, ಶ್ರೀಕೃಷ್ಣಮಠ, ಉಡುಪಿ
ಹೋರಾಟದ ನೆನಪು
1980-90ರ ದಶಕಗಳಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಕುರಿತು ಎಲ್ಲೆಡೆ ನಡೆದ ಹೋರಾಟ, ರಾಮತಾರಕ ಯಜ್ಞ, ರಾಮಶಿಲಾ ಪೂಜನ, ರಾಮರಥಯಾತ್ರೆಗಳಲ್ಲಿ ಪಾಲ್ಗೊಂಡ ನೆನಪು, ಅಯೋಧ್ಯೆ ಚಲೋ, ಕರಸೇವೆಗಳಲ್ಲಿ ನಮ್ಮ ಗುರುಗಳು, ಪೇಜಾವರ ಶ್ರೀಗಳೊಂದಿಗೆ ಪಾಲ್ಗೊಂಡ ದಿನಗಳು ನೆನಪಾಗುತ್ತಿವೆ. ಲಕ್ಷಾಂತರ ಜನರ ಪರಿಶ್ರಮದಿಂದ ಆ ಕನಸು ನನಸಾಗುವ ಕ್ಷಣ ಈಗ ಒದಗಿಬಂದಿದೆ. ಮಂದಿರ ನಿರ್ಮಾಣವು ನಿರ್ವಿಘ್ನವಾಗಿ ನೆರವೇರಲಿ. -ಶ್ರೀ ವಿದ್ಯೆಶತೀರ್ಥ ಶ್ರೀಪಾದರು ಭಂಡಾರಕೇರಿ ಮಠ, ಉಡುಪಿ
ಬಹುಜನರ ಅಪೇಕ್ಷೆ ಸನ್ನಿಹಿತ
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಂದಿರ ನಿರ್ಮಾಣದ ಕನಸು ನನಸಾಗುತ್ತಿದೆ. ಬಹುಜನರ ಬಹುಕಾಲದ ನಿರೀಕ್ಷೆ ಸನ್ನಿಹಿತವಾಗುತ್ತಿದೆ. ಶ್ರೀರಾಮಮಂದಿರದ ನಿರ್ಮಾಣ ಕಾಮಗಾರಿಯು ನಿರ್ವಿಘ್ನವಾಗಿ ನಡೆಯಲಿ. ಶ್ರೀರಾಮನು ಭಕ್ತರ ಎಲ್ಲ ಸಂಕಷ್ಟಗಳನ್ನು ದೂರವಾಗಿಸಿ ಇಷ್ಟಾರ್ಥಗಳನ್ನು ಈಡೇರಿಸಲಿ. ದೇವರ ಅನುಗ್ರಹ ಎಲ್ಲರ ಮೇಲೆ ಇರಲಿ.
– ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಕೃಷ್ಣಾಪುರ ಮಠ, ಉಡುಪಿ.
ಅಯೋಧ್ಯೆಯ ಬೀಗ ಒಡೆದ ಸ್ಮರಣೆ
1986ರಲ್ಲಿ ರಾಮಲಲ್ಲಾ ಮೂರ್ತಿ ಪಾಳುಬಿದ್ದಂತಹ ಸ್ಥಿತಿಯಲ್ಲಿದ್ದ ಜೈಲಿನಲ್ಲಿತ್ತು. ಆಗ ಪೇಜಾವರ ಶ್ರೀಗಳೊಂದಿಗೆ ನಾವೂ ಪಾಲ್ಗೊಂಡು ಹಳೆಯದಾದ ಬೀಗವನ್ನು ಒಡೆದ ನೆನಪು ಈಗಲೂ ಇದೆ. ಈಗ ಮಂದಿರ ನಿರ್ಮಾಣದ ಸುಮುಹೂರ್ತ ಒದಗಿಬಂದಿದೆ. ಇದು ಜಗತ್ತಿಗೆ “ಆರಾಮ’ ಮಂದಿರವಾಗಬೇಕು. ಕೇವಲ ಧಾರ್ಮಿಕ ಶ್ರದ್ಧೆಯ ಕೇಂದ್ರವಾಗದೆ ಮೌಲ್ಯ, ಆದರ್ಶದ ಮೂಲಸೆಲೆಯಾಗಲಿ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪುತ್ತಿಗೆ ಮಠ, ಉಡುಪಿ.
ಜಗತ್ತಿಗೆ ಶುಭ ಲಕ್ಷಣ
“ಆಪದಾ ಅಪಹರ್ತಾರಂ…’ ಆಪತ್ತನ್ನು ಪರಿಹರಿಸುವುದು, ಸಂಪತ್ತನ್ನು ಕರುಣಿಸುವುದು ರಾಮಚಂದ್ರ ದೇವರ ವೈಶಿಷ್ಟé. ದೇಶದ ಈ ನೆಲದ ಭೂಮಿ, ಗಾಳಿಯನ್ನು ಸೇವಿಸುವ ಎಲ್ಲರಿಗೆ ರಾಮ ಆರಾಧ್ಯದೇವ. ಕೊರೊನಾದಿಂದ ತತ್ತರಿಸುವ ಜಗತ್ತಿಗೆ ಒಳ್ಳೆಯದಾಗುವ ಲಕ್ಷಣ ಕಂಡುಬರುತ್ತಿದೆ. ಪ್ರಧಾನಿ ಮೋದಿ ಸಮಕ್ಷಮ ಭೂಮಿಪೂಜೆ ನಡೆಯುವಾಗ ಎಲ್ಲರೂ ಮನೆಗಳಲ್ಲಿ ದೀಪ ಬೆಳಗಿ ಪ್ರಾರ್ಥಿಸೋಣ.
– ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅದಮಾರು ಮಠ, ಉಡುಪಿ.
ಆಗಿನ ಬಂಧನದ ನೆನಪು
35 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ನಡೆದ ಆಂದೋಲನದಲ್ಲಿ ಪಲಿಮಾರು-ಭಂಡಾರಕೇರಿ ಮಠದ ಶ್ರೀ ವಿದ್ಯಾಮಾನ್ಯ ತೀರ್ಥರು, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಜತೆ ಪಾಲ್ಗೊಂಡು ಬಂಧನಕ್ಕೊಳಗಾಗಿದ್ದರು. ನಮ್ಮ ಪರಂಪರೆಯ ಮೂರನೆಯ ಯತಿ ಶ್ರೀ ಸಂಭವತೀರ್ಥರು ಅಯೋಧ್ಯೆಯಲ್ಲಿ ವೃಂದಾವನಸ್ಥರಾದರೆಂದು ಇತಿಹಾಸ ಹೇಳುತ್ತದೆ. ರಾಮಮಂದಿರ ದೇಶ ಕಟ್ಟುವ ಮಂದಿರವಾಗಲಿ.
-ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪಲಿಮಾರು ಮಠ, ಉಡುಪಿ.
ಕಣ್ತುಂಬಿಕೊಳ್ಳುವ ದಿನ ಬರಲಿ
ಅಯೋಧ್ಯೆ ಕರಸೇವೆ ನಡೆದ 1992ರ ಕಾಲಘಟ್ಟದಲ್ಲಿಯೇ ನಮಗೆ ಸನ್ಯಾಸಾಶ್ರಮವಾಯಿತು. ಆದ್ದರಿಂದ ಅಲ್ಲಿಗೆ ಹೋಗಲು ಆಗಲಿಲ್ಲ. ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಆದರ್ಶಮೂರ್ತಿಯ ಭವ್ಯ ಶ್ರೀರಾಮಮಂದಿರ ಆದಷ್ಟು ಶೀಘ್ರ ನಿರ್ಮಾಣಗೊಳ್ಳಲಿ. ಈ ಸುಂದರ ದೇಗುಲವನ್ನು ನಾಡಿನ ಎಲ್ಲ ಭಕ್ತರು ಕಣ್ತುಂಬಿಕೊಳ್ಳುವ ದಿನ ಬೇಗನೆ ಬರಲಿ ಎಂದು ಪ್ರಾರ್ಥಿಸುತ್ತೇವೆ.
– ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಕಾಣಿಯೂರು ಮಠ, ಉಡುಪಿ
ಮಂದಿರ ನಿರ್ಮಾಣ ಶೀಘ್ರವಾಗಲಿ
ನಿರಂತರ ಹೋರಾಟದ ಬಳಿಕ ಕೊನೆಗೂ ಶ್ರೀರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳುತ್ತಿದೆ. ಮಂದಿರದ ಭೂಮಿಪೂಜೆ ನೆರವೇರುವ ಸಂದರ್ಭ ಸೋಂದಾ ಕ್ಷೇತ್ರದ ಮೃತ್ತಿಕೆ ಮತ್ತು ಧವಳಗಂಗಾ ಪುಷ್ಕರಿಣಿಯ ಜಲವನ್ನು ಕಳುಹಿಸಿಕೊಟ್ಟಿದ್ದೇವೆ. ಮಂದಿರ ನಿರ್ಮಾಣವು ಶೀಘ್ರದಲ್ಲಿ ನಡೆಯುವಂತಾಗಲಿ ಎಂದು ಪ್ರಾರ್ಥಿಸುತ್ತೇವೆ.
– ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಸೋದೆ ವಾದಿರಾಜ ಮಠ, ಉಡುಪಿ
ಸ್ವಾತಂತ್ರ್ಯ ದೊರೆತಷ್ಟೇ ಸಂತೋಷ
ರಾಮನಿಗೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಬೇಕೆ ನ್ನುವುದು ಪ್ರತಿಯೊಬ್ಬ ಹಿಂದೂವಿನ ಧಾರ್ಮಿಕ ನಂಬಿಕೆ. ಹಿಂದೂಗಳಿಗೆ ಅಯೋಧ್ಯೆ ಮೋಕ್ಷಭೂಮಿ. ಹಿಂದೂ ಆದವನು ಒಮ್ಮೆಯಾದರೂ ಅಯೋಧ್ಯೆಯನ್ನು ಸಂದರ್ಶಿಸಬೇಕು ಎಂದು ವಾಲ್ಮೀಕಿ ತಿಳಿಸಿದ್ದಾರೆ. ಅಂತಹ ಮೋಕ್ಷದ ಭೂಮಿಯಲ್ಲಿ ರಾಮನ ಮಂದಿರ ನಿರ್ಮಾಣವಾಗುತ್ತಿರುವುದು ನಮಗೆ ಸ್ವಾತಂತ್ರ್ಯ ದೊರೆತಷ್ಟೇ ಸಂತಸ ನೀಡುತ್ತಿದೆ.
– ಶ್ರೀ ರಾಜಶೇಖರಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠ
ವೈಭವದೊಂದಿಗೆ ರೂಪ ಪಡೆಯಲಿ
ಲಕ್ಷಾಂತರ ಹಿಂದೂಗಳ ಬಲಿದಾನ ಅರ್ಥ ಪೂರ್ಣವಾಗುವ ದಿನವಿದು. ಭವ್ಯ ರಾಮಮಂದಿರ ಶ್ರೀರಾಮನ ಜನ್ಮ ಸ್ಥಳದಲ್ಲಿ ನಿರ್ಮಾಣವಾಗುವ ಮೂಲಕ ಅಸಂಖ್ಯ ಹಿಂದೂಗಳ ಹೃದಯ ಸಾಮ್ರಾಜ್ಯದಲ್ಲಿ ಭಕ್ತಿಯ ಬೆಳಕು ಪ್ರಜ್ವಲಿಸಲಿ. ಪೂರ್ವಾಶ್ರಮದಲ್ಲಿದ್ದ ನಾನು ರಾಮಮಂದಿರ ಹೋರಾಟದಲ್ಲಿ ಪೇಜಾವರ ಶ್ರೀಗಳ ಶಿಷ್ಯನಾಗಿ ಭಾಗವಹಿಸಿದ್ದೆ. ರಾಮಲಲ್ಲಾ ವಿಗ್ರಹ ಪ್ರತಿಷ್ಠೆ ಮಾಡುವ ಕ್ಷಣ ಪೇಜಾವರ ಶ್ರೀಗಳ ಜತೆಗಿದ್ದೆ.
-ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಸುಬ್ರಹ್ಮಣ್ಯ ಮಠ
ಪೂರ್ವಜರ ತಪಸ್ಸಿನ ಫಲ
ನಮ್ಮ ಪೂರ್ವಜರ ತಪಸ್ಸಿನ ಫಲ ಎಂಬಂತೆ ರಾಮ ಮಂದಿರ ನಿರ್ಮಾಣಗೊಳ್ಳುತ್ತಿದೆ. ರಾಮನ ಭವ್ಯ ಮಂದಿರವು ಶೀಘ್ರ ನಿರ್ಮಾಣವಾಲಿ.
-ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ
ಸರ್ವ ಧರ್ಮೀಯರ ಕೇಂದ್ರವಾಗಲಿ
ಜೈನ, ಬೌದ್ಧ ವೈದಿಕ ಧರ್ಮಗಳು ಪ್ರಾಚೀನ ಸಹೋದರ ಧರ್ಮಗಳಾಗಿವೆ. ಶ್ರೀರಾಮ ಮಂದಿರವು ವಿಶ್ವದ ಸಮಸ್ತ ಸರ್ವಧರ್ಮೀಯರ ತಪೋ ಕೇಂದ್ರವಾಗಿ ಬೆಳಗಲಿ.
-ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ, ಶ್ರೀ ದಿಗಂಬರ ಜೈನ ಮಠ, ಮೂಡುಬಿದಿರೆ
ಧರ್ಮರಕ್ಷಕ ಶ್ರೀರಾಮ
ಅಯೋಧ್ಯೆ ಆದಿನಾಥ ಸ್ವಾಮಿ ಅವತರಿಸಿದ ಕರ್ಮಭೂಮಿ. 63 ಮಂದಿ ಮಹಾಪುರುಷರು ಮತ್ತು 24 ಮಂದಿ ತೀರ್ಥಂಕರರ ಪೈಕಿ ಶ್ರೀಕೃಷ್ಣನಂತೆ ಶ್ರೀರಾಮಚಂದ್ರ ಕೂಡ ಓರ್ವ ಅವತಾರ ಪುರುಷ. ಆತ ಅಖಂಡವಾದ ಧರ್ಮರಕ್ಷಣೆ ಮಾಡಿದ್ದ. ಶ್ರೀರಾಮ ಕೂಡ ಜೈನನೇ ಆಗಿದ್ದಾನೆ. –
ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಜೈನ ಮಠಾಧೀಶರು, ಕಾರ್ಕಳ
ಮತ್ತೂಮ್ಮೆ ಭವ್ಯಭಾರತ ನಿರ್ಮಾಣ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯುತ್ತಿರು ವುದು ಸಂತಸ ತಂದಿದೆ. ರಾಮನ ಆದರ್ಶ ಮೈಗೂಡಿಸಿ ಕೊಳ್ಳುವುದರಿಂದ ಮತ್ತೂಮ್ಮೆ ಭವ್ಯಭಾರತ ನಿರ್ಮಾಣಗೊಳ್ಳಲಿದೆ.
-ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್
ಶತಮಾನದ ಕನಸು ನನಸು
ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಒಂದಾದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಭೂಮಿಪೂಜೆ ನಡೆಯುತ್ತಿರು ವುದು ನಮಗೆ ಸಂತಸ ತಂದಿದೆ. ಹಿಂದೂ ಶ್ರದ್ಧಾಳುಗಳ ಶತಮಾನದ ಕನಸು ನನಸಾಗುತ್ತಿದೆ.
-ಶ್ರೀ ಧರ್ಮಪಾಲನಾಥ ಸ್ವಾಮೀಜಿ , ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಕಾವೂರು ಶಾಖೆ
ಆರಾಧ್ಯ ದೇವನಾಗಿ ಕಂಗೊಳಿಸಲಿ
ವಿಶ್ವದ ಆರಾಧ್ಯ ದೇವನಾಗಿ ಕಂಗೊಳಿಸಲಿದ್ದಾನೆ ಪ್ರಭು ಶ್ರೀರಾಮ. ಮಂದಿರದ ನಿರ್ಮಾಣದ ಸಂಕಲ್ಪದಿಂದ ಈ ದೇಶದ ಸಮಸ್ತರಿಗೆ ಸುಖ, ಶಾಂತಿ, ನೆಮ್ಮದಿ ಸಿಗಲೆಂದು ಹಾರೈಸುತ್ತೇನೆ.
– ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ ನಗರ, ಧರ್ಮಸ್ಥಳ
ಜಗತ್ತಿನ ಕಷ್ಟಗಳು ದೂರವಾಗಲಿ
ಹಲವು ವರ್ಷಗಳ ಕನಸು ನನಸಾಗುತ್ತಿದೆ. ಶ್ರೀರಾಮನ ಕೃಪೆಯಿಂದ ಜಗತ್ತಿನ ಎಲ್ಲ ಕಷ್ಟನಷ್ಟಗಳು ದೂರವಾಗಲಿ, ಸಮಸ್ತ ಜನತೆ ಸಂತಸದ ಜೀವನ ನಡೆಸುವಂತಾಗಲಿ.
-ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರ
ಪರಂಪರೆ ಸ್ಥಾಪಿಸುವ ಪ್ರಥಮ ಹೆಜ್ಜೆ
ರಾಮ ಮಂದಿರಕ್ಕೆ ಭೂಮಿ ಪೂಜೆ ಸನಾತನ ಸಂಸ್ಕೃತಿಯ ಪರಂಪರೆಯನ್ನು ಪುನರ್ ಸ್ಥಾಪಿಸುವಲ್ಲಿ ಪ್ರಥಮ ಹೆಜ್ಜೆಯಾಗಲಿ. ಜನತೆ ಶಾಂತಿ, ಸಮೃದ್ಧಿಯಿಂದ ಬಾಳುವಂತಾಗಲಿ.
-ಶ್ರೀ ವಿಖ್ಯಾತಾನಂದ ಸ್ವಾಮೀಜಿ
ಕನಸು ಸಾಕಾರಗೊಳ್ಳಲಿ
ಮಂದಿರದ ನಿರ್ಮಾಣ ಶೀಘ್ರ ಪೂರ್ಣಗೊಳ್ಳಲಿ. ಆ ಮೂಲಕ ಅದೆಷ್ಟೋ ರಾಮಭಕ್ತರ ಕನಸು ಸಾಕಾರಗೊಳ್ಳುವಂತಾಗಲಿ. ಜತೆಗೆ ಸುಭಿಕ್ಷ ಶ್ರೀರಾಮರಾಜ್ಯ ರೂಪುಗೊಳ್ಳಲಿ.
– ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ , ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು
ಸನಾತನ ಸಂಸ್ಕೃತಿಗೆ ದೊಡ್ಡ ಕೊಡುಗೆ
ಶ್ರೀರಾಮನ ನಡೆನುಡಿಯೇ ಶ್ರೇಷ್ಠ ಎಂಬುದು ವ್ಯಕ್ತ. ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿರುವುದು ಐತಿಹಾಸಿಕ ಸನ್ನಿವೇಶ. ಈ ಮಂದಿರ ಸನಾತನ ಸಂಸ್ಕೃತಿಗೆ ಬಲು ದೊಡ್ಡ ಕೊಡುಗೆಯಾಗಲಿ.
-ಈಶ ವಿಟ್ಟಲದಾಸ ಸ್ವಾಮೀಜಿ ಸಾಂದೀಪನೀ ಸಾಧನಾಶ್ರಮ, ಕೇಮಾರು
ಆತ್ಮಾಭಿಮಾನದ ಪ್ರತೀಕ
ಶ್ರೀ ರಾಮಚಂದ್ರನ ಜನ್ಮ ಭೂಮಿ ಅಯೋಧ್ಯೆಯು ಹಿಂದೂಗಳ ಆತ್ಮಾಭಿಮಾನದ ಪ್ರತೀಕ. ಮಂದಿರ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲಿ. ಈ ಮಹಾನ್ ನಿರ್ಮಾಣಕಾರ್ಯಕ್ಕೆ ಸರ್ವ ಸಹಕಾರ ಒದಗಿಬರಲಿ.
– ಶ್ರೀ ಮುಕ್ತಾನಂದ ಸ್ವಾಮೀಜ ,ಶ್ರೀ ಕ್ಷೇತ್ರ ಕರಿಂಜೆ
ವಿಶ್ವಕ್ಕೆ ಒಳಿತು ಮಾಡಲಿ
ಶ್ರೀರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣದ ಸುವರ್ಣ ಕಾಲ ನಮ್ಮೆಲ್ಲರ ಜೀವಿತಾವಧಿಯಲ್ಲಿ ಈಗ ಒದಗಿ ಬಂದಿದೆ. ಭಾರತದ ಧಾರ್ಮಿಕತೆಗೆ ರಾಮ ಮಂದಿರ ಮತ್ತಷ್ಟು ಕೀರ್ತಿ ತರಲಿ.
-ಶ್ರೀ ನೃಸಿಂಹಾಶ್ರಮ ಸ್ವಾಮಿಜಿ ಬಾಳೆಕುದ್ರು ಮಠ, ಹಂಗಾರಕಟ್ಟೆ
ನಮ್ಮದು 8 ಮಂದಿಯ ತಂಡ
ನಮ್ಮ 8 ಮಂದಿಯ ತಂಡಕ್ಕೆ ಡಾ| ವಿ.ಎಸ್.ಆಚಾರ್ಯರ ಸಾರಥ್ಯವಿತ್ತು. ಉಡುಪಿಯಿಂದ ಅಯೋಧ್ಯೆ ತಲುಪುವಾಗ ಎಲ್ಲ ಕಡೆಯೂ ಕರ್ಫ್ಯೂ ಹೇರಲಾಗಿತ್ತು. ನಾವು ಅಲ್ಲಿ ತಲುಪಿ ಗುಂಬಜ್ ಧ್ವಂಸ ಮಾಡುವ ಸನ್ನಿವೇಶವನ್ನು ನೋಡಿದೆವು. ಆ ಸಂದರ್ಭದಲ್ಲಿ ತೆಗೆದುಕೊಂಡು ಬಂದಿದ್ದ ಇಟ್ಟಿಗೆಯ ತುಂಡು ಈಗಲೂ ಮನೆಯಲ್ಲಿದೆ. ಆಗ ಜಿಲ್ಲೆಯ ಎಲ್ಲ ಕಡೆಗಳಲ್ಲೂ ರಾಮಪೂಜನ, ಭಜನೆಗಳು ನಿರಂತರವಾಗಿ ನಡೆಯುತ್ತಿತ್ತು.
-ಎಂ.ಸೋಮಶೇಖರ ಭಟ್, ಪುರಸಭೆಯ ಮಾಜಿ ಅಧ್ಯಕ್ಷರು, ಉಡುಪಿ.
ರಾಮರಾಜ್ಯದ ಚಿಂತನೆಗೆ ಅಡಿಗಲ್ಲು
ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರಕ್ಕೆ ಭೂಮಿಪೂಜೆ ನಡೆಯುವುದರ ಮುಖೇನ ದೇಶದಲ್ಲಿ ರಾಮರಾಜ್ಯದ ಚಿಂತನೆಗೆ ಅಡಿಗಲ್ಲು ಹಾಕುವ ಭವ್ಯ ದಿನ ಬಂದಿದೆ. ಶ್ರೀರಾಮ ಮಂದಿರ ನಿರ್ಮಾಣದ ಮೂಲಕ ರಾಮ® ಆದರ್ಶ ಸರ್ವವ್ಯಾಪಿಯಾಗಲಿರು ವುದರಿಂದ ಆ. 5 ಪುಣ್ಯದ
ದಿನ ಎಂದೇ ಜನಜನಿತವಾಗಲಿದೆ.
– ಡಾ| ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ದಕ್ಷಿಣ ಕ್ಷೇತ್ರದ ಕಾರ್ಯಕಾರಿ ಸದಸ್ಯರು
4 ಸಾವಿರಕ್ಕೂ ಅಧಿಕ ಮಂದಿ ಭಾಗಿ
ಅಯೋಧ್ಯೆ ಕರಸೇವೆಗೆ ಅವಿಭಜಿತ ದ.ಕ.ಜಿಲ್ಲೆ, ಕೊಡಗು, ಕಾಸರಗೋಡು ಜಿಲ್ಲೆಗಳಿಂದ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಬಹುತೇಕ ಮಂದಿ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ದೇಶದ ಎಲ್ಲ ಕಡೆಯಿಂದ ಜನ ಅಯೋಧ್ಯೆಗೆ ಬಂದಿದ್ದರು. ಪೇಜಾವರ, ಅದಮಾರು, ಕಾಣಿಯೂರು, ಪುತ್ತಿಗೆ, ಪಲಿಮಾರು ಮಠಾಧೀಶರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
-ಗುಜ್ಜಾಡಿ ಪ್ರಭಾಕರ ನಾಯಕ್, ಲೆಕ್ಕಪರಿಶೋಧಕರು, ಉಡುಪಿ
ಧನ್ಯತೆಯ ಭಾವ
ಡಿ.6ರಂದು ಕ್ಷಣಾರ್ಧ ದಲ್ಲಿ ಘಟನೆಗಳು ನಡೆದವು. ಶ್ರೀರಾಮನ ಮೂರ್ತಿಯನ್ನು ತಂದು ಪೇಜಾವರ ಶ್ರೀಗಳ ಕೈಗೆ ಸಂತರು ಒಪ್ಪಿಸಿದರು. ಅವರು ಅದನ್ನು ಕಬ್ಬಿಣದ ಪೆಟ್ಟಿಗೆಯೊಳಗೆ ಇರಿಸಿದರು. ಮರುದಿನ ನಸುಕಿನ ವೇಳೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಿ ಶ್ರೀರಾಮನ ಮೂರ್ತಿಯನ್ನು ಅಲ್ಲಿ ಮರು ಪ್ರತಿಷ್ಠಾಪಿಸಲಾಯಿತು. ಅಂದು ಪೂಜಿಸಲ್ಪಟ್ಟ ಶ್ರೀರಾಮನ ಕಂಡು ಧನ್ಯನಾದೆ.
-ಪ್ರೊ| ಎಂ.ಬಿ.ಪುರಾಣಿಕ್, ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ .
3 ಕರಸೇವೆಯಲ್ಲೂ ಭಾಗಿ
ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಮತ್ತು ಕಲ್ಯಾಣ್ ಸಿಂಗ್ ಸರಕಾರ ಇದ್ದಾಗ ಹಾಗೂ ಬಳಿಕ ಇನ್ನೊಂದು ಬಾರಿ ಕರಸೇವೆ ನಡೆದಿದ್ದು, ಮೂರು ಬಾರಿಯೂ ನಾನು ಭಾಗವಹಿಸಿದ್ದೆ. 1992ರ ಕರಸೇವೆ ವೇಳೆ ಇತಾರ್ಸಿಯಲ್ಲಿ ನಮ್ಮನ್ನು ಬಂಧಿಸಿ ಬೀಡಿ ಎಲೆಗಳ ಗೋದಾಮಿನಲ್ಲಿ ಕೂಡಿ ಹಾಕಿದ್ದು, ರಾತ್ರಿ ವೇಳೆ ಅಲ್ಲಿಂದ ಪಾರಾಗಿದ್ದೆವು. ಅಲ್ಲಿಂದ ನೂರಾರು ಕಿ.ಮೀ. ನಡೆದುಕೊಂಡೇ ಹೋಗಿದ್ದೆವು. ತ್ರಿವೇಣಿ ಗ್ಲಾಸ್ ಫ್ಯಾಕ್ಟರಿ ಬಳಿ ನಮ್ಮ ಮೇಲೆ ದಾಳಿಯೂ ನಡೆದಿತ್ತು.
– ಪ್ರವೀಣ್ ವಾಲ್ಕೆ
18 ದಿನ ಜೈಲಿನಲ್ಲಿದ್ದೆ
1990ರಲ್ಲಿ ಮೊದಲ ಬಾರಿಯ ಕರಸೇವೆಯಲ್ಲಿ ನಾನು ಭಾಗವಹಿಸಿದ್ದೆ. ಆಗ ನಮ್ಮನ್ನು 18 ದಿನ ಪ್ರತಾಪಗಢ ಜೈಲಿನಲ್ಲಿ ಇರಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ಬಳಿಕ ಅಯೋಧ್ಯೆಗೆ ತೆರಳಿ ಸಾಂಕೇತಿಕವಾಗಿ ಒಂದು ಇಟ್ಟಿಗೆಯನ್ನು ಇರಿಸಿ ಕರಸೇವೆ ಮಾಡಿ ಪೂಜೆ ಸಲ್ಲಿಸಿ ಬಂದಿದ್ದೆ. ಇದೇ ವೇಳೆ ಊರಿನಲ್ಲಿ ನಾವು ಸಾವನ್ನಪ್ಪಿದ್ದೇವೆ ಎಂದು ಸುದ್ದಿಯಾಗಿತ್ತು. 1 ತಿಂಗಳ ಬಳಿಕ ನಾವು ಊರು ತಲುಪಿದೆವು.
-ಗೋಪಾಲ ಕುತ್ತಾರ್
ಬಂಧಿಸಿದರೂ ಅಯೋಧ್ಯೆಗೆ ಪ್ರಯಾಣ
1990ರಲ್ಲಿ ಅಯೋಧ್ಯೆಯಲ್ಲಿ ನಡೆದ ಕರಸೇವೆಗೆಂದು ನಾವು ರೈಲಿನಲ್ಲಿ ಪ್ರಯಾಣ ಬೆಳೆಸಿದೆವು. ಮಧ್ಯಪ್ರದೇಶ ತಲುಪುವಾಗ ನಮ್ಮನ್ನು ಪೊಲೀಸರು ಬಂಧಿಸಿದರು. ರಾತ್ರಿ ಬೆಳಗಾಗುವುದರಷ್ಟರಲ್ಲಿ ನಾವು ಅಲ್ಲಿಂದ ಪಾರಾದೆವು. ಉತ್ತರ ಪ್ರದೇಶ ತಲುಪಿದ ಬಳಿಕ ಕಾಲ್ನಡಿಗೆಯಲ್ಲಿ ಅಯೋಧ್ಯೆಯತ್ತ ಸಾಗಿದೆವು. ಅಲ್ಲಿ 9 ದಿನ ಇದ್ದೆವು. ಕೊನೆಗೂ ಶ್ರೀರಾಮ ಮಂದಿರದ ಕನಸು ನನಸಾಗುತ್ತಿರುವುದು ಸಂತಸ ತಂದಿದೆ.
-ನಾರಾಯಣ ಆಚಾರ್, ಕುಂಪಲ
ಅವಕಾಶ ನೀಡಿದರೆ ಮತ್ತೆ ಕರಸೇವೆ
ಅಲ್ಲಲ್ಲಿ ಪೊಲೀಸ್ ತಡೆ ಬಳಿಕ ಹೇಗೋ ಅಯೋಧ್ಯೆ ತಲುಪಿದೆವು. ಅಲ್ಲಿ 13 ದಿನಗಳನ್ನು ಕಳೆದೆವು. ಆ ಸಂದರ್ಭ ಕರಸೇವೆ ನಡೆಯುತ್ತಿರಲಿಲ್ಲ. ನಾವು ದೇವರ ದರ್ಶನ ಮಾಡಿದೆವು. ಈಗಮಂದಿರ ನಿರ್ಮಾಣದ ಸಂದರ್ಭ ಭಾರೀ ಖುಷಿಯಾಗುತ್ತಿದೆ. ಅವಕಾಶ ನೀಡಿದರೆ ಅಯೋಧ್ಯೆಗೆ ತೆರಳಿ ನನ್ನಿಂದಾಗುವ ಕರಸೇವೆ ಮಾಡಲು ಸಿದ್ಧನಿದ್ದೇನೆ.
-ಜಿ.ವಾಸುದೇವ ಗೌಡ ಸುಳ್ಯ, ವಿ.ಹಿಂ.ಪ. ಜಿಲ್ಲಾ ಉಪಾಧ್ಯಕ್ಷ.
14 ದಿನ ಜೈಲಿನಲ್ಲಿಟ್ಟಿದ್ದರು
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗುತ್ತದೆ ಎಂಬುದು ಇಡೀ ಭಾರತವೇ ಹೆಮ್ಮೆಪಡುವ ವಿಚಾರವಾಗಿದೆ. ನಾವು 140 ಮಂದಿ ಪುತ್ತೂರಿನಿಂದ ಅಯೋಧ್ಯೆಗೆ ತೆರಳಿದ್ದು, ನಮ್ಮನ್ನು ಮಧ್ಯಪ್ರದೇಶದಲ್ಲಿ ತಡೆದು 14 ದಿನಗಳ ಕಾಲ ಜೈಲಿಗೆ ಹಾಕಿದ್ದರು. ಜೈಲಿನಲ್ಲಿರುವಾಗಲೇ ಶಿಲಾನ್ಯಾಸ ಕಾರ್ಯ ನಡೆದಿದ್ದು, ಟಿವಿಯಲ್ಲಿ ನೋಡಿದ್ದೆವು. 1990ರಲ್ಲಿ ಮತ್ತೆ ಅಯೋಧ್ಯೆಗೆ ತೆರಳಿದ್ದೆವು. ಶಿಲಾನ್ಯಾಸದ ವೇಳೆ ಆಡ್ವಾಣಿಯವರು ಪುತ್ತೂರಿನ ಕುರಿತು ಹೆಮ್ಮೆಯ ಮಾತುಗಳನ್ನಾಡಿದ್ದರು.
-ನಟ್ಟೋಜ ಶಿವಾನಂದ ರಾವ್, ಪುತ್ತೂರು
ಜೈಲಿನಲ್ಲಿಯೇ ಚಿಕಿತ್ಸೆ ನೀಡಿದ್ದರು
2002ರಲ್ಲಿ ನನಗೆ 22 ವರ್ಷ. ಉಡುಪಿಯಿಂದ ಗೆಳೆಯರೊಂದಿಗೆ ಅಯೋಧ್ಯೆಗೆ ತೆರಳಲು ಪ್ರಯತ್ನಿಸಿದೆವು. ಆದರೆ ಸುಲ್ತಾನಪುರದಲ್ಲಿ ನಮ್ಮನ್ನು ಬಂಧಿಸಲಾಯಿತು. ಊಟಕ್ಕಾಗಿ ರಾಮ ಭಕ್ತರು ತಿರುಗಿಬಿದ್ದಾಗ ನಡೆದ ಘರ್ಷಣೆಯಲ್ಲಿ ತಲೆ ಮತ್ತು ಕೈಗೆ ಬಲವಾದ ಗಾಯವಾಗಿತ್ತು. ಸುಲ್ತಾನಪುರದ ಜೈಲಿನಲ್ಲಿಯೇ ಚಿಕಿತ್ಸೆಯನ್ನು ನೀಡಿದ್ದರು. –
ಶ್ರೀಧರ್ ಕಾಮತ್, ಕಾರ್ಕಳ, ಉದ್ಯಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ
Ayodhya: ವ್ಯಾಟಿಕನ್, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ
Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?
Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ
Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.