ಹನುಮನಿಗೇ ಮೊದಲ ಪೂಜೆ ; ನಾಳೆ ‘ನಿಶಾನ್ ಆರಾಧನೆ’: ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಭಾಗಿ
Team Udayavani, Aug 3, 2020, 6:31 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಅಯೋಧ್ಯೆ: ರಾಮನಿಗೂ ಮೊದಲು ಆತನ ಭಂಟ ಹನುಮನಿಗೆ ಮೊದಲ ಪೂಜೆ ಸಲ್ಲಲಿದೆ. ಆ.4ಕ್ಕೆ ಅಯೋಧ್ಯೆಯ ಹನುಮಾನ್ ಗರಿಯಲ್ಲಿ ನಿಶಾನ್ ಪೂಜೆ ಸಲ್ಲಿಸಿದ ಬಳಿಕ ಮರುದಿನ ಭೂಮಿಪೂಜೆಯ ವಿಧಿವಿಧಾನಗಳಿಗೆ ಚಾಲನೆ ಸಿಗಲಿವೆ.
ಅಯೋಧ್ಯೆಯಲ್ಲಿ ರಾಮ ಲಲ್ಲಾನಿಗೆ ಪೂಜೆ ಸಲ್ಲಿಸುವ ಹನುಮನನ್ನು ಅರ್ಚಿಸುವುದು ವಾಡಿಕೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಹನುಮಾನ್‌ಗರಿಯಲ್ಲಿ ನಿಶಾನ್ ಪೂಜೆ ಆರಂಭಗೊಳ್ಳಲಿದೆ. ವಾಸ್ತವವಾಗಿ ಈ ಪೂಜೆ ಆ.3ರ ಸೋಮವಾರ ನಡೆಯಬೇಕಿತ್ತು.
ಸಿಎಂ ಯೋಗಿ ಆದಿತ್ಯನಾಥ್‌ರ ಕಾರ್ಯಕ್ರಮ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿರುವುದರಿಂದ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಶಾನ್ ಪೂಜೆಯನ್ನು ಒಂದು ದಿನ ಮುಂದೂಡಿದೆ.
ಕೋವಿಡ್ 19 ಸೋಂಕಿಗೆ ತುತ್ತಾಗಿದ್ದ ಉ.ಪ್ರ. ಸಚಿವೆ ಕಮಲರಾಣಿ ವರುಣ್ ನಿಧನ ಹೊಂದಿದ ಹಿನ್ನೆಲೆಯಲ್ಲಿ ಆ.3ರಂದು ಯೋಗಿ ಅವರ ಅಯೋಧ್ಯೆ ಭೇಟಿ ಸಾಧ್ಯವಾಗಿಲ್ಲ.
ಗಣ್ಯರ ಇಳಿಕೆ: ಕೋವಿಡ್ 19 ಸೋಂಕಿಗೆ ಆತಂಕದ ಹಿನ್ನೆಲೆಯಲ್ಲಿ 210 ಗಣ್ಯಾತಿಥಿಗಳ ಪಟ್ಟಿಯನ್ನು 170-180ಕ್ಕೆ ಇಳಿಸಲು ಚಿಂತನೆ ನಡೆಯುತ್ತಿದೆ. ಆ. 5ರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಜೀ ಭಾಗವತ್, ಭೈಯ್ಯಾಜಿ ಜೋಶಿ, ದತ್ತಾತ್ರೇಯ ಹೊಸಬಾಳೆ, ಲಕ್ನೋ ಕ್ಷೇತ್ರ ಪ್ರಚಾರಕ ಅನಿಲ್ ಕುಮಾರ್, ಶ್ರೀರಾಮ ಜನ್ಮಭೂಮಿ ನ್ಯಾಸ್‌ನ ಮಹಾಂತ ನೃತ್ಯ ಗೋಪಾಲದಾಸ್, ರವಿಶಂಕರ್ ಗುರೂಜಿ, ಮೊರಾರಿ ಬಾಪು ಮುಖ್ಯವಾಗಿ ಪಾಲ್ಗೊಳ್ಳಲಿದ್ದಾರೆ.
ಸುಮಾರು 50 ಸಂತರಿಗೆ ಆಹ್ವಾನ ತಲುಪಿದೆ. ಇವರಲ್ಲಿ ಮಹಾಂತ್ ಕಮಲನಯನ ದಾಸ್, ರಾಮ್ ವಿಲಾಸ್ ವೇದಾಂತಿ ಮತ್ತು ರಾಜು ದಾಸ್ ಚಿತ್ರಕೂಟದ ಮಹಾರಾಜ್ ಬಾಲಭದ್ರಾಚಾರ್ಯ, ಆಚಾರ್ಯ ನರೇಂದ್ರ ಗಿರಿ ಪ್ರಮುಖರಾಗಿದ್ದಾರೆ. ಪ್ರಯಾಗರಾಜ್ ಜಗದ್ಗುರು ಸ್ವಾಮಿ ವಾಸುದೇವಾನಂದ ಸರಸ್ವತಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಕೇರಳದ ಮಾತಾ ಅಮೃತಾನಂದಮಯಿ ಅವರನ್ನೂ ಆಹ್ವಾನಿಸಲಾಗಿದೆ.
ಕಮಲನಾಥ್ ಚಾಲೀಸ ಪಠಣ: ಆ.5ರ ಭೂಮಿಪೂಜೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಧುರೀಣ, ಮಧ್ಯಪ್ರದೇಶ ಮಾಜಿ ಸಿಎಂ ಕಮಲನಾಥ್ ತಮ್ಮ ಮನೆಯಲ್ಲಿ ಮಂಗಳವಾರ ಹನುಮಾನ್ ಚಾಲೀಸ ಪಠಣ ಏರ್ಪಡಿಸಿದ್ದಾರೆ. ಹನುಮಂತನ ಭಕ್ತರೂ ಆಗಿರುವ ಕಮಲನಾಥ್, ರಾಮಮಂದಿರ ನಿರ್ಮಾಣಕ್ಕೆ ಸಂಭ್ರಮ ಸೂಚಿಸಿದ ಕಾಂಗ್ರೆಸ್‌ನ ಬೆರಳೆಣಿಕೆಯ ಧುರೀಣರಲ್ಲಿ ಒಬ್ಬರು.
ಒವೈಸಿಗೆ ಆಹ್ವಾನ: ಭೂಮಿಪೂಜೆಯಲ್ಲಿ ಪಾಲ್ಗೊಳ್ಳುತ್ತಿರುವ ಪ್ರಧಾನಿ ಮೋದಿ ಅವರ ನಿಲುವನ್ನು ವಿರೋಧಿಸಿರುವ ಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ ವಿರುದ್ಧ ತೆಲಂಗಾಣ ಬಿಜೆಪಿ ಗುಡುಗಿದೆ.
‘ಸಂವಿಧಾನದ ಆಶಯದಂತೆ ಪ್ರಧಾನಿ ತಮ್ಮ ಧರ್ಮವನ್ನು ಅನುಸರಿಸುವ, ಆಚರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಈ ಬಗ್ಗೆ ಅಪಸ್ವರ ತೆಗೆಯುತ್ತಿರುವ ಒವೈಸಿ ಅವರನ್ನು ವಿಶೇಷವಾಗಿ ಭೂಮಿಪೂಜೆಗೆ ಆಹ್ವಾನಿಸುತ್ತಿದ್ದೇನೆ. ಈ ಮೂಲಕ ಅವರು ತಮ್ಮ ವೈಯಕ್ತಿಕ ಸಹಿಷ್ಣುತೆಯನ್ನು ಪ್ರಕಟಿಸಬಹುದು’ ಎಂದು ಪಕ್ಷದ ನಾಯಕ ಕೃಷ್ಣ ಸಾಗರ ರಾವ್ ಸವಾಲು ಹಾಕಿದ್ದಾರೆ.
ವೀಡಿಯೋ ಕಾನ್ಫರೆನ್ಸ್: ಆಡ್ವಾಣಿ, ಜೋಶಿ ಭಾಗಿ
ಹೋರಾಟದ ಮೂಲಕ ದೇಶವನ್ನು ಸಂಘಟಿಸಿದ್ದ ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ್ ಜೋಶಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಭೂಮಿಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಬ್ಬರಿಗೂ ಟ್ರಸ್ಟ್ ದೂರವಾಣಿ ಮೂಲಕ ಆಹ್ವಾನ ತಲುಪಿಸಿದೆ.
ರಾಮನ ವಿಚಾರ ಜಾತ್ಯತೀತತೆಯ ಮೂಲ
ರಾಮನ ವಿಚಾರಗಳು ಜಾತ್ಯತೀತತೆಯ ಮೂಲವಾಗಿವೆ. ಭಾರತೀಯರ ಮೇಲೆ ಅವುಗಳ ಪ್ರಭಾವ ಕನಿಷ್ಠ ಎರಡೂವರೆ ಸಾವಿರ ವರ್ಷಗಳಷ್ಟು ಬೇರೂರಿದೆ. ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸುವುದರಿಂದ ರಾಮನ ವಿಚಾರದ ಮೌಲ್ಯಗಳು ಹೆಚ್ಚಲಿವೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಪ್ರತಿಪಾದಿಸಿದ್ದಾರೆ. ಮಹಾತ್ಮಾಗಾಂಧಿ ಕೂಡ ಸುಸಂಘಟಿತ ರಾಜ್ಯವನ್ನು ವಾಖ್ಯಾನಿಸಲು ‘ರಾಮ ರಾಜ್ಯ’ವನ್ನು ರೂಪಕವಾಗಿ ಬಳಸಿದ್ದರು. ರಾಮಾಯಣದಲ್ಲಿ ವ್ಯಕ್ತವಾದ ಕರುಣೆ, ಅನುಕಂಪ, ಶಾಂತಿಯುತ ಸಹಬಾಳ್ವೆ ಅಂಶಗಳು ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿಯಾಗಿವೆ ಎಂದು ಫೇಸ್‌ಬುಕ್‌ನಲ್ಲಿ ಬರೆದ ಲೇಖನದಲ್ಲಿ ವಿವರಿಸಿದ್ದಾರೆ.
ರಾಮನ ಜೀವನವು ಸಾಮಾಜಿಕ ಸಾಮರಸ್ಯ, ಸಹಬಾಳ್ವೆಯ ಮೌಲ್ಯಗಳನ್ನು ಒಳಗೊಂಡಿದೆ. ರಾಮಮಂದಿರ ನಿರ್ಮಾಣ ಆ ಮೌಲ್ಯಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ.
– ಕಾಮೇಶ್ವರ ಚೌಪಾಲ್, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.