Ram Lalla ರೂಪ ಕಲ್ಪಿಸಿಕೊಳ್ಳಲು ಮೈಸೂರಿನ ನರ್ಸರಿ ಶಾಲೆ, ಚಿಣ್ಣರ ಮೇಳಕ್ಕೆ ಹೋಗಿ ಅಧ್ಯಯನ
ಅರುಣ್ ಯೋಗಿರಾಜ್ ಅವರ ಮನದಾಳದ ಮಾತು ಇಲ್ಲಿದೆ...
Team Udayavani, Jan 16, 2024, 6:20 AM IST
ಕಡೆಗೂ ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳುವ ಬಾಲರಾಮ ಕರುನಾಡಿನ ಕೊಡುಗೆ ಎನ್ನುವುದು ಖಚಿತವಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ವಿಗ್ರಹವೇ ಅಂತಿಮವಾಗಿ ಆಯ್ಕೆಯಾಗಿದೆ. ಇಬ್ಬರು ಕನ್ನಡಿಗ ಶಿಲ್ಪಿಗಳು ಸೇರಿದಂತೆ ಮೂವರು ಶಿಲ್ಪಿಗಳು ರಾಮಲಲ್ಲಾನ ವಿಗ್ರಹ ಕೆತ್ತಿದ್ದರು. ಇದರಲ್ಲಿ ಅರುಣ್ ಕೆತ್ತಿರುವ ಮೂರ್ತಿ ಆಯ್ಕೆಯಾಗುವುದರೊದಿಗೆ ಹನುಮನುದಿಸಿದ ನಾಡಿನ ಕೀರ್ತಿ ಅಜರಾಮರಗೊಂಡಿದೆ. ಈ ಹಿನ್ನೆಲೆಯಲ್ಲಿ ತಮ್ಮ ಶಿಲ್ಪ ಕೆತ್ತನೆ ಪಯಣ, ರಾಮನ ವಿಗ್ರಹಕ್ಕೆ ಬೇಕಾದ ಕಲ್ಲಿನ ಆಯ್ಕೆ, ವಿಗ್ರಹದ ವಿನ್ಯಾಸ, ರಾಮನ ರೂಪ, ಗಾತ್ರ, ಕೆತ್ತಲು ತಗಲಿದ ಸಮಯ… ಇತ್ಯಾದಿಗಳ ಬಗ್ಗೆ ಅರುಣ್ ಯೋಗಿರಾಜ್ ಅವರ ಮನದಾಳದ ಮಾತು ಇಲ್ಲಿದೆ.
ಎಂಬಿಎ ಪದವೀಧರರಾಗಿದ್ದ ನೀವು ಶಿಲ್ಪ ಕೆತ್ತನೆಗೆ ಏಕೆ ವಾಪಸ್ ಬಂದಿರಿ?
ನನ್ನ ತಂದೆ ಶಿಲ್ಪ ಕಲಾವಿದರು. ಅವರು ತುಂಬಾ ಶ್ರಮ ಹಾಕಿ ಕೆಲಸ ಮಾಡುತ್ತಿದ್ದರು. ಅದನ್ನು ನೋಡಿ ಸುಮ್ಮನಿರಲು ಆಗುತ್ತಿರ ಲಿಲ್ಲ. ನಾನು 11ರ ವಯಸ್ಸಿನಲ್ಲೇ ಅವರಿಗೆ ಸಹಾಯ ಮಾಡು ತ್ತಿದ್ದೆ. ಹೀಗಾಗಿ, ನನಗೂ ಶಿಲ್ಪಕಲೆ ರಚನೆಯಲ್ಲಿ ಆಸಕ್ತಿ ಮೂಡಿತು. ಹೀಗಾಗಿ, ನನ್ನನ್ನು ಡ್ರಾಯಿಂಗ್ ಕ್ಲಾಸ್‌ಗೆ ಸೇರಿಸಿದ್ದರು. ನನ್ನ ಶಾಲಾ- ಕಾಲೇಜು ಶಿಕ್ಷಣದಲ್ಲೂ ಉತ್ತಮ ಫಲಿತಾಂಶ ಪಡೆದಿದ್ದೆ. ತರಗತಿ ಮುಗಿಸಿದ ಬಳಿಕ ಶಿಲ್ಪ ಕೆತ್ತನೆ ಕೆಲಸ ಮಾಡುತ್ತಿದ್ದೆ. ಎಂಬಿಎ ಮುಗಿಸಿ ಕೆಲಸಕ್ಕೆ ಸೇರುವವರೆಗೂ ಅವರ ಜತೆಗೇ ಕೆಲಸ ಮಾಡುತ್ತಿದ್ದೆ. ಉದ್ಯೋಗಕ್ಕೆ ಹೋದಾಗಲೇ ನಾನು ತಂದೆಯವರಿಂದ ಬೇರ್ಪಟ್ಟಿದ್ದು. ಆಗ ನನಗೆ ಅನಿಸಿತು. ನನ್ನ ಜೀವನದಲ್ಲಿ ಇದಲ್ಲ ಮಾಡಬೇಕಾದದ್ದು, ನನಗೆ ಶಿಲ್ಪಕೆತ್ತನೆಯೇ ಮುಖ್ಯ ಅನಿಸತೊಡಗಿತು. ವಾಪಸ್ ಬಂದು ಈ ಕೆಲಸವನ್ನೇ ಮಾಡುತ್ತೇನೆ ಎಂದು ನಮ್ಮ ತಂದೆಯವರನ್ನು ಕೋರಿಕೊಂಡೆ. ಇದು ಬ್ಯುಸಿನೆಸ್ ಅಲ್ಲಪ್ಪ, ಬೇರೆ ಕಡೆಯಿಂದ ತಂದು ಮಾರು ವಂಥ ದ್ದಲ್ಲ. ಸ್ವತಃ ನೀನೇ ಶ್ರಮವಹಿಸಿ ಸೃಷ್ಟಿ ಮಾಡು ವಂಥದ್ದು ಎಂದು ನಿಬಂಧನೆ ಹಾಕಿ, ಬಳಿಕ ನನಗೆ ಶಿಲ್ಪ ಕೆತ್ತನೆ ಮುಂದುವರಿಸಲು ಒಪ್ಪಿಗೆ ನೀಡಿದರು.
ಮೈಸೂರಿನಿಂದ ಅಯೋಧ್ಯೆವರೆಗೆ ನಿಮ್ಮ ಪಯಣದ ಬಗ್ಗೆ ಏನನ್ನಿಸುತ್ತದೆ?
ಮೈಸೂರಿನ ಹಾರ್ಡಿಂಜ್ ವೃತ್ತದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ, ರಾಮಕೃಷ್ಣನಗರ ವೃತ್ತದಲ್ಲಿ ದೇಶದಲ್ಲೇ ಅತೀ ದೊಡ್ಡದಾದ ಪರಮಹಂಸರ ಪ್ರತಿಮೆ ನಿರ್ಮಿಸಿದೆ. ಟೌನ್‌ಹಾಲ್ ಮುಂದೆ ಡಾ| ಬಿ.ಆರ್. ಅಂಬೇಡ್ಕರ್ ಅವರ 15 ಅಡಿಯ ಮಾರ್ಬಲ್ ಪ್ರತಿಮೆ ಕೆತ್ತಿದ್ದೇನೆ. ಮೈಸೂರು ಮಹಾ ರಾಜರ ಅನಂತರ ನಿರ್ಮಾಣವಾದ ಮೂರು ದೊಡ್ಡ ವೃತ್ತ ಗಳಲ್ಲೂ ನನ್ನದೇ ನಿರ್ಮಾ ಣದ ಪ್ರತಿಮೆಗಳನ್ನು ಕೆತ್ತಿದ್ದೇನೆ ಎಂಬ ಹೆಮ್ಮೆ ಇದೆ. ನನ್ನ ಈ ಪ್ಯಾಶನ್ ನನ್ನೂರು ಮೈಸೂರಿನಿಂದ ಶುರು ವಾಗಿ ಈಗ ದೇಶದೆತ್ತರಕ್ಕೆ ಕರೆದೊಯ್ದಿದೆ. ಅವಕಾಶ ನೀಡಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ.
ಇಡೀ ದೇಶವೇ ಕಾತರದಿಂದ ಕಾಯುತ್ತಿರುವಅಯೋಧ್ಯೆ ಯ ರಾಮಮಂದಿರದ ಗರ್ಭಗುಡಿಯ ರಾಮಲಲ್ಲಾ ವಿಗ್ರಹ ತಯಾರಿಕೆಯ ಸದವಕಾಶ ನಿಮಗೆ ದೊರಕಿತ್ತು. ಇದರ ಬಗ್ಗೆ ಹೇಗನಿಸುತ್ತಿದೆ?
ರಾಮನ ವಿಗ್ರಹ ಮಾಡಲು ಅವಕಾಶ ಸಿಕ್ಕಿದ್ದು, ಪೂರ್ವ ಜನ್ಮದ ಪುಣ್ಯ ಎಂದು ಭಾವಿಸುತ್ತೇನೆ. ಸಾವಿರಾರು ಕಲಾವಿದರು ವಿಗ್ರಹಗಳ ಕೆತ್ತನೆ ಮಾಡಿದ್ದಾರೆ. ಅದರಲ್ಲಿ ಮೂಲ ವಿಗ್ರಹ ಕೆತ್ತನೆ ಮಾಡಬೇಕು ಎಂಬ ವಿಷಯ ಬಂದಾಗ, ಅದರಲ್ಲಿ ಮೂವರ ಪೈಕಿ ಕರ್ನಾಟಕದಿಂದಲೇ ಇಬ್ಬರು ಆಯ್ಕೆ ಆಗಿದ್ದೆವು. ಅದರಲ್ಲಿ ನಾನೂ ಒಬ್ಬ ಎಂಬುದು ಬಹಳ ಸಂತೋಷದ ವಿಷಯ. ನನ್ನ ಕುಟುಂಬ 5 ತಲೆಮಾರುಗಳಿಂದ ಶಿಲ್ಪಕಲಾ ಸೇವೆ ಮಾಡುತ್ತಾ ಬಂದಿದೆ. ಅದರ ಫಲವಾಗಿ ನನಗೆ ಈ ಮಹತ್ತರ ಕೆಲಸ ಸಿಕ್ಕಿತು ಎಂದೇ ಭಾವಿಸುತ್ತೇನೆ. ನನ್ನ ಜೀವನದಲ್ಲೇ ಇದೊಂದು ದೊಡ್ಡ ಅವಕಾಶ. ನನಗೆ ಇನ್ನೂ ಇದನ್ನು ನಂಬಲು ಆಗುತ್ತಿಲ್ಲ.
ಈ ಮೂರು ಜನರಲ್ಲಿ ಒಬ್ಬರಾಗಿ ಹೇಗೆ ನೀವು ಆಯ್ಕೆಯಾದಿರಿ?
ಮೊದಲು ನನಗೆ ಕೇದಾರನಾಥದಲ್ಲಿ ಶಂಕರಾಚಾರ್ಯ ವಿಗ್ರಹ ಕೆತ್ತನೆಯ ಅವಕಾಶ ಸಿಕ್ಕಿತು. ಅದರಲ್ಲೂ ಬಹಳ ಸ್ಪರ್ಧೆ ಇತ್ತು, ಅದರಲ್ಲಿ ಆಯ್ಕೆ ಆದೆ… ನನ್ನ ಜೀವನದಲ್ಲಿ ಇದಕ್ಕಿಂತ ದೊಡ್ಡ ಕೆಲಸ ಸಿಕ್ಕಲ್ಲ, ಎಷ್ಟೊಂದು ದೊಡ್ಡ ಅವಕಾಶ ಸಿಕ್ಕಿತು ಎಂದು ಕೊಳ್ಳುತ್ತಿದ್ದೆ. ಅದು ಮುಗಿಯುತ್ತಿದ್ದಂತೆ, ಇಂಡಿಯಾ ಗೇಟ್‌ನಲ್ಲಿ ಸುಭಾಷ್ ಚಂದ್ರ ಬೋಸರ 30 ಅಡಿಯ ಗ್ರಾನೈಟ್ ಪ್ರತಿಮೆ ಮಾಡಲು ಅವಕಾಶ ಸಿಕ್ಕಿತು. ಇದಾಗುತ್ತಿದ್ದಂತೆ, ರಾಮ ಮಂದಿರದ ಮುಖ್ಯ ವಿಗ್ರಹ ಕೆತ್ತಲು ಆಯ್ಕೆ ಸಮಿತಿಯವರು ಕಲಾವಿದರಿಗಾಗಿ ಹುಡುಕಾಟ ನಡೆಸಿದರು. ಆಗ ಕೇಂದ್ರ ಸರಕಾ ರದ ಇಂದಿರಾಗಾಂಧಿ ನ್ಯಾಶನಲ್ ಸೆಂಟರ್ ಫಾರ್ ದಿ ಆರ್ಟ್ಸ್ (ಐಜಿಎನ್‌ಸಿಎ) ಅಧ್ಯಕ್ಷರು ನನ್ನ ಹೆಸರನ್ನು ಶಿಫಾರಸು ಮಾಡಿ ದರು. ಶಂಕರಾಚಾರ್ಯ, ಬೋಸ್ ಪ್ರತಿಮೆ ಮಾಡಿದ್ದು ನಾನು ಎಂದು ವಿವರಿಸಿ ನನ್ನ ಹೆಸರನ್ನು ಶಿಫಾರಸು ಮಾಡಿದರು. ಬಳಿಕ ಆಯ್ಕೆಗಾಗಿ ಪ್ರಾತ್ಯಕ್ಷಿಕೆ ಸಭೆ ನಡೆಯಿತು. ನಾನು ಹಿಂದೆ ಏನೇನು ಕೆಲಸ ಮಾಡಿದ್ದೆ, ನಾನು ತಯಾರಿಸಿರುವ ಶಿಲ್ಪಗಳು, ನನ್ನ ಶಿಲ್ಪಕಲಾ ಜ್ಞಾನದ ಬಗ್ಗೆ ಪಿಪಿಟಿ ಪ್ರದರ್ಶನ ನೀಡಿದೆ. ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಟ್ರಸ್ಟ್ ಸದಸ್ಯರು, ಐಜಿಎನ್‌ಸಿಎಯ ತಜ್ಞ ಕಲಾವಿದರನ್ನು ಒಳಗೊಂಡ ಸಮಿತಿ ಆರೇಳು ಜನ ಕಲಾವಿದರನ್ನು ಸಂದರ್ಶಿಸಿ ಮೂವರನ್ನು ವಿಗ್ರಹ ಕೆತ್ತನೆಗೆ ಆರಿಸಿತು. ಅದರಲ್ಲಿ ನಾನೂ ಒಬ್ಬನಾಗಿ ಆಯ್ಕೆಯಾದೆ.
ಮೂರ್ತಿ ಕೆತ್ತನೆಗೆ ಕಲ್ಲಿನ ಆಯ್ಕೆ ಹೇಗೆ? ನೀವು ಇದನ್ನು ಕೆತ್ತಲು ಎಷ್ಟು ದಿನ ಆಯಿತು?
ಇದು ಬಹು ದೊಡ್ಡ ಪ್ರಕ್ರಿಯೆ. ಭಾರತದೆಲ್ಲೆಡೆಯಿಂದ ಹಲವು ಕಲ್ಲುಗಳು ಬಂದಿದ್ದವು. ನೇಪಾಲದಿಂದ ಸಾಲಿಗ್ರಾಮ ಶಿಲೆ ಬಂದಿತ್ತು. ಕಾರ್ಕಳದಿಂದ ಕೃಷ್ಣಶಿಲೆ ಬಂದಿತ್ತು. ಪ್ರತಿಯೊಂದು ಕಲ್ಲಿಗೂ ಪರೀಕ್ಷೆ ಪ್ರಕ್ರಿಯೆ ನಡೆಯಬೇಕಿತ್ತು. ಭಾರತ ಸರಕಾರದ ಗಣಿ ಇಲಾಖೆಯ ಅಧೀನಕ್ಕೊಳಪಟ್ಟ, ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕಾನಿಕ್ಸ್‌ನ (ಎನ್‌ಐಆರ್‌ಎಂ) ಪ್ರಧಾನ ತಜ್ಞ ವಿಜ್ಞಾನಿಗಳು, ಪ್ರತಿಯೊಂದು ಕಲ್ಲುಗಳನ್ನು ಪರೀ ಕ್ಷಿಸಿದರು. ಸಂಕೋಚನ ಪರೀಕ್ಷೆ, ಛಿದ್ರತೆಯ ಪರೀಕ್ಷೆ, ಬಾಗುವಿಕೆ ಪರೀಕ್ಷೆ ಇತ್ಯಾದಿಗಳನ್ನು ಮಾಡಿ ಇದ್ಯಾವುದಕ್ಕೂ ಜಗ್ಗದ ಕಲ್ಲುಗಳನ್ನು ಕೆತ್ತನೆ ಮಾಡಬಹುದು ಎಂದು ನಮಗೆ ತಿಳಿಸಿದರು. ನೇಪಾಲದಿಂದ ಬಂದ ಸಾಲಿಗ್ರಾಮ ಕಲ್ಲಿನ ಮಧ್ಯೆ ಬಣ್ಣಗಳ ಬದ ಲಾವಣೆ ಇದ್ದ ಕಾರಣ, ಇದು ಕೆತ್ತನೆಗೆ ಯೋಗ್ಯವಲ್ಲ, ಅದನ್ನು ಶಿಲ್ಪಿಗಳಾದ ನಾವೇ ಬೇಡ ಎಂದು ಹೇಳಿದೆವು. ಇಬ್ಬರೂ ಕರ್ನಾ ಟಕದ ಶಿಲ್ಪಿಗಳು ಕರ್ನಾಟಕದ ಎಚ್.ಡಿ.ಕೋಟೆಯಲ್ಲಿ ಸಿಗುವ ಕೃಷ್ಣಶಿಲೆಯನ್ನು ಆರಿಸಿದೆವು. ಇದು ಎಲ್ಲ ಪರೀಕ್ಷೆಗಳಲ್ಲೂ ಸಫಲ ವಾದ್ದರಿಂದ ಈ ಕಲ್ಲನ್ನು ಅಂತಿಮಗೊಳಿಸಲಾಯಿತು. ಇದಾದ ಅನಂತರ ಗುದ್ದಲಿ ಪೂಜೆ ಮಾಡಿ, ಕಲ್ಲಿಗೆ ಪೂಜೆ ಮಾಡುತ್ತಾರೆ. ನಮಗೆ ಕಂಕಣ ಕಟ್ಟಿ, ಈ ಕೆಲಸ ಪೂರ್ತಿಯಾಗುವವರೆಗೆ ಅದನ್ನು ನಾವು ಕಟ್ಟಿಕೊಂಡೇ ಇರಬೇಕು. ದಿನನಿತ್ಯ ಆ ಕಲ್ಲಿಗೆ ರಾಮನ ಸ್ತೋತ್ರದ ಜತೆ ಪೂಜೆ ಮಾಡಲಾಗುತ್ತಿತ್ತು.
ರಾಮಲಲ್ಲಾ ವಿಗ್ರಹ ತಯಾರಿಕೆ ಸವಾಲು ಅನಿಸಿತಾ?
ನಮಗೆ ದೊಡ್ಡ ಸವಾಲು ಏನೆಂದರೆ, ನಾವ್ಯಾರೂ ರಾಮಲಲ್ಲಾನನ್ನು ಮುಂಚೆ ನೋಡಿರಲಿಲ್ಲ. ಕೃಷ್ಣನ ರೂಪ ಸಿಗುತ್ತದೆ. ರಾಮನ ಬಾಲ ರೂಪ ಎಲ್ಲೂ ಸಿಗುವುದಿಲ್ಲ. ಬಹಳ ಕಷ್ಟವಾಯಿತು, ರಾಮನನ್ನು ಕಲ್ಲೊಳಗೆ ಅರಳಿಸಲು. 1200 ಫೋಟೋ ಡೌನ್‌ಲೋಡ್ ಮಾಡಿಕೊಂಡಿದ್ದೆ. ದೇಶದಲ್ಲಿ ನಾವೆಲ್ಲರೂ ಹಲವಾರು ವರ್ಷ ಗಳಿಂದಲೂ ರಾಮನ ಮೂರ್ತಿ, ರಾಮನ ರೂಪ ನೋಡ ಬೇಕೆಂದು ಕಾಯುತ್ತಿದ್ದೇವೆ. ಅದನ್ನು ತೋರಿಸುವ ದೊಡ್ಡ ಜವಾ ಬ್ದಾರಿ ನಮ್ಮೆಲ್ಲ ಶಿಲ್ಪಿಗಳ ಮೇಲೂ ಇತ್ತು. ನಾನು ಎಲ್ಲ ಭಾರವನ್ನೂ ಶ್ರೀರಾಮನ ಮೇಲೆ ಹಾಕಿದೆ. ರಾಮ ನೀನೇ ನಿನ್ನ ವಿಗ್ರಹ ಮಾಡಿಸಿಕೋ. ನನಗೆ ಬುದ್ಧಿ ನೀಡು ಎಂದು ಆ ಸಮಯದಲ್ಲಿ ನನ್ನ ಒತ್ತಡ ನಿವಾರಿಸಿಕೊಳ್ಳುತ್ತಿದ್ದೆ.
ವಿಗ್ರಹ ಎಷ್ಟು ಎತ್ತರ ಇದೆ?
ಪಾದದಿಂದ ಹಣೆಯ ತನಕ 51 ಇಂಚು ಇರಬೇಕು ಎಂದು ಹೇಳ ಲಾಗಿತ್ತು. ಕಾರಣ ರಾಮನವಮಿಯ ದಿವಸ ಸೂರ್ಯ ನ ಕಿರಣ ರಾಮನ ವಿಗ್ರಹದ ಹಣೆಯ ಮೇಲೆ ಬೀಳು ತ್ತದೆ. ಇದನ್ನು ವಿಜ್ಞಾನಿಗಳಿಂದ, ತಜ್ಞರಿಂದ ಮಾಹಿತಿ ಪಡೆದು, ನಮಗೆ ಅಳತೆ ತಿಳಿಸಿದ್ದರು. ಎಲ್ಲ ಮೂವರೂ ಶಿಲ್ಪಿಗಳೂ ಪಾದದಿಂದ ಹಣೆಯ ತನಕ ಬಾಲಕನ ರೂಪದಲ್ಲಿ ವಿಗ್ರಹ ನಿರ್ಮಾಣ ಮಾಡಬೇಕೆಂದು ಸೂಚನೆ ನೀಡಿದ್ದರು. ನಿಮ್ಮ ಅನುಭವವನ್ನೂ ಬಳಸಿಕೊಂಡು ವಿಗ್ರಹ ನಿರ್ಮಿಸಿ ಎಂಬ ಸ್ವಾತಂತ್ರ್ಯ ಸಹ ಕೊಟ್ಟಿದ್ದರು.
ಬಾಲರಾಮನ ರೂಪದ ಪರಿಕಲ್ಪನೆ ಹೇಗೆ ಬಂತು?
ಬಾಲರಾಮ 5 ವರ್ಷ ಎಂಬ ಸೂಚನೆಯನ್ನು ಅನುಸರಿಸಿ ನಾವು ಕೆತ್ತನೆ ಕೆಲಸ ಆರಂಭಿಸಿದೆವು. 5-6 ವರ್ಷದ ಮಕ್ಕಳ ದೇಹರಚನೆಯನ್ನು ಸೂಕ್ಷ್ಮವಾಗಿ ಗಮನಿಸುವ ಸಲುವಾಗಿ ನಾನು ಮೈಸೂರಿನ ಬೇರೆ ಬೇರೆ ನರ್ಸರಿ ಶಾಲೆಗಳಿಗೆ ಹೋಗಿ ನೋಡುತ್ತಿದ್ದೆ. ಕಲಾಮಂದಿರದಲ್ಲಿ ಚಿಣ್ಣರ ಮೇಳ ನಡೆಯುತ್ತಿತ್ತು. ಅಲ್ಲಿ ಹೋಗಿ ಕುಳಿತು ಮಕ್ಕಳನ್ನು ಗಮನಿಸುತ್ತಿದ್ದೆ. ಯಾರಿಗೂ ವಿಷಯ ಹೇಳಿರಲಿಲ್ಲ. ಇದರ ಜತೆಗೆ ನನಗಿದ್ದ ದೊಡ್ಡ ಸವಾಲು ಏನೆಂದರೆ, ವಿಗ್ರಹ ಮಗುವಿನ ರೀತಿ ಕಾಣಬೇಕು. ಆದರೆ ಅದು ಮಗುವಲ್ಲ. ರಾಮನ ರೀತಿ ಕಾಣಬೇಕು. ಮುಗ್ಧತೆಯೂ ಇರಬೇಕು. ರಾಮನ ಗಾಂಭೀರ್ಯವೂ ಇರಬೇಕು. ಇದೆಲ್ಲ ವನ್ನೂ ಪರಿಗಣಿಸಿ, ಬಿಲ್ಲು-ಬಾಣ ಹಿಡಿದು ನಿಂತ ಭಂಗಿಯಲ್ಲಿ ವಿಗ್ರಹ ತಯಾರು ಮಾಡಿ ಕೊಟ್ಟಿದ್ದೇನೆ.
ಮೂವರು ಶಿಲ್ಪಿಗಳು ಕೆತ್ತಿದ ವಿಗ್ರಹಗಳ ಪೈಕಿ ಇನ್ನೆರಡನ್ನು ಏನು ಮಾಡುತ್ತಾರೆ?
ಆಯ್ಕೆಯಾದ ಒಂದು ವಿಗ್ರಹ ಗರ್ಭಗುಡಿಯಲ್ಲಿ ಪ್ರತಿ ಷ್ಠಾಪನೆಯಾಗುತ್ತದೆ. ಉಳಿದ ಎರಡನ್ನು ದೇವಾಲಯದ ಮತ್ತೆರಡು ಕಡೆ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಟಸ್ಟ್ ನವರು ತಿಳಿಸಿದ್ದಾರೆ.
ವಿಗ್ರಹ ರಚನೆಗೆ ಎಷ್ಟು ದಿನ ಹಿಡಿಯಿತು?
ಈ ವಿಗ್ರಹ ಕೆತ್ತನೆಗೆ ಆರೇಳು ತಿಂಗಳು ಬೇಕಾಯಿತು. ದಕ್ಷಿಣ-ಉತ್ತರ ಭಾರತ, ಬೇರೆ ಬೇರೆ ರಾಜ್ಯಗಳ ಶೈಲಿ ಎಲ್ಲವನ್ನೂ ಸೇರಿಸಿ ಕೆತ್ತನೆ ಮಾಡಲಾಗಿದೆ. ಇದು ನಮ್ಮ ದೇಶದ ಶೈಲಿ ಎಂದು ಗೊತ್ತಾಗುವ ರೀತಿ ಕೆತ್ತನೆ ಮಾಡಿದ್ದೇವೆ. ಮೂರೂ ಜನ ಹೇಗೆ ಕೆತ್ತನೆ ಮಾಡಿದ್ದೇವೆ ಎಂದು ಪರಸ್ಪರ ನೋಡಿಲ್ಲ. ಮೂರೂ ಜನರಿಗೆ ಬೇರೆ ಬೇರೆ ಸ್ಟುಡಿಯೋ ನೀಡಿದ್ದರು. ಟ್ರಸ್ಟ್‌ನವರು ನಿಬಂಧನೆ ವಿಧಿಸಿರಲಿಲ್ಲ. ಕಲಾವಿದರಾದ ನಾವೇ ಹಾಗೆ ಷರತ್ತು ಹಾಕಿಕೊಂಡಿದ್ದೆವು. ಪ್ರತಿಯೊಬ್ಬರ ಕೆತ್ತನೆಯೂ ವಿಶೇಷವಾಗಿರಲಿ, ದೇಶಕ್ಕೆ ಅತೀ ಶ್ರೇಷ್ಠವಾದುದು ಸಿಗಲಿ ಎಂಬ ಉದ್ದೇಶ ಹೊಂದಿದ್ದೆವು. ಆರೇಳು ತಿಂಗಳೂ ನಾವು ಒಟ್ಟಿಗೆ ಸ್ನೇಹಿತ ರಂತೆ ಇದ್ದೆವು. ಆದರೆ ನಾವು ಆ ಕೆಲಸದ ಬಗ್ಗೆ ಮಾತಾ ಡಲಿಲ್ಲ. ಒಬ್ಬರು ಇನ್ನೊಬ್ಬರ ವಿಗ್ರಹ ನೋಡಿಲ್ಲ. ಫೋಟೋ ಸಹ ನೋಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ
Ayodhya: ವ್ಯಾಟಿಕನ್, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ
Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?
Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ
Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.