ಮುಂದಿನ ತಿಂಗಳು ಚಿತ್ರರಂಗಕ್ಕೆ ಎರಡು ದಿನ ರಜೆ
Team Udayavani, Jan 3, 2018, 11:06 AM IST
ಕನ್ನಡ ಚಿತ್ರರಂಗಕ್ಕೆ ಮುಂದಿನ ತಿಂಗಳು ಎರಡು ರಜೆ ಸಿಗಲಿವೆ. ಆ ಎರಡೂ ದಿನಗಳಂದು ಚಿತ್ರರಂಗ ಬಂದ್ ಆಗಲಿವೆ. ಹಾಗಂತ ಖುದ್ದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಅವರು ಘೋಷಿಸಿದ್ದಾರೆ. ಗೋವಿಂದು ಅವರು ಘೋಷಿಸಿದ್ದಾರೆ ಎಂದಮೇಲೆ, ಎಲ್ಲಾದರೂ ಚಿತ್ರರಂಗದವರೆಲ್ಲರೂ ಮಹದಾಯಿ ಹೋರಾಟಕ್ಕೆ ಉತ್ತರ ಕರ್ನಾಟಕಕ್ಕೆ ಹೊರಟರಾ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು.
ಇಲ್ಲ, ಈ ಬಾರಿ ಕನ್ನಡ ಚಿತ್ರರಂಗಕ್ಕೆ ಎರಡು ದಿನಗಳ ಕಾಲ ರಜೆ ಸಿಕ್ಕಿರುವುದು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ. ಫೆಬ್ರವರಿ 22ರಿಂದ ಮಾರ್ಚ್ ಒಂದರವರೆಗೂ ಬೆಂಗಳೂರಿನಲ್ಲಿ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈ ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಮತ್ತು ಸಮಾರೋಪ ಸಮಾರಂಭಗಳಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೆ ಎರಡು ದಿನಗಳ ರಜೆ ಘೋಷಿಸಲಾಗಿದೆ.
ಮೊದಲಿಗೆ ಎರಡೂ ದಿನಗಳಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಚಿತ್ರೀಕರಣ ನಡೆಸಿ, ಮಧ್ಯಾಹ್ನದ ನಂತರ ಚಿತ್ರರಂಗಕ್ಕೆ ಬಿಡುವು ನೀಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ, ಚಿತ್ರೀಕರಣವನ್ನು ಅರ್ಧ ದಿನಕ್ಕೆ ಸೀಮಿತಗೊಳಿಸುವುದು ಕಷ್ಟವಾಗಬಹುದು ಎಂಬ ನಿಟ್ಟಿನಲ್ಲಿ ಫೆಬ್ರವರಿ 22 ಮತ್ತು ಮಾರ್ಚ್ 1ರಂದು ಚಿತ್ರರಂಗಕ್ಕೆ ರಜೆ ನೀಡಲಾಗಿದೆ.
ಮಂಗಳವಾರ ಮಧ್ಯಾಹ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವವು ಇಡೀ ಭಾರತದಲ್ಲೇ ಒಂದು ಅತ್ಯುತ್ತಮ ಚಿತ್ರೋತ್ಸವವಾಗಿದೆ.
ಇತ್ತೀಚೆಗೆ ದಕ್ಷಿಣ ಭಾರತ ಚಲನಚಿತ್ರ ಮಂಡಳಿಯವರು ಸಹ ಪತ್ರ ಬರೆದು, ಚಿತ್ರೋತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಚಿತ್ರೋತ್ಸವಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡುತ್ತಾ ಬಂದಿರುವ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಚಿತ್ರೋತ್ಸವವನ್ನು ಇನ್ನಷ್ಟು ಚೆನ್ನಾಗಿ ಮತ್ತು ಇನ್ನಷ್ಟು ಜನರಿಗೆ ಮುಟ್ಟುವ ಪ್ರಯತ್ನವನ್ನು ಮಾಡಬೇಕಿದೆ.
ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದವರು ಈ ಚಿತ್ರೋತ್ಸವದಲ್ಲಿ ದೊಡ್ಡ ಮಟ್ಟದಲ್ಲಿ ಪಾಲ್ಗೊಳ್ಳಬೇಕಿದ್ದು, ಅದೇ ಕಾರಣಕ್ಕೆ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳಲ್ಲಿ ಭಾಗವಹಿಸುವುದಕ್ಕಾಗಿ ಎರಡು ದಿನಗಳ ಕಾಲ ರಜೆ ನೀಡಲಾಗಿದೆ’ ಎಂದು ಸಾ.ರಾ. ಗೋವಿಂದು ಹೇಳಿದ್ದಾರೆ. ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಸಲುವಾಗಿ ಈಗಾಗಲೇ 800ಕ್ಕೂ ಹೆಚ್ಚು ಚಿತ್ರಗಳು ಬಂದಿವೆ
ಎಂದು ಮಾಹಿತಿ ನೀಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, “ಜಗತ್ತಿನಾದ್ಯಂತ 800ಕ್ಕೂ ಹೆಚ್ಚು ಚಿತ್ರಗಳು ಬಂದಿವೆ. ಅದರಲ್ಲೂ 53 ಅತ್ಯುತ್ತಮ ಫಾರಿನ್ ಚಿತ್ರಗಳು ಸಿಕ್ಕಿವೆ. ಎಂದಿನಂತೆ ಈ ವರ್ಷ ಸಹ ಒರಾಯನ್ ಮಾಲ್‌ನ ಪಿವಿಆರ್ ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದಲ್ಲದೆ ಮಂತ್ರಿ ಮಾಲ್‌ನಲ್ಲಿ ಸಹ ಮೂರು ಚಿತ್ರಮಂದಿರಗಳನ್ನು ಕೇಳುವ ಯೋಚನೆ ಇದೆ.
ಇನ್ನು ಕಳೆದ ಕೆಲವು ವರ್ಷಗಳಲ್ಲಿ ಮೈಸೂರಿನಲ್ಲಿ ಪ್ರದರ್ಶನ ಮತ್ತು ಸಮಾರೋಪ ಸಮಾರಂಭ ನಡೆಯುತಿತ್ತು. ಆದರೆ, ಈ ಬಾರಿ ಮೈಸೂರಿನಲ್ಲಿ ಪ್ರದರ್ಶನವೂ ಇಲ್ಲ ಮತ್ತು ಸಮಾರೋಪ ಸಮಾರಂಭವನ್ನು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದೆ.
ಈ ಬಾರಿ ಚಿತ್ರರಂಗದವರು ಅದರಲ್ಲೂ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕೆ ಈ ಮೂಲಕ ಮನವಿ ಮಾಡುತ್ತಿದ್ದೇನೆ. ಅದಕ್ಕಾಗಿ ಎರಡು ದಿನಗಳ ಕಾಲ ಚಿತ್ರರಂಗಕ್ಕೆ ರಜೆ ನೀಡಲಾಗಿದೆ’ ಎಂದು ಹೇಳಿದರು. ಈ ಚಿತ್ರೋತ್ಸವಕ್ಕೆ ವಾಣಿಜ್ಯ ಮಂಡಳಲಿಯಲ್ಲದೆ ಕಲಾವಿದರ ಸಂಘ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ, ಕಾರ್ಮಿಕರ ಒಕ್ಕೂಟ ಸೇರಿದಂತೆ ಇತರೆ ಸಂಘ-ಸಂಸ್ಥೆಗಳು ಸಹ ಕೈಜೋಡಿಸಿವೆ.
ಮುಂದಿನ ತಿಂಗಳ ಚಿತ್ರನಗರಿಗೆ ಶಂಕುಸ್ಥಾಪನೆ: ಕರ್ನಾಟಕ ಸರ್ಕಾರವು ಕನ್ನಡ ಚಿತ್ರರಂಗಕ್ಕಾಗಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕಾಗಿ 140 ಎಕರೆ ಭೂಮಿಯನ್ನು ಕೊಟ್ಟಿದ್ದು ಗೊತ್ತೇ ಇದೆ. ಆ ಚಿತ್ರನಗರಿಗೆ ಫೆಬ್ರವರಿಯಲ್ಲಿ ಶಂಕುಸ್ಥಾಪನೆ ನೆರವೇರಲಿದೆ ಎಂದು ಸಾ.ರಾ. ಗೋವಿಂದು ಇದೇ ಸಂದರ್ಭದಲ್ಲಿ ಹೇಳಿದರು. “ಮೈಸೂರು-ನಂಜನಗೂಡು ರಸ್ತೆಯಲ್ಲಿ ಸರ್ಕಾರವು ಚಿತ್ರನಗರಿ ಸ್ಥಾಪನೆಗಾಗಿಯೇ 140 ಎಕರೆ ಭೂಮಿಯನ್ನು ಈಗಾಗಲೇ ಕೊಟ್ಟಿದೆ. ಮೊದಲ ಹಂತವಾಗಿ ಮುಂದಿನ ತಿಂಗಳು ಶಂಕುಸ್ಥಾಪನೆ ನಡೆಯಲಿದೆ’ ಎಂದು ಗೋವಿಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.