ನಟ ಪ್ರಕಾಶ್ ರೈಗೂ, ಚಿತ್ರದ ಸಂಭಾಷಣೆಗೂ ಸಂಬಂಧವಿಲ್ಲ
Team Udayavani, Apr 10, 2018, 11:42 AM IST
ಚಿರಂಜೀವಿ ಸರ್ಜಾ ನಾಯಕರಾಗಿರುವ “ಸೀಜರ್’ ಚಿತ್ರ ಈ ವಾರ ತೆರೆಕಾಣುತ್ತಿದೆ. ಈಗ ಈ ಚಿತ್ರದ ಸಂಭಾಷಣೆಯೊಂದು ವಿವಾದಕ್ಕೆ ಕಾರಣವಾಗಿದ್ದು, ಇದರ ಬಗ್ಗೆ ಪರ-ವಿರೋಧದ ಚರ್ಚೆಗಳು ಜೋರಾಗಿ ಕೇಳಿಬರುತ್ತಿವೆ. ಚಿತ್ರದಲ್ಲಿ ರವಿಚಂದ್ರನ್ ಅವರು ಹೇಳುವ “ಗೋ ಹತ್ಯೆ ಮಾಡೋದು, ಹೆತ್ತ ತಾಯಿನಾ ತಲೆ ಹಿಡಿಯೋದು ಎರಡೂ ಒಂದೆ’ ಎಂಬ ಸಂಭಾಷಣೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ.
ಅನೇಕರು ಚಿತ್ರದಲ್ಲಿನ ಈ ಸಂಭಾಷಣೆ ತೆಗೆಯಬೇಕೆಂದರೆ, ಇನ್ನು ಕೆಲವರು ಈ ಸಂಭಾಷಣೆ ತೆಗೆದರೆ ನಾವು ಸಿನಿಮಾ ನೋಡಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆಯೇ ನಟ ಪ್ರಕಾಶ್ ರೈ ಈ ಸಂಭಾಷಣೆಗೆ ವಿರೋಧ ವ್ಯಕ್ತಪಡಿಸಿದ್ದು, ಒಬ್ಬ ನಿರ್ದೇಶಕನಾದವ ಸಿನಿಮಾದಲ್ಲಿ ಈ ತರಹದ ಸಂಭಾಷಣೆ ಇಡಬಾರದು ಎಂದು ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆಂಬ ಸುದ್ದಿಯೂ ಓಡಾಡುತ್ತಿದೆ.
ಈ ಬಗ್ಗೆ ಮಾತನಾಡುವ ಚಿತ್ರದ ನಿರ್ದೇಶಕ ವಿನಯ್ ಕೃಷ್ಣ, “ನನಗೆ ಇಲ್ಲಿವರೆಗೆ ಪ್ರಕಾಶ್ ರೈಯವರಿಂದ ಫೋನ್ ಬಂದಿಲ್ಲ ಮತ್ತು ಆ ವಿಚಾರವಾಗಿ ಅವರು ನನ್ನಲ್ಲಿ ಮಾತನಾಡಿಲ್ಲ. ಅದಕ್ಕಿಂತ ಹೆಚ್ಚಾಗಿ ಆ ಸಂಭಾಷಣೆಗೂ ಪ್ರಕಾಶ್ ರೈಯವರಿಗೂ ಯಾವುದೇ ಸಂಬಂಧವಿಲ್ಲ. ಏಕೆಂದರೆ ಚಿತ್ರದಲ್ಲಿ ಆ ಸಂಭಾಷಣೆ ಹೇಳ್ಳೋದು ರವಿಚಂದ್ರನ್. ಅವರು ಇಲ್ಲಿವರೆಗೆ ಆ ಬಗ್ಗೆ ನನ್ನಲ್ಲಿ ಏನೂ ಮಾತನಾಡಿಲ್ಲ.
ಹೀಗಿರುವಾಗ ಪ್ರಕಾಶ್ ರೈಯವರು ಆ ಸಂಭಾಷಣೆ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಅಂದುಕೊಂಡಿದ್ದೇನೆ’ ಎನ್ನುವುದು ಚಿತ್ರದ ನಿರ್ದೇಶಕ ವಿನಯ್ ಕೃಷ್ಣ ಮಾತು. ಅಂದಹಾಗೆ, “ಸೀಜರ್’ನಲ್ಲಿ ಪ್ರಕಾಶ್ ರೈ ವಿಲನ್ ಆಗಿ ನಟಿಸಿದ್ದಾರೆ. ಚಿತ್ರದ ಸಂಭಾಷಣೆ ವಿವಾದದ ಕುರಿತು ಮಾತನಾಡುವ ವಿನಯ್ ಕೃಷ್ಣ, “ಅಷ್ಟಕ್ಕೂ ಆ ಸಂಭಾಷಣೆಯಲ್ಲಿ ಏನು ತಪ್ಪಿದೆ. ಟ್ರೇಲರ್‌ನಲ್ಲಿರುವ ಒಂದು ಸೀನ್ ನೋಡಿ ಇಡೀ ಸಿನಿಮಾದ ಬಗ್ಗೆ ತೀರ್ಮಾನ ಮಾಡೋದು ಸರಿಯಲ್ಲ. ಆ ಡೈಲಾಗ್‌ನ ಸನ್ನಿವೇಶ ತುಂಬಾ ಭಿನ್ನವಾಗಿದೆ.
ಅದರ ಹಿಂದೆ- ಮುಂದೆ ಸಾಕಷ್ಟು ವಿಚಾರಗಳಿವೆ. ಆದರೆ ಒಂದು ಡೈಲಾಗ್ ಕೇಳಿ ಎಲ್ಲವನ್ನು ನಿರ್ಧರಿಸೋಕೆ ಆಗಲ್ಲ’ ಎನ್ನುತ್ತಾರೆ ವಿನಯ್ ಕೃಷ್ಣ. ಒಂದು ವೇಳೆ ಈ ಸಂಭಾಷಣೆಯನ್ನು ಚಿತ್ರದಿಂದ ಕೈ ಬಿಡಬೇಕೆಂಬ ಒತ್ತಾಯ ಬಂದರೆ ಏನು ಮಾಡುತ್ತೀರೆಂಬ ಪ್ರಶ್ನೆಗೆ “ಆಲೋಚಿಸುತ್ತೇನೆ’ ಎಂದಷ್ಟೇ ಉತ್ತರಿಸುತ್ತಾರೆ. ಇನ್ನು, ಈ ಬಗ್ಗೆ ಮಾತನಾಡುವ ನಿರ್ಮಾಪಕ ತ್ರಿವಿಕ್ರಮ, “ಚಿತ್ರದಲ್ಲಿ ಯಾವುದೇ ಜಾತಿ-ಧರ್ಮಕ್ಕೆ ಅವಮಾನಿಸಿಲ್ಲ. ಸನ್ನಿವೇಶಕ್ಕನುಗುಣವಾಗಿ ಸಂಭಾಷಣೆ ಇದೆಯಷ್ಟೇ’ ಎನ್ನುತ್ತಾರೆ.
ಪಾರುಲ್ ಪ್ರಚಾರಕ್ಕೆ ಬರುತ್ತಿಲ್ಲ: “ಸೀಜರ್’ ಚಿತ್ರದಲ್ಲಿ ಪಾರುಲ್ ಯಾದವ್ ನಾಯಕಿ. ಆದರೆ, ಪಾರುಲ್ ಚಿತ್ರದ ಪ್ರಚಾರದಿಂದ ದೂರವೇ ಉಳಿದಿದ್ದಾರೆ. ಈ ಬಗ್ಗೆಯೂ ಚಿತ್ರದ ನಿರ್ಮಾಪಕ, ನಿರ್ದೇಶಕರು ಸಿಟ್ಟಾಗಿದ್ದಾರೆ. “ಪಾರುಲ್ ಯಾದವ್ ಇತ್ತೀಚೆಗೆ “ಸೀಜರ್’ ತಂಡದವರು ನನಗೆ ಸಂಭಾವನೆ ಕೊಟ್ಟಿಲ್ಲ ಎಂದು ಹೇಳಿದ್ದಾರಂತೆ. ಅದು ಸುಳ್ಳು. ಕೋಟಿಗಟ್ಟಲೇ ಖರ್ಚು ಮಾಡಿ ಸಿನಿಮಾ ಮಾಡುವ ನಾವು ಅವರ ಸಂಭಾವನೆಯನ್ನು ಬಾಕಿ ಉಳಿಸಿಕೊಳ್ಳುವುದಿಲ್ಲ. ಒಂದೆರಡು ಲಕ್ಷ ಸಂಭಾವನೆ ಬಾಕಿ ಇತ್ತು ನಿಜ.
ಅದನ್ನು ಕೊಡಲೆಂದು ಅವರಿದ್ದ ಹೋಟೆಲ್‌ಗೆ ಹೋಗಿ ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಹೀಗಾದರೆ ನಾವೇನು ಮಾಡೋಕ್ಕಾಗುತ್ತೆ. ಚಿತ್ರದ ಪ್ರಮೋಶನ್‌ಗೆ ಪ್ರತಿ ಬಾರಿಯೂ ಕರೆಯುತ್ತಲೇ ಇದ್ದೇವೆ. ಆರಂಭದಲ್ಲಿ ಏನೇನೋ ಬೇರೆ ಕಾರಣ ಹೇಳುತ್ತಿದ್ದ ಪಾರುಲ್, ಈಗ ಚಿತ್ರತಂಡದವರು ಸಂಭಾವನೆ ಬಾಕಿ ಉಳಿಸಿಕೊಂಡಿದ್ದಾರೆನ್ನುತ್ತಾ ಪ್ರಚಾರದಿಂದ ದೂರ ಉಳಿಯುತ್ತಿದ್ದಾರೆ. ಈ ಬಗ್ಗೆ ಮಂಡಳಿಯ ಗಮನಕ್ಕೂ ತರುತ್ತೇವೆ’ ಎನ್ನುವುದು ನಿರ್ದೇಶಕ ವಿನಯ್ ಕೃಷ್ಣ ಮಾತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.